Home / ಲೇಖನಗಳು / ಕಾರುಣ್ಯದ ಧರ್ಮ

ಕಾರುಣ್ಯದ ಧರ್ಮ

ಕರುಣೆಯು ಮಾನವೀಯ ಸಂಬಂಧಗಳನ್ನು ಜೋಡಿಸುವ ಪ್ರಬಲ ಕೊಂಡಿಯಾಗಿದೆ. ಅದರ ಶಕ್ತಿಯು ಅಪಾರ ಮತ್ತು ಅಜೇಯವಾಗಿದೆ. ಕಠೋರ ಹೃದಯಿಗಳನ್ನೂ ಕರುಣೆಯಿಂದ ಮಣಿಸಲು ಸಾಧ್ಯವಿದೆ. ಮಾನವನ ಮುಚ್ಚಿದ ಬಾಗಿಲುಗಳನ್ನು ಅದು ದೂಡಿ ತೆರೆಯುತ್ತದೆ. ಅಗಲಿದವರನ್ನು ಪರಸ್ಪರ ಆಪ್ತರಾಗಿ, ವೈರಿಗಳನ್ನು ಪರಸ್ಪರ ಮಿತ್ರರಾಗಿ ಮಾಡುತ್ತದೆ. ಸಹಾನುಭೂತಿಯ ಮನಸ್ಸುಗಳೇ ನಿಸ್ವಾರ್ಥ ಕರ್ಮಗಳಿಗೆ ಪ್ರೇರಕವಾಗುತ್ತದೆ. ಅಂತರಿಕ ಪ್ರೇರಣೆಯಿಂದಲೇ ನಿಸ್ವಾರ್ಥ ಸೇವೆಗಳು ಚಿಗುರುತ್ತವೆ. ಅದು ಕರುಣೆಯಿಂದ ಹುಟ್ಟುತ್ತದೆ. ಆದ್ದರಿಂದಲೇ ಮನಸ್ಸನ್ನು ಕಾರುಣ್ಯಮಯಗೊಳಿಸಬೇಕೆಂದು ಧರ್ಮವು ಆಜ್ಞಾಪಿಸಿದೆ. ಅಲ್ಲಾಹನು ದಯಾಮಯನು, ಆತನ ಕರುಣೆಗೆ ಮಿತಿಯಿಲ್ಲ. ಅದು ಇಡೀ ವಿಶ್ವವನ್ನು ವ್ಯಾಪಿಸಿದೆ. ಅಲ್ಲಾಹನೇ ಈ ರೀತಿ ತಿಳಿಸಿದ್ದಾನೆ: “ನನ್ನ ಕರುಣೆಯು ಸರ್ವವನ್ನೂ ವ್ಯಾಪಿಸಿಕೊಂಡಿದೆ.” (ಕುರ್’ಆನ್, 7:156)

ಆಯಿಶಾರಿಂದ(ರ) ವರದಿಯಾಗಿದೆ. ಪ್ರವಾದಿಯವರು(ಸ) ಹೀಗೆ ಹೇಳಿದ್ದಾರೆ, “ಅಲ್ಲಾಹನು ಸೌಮ್ಯನು. ಆತನು ಸೌಮ್ಯತೆಯನ್ನು ಮೆಚ್ಚುತ್ತಾನೆ. ಕಠೋರತೆಗೆ ನೀಡುವುದಕ್ಕಿಂತ ಹೆಚ್ಚಿನ ಪ್ರತಿಫಲವನ್ನು ಆತನು ಸೌಮ್ಯತೆಗೆ ನೀಡುತ್ತಾನೆ.” (ಮುಸ್ಲಿಮ್)

ಇನ್ನೊಮ್ಮೆ ಅವರು ಹೀಗೆಂದಿದ್ದಾರೆ, “ಅಲ್ಲಾಹನು ಸೌಮ್ಯನಾಗಿದ್ದಾನೆ. ಆತನು ಎಲ್ಲದರಲ್ಲಿಯೂ ಸೌಮ್ಯತೆಯನ್ನು ಬಯಸುತ್ತಾನೆ.” (ಬುಖಾರಿ, ಮುಸ್ಲಿಮ್)

ಉಮರ್ ಬಿನ್ ಖತ್ತಾಬ್‌ರಿಂದ(ರ) ವರದಿ: ಒಮ್ಮೆ ಪ್ರವಾದಿಯವರ(ಸ) ಬಳಿಗೆ ಇತರ ಕೈದಿಗಳ ಜತೆಯಲ್ಲಿ ಗುಲಾಮ ಹೆಣ್ಣೊಬ್ಬಳನ್ನು ಕರೆತರಲಾಯಿತು. ಆ ಹೆಣ್ಣು ಅತ್ತಿತ್ತ ಓಡಾಡುತ್ತಿದ್ದಳು. ಕಣ್ಣಿಗೆ ಕಂಡ ಮಕ್ಕಳನ್ನು ಕೈಗೆತ್ತಿಕೊಂಡು ಎದೆಗಪ್ಪಿ ಮೊಲೆಯೂಡಿಸುತ್ತಿದ್ದಳು. ಆಗ ಪ್ರವಾದಿ(ಸ) ಕೇಳಿದರು, “ಈ ಮಹಿಳೆ ತನ್ನ ಮಗುವನ್ನು ಬೆಂಕಿಗೆ ಎಸೆಯಬಹುದೆಂದು ನೀವು ಭಾವಿಸುತ್ತೀರಾ?” ನಾವು ಹೇಳಿದವು, “ಇಲ್ಲ, ಅಲ್ಲಾಹನಾಣೆ! ಅದು ಆಕೆಗೆ ಸಾಧ್ಯವಿಲ್ಲ.” ಪ್ರವಾದಿ(ಸ) ಹೇಳಿದರು, “ಈ ಮಹಿಳೆಗೆ ತನ್ನ ಮಗುವಿನೊಂದಿಗಿರುವ ಕರುಣೆಗಿಂತ ಎಷ್ಟೋ ಪಟ್ಟು ಅಧಿಕ ಕರುಣೆಯು ಅಲ್ಲಾಹನಿಗೆ ತನ್ನ ದಾಸರೊಂದಿಗಿದೆ. (ಬುಖಾರಿ)

ಕುರ್‌ಆನ್ ಮಾನವನಿಗೆ ಕಲಿಸಿದ ಮೊದಲ ಪ್ರಾರ್ಥನೆಗಳಲ್ಲೊಂದು ಹೀಗಿದೆ, “ಪೈಗಂಬರರೇ, ಹೇಳಿರಿ: ನನ್ನೊಡೆಯಾ, ಕ್ಷಮಿಸು ಮತ್ತು ಕರುಣೆ ತೋರು, ನೀನು ಸಕಲ ಕರುಣಾಳುಗಳಿಗಿಂತಲೂ ಉತ್ತಮ ಕರುಣಾಮಯಿಯಾಗಿರು.” (ಪವಿತ್ರ ಕುರ್‌ಆನ್, 23:118)

ಕರುಣೆಯು ದಿವ್ಯಾನುಗ್ರಹವಾಗಿದೆ, “ನೀವು ಬಹಳ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಒರಟು ಸ್ವಭಾವಿ ಮತ್ತು ಕಠಿಣ ಹೃದಯದವರಾಗಿರುತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತಮುತ್ತಲಿನಿಂದ ಹೊರಟು ಹೋಗುತ್ತಿದ್ದರು.” (ಪವಿತ್ರ ಕುರ್’ಆನ್, 3: 159)

ಅಲ್ಲಾಹನ ಕರುಣೆ ದೊರೆಯಬೇಕಾದರೆ ಜನರೊಡನೆ ಕರುಣೆ ತೋರಬೇಕು. ಜರೀರ ವರದಿ ಮಾಡಿದ್ದಾರೆ, ಪ್ರವಾದಿ(ಸ) ಹೇಳಿದರು, “ಜನರೊಡನೆ ಕರುಣೆ ತೋರದವರೊಡನೆ ಅಲ್ಲಾಹನೂ ಕರುಣೆ ತೋರುವುದಿಲ್ಲ.” (ಬುಖಾರಿ, ಮುಸ್ಲಿಮ್)

ಪ್ರವಾದಿ(ಸ) ಹೀಗೆ ಹೇಳಿದ್ದಾರೆ, “ಕರುಣೆಯಿಲ್ಲದವರಿಗೆ ಕಾರುಣ್ಯ ಲಭಿಸಲಾರದು.”. (ಬುಖಾರಿ ಮುಸ್ಲಿಮ್) “ಭೂಮಿಯಲ್ಲಿರುವವರಿಗೆ ಕರುಣೆ ತೋರಿಸಿರಿ ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು.” (ತಬ್ರಾನಿ)

ಕಾರುಣ್ಯವು ಸೌಭಾಗ್ಯವಾಗಿದೆ. ಅದರ ಅಭಾವವು ದೌರ್ಭಾಗ್ಯವಾಗಿದೆ. ಪ್ರವಾದಿ(ಸ) ಹೇಳಿದ್ದಾರೆ, “ದೌರ್ಭಾಗ್ಯಶಾಲಿಯ ಹೊರತು ಯಾರೂ ಕರುಣೆಯಿಲ್ಲದವರಾಗಲಾರರು” (ಅಬೂದಾವೂದ್)

ಸೌಮ್ಯತೆಯು ಒಳಿತಿನ ಮೂಲವಾಗಿದೆ. ಅದು ಎಲ್ಲವನ್ನೂ ಸುಂದರಗೊಳಿಸುತ್ತದೆ. ಜರೀರ್ ಬಿನ್ ಅಬ್ದುಲ್ಲಾ ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ಹೇಳುವುದನ್ನು ನಾನು ಕೇಳಿದ್ದೇನೆ, “ಸೌಮ್ಯತೆಯು ಯಾರಿಗೆ ಸಿಗದೇ ಹೋಯಿತೋ ಅವರಿಗೆ ಎಲ್ಲ ಒಳಿತುಗಳೂ ತಡೆಯಲ್ಪಟ್ಟಿವೆ.”

ಆಯಿಶಾರಿಂದ(ರ) ವರದಿಯಾಗಿದೆ: ಪ್ರವಾದಿಯವರು(ಸ) ಘೋಷಿಸಿದ್ದಾರೆ, “ಸೌಮ್ಯತೆಯ ಉಪಸ್ಥಿತಿಯು ಎಲ್ಲವನ್ನೂ ಸುಂದರವಾಗಿಸುತ್ತದೆ. ಅದರ ಅಭಾವವು ಎಲ್ಲವನ್ನೂ ವಿರೂಪಗೊಳಿಸುತ್ತದೆ. (ಮುಸ್ಲಿಮ್)

ಸೌಮ್ಮ ಶೀಲರಿಗೆ ನರಕವು ನಿಷಿದ್ಧವಾಗಿದೆ. ಅಲ್ಲದವರು ಅದರ ಹಕ್ಕುದಾರರಾಗುತ್ತಾರೆ. ಇಬ್ನ್ ಮಸ್‌’ಊದ್ ಹೀಗೆ ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ಕೇಳಿದರು, “ನರಕ ನಿಷಿದ್ಧವಾಗಿರುವ ಅಥವಾ ನರಕಕ್ಕೆ ನಿಷಿದ್ಧರಾಗಿರುವವರು ಯಾರೆಂದು ನಿಮಗೆ ತಿಳಿಸಲೇ? ಜನರೊಡನೆ ಬೆರೆಯುವವನು, ಸೌಮ್ಮ ಶೀಲನು, ತಾಳ್ಮೆ ವಹಿಸುವವರು ಮತ್ತು ಔದಾರ್ಯ ತೋರಿಸುವವನು.” (ತಿರ್ಮಿದಿ)

ಅವರು(ಸ) ಹೀಗೆ ಹೇಳಿದ್ದಾರೆ, ”ಅಲ್ಲಾಹನಿಂದ ಅತ್ಯಂತ ದೂರವಿರುವಾತನೇ ಕಠೋರ ಹೃದಯಿ” (ತಿರ್ಮಿದಿ)

ಮಹಾ ಕ್ರೂರಿಗಳೊಂದಿಗೂ ಕರುಣೆ ಮತ್ತು ಸೌಮ್ಯತೆಯಿಂದ ವರ್ತಿಸಬೇಕೆಂದು ಇಸ್ಲಾಮ್ ಆದೇಶಿಸಿದೆ. ಫಿರ್‌ಔನ್‌ ಜಗತ್ತು ನೋಡಿದ ರಾಜರ ಪೈಕಿ ಮಹಾ ಕ್ರೂರಿ ಮತ್ತು ಮರ್ದಕನಾಗಿದ್ದನು. ಪ್ರವಾದಿ ಮೂಸಾ ಮತ್ತು ಸಹೋದರ ಹಾರೂನ್‌ರನ್ನು ಆತನ ಬಳಿಗೆ ಕಳುಹಿಸುವಾಗ ಅಲ್ಲಾಹನು ಹೀಗೆ ಆಜ್ಞಾಪಿಸಿದ್ದನು: ”ಈರ್ವರೂ ಫರೋವನ ಬಳಿಗೆ ಹೋಗಿರಿ, ಆತನು ದುಷ್ಟನಾಗಿದ್ದಾನೆ. ಆತನೊಡನೆ ಸೌಮ್ಯವಾಗಿ ಮಾತಾಡಿರಿ. ” (ಕುರ್’ಆನ್ 20:43-44)

ಸತ್ಯವಿಶ್ವಾಸಿಯು ಜನಹಿತಕ್ಕೆ ಪ್ರೇರಕವಾಗುವ ಕರುಣೆಯ ಭಾವನೆಯನ್ನು ಹೊಂದಿರಬೇಕು. ಅನಸ್(ರ) ವರದಿ ಮಾಡಿದ್ದಾರೆ: ಪ್ರವಾದಿಯವರು(ಸ) ಹೀಗೆ ಆದೇಶಿಸಿದ್ದಾರೆ, ನೀವು ಸುಲಭಗೊಳಿಸಿರಿ, ಕಠಿಣಗೊಳಿಸಬೇಡಿರಿ, ಸಂತುಷ್ಟ ಗೊಳಿಸಿರಿ, ಅಸಂತುಷ್ಟಗೊಳಿಸಬೇಡಿರಿ.” (ಬುಖಾರಿ, ಮುಸ್ಲಿಮ್)

ಪ್ರವಾದಿ(ಸ) ಹೇಳಿದರು, “ಆಯಿಶಾ, ನೀನು ಕರುಣೆ ತೋರಿಸು ಅಲ್ಲಾಹನು ಯಾವುದಾದರೂ ಮನೆಯವರಿಗೆ ಒಳಿತನ್ನು ಬಯಸಿದರೆ ಅವರನ್ನು ಕರುಣೆಯುಳ್ಳವರಾಗಿ ಮಾಡುತ್ತಾನೆ.” (ಅಹ್ಮದ್)

ಜಾಬಿರ್ (ರ) ವರದಿ ಮಾಡಿದ್ದಾರೆ: ಪ್ರವಾದಿ(ಸ) ಹೇಳಿದರು, “ಅಲ್ಲಾಹನು ಯಾವುದಾದರೊಂದು ಜನತೆಗೆ ಒಳಿತನ್ನು ಬಯಸಿದರೆ ಅವರಲ್ಲಿ ಕರುಣೆಯನ್ನು ಮೂಡಿಸುತ್ತಾನೆ.” (ಬಸ್ಸಾರ್)

ಎಲ್ಲಕ್ಕಿಂತ ಮಿಗಿಲಾಗಿ, ಒಬ್ಬನು ಸತ್ಯವಿಶ್ವಾಸಿಯಾಗಬೇಕಾದರೆ ಆತನು ಕಾರುಣ್ಯವಂತನಾಗಿರುವುದು ಕಡ್ಡಾಯವಾಗಿದೆ. “ಪರಸ್ಪರ ಕರುಣೆ ತೋರಿಸದೆ ನೀವು ಸತ್ಯವಿಶ್ವಾಸಿಯಾಗಲಾರಿರಿ.” ಆಗ ಅವರ ಅನುಯಾಯಿಗಳು ಹೇಳಿದರು, “ಅಲ್ಲಾಹನ ಪ್ರವಾದಿಗಳೇ(ಸ), ನಾವೆಲ್ಲರೂ ಕರುಣೆಯುಳ್ಳವರಾಗಿದ್ದೇವಲ್ಲವೇ?” ಇದನ್ನು ಕೇಳಿ ಪ್ರವಾದಿಯವರು(ಸ) ಉತ್ತರಿಸಿದರು, “ಕರುಣೆಯೆಂದರೆ ಕೇವಲ ತನ್ನ ಮಿತ್ರನೊಡನೆ ಮಾತ್ರವಲ್ಲ ಎಲ್ಲರೊಡನೆ ತೋರುವ ಕರುಣೆಯಾಗಿದೆ.” (ತಬ್ರಾನಿ)

ಭೂಮಿಯಲ್ಲಿರುವ ಎಲ್ಲ ಜೀವಜಾಲಗಳ ಕರುಣೆಯನ್ನು ಒಟ್ಟು ಸೇರಿಸಿದರೂ ದೇವನ ಕರುಣೆಯ ಒಂದು ಸಣ್ಣ ಅಂಶವೂ ಆಗಲಾರದೆಂದು ಪ್ರವಾದಿಯವರು(ಸ) ಹೇಳಿದ್ದಾರೆ. “ಅಲ್ಲಾಹನು ತನ್ನ ಕರುಣೆಯನ್ನು ನೂರು ಪಾಲು ಮಾಡಿ ಅದರ ಒಂದು ಪಾಲನ್ನು ಭೂಮಿಯಲ್ಲಿ ಇರಿಸಿದನು. ಅದನ್ನು ಬಳಸಿ ಸೃಷ್ಟಿಗಳು ಇಲ್ಲಿ ಪರಸ್ಪರ ಕರುಣೆ ತೋರಿಸುತ್ತವೆ. ಪ್ರಾಣಿಯು ಅದರ ಗೊರಸು ಮರಿಗೆ ತಾಗದಂತೆ ಎತ್ತಿ ಹಿಡಿಯುವುದು ಕೂಡಾ ಆ ಕರುಣೆಯ ಭಾಗವಾಗಿದೆ.” (ಬುಖಾರಿ)

ಇನ್ನೊಂದು ಪ್ರವಾದಿ ವಚನದಲ್ಲಿ ಹೀಗಿದೆ, “ಭೂಮಿ ಮತ್ತು ಆಕಾಶವನ್ನು ಸೃಷ್ಟಿಸಿದಾಗ ಅಲ್ಲಾಹನು ನೂರು ತರದ ಕಾರುಣ್ಯವನ್ನು ನಿರ್ಮಿಸಿದನು. ಅವು ಪ್ರತಿಯೊಂದು ಪರಸ್ಪರ ಭೂಮಿ-ಆಕಾಶಗಳಷ್ಟು ವಿಶಾಲವಾಗಿದೆ. ಅವುಗಳ ಪೈಕಿ ಒಂದನ್ನು ಮಾತ್ರ ಅಲ್ಲಾಹನು ಭೂಮಿಯಲ್ಲಿ ಇರಿಸಿದ್ದಾನೆ. ಅದನ್ನು ಮೈಗೂಡಿಸಿ ತಾಯಿ ತನ್ನ ಮಗುವಿನೊಂದಿಗೆ ಹಾಗೂ ಪ್ರಾಣಿ ಪಕ್ಷಿಗಳು ಪರಸ್ಪರ ಕರುಣೆ ತೋರಿಸುತ್ತವೆ.” (ಮುಸ್ಲಿಮ್)

ಹೀಗೆ ಭೂಮಿಗೆ ದೊರೆತ ಕರುಣೆಯಿಂದ ಸತ್ಯವಿಶ್ವಾಸಿಯು ಗರಿಷ್ಠ ಪಾಲನ್ನು ಗಳಿಸಿಕೊಳ್ಳಬೇಕೆಂದು ಇಸ್ಲಾಮ್ ಆಜ್ಞಾಪಿಸಿದೆ. ಅದರಿಂದ ಮೂಡುವ ಉದಾರ ನೀತಿಯನ್ನು ಅವಲಂಬಿಸಬೇಕೆಂದು ಪ್ರವಾದಿ(ಸ) ಕಲಿಸಿದ್ದಾರೆ. ಅಬೂಹುರೈರಾ(ರ) ಹೀಗೆ ವರದಿ ಮಾಡಿದ್ದಾರೆ: “ಒಮ್ಮೆ ಒಬ್ಬ ಹಳ್ಳಿಗನು ಬಂದು ಮಸೀದಿಯಲ್ಲಿ ಮೂತ್ರ ಶಂಕೆ ಮಾಡಿದ. ಜನರು ಅವನನ್ನು ತಡೆಯಲು ಪ್ರಯತ್ನಿಸಿದರು. ಆಗ ಪ್ರವಾದಿ(ಸ) ಹೇಳಿದರು, ‘ನೀವು ಅವರನ್ನು ಮೂತ್ರ ಮಾಡಲು ಬಿಡಿರಿ. ಒಂದು ಕೊಡದಲ್ಲಿ ನೀರು ತಂದು ಅಲ್ಲಿಗೆ ಸುರಿಯಿರಿ. ನಿಮ್ಮನ್ನು ಸುಲಭಗೊಳಿಸಲಿಕ್ಕಾಗಿ ನೇಮಿಸಲಾಗಿದೆಯೇ ಹೊರತು ಕಷ್ಟಗೊಳಿಸಲಿಕ್ಕಲ್ಲ.” (ಫತ್ಹುಲ್ ಬಾರಿ, ಭಾಗ- 1, ಪುಟ : 323)

ಒಮ್ಮೆ ಉಮರ್ ಫಾರೂಕ್(ರ) ಓರ್ವರನ್ನು ರಾಜ್ಯಪಾಲರಾಗಿ ನೇಮಿಸಲು ನಿರ್ಧರಿಸಿದರು. ಆಗ ಯಾರೋ ಅವರು ಸ್ವಂತ ಮಕ್ಕಳನ್ನು ಮುದ್ದಿಸದವರೆಂದು ತಿಳಿಸಿದರು. ಕೂಡಲೇ ಖಲೀಫರು ತಮ್ಮ ನಿರ್ಧಾರವನ್ನು ಬದಲಿಸಿದರು. ಅವರು ಹೇಳಿದರು, ”ನಿನ್ನ ಮನಸ್ಸು ಸ್ವಂತ ಮಕ್ಕಳ ಮೇಲೆಯೇ ಕರುಣೆ ಸುರಿಸದಿರುವಾಗ ಅದು ಜನರ ಮೇಲೆ ಕರುಣೆ ತೋರಿಸಿತೇ? ನಾನು ನಿನ್ನನ್ನು ಎಂದೆಂದಿಗೂ ರಾಜ್ಯಪಾಲನಾಗಿ ನೇಮಿಸಲಾರೆ.” ಅನಂತರ ಉಮರ್(ರ) ಆ ನೇಮಕಾತಿ ಪತ್ರವನ್ನು ಹರಿದು ಹಾಕಿದರು.

ಈ ಕಾರುಣ್ಯವನ್ನು ಮಾನವರೊಂದಿಗೆ ಮಾತ್ರವಲ್ಲ ಇತರ ಜೀವಿಗಳೊಂದಿಗೂ ತೋರಿಸಬೇಕಾದುದು ವಿಶ್ವಾಸಿಯ ಕರ್ತವ್ಯವಾಗಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …