Home / ಲೇಖನಗಳು / ಹಾಗಾದರೆ ವರ್ಷದ ಬಳಿಕ ಬರುವ ಉಪವಾಸವನ್ನು ಹೇಗೆ ಕಾಣಬೇಕು?

ಹಾಗಾದರೆ ವರ್ಷದ ಬಳಿಕ ಬರುವ ಉಪವಾಸವನ್ನು ಹೇಗೆ ಕಾಣಬೇಕು?

  • ಸಿ.ಎಸ್. ಶಾಹಿನ್

ರಮಝಾನ್ ಒಂದು ಅದ್ಭುತವಾಗಿದೆ.
ಹೀಗೆ ಆಲಂಕಾರಿಕವಾಗಿ ಹೇಳಿದ್ದಲ್ಲ. ನಿಜವಾಗಿಯೂ ಅದೊಂದು ಅದ್ಭುತವೇ ಆಗಿದೆ. ಅದಕ್ಕೆ ಹಲವು ಕಾರಣಗಳಿವೆ. ಒಂದು ಉದಾಹರಣೆ ಹೇಳುತ್ತೇನೆ, ಓರ್ವರು ಜೀವನವನ್ನು ಸಂಪೂರ್ಣ ಬದಲಾಯಿಸಲು ತೀರ್ಮಾನಿಸುತ್ತಾರೆ. ಹೊಸ ವ್ಯಕ್ತಿಯಾಗಲು ಬಯಸುತ್ತಾರೆ. ಇದು ಒಂದು ತಿಂಗಳಲ್ಲಿ ಸಾಧಿಸಲು ಸಾಧ್ಯವೇ? ಸಾಮಾನ್ಯವಾಗಿ ಯೋಚಿಸುವಾಗ ಅದರ ಸಾಧ್ಯತೆ ತೀರಾ ಕಡಿಮೆ. ಆ ವ್ಯಕ್ತಿ ಬದುಕಿರುವ ವಾತಾವರಣವು ಅದಕ್ಕೆ ಒಪ್ಪುವುದಿಲ್ಲ. ಮನಸ್ಸು ಕೂಡ ಅದಕ್ಕೆ ಬೇಗನೆ ಒಗ್ಗಬೇಕೆಂದಿಲ್ಲ. ಕೆಲವರು ಹೇಳುವುದನ್ನು ಕೇಳಿರಬಹುದು. “ನಾನು ಒಳ್ಳೆಯವನಾಗಬೇಕೆಂದು ಬಯಸಿದ್ದೆ. ಆದರೆ ಈ ಪರಿಸರ ಅದಕ್ಕೆ ಅನುಮತಿಸುವುದಿಲ್ಲ.” ಮೊದಲನೆಯದಾಗಿ ಆತ ತಾನು ಇರುವ ವಾತಾವರಣದಿಂದ ಹೊರಗೆ ಬರಬೇಕು. ಆದರೆ ಹಳೆಯ ಜೀವನ ಶೈಲಿಯು ಅವನನ್ನು ತನ್ನತ್ತ ಸೆಳೆಯುತ್ತಲೇ ಇರುತ್ತದೆ. ಬಳಿಕ ಕೆಡುಕಿನೆಡೆಗೆ ವಾಲಿರುವ ಮನಸ್ಸನ್ನು ಸರಿಪಡಿಸಬೇಕು. ಅದಕ್ಕೆ ತೀವ್ರ ಪ್ರಯತ್ನಬೇಕು. ಬಳಿಕ ಒಳಿತಿನ ವಾತಾವರಣವನ್ನು ಕಂಡು ಹಿಡಿಯಬೇಕು. ಹೀಗೆ ಸಣ್ಣ ಸಣ್ಣ ಬದಲಾವಣೆಗಳನ್ನು ಮೆಲ್ಲ ಮೆಲ್ಲನೆ ರೂಢಿಸಬೇಕು. ಕಾಲ ಕ್ರಮೇಣ ತನ್ನ ಉದ್ದೇಶದೆಡೆಗೆ ತಲುಪಬೇಕು. ಇದಕ್ಕೆ ಖಂಡಿತಾ ಒಂದು ತಿಂಗಳು ಸಾಲದು. ದೀರ್ಘ ಕಾಲಾವಧಿಯೇ ಬೇಕಾಗುತ್ತದೆ.

ಇಲ್ಲಿ ನಮಗೆ ರಮಝಾನ್ ತಿಂಗಳ ಒಂದನೇ ಅದ್ಭುತ ಅನುಭವಕ್ಕೆ ಬರುತ್ತದೆ. ನೀವು ಹೊಸ ವ್ಯಕ್ತಿಯಾಗಿ ಬದಲಾಗಬೇಕೆಂದು ಬಯಸುವಿರಾ? ರಮಝಾನ್‌ನ ಮೂವತ್ತು ದಿನಗಳಲ್ಲಿ ಅದು ನಿಮಗೆ ಸಾಧ್ಯವಿದೆ. ಅದು ರಮಝಾನ್ ತಿಂಗಳಲ್ಲಿ ಮಾತ್ರ ಸಾಧ್ಯ. ಆ ರೀತಿಯಲ್ಲಿ ರಮಝಾನ್ ತಿಂಗಳನ್ನು ಅಲ್ಲಾಹನು ರೂಪಿಸಿದ್ದಾನೆ. ರಮಝಾನ್ ಆಗತವಾದಾಗ ಪಿಶಾಚಿಗಳು ಬಂಧನಕ್ಕೊಳಗಾಗುತ್ತದೆ ಎಂದು ಪ್ರವಾದಿಯವರು(ಸ) ಹೇಳಿರುವರು. ಮನುಷ್ಯನನ್ನು ಕೆಡುಕಿನೆಡೆಗೆ ಸಾಗಿಸಲು ಸರ್ವ ಪ್ರಯತ್ನವನ್ನು ನಡೆಸುವ ವ್ಯಕ್ತಿಯೇ ಪಿಶಾಚಿ. ನಮ್ಮ ಮನಸ್ಸಿಗೆ ನಿರಂತರ ದುಷ್ಪ್ರೇರಣೆ ನೀಡುವವನು ಕೂಡಾ ಅವನೇ. ಅವನ ದುಷ್ಪ್ರೇರಣೆಯಿಂದ ಹೊರಬರಲು ಕಠಿಣ ಪರಿಶ್ರಮದ ಅಗತ್ಯವಿದೆ. ಆದರೆ ರಮಝಾನ್‌ನಲ್ಲಿ ಇಬ್ಲೀಸನ ಉಪಟಳವಿರುವುದಿಲ್ಲ. ಆತ ಬಂಧಿಸಲ್ಪಟ್ಟಿದ್ದಾನೆ. ನಿಮಗೆ ಕೆಡುಕಿನ ಲೋಕದಿಂದ ಹೇಗೂ ದೂರ ಸರಿಯಲು ಸಾಧ್ಯವಿದೆ. ಹಿಂದಿನಿಂದ ಹಿಡಿದೆಳೆಯಲು ಶೈತಾನ್ ಇರುವುದಿಲ್ಲ. ನಾವು ಇಚ್ಛಿಸಿದಂತೆ ಒಳಿತಿನ ಹಾದಿಯಲ್ಲಿ ದೂರದವರೆಗೆ ಸಂಚರಿಸಬಹುದು. ನಮ್ಮ ದಾರಿಗೆ ಕಂಟಕವಾಗಲು ಶೈತಾನನು ಇಲ್ಲವಲ್ಲ.

ಇನ್ನು ರಮಝಾನ್ ಬಂದರೆ ನರಕದ ಕವಾಟಗಳು ಮುಚ್ಚಲ್ಪಡುವುದು ಎಂದು ಪ್ರವಾದಿಯವರು(ಸ) ಹೇಳಿರುವರು. ಮನುಷ್ಯರನ್ನು ಕೆಡುಕಿನೆಡೆಗೆ ಸಾಗಿಸುವಲ್ಲಿ ಸುತ್ತುಮುತ್ತಲಿನ ವಾತಾವರಣಕ್ಕೆ ಹೆಚ್ಚಿನ ಪಾಲಿದೆ. ನರಕದ ದ್ವಾರವನ್ನು ಮುಚ್ಚಲಾಗುವುದು ಎಂಬುದರ ಅರ್ಥ ಕೆಡುಕಿನ ಕಡೆಗಿನ ಬಾಗಿಲುಗಳು ಮುಚ್ಚಲ್ಪಡುವುದು ಎಂದಾಗಿದೆ. ಕೆಡುಕು ಮಾಡುವ ವಾತಾವರಣವು ಸಾಮಾನ್ಯವಾಗಿ ರಮಝಾನ್ ನಲ್ಲಿ ಉಂಟಾಗುವುದಿಲ್ಲ. “ಸ್ವರ್ಗ ಕವಾಟ ತೆರೆಯಲ್ಪಡುವುದು” ಎಂದು ಪ್ರವಾದಿಯವರ(ಸ) ಸಂತೋಷ ವಾರ್ತೆಯಿದೆ. ಅಂದರೆ ಒಳಿತಿನೆಡೆಗಿನ ಎಲ್ಲಾ ದ್ವಾರಗಳು ತೆರೆಯಲ್ಪಡುವುದು. ಮುಸ್ಲಿಮ್ ಸಮೂಹದಲ್ಲಿ ಎಲ್ಲೆಡೆಯೂ ಒಳಿತಿನ ಸುಗಂಧವೇ ಪಸರಿಸಿರುವುದು. ತಾನು ಸ್ವತಃ ಬಯಸದಿದ್ದರೂ ಆತ ಒಳಿತನ್ನು ಮಾಡುವಂತಹ ವಾತಾವರಣವಿರುತ್ತದೆ. ಅಲ್ಲಾಹನು ಈ ರೀತಿಯಲ್ಲಿ ರಮಝಾನ್ ತಿಂಗಳ ರಾತ್ರಿ ಹಗಲುಗಳನ್ನು ಸಂಯೋಜಿಸಿದ್ದಾನೆ. ಒಳಿತಿನ ವಾಹಕರಾಗಲು ಇಂತಹ ಒಂದು ವಾತಾವರಣದಿಂದ ಸುಲಭದಲ್ಲಿ ಸಾಧ್ಯವಾಗುತ್ತದೆ.

ನೀವು ಜೀವನವನ್ನು ಪುನರ್ನವೀಕರಿಸಬೇಕೆಂದು ಬಯಸಿದ್ದೀರಾ? ಅದಕ್ಕೆ ರಮಝಾನ್‌ಗಿಂತ ಮಿಗಿಲಾದ ಒಂದು ಸುಸಂದರ್ಭವಿಲ್ಲ. ರಮಝಾನ್ ಸಿದ್ಧವಾಗಿದೆ. ನೀವು ಅದನ್ನು ಹೇಗೆ ಉಪಯೋಗಿಸುತ್ತೀರಿ ಎಂಬುದೇ ಮುಖ್ಯ ವಿಷಯ. ಯಾವುದೇ ಒಂದು ವಿಷಯವನ್ನು ನಾವು ಅದರ ಮೌಲ್ಯವನ್ನು ನೋಡಿಯೇ ಪರಿಗಣಿಸುತ್ತೇವೆ. ರಮಝಾನ್‌ನ ಮೌಲ್ಯವನ್ನು ನಾವು ಹೇಗೆ ಗ್ರಹಿಸುತ್ತೇವೋ ಅದೇ ರೀತಿ ಅದರ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನಮಗಿಂತ ಮೊದಲು ಒಂದು ಪೀಳಿಗೆ ಕಳೆದು ಹೋಗಿದೆ. ಅವರು ರಮಝಾನ್‌ನ ಅರ್ಥವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರು. ಆದ್ದರಿಂದ ಅತ್ಯದ್ಭುತ ರೀತಿಯಲ್ಲಿ ರಮಝಾನ್‌ನಲ್ಲಿ ಕರ್ಮ ನಿರತರಾದರು. ಪ್ರಯಾಣದ ನಡುವಿನ ತಂಗುದಾಣ ಎಂದು ಪ್ರವಾದಿಯವರು(ಸ) ಈ ಲೋಕದ ಉಪಮೆಯನ್ನು ನೀಡಿದರು. ಪ್ರವಾದಿಯವರು(ಸ) ಹೇಳಿದರು, “ನನಗೂ ಈ ಲೋಕಕ್ಕೂ ನಡುವೆ ಏನು ಸಂಬಂಧವಿದೆ! ಏನಾದರೂ ಸಂಬಂಧ ಇದೆಯೆಂದಾದರೆ ಅದು ದಾರಿಹೋಕ ಮತ್ತು ಮರದ ನೆರಳಿನ ನಡುವೆ ಇರುವ ಸಂಬಂಧ ಮಾತ್ರ. ಬಿಸಿಲ ಬೇಗೆ ಸಹಿಸದೆ ದಾರಿಹೋಕನು ಮರದ ನೆರಳನ್ನು ಹುಡುಕುತ್ತಾನೆ. ಆಯಾಸ ಪರಿಹಾರಗೊಂಡ ಬಳಿಕ ಅಲ್ಲಿಂದ ಮರಳುತ್ತಾನೆ.” ಈ ರೀತಿ ಪ್ರವಾದಿಯವರು(ಸ) ಇಹಲೋಕದ ಕುರಿತು ವಿರಕ್ತಿಯನ್ನು ತೋರ್ಪಡಿಸಿದ್ದರು.

ಯಾವುದೇ ಗಳಿಗೆಯಲ್ಲೂ ಮುಗಿದು ಹೋಗಬಹುದಾದ ಒಂದು ಸ್ಥಳವಿದು. ಈ ಲೋಕವು ಪ್ರವಾದಿ(ಸ)ರನ್ನು ಆಕರ್ಷಿಸಿರಲಿಲ್ಲ. ಆದರೆ ಒಂದು ಸಂದರ್ಭದಲ್ಲಿ ಪ್ರವಾದಿಯವರು(ಸ) ಇಹಲೋಕದಲ್ಲಿ ಬದುಕಬೇಕೆಂದು ಆಶಿಸಿದ್ದರು. ಆಯುಷ್ಯವನ್ನು ದೀರ್ಘಗೊಳಿಸಬೇಕೆಂದು ನಿರಂತರ ಪ್ರಾರ್ಥಿಸುತ್ತಿದ್ದರು. ಅದು ರಮಝಾನ್ ಆಗಮಿಸುತ್ತಿದ್ದ ವೇಳೆಯಾಗಿತ್ತು. ಒಮ್ಮೆ ಆಲೋಚಿಸಿ ನೋಡಿ, ರಮಝಾನ್ ಆಳವೂ, ವ್ಯಾಪ್ತಿಯು ಎಷ್ಟೊಂದು ವಿಶಾಲವಾಗಿದೆ, ಅನುಗ್ರಹವಾಗಿದೆ ಎಂಬುದನ್ನು ನೋಡಲು ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ದೊರೆಯಲು ಸಾಧ್ಯವಿಲ್ಲ.

ರಮಝಾನ್ ತಿಂಗಳಿಗಾಗಿ ಪ್ರವಾದಿಯವರು(ಸ) ಎರಡು ತಿಂಗಳು ಮೊದಲೇ ಸಿದ್ಧತೆ ನಡೆಸುತ್ತಿದ್ದರು. ಈ ತಿಂಗಳನ್ನು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದರು. ರಮಝಾನ್ ತಿಂಗಳು ಸಮೀಪಿಸಿದಾಗ ಪ್ರವಾದಿ(ಸ) ಮುಖವು ಪ್ರಸನ್ನಗೊಳ್ಳುತ್ತಿತ್ತು. ಮನಸ್ಸಿನಲ್ಲಿ ಆಹ್ಲಾದ ತುಂಬಿಕೊಳ್ಳುತ್ತಿತ್ತು. ಅವರಲ್ಲಿ ಉತ್ಸಾಹ, ಹುಮ್ಮಸ್ಸು ಗೋಚರಿಸುತ್ತಿತ್ತು ಮತ್ತು ಆ ಸಂತೋಷ, ಉತ್ಸಾಹವನ್ನು ಜನರಿಗೂ ಹರಡುತ್ತಿದ್ದರು. ಅವರಲ್ಲೂ ಆವೇಶ ತುಂಬಿಸುತ್ತಿದ್ದರು ಅಥವಾ ನಾವು ಗ್ರಹಿಸಿರುವುದಕ್ಕಿಂತಲೂ ರಮಝಾನ್‌ನ ಶ್ರೇಷ್ಠತೆ ವಿಶಿಷ್ಟವಾಗಿದೆ.

ನಮ್ಮ ಪೂರ್ವಜರು ರಮಝಾನನ್ನು ಬಹಳ ನಿರೀಕ್ಷೆಯಿಂದ ಎದುರು ನೋಡುತ್ತಿದ್ದರು. ರಮಝಾನ್‌ನಲ್ಲಿ ಆವೇಶದಿಂದ ಪುಣ್ಯ ಕರ್ಮಗಳನ್ನು ನಿರ್ವಹಿಸುತ್ತಿದ್ದರು. ರಮಝಾನ್‌ಗಿಂತ ಮೊದಲ 6 ತಿಂಗಳನ್ನು ರಮಝಾನ್‌ವರೆಗೆ ತಲುಪಿಸು ಎಂದು ಪ್ರಾರ್ಥಿಸುತ್ತಿದ್ದರು. ರಮಝಾನ್‌ನ ಬಳಿಕದ 6 ತಿಂಗಳು ರಮಝಾನ್‌ನಲ್ಲಿ ನಿರ್ವಹಿಸಿದ ಕರ್ಮಗಳನ್ನು ಸ್ವೀಕರಿಸು ಎಂದು ಪ್ರಾರ್ಥಿಸುತ್ತಿದ್ದರು. ರಮಝಾನ್‌ನ ಪ್ರಾಧಾನ್ಯತೆಯನ್ನು ಅದರ ಪೂರ್ಣ ರೂಪದಲ್ಲಿ ಅರ್ಥಮಾಡಿಕೊಂಡ ವ್ಯಕ್ತಿಯು ಅದರ ಪ್ರತಿಯೊಂದು ನಿಮಿಷವನ್ನು ಅಮೂಲ್ಯವೆಂದು ಭಾವಿಸುತ್ತಾನೆಂಬುದರಲ್ಲಿ ಸಂಶಯವಿಲ್ಲ. ಇಹಲೋಕದ ನಿಬಿಢತೆಯಲ್ಲಿ ನಾವು ಮುಳುಗಿದ್ದೇವೆ. ಅದರ ನಡುವೆ ಒಮ್ಮೆ ನಿಂತು ತನ್ನ ಸ್ವಂತದೆಡೆಗೆ ತಿರುಗಿ ನೋಡಲಿಕ್ಕಿರುವ ಒಂದು ಅವಕಾಶವನ್ನು ರಮಝಾನ್ ನಮಗೆ ನೀಡುತ್ತದೆ. ನಮ್ಮ ಜೀವನವನ್ನು ಸಂಪೂರ್ಣ ಆತ್ಮಾವ ಲೋಕನ ಮಾಡಬೇಕಾದ ದಿನರಾತ್ರೆಗಳು ಅಲ್ಲಾಹನೊಂದಿಗಿನ ಸಂಬಂಧದ ಆಳ ವನ್ನು ಅಳತೆ ಮಾಡಬೇಕಾದ ನಿಮಿಷಗಳು. ಆ ಸಂಬಂಧವನ್ನು ನವೀಕರಿಸಿಯೂ, ಉಜ್ಜಿ ಹೊಳೆಯುವಂತೆ ಮಾಡಿ, ಹೊಸ ಮನುಷ್ಯನಾಗಿ ರೂಪುಗೊಳ್ಳುವ ಸಂದರ್ಭ.

ನಮ್ಮ ರಮಝಾನ್ ಪ್ರಾರ್ಥನೆಗಳಿಂದ ಸಂಪನ್ನವಾಗಲಿ, ಜೀವನದ ಪಯಣದಲ್ಲಿ ಹಲವಾರು ಪ್ರಮಾದಗಳು ಸಂಭವಿಸಿವೆ. ಪಾಪದ ಮೂಟೆ ಹೊತ್ತು ಇನ್ನು ಮುಂದೆ ಸಾಗಲು ಸಾಧ್ಯವಿಲ್ಲ. ಪಾಪ ಭಾರದಿಂದ ಸೊಂಟ ಮುರಿದುಕೊಂಡವನ ಮುಂದೆ ಅಲ್ಲಾಹನು ಎರಡು ಕೈಯನ್ನು ಚಾಚಿ ನಿಂತುಕೊಂಡಿದ್ದಾನೆ. ಅವನ ಕರುಣೆಯ ಮುಂದೆ ನಮ್ಮ ಪಾಪದ ಮೂಟೆಯನ್ನು ಇಳಿಸಿ, ಪವಿತ್ರವಾದ ಪಯಣವನ್ನು ಮುಂದುವರಿಸಲು ನಾವಿನ್ನೂ ಏಕೆ ತಡಮಾಡಬೇಕು! “ಪ್ರಾರ್ಥಿಸುವವರಿದ್ದೀರಾ? ಅವರ ಪ್ರಾರ್ಥನೆಗೆ ನಾನು ಉತ್ತರ ನೀಡುತ್ತೇನೆ. ನನ್ನೊಡನೆ ಬೇಡುವವರಿದ್ದೀರಾ? ಅವರ ಬೇಡಿಕೆಯನ್ನು ನಾನು ಈಡೇರಿಸುತ್ತೇನೆ” ಎಂದು ಅಲ್ಲಾಹನು ಕೇಳುವಾಗ, ಕಣ್ಣೀರಿನೊಂದಿಗೆ ಅವನ ಮುಂದೆ ಸಾಷ್ಟಾಂಗ ವೆರಗಲು ನಮಗೆ ತಡೆಯಾದರೂ ಏನು?

ಪ್ರತಿಯೊಬ್ಬ ವ್ಯಕ್ತಿಯಲ್ಲೂ ಹಲವು ದೌರ್ಬಲ್ಯಗಳಿರಬಹುದು. ಅವರು ನಿರಂತರವಾಗಿ ಪಾಪಗಳನ್ನು ಮಾಡುತ್ತಿರುತ್ತಾರೆ. ಆ ಕೆಡುಕಿನ ಕೆಸರಿನಿಂದ ಹೊರಬರಲು ನಾವು ಅತಿಯಾಗಿ ಆಗ್ರಹಿಸುತ್ತೇವೆ. ನಮ್ಮ ದೌರ್ಬಲ್ಯಗಳು ಯಾವುದು? ಮತ್ತು ನಾವು ಯಾವ ಪಾಪದಿಂದ ದೂರವಿರಲು ಬಯಸಿದ್ದೇವೋ, ಆ ವಿಷಯಕ್ಕೆ ಪ್ರಾರ್ಥನೆಯನ್ನು ಕೇಂದ್ರೀಕರಿಸಬೇಕು. ಅದನ್ನು ಜಯಿಸಲು ಬೇಕಾದ ಈಮಾನ್ ಮತ್ತು ಭಯಭಕ್ತಿಯನ್ನು ನೀಡಲು ಅಲ್ಲಾಹನೊಂದಿಗೆ ಪ್ರಾರ್ಥಿಸಬೇಕು. ಅಂತಾದರೆ ರಮಝಾನ್ ಮುಗಿಯುವಾಗ ದೌರ್ಬಲ್ಯಗಳಿಂದ ಮುಕ್ತಿ ಪಡೆಯಬಹುದು ಎಂಬುದರಲ್ಲಿ ಸಂಶಯವಿಲ್ಲ.

ಸತ್ಕರ್ಮಗಳಲ್ಲಿ ಸ್ಪರ್ಧಿಸಿ ಮುಂದುವರಿಯಬೇಕಾದ 30 ದಿನರಾತ್ರೆಗಳು ನಮ್ಮನ್ನು ಎದುರು ನೋಡುತ್ತಿದೆ. ಜೀವನದ ಅನಿವಾರ್ಯ ಬೇಡಿಕೆಯನ್ನು ಮುಗಿಸಿದ ಬಳಿಕ, ಉಳಿದ ಸಮಯವನ್ನು ಸಂಪೂರ್ಣವಾಗಿ ಕುರ್‌ಆನ್ ಪಾರಾಯಣ, ಐಚ್ಛಿಕ ನಮಾಝ್, ಪ್ರಾರ್ಥನೆ, ದಿಕ್ರ್, ಸಲಾತ್, ದಾನ-ಧರ್ಮಗಳಲ್ಲಿ ಕೇಂದ್ರೀಕರಿಸಲು ನಮಗೆ ಸಾಧ್ಯವಾಗಬೇಕು. ಉದಾಸೀನತೆಯು ನಮ್ಮಲ್ಲಿ ಗೋಚರಿಸಬಾರದು. ಅದಕ್ಕೆ ಬರಲು ಉತ್ಸಾಹಿಗಳಾಗಬೇಕು. ಸಮಯವನ್ನು ಪೋಲು ಮಾಡುವುದಿಲ್ಲವೆಂದು ದೃಢ ನಿರ್ಧಾರ ಕೈಗೊಳ್ಳಬೇಕು. ರಮಝಾನ್‌ನಲ್ಲಿ ವ್ಯರ್ಥವಾಗಿ ಕಳೆಯುವ ಸಮಯವು ದೊಡ್ಡ ನಷ್ಟವಾಗಿದೆ.

ರಮಝಾನ್‌ನನ್ನು ಯಾವ ರೀತಿ ಪರಿಗಣಿಸಿದ್ದೇವೆಯೋ ಅದೇ ರೀತಿ ನಮ್ಮ ನಂತರದ ಜೀವನದ ಆಧ್ಯಾತ್ಮಿಕ ಶಕ್ತಿ ಇರುತ್ತದೆ. ಜೀವನದಲ್ಲಿ ನಾವು ಸಂಚರಿಸುವ ಪ್ರತಿ ಹಾದಿಯಲ್ಲೂ ಕೆಡುಕುಗಳು ತುಂಬಿ ನಿಂತಿವೆ. ಕೆಡುಕಿನೆಡೆಗಿನ ಎಲ್ಲ ದ್ವಾರಗಳು ತೆರೆದುಕೊಂಡಿವೆ. ಅಶ್ಲೀಲತೆ, ಅಜ್ಞಾನವು ತುಂಬಿ ತುಳುಕುತ್ತಿದೆ. ಇಲ್ಲಿ ನಮ್ಮಲ್ಲಿ ಅಂತಹ ಆಧ್ಯಾತ್ಮಿಕತೆ ಇದ್ದರೆ ಮಾತ್ರ ನಾವು ಜಾರಿ ಬೀಳದೆ ನಿಲ್ಲಲು ಸಾಧ್ಯವಾಗುವುದು.

ಇದು ನಮ್ಮ ಜೀವನದ ಕೊನೆಯ ಉಪವಾಸವಾಗಿದೆ ಎಂದೂ ವಿಶ್ವಾಸಿಯು ಯೋಚಿಸಬೇಕು. ಇದು ನನ್ನ ಮರಣದ ಮೊದಲ ನಮಾಝ್ ಎಂದು ಪ್ರತಿಯೊಂದು ನಮಾಝನ್ನು ನಾವು ನಿರ್ವಹಿಸಬೇಕು ಎಂದು ಪ್ರವಾದಿಯವರು(ಸ) ಹೇಳಿರುವರು. ಕೆಲವು ಗಂಟೆಗಳ ಅಂತರದಲ್ಲಿ ನಾವು ಮಾಡುವ ನಮಾಝ್‌ನ ಕುರಿತು ಪ್ರವಾದಿ ಹೀಗೆ ಹೇಳಿದ್ದಾರೆ. ಹೀಗಿರುವಾಗ ಒಂದು ವರ್ಷದ ಬಳಿಕ ಬರುವ ರಮಝಾನನ್ನು ನಾವು ಹೇಗೆ ಕಾಣಬೇಕು?

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …