Home / ಲೇಖನಗಳು / ಹಜ್ಜ್ ಕ್ಯಾಂಪ್‌ನಲ್ಲಿ ಕೇಳಿಬಂದ ಪ್ರಶ್ನೆಗಳು ಮತ್ತು ಉತ್ತರಗಳು

ಹಜ್ಜ್ ಕ್ಯಾಂಪ್‌ನಲ್ಲಿ ಕೇಳಿಬಂದ ಪ್ರಶ್ನೆಗಳು ಮತ್ತು ಉತ್ತರಗಳು

  • ಹೈದರಲಿ ಶಾಂತಪುರ

? ಹಜ್ಜ್ ಗೆ ಹಣವನ್ನು ಕಟ್ಟುವ ಸಂದರ್ಭದಲ್ಲಿ ನಾನು ನನ್ನ ಕಝಿನ್‌ನ ಬಳಿಯಿಂದ ಸ್ವಲ್ಪ ಮೊತ್ತ ಹಣವನ್ನು ಸಾಲವಾಗಿ ಪಡೆದಿದ್ದೆ. ನಾನು ಪಡೆದದ್ದಕ್ಕಿಂತ ಹೆಚ್ಚು ಮೊತ್ತ ಕೆಲವು ಪಾಲುದಾರಿಕೆಯ ವ್ಯಾಪಾರಕ್ಕೆ ಹಾಕಿದ್ದೇನೆ. ಆ ಮೊತ್ತವನ್ನು ಬೇಗನೇ ಹಿಂದೆಪಡೆಯಲು ಸಾಧ್ಯವಿಲ್ಲದ ಕಾರಣ ಕಝಿನ್ ಬಳಿ ಸಾಲ ಪಡೆದಿದ್ದೆ. ಆ ವಿಷಯವನ್ನು ಅವನಿಗೆ ತಿಳಿಸಿದ್ದೇನೆ. ನನ್ನ ಸಾಲದ ಜವಾಬ್ದಾರಿಯನ್ನು ನನ್ನ ಮಗನಿಗೆ ವಹಿಸಿದ್ದೇನೆ. ಈ ವರ್ಷದ ಕೊನೆಯಲ್ಲಿ ಹಜ್ಜ್ ಕಳೆದು ಮರಳಿ ಬಂದ ಬಳಿಕ ಪಡೆದ ಸಂಖ್ಯೆಯನ್ನು ಮರಳಿಸುವೆನೆಂದು ತಿಳಿಸಿದ್ದೇನೆ. ನಾನು ಈ ರೀತಿ ಹಜ್ಜ್ ಗೆ ಹೋಗುವುದರಲ್ಲಿ ತಪ್ಪಿದೆಯೇ?
ಉತ್ತರ: ಇಲ್ಲ. ಹಜ್ಜ್ ಯಾತ್ರೆಗೆ ಮೊದಲು ಅವಧಿ ಮುಗಿದ ಸಾಲವನ್ನು ತೀರಿಸಬೇಕೆಂದು, ಅವಧಿ ಮುಗಿಯದ ಸಾಲವನ್ನು ಕ್ಲಪ್ತ ಸಮಯದಲ್ಲಿ ನೀಡಲು ಏರ್ಪಾಡು ಮಾಡಬೇಕೆಂಬುದು ನಿಯಮ. ಇಲ್ಲಿ ಒಂದು ತಾತ್ಕಾಲಿಕ ಅಡ್ಜೆಸ್ಟ್ ಮೆಂಟ್ ಆಗಿ ಪಡೆದ ಸಾಲವನ್ನು ಹಜ್ಜ್ ಮುಗಿಸಿ ಬಂದ ಬಳಿಕ ಕೊಡಬೇಕು. ಅದಕ್ಕಿರುವ ಆರ್ಥಿಕತೆಯೂ ನಿಮಗಿದೆ. ಅಗತ್ಯ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ಮಗನಿಗೂ ಹೊಣೆಯನ್ನು ವಹಿಸಿದ್ದೀರಲ್ಲವೇ? ಈ ಪರಿಸ್ಥಿತಿಯಲ್ಲಿ ತಾವು ಹಜ್ಜ್ಗೆ ಹೋಗುವುದಕ್ಕೆ ಏನೂ ಸಮಸ್ಯೆಯಿಲ್ಲ.

? ಓರ್ವರಿಗೆ ಜೀವನದಲ್ಲಿ ಒಂದು ಬಾರಿ ಮಾತ್ರ ಹಜ್ಜ್ ಕಡ್ಡಾಯವಾಗಿರುವಾಗ ಒಂದಕ್ಕಿಂತ ಹೆಚ್ಚು ಬಾರಿ ಹಜ್ಜ್ ನಿರ್ವಹಿಸುವುದರ ವಿಧಿಯೇನು?
ಉತ್ತರ: ಒಬ್ಬ ವ್ಯಕ್ತಿ ಒಮ್ಮೆ ಮಾತ್ರ ಹಜ್ಜ್ ನಿರ್ವಹಿಸುವುದು ಕಡ್ಡಾಯವಾದರೂ ಅದಕ್ಕಿಂತ ಹೆಚ್ಚು ಬಾರಿ ನಿರ್ವಹಿಸುವುದನ್ನು ವಿರೋಧಿಸಲಾಗಿಲ್ಲ. ಹಜ್ಜ್ ಮತ್ತು ಉಮ್ರಾ ಪುನರಾವರ್ತಿಸುವುದರ ಪುಣ್ಯ ಮತ್ತು ಪ್ರತಿಫಲವನ್ನು ವಿವರಿಸುವ ಹದೀಸ್‌ಗಳು ಇವೆ. ಹಜ್ಜತುಲ್ ವಿದಾಅನಲ್ಲಿ ಪ್ರವಾದಿ(ಸ) ರೊಡನೆ ಹಜ್ಜ್ ನಿರ್ವಹಿಸಿದವರಲ್ಲಿ ಹಲವರು ಹಿಂದಿನ ವರ್ಷ ಅಬೂಬಕರ್(ರ)ರ ನೇತೃತ್ವದಲ್ಲಿ ನಡೆದ ಹಜ್ಜ್ ನಲ್ಲಿ ಭಾಗವಹಿಸಿದವರಾಗಿದ್ದರು.

? ಆರ್ಥಿಕ ಸ್ಥಿತಿ ಉತ್ತಮವಿಲ್ಲದ ಕಾರಣ ಹಜ್ಜ್ ಕರ್ಮವು ಕಡ್ಡಾಯವಲ್ಲದ ಓರ್ವ ವ್ಯಕ್ತಿ ಹಜ್ಜ್ ಗೆ ಹೋಗಲು ಬಯಸಿದರೆ ಆತನಿಗೆ ಸಹಾಯ ಮಾಡುವುದರಲ್ಲಿ ಪುಣ್ಯವಿದೆಯೇ?
ಉತ್ತರ: ಪುಣ್ಯವಿದೆ. ಒಂದು ಸತ್ಕರ್ಮವನ್ನು ಮಾಡಲು ಬಯಸಿದ ವ್ಯಕ್ತಿಗೆ ಸಹಕರಿಸುವುದು ಪುಣ್ಯವಾಗಿದೆ.

? ಮರಣ ಹೊಂದಿದ ಅಮ್ಮನಿಗಾಗಿ ಹಜ್ಜ್ ಮತ್ತು ಉಮ್ರಾ ನಿರ್ವಹಿಸುವುದರ ವಿಧಿಯೇನು?
ಉತ್ತರ: ಮರಣ ಹೊಂದಿದ ಅಮ್ಮನಿಗಾಗಿ ಹಜ್ಜ್ ಮತ್ತು ಉಮ್ರಾ ನಿರ್ವಹಿಸಬಹುದು. ಹಜ್ಜ್ ನಿರ್ವಹಿಸುವ ವ್ಯಕ್ತಿ ಮೊದಲು ತನಗಾಗಿ ಹಜ್ಜ್ ಮತ್ತು ಉಮ್ರಾ ನಿರ್ವಹಿಸಿದವರಾಗಿರಬೇಕು ಎಂಬ ನಿಯಮವಿದೆ. ಸ್ವಂತಕ್ಕಾಗಿ ಹಜ್ಜ್ ಮತ್ತು ಉಮ್ರಾ ನಿರ್ವಹಿಸಿದವರು ಮಾತ್ರ ಇತರರಿಗಾಗಿ ಹಜ್ಜ್ ಮತ್ತು ಉಮ್ರಾ ನಿರ್ವಹಿಸಿದರೆ ಅದು ಸಿಂಧುವಾಗುವುದು.

? ಪತಿ ಮರಣ ಹೊಂದಿದ ಮಹಿಳೆ ಇದ್ದತ್‌ನಲ್ಲಿರುವಾಗ ಹಜ್ಜ್ ಗೆ ಅನುಮತಿ ಲಭಿಸಿದರೆ ಏನು ಮಾಡಬೇಕು?
ಉತ್ತರ: ಪತಿ ಮರಣ ಹೊಂದಿದ ಮಹಿಳೆ ಇದ್ದತ್‌ನಲ್ಲಿರುವಾಗ ಹಜ್ಜ್ ಗೆ ಅನುಮತಿ ದೊರೆತರೆ ಹೋಗಬಾರದು. ಇದ್ದತ್ ಮುಗಿದ ಬಳಿಕವೇ ಹಜ್ಜ್ ಯಾತ್ರೆಗೆ ಅನುಮತಿಯಿದೆ.

? ಓರ್ವ ಮಹಿಳೆ ಹಜ್ಜ್ ಗೆ ಹೊರಟ ಬಳಿಕ ಪತಿ ಮರಣ ಹೊಂದಿದರೆ ಆ ಮಹಿಳೆ ಯಾತ್ರೆ ಮುಂದುವರಿಸಬೇಕೇ ಅಥವಾ ಊರಿಗೆ ಮರಳಬೇಕೇ?
ಉತ್ತರ: ಓರ್ವ ಮಹಿಳೆ ಹಜ್ಜ್ ಗೆ ಹೊರಟ ಬಳಿಕ ಪತಿ ಮರಣ ಹೊಂದಿದರೆ ಊರಿಗೆ ಮರಳಿ ಬರಲು ಸಾಧ್ಯವಾಗುವ ಸ್ಥಿತಿಯಲ್ಲಿ ಮತ್ತು ಇಹ್ರಾಮ್‌ಗೆ ಪ್ರವೇಶಿಸುವ ಮೊದಲು ಆಗಿದ್ದರೆ ಪ್ರಬಲ ಅಭಿಪ್ರಾಯದಂತೆ ಊರಿಗೆ ಮರಳಿ ಬರಬೇಕು. ಊರಿಗೆ ಮರಳಿ ಬರಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಮತ್ತು ಇಹ್ರಾಮ್‌ಗೆ ಪ್ರವೇಶಿಸಿದ ಬಳಿಕವಾಗಿದ್ದರೆ ಹಜ್ಜನ್ನು ಮುಗಿಸಿಯೇ ಮರಳಿದರೆ ಸಾಕು. ಆದರೆ ಪತಿ ಮರಣ ಹೊಂದಿದ ಮಹಿಳೆ ಇದ್ದತ್ ಸಮಯದಲ್ಲಿ ಪಾಲಿಸಬೇಕಾದ ಮರ್ಯಾದೆಗಳನ್ನು ಪಾಲಿಸುವುದು ಯಾವ ಅವಸ್ಥೆಯಲ್ಲೂ ಕಡ್ಡಾಯವಾಗಿದೆ.

? ಯಾವುದೋ ಕಾರಣಕ್ಕೆ ಕೋಪದಿಂದಿರುವ ಓರ್ವ ವ್ಯಕ್ತಿಯೊಡನೆ ಹಜ್ಜ್ ಗೆ ಹೊರಟ ವ್ಯಕ್ತಿ ರಾಜಿ ಮಾಡಲು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಹಾಗಿದ್ದರೆ ಹಜ್ಜ್ ಗೆ ಹೋಗುವ ವ್ಯಕ್ತಿ ಏನು ಮಾಡಬೇಕು? ಆತನ ಹಜ್ಜ್ ಸ್ವೀಕರಿಸಲ್ಪಡಲಾರದೇ?
ಉತ್ತರ: ಹಜ್ಜ್ ಯಾತ್ರಿಕನು ಯಾತ್ರೆಗೆ ಮೊದಲೇ ಎಲ್ಲ ರೀತಿಯ ಜಗಳ, ಕೋಪವನ್ನು ಮುಗಿಸಿಯೇ ಹೊರಡಬೇಕು. ಅದಕ್ಕೆ ಪ್ರಯತ್ನಿಸದೆ ಹೋಗುವ ವ್ಯಕ್ತಿಯ ಹಜ್ಜ್ ಅಲ್ಲಾಹನು ಸ್ವೀಕರಿಸಬೇಕಾಗಿಲ್ಲ. ಆದರೆ ಓರ್ವರು ಆತ್ಮಾರ್ಥವಾಗಿ ರಾಜಿ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅದು ಯಶಸ್ವಿಯಾಗುವುದಿಲ್ಲವೆಂದಾದರೆ, ಅದರಲ್ಲಿ ಅವನು ತಪ್ಪಿತಸ್ಥನಾಗು ವುದೋ ಅಥವಾ ಹಜ್ಜ್ ಸ್ವೀಕಾರಾರ್ಹತೆಗೆ ಅಡ್ಡಿಯಾಗುವುದೋ ಇಲ್ಲ. ಸಂಬಂಧಪಟ್ಟ ವ್ಯಕ್ತಿಯ ಹಿದಾಯತ್ ಮತ್ತು ಮನದ ಪರಿವರ್ತನೆಗಾಗಿ ಪ್ರಾರ್ಥಿಸಬೇಕು.

? ನನ್ನಲ್ಲಿ ಇಪ್ಪತ್ತು ಪವನ್‌ನ ಆಭರಣವಿದೆ. ಅದರಿಂದ ಹತ್ತು ಪವನ್ ಆಭರಣವನ್ನು ಮಾರಿ ನಾನು ಹಜ್ಜ್ ಗೆ ಹೋಗುತ್ತಿದ್ದೇನೆ. ಕಳೆದ ಇಪ್ಪತ್ತು ವರ್ಷದಿಂದ ಈ ಆಭರಣಗಳನ್ನು ನಾನು ಉಪಯೋಗಿಸಿದ್ದರೂ ನಾನು ಇದುವರೆಗೆ ಅದಕ್ಕೆ ಝಕಾತ್ ನೀಡಿಲ್ಲ. ಅದಕ್ಕೆ ನಾನು ಝಕಾತ್ ನೀಡಬೇಕೇ? ಕೊಡಬೇಕಿದ್ದರೆ ಎಷ್ಟು? ಈ ಆಭರಣವನ್ನು ಮಾರಿ ಹಜ್ಜ್ ಗೆ ಹೋಗುವುದು ಸರಿಯಾ?
ಉತ್ತರ: ತಮ್ಮ ಒಡೆತನದಲ್ಲಿರುವ ಆಭರಣದ ಒಂದು ಭಾಗವನ್ನು ಮಾರಿ ಹಜ್ಜ್ ಗೆ ಹೋಗುವುದರಲ್ಲಿ ತಪ್ಪಿಲ್ಲ. ಆದರೆ ತಮ್ಮ ವಶದಲ್ಲಿದ್ದ ಆಭರಣಗಳಿಗೆ ಕಳೆದ ಎಲ್ಲಾ ವರ್ಷಗಳ ಝಕಾತನ್ನು ಲೆಕ್ಕ ಮಾಡಿ ಪಾವತಿಸಬೇಕು. ಪ್ರತಿ ವರ್ಷವೂ ಆಭರಣದ ಎರಡೂವರೆ ಶೇಕಡಾ ಝಕಾತ್ ಆಗಿ ನೀಡಬೇಕು. ಆಭರಣಗಳ ಝಕಾತ್‌ನ ವಿಷಯದಲ್ಲಿ ಪ್ರಬಲವಾದ ಅಭಿಪ್ರಾಯದ ಪ್ರಕಾರ 85 ಗ್ರಾಂ ಇದ್ದರೆ, ಆಭರಣವಲ್ಲದ ಸ್ವರ್ಣದಂತೆಯೇ ಅದರ ಎರಡೂವರೆ ಶೇಕಡಾ ಝಕಾತ್ ನೀಡಬೇಕು.

? ಐವತ್ತು ತವಾಫ್ ಮಾಡಿದರೆ ಅದಕ್ಕೆ ಒಂದು ಹಜ್ಜ್ ನ ಪ್ರತಿಫಲವಿದೆಯೆಂದು ಹೇಳುವುದು ಸರಿಯಾ?
ಉತ್ತರ: ಇಲ್ಲ. ಅದಕ್ಕೆ ಯಾವುದೇ ಆಧಾರವಿಲ್ಲ.

? ಮರಣ ಹೊಂದಿದ ತುಂಬಾ ಜನರಿಗಾಗಿ ಒಂದು ಉಮ್ರಾ ನಿರ್ವಹಿಸಿದರೆ ಅವರಿಗೆ ಅದರ ಪ್ರತಿಫಲ ಸಿಗುವುದೇ?
ಉತ್ತರ: ಇಲ್ಲ, ಲಭಿಸುವುದಿಲ್ಲ. ಒಂದು ಉಮ್ರಾದ ಪ್ರತಿಫಲ ಓರ್ವರಿಗೆ ಮಾತ್ರ ಲಭಿಸುವುದು. ಹಜ್ಜ್ ನ ವಿಚಾರವೂ ಅಷ್ಟೇ.

? ನನಗೆ ವಿವಾಹ ಪ್ರಾಯ ತಲುಪಿದ ಓರ್ವ ಮಗಳಿದ್ದಾಳೆ. ಅವಳು ಕಲಿಯುತ್ತಿದ್ದಾಳೆ. ಈ ಪರಿಸ್ಥಿತಿಯಲ್ಲಿ ನಾನು ಹಜ್ಜ್ ಗೆ ಹೋಗುವುದರಲ್ಲಿ ತಪ್ಪಿದೆಯೇ?
ಉತ್ತರ: ಇಲ್ಲ, ಪವಿತ್ರ ಭವನಕ್ಕೆ ಹೋಗಿ ಹಜ್ಜ್ ನಿರ್ವಹಿಸಿ ಮರಳಿ ಬರಲು, ಮರಳಿ ಬರುವ ವರೆಗೆ ತಾನು ಖರ್ಚಿಗೆ ಕೊಡಬೇಕಾದವರಿಗೆ ಖರ್ಚಿಗೆ ಕೊಡಲು ಅಗತ್ಯವಾದ ಹಣವಿದ್ದವರಿಗೆಲ್ಲ ಹಜ್ಜ್ ನಿರ್ಬಂಧವಾಗಿದೆ. ಕಲಿತುಕೊಂಡಿರುವ ಮಗಳು ಬೆಳೆದು ದೊಡ್ಡವಳಾಗಿ ಮದುವೆ ಮಾಡಿ ಕೊಡಬೇಕು ಎಂಬುದು ಹಜ್ಜ್ ಕಡ್ಡಾಯವಾಗುವ ಉಪಾಧಿಯಲ್ಲ.

? ಇಹ್ರಾಮ್‌ನಲ್ಲಿ ಪುರುಷರಿಗೆ ಹೊಲಿದ ವಸ್ತ್ರ ಧರಿಸಬಾರದಲ್ಲವೇ? ಹಾಗಾದರೆ ಆಗಾಗ ಮೂತ್ರ ಹೋಗುವ ರೋಗವಿರುವವರು ಏನು ಮಾಡಬೇಕು?
ಉತ್ತರ: ಇಹ್ರಾಮ್‌ನಲ್ಲಿ ಧರಿಸಬಾರದು ಎಂದು ಹೇಳಿರುವ ಹೊಲಿದ ವಸ್ತ್ರದ ಉದ್ದೇಶ ಶರೀರದ ಆಕೃತಿಯಲ್ಲೋ ಅಥವಾ ಯಾವುದಾದರೂ ಅವಯವದ ಆಕೃತಿಯಲ್ಲೋ ವೃತ್ತಾಕಾರವಾಗಿ ಹೊಲಿದದ್ದಾಗಿದೆ. ಶರ್ಟ್, ಬನಿಯನ್, ಅಂಡರ್ ವೇರ್, ಪ್ಯಾಂಟ್, ಪೈಜಾಮ ಮೊದಲಾದವು ಇದಕ್ಕೆ ಉದಾಹರಣೆ. ಆದರೆ ಹೊಲಿದಿದ್ದರೂ ಅದು ವೃತ್ತಾಕಾರದಲ್ಲಿ ಹೊಲಿದಿಲ್ಲದಿದ್ದರೆ ಕೋನ ರೀತಿಯ ಕೆಳವಸ್ತ್ರ ಧರಿಸುವುದಕ್ಕೆ ವಿರೋಧವಿಲ್ಲ. ಎಲ್ಲಾದರೂ ಹೊಲಿದಿದ್ದರೆ ಅದಕ್ಕೆ ತೊಂದರೆಯಿಲ್ಲ.

? ಇಹ್ರಾಮ್‌ನ ಬಳಿಕ ಶೂ ಧರಿಸಬಹುದೇ?
ಉತ್ತರ: ಇಹ್ರಾಮ್‌ನಲ್ಲಿ ಮುಚ್ಚದ ಪಾದರಕ್ಷೆಯನ್ನು ಪುರುಷರು ಧರಿಸಬೇಕು. ಮಹಿಳೆಯರಿಗೆ ಮುಚ್ಚುವ ಪಾದರಕ್ಷೆ ಧರಿಸಬಹುದು.

? ಇಹ್ರಾಮ್‌ನಲ್ಲಿ ವ್ಯಕ್ತಿಯು ಪರಿಮಳಯುಕ್ತ ಎಣ್ಣೆ, ಸೋಪನ್ನು ಉಪಯೋಗಿಸಬಹುದೇ?
ಉತ್ತರ: ಇಹ್ರಾಮ್‌ಗೆ ಪ್ರವೇಶಿಸುವ ಮೊದಲು ದೇಹಕ್ಕೆ ಸುಗಂಧ ಹಾಕುವುದು ಸುನ್ನತ್ ಆದರೂ ಇಹ್ರಾಮ್ ಪ್ರವೇಶದ ಬಳಿಕ ಪರಿಮಳಯುಕ್ತ ಎಣ್ಣೆ, ಸಾಬೂನು ಮೊದಲಾದ ವಸ್ತುಗಳನ್ನು ಉಪಯೋಗಿಸಬಾರದು.

? ಮದೀನ ದಾರಿಯಾಗಿ ಹಜ್ಜ್ ಗೆ ಹೋಗುವ ಓರ್ವ ಮಹಿಳೆ ಮೀಖಾತ್‌ನಲ್ಲಿ ಉಮ್ರಾಕ್ಕೆ ಇಹ್ರಾಮ್ ಪ್ರವೇಶಿಸುವುದಾದರೆ ಅದು ಆಕೆಯ ಮರಣದ ಹೊಂದಿದ ತನ್ನ ಪತಿಗಾಗಿ ಮಾಡುವುದಕ್ಕೆ ವಿರೋಧವಿದೆಯೇ?
ಉತ್ತರ: ಮದೀನಾ ಮಾರ್ಗವಾಗಿ ಹಜ್ಜ್ ಗೆ ಹೋಗುವ ಮಹಿಳೆ ಈ ಹಿಂದೆ ತನಗಾಗಿ ಉಮ್ರಾ ನಿರ್ವಹಿಸಿದ್ದರೆ ಮೃತ ಪತಿಗಾಗಿ ಮೀಕಾತ್‌ನಲ್ಲಿ ಉಮ್ರಾ ಮಾಡಲು ಯಾವುದೇ ಅಭ್ಯಂತರವಿಲ್ಲ. ಮಹಿಳೆಯು ಮೊದಲು ಉಮ್ರಾ ನಿರ್ವಹಿಸದವಳಾಗಿದ್ದರೆ ಉಮ್ರಾ ಮತ್ತು ಹಜ್ಜ್ ಅವಳಿಗಾಗಿ ಇರಬೇಕು. ಇತರರ ಪರವಾಗಿ ಹಜ್ಜ್ ನಿರ್ವಹಿಸುವವರು ತಮಗಾಗಿ ಮೊದಲು ಅವೆರಡನ್ನೂ ಮಾಡಿರಬೇಕು.

? ಇಹ್ರಾಮ್ ಮಾಡಿದ ವ್ಯಕ್ತಿಯು ಮಸ್ಜಿದುಲ್ ಹರಾಮ್ ಪ್ರವೇಶಿಸಿದ ನಂತರ ಮೊದಲು ಮಾಡಬೇಕಾದ ಕೆಲಸವೆಂದರೆ, ಎರಡು ರಕಅತ್ ತಹಿಯ್ಯತ್‌ನ ನಮಾಝಾ? ಅಥವಾ ತವಾಫೋ?
ಉತ್ತರ: ಹರಮ್ ಪ್ರವೇಶಿಸುವ ವ್ಯಕ್ತಿ ಜಮಾಅತ್ ನಮಾಝ್ ನ ಸಮಯವಲ್ಲದಿದ್ದರೆ ತವಾಫ್ ನಿರ್ವಹಿಸಬೇಕು. ಸಾಮೂಹಿಕ ನಮಾಝ್ ನಡೆಯುವ ಸಂದರ್ಭವಾಗಿದ್ದರೆ ಅದರಲ್ಲಿ ಪಾಲ್ಗೊಳ್ಳಬೇಕು ಮತ್ತು ಜಮಾಅತ್ ನಮಾಝ್ ನಡೆಯುತ್ತಿಲ್ಲದ ಸಂದರ್ಭದಲ್ಲಿ ಪ್ರವೇಶಿಸುವ ವ್ಯಕ್ತಿಗೆ ಕೂಡಲೇ ತವಾಫ್ ಮಾಡುವ ಉದ್ದೇಶವಿಲ್ಲದಿದ್ದರೆ ಎರಡು ರಕಅತ್ ಸುನ್ನತ್ ನಮಾಝ್ ಮಾಡಿ ತವಾಫ್ ನಿರ್ವಹಿಸಬಹುದು.

? ಮಹಿಳೆಯರು ತವಾಫ್ ವೇಳೆಯಲ್ಲಿ ಮಾಸ್ಕ್ ಧರಿಸುವುದಕ್ಕೆ ವಿರೋಧವಿದೆಯೇ?
ಉತ್ತರ: ಇಲ್ಲ, ಮಹಿಳೆಯರು ಮುಖಪರದೆ ಧರಿಸುವುದಕ್ಕೆ ಮಾತ್ರ ವಿರೋಧವಿದೆ.

? ತವಾಫ್ ಮಾಡುವ ವೇಳೆಯಲ್ಲಿ ವುಝೂ ನಷ್ಟವಾದರೆ ಏನು ಮಾಡಬೇಕು? ಪುನಃ ವುಝೂ ಮಾಡಿ ಬರಬೇಕೆಂದಾದರೆ ತವಾಫ್ ಪುನರಾರಂಭಿಸುವುದು ಎಲ್ಲಿಂದ?
ಉತ್ತರ: ತವಾಫ್ ಮಾಡುವಾಗ ವುಝೂ ನಷ್ಟವಾದರೆ ಪುನಃ ವುಝೂ ಮಾಡಿಯೇ ತವಾಫ್ ಆರಂಭಿಸಬೇಕು. ತವಾಫ್ ನಿಲ್ಲಿಸಿದ ಸ್ಥಳದಿಂದ ಮುಂದುವರಿಸಿದರೆ ಸಾಕು. ಆದರೆ ತವಾಫ್‌ನ ನಡುವೆ ತವಾಫ್ ಮುರಿದು ಹೋದರೆ ಮೊದಲಿನ ಸುತ್ತನ್ನು ಪರಿಗಣಿಸಲಾಗುವುದಿಲ್ಲ. ಅದರ ಬದಲು ಒಂದು ಕೊನೆ ಒಂದು ತವಾಫ್ ಹೆಚ್ಚಿಸಿದರೆ ಸಾಕು.

? ತವಾಫ್‌ನ ನಡುವೆ ಸ್ತ್ರೀಗೆ ಆರ್ತವ ಉಂಟಾದರೆ ಏನು ಮಾಡಬೇಕು?
ಉತ್ತರ: ತವಾಫ್‌ನ ನಡುವೆ ಆರ್ತವವುಂಟಾದರೆ ಕೂಡಲೇ ತವಾಫನ್ನು ಕೊನೆಗೊಳಿಸಿ ಮಸೀದಿಯಿಂದ ನಿರ್ಗಮಿಸಿ, ಶುದ್ಧಿಯಾದ ಬಳಿಕವೇ ನಷ್ಟವಾದ ತವಾಫನ್ನು ನಿರ್ವಹಿಸಿದರೆ ಸಾಕು. ಹಜ್ಜ್ ವೇಳೆಯಲ್ಲಿ ಕರ್ಮಗಳನ್ನು ನಿರ್ವಹಿಸಲು ತಡೆಯಾಗಬಹುದೆಂಬ ಆತಂಕವಿರುವ ಮಹಿಳೆಯರು ಆರ್ತವವನ್ನು ಮುಂದೂಡುವ ಔಷಧಿಯನ್ನು ಉಪಯೋಗಿಸಬಹುದು. ಧರ್ಮದಲ್ಲಿ ನಿಷಿದ್ಧವಲ್ಲದ, ದೇಹಕ್ಕೆ ಹಾನಿಕರವಲ್ಲದ ಔಷಧಿಯಾಗಿರಬೇಕು.

? ಸಫಾ-ಮರ್ವಾದ ಸಅïಇಯಲ್ಲಿ ವುಝೂ ಕಡ್ಡಾಯವೇ? ಕಡ್ಡಾಯವಲ್ಲದಿದ್ದರೆ ತವಾಫ್‌ನ ಬಳಿಕ ಆರ್ತವವುಂಟಾದ ಮಹಿಳೆ ಸಅï‌ಈ ಮಾಡಬಹುದೇ?
ಉತ್ತರ: ಪ್ರಬಲ ಅಭಿಪ್ರಾಯದಂತೆ ಸಅï‌ಈಗೆ ವುಝೂ ಕಡ್ಡಾಯವಲ್ಲ. ತವಾಫ್‌ನ ಬಳಿಕ ಆರ್ತವವುಂಟಾದರೆ ಸ್ತ್ರೀ ಸಅï‌ಈ ನಿರ್ವಹಿಸುವುದಕ್ಕೆ ವಿರೋಧವಿಲ್ಲ. ಸಫಾ ಮರ್ವಾದ ನಡುವೆ ಸಅï‌ಈ ನಿರ್ವಹಿಸುವ ಸ್ಥಳವು ಮಸೀದಿಗೆ ಸೇರದ ಕಾರಣ ಅಲ್ಲಿ ಅಂತಹ ಮಹಿಳೆಯರು ಪ್ರವೇಶಿಸುವುದಕ್ಕೆ ನಿರ್ಬಂಧವಿಲ್ಲ.

? ಪಾದರಕ್ಷೆಯನ್ನು ಇರಿಸಿದ ಬ್ಯಾಗ್ ತೋಳಿನಲ್ಲಿಟ್ಟು ತವಾಫ್ ಮಾಡುವುದು ಸರಿಯಾ? ಶೌಚಾಲಯಕ್ಕೆ ಹೋಗುವಾಗ ಪಾದರಕ್ಷೆಯಲ್ಲಿ ಮಾಲಿನ್ಯವಾಗುವ ಸಾಧ್ಯತೆಯಿಲ್ಲವೇ?
ಉತ್ತರ: ನಜಸ್ ಅಲ್ಲದ ಪಾದರಕ್ಷೆಯನ್ನು ಬ್ಯಾಗ್ ನಲ್ಲಿಟ್ಟು ತವಾಫ್ ಮಾಡುವುದಕ್ಕೆ ಅಭ್ಯಂತರವಿಲ್ಲ. ನಜಸ್ ಆಗಿದೆ ಎಂದು ಖಾತ್ರಿಯಿರುವ ಪಾದರಕ್ಷೆಯನ್ನು ತೆಗೆದುಕೊಂಡು ಹೋಗುವುದು ಸರಿಯಲ್ಲ. ಶೌಚಾಲಯಗಳಲ್ಲಿ ಪಾದರಕ್ಷೆ ತೊಳೆಯುವ ವ್ಯವಸ್ಥೆ ಇರುವುದರಿಂದ ಪಾದರಕ್ಷೆಯಲ್ಲಿ ನಜಸ್ ಎಂದು ಹೇಳುವುದರಲ್ಲಿ ಅರ್ಥವಿಲ್ಲ.

? ಇಹ್ರಾಮ್ ಪ್ರವೇಶಿಸಿದ ವ್ಯಕ್ತಿ ಟವೆಲ್, ಕನ್ನಡಕ, ಉಂಗುರ, ಬೆಲ್ಟ್, ಹೊಲಿದ ಬ್ಯಾಗ್ ನಂತಹ ವಸ್ತುಗಳನ್ನು ಉಪಯೋಗಿಸುವುದಕ್ಕೆ ವಿರೋಧವಿದೆಯೇ?
ಉತ್ತರ: ವಿರೋಧವಿಲ್ಲ.

? ತವಾಫ್ ವೇಳೆಯಲ್ಲಿ ಮಹಿಳೆಯರು ಮುಂಗೈ ಮುಚ್ಚುವುದಕ್ಕೆ ವಿರೋಧವಿದೆಯೇ?
ಉತ್ತರ: ಇಹ್ರಾಮ್‌ನಲ್ಲಿ ಮಹಿಳೆ ಕೈ ಕವಚ ಮತ್ತು ಮುಖ ಪರದೆ ಧರಿಸುವುದಕ್ಕೆ ವಿರೋಧವಿದ್ದರೂ ಅನ್ಯ ಪುರುಷರ ಮುಂದೆ ವಸ್ತ್ರದಿಂದ ಮುಖ, ಮುಂಗೈ ಮುಚ್ಚಿಕೊಳ್ಳುವುದಕ್ಕೆ ವಿರೋಧವಿಲ್ಲ. ಪ್ರವಾದಿ ಪತ್ನಿ/ಯರು ಆ ರೀತಿ ಮಾಡಿದ್ದರೆಂದು ವರದಿಗಳಿವೆ.

? ಇಹ್ರಾಮ್ ಧರಿಸಿದ ಬಳಿಕ ಕೂದಲು ಉದುರಿ ಹೋಗುವುದಾದರೆ ಏನು ಮಾಡಬೇಕು?
ಉತ್ತರ: ಇಹ್ರಾಮ್ ಧರಿಸಿದ ಬಳಿಕ ಉದ್ದೇಶ ಪೂರ್ವಕವಲ್ಲದೆ ಕೂದಲು ಉದುರುವುದಾದರೆ ಅದಕ್ಕೇನೂ ಪ್ರಾಯಶ್ಚಿತ್ತ ಅಗತ್ಯವಿಲ್ಲ. ಉದ್ದೇಶ ಪೂರ್ವಕವಾಗಿ ಕೂದಲನ್ನು ತೆಗೆಯುವುದೋ ಕೀಳುವುದನ್ನು ಮಾತ್ರ ವಿರೋಧಿಸಲಾಗಿದೆ.

? ಹಜ್ಜ್ ನ ಒಂದು ಯಾತ್ರೆಯಲ್ಲಿ ಬದುಕಿರುವವರೋ ಅಥವಾ ಮರಣ ಹೊಂದಿದವರೋ ಆದ ಒಂದಕ್ಕಿಂತ ಹೆಚ್ಚು ಜನರಿಗಾಗಿ ಒಂದಕ್ಕಿಂತ ಅಧಿಕ ಉಮ್ರಾ ನಿರ್ವಹಿಸುವುದರ ವಿಧಿಯೇನು?
ಉತ್ತರ: ಹಲವು ಮಂದಿ ಒಂದೇ ಯಾತ್ರೆಯಲ್ಲಿ ಒಂದಕ್ಕಿಂತ ಹೆಚ್ಚು ಜನರಿಗಾಗಿ ಉಮ್ರಾ ನಿರ್ವಹಿಸುತ್ತಾರಾದರೂ ಪ್ರವಾದಿ(ಸ) ಮತ್ತು ಅನುಯಾಯಿಗಳ ಜೀವನದಲ್ಲಿ ಅದಕ್ಕೆ ಉದಾಹರಣೆ ಸಿಗುವುದಿಲ್ಲವೆಂಬ ಕಾರಣಕ್ಕೆ ಪ್ರಮುಖ ವಿದ್ವಾಂಸರು ಅದನ್ನು ನಿರುತ್ಸಾಹಗೊಳಿಸಿದ್ದಾರೆ. ಅಶುದ್ಧಿಯ ಕಾರಣದಿಂದ ಸ್ವತಂತ್ರವಾದ ಒಂದು ಉಮ್ರಾ ನಿರ್ವಹಿಸಲು ಸಾಧ್ಯವಾಗದ ಕಾರಣಕ್ಕೆ ದುಃಖಿಸಿದ ಆಯಿಶಾ(ರ)ರಿಗೆ ಅವರ ಸಹೋದರನ ಜೊತೆ ತನ್‌ಈಮ್‌ಗೆ ಹೋಗಿ ಇಹ್ರಾಮ್ ಮಾಡಿ ಉಮ್ರಾ ನಿರ್ವಹಿಸಲು ಅನುಮತಿ ನೀಡಿದ ಒಂದು ಘಟನೆ ಮಾತ್ರ ವರದಿಯಾಗಿದೆ. ಆಯಿಶಾ(ರ)ರ ಜೊತೆಗೆ ಹೋದ ಸಹೋದರ ಅಬ್ದುರ‍್ರಹ್ಮಾನ್ ಉಮ್ರಾ ನಿರ್ವಹಿಸಲಿಲ್ಲ ಎಂಬುದೂ ಪ್ರಸ್ತಾಪನೀಯವಾಗಿದೆ. ಆಯಿಶಾ(ರ) ರಂತೆ ಸ್ವತಂತ್ರವಾದ ಉಮ್ರಾ ನಿರ್ವಹಿಸಲು ಸೌಕರ್ಯ ಲಭಿಸದವರಿಗೆ ಹಾಗೆ ಮಾಡಬಹುದು ಎಂದಲ್ಲದೆ ಬದುಕಿರುವ ಯಾ ತೀರಿಕೊಂಡಿರುವ ವ್ಯಕ್ತಿಗಳಿಗಾಗಿ ಉಮ್ರಾವನ್ನು ಪುನರಾವರ್ತಿಸುವುದು ಪ್ರೋತ್ಸಾಹನೀಯವಲ್ಲ. ಇತರರಿಗಾಗಿ ಉಮ್ರಾ ಮಾಡುವ ಉದ್ದೇಶವಿರುವವರು ಪ್ರತ್ಯೇಕ ಯಾತ್ರೆ ಮಾಡಬೇಕು.

? ಕೆಲವು ಜನರು ಮಿನಾ, ಅರಫಾ, ಮುಝ್ದಲಿಫ ಎಂಬಲ್ಲಿ ನಮಾಝನ್ನು ಜಮ್‌ಅï-ಕಸ್ರ್ ಮಾಡದೇ ಪೂರ್ತಿಯಾಗಿ ಮಾಡುವುದು ಕಂಡಿದ್ದೇವೆ. ಪ್ರವಾದಿ(ಸ) ಚರ್ಯೆಯಂತೆ ಅಲ್ಲಿ ನಮಾಝ್ ಹೇಗೆ ನಿರ್ವಹಿಸಬೇಕು?
ಉತ್ತರ: ಆ ಸ್ಥಳದಲ್ಲಿ ನಮಾಝ್ ಜಮ್‌ಅï ಕಸ್ರ್ ಮಾಡದೆ ನಿರ್ವಹಿಸುವುದು ಪ್ರವಾದಿ ಚರ್ಯೆಗೆ ವಿರುದ್ಧವಾಗಿದೆ. ಹಜ್ಜ್ ಕರ್ಮವನ್ನು ನನ್ನಿಂದ ನೋಡಿ ತಿಳಿದುಕೊಳ್ಳಿ ಎಂದು ಆದೇಶಿ ಸಿದ ಪ್ರವಾದಿ(ಸ) ಮಿನಾದಲ್ಲಿ ಪ್ರತಿಯೊಂದು ನಮಾಝನ್ನೂ ಜಮ್‌ಅï ಮಾಡದೆ ಅದರ ಸಮಯದಲ್ಲೇ ನಿರ್ವಹಿಸಿದ್ದಾರೆ. ಆದರೆ ಲುಹ್‌ರ್, ಅಸರ್, ಇಶಾ ನಮಾಝ್ ಗಳನ್ನು ಕಸ್ರ್ ಮಾಡಿ ಎರಡು ರಕಅತ್‌ನಂತೆ ನಿರ್ವಹಿಸಿದ್ದಾರೆ. ಅರಫಾದಲ್ಲಿ ಲುಹರ್, ಅಸರ್ ಅನ್ನು ಜಮ್‌ಅï ಕಸ್ರ್ ಮಾಡಿ ಲುಹರ್‌ನ ಸಮಯದಲ್ಲಿ ಎರಡು ರಕಅತ್‌ನಂತೆ ನಿರ್ವಹಿಸಿರುವರು. ಅಂದು ಮಗ್ರಿಬ್ ಇಶಾ ಮುಝ್ದಲಿಫದಲ್ಲಿ ತಲುಪಿದ ಬಳಿಕ ಮಗ್ರಿಬ್ ಮೂರು ರಕಅತ್, ಇಶಾ ಎರಡು ರಕಅತ್ ಜಮ್‌ಅï ಮಾಡಿ ನಮಾಝ್ ನಿರ್ವಹಿಸಿದ್ದಾರೆ. ಪ್ರವಾದಿ(ಸ)ರೊಂದಿಗೆ ಹಜ್ಜ್ ನಿರ್ವಹಿಸಿದ ಮಕ್ಕಾ ನಿವಾಸಿಗಳು ಹಾಗೆಯೇ ಮಾಡಿದ್ದರು. ಹಜ್ಜ್ ವೇಳೆಯ ಪ್ರಸ್ತುತ ನಮಾಝ್ ಗಳು ಹಜ್ಜ್ ಕರ್ಮದ ಭಾಗವೆಂದು ವಿದ್ವಾಂಸರು ಹೇಳುತ್ತಾರೆ.

? ಹಜ್ಜ್ ನಲ್ಲಿ ಕೂದಲು ತೆಗೆಯಲಿಕ್ಕಿರುವುದರಿಂದ ಉಮ್ರಾದಲ್ಲಿ ಕೇಶಮುಂಡನ ಮಾಡುವುದಕ್ಕಿಂತ ಕೂದಲು ಕತ್ತರಿಸುವುದಲ್ಲವೇ ಒಳ್ಳೆಯದು?
ಉತ್ತರ: ಉಮ್ರಾ ನಿರ್ವಹಿಸಿದ ಬಳಿಕ ಹಜ್ಜ್ ಗೆ ಹೆಚ್ಚಿನ ದಿವಸ ಬಾಕಿ ಇಲ್ಲದಿದ್ದರೆ ಪ್ರಶ್ನೆಯಲ್ಲಿ ಸೂಚಿಸಿರುವಂತೆ ಕೂದಲು ಕತ್ತರಿಸುವುದು ಉತ್ತಮ. ಹೆಚ್ಚಿನ ದಿವಸ ಇದೆಯೆಂದಾದರೆ ಕೇಶ ಮುಂಡನ ಮಾಡುವುದೇ ಉತ್ತಮ.

? ಹಾಜಿಗಳು ನಿರ್ವಹಿಸಬೇಕಾದ ಬಲಿಕರ್ಮ ಯಾವುದೆಲ್ಲ? ಬಲಿ ಮೃಗಗಳ ಮಾಂಸ ಬಲಿಯರ್ಪಿಸುವವರು ಸೇವಿಸಬಹುದೇ?
ಉತ್ತರ: ಎಲ್ಲಾ ಹಾಜಿಗಳೂ ಒಂದೇ ರೀತಿಯಲ್ಲಿ ನಿರ್ವಹಿಸಬೇಕಾದ ಬಲಿಕರ್ಮವಿಲ್ಲ. ಪ್ರತಿಯೊಬ್ಬರೂ ಸ್ವೀಕರಿಸಿದ ಕರ್ಮದ ರೀತಿಗೆ ಅನುಗುಣವಾಗಿ ಬಲಿಯಲ್ಲಿ ವ್ಯತ್ಯಾಸ ಉಂಟಾಗ ಬಹುದು. ಉದಾಹರಣೆಗೆ, ಹಜ್ಜ್ ಗೆ ಮಾತ್ರ ಇಹ್ರಾಮ್ ಮಾಡುವ `ಇಫ್‌ರಾದ್’ ರೂಪದಲ್ಲಿ ಹಜ್ಜ್ ನಿರ್ವಹಿಸುವವರಿಗೆ ಬಲಿ ಕಡ್ಡಾಯವಲ್ಲ, ಹಜ್ಜ್ ತಿಂಗಳಲ್ಲಿ ಉಮ್ರಾ ನಿರ್ವಹಿಸಿ ಅದೇ ವರ್ಷ ಹಜ್ಜ್ ನಿರ್ವಹಿಸುವ `ತಮತೂಅï’ ರೂಪದಲ್ಲಿ ಹಜ್ಜ್ ನಿರ್ವಹಿಸುವವರೂ ಹಜ್ಜ್ ಮತ್ತು ಉಮ್ರಾ ಒಟ್ಟಿಗೆ ನಿರ್ವಹಿಸುವ `ಖಿರಾನ್’ ರೂಪದಲ್ಲಿ ಹಜ್ಜ್ ನಿರ್ವಹಿಸುವವರೂ ಬಲಿಯ ರ್ಪಿಸುವುದು ಕಡ್ಡಾಯವಾಗಿದೆ. ಆ ಬಲಿ ಕರ್ಮಕ್ಕೆ `ಹದ್‌ಯ್’ ಎಂದು ಹೇಳಲಾಗುತ್ತದೆ. ಅದರ ಮಾಂಸ ಬಲಿಯರ್ಪಿಸುವವರು ಸೇವಿಸಬಹುದು. ಹಜ್ಜ್ ನಲ್ಲಿ ಕಡ್ಡಾಯವಾದ ಒಂದು ಕರ್ಮವನ್ನು ಉಪೇಕ್ಷಿಸುವುದೋ ಅಥವಾ ನಿಷಿದ್ಧವಾದ ಕಾರ್ಯ ಸಂಭವಿಸಿದರೆ ಪ್ರಾಯಶ್ಚಿತ ಬಲಿ (ಫಿದಿಯ ನೀಡುವುದು ಕಡ್ಡಾಯವಾಗಿದೆ. ಅದರ ಮಾಂಸವನ್ನು ಬಲಿಯರ್ಪಿಸಿದವರು ತಿನ್ನಬಾರದು. ಹರಮ್‌ನಲ್ಲಿರುವ ದರಿದ್ರರಿಗೆ ಮಾತ್ರದರಲ್ಲಿ ಹಕ್ಕಿದೆ. ಹಜ್ಜ್ ಗೆ ಸಂಬಂಧಿಸಿಲ್ಲದ ಬಲಿ ಪೆರ್ನಾಳ್‌ಗೆ ಸಂಬಂಧಿಸಿದ ಬಲಿ ಇನ್ನೊಂದು. ಇದು ಸುನ್ನತ್ ಆದ ಬಲಿ ಕರ್ಮವಾಗಿದೆ. ಅದರ ಮಾಂಸವನ್ನು ದಿಬ್ಹ ಮಾಡಿದವರೂ ಸೇವಿಸಬಹುದು.

? ಪ್ರಮಾದವಶಾತ್ ಸಂಭವಿಸಲು ಸಾಧ್ಯತೆಯಿರುವ ಪ್ರಮಾದಗಳಿಗೆ ಪ್ರಾಯಶ್ಚಿತವಾಗಿ ಬಲಿಯರ್ಪಿಸುವುದಕ್ಕೆ ಏನಾದರೂ ಆಧಾರವಿದೆಯೇ?
ಉತ್ತರ: ಇಲ್ಲ ಅರಿಯದೆ ಸಂಭವಿಸುವ ಸಾಧ್ಯತೆಯಿರುವ ಪ್ರಮಾದಗಳಿಗೆ ಬಲಿಯರ್ಪಿಸುವುದಕ್ಕೆ ಯಾವುದೇ ಆಧಾರವಿಲ್ಲ.

? ಹಜ್ಜ್ ನಲ್ಲಿ ಎಷ್ಟು ಬಾರಿ ಕೂದಲು ತೆಗೆಯಬೇಕು?
ಉತ್ತರ: ಹಜ್ಜ್ ನಲ್ಲಿ ಒಂದು ಬಾರಿ ಮಾತ್ರ ಕೂದಲು ಕತ್ತರಿಸಲಿಕ್ಕಿದೆ. ದುಲ್ಹಜ್ 10 ರಂದು ಜಮ್ರತುಲ್ ಅಕ್‌ಬಾದಲ್ಲಿ ಕಲ್ಲು ಎಸೆತ ಮುಗಿಸಿದ ಬಳಿಕ ಕೂದಲು ತೆಗೆಯಬೇಕು.

? ಜಮ್ರಾದ ಕಲ್ಲು ಎಸೆದ ಬಳಿಕ ಮಾಡಬೇಕಾದ ಪ್ರಾರ್ಥನೆಯೇನು?
ಉತ್ತರ: ಮೂರು ಜಮ್ರಗಳಲ್ಲಿ ಒಂದನೇಯ ಜಮ್ರವಾದ ಜಮ್ರತುಸ್ಸುಗ್‌ರಾದಲ್ಲೂ ಎರಡನೇ ಜಮ್ರಾವಾದ ಜಂರತುಲ್ ವೃಸ್ವಾದಲ್ಲೂ ಕಲ್ಲೆಸೆದ ಬಳಿಕ ಕಿಬ್ಲಾದ ಕಡೆ ಮುಖ ಮಾಡಿ ಕೈ ಎತ್ತಿ ಪ್ರಾರ್ಥಿಸುವುದು ಸುನ್ನತ್ ಆಗಿದೆ. ಐಹಿಕ ಮತ್ತು ಪರಲೋಕದ ಯಾವ ವಿಷಯಕ್ಕಾಗಿಯೂ ಪ್ರಾರ್ಥಿಸಬಹುದು. ಕೊನೆಯ ಜಮ್ರಾವಾದ `ಜಮ್ರತುಲ್ ಅಕಬಾ’ದಲ್ಲಿ ಪ್ರಾರ್ಥನೆಯಿಲ್ಲ.

? ಹಜ್ಜ್ ಕರ್ಮ ನಿರ್ವಹಿಸುವ ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ಸಾಗುವುದಕ್ಕೆ ಹೆಚ್ಚು ಪುಣ್ಯವಿದೆಯೇ?
ಉತ್ತರ: ಇದಕ್ಕೆ ವಿಶೇಷ ಪುಣ್ಯವಿಲ್ಲ. ಪ್ರತಿಯೊಬ್ಬರೂ ಆರೋಗ್ಯ ಮತ್ತು ಸೌಕರ್ಯದಂತೆ ನಡೆದೂ ವಾಹನದಲ್ಲೂ ಹೋಗಬಹುದು. ಹಜ್ಜ್ ಗಾಗಿ ಜನರನ್ನು ಆಹ್ವಾನಿಸಲು ಇಬ್ರಾಹೀಮ್(ಅ)ರೊಂದಿಗೆ ಅಲ್ಲಾಹನು ಆದೇಶಿಸಿದಾಗ, “ಜನರು ಕಾಲ್ನಡಿಗೆಯಿಂದಲೋ, ಒಂಟೆಗಳ ಮೇಲೆ ಸವಾರಿ ಮಾಡಿಯೋ ಅವರು ಬರುವರು” ಎಂದು ಹೇಳಲಾಗಿದೆ. ಪ್ರವಾದಿಯವರು(ಸ) ವಾಹನದ ಮೇಲೆ ಹತ್ತಿ ಹಜ್ಜ್ ಕರ್ಮಗಳನ್ನು ನಿರ್ವಹಿಸಿದ್ದಾರೆ.

? ಹಜ್ಜ್ ನ ಪ್ರಾರ್ಥನೆಗಳು ಅರಬಿಯಲ್ಲೇ ಆಗಬೇಕೆಂಬ ನಿಬಂಧನೆಯಿದೆಯೇ?
ಉತ್ತರ: ಹಜ್ಜ್ ವೇಳೆಯಲ್ಲಿ ಅರಬಿಯಲ್ಲೇ ಪ್ರಾರ್ಥಿಸಬೇಕೆಂಬ ನಿರ್ಬಂಧವಿರುವ ಪ್ರಾರ್ಥನೆಯಿಲ್ಲ. ಹಾಗಿದ್ದರೂ ಇಹ್ರಾಮ್‌ನ ಬಳಿಕ ತಲ್ಬಿಯತ್, ತ್ವವಾಫ್‌ನ ಆರಂಭದಲ್ಲೂ, ರುಕುನಲ್ ಯಮನಿಗೂ, ಹಜ್ರುಲ್ ಅಸ್ವದ್‌ನ ನಡುವಿನ ಪ್ರಾರ್ಥನೆ, ಸಫಾ ಮತ್ತು ಮರ್ವಾದ ಮೇಲೆ ಮಾಡುವ ಪ್ರಾರ್ಥನೆ ಅರಬಿಯಲ್ಲೇ ಹೇಳುವುದು ಉತ್ತಮ. ಕಂಠಪಾಠ ಮಾಡಲು ಸುಲಭವಿರುವ ಈ ಪ್ರಾರ್ಥನೆಗಳ ಅರ್ಥವನ್ನು ತಿಳಿದುಕೊಂಡು ಆತ್ಮಾರ್ಥವಾಗಿ ಹೇಳಬೇಕು. ವಿವಿಧ ಸ್ಥಳಗಳಲ್ಲಿ ಹೇಳಲಿಚ್ಚಿಸಿರುವ ಪ್ರಾರ್ಥನೆಗಳು ಅರಬಿಯಲ್ಲೂ ಮಾತೃ ಭಾಷೆಯಲ್ಲೂ ಮಾಡಬಹುದು.

? ಹಜ್ಜ್ ಮುಗಿಸಿ ಮರಳುವ ದಿನಗಳು ಬಾಕಿಯಿರುವಾಗ ಜಿದ್ದಾ ಸಂದರ್ಶಿಸಲು ಹೋಗುವುದಾದರೆ ಅದರ ಮೊದಲು ತವಾಫುಲ್ ವಿದಾ ಮಾಡುವುದು ಕಡ್ಡಾಯವೇ?
ಉತ್ತರ: ಕಡ್ಡಾಯವಾಗಿದೆ. ಕೊನೆಯ ಸಂಬಂಧ ಪವಿತ್ರ ಭವನವಾಗುವವರೆಗೆ ನಿಮ್ಮೆಲ್ಲರೂ ಅಲ್ಲಿಂದ ಮರಳಬಾರದೆಂದು ಪ್ರವಾದಿಯವರು(ಸ) ಪ್ರಸ್ತಾಪಿಸಿದ್ದಾರೆ.

? ಹಜ್ಜ್ ನ ಕರ್ಮಗಳಲ್ಲಿ ಯಾವುದಾದರೂ ಮರೆತು ಹೋದರೆ ಅದರ ವಿಧಿಯೇನು?
ಉತ್ತರ: ನೆನಪಾಗುವಾಗ ಮಾಡಿದರೆ ಸಾಕು. ಅದಕ್ಕೆ ಪ್ರತ್ಯೇಕ ಪ್ರಾಯಶ್ಚಿತ್ತದ ಅಗತ್ಯವಿಲ್ಲ.

? ಓರ್ವ ವ್ಯಕ್ತಿ ಇಹ್ರಾಮ್‌ನಲ್ಲಿರುವಾಗಲೇ ಮರಣ ಹೊಂದಿದರೆ ಅವರ ಅಂತ್ಯಸಂಸ್ಕಾರ ಸಾಮಾನ್ಯ ಮಯ್ಯತ್‌ನ ಸಂಸ್ಕಾರದ ರೀತಿಯಲ್ಲೇ ಮಾಡುವುದೇ?
ಉತ್ತರ: ಇಹ್ರಾಮ್‌ನಲ್ಲಿರುವಾಗ ಮರಣ ಹೊಂದಿದರೆ ಸ್ನಾನ ಮಾಡಿಸಿ ಇಹ್ರಾಮ್‌ನ ವಸ್ತ್ರದಲ್ಲೇ ಕಫನ್ ಮಾಡಬೇಕು. ತಲೆ ಮುಚ್ಚಬಾರದು ಮತ್ತು ಸುಗಂಧ ದ್ರವ್ಯ ಹಚ್ಚಬಾರದು. ಹಜ್ಜತುಲ್ ವಿದಾಯದ ಸಂದರ್ಭದಲ್ಲಿ ಓರ್ವ ಸಹಾಬಿ ಕುಸಿದು ಬಿದ್ದು ಮರಣ ಹೊಂದಿದಾಗ ಪ್ರವಾದಿ(ಸ)ರು ಹೀಗೆ ಮಾಡಲು ಹೇಳಿದ್ದರು. ಆತ ಅಂತ್ಯದಿನದಂದು ತಲ್‌ಬಿಯತ್ ಹೇಳಿಕೊಂಡೇ ಎದ್ದು ಬರುತ್ತಾನೆ ಎಂದು ಪ್ರವಾದಿಯವರು(ಸ) ಹೇಳಿರುವರು.

? ಹಜ್ಜ್ ನಲ್ಲಿ ಯಾವುದಾದರೂ ಸುನ್ನತ್ ಉಪವಾಸ ಇದೆಯಾ?
ಉತ್ತರ: ಇಲ್ಲ. ಅತ್ಯಂತ ಪುಣ್ಯದಾಯಕವಾದ ಅರಫಾ ಉಪವಾಸವನ್ನು ಕೂಡಾ ಅರಫಾದಲ್ಲಿ ಸೇರುವ ಹಾಜಿಗಳಿಗೆ ಸುನ್ನತ್ ಅಲ್ಲ ಎಂದು ಮಾತ್ರವಲ್ಲ ನಿಷಿದ್ಧವೂ ಹೌದು.

? ಝಮ್ ಝಮ್ ನೀರು ಕುಡಿಯಲಿಕ್ಕಲ್ಲದೆ ಬೇರೆ ಕೆಲಸಕ್ಕೆ ಉಪಯೋಗಿಸಬಹುದೇ?
ಉತ್ತರ: ಸಾಮಾನ್ಯ ನೀರು ಉಪಯೋಗಿಸುವಂತೆ ಎಲ್ಲಾ ಅಗತ್ಯಗಳಿಗೂ ಉಪಯೋಗಿಸಬಹುದು.

? ಹಾಜಿಗಳು ಹೆಚ್ಚಿನ ಸಮಯವನ್ನು ವೈಯಕ್ತಿಕ ಆರಾಧನೆಗೆ ವ್ಯಯಿಸಬೇಕೆ? ಅಥವಾ ಇತರರಿಗೆ ಸಹಾಯ ಮಾಡಲು ವಿನಿಯೋಗಿಸಬೇಕೇ?
ಉತ್ತರ: ಹಾಜಿಗಳು ವೈಯಕ್ತಿಕ ಆರಾಧನೆಯಂತೆಯೇ ಇತರರಿಗೆ ಸೇವೆ ಮಾಡಲು ಸಮಯವನ್ನು ಉಪಯೋಗಿಸಬೇಕು. ಜನ ಸೇವೆಯೂ ಕೂಡಾ ಆರಾಧನೆಯಲ್ಲವೇ? ಒಂದು ರಮಝಾನ್ ನಲ್ಲಿ ಪ್ರವಾದಿಯವರ(ಸ)ರೊಂದಿಗೆ ಪ್ರಯಾಣಿಸುತ್ತಿದ್ದಾಗ ಕೆಲವರು ಉಪವಾಸ ಆಚರಿಸಿದ್ದರು. ಕೆಲವರು ಉಪವಾಸ ಹಿಡಿದಿರಲಿಲ್ಲ. ಮಧ್ಯಾಹ್ನವಾಗುವಾಗ ಉಪವಾಸಿಗರು ಆಯಾಸದಿಂದ ಬಳಲಿ ಮಲಗಿದರು. ಉಪವಾಸ ಆಚರಿಸದವರು ಟೆಂಟ್ ಕಟ್ಟುವ, ಪ್ರಾಣಿಗಳಿಗೆ ಮೇವು ನೀರು ಒದಗಿಸುವ ಕೆಲಸ ಮಾಡಿದರು. ಅದನ್ನು ನೋಡಿ ಪ್ರವಾದಿಯವರು(ಸ) ಹೇಳಿದರು: “ಇಂದು ಉಪವಾಸ ಆಚರಿಸದವರು ಎಲ್ಲಾ ಪ್ರತಿಫಲವನ್ನು ತೆಗೆದುಕೊಂಡು ಹೋದರು.”

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …