ಬನೀ ಇಸ್ರಾಯೀಲರ ಮಧ್ಯೆ ಓರ್ವ ಒಳ್ಳೆಯ ವ್ಯಕ್ತಿ ಇದ್ದ. ಕೆಟ್ಟು ಹೋಗಿದ್ದ ಆ ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಬೆರಳಣಿಕೆಯಷ್ಟಿತ್ತು. ಆ ಊರಿನ ರಾಜ ಈ ವ್ಯಕ್ತಿಯನ್ನು ಕರೆಸಿ ಈ ವ್ಯಕ್ತಿಯಿಂದ ಕೆಡುಕು ಮಾಡಿಸುತ್ತೇನೆ ಎಂದು ಪಣತೊಟ್ಟ. ಅವನನ್ನು ಕರೆಸಿ ಮೂರು ಕೆಡುಕುಗಳ ಪೈಕಿ ಯಾವುದಾದರೂ ಒಂದನ್ನು ಮಾಡುವಂತೆ ಹೇಳಲಾಯಿತು. ಒಂದನೆಯದು ತಾಯಿಯನ್ನು ಕೊಲ್ಲಬೇಕು. ಎರಡನೆಯದು ತಂಗಿಯೊಂದಿಗೆ ವ್ಯಭಿಚಾರ ಮಾಡಬೇಕು. ಮೂರನೆಯದು ಮದ್ಯ ಕುಡಿಯಬೇಕು. ಆ ವ್ಯಕ್ತಿ ಅಸಹಾಯಕ ಅವಸ್ಥೆಯಲ್ಲಿ ಕೆಡುಕುಗಳಲ್ಲಿ ಯಾರಿಗೂ ಅಲ್ಪ ಕಡಿಮೆಯದ್ದೆಂದು ಗೋಚರವಾಗುವ ಮಧ್ಯ ಕುಡಿಯುವುದನ್ನು ಒಪ್ಪಿಕೊಂಡ. ಮದ್ಯವನ್ನು ಅವನಿಗೆ ಧಾರಾಳ ಕುಡಿಸಲಾಯಿತು. ಮನೆಗೆ ಹೋದ ಬಳಿಕ ಅವನಿಗೆ ತಂಗಿ ಸುರಸುಂದರಿಯಂತೆ ಗೋಚರಿಸಿದಳು. ಅವಳೊಂದಿಗಿರುವ ತನ್ನ ರಕ್ತ ಸಂಬಂಧವನ್ನು ಮರೆತು ಅವಳ ಮೇಲೆ ಎರಗಿ ವ್ಯಭಿಚಾರವೆಸಗಿದ. ಇದನ್ನು ತಡೆಯಲು ಬಂದ ತಾಯಿಯನ್ನು ಮದ್ಯ ಮತ್ತು ಹೆಣ್ಣಿನ ಅಮಲಿನಲ್ಲಿ ಕೊಂದುಬಿಟ್ಟ. ಹೀಗೆ ಯಾವ ಕೆಡುಕುಗಳನ್ನು ಮಾಡಲು ಅವನು ಆರಂಭದಲ್ಲಿ ಹಿಂಜರಿದಿದ್ದನೋ ಆ ಎಲ್ಲ ಕೆಡುಕುಗಳು ಬಹಳ ಸಹಜವೆಂಬಂತೆ ಅವನಿಂದ ನಡೆದುಹೋಯಿತು.”
ಈ ಘಟನೆಯನ್ನು ಪ್ರವಾದಿಯವರು ತಮ್ಮ ಅನುಯಾಯಿಗಳಿಗೆ ಹೇಳಿದರು. “ಮದ್ಯವು ಪಾಪದ ಜನನಿ” ಎಲ್ಲ ಕೆಡುಕುಗಳ ಕೀಲಿ ಕೈ ಎಂದು ಪ್ರವಾದಿಯವರು ಎಚ್ಚರಿಸಿರುವರು. ಮುಹಮ್ಮದರು(ಸ) 1450 ವರ್ಷಗಳ ಹಿಂದೆ ಮಕ್ಕಾದಲ್ಲಿ ಜನಿಸಿದಾಗ ಮದ್ಯಪಾನ ಅಲ್ಲಿ ಸಾಮಾನ್ಯ ವಿಷಯವಾಗಿತ್ತು. ಇಂದಿನಂತೆ ಬಹಳ ಸುಲಭದಲ್ಲಿ ಲಭ್ಯವಾಗುತ್ತಿದ್ದು ಸುರಪಾನ ಮಾಡಿ ನಶೆಯಲ್ಲಿರುವುದನ್ನು ಜನರು ಬಹಳ ಇಷ್ಟಪಡುತ್ತಿದ್ದ ಕಾಲವಾಗಿತ್ತು.
ಮುಹಮ್ಮದರು(ಸ) ಅಂತಹ ವಾತಾವರಣದಲ್ಲಿ ಜನಿಸಿದರು ಎಂದಿಗೂ ಮದ್ಯವನ್ನು ಮುಟ್ಟಿರಲಿಲ್ಲ. ಅವರು ಸಮಾಜವನ್ನು ಸುಧಾರಣೆ ಮಾಡಲು ಪ್ರಯತ್ನಿಸಿದಾಗ ಮೊದಲು ಎತ್ತಿಕೊಂಡ ವಿಷಯವು ಮಧ್ಯದ ನಿಷೇಧವಾಗಿತ್ತು. ದೇವನ ಆದೇಶದಂತೆ ಹಂತ ಹಂತವಾಗಿ ಅವರು ಮದ್ಯವನ್ನು ನಿಷೇಧಿಸುವುದನ್ನು ಚಾಲ್ತಿಗೆ ತಂದರು. ಆರಂಭದಲ್ಲಿ ಮದ್ಯ ಸೇವನೆಯಿಂದ ಕೆಲವು ಸಂತೋಷ ಲಭ್ಯವಾದರೂ ಅಪಾರವಾದ ಕೆಡುಕುಗಳಿವೆ ಎಂದು ಎಚ್ಚರಿಸಲಾಯಿತು. ಎರಡನೆಯದಾಗಿ ಮದ್ಯ ಸೇವಿಸಿ ನಮಾಝಿಗೆ ಬರಬಾರದೆಂಬ ಆದೇಶ ಬಂತು. ಮೂರನೆಯದಾಗಿ ಸಂಪೂರ್ಣ ಪಾನ ನಿಷೇಧವು ಜಾರಿಯಾಯಿತು. ಹೀಗೆ ಹಂತ ಹಂತವಾಗಿ ಜಾರಿಗೆ ಬಂದು ಮದ್ಯವು ಸಂಪೂರ್ಣ ನಿಷೇಧವಾದಾಗ ಮಕ್ಕಾದ ಕೇರಿಗಳಲ್ಲಿ ಮಧ್ಯವನ್ನು ಚೆಲ್ಲಿದ ಪರಿಣಾಮ ಚರಂಡಿಗಳಲ್ಲಿ ಮದ್ಯದ ಹೊಳೆ ಹರಿಯುತ್ತಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.
ತಾವು ಸಚ್ಚಾರಿತ್ರ್ಯವಂತರು, ಸಜ್ಜನರು ಎಂದು ಕರೆಸಿಕೊಳ್ಳುವ ವ್ಯಕ್ತಿಗಳು ಕೂಡ ಮದ್ಯಪಾನಿಗಳಾಗಿ ಮಾರ್ಪಟ್ಟಿರುವ ಸಮಾಜದಲ್ಲಿ ಬದುಕುತ್ತಿರುವ ನಮಗೆ ಮದ್ಯವು ಸಮಾಜದಲ್ಲಿ ಉಂಟುಮಾಡುವ ವಿನಾಶಗಳ ಬಗ್ಗೆ ಆಗಲೇ ಎಚ್ಚರಿಸಿದ್ದ ಪ್ರವಾದಿಯವರು ಆದರ್ಶರಾಗಿ ನಿಲ್ಲುತ್ತಾರೆ. ಮಧ್ಯವನ್ನು ಸಂಪೂರ್ಣವಾಗಿ ನಿಷೇಧಿಸದೆ ಯಾವುದೇ ಸಮಾಜವನ್ನು ಕೆಡುಕುನಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಅದರಿಂದಾಗಿಯೇ ಸಂಪೂರ್ಣ ಪಾನ ನಿಷೇಧ ಕಾಯ್ದೆಯನ್ನು ಪ್ರವಾದಿಯವರು ತಮ್ಮ ಆಡಳಿತ ಕಾಲದಲ್ಲಿ ಜಾರಿಗೆ ತಂದರು.
ಪ್ರವಾದಿಯಾಗಿ ಆಯ್ಕೆಯಾದ ಬಳಿಕ ತಮ್ಮ 40ನೆಯ ವರ್ಷದಿಂದ ಮುಹಮ್ಮದರು(ಸ) ತಮ್ಮ ಸಂಪೂರ್ಣ ಜೀವನವನ್ನು ದೇವನ ಸಂದೇಶವನ್ನು ಜನರಿಗೆ ತಲುಪಿಸುವುದಕ್ಕೆ ಮುಡಿಪಾಗಿಟ್ಟರು. ಧರ್ಮವು ಕೇವಲ ವೈಯಕ್ತಿಕ ವಿಷಯವಲ್ಲ. ಧರ್ಮವು ದೇವನೊಂದಿಗೆ ಮನುಷ್ಯನ ಸಂಬಂಧವನ್ನು ಜೋಡಿಸುವಂತೆ, ಮನುಷ್ಯರ ಮಧ್ಯೆಯು ಸಂಬಂಧವನ್ನು ಜೋಡಿಸುತ್ತದೆ. ಪರಸ್ಪರ ಮನುಷ್ಯರ ನಡುವಿನ ಸಂಬಂಧವನ್ನು ಜೋಡಿಸುತ್ತದೆ. ದೇವನೊಂದಿಗಿನ ಸರಿಯಾದ ಸಂಬಂಧವನ್ನು ಹೊಂದಿದ ವ್ಯಕ್ತಿಗೆ ಮಾತ್ರ ತನ್ನ ಜೀವನದ ಎಲ್ಲ ಸಂಬಂಧದಲ್ಲಿಯೂ ಪ್ರೀತಿ, ವಾತ್ಸಲ್ಯ, ನ್ಯಾಯ ಮತ್ತು ಬದ್ಧತೆಯೊಂದಿಗೆ ವ್ಯವಹರಿಸಲು ಸಾಧ್ಯ ಎಂಬುದನ್ನು ತಮ್ಮ ಜೀವನದಲ್ಲಿ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಮನುಷ್ಯನ ಪ್ರತಿ ನಡೆ ನುಡಿಯು, ಧರ್ಮ ಕಲಿಸಿಕೊಡುವ ಶಿಕ್ಷಣಕ್ಕೆ ಅನುಗುಣವಾಗಿ ಅನುರೂಪವಾಗಿ ಬದಲಾವಣೆಗೊಂಡಾಗ ಅಂತಹ ವ್ಯಕ್ತಿ ಸಚ್ಚಾರಿತ್ರ್ಯ ವ್ಯಕ್ತಿಯಾಗಿ ಮಾರ್ಪಡುತ್ತಾನೆ ಎಂಬುದಕ್ಕೆ ಪ್ರವಾದಿ ಮಹಮ್ಮದರಿಗಿಂತ ಮಿಗಿಲಾದ ಮಾದರಿಯನ್ನು ತೋರಿಸಿಕೊಡಲು ಇಂದಿನ ವರೆಗೆ ಜಗತ್ತಿಗೆ ಸಾಧ್ಯವಾಗಿಲ್ಲ. ಕೇವಲ ತಮ್ಮ 23 ವರ್ಷದ ಹೃಸ್ವವಾದ ಪ್ರವಾದಿತ್ವದ ಜೀವನದಲ್ಲಿ ಪ್ರವಾದಿಯವರು ಪ್ರಾಯೋಗಿಕವಾಗಿ ಈ ಮಾದರಿಯನ್ನು ಜಗತ್ತಿನ ಮುಂದಿಟ್ಟರು.
ಸಮಾನತೆ ಮೇಲು-ಕೀಳುಗಳು ಎಂಬ ಭಾವನೆಯು ತಾಂಡವವಾಡುತ್ತಿರುವ ಒಂದು ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ. ದಲಿತರು, ಹಿಂದುಳಿದ ವ್ಯಕ್ತಿಗಳು ವಿವಿಧ ಕಾರಣಕ್ಕಾಗಿ ತುಳಿತಕ್ಕೆ ಒಳಗಾಗುತ್ತಿರುವ ಇಂದಿನ ಸಮಾಜದಲ್ಲಿ ಪ್ರವಾದಿಯವರ ಸಮಾನತೆಯ ಸಂದೇಶವು ಬಹಳ ಪ್ರಾಮುಖ್ಯವೆನಿಸುತ್ತದೆ. ಎಲ್ಲ ಮನುಷ್ಯರು ಒಂದೇ ದೇವನ ಸೃಷ್ಟಿಗಳು. ಮನುಷ್ಯರೆಂಬ ನೆಲೆಯಲ್ಲಿ ನಮ್ಮ ಮಧ್ಯೆ ಯಾವುದೇ ವ್ಯತ್ಯಾಸವಿರಕೂಡದು. ವ್ಯಕ್ತಿ ಒಳ್ಳೆಯವನಾಗಬೇಕಾದರೆ ಅವನಲ್ಲಿ ಧರ್ಮ ನಿಷ್ಠೆ ಇರಬೇಕು. ಯಾರು ಹೆಚ್ಚು ದೇವನ ಆದೇಶಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ದೇವನ ಸಂಪ್ರೀತಿಗೆ ಪಾತ್ರರಾಗುತ್ತಾರೆ. ಹೊರತು ಮನುಷ್ಯ ಸೃಷ್ಟಿಸಿಕೊಂಡ ಈ ಉಚ್ಚ ನೀಚತೆಯ ವ್ಯವಸ್ಥೆಗೆ ಅವನ ಬಳಿ ಕವಡೆಕಾಸಿನ ಬೆಲೆಯೂ ಇಲ್ಲ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದರು. ಮಹಾನ್ ಸಮಾನತೆಯ ಬೋಧಕರಾದ ಪ್ರವಾದಿ ಮುಹಮ್ಮದ್ ಮನುಷ್ಯ ಸಮಾನತೆಯ ಅತ್ಯುಜ್ವಲ ಮಾದರಿಯಾಗಿದ್ದರು. ಕರಿಯರಾಗಿದ್ದ, ನೀಗ್ರೋ ಆಗಿದ್ದ, ಗುಲಾಮರಾಗಿದ್ದ ಬಿಲಾಲ್ರನ್ನು ಪ್ರವಾದಿಯವರು ತಮ್ಮ ಎದೆಗೆ ಸೇರಿಸಿಕೊಂಡು ಅಪ್ಪಿಕೊಂಡರು. ಮಕ್ಕಾ ವಿಜಯದ ಸಂದರ್ಭದಲ್ಲಿ ಆಝಾನ್ ಕರೆ ನೀಡಲು ತಮ್ಮ ಹೆಗಲ ಮೇಲೆ ಅವರ ಕಾಲನ್ನು ಇರಿಸಲು ಅವಕಾಶ ಮಾಡಿಕೊಟ್ಟು ಕಾಬಾದ ಗೋಡೆಯನ್ನು ಏರಲು ಸಹಾಯ ಮಾಡಿದರು. ಅಲ್ಲಿಂದ ಬಿಲಾಲ್ ವಿಶ್ವ ಸಮಾನತೆ ಮತ್ತು ಮಾನವ ಏಕತೆಯ ಪ್ರತಿರೂಪವಾಗಿ ‘ಆಝಾನ್’ ಕರೆಯನ್ನು ಮೊಳಗಿಸಿದರು.
ಸದಾ ಬಡವ-ಬಲ್ಲಿದರ, ಹಿಂದುಳಿದ ವ್ಯಕ್ತಿಗಳ ಜೊತೆ ನಿಂತಿದ್ದ ಪ್ರವಾದಿ ಮುಹಮ್ಮದರು(ಸ) ಆ ಕಾರಣಕ್ಕಾಗಿ ಕುರೈಶ್ ಗೋತ್ರದ ಶ್ರೀಮಂತ ವ್ಯಕ್ತಿಗಳ ಮಧ್ಯೆ ಅಪಹಾಸ್ಯಕೀಡಾಗಿದ್ದರು. ಆದರೆ ಅವರು ಅದನ್ನು ಪರಿಗಣಿಸಲಿಲ್ಲ. ಮನುಷ್ಯತ್ವಕ್ಕೆ ಮಾನವೀಯತೆಗೆ ಪ್ರವಾದಿಯವರು ನೀಡಿದ ಮಹತ್ವವೇನು ಎಂಬುದನ್ನು ಇದರಿಂದ ಮನದಟ್ಟು ಮಾಡಬಹುದಾಗಿದೆ.
ಎಲ್ಲ ಸಮಾಜಗಳಲ್ಲಿಯೂ ಅಸ್ತಿತ್ವದಲ್ಲಿದ್ದಂತೆ ಆ ಕಾಲದಲ್ಲಿಯೂ ಮಹಿಳೆಯರ ಪಾಡು ಶೋಚನೀಯವಾಗಿತ್ತು. ಹೆಣ್ಣು ಮಗುವನ್ನು ಯಾರೂ ಇಷ್ಟಪಡುತ್ತಿರಲಿಲ್ಲ. ದೊಡ್ಡವಳಾದರೆ ಕಾಮುಕರಿಂದ ಅವಳ ರಕ್ಷಣೆಯನ್ನು ಮಾಡುವವರು ಯಾರು? ಅಂದಿನ ಬೃಹತ್ ಸಮಸ್ಯೆಯಾಗಿತ್ತು ಅದು. ಇಂತಹ ಸಮಾಜದಲ್ಲಿ ಪ್ರವಾದಿ ಮುಹಮ್ಮದರು(ಸ) ಹೆಣ್ಣಿನ ಜೀವನವನ್ನು ಸುರಕ್ಷಿತಗೊಳಿಸಿದರು. ಹೆಣ್ಣು ದೇವನ ಅನುಗ್ರಹ. ಹೆಣ್ಣನ್ನು ತಾಯಿ, ಸಹೋದರಿ, ಪತ್ನಿ ಮತ್ತು ಮಗಳು ಎಂಬ ನೆಲೆಯಲ್ಲಿ ಗೌರವದೊಂದಿಗೆ ಸ್ವೀಕರಿಸಿ. ಮಹಿಳೆಯ ಹಕ್ಕು ಬಾಧ್ಯತೆಗಳನ್ನು ಪೂರ್ತಿಕರಿಸಿದರೆ ನಿಮಗೆ ಸ್ವರ್ಗ ಲಭಿಸುತ್ತದೆ ಎಂಬ ವಾಗ್ದಾನವನ್ನು ಜಗತ್ತಿನ ಮುಂದಿಟ್ಟರು. ಹೆಣ್ಣು ಕಾಮುಕರ ಬಲಿಗೆ ಬೀಳದಂತೆ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ವ್ಯಾಪಕಗೊಳಿಸಿದರು .ವ್ಯಭಿಚಾರದ ಕಡೆಗೆ ಮನುಷ್ಯನನ್ನು ಪ್ರೇರೇಪಿಸುವ ಎಲ್ಲ ವಿಚಾರಗಳಿಗೂ ಇತಿಶ್ರೀ ಹಾಡಿದರು.
ಸಲಿಂಗಕಾಮ, ಲಿವಿಂಗ್ ಟುಗೆದರ್, ಎಂಬಂತಹ ಅತ್ಯಾಚಾರಕ್ಕೆ ಅನೈಸರ್ಗಿಕ ಸಂಬಧಕ್ಕೆ ಹಸಿರು ನಿಶಾನೆ ತೋರಿಸಿರುವ ಸಮಾಜದಲ್ಲಿ ಬದುಕುತ್ತಿರುವ ನಾವು ಪ್ರವಾದಿ ಮುಹಮ್ಮದರು(ಸ) ಹೆಣ್ಣು ಗಂಡಿನ ಸಂಬಂಧಕ್ಕೆ ವೈವಾಹಿಕ ಜೀವನದ ಪಾವಿತ್ರ್ಯಕ್ಕೆ ಎಷ್ಟು ಮಹತ್ವವನ್ನು ನೀಡಿದ್ದರು ಎಂಬುದನ್ನು ಕಲಿಯಬೇಕಿದೆ. ಪ್ರಾಯ ಪೂರ್ತಿಯಾದ ಹೆಣ್ಣು ಮಗಳನ್ನು ದೇವ ಭಯವುಳ್ಳ ವ್ಯಕ್ತಿಗೆ ವಿವಾಹ ಮಾಡಿಕೊಡಬೇಕು. ಇದು ಅವಳ ಸಂರಕ್ಷಕರ ಬಹಳ ದೊಡ್ಡ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿ ಪ್ರಾಯಪ್ರಬುದ್ಧರು ಅವಿವಾಹಿತರಾಗಿ ಉಳಿಯಬಾರದು. ಯಾವುದಾದರೂ ಕಾರಣಕ್ಕೆ ಅವರು ಅವಿವಾಹಿತರಾಗಿ ಉಳಿದುಬಿಟ್ಟರೆ ಅವರಿಗೆ ವಿವಾಹಕ್ಕೆ ಅನುಕೂಲವನ್ನು ಮಾಡಿಕೊಡುವುದು ಒಟ್ಟು ಸಮಾಜದ ಜವಾಬ್ದಾರಿ ಎಂಬುದಾಗಿ ಕಲಿಸಿಕೊಟ್ಟರು. ಒಂದು ವೇಳೆ ವೈವಾಹಿಕ ಜೀವನವು ಸುಗಮವಾಗಿ ಮುಂದೆ ಸಾಗದೆ ಇದ್ದರೆ, ಅದರಿಂದ ಸುಲಭದಲ್ಲಿ ಮುಕ್ತಿಯನ್ನು ಹೊಂದುವಂತಹ ಸಹಜವಾದ ವಿಚ್ಛೇದನದ ವಿಧಾನವನ್ನು ಕಲಿಸಿಕೊಟ್ಟರು.
ಮನುಷ್ಯನ ಖಾಸಗಿ ಜೀವನವನ್ನು ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್ಗಳ ಮೂಲಕ ಹರಾಜು ಹಾಕುತ್ತಿರುವ ಇಂದಿನ ಸಮಾಜದಲ್ಲಿ ಮುಹಮ್ಮದರು(ಸ) ಮನುಷ್ಯನ ಖಾಸಗಿ ಬದುಕಿಗೆ ನೀಡಿದ ಗೌರವ ಮತ್ತು ಅದರ ಖಾಸಗೀತನವನ್ನು ಉಳಿಸಿಕೊಳ್ಳಲು ಅನುಸರಿಸಬೇಕಾದ ನಿಯಮಗಳನ್ನು ಅರಿತುಕೊಳ್ಳುವುದು ಬಹಳ ಅಗತ್ಯ. ನಿನ್ನ ದಾಂಪತ್ಯ ಜೀವನದ ರಹಸ್ಯ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದಾಗಿ ಕಟ್ಟುನಿಟ್ಟಿನ ಆದೇಶವನ್ನು ಮಹಮ್ಮದರು(ಸ) ಜನತೆಗೆ ನೀಡಿದ್ದಾರೆ. ಈ ಪಾವಿತ್ರ್ಯಪೂರ್ಣ ಜೀವನವು ಬಟಾ ಬಯಲಾದಾಗ ಸಮಾಜದಲ್ಲಿ ಏನು ಸಂಭವಿಸುತ್ತದೆ ಎಂಬುದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿ ನಿಂತಿದ್ದೇವೆ. ಎಲ್ಲ ರೀತಿಯ ಕೆಡುಕುಗಳು ಬಹಳ ಸುಲಭವೆಂಬಂತೆ ಸಹಜವೆಂಬಂತೆ ಘಟಿಸುತ್ತಿರುವ ಇಂದಿನ ದಿನ ಮಾನಸಗಳಲ್ಲಿ ಬದುಕಿನ ಪಾವಿತ್ರ್ಯವನ್ನು ಕಾಪಾಡಲಿಕ್ಕಾಗಿ ಪ್ರವಾದಿ ಮುಹಮ್ಮದರು(ಸ) ಕೌಟುಂಬಿಕ ಜೀವನದಲ್ಲಿ ಪಾಲಿಸಬೇಕಾದ ಯಾವ ನಿಯಮ ನಿರ್ದೇಶನಗಳನ್ನು ನೀಡಿರುವರೋ ಅದನ್ನು ಚಾಚೂ ತಪ್ಪದೇ ಪಾಲಿಸುವುದು ಅನಿವಾರ್ಯ.
ಮನುಷ್ಯನ ವೈಯಕ್ತಿಕ ಕೌಟುಂಬಿಕ ಜೀವನದಂತೆ ಮನುಷ್ಯನ ಆರ್ಥಿಕ ಜೀವನವು ಪಾವಿತ್ರ್ಯದಿಂದ ಕೂಡಿರಬೇಕು. ನೀವು ಮತ್ತು ನಿಮ್ಮ ಕುಟುಂಬ ಅನ್ಯಾಯವಾದ ಸಂಪಾದನೆಯ ಒಂದು ತುತ್ತು ಹೊಟ್ಟೆಗೆ ಸೇರದಂತೆ ಜಾಗರೂಕತೆಯನ್ನು ಪಾಲಿಸಬೇಕು ಎಂಬುದಾಗಿ ಆದೇಶಿಸಿದರು. ಬಡ್ಡಿ, ಮೋಸ ಕಾಳಸಂತೆ, ಜೂಜು, ಲಾಟರಿ, ಲಂಚ ಮುಂತಾದ ಎಲ್ಲ ಭ್ರಷ್ಟಾಚಾರದ ಬಾಗಿಲುಗಳನ್ನು ಪ್ರವಾದಿಯವರು(ಸ) ಮುಚ್ಚಿಬಿಟ್ಟರು. ಏಕೆಂದರೆ ಇವೆಲ್ಲವುಗಳು ನಿಷಿದ್ಧವಾಗಿದೆ. ಇವುಗಳನ್ನು ಮಾಡಬೇಡಿರಿ ಎಂಬುದಾಗಿ ಆದೇಶಿಸಿದರು. ಸ್ವಕರಗಳಿಂದ ಶ್ರಮಪಟ್ಟು ಸಂಪಾದಿಸುವ ಸಂಪತ್ತಿಗಿಂತ ಉತ್ತಮವಾದ ಸಂಪತ್ತು ಬೇರೆ ಇಲ್ಲ. ಆ ಸಂಪತ್ತಿನಿಂದಲೇ ಮನುಷ್ಯನಿಗೆ ಸಮೃದ್ಧಿ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ ಎಂಬುದು ಸಂಶಯತೀತ ಸತ್ಯವಾಗಿದೆ.
ಪ್ರವಾದಿಯವರು ಯಾವ ಆದರ್ಶವನ್ನು ಸಮಾಜದ ಮುಂದಿಟ್ಟರೋ ಅದು ಬಹಳ ಸರಳವಾದ ಜೀವನ ವಿಧಾನವಾಗಿದೆ. ಯಾವುದೇ ಅತಿರೇಕಗಳಿಲ್ಲದ ಸುಲಭದಲ್ಲಿ ಎಲ್ಲರಿಂದಲೂ ಅನುಸರಿಸಲು ಸಾಧ್ಯವಾಗುವ ಜೀವನ ವಿಧಾನ.ಪ್ರವಾದಿಯವರು ಓರ್ವ ಸಮರ್ಥ ಆಡಳಿತಗಾರರಾಗಿದ್ದರು. ಅದೇ ವೇಳೆ ಓರ್ವ ಸಮರ್ಥ ಕುಟುಂಬ ನಾಯಕರು ಆಗಿದ್ದರು. ಮಸೀದಿಯ ಮುಖ್ಯ ಇಮಾಮರಾದಂತೆಯೇ ಮೊಮ್ಮಕ್ಕಳನ್ನು ಹೆಗಲಿಗೇರಿಸಿ ಆಟವಾಡಿಸುವ ವಾತ್ಸಲ್ಯಮಯಿ ಅಜ್ಜ ಕೂಡ ಆಗಿದ್ದರು. ಏಕ ಕಾಲದಲ್ಲಿ ಹಲವು ರೀತಿಯ ಹೊಣೆಗಾರಿಕೆಗಳನ್ನು ನಿರ್ವಹಿಸಬೇಕಾಗಿ ಬಂದರು ಯಾವುದೇ ಹೊಣೆಗಾರಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಬಹಳ ಸಮತೋಲನದೊಂದಿಗೆ ಜೀವನವನ್ನು ಮುನ್ನಡೆಸುವ ಮಹಾ ಪಾಠವನ್ನು ಪ್ರವಾದಿಯವರ ಜೀವನದಿಂದ ಕಲಿಯಬೇಕಿದೆ.
ಪ್ರವಾದಿಯವರು ತಮ್ಮ ಅನುಯಾಯಿಗಳನ್ನು ‘ಸಹಾಬಿಗಳು’ ಅಂದರೆ ಸಂಗಾತಿಗಳು ಎಂದು ಕರೆದರು. ಅವರಿಗೆ ಪ್ರವಾದಿಯವರ ಮಾದರಿಯನ್ನು ಅನುಸರಿಸುವುದರಲ್ಲಿ ಬಹಳ ಆಸಕ್ತಿ ಇತ್ತು. ಒಂದು ಸಂದರ್ಭದಲ್ಲಿ ಅವರ ಜೀವನ ವಿಧಾನದ ಕುರಿತು ಅಧ್ಯಯನ ಮಾಡಲು ಪ್ರವಾದಿ ಪತ್ನಿ ಆಯಿಷರನ್ನು ಮೂವರು ಸಹಾಬಿಗಳು ಭೇಟಿ ಮಾಡುತ್ತಾರೆ. ಪ್ರವಾದಿಯವರು ರಾತ್ರಿ ವೇಳೆ ಎದ್ದು ನಮಾಝ್ ನಿರ್ವಹಿಸುತ್ತಿದ್ದಾರೆ, ಸಾಧ್ಯವಾದಾಗ ಉಪವಾಸ ಆಚರಿಸುತ್ತಾರೆ ಎಂಬುದನ್ನು ತಿಳಿದ ಅವರ ಪೈಕಿ ಓರ್ವ ವ್ಯಕ್ತಿ ನಾನಿನ್ನು ಜೀವನಪೂರ್ತಿ ರಾತ್ರಿ ಹಗಲು ನಮಾಝಿನಲ್ಲಿಯೇ ತಲ್ಲೀನನಾಗಿರುತ್ತೇನೆ ಎಂದು ತೀರ್ಮಾನಿಸಿದರು. ಎರಡನೆಯ ವ್ಯಕ್ತಿ ನಾನು ಇನ್ನು ಜೀವನಪೂರ್ತಿ ನಿರಂತರ ಉಪವಾಸ ವೃತವನ್ನು ಆಚರಿಸುತ್ತೇನೆ ಎಂದು ಹೇಳಿಕೊಂಡರು. ಮೂರನೆಯ ವ್ಯಕ್ತಿ ನಾನು ವಿವಾಹವಾಗದೆ ಉಳಿಯುತ್ತೇನೆ ಎಂಬುದಾಗಿ ನಿಶ್ಚಯಿಸಿಕೊಂಡರು. ಪ್ರವಾದಿಯವರ ಅನುಪಸ್ಥಿತಿಯಲ್ಲಿ ಅವರು ಈ ತೀರ್ಮಾನಗಳನ್ನು ಕೈಗೊಂಡಿದ್ದರು. ಪ್ರವಾದಿಯವರು ಈ ವಿಷಯವನ್ನು ಅರಿತಾಗ ಆ ಮೂವರನ್ನು ಕರೆಸಿಕೊಂಡು ಅವರೊಂದಿಗೆ ಈ ರೀತಿ ಉಪದೇಶಿಸಿದರು: ನಾನು ನಿಮಗೆ ಮಾರ್ಗದರ್ಶಕನಾಗಿ ದೇವನಿಂದ ಆಯ್ಕೆ ಆದಂತಹ ವ್ಯಕ್ತಿ. ನಾನು ನಮಾಝ್ ನಿರ್ವಹಿಸುತ್ತೇನೆ ಮತ್ತು ನಿದ್ರೆಯನ್ನು ಮಾಡುತ್ತೇನೆ. ಅದೇ ರೀತಿಯಲ್ಲಿ ನಾನು ಉಪವಾಸವಿರುತ್ತೇನೆ. ಕೆಲವು ದಿನ ಉಪವಾಸಗಳನ್ನು ತೊರೆಯುತ್ತೇನೆ. ನಾನು ವಿವಾಹವಾಗಿದ್ದೇನೆ. ನಮಗೆ ನಮ್ಮ ದೇಹದ ಮೇಲು ಹಕ್ಕಿದೆ. ವಿವಾಹವು ನನ್ನ ಚರ್ಯೆಯಾಗಿದೆ. ಯಾರು ಅದನ್ನು ಧಿಕ್ಕರಿಸುತ್ತಾನೋ ಅವನು ನನ್ನವನಲ್ಲ. ಎಂಬುದಾಗಿ ಅವರು ಘೋಷಿಸಿದರು. ಇದು ಪ್ರವಾದಿಯವರು ಬೋಧಿಸಿದ ಆದರ್ಶ. ಅತಿರೇಕವಿಲ್ಲದ ಜೀವನ ವಿಧಾನ. ಇದನ್ನು ಅನುಸರಿಸುವುದು ಎಲ್ಲ ಮನುಷ್ಯರಿಗೂ ಸುಲಭ ಸಾಧ್ಯ. ಒಂದು ವೇಳೆ ಪ್ರವಾದಿಯವರ ಆದರ್ಶವನ್ನು ಚಾಚೂ ತಪ್ಪದೇ ಪಾಲಿಸುವ ಸಮಾಜವು ಅಸ್ತಿತ್ವಕ್ಕೆ ಬಂದರೆ ಖಂಡಿತವಾಗಿಯೂ ಆ ಸಮಾಜವು ಅಸೂಯಾರ್ಹವಾದ ಸಮಾಜವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.
- ಸಬೀಹಾ ಫಾತಿಮಾ, ಮಂಗಳೂರು
IslamKannada News Portal
