- ಎಂ. ಅಶ್ರಫ್
ಪವಿತ್ರ ಕುರ್ಆನ್ ಎಂತಹ ಮುಸ್ಲಿಮರನ್ನು ಬಯಸುತ್ತದೆ? ಈ ಪ್ರಶ್ನೆಗೆ ಉತ್ತರವನ್ನು ಅದರ ವಾಹಕರಾದ ಪ್ರವಾದಿ ಮುಹಮ್ಮದ್(ಸ) ರವರು ಸ್ವತಃ ಪ್ರಾಯೋಗಿಕವಾಗಿ ನೀಡಿ ಹೋಗಿದ್ದಾರೆ. ಒಮ್ಮೆ ಓರ್ವರು ಸತ್ಯವಿಶ್ವಾಸಿಗಳ ಮಾತೆ ಆಯಿಶಾ(ರ)ರೊಡನೆ ಪ್ರವಾದಿವರ್ಯರ(ಸ) ಜೀವನ ಹೇಗಿತ್ತು ಎಂದು ಕೇಳಿದಾಗ, ಆಯಿಶಾ(ರ), “ನೀವು ಕುರ್ಆನ್ ಓದಿಲ್ಲವೇ?” ಎಂದು ಮರು ಪ್ರಶ್ನಿಸುತ್ತಾರೆ. ಆಗಂತುಕ ಓದಿದ್ದೇನೆಂದಾಗ, “ಅದುವೇ ಅಲ್ಲಾಹನ ಸಂದೇಶವಾಹಕರ(ಸ) ಜೀವನವಾಗಿತ್ತು” ಎಂದು ಉತ್ತರಿಸುತ್ತಾರೆ.
ಪವಿತ್ರ ಕುರ್ಆನ್ನ ಉದ್ದೇಶವು ಮಾನವನಿಗೆ ಮಾರ್ಗದರ್ಶನ ನೀಡುವುದಾಗಿದೆ. “ನಮಗೆ ಸನ್ಮಾರ್ಗವನ್ನು ತೋರಿಸು” (ಪವಿತ್ರ ಕುರ್ಆನ್: 1: 6) ಎಂದು ಪ್ರಾರ್ಥಿಸುವಂತೆ ಪವಿತ್ರ ಕುರ್ಆನ್ ನಮಗೆ ಕಲಿಸುತ್ತದೆ. ಅಂದರೆ ಪ್ರತಿಯೋರ್ವ ಮಾನವನನ್ನೂ ಅವನ ಸೃಷ್ಟಿಕರ್ತನ ಕಡೆಗೆ ಮಾರ್ಗದರ್ಶನ ನೀಡುವುದು, ಅವನನ್ನು ಸಂಪೂರ್ಣವಾಗಿ ದೇವ ನೊಂದಿಗೆ ಹೊಸದಾದ ಸಂಬಂಧದಲ್ಲಿ ಪೋಣಿಸುವುದು, ಆ ಮೂಲಕ ಅವನನ್ನು ಆಮೂಲಾಗ್ರವಾಗಿ ಬದಲಾಯಿಸುವುದು ಕುರ್ಆನ್ನ ಉದ್ದೇಶವಾಗಿದೆ.
ಈ ಉದ್ದೇಶ ಹೇಗೆ ಈಡೇರುತ್ತದೆ? ಅದರ ಮುಂದಿನ ಅಧ್ಯಾಯದ ಆರಂಭದಲ್ಲೇ ಅದನ್ನು ತಿಳಿಸಲಾಗಿದೆ, “ಇದು (ದೈವಿಕ) ಗ್ರಂಥ; ಸಂದೇಹಾತೀತವಿದು. ಭಯಭಕ್ತಿಯುಳ್ಳವರಿಗೆ ಪರೋಕ್ಷದ ಮೇಲೆ ವಿಶ್ವಾಸವಿರಿಸುವವರಿಗೆ, ನಮಾಝನ್ನು ಸಂಸ್ಥಾಪಿಸುವವರಿಗೆ, ನಾವು ನೀಡಿರುವ ಸಂಪತ್ಸೌಕರ್ಯಗಳಿಂದ ವ್ಯಯಿಸುವವರಿಗೆ, ನಿಮಗೆ ಅವತೀರ್ಣಗೊಳಿಸಿದ ಗ್ರಂಥದ (ಅರ್ಥಾತ್ ಕುರ್ಆನ್) ಮತ್ತು ನಿಮಗಿಂತ ಮೊದಲು ಅವತೀರ್ಣಗೊಳಿಸಿದ್ದ ಎಲ್ಲಾ ಗ್ರಂಥಗಳ ಮೇಲೆ ವಿಶ್ವಾಸವಿಡುವವರಿಗೆ ಮತ್ತು ಪರಲೋಕದ ಮೇಲೆ ದೃಢ ವಿಶ್ವಾಸವಿಡುವವರಿಗೆ ಇದು ಮಾರ್ಗದರ್ಶಿ. ಅಂತಹವರು ತಮ್ಮ ಪ್ರಭುವಿನ ಸನ್ಮಾರ್ಗದಲ್ಲಿದ್ದಾರೆ ಮತ್ತು ಅವರೇ ಯಶಸ್ವಿಯಾಗುವವರು.” (ಪವಿತ್ರ ಕುರ್ಆನ್: 2: 2-5)
ಅಂದರೆ ಪವಿತ್ರ ಕುರ್ಆನ್ ಎಂತಹ ಮುಸ್ಲಿಮನನ್ನು ಬಯಸುತ್ತದೆ ಎಂಬುದನ್ನು ಈ ಮೂಲಕ ಇನ್ನಷ್ಟು ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಹೆಚ್ಚಿನ ವಿಶದೀಕರಣಕ್ಕಾಗಿ ಪವಿತ್ರ ಕುರ್ಆನ್ನ 31ನೇ ಅಧ್ಯಾಯವನ್ನು ಅಭ್ಯಸಿಸಿದರೆ ಸಾಕು. ಅದರಲ್ಲಿ ಒಬ್ಬ ಯುಕ್ತಿವಂತ ವ್ಯಕ್ತಿಯ ವೃತ್ತಾಂತವನ್ನು ಸವಿವರವಾಗಿ ಉಲ್ಲೇಖಿಸಲಾಗಿದೆ.
ಲುಕ್ಮಾನುಲ್ ಹಕೀಮ್ ಎಂಬ ಮಹಾ ಜ್ಞಾನಿಯು ಈ ಲೋಕದಲ್ಲಿ ಬಾಳಿ ಹೋಗಿದ್ದಾರೆ. ಅವರಿಗೆ ಅಲ್ಲಾಹನು ಯುಕ್ತಿಯನ್ನು ದಯಪಾಲಿಸಿದ್ದನು. ಅವರು ತಮ್ಮ ಮಗನಿಗೆ ನೀಡಿದ ಉಪದೇಶವನ್ನು ಪವಿತ್ರ ಕುರ್ಆನ್ನಲ್ಲಿ ವಿವರಿಸಲಾಗಿದೆ. ಇದು ಲೋಕಾಂತ್ಯದವರೆಗೆ ಜನಿಸುವ ಪ್ರತಿಯೊಬ್ಬನಿಗೂ ಒಂದು ಮಾದರಿಯಾದ ಉಪದೇಶವಾಗಿದ್ದು, ಕುರ್ಆನ್ ಬಯಸುವ ಮುಸ್ಲಿಮನ ಸಂಪೂರ್ಣ ಚಿತ್ರಣ ಆ ಉಪದೇಶದಲ್ಲಿ ಕಾಣಸಿಗುತ್ತದೆ.
ಲುಕ್ಮಾನರು ತಮ್ಮ ಪುತ್ರನಿಗೆ ಈ ರೀತಿ ಉಪದೇಶ ನೀಡಿದರು, “ಮಗನೇ ಅಲ್ಲಾಹನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡಬೇಡ ನಿಜವಾಗಿಯೂ ‘ಬಹುದೇವವಿಶ್ವಾಸ’ ಮಹಾ ಅಕ್ರಮವಾಗಿದೆ.” (ವಚನ: 13)
ಮುಸ್ಲಿಮನ ಮೊತ್ತಮೊದಲ ಕರ್ತವ್ಯ ಅಲ್ಲಾಹನಿಗೆ ಸಹಭಾಗಿಗಳನ್ನಾಗಿ ಮಾಡದಿರುವುದು. ಅಂದರೆ ಶಿರ್ಕ್ ನಿಂದ ಮುಕ್ತವಾದ ಜೀವನ ಸಾಗಿಸುವುದು. ಅಷ್ಟು ಮಾತ್ರವಲ್ಲ, ಅಲ್ಲಾಹನ ಗುಣವಿಶೇಷಗಳನ್ನು, ಅವನ ಶಕ್ತಿ ಸಾಮರ್ಥ್ಯಗಳನ್ನು ಮತ್ತು ಅವನ ಹಕ್ಕುಗಳನ್ನು ಇತರರ ಮೇಲೆ ಹೊರಿಸುವುದು ಕೂಡ ಶಿರ್ಕ್ ಆಗಿದೆ ಎಂದು ಪ್ರವಾದಿ ವಚನಗಳಿಂದ ತಿಳಿದು ಬರುತ್ತದೆ. ಮಾನವನು ತನ್ನ ಪ್ರಭುವಿನ ಇಚ್ಛೆಗೆ ವಿರುದ್ಧವಾಗಿ ತನ್ನಿಚ್ಛೆಯಂತೆ ವರ್ತಿಸಿದರೆ ಅವನು ತನ್ನ ಚಿತ್ತದ ದಾಸನಾಗಿದ್ದಾನೆ ಮತ್ತು ತನ್ನನ್ನು ತಾನೇ ದೇವನಾಗಿ ಮಾಡಿಕೊಂಡಿದ್ದಾನೆಂದು ಕುರ್ಆನ್ ಹೇಳುತ್ತದೆ.
ಲುಕ್ಮಾನರು ಹೇಳಿದರು, “ಮಗನೇ! ಸಾಸಿವೆ ಕಾಳಿನಷ್ಟಿರುವ ಒಂದು ವಸ್ತುವೇ ಇರಲಿ ಅದು ಒಂದು ಬಂಡೆಯಲ್ಲಿ ಅಥವಾ ಆಕಾಶಗಳಲ್ಲಿ ಅಥವಾ ಭೂಮಿಯೊಳಗೆ ಎಲ್ಲಾದರೂ ಅಡಗಿರಲಿ ಅಲ್ಲಾಹನು ಅದನ್ನು ಹೊರ ತರುವನು. ಅವನು ಸೂಕ್ಷ್ಮದರ್ಶಿ ಮತ್ತು ವಿವರಪೂರ್ಣನಾಗಿರುತ್ತಾನೆ.” (ವಚನ: 16)
ಅಂದರೆ ಮುಸ್ಲಿಮನಾದವನ ವಿಶ್ವಾಸವು ಜಗದ್ಪಾಲಕ ಪ್ರಭುವಿನ ಮೇಲೆ ಅಷ್ಟು ಪ್ರಬಲವಾಗಿರಬೇಕು. ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು ಮತ್ತು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು ಎಂದು ಸರ್ವಲೋಕಗಳ ಒಡೆಯನಾದ ಪಾಲಕ ಪ್ರಭು ಅಝ್ಝಿಲ್ಝಾಲ್ ಅಧ್ಯಾಯದಲ್ಲಿ ಹೇಳಿ ದ್ದಾನೆ. ಇಂತಹ ವಿಶ್ವಾಸ ಮಾನವನಲ್ಲಿ ಬೆಳೆದರೆ ಅವನು ಖಂಡಿತ ಸತ್ಕರ್ಮದಲ್ಲಿ ತೊಡಗಿಕೊಳ್ಳುತ್ತಾನೆ ಮತ್ತು ದುಷ್ಕರ್ಮಗಳಿಂದ ದೂರವುಳಿಯುತ್ತಾನೆ. ಇಂತಹ ಮುಸ್ಲಿಮನನ್ನೇ ಕುರ್ಆನ್ ಬಯಸುತ್ತದೆ.
ಲುಕ್ಮಾನ್ ಹೇಳಿದರು, “ಮಗನೇ ನಮಾಝನ್ನು ಸಂಸ್ಥಾಪಿಸು. ಒಳಿತಿನ ಆದೇಶ ಕೊಡು, ಕೆಡುಕಿನಿಂದ ತಡೆ ಮತ್ತು ಯಾವ ಕಷ್ಟವೇ ಬರಲಿ ಸಹನೆ ವಹಿಸು. ಇವು ಅತಿ ಹೆಚ್ಚು ತಾಕೀತು ಮಾಡಲ್ಪಟ್ಟ ವಿಷಯಗಳು.” (ವಚನ: 17)
ಸತ್ಯವಿಶ್ವಾಸದ ಬಳಿಕ ಮುಸ್ಲಿಮರ ಮೇಲೆ ಕಡ್ಡಾಯವಾಗುವ ಕರ್ಮ ನಮಾಝ್ ಆಗಿದೆ. ನಮಾಝ್ ಎಂಬುದು ಸತ್ಯವಿಶ್ವಾಸ ಮತ್ತು ಸತ್ಯನಿಷೇಧದ ನಡುವಿನ ಗೋಡೆಯಾಗಿದೆ ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ.
ಅಲ್ಲಾಹನು ನಮಾಝಿಗಳ ಬಗ್ಗೆ ಪವಿತ್ರ ಕುರ್ಆನಿನಲ್ಲಿ ಇನ್ನೊಂದೆಡೆ ಹೀಗೆ ಹೇಳಿದ್ದಾನೆ, “ಖಂಡಿತವಾಗಿಯೂ ಸತ್ಯವಿಶ್ವಾಸಿಗಳು ವಿಜಯಿಗಳಾದರು. ಅವರು ತಮ್ಮ ನಮಾಝಿನಲ್ಲಿ ಭಯಭಕ್ತಿ ತೋರುತ್ತಾರೆ.” (ಅಲ್ ಮೂಮಿನೂನ್: 1-4)
“ಅವರು ತಮ್ಮ ಪ್ರಭುವಿನ ಮುಂದೆ ಸಾಷ್ಟಾಂಗವೆರಗುತ್ತಲೂ ನಿಲ್ಲುತ್ತಲೂ ರಾತ್ರಿಗಳನ್ನು ಕಳೆಯುತ್ತಾರೆ.” (ಅಲ್ ಫುರ್ಕಾನ್: 64)
ನಿಶ್ಚಯವಾಗಿಯೂ ನಮಾಝ್ ಅಶ್ಲೀಲ ಕೃತ್ಯಗಳಿಂದ ಮಾನವನನ್ನು ರಕ್ಷಿಸುತ್ತದೆ ಎಂದು ಕುರ್ಆನಿನಲ್ಲಿ ಇನ್ನೊಂದೆಡೆ ಹೇಳಲಾಗಿದೆ. ಅಂದರೆ ನಮಾಝ್ ಸಂಸ್ಥಾಪಿಸುವ ವ್ಯಕ್ತಿಯು ಕೆಡುಕುಗಳಿಂದ ತಾನಾಗಿಯೇ ದೂರವುಳಿಯುತ್ತಾನೆ. ಐದು ಹೊತ್ತಿನ ದೈನಂದಿನ ನಮಾಝ್ ಮತ್ತು ರಾತ್ರಿಯ (ತಹಜ್ಜುದ್) ನಮಾಝ್ ಅವನಿಗೆ ಕೆಡುಕುಗಳನ್ನೆಸಗಲು ಅವಕಾಶವನ್ನೇ ನೀಡುವುದಿಲ್ಲ. ಹೀಗೆ ಅವನು ನಮಾಝ್ ಸಂಸ್ಥಾಪಿಸುವುದರ ಜೊತೆಗೆ ಸ್ವತಃ ಕೆಡುಕುಗಳಿಂದ ದೂರವುಳಿದಿರುತ್ತಾ ಇತರರಿಗೆ ಒಳಿತನ್ನು ಆದೇಶಿಸಲು ಮತ್ತು ಕೆಡುಕಿ ನಿಂದ ದೂರ ಮಾಡಲು ಅರ್ಹನಾಗುತ್ತಾನೆ.
ಒಬ್ಬ ವ್ಯಕ್ತಿ ಯಾರ ಮುಂದೆ ಅಹಂಕಾರ ತೋರುತ್ತಾನೆ? ತನಗೆ ಸಂಪತ್ತು, ಅಧಿಕಾರ ದೊರೆತಿದ್ದು, ಅದು ಲಭಿಸಿರದ ಬಡವರ ಮುಂದೆ ತೋರುತ್ತಾನಷ್ಟೆ. ತನಗಿಂತ ಹೆಚ್ಚು ಶ್ರೀಮಂತ ನೊಂದಿಗೋ ಅಥವಾ ತನಗಿಂತ ಉನ್ನತ ಸ್ಥಾನದಲ್ಲಿರುವವನ ಮುಂದೆಯೋ ತೋರಿಸುವುದಿಲ್ಲ ಎಂಬುದು ವ್ಯಕ್ತ.
ಅಲ್ಲಾಹನ ಸಂದೇಶವಾಹಕರು(ಸ) ಹೀಗೆ ಹೇಳಿರುವರು, “ನಾನು ನಿಮಗೆ ಸ್ವರ್ಗವಾಸಿಗಳ ಕುರಿತು ಹೇಳಲೇ? ಅವರು ದುರ್ಬಲರು ಮತ್ತು ನಿಕೃಷ್ಟರು ಆಗಿರುವ ಜನರಾಗಿರುವರು. ಒಂದು ವೇಳೆ ಅವರು ಅಲ್ಲಾಹನ ಆಣೆ ಹಾಕಿದರೆ ಅಲ್ಲಾಹ್ ಅದನ್ನು ಪೂರ್ತಿಗೊಳಿಸಿಯೇ ತೀರುವನು. ನಾನು ನಿಮಗೆ ನರಕವಾಸಿಗಳ ಕುರಿತು ಹೇಳಲೇನು? ಅವರು ಕಿಡಿಗೇಡಿಗಳು, ಅಹಂಕಾರಿಗಳು ಮತ್ತು ದರ್ಪವನ್ನು ತೋರುವ ಜನರಾಗಿರುವರು.”
ಅಹಂಕಾರ ತೋರದಿರು ಎಂದ ಮೇಲೆ ಅದಕ್ಕೆ ವ್ಯತಿರಿಕ್ತವಾಗಿ ಹೇಗೆ ವ್ಯವಹರಿಸಬೇಕು ಎಂಬುದನ್ನು ತಿಳಿಸದೆ ಇದ್ದರೆ ಉಪದೇಶ ಅಪೂರ್ಣವಾಗುತ್ತದೆ. ಲುಕ್ಮಾನುಲ್ ಹಕೀಮ್ ತನ್ನ ಮಗನಿಗೆ ಅದನ್ನೂ ಉಪದೇಶಿಸಿರುವುದನ್ನು ಪವಿತ್ರ ಕುರ್ಆನ್ ಉಲ್ಲೇಖಿಸಿದೆ.
ಲುಕ್ಮಾನ್ ಹೇಳಿದರು, “ನಿನ್ನ ನಡೆಯಲ್ಲಿ ಇತಿಮಿತಿಯನ್ನಿರಿಸು. ನಿನ್ನ ಸ್ವರವನ್ನು ಸ್ವಲ್ಪ ತಗ್ಗಿಸು. ಎಲ್ಲ ಸ್ವರಗಳಿಗಿಂತ ಕೆಟ್ಟ ಸ್ವರವು ಕತ್ತೆಯ ಸ್ವರವಾಗಿರುತ್ತದೆ.” (ವಚನ: 19)
ಇನ್ನೊಂದರ್ಥದಲ್ಲಿ ಜನರೊಂದಿಗೆ ನಯವಾಗಿ ವರ್ತಿಸಲು ಉಪದೇಶಿಸಲಾಗಿದೆ. ಅದೇ ವೇಳೆ ಉಚ್ಚ ಸ್ವರದಲ್ಲಿ ಮಾತನಾಡುತ್ತಾ ಜನರನ್ನು ಕೀಳಾಗಿಸುವುದನ್ನು ಖಂಡಿಸುತ್ತಾ ಅಂತಹ ಸ್ವರವನ್ನು ಕತ್ತೆಯ ಸ್ವರಕ್ಕೆ ಹೋಲಿಸಿದ್ದಾರೆ. ಆ ರೀತಿ ಜೋರುದನಿಯಲ್ಲಿ ಮಾತನಾಡುವವನ ಬಗ್ಗೆ ಸಾಮಾನ್ಯವಾಗಿ ಜನರು ‘ಅವನು ತುಂಬಾ ಅರಚುತ್ತಿದ್ದಾನೆ’ ಎನ್ನುತ್ತಾರೆ. ಕತ್ತೆಯ ಸ್ವರವನ್ನು ಕೂಡ ಸಾಮಾನ್ಯವಾಗಿ ಅರಚಾಟ ಎಂದೇ ಹೇಳಲಾಗುವುದು ವಿಶೇಷ.
ಒಟ್ಟಿನಲ್ಲಿ ಪರಮ ದಯಾಮಯನಾದ ಜಗದ್ಪಾಲಕ ಪ್ರಭುವಿನ ನಿಜವಾದ ದಾಸರು ಭೂಮಿಯ ಮೇಲೆ ಸೌಮ್ಯ ನಡಿಗೆ ನಡೆಯುತ್ತಾರೆ. ತಿಳಿಗೇಡಿಗಳು ವ್ಯರ್ಥ ತಕರಾರಿಗೆ ಬಂದಾಗ, ‘ನಿಮಗೆ ಸಲಾಮ್’ ಎಂದು ಬಿಡುತ್ತಾರೆ. ಮತ್ತು ಅವರಿಗೆ ವ್ಯರ್ಥ ವಿಷಯಗಳ ಸಮೀಪದಿಂದ ಹಾದು ಹೋಗಬೇಕಾಗಿ ಬಂದಾಗ ಸಂಭಾವಿತರಂತೆ ಹಾದು ಹೋಗುತ್ತಾರೆ.. ಇವರೇ ತಮ್ಮ ಸಹನೆಯ ಫಲವನ್ನು ಉನ್ನತ ಸ್ವರ್ಗದ ರೂಪದಲ್ಲಿ ಪಡೆಯಲಿರುವವರು. ಅಲ್ಲಿ ಅವರು ಅನಂತಾನಂತ ಕಾಲ ವಾಸಿಸುವರು. ಆ ಸ್ವರ್ಗದ ನೆಲೆ ಮತ್ತು ಆ ಸ್ಥಾನ ಅದೆಷ್ಟು ಉತ್ತಮವಾದುದು! (ಅಲ್ ಫುರ್ಕಾನ್)
IslamKannada News Portal
