Home / ಲೇಖನಗಳು / ವಿವಾಹ : ಅದೊಂದು ಪ್ರಬಲ ಕರಾರು

ವಿವಾಹ : ಅದೊಂದು ಪ್ರಬಲ ಕರಾರು

ಇಸ್ಲಾಮಿನಲ್ಲಿ ಮದುವೆಗೆ ಮಹತ್ತರವಾದ ಸ್ಥಾನವಿದೆ ಮತ್ತು ಪವಿತ್ರ ಕುರ್ ಆನ್ ನಲ್ಲಿ ವಿವಾಹವನ್ನು ಪ್ರಬಲ ಕರಾರು ಎಂದು ಹೇಳಲಾಗಿದೆ. ಪವಿತ್ರ ಕುರ್ ಆನ್ ನ ಸೂಕ್ತಗಳು ಮತ್ತು ಪ್ರವಾದಿ ವಚನಗಳು ವಿವಾಹವನ್ನು ಸಮೃದ್ಧಿಗೊಳಿಸುವ ಹಾಗೂ ಕುಟುಂಬ ಜೀವನವನ್ನು ವಿಜಯಗೊಳಿಸುವ ಉಪದೇಶವನ್ನು ನೀಡುತ್ತದೆ. ಅವುಗಳ ಉದ್ದೇಶ ಪತಿ ಪತ್ನಿಯರ ಮಧ್ಯೆ ಪ್ರೀತಿ , ವಿಶ್ವಾಸ, ಗೌರವ ಮತ್ತು ಉತ್ತಮ ಬಂಧವನ್ನುಂಟು ಮಾಡುವುದಾಗಿದೆ. ಪತಿ ಪತ್ನಿಯರ ನಡುವಿನ ಉತ್ತಮ ಸಂಬಂಧವು ಮಕ್ಕಳು, ಕುಟುಂಬ ಹಾಗೂ ಸಮಾಜದ ಮೇಲೆ ಪ್ರಭಾವ ಬೀರುತ್ತದೆ. ಶೈತಾನನು ಮಾಡುವ ಅತ್ಯಂತ ಕೆಟ್ಟ ಕೆಲಸ ಪತಿ ಪತ್ನಿಯರ ನಡುವೆ ಬಿರುಕನ್ನುಂಟು ಮಾಡಿ ಅವರನ್ನು ಬೇರ್ಪಡಿಸುವುದಾಗಿದೆ.

” ಪುರುಷರು ಸ್ತ್ರೀಯರ ಮೇಲೆ ಮೇಲ್ವಿಚಾರಕ ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದುದರಿಂದ ಮತ್ತು ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದ.” (ಪವಿತ್ರ ಕುರ್ ಆನ್ 4: 34)

ಸ್ತ್ರೀ ಹಾಗೂ ಪುರುಷನನ್ನು ಅಲ್ಲಾಹನು ವ್ಯತ್ಯಸ್ಥ ರೂಪದಲ್ಲಿ ಮತ್ತು ಪ್ರಕೃತಿಯಲ್ಲಿ ಸೃಷ್ಟಿಸಿರುವನು. ಮನೆಯ ನಾಯಕತ್ವ ಹಾಗೂ ಯಜಮಾನನ ಸ್ಥಾನಮಾವನ್ನು ಪುರುಷನಿಗೆ ನೀಡಲಾಗಿದೆ. ಪುರುಷನು ಯಾವಾಗಲೂ ಅಭಿಮಾನ, ಘನತೆ, ಗೌರವವನ್ನು ನಿರೀಕ್ಷಿಸುತ್ತಾನೆ, ಸ್ತ್ರೀಯು ಪ್ರೀತಿಯನ್ನು ನಿರೀಕ್ಷಿಸುತ್ತಾಳೆ. ಪರಸ್ಪರ ಗೌರವ ಕೊಟ್ಟಾಗ ಪ್ರೀತಿ ಸಿಗುತ್ತದೆ. ಪ್ರೀತಿ ಕೊಟ್ಟಾಗ ಗೌರವ ಸಿಗುತ್ತದೆ. ಕುಟುಂಬದಲ್ಲಿ ಪುರುಷನ ಹಾಗೂ ಸ್ತ್ರೀಯ ಜವಾಬ್ದಾರಿ, ಕರ್ತವ್ಯಗಳು ಬೇರೆ ಬೇರೆಯಾಗಿರುತ್ತದೆ. ಸ್ತ್ರೀ ಹಾಗೂ ಪುರುಷರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಾಗ ಹಲವು ಸಮಸ್ಯೆಗಳು ಉಂಟಾಗುತ್ತದೆ. ಮಾನಸಿಕವಾಗಿ, ಭಾವನಾತ್ಮಕವಾಗಿ, ಶಾರೀರಿಕವಾಗಿ ಪುರುಷನು ಮನೆಯ ಹೊರಗೆ ಕೆಲಸ ಮಾಡಲು ಮತ್ತು ಆರ್ಥಿಕ ಜವಾಬ್ದಾರಿ ಹೇರಲು ಅತಿ ಹೆಚ್ಚು ಅರ್ಹನಾಗಿರುತ್ತಾನೆ. ಸ್ತ್ರೀಯು ಅಲ್ಲಾಹನು ನೀಡಿದ ನೈಸರ್ಗಿಕ ಜವಾಬ್ದಾರಿಕೆಗಳನ್ನು ನಿರ್ವಹಿಸುತ್ತಾ ಮನೆಯ ಕೆಲಸ ಕಾರ್ಯಗಳನ್ನು ನಿರ್ವಹಿಸಲು, ಮಕ್ಕಳ ವಿದ್ಯಾಭ್ಯಾಸ ಮತ್ತು ಪಾಲನೆ ಪೋಷಣೆ ಮಾಡಲು ಅರ್ಹಳಾಗಿರುತ್ತಾಳೆ. ಆದರೆ ಆಧುನಿಕ ಕಾಲದಲ್ಲಿ ಸ್ತ್ರೀಯರಿಗೆ ವಿದ್ಯಾಭ್ಯಾಸ ಪಡೆಯಲು ಹಲವು ಅವಕಾಶಗಳಿರುವುದರಿಂದ ತಮ್ಮ ವೃತ್ತಿ ಜೀವನದ ಬಗ್ಗೆ ಹಲವಾರು ಕನಸು ಮತ್ತು ಉತ್ತಮ ಸಾಧನೆಗಳನ್ನು ಮಾಡಬೇಕೆಂಬ ಗುರಿಯು ಇರುತ್ತದೆ. ಆದ್ದರಿಂದ ಪತಿಯು ತನ್ನ ಬಾಳ ಸಂಗಾತಿಯ ಕನಸು, ಪ್ರತಿಭೆ, ಅಭಿರುಚಿಯನ್ನು ಗುರುತಿಸಿ ಅವರನ್ನು ಉನ್ನತವಾದ ಗುರಿ ತಲುಪಲು ಪ್ರೋತ್ಸಾಹಿಸಬೇಕು. ಅಂತಹ ಸಂದರ್ಭಗಳಲ್ಲಿ ಮನೆಯ ಆಂತರಿಕ ಕೆಲಸಕ್ಕೆ ಸಹಾಯಕರನ್ನು ನೇಮಿಸಬೇಕಾಗುತ್ತದೆ. ಆರ್ಥಿಕ ಸಹಾಯ ಮಾಡಲು ಸ್ತ್ರೀ ಉದ್ಯೋಗ ಮಾಡುವುದಾದರೆ ಪತಿಯು ಮನೆ ಕೆಲಸದಲ್ಲಿಯೂ ಪತ್ನಿಗೆ ಸಹಕಾರ ನೀಡಲು ತಯಾರಿರಬೇಕು. ಯಂತ್ರದಂತೆ ಮನೆಯ ಒಳಗೂ ಹೊರಗೂ ಎಲ್ಲಾ ಕೆಲಸ ಕಾರ್ಯಗಳನ್ನು ನಿಭಾಯಿಸಲು ಸ್ತ್ರೀಗೆ ಅಸಾಧ್ಯ. ಪರಸ್ಪರ ಸಹಕರಿಸದೆ ಪತಿ ಪತ್ನಿಯರ ಮಧ್ಯೆ ಉತ್ತಮ ಸಂಬಂಧವಿರಲಾರದು. ಮನೆಯ ಹೊರಗೆ ವೈದ್ಯರು, ಶಿಕ್ಷಕರು, ಅಧಿಕಾರಿ, ವ್ಯಾಪಾರಸ್ಥರಾಗಿದ್ದರೂ ಕೂಡಾ ಮನೆಯಲ್ಲಿ ತಂದೆ ತಾಯಿ ಪತಿ ಪತ್ನಿಯಾಗಬೇಕು. ತಮ್ಮ ವ್ಯಾಪಾರದ ಮತ್ತು ಕೆಲಸ ಕಾರ್ಯಗಳ ಒತ್ತಡವನ್ನು ಕುಟುಂಬಕ್ಕೆ ತರಬಾರದು.

ಆಧುನಿಕ ಕಾಲದಲ್ಲಿ ಹೆಚ್ಚುತ್ತಿರುವ ಹೋಲಿಕೆ ಮಾಡುವಂತಹ ಮನೋಭಾವ, ಸಾಮಾಜಿಕ ಜಾಲತಾಣ , ಸಿನಿಮಾ. ಸೀರಿಯಲ್ ಮತ್ತು ಜಾಹೀರಾತುಗಳಲ್ಲಿ ಕಾಣುವ ಮಿನುಗುವ ಅತ್ಯಾಕರ್ಷಕ ಫೋಟೋಗಳನ್ನೂ ನೋಡಿ ಜನರು ಇತರೆಲ್ಲರೂ ಸುಖವಾಗಿದ್ದಾರೆ ಎಂದು ಭಾವಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಹೊರ ಚಿಪ್ಪಿನಲ್ಲಿ ರೋಮಾಂಚಕವಾಗಿ ಕಾಣುವ ದಂಪತಿಗಳೂ ವಿಚ್ಛೇದನದ ಅಂಚಿನಲ್ಲಿರುತ್ತಾರೆ ಎಂಬುದು ವಾಸ್ತವವಾಗಿದೆ. ದಾಂಪತ್ಯ ಜೀವನದ ಹಕ್ಕುಬಾಧ್ಯತೆಗಳ ಬಗ್ಗೆ ಸರಿಯಾದ ಜ್ಞಾನ, ಮಾರ್ಗದರ್ಶನ ಸಿಗದಿರುವುದು ಮತ್ತು ಪರಸ್ಪರ ಪ್ರೀತಿ ವಿಶ್ವಾಸದ ಕೊರತೆಯೇ ಇದಕ್ಕೆ ಮೂಲ ಕಾರಣ. ಇನ್ನು ಕೆಲವರು ವೈವಾಹಿಕ ಜೀವನದಲ್ಲಿ ಸಂತೃಪ್ತರಾಗಿರುವುದಿಲ್ಲ. ವಿಚ್ಛೇದನೆಯು ಸಾಮಾಜಿಕ ಪ್ರತಿಷ್ಠೆ, ಮಕ್ಕಳ ಸಮಸ್ಯೆಗೆ ಕಾರಣಾವಾಗುತ್ತದೆಂದು ಒಲ್ಲದ ಮನಸ್ಸಿನಿಂದ ಮುಂದುವರೆಯುತ್ತಾರೆ. ಪ್ರತಿಯೊಂದು ವಿವಾಹದಲ್ಲಿಯೂ ಒಂದಲ್ಲ ಒಂದು ರೀತಿಯ ಏರಿಳಿತ, ವಾದ ವಿವಾದಗಳು ಮತ್ತು ಸಮಸ್ಯೆಗಳು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಎಲ್ಲ ಗುಣಗಳಲ್ಲಿ ಪರಿಪೂರ್ಣವಾದ ಸಂಗಾತಿಯನ್ನು ನಿರೀಕ್ಷಿಸಬೇಡಿರಿ. ಯಾವುದೇ ತಪ್ಪು ಮಾಡದ, ಕುಂದುಕೊರತೆ ಮತ್ತು ನ್ಯೂನತೆಗಳಿಲ್ಲದ ಮನುಷ್ಯರಿಲ್ಲ ಎಂಬುದನ್ನು ನೆನಪಿಡಬೇಕು. ಅವರಲ್ಲಿರುವಂತಹ ತಪ್ಪು ಕುಂದುಕೊರತೆಗಳೊಂದಿಗೇ ಸ್ವೀಕರಿಸಲು ತಯಾರಾಗಬೇಕು. ಅವರ ತಪ್ಪುಗಳನ್ನು ಕ್ಷಮಿಸಬೇಕು, ಮರೆಯಬೇಕು ಮತ್ತು ಕಡೆಗಣಿಸಬೇಕು.

” ಮತ್ತು ನೀವು ಕ್ಷಮಿಸಿದರೆ, ಕಡೆಗಣಿಸಿದರೆ ಹಾಗೂ ಮನ್ನಿಸಿದರೆ ಅಲ್ಲಾಹನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್ 64 :14 )

ಪರಸ್ಪರ ಕ್ಷಮಿಸದೆ, ತ್ಯಾಗ ಮಾಡದೆ, ಹೊಂದಾಣಿಕೆಯಿಲ್ಲದೆ, ಮೃದು ನೀತಿ ತೋರದೆ, ಸಹನೆ ವಹಿಸದೆ, ಕೃತಜ್ಞತಾ ಭಾವವಿಲ್ಲದೆ ಕುಟುಂಬ ಜೀವನ ಸಫಲವಾಗಲು ಸಾಧ್ಯವಿಲ್ಲ. ನೀವು ಸಂಗಾತಿಯಿಂದ ಯಾವುದನ್ನು ನಿರೀಕ್ಷಿಸುತ್ತೀರೋ ಅದನ್ನು ನೀವು ಕೊಡಲು ತಯಾರಿರಬೇಕು. ನಿಮ್ಮ ಸಂಗಾತಿಯನ್ನು ಕೋಪಗೊಳಿಸುವುದು, ಹತಾಶೆಗೊಳಿಸುವುದು, ಕೆರಳಿಸುವುದು ಕುಟುಂಬ ಜೀವನ ಉದ್ದೇಶವಲ್ಲ. ಇನ್ನೊಬ್ಬರನ್ನು ದೂರುವುದರಿಂದ, ಆರೋಪಿಸುವುದರಿಂದ, ಹಠಮಾರಿ ಸ್ವಭಾವದಿಂದ ಕುಟುಂಬ ಜೀವನ ವಿಜಯವಾಗಲು ಸಾಧ್ಯವಿಲ್ಲ. ಎಲ್ಲರೂ ತಮ್ಮ ಸ್ವಭಾವಗಳಲ್ಲಿ ಬದಲಾವಣೆ ಮಾಡಲು ತಯಾರಿರಬೇಕು. ಸುಖ ಸಂತೋಷದ ಸಮಯದಲ್ಲಿ ಮಾತ್ರವಲ್ಲ ಕಷ್ಟ, ನೋವು, ದುಃಖ, ಆರ್ಥಿಕ ನಷ್ಟದ ಸಮಯದಲ್ಲಿ ಸಾಂತ್ವನ ಮತ್ತು ಧೈರ್ಯ ನೀಡುತ್ತಾ ಅವರ ಜೊತೆಗಿರಬೇಕು. ತನ್ನ ಸಂಗಾತಿಯನ್ನು ಪ್ರಶಂಸಿಸುವ, ಅವರಲ್ಲಿರುವ ಒಳಿತುಗಳನ್ನು ಕಂಡೆತ್ತುವ ಮನೋಭಾವ ಬೆಳೆಸಬೇಕು. ಅವರು ಶಾರೀರಿಕವಾಗಿ ಸುಂದರವಾಗಿರದಿದ್ದರೆ, ಸುಂದರವಾಗಿದ್ದಾರೆಂದೇ ಮನಸ್ಸಿನಲ್ಲಿ ಭಾವಿಸಿರಿ. ಇನ್ನೊಬ್ಬರು ನಮ್ಮ ಪ್ರೀತಿಯನ್ನು ಅನುಭವಿಸಬೇಕು, ಪ್ರತಿಯೊಬ್ಬರೂ ಭಾವನಾತ್ಮಕವಾಗಿ, ಮಾನಸಿಕವಾಗಿ ಬೇರೆ ಬೇರೆ ರೀತಿಯಲ್ಲಿ ಆಲೋಚನೆ ಮಾಡುತ್ತಾರೆ. ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು. ಸಂಗಾತಿಯು ಹೇಳುವುದನ್ನು ಆಲಿಸಲು ತಯಾರಿರಬೇಕು. ಹೃದಯದಲ್ಲಿ ಇನ್ನೊಬ್ಬರ ಬಗ್ಗೆ ದ್ವೇಷವನ್ನಿಡಬಾರದು. ಅವರ ಒಂದು ಗುಣ ಇಷ್ಟವಾಗದಿದ್ದರೂ ಇನ್ನೊಂದು ಗುಣ ಇಷ್ಟವಾಗಬಹುದು.

” ನೀವು ಅವರೊಂದಿಗೆ ಉತ್ತಮ ರೀತಿಯಿಂದ ಜೀವನ ನಡೆಸಿರಿ. ಅವರು ನಿಮಗೆ ಅಪ್ರಿಯರಾಗಿದ್ದರೆ ಒಂದು ವಸ್ತುವು ಅಪ್ರಿಯವಾಗಿದ್ದರೂ ಅಲ್ಲಾಹ್ ಅದರಲ್ಲೇ ಅತಿ ಹೆಚ್ಚು ಒಳಿತನ್ನಿರಿಸಿರಲೂಬಹುದು.” (ಪವಿತ್ರ ಕುರ್ ಆನ್ 4: 19)

” ಓರ್ವ ಸತ್ಯ ವಿಶ್ವಾಸಿಯು ಸತ್ಯವಿಶ್ವಾಸಿನಿಯನ್ನು ದ್ವೇಷಿಸಬಾರದು. ಆಕೆಯ ಒಂದು ನಡವಳಿಕೆಯು ಆರೋಚಕವಾಗಿದ್ದರೆ ಮತ್ತೊಂದು ಖಂಡಿತ ಮುದಗೊಳಿಸುವುದು.” – ಪ್ರವಾದಿ ಮುಹಮ್ಮದ್(ಸ)

ಸಂಗಾತಿಯ ಮೇಲೆ ಸಂಶಯವೆಂಬುವುದು ಕೆಲವರಿಗೆ ಕಾಡುವ ಒಂದು ರೋಗವಾಗಿರುತ್ತದೆ. ಅದಕ್ಕೆ ಸೂಕ್ತ ತಜ್ಞರಿಂದ ಪರಿಹಾರ ಅಗತ್ಯ. ನೀವು ಪತ್ನಿಯರನ್ನು ಅಲ್ಲಾಹನ ಮೇಲ್ನೋಟದಲ್ಲಿ ಸ್ವೀಕರಿಸಿದ್ದೀರಿ ಎಂಬುದನ್ನು ನೆನಪಿನಲ್ಲಿಡಿರಿ. ಪರಸ್ಪರ ಮೇಲ್ನೋಟ ವಹಿಸುವುದು, ನಿಯಂತ್ರಣದಲ್ಲಿಟ್ಟುಕೊಳ್ಳುವುದು ವಿವಾಹದ ಉದ್ದೇಶವಲ್ಲ. ಭೂಮಿಯ ಮೇಲೆ ಎಲ್ಲರೂ ಸ್ವತಂತ್ರ ಜೀವಿಗಳು. ನಿಷ್ಕಳಂಕವಾದ ಮನಸ್ಸಿನಿಂದ ಪ್ರೀತಿಸಬೇಕು. ವಿವಾಹೇತರ ಸಂಬಂಧಗಳಿಂದ ದೂರವಿರಿ.
ದಿನಂಪ್ರತಿ ಹಗಲು ರಾತ್ರಿ ಮುಖ ಮುಖ ನೋಡಿ ಹೃದಯದಂತರಾಳಗಳಿಂದ ಮಾತನಾಡಲು ಮತ್ತು ಕುಟುಂಬದೊಂದಿಗೆ ಆಹಾರ ಸೇವಿಸಲು ಸಮಯ ಮೀಸಲಿಡಬೇಕು. ನಿಮ್ಮ ಸಂಗಾತಿಯ ಬಗ್ಗೆ ಟೀಕೆ, ವಿಮರ್ಷೆ, ನಕಾರಾತ್ಮಕ ಭಾವನೆಗಳು ಬರುವಾಗ ಸಕಾರಾತ್ಮಕ ಭಾವನೆಯೆಡೆಗೆ ಗಮನ ನೀಡಿರಿ. ಸಂಗಾತಿಯ ಒಳ್ಳೆಯ ಗುಣಗಳ ಮತ್ತು ಅಡುಗೆಗಳ ಬಗ್ಗೆ ಉತ್ತಮವಾದ ಅಭಿಪ್ರಾಯವನ್ನು ಹೇಳಿರಿ. ಯಾವುದೇ ವಿಷಯದ ಬಗ್ಗೆ ವಾದ ಮಾಡುವಾಗ ಪರಸ್ಪರ ರಾಜಿ ಮಾಡಿಕೊಳ್ಳಲು ತಯಾರಾಗಬೇಕು. ಇಲ್ಲಿ ವಾದವನ್ನು ಗೆಲ್ಲುವುದು ಉದ್ದೇಶವಲ್ಲ. ವೈವಾಹಿಕ ಸಂಬಂಧವನ್ನು ಉತ್ತಮಗೊಳಿಸುವುದು ಉದ್ದೇಶವಾಗಿರಬೇಕು.

” ಹೇಗಿದ್ದರೂ ಸಂಧಾನವೇ ಅತ್ಯುತ್ತಮ.” ( *ಪವಿತ್ರ ಕುರ್ ಆನ್ 4: 128)

ನಿಮ್ಮ ವೈವಾಹಿಕ ಹಾಗೂ ಕುಟುಂಬ ಜೀವನದ ಹೊರ ಜನತ್ತಿನಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದರ ಬಗ್ಗೆ ಪರಸ್ಪರ ಚರ್ಚಿಸಿ. ಆಗ ನಿಮಗೆ ಜಗತ್ತಿನಲ್ಲಿ ಯಾವೆಲ್ಲ ರೀತಿಯ ವ್ಯಕ್ತಿತ್ವ ಹೊಂದಿದ ಜನರಿರುತ್ತಾರೆಂದು ತಿಳಿಯುತ್ತದೆ. ನಿಮಗೆ ಅನುಭವವಿಲ್ಲದ ಹೊಸ ರೀತಿಯ ಪರಿಸ್ಥಿತಿ, ಸಮಸ್ಯೆಗಳು ಎದುರಾಗುವಾಗ ಲೌಖಿಕ ಹಾಗೂ ಧಾರ್ಮಿಕ ಜ್ಞಾನವಿದ್ದರೆ ಮಾತ್ರ ಅದನ್ನು ಪರಿಹರಿಸಲು ಸಾಧ್ಯ. ಮನೆಯಲ್ಲಿ ಅಲ್ಲಾಹನ ಸ್ಮರಣೆ, ನಮಾಝ್, ಕುರ್ ಆನ್ ಪಾರಾಯಣ ಗಳಿಲ್ಲದೆ ಕುಟುಂಬ ಜೀವನದಲ್ಲಿ ಸಮೃದ್ಧಿಯುಂಟಾಗಲು ಸಾಧ್ಯವಿಲ್ಲ. ಪವಿತ್ರ ಕುರ್ ಆನ್ ನ ಆದೇಶ ಮತ್ತು ಪ್ರವಾದಿ ಮುಹಮ್ಮದ್(ಸ) ರ ಉಪದೇಶಗಳನ್ನು ಅನುಸರಿಸುವುದು ಮತ್ತು ಅಲ್ಲಾಹನನ್ನು ಸಂತೃಪ್ತಿಗೊಳಿಸುವುದು ನಮ್ಮ ಜೀವನದ ಗುರಿಯಾದಾಗ ಮಾತ್ರ ಇಹಪರಲೋಕದ ಯಶಸ್ಸು ಸಾಧ್ಯ. ತಿನ್ನುವ, ಕುಡಿಯುವ, ಮಲಗುವ, ನಗುವ, ತಿರುಗಾಡುವ ಪ್ರತಿಯೊಂದು ಕ್ಷಣವೂ ಉತ್ತಮ ಸ್ಮರಣೆಯಾಗಬೇಕು. ಸಂತೋಷಕರವಾದ ಉತ್ತಮ ಕುಟುಂಬವನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಹೊರಗಿನವರು ಯಾರೂ ಬಂದು ನಿಮ್ಮನ್ನು ಸಂತೋಷಗೊಳಿಸುವುದನ್ನು ಕಾಯಬೇಡಿರಿ.

  • ಖದೀಜ ನುಸ್ರತ್
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …