@ ಅಬೂ ಝೀಶಾನ್
ಪ್ರವಾದಿ(ಸ) ಒಮ್ಮೆ ಸಹಾಬಿಗಳೊಂದಿಗೆ ಹೇಳುತ್ತಾರೆ, “ಒಂದು ಕಾಲ ಬರುವುದು, ಆಗ ಇಸ್ಲಾಮಿನ ಶತ್ರುಗಳು ಮುಸ್ಲಿಮರ ಮೇಲೆ, ಜನರು ಊಟದ ಹಾಸಿನ ಮೇಲೆ ಹೇಗೆ ಮುಗಿ ಬೀಳುವರೋ ಹಾಗೆ ಮುಗಿ ಬೀಳುವರು.” ಆಗ ಸಹಾಬಿಗಳು ಆಶ್ಚರ್ಯಚಕಿತರಾಗಿ ಕೇಳುತ್ತಾರೆ, “ಓ ಪ್ರವಾದಿಯವರೇ(ಸ) ಆಗ ಮುಸ್ಲಿಮರು ಅಷ್ಟು ಕಡಿಮೆ ಸಂಖ್ಯೆಯಲ್ಲಿರುತ್ತಾರಾ? (ಯಾಕೆಂದರೆ ಅಂದು ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿದ್ದರೂ ಶತ್ರುಗಳನ್ನು ಸದಾ ಸೋಲಿಸುತ್ತಿದ್ದರು). ಆಗ ಪ್ರವಾದಿ(ಸ) ಉತ್ತರಿಸಿದರು, “ಇಲ್ಲ, ಅಂದು ಮುಸ್ಲಿಮರು ಬಹಳ ಅಧಿಕ ಸಂಖ್ಯೆಯಲ್ಲಿರುವರು.” ಆಗ ಸಹಾಬಿಗಳು ಕೇಳುತ್ತಾರೆ, “ಓ ಪ್ರವಾದಿಯವರೇ(ಸ), ನಾವು ಅಧಿಕ ಸಂಖ್ಯೆಯಲ್ಲಿದ್ದೂ ಹೀಗಾಗಲು ಕಾರಣವೇನು?” ಆಗ ಪ್ರವಾದಿ(ಸ) ಹೇಳಿದರು, ಹೀಗೆ ಆಗಲು ಕಾರಣ `ವಹನ್’ ಮುಸ್ಲಿಮರ ಹೃದಯವನ್ನು ಆವರಿಸಿರುವುದು. ಸಹಾಬಿಗಳು `ವಹನ್’ ಎಂದರೆ ಏನೆಂದು ಕೇಳಿದಾಗ ಪ್ರವಾದಿ(ಸ) ಉತ್ತರಿಸುತ್ತಾರೆ, `ಹುಬ್ದುದ್ದುನ್ಯಾ ವ ಕರಾಹತುಲ್ ಮೌತ್’ ಲೋಕದ ಮೇಲಿನ ಪ್ರೀತಿ ಹಾಗೂ ಮೃತ್ಯುವಿನ ಬಗ್ಗೆ ಅಸಂತೃಪ್ತಿ.
ಪ್ರವಾದಿಯವರ(ಸ) ಈ ಹದೀಸ್ ಇಂದಿನ ಕಾಲಕ್ಕೆ ಬಹಳ ಪ್ರಸ್ತುತವಾಗಿದೆ. ಮುಸ್ಲಿಮರು ಇಂದು ಲೋಕದಲ್ಲಿ ಮೂರನೆಯ ಒಂದರಷ್ಟು ಇದ್ದರೂ ಇಸ್ಲಾಮಿನ ಶತ್ರುಗಳು ಮುಸ್ಲಿಮರ ಮೇಲೆ ಮುಗಿ ಬೀಳುತ್ತಿದ್ದಾರೆ. ಯಾಕೆಂದರೆ ಇಂದು ಹೆಚ್ಚಿನ ಮುಸ್ಲಿಮರ ಹೃದಯಗಳಲ್ಲಿ ಲೋಕದ ಮೇಲಿನ ಮೋಹ ತುಂಬಿದೆ. ಈ ಲೋಕವನ್ನು ಗಳಿಸಲು ಅದರ ಹಿಂದೆ ನಿರಂತರ ಓಡಾಡುತ್ತಿದ್ದಾರೆ. ಈ ಓಡಾಟದಲ್ಲಿ ಇಸ್ಲಾಮಿನ ಮೌಲ್ಯಗಳನ್ನು ಬದಿಗೊತ್ತಿ ಕೇವಲ ಕೆಲವು ಆರಾಧನೆಗಳು ಮಾತ್ರ ಇಸ್ಲಾಮಿನ ಭಾಗ ಎಂದು ಭಾವಿಸಿ, ಅವುಗಳನ್ನು ಮಾತ್ರ ನಿರ್ವಹಿಸುತ್ತಾ, ಬಹಳ ನಿಭಿಡತೆಯಿಂದ ಜೀವನ ಸಾಗಿಸುತ್ತಿದ್ದಾರೆ.
ಒಂದು ಕಾಲವಿತ್ತು, ಅಂದು ಶತ್ರು ಸೇನೆ ಆಯುಧ ಬಲ, ಸೇನಾ ಬಲ ಹಾಗೂ ತಂತ್ರಜ್ಞಾನದಲ್ಲಿ ಮುಸ್ಲಿಮರಿಗಿಂತ ಮುಂದಿದ್ದರೂ ಮುಸ್ಲಿಮರ ಸೇನೆಯನ್ನು ಎದುರುಗೊಳ್ಳುವ ಒಂದು ತಿಂಗಳು ಮೊದಲೇ ಶತ್ರು ಸೇನೆಯ ಸೈನಿಕರ ಹೃದಯಗಳಲ್ಲಿ ಮುಸ್ಲಿಮರ ಬಗ್ಗೆ ಭಯ ಮೂಡುತ್ತಿತ್ತು. ಯಾಕೆಂದರೆ `ವಹನ್’ ಅಂದು ಮುಸ್ಲಿಮರ ಹೃದಯಗಳನ್ನು ಆವರಿಸಿರಲಿಲ್ಲ. ಸಹಾಬಿಗಳು ಇಸ್ಲಾಮನ್ನು ಕಿರೀಟವಾಗಿ ಹಾಗೂ ಈ ಲೋಕವನ್ನು ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದರು. ತಲೆಯಲ್ಲಿರುವ ಧರ್ಮದ ಕಿರೀಟ ಅಲುಗಾಡಿದಾಗ ಕೈಯಲ್ಲಿರುವ ಈ ಲೋಕವನ್ನು ಕೆಳಗೆ ಹಾಕಿ ಕಿರೀಟವನ್ನು ಸರಿಪಡಿಸುತ್ತಿದ್ದರು.
ನಾವಾದರೋ ಇಂದು ಇದರ ವಿರುದ್ಧವಾದುದನ್ನು ಮಾಡುತ್ತಿದ್ದೇವೆ. ಈ ಲೋಕವನ್ನು ಕಿರೀಟವಾಗಿಯೂ ಇಸ್ಲಾಮನ್ನು ಕೈಯಲ್ಲಿ ಹಿಡಿದು ಜೀವಿಸುತ್ತಿದ್ದೇವೆ. ತಲೆಯಲ್ಲಿರುವ ಲೋಕದ ಕಿರೀಟವು ಅಲುಗಾಡಿದಾಗ ಕೈಯಲ್ಲಿರುವ ಧರ್ಮವನ್ನು ಕೆಳಗೆ ಹಾಕಿ ಕಿರೀಟವನ್ನು ಸರಿ ಪಡಿಸುತ್ತೇವೆ. ಹಾಗೆಯೇ ಮರಣ ಹೊಂದಲು ನಮ್ಮಲ್ಲಿ ಯಾರೂ ಇಷ್ಟಪಡುವುದಿಲ್ಲ. `ವಹನ್’ ನಮ್ಮಲ್ಲಿ ಹೆಚ್ಚಿನವರನ್ನು ಸಂಪೂರ್ಣವಾಗಿ ಆವರಿಸಿದೆ. ಈ `ವಹನ್’ ಅನ್ನು ನಾವು ನಮ್ಮ ಹೃದಯದಿಂದ ಕಿತ್ತೊಗೆಯಲು ಪ್ರಯತ್ನಿಸಬೇಕು ಹಾಗೂ ಅದರಲ್ಲಿ ಸಫಲರಾದರೆ ವೈಯಕ್ತಿಕವಾಗಿ ನಮಗೆ ಪರಲೋಕ ವಿಜಯಗಳಿಸಲು ಸುಲಭವಾಗಬಹುದು ಹಾಗೂ ಮುಸ್ಲಿಮ್ ಸಮುದಾಯ ಇದನ್ನು ಮಾಡಿದರೆ ಅಲ್ಲಾಹನು ಈ ಲೋಕದ ಮುಸ್ಲಿಮರ ಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸುವನು.
IslamKannada News Portal
