Home / ಲೇಖನಗಳು / ರಮಝಾನಿನ ಪೂರ್ವಸಿದ್ಧತೆಯ ಮಾಸ ಶಅಬಾನ್

ರಮಝಾನಿನ ಪೂರ್ವಸಿದ್ಧತೆಯ ಮಾಸ ಶಅಬಾನ್

@ ಸಲೀಮ್ ಬೋಳಂಗಡಿ

ಶಅಬಾನ್ ಮಾಸ ಆಗತವಾಗಿದೆ. ಇದು ಹಿಜರಿ ಶಕೆಯ ಎಂಟನೇಯ ತಿಂಗಳು. ಈ ತಿಂಗಳಾಂತ್ಯವಾದ ಕೂಡಲೇ ರಮಝಾನ್ ತಿಂಗಳ  ಉದಯವಾಗುತ್ತದೆ. ಈ ಮಾಸವು ಪವಿತ್ರ ರಮಝಾನಿನ ಪೂರ್ವ ತಯಾರಿಯ ಮಾಸವಾಗಿದೆ ಎಂಬುದು ಹಲವು ವಿದ್ವಾಂಸರ  ಅಭಿಮತವಾಗಿದೆ. ಯಾವ ರೀತಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಪೂರ್ವಸಿದ್ಧತೆ ನಡೆಸುತ್ತಾರೆಯೇ ಅದೇ ರೀತಿ ರಮಝಾನ್  ತಿಂಗಳಲ್ಲಿ ಆರಾಧನೆ ವೃತಾನುಷ್ಠಾನದಲ್ಲಿ ತಲ್ಲೀನರಾಗಲು ಶಅಬಾನ್‌ನಲ್ಲಿ ಪೂರ್ವ ತಯಾರಿ ನಡೆಸಬೇಕು. ಈ ತಿಂಗಳಲ್ಲಿಯೇ ಕುರ್‌ಆನ್ ಪಾರಾಯಣದಲ್ಲಿ ವರ್ಧನೆ, ಐಚ್ಚಿಕ ಉಪವಾಸ, ನಿರಂತರ ಸಾಮೂಹಿಕ ನಮಾಝ್ ನಲ್ಲಿ ಭಾಗವಹಿಸಲು ಹೆಚ್ಚು ಗಮನ ಹರಿಸುವುದು ಇಂತಹ ತಯಾರಿ ನಡೆಸಬೇಕೆಂಬುದಾಗಿದೆ. ರೈತನು ವ್ಯವಸಾಯ ಮಾಡಲು ಫಲವತ್ತಾದ ಭೂಮಿಯನ್ನು ಹದಗೊಳಿಸಿ ಅದರಿಂದ ಇಳುವರಿ ಪಡೆಯಲು ಯಾವ ರೀತಿ ಮಳೆಯ ನಿರೀಕ್ಷೆಯಲ್ಲಿರುತ್ತಾನೋ ಹಾಗೆಯೇ ಸತ್ಯವಿಶ್ವಾಸಿಗಳು ಪುಣ್ಯಗಳ ಮಳೆಯ ರಮಝಾನ್  ಮಾಸದ ನಿರೀಕ್ಷೆಯಲ್ಲಿರುತ್ತಾರೆ. ತನಗೆ ಸಮೃದ್ಧವಾದ ಫಸಲು ದೊರೆಯಲಿ ಎಂದು ಮಳೆಗಾಗಿ ರೈತ ಪ್ರಾರ್ಥಿಸುತ್ತಾನೆ. ಹಾಗೆಯೆ  ಸತ್ಯವಿಶ್ವಾಸಿಗಳು ರಮಝಾನಿನ ಅನುಗ್ರಹಕ್ಕೆ ಪಾತ್ರರಾಗಲು ಸ್ವತಃ ಪ್ರಾರ್ಥಿಸುತ್ತಾರೆ. ರಮಝಾನಿನ ಎಲ್ಲಾ ಪ್ರತಿಫಲಗಳ ಸದುಪಯೋಗ ಪಡೆಯಲು ಸತ್ಯವಿಶ್ವಾಸಿಗಳು ಹಾತೊರೆಯುತ್ತಾರೆ. ಈ ಶಅಬಾನ್ ತಿಂಗಳು ರಮಝಾನಿಗಿರುವ ಹೆಜ್ಜೆಯಾಗಿದೆ.

ಈ ಶಅಬಾನ್ ತಿಂಗಳಲ್ಲಿ ನಡೆದ ಘಟನೆ ಇತಿಹಾಸ ಪ್ರಸಿದ್ಧವಾಗಿದೆ. ಇದೇ ತಿಂಗಳಲ್ಲಿ ಖಿಬ್ಲಾದ ಬದಲಾವಣೆಯಾಯಿತು. ಬೈತುಲ್  ಮುಕದ್ದಿಸ್‌ನಿಂದ ಕಅಬಾದೆಡೆಗಿನ ಬದಲಾವಣೆಯಾಗಿದೆ ಇದು. ಇದು ಅಲ್ಲಾಹನ ಆದೇಶದನುಸಾರವಾಗಿಯೇ ನಡೆಯಿತು. ಅಂದರೆ ಅಲ್ಲಾಹನು ಇಸ್ರಾಈಲರಿಂದ ವಿಶ್ವದ ನಾಯಕತ್ವವನ್ನು ಬದಲಿಸಿ ಪ್ರವಾದಿ ಮುಹಮ್ಮದ್(ಸ)ರ ಸಮುದಾಯಕ್ಕೆ ವಹಿಸಿಕೊಟ್ಟನು. ಹಿಜರಿ ಎರಡನೇ ವರ್ಷದಲ್ಲಿ ಪ್ರವಾದಿವರ್ಯರು(ಸ) ಮತ್ತು ಸಂಗಾತಿಗಳು ಬೈತುಲ್ ಮುಕದ್ದಿಸ್ ನಿಂದ ಕಅಬಾದತ್ತ ಮುಖ ಮಾಡಿ ನಮಾಝ್  ಮಾಡಲಾರಂಭಿಸಿದರು. ಅದಕ್ಕಿಂತ ಮೊದಲು ಮದೀನಾ ವಲಸೆ ಅಂದರೆ ಹಿಜರಿಯ ಹದಿನೇಳು ತಿಂಗಳುಗಳವರೆಗೆ ಬೈತುಲ್ ಮುಕದ್ದಿಸ್‌ಗೆ ಮುಖ ಮಾಡಿ ನಮಾಝ್ ನಿರ್ವಹಿಸಲಾಗುತ್ತಿತ್ತು. ಪ್ರವಾದಿವರ್ಯರನ್ನು(ಸ) ಅನುಸರಿಸು ವವರು ಯಾರು, ಅನುಸರಿಸದೆ ಇರುವವರು ಯಾರೆಂಬುದು ತಿಳಿಯುವುದೇ ಇದರ ಉದ್ದೇಶವಾಗಿತ್ತು. ಕುರ್‌ಆನ್ ಅದನ್ನು ಈ ರೀತಿ ಸ್ವಷ್ಟಪಡಿಸಿದೆ.
“ಇವರು ಈ ಮುಂಚೆ ಮುಖ ಮಾಡಿ ನಮಾಝ್ ಮಾಡುತ್ತಿದ್ದ ಕಿಬ್ಲಾದಿಂದ ಒಮ್ಮೆಲೇ ತಿರುಗಿ ಬಿಡಬೇಕಾದರೆ ಇವರಿಗೇನಾಯಿತು?  ಎಂದು ತಿಳಿಗೇಡಿಗಳು ನಿಶ್ಚಯವಾಗಿಯೂ ಕೇಳುವರು. ಓ ಪೈಗಂಬರರೇ ಅವರೊಡನೆ ಹೇಳಿರಿ, ಪೂರ್ವ ಪಶ್ಚಿಮಗಳೆಲ್ಲವೂ ಅಲ್ಲಾಹನವೇ,  ಅಲ್ಲಾಹನು ತಾನಿಚ್ಛಿಸಿದವನಿಗೆ ದಾರಿ ತೋರಿಸುತ್ತಾನೆ. (ಅಲ್ ಬಕರ: 142)

ಇಬ್ನ್ ಸಅದ್(ರ)ರು ಇದನ್ನು ಈ ರೀತಿ ಉಲ್ಲೇಖಿಸಿದ್ದಾರೆ. ಪ್ರವಾದಿವರ್ಯರು(ಸ) ಬಿಶ್ರ್ ಬಿನ್ ರ‍್ರಾಅï(ರ) ಬಿನ್ ಮಅï‌ದೂದ್‌ರ  ಮನೆಗೆ ಭೊಜನ ಕೂಟಕ್ಕೆ ತೆರಳಿದ್ದರು. ಅದು ಝುಹ್ರ್ ನಮಾಝ್‌ನ ವೇಳೆಯಾಗಿತ್ತು.  ಅವರ ನೇತೃತ್ವದಲ್ಲಿ ನಮಾಝ್  ನಿರ್ವಹಿಸುತ್ತಿರುವಾಗ ಎರಡನೆಯ ರಕಅತ್  ಮುಗಿಸಿ ಮೂರನೇಯ ರಕಅತ್‌ನಲ್ಲಿದ್ದಾಗ ಒಮ್ಮೆಲೆ ದಿವ್ಯವಾಣಿ ಅವತೀರ್ಣವಾಯಿತು.  ಆ ಕೂಡಲೇ ಪ್ರವಾದಿವರ್ಯರು(ಸ) ಮತ್ತು ಅವರ ಹಿಂದೆ ನಮಾಝ್ ನಿರ್ವಹಿಸುತ್ತಿರುವವರೆಲ್ಲರೂ ಬೈತುಲ್ ಮುಕದ್ದಿಸ್ ನಿಂದ  ಕಅಬಾದತ್ತ ಮುಖ ತಿರುಗಿಸಿದರು. ಆ ಬಳಿಕ ಮದೀನಾ ಮತ್ತು ಅದರ ಪರಿಸರದಲ್ಲಿ ಈ ಘೋಷಣೆ ಮಾಡಲಾಯಿತು. ಬರಾಅï ಬಿನ್ ಅಝಿಬ್‌ರ ಹೇಳಿಕೆಯಂತೆ ಒಂದು ಕಡೆ ಜನರು ನಮಾಝ್‌ನ ರುಕೂಅï‌ನ ಭಂಗಿಯಲ್ಲಿರುವಾಗ ಈ ಘೋಷಣೆ ಕೇಳಿಸಿತು. ತಕ್ಷಣ  ಅದೇ ಭಂಗಿಯಲ್ಲಿಯೇ ನಮಾಝಿಗಳೆಲ್ಲರೂ ಕಅಬಾದತ್ತ ಮುಖ ತಿರುಗಿಸಿದರು.

ಬೈತುಲ್ ಮುಕದ್ದಿಸ್ ಮದೀನಾದ ಉತ್ತರ ಮತ್ತು ಕಅಬಾ ದಕ್ಷಿಣ ದಿಕ್ಕಿನಲ್ಲಿದೆ. ಆದ್ದರಿಂದ ಸಾಮೂಹಿಕ ನಮಾಝ್ ನಿರ್ವಹಿಸುತ್ತಾ  ಕಿಬ್ಲಾ ಬದಲಾಯಿಸುವಾಗ ಇಮಾಮರು ನಡೆದುಕೊಂಡು ಮಅಮೂಮ್‌ರ ಹಿಂದಿನಿಂದ ಹೋಗಬೇಕಾಗುತ್ತದೆ. ಮಅಮೂಮ್‌ಗಳು ಕೇವಲ ತಿರುಗಿಸಿದರೆ ಸಾಕಾಗುವುದಿಲ್ಲ. ಸಾಲುಗಳನ್ನು ಸರಿಪಡಿಸಲು ನಡೆದಿರಲೂಬಹುದು. ಈ ರೀತಿಯ ವಿವರಗಳು ಕೆಲವು ವರದಿಗಳಲ್ಲಿ ಬಂದಿರುತ್ತವೆ. ಪ್ರವಾದಿವರ್ಯರು(ಸ) ಕಿಬ್ಲಾ ಸ್ಥಳಾಂತರದ ಆಜ್ಞೆ ಬರುವುದಕ್ಕಿಂತ ಮುಂಚೆ ಅದರ ನಿರೀಕ್ಷೆಯಲ್ಲಿದ್ದರು.

ನಿಮ್ಮ ಮುಖವು ಪದೇ ಪದೇ ಆಕಾಶದತ್ತ ತಿರುಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದೋ ನಾವು ನೀವಿಷ್ಟಪಡುವ ಕಿಬ್ಲಾದ ಕಡೆಗೇ ತಿರುಗಿಸಿ ಬಿಡುತ್ತೇವೆ ಎಂಬ ಮಾತುಗಳಿಂದ ಸ್ಪಷ್ಟವಾಗುತ್ತದೆ. ಈ ಮೂಲಕ ಬನೀ ಇಸ್ರಾಈಲರ ನಾಯಕತ್ವದ ಹಂತ ಮುಕ್ತಾಯಗೊಂಡಿದೆ. ಅದರೊಂದಿಗೆ ಬೈತುಲ್ ಮುಕದ್ದಿಸ್‌ನ ಕೇಂದ್ರ ಸ್ಥಾನವೂ ಕೊನೆಗೊಂಡಿದೆ. ಪ್ರವಾದಿ ಇಬ್ರಾಹೀಮರ(ಅ) ನೈಜ ಕೇಂದ್ರದ  ದಿಕ್ಕಿಗೆ ತಿರುಗಲೇಬೇಕಾದ ಸಮಯ ಹತ್ತಿರವಾಗಿದೆಯೆಂದು ಪ್ರವಾದಿ(ಸ)ರವರಿಗೆ ಭಾಸವಾಗುತ್ತಿತ್ತು. ಮಸ್ಜಿದುಲ್ ಹರಾಮ್ ಎಂದರೆ  ಪ್ರತಿಷ್ಠಿತ ಗೌರವಾರ್ಹ ಮಸೀದಿಯೆಂದರ್ಥ. ಪವಿತ್ರ ಕಅಬಾದ ಸುತ್ತಲಿರುವ ಆರಾಧನಾ ಭವನವೇ ಇದರ ಉದ್ದೇಶವಾಗಿದೆ.

ಈ ತಿಂಗಳಲ್ಲಿ ರಮಝಾನ್ ತಿಂಗಳವರೆಗೆ ಆಯಸ್ಸು ವರ್ಧಿಸಲು ಪ್ರವಾದಿವರ್ಯರು(ಸ) ಪ್ರಾರ್ಥಿಸುತ್ತಿದ್ದರು. ಅನಸ್ ಬಿಮ್ ಮಾಲಿಕ್‌ರಿಂದ ವರದಿಯಾಗಿದೆ- “ಅಲ್ಲಾಹನೇ ರಜಬ್ ಮತ್ತು ಶಅಬಾನ್ ನಲ್ಲಿ ಸಮೃದ್ಧಿಯನ್ನು ಕರುಣಿಸು. ರಮಝಾನ್ ನಮಗೆ  ಆಗತಗೊಳಿಸು” ಎಂದು ಪ್ರಾರ್ಥಿಸುತ್ತಿದ್ದರು. ತಖ್ವಾದಿಂದ ಉತ್ಸಾಹಭರಿತರಾಗಿ ಹೃದಯಂಗಮವಾಗಿ ರಮಝಾನಿನ ಸ್ವಾಗತಕ್ಕಾಗಿ ಹಾತೊರೆಯುತ್ತಿದ್ದರು. ಪ್ರವಾದಿವರ್ಯರು(ಸ) ಪ್ರತೀ ತಿಂಗಳು ಐಚ್ಛಿಕವಾಗಿ ಆಚರಿಸುತ್ತಿದ್ದರು. ಉಪವಾಸಗಳು ಪ್ರಯಾಣ ಮತ್ತಿತರ ಕಾರಣದಿಂದ ಉಪವಾಸ ವ್ರತವಾಚರಿಸಲು ಆಗದಿದ್ದರೆ ಅದನ್ನು ಈ ತಿಂಗಳಲ್ಲಿ ನಿರ್ವಹಿಸಿ ಪೂರ್ತಿ ಗೊಳಿಸುತ್ತಿದ್ದರು. ಉಪವಾಸ ಮಾತ್ರವಲ್ಲ ಮತ್ತಿತರ ಐಚ್ಛಿಕ ಕರ್ಮಗಳ ಖಝಾ ಪೂರ್ತಿಗೊಳಿಸುತ್ತಿದ್ದರು. ಆದ್ದರಿಂದ ಶಅಬಾನ್ ತಿಂಗಳು ಪವಿತ್ರ ರಮಝಾನಿನ  ಪೂರ್ವಸಿದ್ಧತೆಯ ಮಾಸವಾಗಿದೆ. ಆದರೆ ಶಅಬಾನಿನ ಅಂತಿಮ ಎರಡು ದಿನಗಳಲ್ಲಿ ಉಪವಾಸಧಾರಿಯಾಗಿರುವುದರ ಬಗ್ಗೆ  ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ರಮಝಾನಿನ ಸ್ವಾಗತಕ್ಕಾಗಿ ದಾನ-ಧರ್ಮ ಮುಂತಾದ ಸತ್ಕರ್ಮಗಳನ್ನು ನಿರ್ವಹಿಸಿ ಅದರಲ್ಲಿ ನೈಪುಣ್ಯತೆ ಪಡೆದು ಸಿದ್ಧರಾಗಬೇಕು. ಹೆಚ್ಚು ಹೆಚ್ಚು ಒಳಿತುಗಳಲ್ಲಿ ಕಾರ್ಯ ನಿರತರಾಗಬೇಕೆಂದಾಗಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …