✍️ ಇರ್ಶಾದ್, ಬೆಂಗಳೂರು
ಪತ್ರಕರ್ತರು
ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಅಥವಾ ಒಂದು ವರ್ಗ ಇನ್ನೊಂದು ವರ್ಗವನ್ನು ತನಗಿಂತ ಕೀಳಾಗಿ ನೋಡಿದಾಗಲೆಲ್ಲ ಅದು ಜನರ ನಡುವೆ ಸಂಘರ್ಷ ಮತ್ತು ಭೂಮಿಯ ಮೇಲೆ ಕ್ಷೋಭೆ ಹಾಗೂ ಹಿಂಸೆಗೆ ಕಾರಣವಾದದ್ದು ಮಾನವ ಇತಿಹಾಸದುದ್ದಕ್ಕೂ ನಮಗೆ ಕಾಣಸಿಗುತ್ತದೆ.
ಇಂದಿನ ಆಧುನಿಕ ಸಮಾಜವು ಎಲ್ಲಾ ರೀತಿಯ ತಾರತಮ್ಯವನ್ನು ಖಂಡಿಸುತ್ತದೆಯಾದರೂ ಇಂದೂ ಸಹ ವಂಶ, ವರ್ಣ, ಜಾತಿ, ಭಾಷೆ, ರಾಷ್ಟ್ರ, ಜನಾಂಗ ಮತ್ತು ಬಡವ-ಶ್ರೀಮಂತ ಇತ್ಯಾದಿಗಳ ಆಧಾರದಲ್ಲಿ ಸಂಘರ್ಷಗಳು ನಡೆಯುತ್ತಲೇ ಇವೆ.
ಇಂದು ಮಾನವ ಸಮಾನತೆಯ ಪರಿಕಲ್ಪನೆಯು ಹಲವಾರು ಸಮಾಜಗಳ ಪ್ರಮುಖ ಮೌಲ್ಯವಾಗಿದೆ. ಆದರೆ ಅದರ ವ್ಯಾಖ್ಯಾನ ಮತ್ತು ಅನುಷ್ಠಾನ ಎಲ್ಲೆಡೆ ವಿಭಿನ್ನವಾಗಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಜಗತ್ತಿನ ದೊಡ್ಡಣ್ಣನಂತೆ ವರ್ತಿಸುವ ಅಮೆರಿಕಾ ದೇಶವು ಎಲ್ಲಾ ರೀತಿಯ ತಾರತಮ್ಯಗಳ ವಿರುದ್ಧ ಕಟ್ಟು ನಿಟ್ಟಿನ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಕರಿಯರು ಮತ್ತು ಅಲ್ಪಸಂಖ್ಯಾತರು ಇಂದಿಗೂ ಸಹ ಜನಾಂಗೀಯ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಇತ್ತೀಚಿನ “ಬ್ಲಾಕ್ ಲೈವ್ಸ್ ಮ್ಯಾಟರ್ಸ್” ಅಭಿಯಾನ ಅದರ ಒಂದು ಉದಾಹರಣೆ ಮಾತ್ರ. ಇಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು 1920ರ ನಂತರ.
ಸ್ವತಃ ನಮ್ಮ ದೇಶದ ಸಂವಿಧಾನದಲ್ಲಿ ಸಮಾನತೆ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇಂದಿಗೂ ದಿನನಿತ್ಯ ದಲಿತರ ಮೇಲೆ ನಡೆಯುವ ದೌರ್ಜನ್ಯಗಳ ಘಟನೆಗಳಿಗೆ ಲೆಕ್ಕವಿಲ್ಲ.
ನೀರು ಕುಡಿದರೆಂದು, ಮೀಸೆ ಬಿಟ್ಟರೆಂದು, ಕುದುರೆ ಸವಾರಿ ಮಾಡಿದರೆಂದು, ಮಂದಿರ ಪ್ರವೇಶಿಸಿದರೆಂದು ಹೀಗೆ ಹಲವಾರು ಸಣ್ಣಪುಟ್ಟ ಕಾರಣಗಳಿಂದ ದೌರ್ಜನ್ಯಗಳು ನಡೆಯುತ್ತಲೇ ಇವೆ.
ಇದೇ ರೀತಿಯಲ್ಲಿ ಅಸಮಾನತೆ, ತಾರತಮ್ಯ ಮತ್ತು ಹಿಂಸೆ ತಾಂಡವಾಡುತ್ತಿದ್ದ ಅರೇಬಿಯಾದ ಮರಳುಗಾಡಿನಲ್ಲಿ ದೇವನು ತನ್ನ ಕೊನೆಯ ಪ್ರವಾದಿಯ(ಸ) ಮೂಲಕ ಪವಿತ್ರ ಕುರ್ಆನಿನ ರೂಪದಲ್ಲಿ ಇಡೀ ಮನುಕುಲಕ್ಕಾಗಿ ಒಂದು ಸ್ಪಷ್ಟ ಸಂದೇಶ ಮತ್ತು ಸಿದ್ಧಾಂತವನ್ನು ನೀಡುತ್ತಾನೆ.
“ಮಾನವರೇ, ಖಂಡಿತವಾಗಿಯೂ ನಾವು ನಿಮ್ಮೆಲ್ಲರನ್ನೂ ಒಬ್ಬ ಪುರುಷ ಹಾಗೂ ಒಬ್ಬ ಸ್ತ್ರೀಯಿಂದ ಸೃಷ್ಟಿಸಿರುವೆವು. ತರುವಾಯ, ನೀವು ಪರಸ್ಪರ ಗುರುತಿಸುವಂತಾಗಲು ನಿಮ್ಮನ್ನು (ವಿವಿಧ) ಜನಾಂಗಗಳಾಗಿ ಹಾಗೂ ಪಂಗಡಗಳಾಗಿ ರೂಪಿಸಿರುವೆವು. ಅಲ್ಲಾಹನ ದೃಷ್ಟಿಯಲ್ಲಿ ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನಾಗಿರುವವನೇ ನಿಮ್ಮಲ್ಲಿನ ಅತ್ಯುತ್ತಮನಾಗಿರುವನು. ಅಲ್ಲಾಹನು ಖಂಡಿತವಾಗಿಯೂ ಬಲ್ಲವನು ಹಾಗೂ ಅರಿವು ಉಳ್ಳವನಾಗಿದ್ದಾನೆ.” (ಪವಿತ್ರ ಕುರ್ಆನ್- 49: 13)
ಇಲ್ಲಿ ದೇವನು ನಾಲ್ಕು ವಾಸ್ತವಗಳನ್ನು ಇಡೀ ಮನುಕುಲದ ಮುಂದೆ ಸ್ಪಷ್ಟ ಪಡಿಸುತ್ತಾನೆ.
ಮೊದಲನೆಯದು ನಮ್ಮೆಲ್ಲರ ಮೂಲ ಒಂದೇ ಆಗಿದೆ, ಓರ್ವ ಸ್ತ್ರೀ ಮತ್ತು ಪುರುಷನ ಮೂಲಕ ಸಮಸ್ತ ಮನುಕುಲ ಅಸ್ತಿತ್ವಕ್ಕೆ ಬಂದಿದೆ. ಇಂದು ಜಗತ್ತಿನಾದ್ಯಂತ ಹರಡಿರುವ ಜನಾಂಗಗಳು ಮೂಲತಃ ಒಂದೇ ತಂದೆ-ತಾಯಿಯ ಮೂಲಕ ಆರಂಭವಾದ ಜನಾಂಗದ ವಿವಿಧ ಶಾಖೆಗಳಾಗಿವೆ.
ಎರಡನೇಯದು ದೇವರು ಮನುಷ್ಯರನ್ನು ವಿವಿಧ ಕುಲಗೋತ್ರಗಳಾಗಿ ಮಾಡಿರುವುದು ಸ್ವಾಭಾವಿಕ ಮತ್ತು ಕೇವಲ ಪರಸ್ಪರ ಪರಿಚಯ ಮಾಡಿಕೊಳ್ಳುವುದಕ್ಕೆ ಮಾತ್ರ. ಆದರೆ ಇವುಗಳ ಆಧಾರದಲ್ಲಿ ಉಚ್ಚ-ನೀಚ, ಮೇಲು-ಕೀಳು ಮತ್ತು ಶ್ರೇಷ್ಠ-ಅಧಮ ಇತ್ಯಾದಿ ಭೇದಗಳನ್ನು ಕಲ್ಪಿಸುವುದು, ಒಂದು ಜನಾಂಗ ತನ್ನನ್ನು ಶ್ರೇಷ್ಠ ಮತ್ತು ಇತರರನ್ನು ನೀಚರಂತೆ ಕಾಣುವುದು ಸರಿಯಲ್ಲ.
ಮೂರನೆಯದು ಜನರಲ್ಲಿ ಉತ್ತಮ ನೈತಿಕತೆ ಮತ್ತು ಧರ್ಮನಿಷ್ಠೆ ಹೊಂದಿರುವವನೇ ದೇವನ ಬಳಿ ಉತ್ತಮನು.
ನಾಲ್ಕನೆಯದಾಗಿ ಜನರಲ್ಲಿನ ಈ ನೈತಿಕ ಮೇಲ್ಮೆಯನ್ನು ನಿರ್ಧರಿಸುವುದು ಸ್ವತಃ ದೇವನೇ ಹೊರತು ಮನುಷ್ಯರಲ್ಲ.
ಹೀಗಾಗಿ ಮನುಷ್ಯನ ಮೌಲ್ಯ ಮತ್ತು ಶ್ರೇಷ್ಠತೆ ನಿರ್ಧಾರವಾಗುವುದು ಅವನ ಜಾತಿ, ವರ್ಣ, ವಂಶ, ಲಿಂಗ ಜನಾಂಗ ಮತ್ತು ಸಾಮಾಜಿಕ
ಸ್ಥಾನಮಾನಗಳಿಂದಲ್ಲ ಬದಲಾಗಿ ಅವನ ಸದಾಚಾರ ಮತ್ತು ಧರ್ಮನಿಷ್ಠೆಯಿಂದ ಎಂಬ ಸ್ಪಷ್ಟ ಸಂದೇಶವನ್ನು ಪವಿತ್ರ ಕುರ್ಆನ್ ನಮ್ಮ ಮುಂದಿಡುತ್ತದೆ.
ಅದೇ ರೀತಿ ಇನ್ನೊಂದೆಡೆ “ವಲಖದ್ ಕರ್ರಮನಾ ಬನೀ ಆದಮ – ನಾವು ಆದಮರ ಸಂತತಿಯನ್ನು ಗೌರವಾನ್ವಿತಗೊಳಿಸಿದೆವು.” (ಪವಿತ್ರ ಕುರ್ಆನ್- 17: 70) ಎಂದು ಕುರ್ಆನ್ ಹೇಳುತ್ತದೆ.
ದೇವನು ಇಡೀ ಮನುಕುಲವನ್ನು ಗೌರವಾನ್ವಿತಗೊಳಿಸಿದ್ದಾನೆ. ಈಗ ಮನುಷ್ಯ ತನ್ನ ದುರ್ಗುಣ ಮತ್ತು ದುಷ್ಕರ್ಮಗಳಿಂದಾಗಿ ಮಾತ್ರ ತನ್ನ ಉನ್ನತ ಸ್ಥಾನವನ್ನು ಕಳೆದುಕೊಳ್ಳುವನು.
ಇದನ್ನೇ ಕುರ್ಆನ್ ಹೀಗೆ ಹೇಳುತ್ತದೆ,
“ನಾವು ಮನುಷ್ಯನನ್ನು ಅತ್ಯುತ್ತಮ ಸ್ವರೂಪದಲ್ಲಿ ಸೃಷ್ಟಿಸಿರುವೆವು. ಆ ಬಳಿಕ ನಾವು ಅವನನ್ನು ತೀರಾ ಕೆಳಮಟ್ಟಕ್ಕೆ ಮರಳಿಸಿದೆವು.” (ಪವಿತ್ರ ಕುರ್ಆನ್- 95: 4-5)
ಕುರ್ಆನ್ನ ಸಮಾನತೆಯ ಈ ಮೌಲ್ಯವು ಕೇವಲ ಬೋಧನೆಗೆ ಸೀಮಿತವಾಗಿರಲಿಲ್ಲ, ಈ ಆದರ್ಶವನ್ನು ಪ್ರವಾದಿ ಮಹಮ್ಮದ್(ಸ)ರು ತಮ್ಮ ಸಮಾಜದಲ್ಲಿ ಜಾರಿಗೊಳಿಸಿ ತೋರಿಸಿದರು.
ಅರಬರು ತಮ್ಮನ್ನು ಅರಬರಲ್ಲದವರಿಗಿಂತ, ಶ್ರೀಮಂತರು ಬಡವರಿಗಿಂತ ಮತ್ತು ಯಜಮಾನರು ಗುಲಾಮನಿಗಿಂತ ಶ್ರೇಷ್ಠರೆಂದು ಪರಿಗಣಿಸಿದ್ದರು.
ಅಂತಹ ಅರಬರ ಸಾಲಿನಲ್ಲಿ ಇಥೋಪಿಯಾ ಮೂಲದ ಕರಿಯ ಗುಲಾಮರಾದ ಬಿಲಾಲ್, ಪರ್ಷಿಯಾ ಮೂಲದ ಸಲ್ಮಾನ್, ರೋಮನ್ ಮೂಲದ ಸುಹೈಬ್ ಮತ್ತು ಇಸ್ಲಾಮ್ ಸ್ವೀಕರಿಸುವ ಮುಂಚೆ ಯಹೂದಿಯಾಗಿದ್ದ ಅಬ್ದುಲ್ಲಾ ಇಬ್ನ್ ಸಲಾಮ್ರನ್ನು ಪರಸ್ಪರ ಸಮಾನವಾಗಿ ನಿಲ್ಲಿಸಿದ್ದು ಪ್ರವಾದಿ ಮುಹಮ್ಮದ್(ಸ).
ಪ್ರವಾದಿ ಮುಹಮ್ಮದ್(ಸ)ರು ತನ್ನ ಕೊನೆಯ ಭಾಷಣದಲ್ಲಿ ಹೀಗೆ ಹೇಳುತ್ತಾರೆ, “ಅರಬ್ ಜನಾಂಗದ ಯಾವುದೇ ವ್ಯಕ್ತಿ ಅರಬನು ಅಲ್ಲದ ಯಾವುದೇ ವ್ಯಕ್ತಿಗಿಂತ ಶ್ರೇಷ್ಠರಲ್ಲ. ಬೆಳ್ಳಗಿರುವ ಯಾವುದೇ ವ್ಯಕ್ತಿ ಕರಿಯ ವ್ಯಕ್ತಿಗಿಂತ ಶ್ರೇಷ್ಠರಲ್ಲ. ಹಾಗೆಯೇ ಕಪ್ಪಗಿರುವ ಯಾವುದೇ ವ್ಯಕ್ತಿ ಬಿಳಿಯನಿಗಿಂತ ಶ್ರೇಷ್ಠನಲ್ಲ. ಶ್ರೇಷ್ಠತೆ ಏನಿದ್ದರೂ ಕೇವಲ ಧರ್ಮನಿಷ್ಠೆಯ ಆಧಾರದಲ್ಲಿ ಮಾತ್ರ. ನೀವೆಲ್ಲರೂ ಆದಮರ ಸಂತತಿಗಳು ಮತ್ತು ಆದಮ್ರನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ.”
ಇದು ಉಪದೇಶಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅದೇ ಸಮಯದಲ್ಲಿ ಮಕ್ಕಾ ನಗರದ ಪವಿತ್ರ ಕಅಬ ಮಸೀದಿ ಬಳಿ ಅವರ ಲಕ್ಷಾಂತರ ಅನುಯಾಯಿಗಳು ಸೇರಿದ್ದಾರೆ. ಅದರಲ್ಲಿ ಶ್ರೀಮಂತರು, ಮಹಾನ್ ಪಂಡಿತರು, ಅದ್ಭುತ ಕವಿಗಳು ಮತ್ತು ವೀರ ಸೇನಾ ನಾಯಕರಿದ್ದಾರೆ. ಆದರೆ ಪವಿತ್ರ ಕಾಬಾದ ಮೇಲೆ ಹತ್ತಿ ಮೊದಲ ಅದಾನ್ ಮೊಳಗಿಸಲು ಪ್ರವಾದಿ ಮುಹಮ್ಮದ್(ಸ) ಆದೇಶಿಸಿದ್ದು ಮಾತ್ರ ಆಫ್ರಿಕಾ ಮೂಲದ ಕಪ್ಪು ಬಣ್ಣದ ಬಿಲಾಲ್ರನ್ನು. ಇದು ನಿಜವಾಗಿ ನ್ಯಾಯ, ಸಮಾನತೆ ಮತ್ತು ಮಾನವೀಯ ಘನತೆಯ ಹೊಸ ಯುಗದ ಆರಂಭದ ಘೋಷಣೆಯಾಗಿತ್ತು.
ಮಹಿಳೆ ಮತ್ತು ಪುರುಷ ಸಮಾನತೆ
ಇನ್ನು ಸಮಾನತೆಯ ಚರ್ಚೆ ಬಂದಾಗಲೆಲ್ಲ ಉದಾರವಾದಿಗಳು ಮತ್ತು ಸ್ತ್ರೀವಾದಿಗಳು ಮಹಿಳೆ ಮತ್ತು ಪುರುಷ ಸಮಾನತೆಯ ಪ್ರಶ್ನೆಯನ್ನು ಮುನ್ನಲೆಗೆ ತರುತ್ತಾರೆ.
ಹೆಣ್ಣು ಮಗುವನ್ನು ಕೀಳೆಂದು ಪರಿಗಣಿಸಿ ಅವರನ್ನು ಜೀವಂತ ಹೂಳುತ್ತಿದ್ದ ಸಮಾಜದಲ್ಲಿ ಒಬ್ಬ ಮಹಿಳೆಯು ಮದೀನಾದ ಮಾರುಕಟ್ಟೆಯ ಮುಖ್ಯ ಅಧಿಕಾರಿಯಾಗುವಂತಹ ಕ್ರಾಂತಿಕಾರಿ ಬದಲಾವಣೆ ತಂದಿದ್ದು ಕುರ್ಆನ್ ಮೂಲಕ ಪ್ರವಾದಿ(ಸ) ನೀಡಿದ ಸಂದೇಶ.
ಅಲ್ಲಾಹನು ಪವಿತ್ರ ಕುರ್ಆನಿನಲ್ಲಿ ತುಂಬ ಸ್ಪಷ್ಟವಾಗಿ ಈ ರೀತಿ ಹೇಳಿದ್ದಾನೆ. “ಖಂಡಿತವಾಗಿ ನಾನು, ನಿಮ್ಮ ಪೈಕಿ ಯಾವುದೇ ಸತ್ಕರ್ಮಿ ಪುರುಷನ ಅಥವಾ ಸ್ತ್ರೀಯ ಕರ್ಮವನ್ನು ವ್ಯರ್ಥಗೊಳಿಸಲಾರೆ.” (ಪವಿತ್ರ ಕುರ್ಆನ್- 3:195)
ಇದಲ್ಲದೆ ಮನುಕುಲವು ಒಬ್ಬ ಸ್ತ್ರೀ ಮತ್ತು ಪುರುಷರಿಂದ ಸೃಷ್ಟಿಸಲ್ಪಟ್ಟಿದೆ ಎಂದು ಪವಿತ್ರ ಕುರ್ಆನ್ ಹಲವಾರು ಕಡೆ ಸ್ಪಷ್ಟವಾಗಿ ತಿಳಿಸಿದೆ.
ಇಸ್ಲಾಮಿನ ಪ್ರಕಾರ ಸ್ತ್ರೀ ಮತ್ತು ಪುರುಷರದು ಸಮಾನ ಮತ್ತು ಪರಸ್ಪರ ಅವಲಂಬಿತ ಸಂಬಂಧ. ಹೀಗಾಗಿ ಅವರು ಜವಾಬ್ದಾರಿ ಮತ್ತು ಹಕ್ಕುಗಳನ್ನು ಪರಸ್ಪರ ಹಂಚಿಕೊಳ್ಳಬೇಕೆಂದು ಉಪದೇಶಿಸಲಾಗಿದೆ.
ಮುಸ್ಲಿಮರಲ್ಲಿ ಜಾತಿ
ಇಸ್ಲಾಮಿನಲ್ಲಿ ಜಾತೀಯತೆಗೆ ಅವಕಾಶವಿಲ್ಲ ಎಂಬ ಮಾತು ಎಷ್ಟು ಸತ್ಯವೋ ಮುಸ್ಲಿಮರಲ್ಲಿ ಈ ಜಾತೀಯತೆಯ ಪಿಡುಗು ತೀರಾ ಸಣ್ಣ ಪ್ರಮಾಣದಲ್ಲಿ ಮತ್ತು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಇರುವುದೂ ಸಹ ಅಷ್ಟೇ ಸತ್ಯ. ಇದನ್ನು ಅಲ್ಲಗಳೆಯುವುದರಿಂದ ಇದಕ್ಕೆ ಪರಿಹಾರ ಸಿಗಲು ಸಾಧ್ಯವಿಲ್ಲ. ಭಾರತೀಯ ಉಪಖಂಡದ ಮುಸ್ಲಿಮರಲ್ಲಿ ಈ ರೋಗ ಹರಡಲು ಹಲವಾರು ರೀತಿಯ ಕಾರಣಗಳಿರಬಹುದು. ಇಲ್ಲಿ ಸಾವಿರಾರು ವರ್ಷಗಳಿಂದ ನೆಲೆಯೂರಿದ್ದ ಜಾತೀಯತೆಯ ಪ್ರಭಾವ, ರಾಜಕೀಯ, ಆರ್ಥಿಕ ಮತ್ತು ವರ್ಗಗಳ ಅಂತರ ಇತ್ಯಾದಿ.
ಹೀಗಾಗಿ ಭಾರತೀಯ ಮುಸ್ಲಿಮರಲ್ಲಿ ಜಾತೀಯತೆ ಮತ್ತು ವಂಶಗಳ ಆಧಾರದಲ್ಲಿ ಮೇಲು-ಕೀಳು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ವಿಶೇಷವಾಗಿ ಮದುವೆಯ ವಿಚಾರದಲ್ಲಿ `ಕಫಾಹ್’’ ಅಥವಾ `ಕಫು’ ಅಂದರೆ ಹೊಂದಾಣಿಕೆಯ ಹೆಸರಲ್ಲಿ ಜಾತಿ, ವರ್ಗ ಮತ್ತು ವಂಶಗಳ ತಾರತಮ್ಯ ಮಾಡಲಾಗುತ್ತಿದೆ.
ಕುರ್ಆನ್ ಮತ್ತು ಪ್ರವಾದಿ(ಸ)ರ ವಚನಗಳಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ, ಇಲ್ಲದಿದ್ದಲ್ಲಿ ಗುಲಾಮರಾಗಿದ್ದ ಬಿಲಾಲ್ ಮದೀನಾದ ಒಂದು ಗೌರವಾನ್ವಿತ ಕುಟುಂಬದ ಮಹಿಳೆಯನ್ನು ಮದುವೆಯಾಗಲು ಸಾಧ್ಯವಾಗುತ್ತಿರಲಿಲ್ಲ.
ನಿಮ್ಮ ಮೇಲೆ ಒಬ್ಬ ಕರಿಯ ಗುಲಾಮನನ್ನು ಸಹ ನಾಯಕನಾಗಿ ಮಾಡಿದಲ್ಲಿ ಅವನ ಆಜ್ಞೆ ಪಾಲಿಸುವಂತೆ ಪ್ರವಾದಿ(ಸ)ರು ಆದೇಶಿಸಿದ್ದಾರೆ.
ಅಂಬೇಡ್ಕರ್ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ಗಳಂತಹ ಹಲವಾರು ಮಹಾನ್ ನಾಯಕರ ಪ್ರಯತ್ನಗಳ ಫಲವಾಗಿ ಆಧುನಿಕ ಜಗತ್ತಿನಲ್ಲಿ ಅಸಮಾನತೆಯ ವಿರುದ್ದ ಪ್ರಬಲ ಕಾನೂನುಗಳು ಬಂದಿವೆ. ಆದರೂ ದಲಿತರು, ಅಲ್ಪಸಂಖ್ಯಾತರು ಮತ್ತು ಕರಿಯರ ಮೇಲೆ ದೌರ್ಜನ್ಯ ಹಾಗೂ ತಾರತಮ್ಯಗಳು ಮುಂದುವರಿದಿವೆ.
ಕೇವಲ ಕಾನೂನುಗಳಿಂದ ಸಮಾಜದಲ್ಲಿ ಸಮಾನತೆ ತರಲು ಸಾಧ್ಯವಿಲ್ಲ. ಜನರ ಮನಸ್ಸಲ್ಲಿ ಬೇರೂರಿರುವ ತಾನು ಮತ್ತು ತನ್ನ ಸಮುದಾಯ ಮೇಲು ಇತರರು ಕೀಳು ಎಂಬ ಕಲ್ಮಶ ಸ್ವಚ್ಛಗೊಳಿಸಬೇಕಾಗಿದೆ.
ನಮ್ಮ ಚರ್ಮದ ತೆಳುವಾದ ಪದರದ ಅಡಿಯಲ್ಲಿ ಎಲ್ಲಾ ಮನುಷ್ಯರು ಒಂದೇ. ನಾವೆಲ್ಲರೂ ಒಂದೇ ಮಾಂಸ, ರಕ್ತ ಮತ್ತು ಮೂಳೆಗಳಿಂದ ಮಾಡಲ್ಪಟ್ಟಿದ್ದೇವೆ. ಸತ್ತಾಗ ಕೊನೆಗೆ ಎಲ್ಲರೂ ಆಗುವುದು ಧೂಳು ಮಾತ್ರ. ಒಳ್ಳೆಯ ನಡತೆ ಮತ್ತು ಗುಣಗಳು ಮಾತ್ರ ಮನುಷ್ಯನನ್ನು ಶ್ರೇಷ್ಠವಾಗಿಸುತ್ತವೆ.
ಇದೇ ಸಂದೇಶವನ್ನು ಪವಿತ್ರ ಕುರ್ಆನ್ ಮನುಕುಲಕ್ಕೆ ನೀಡುತ್ತದೆ ಮತ್ತು ಅದನ್ನು ಕೇವಲ ಸಿದ್ಧಾಂತ ಮತ್ತು ಕಾನೂನಿಗೆ ಸೀಮಿತಗೊಳಿಸದೆ ಲಕ್ಷಾಂತರ ಜನರ ಸಮಾಜದಲ್ಲಿ ಜಾರಿಗೊಳಿಸಿ ತೋರಿಸಿದ್ದು ಪ್ರವಾದಿ ಮುಹಮ್ಮದ್(ಸ).
ಅದರ ಪರಿಣಾಮವೇ ಇಂದಿಗೂ ನಮಾಝ್ನಲ್ಲಿ ಎಲ್ಲಾ ತರಹದ ಜನರು ಸಮಾನವಾಗಿ ಅಲ್ಲಾಹನ ಮುಂದೆ ನಿಲ್ಲುತ್ತಾರೆ. ಹಜ್ನ ಸಮಯದಲ್ಲಿ ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಜನರು ಕೇವಲ ಎರಡು ಬಿಳಿ ಬಟ್ಟೆ ಧರಿಸಿ ಮಾನವ ಸಮಾನತೆಯ ಸಂದೇಶವನ್ನು ನೀಡುತ್ತಾರೆ.
ಇದನ್ನೇ ಸರೋಜಿನಿ ನಾಯ್ಡು ಅವರು ಹೀಗೆ ಹೇಳುತ್ತಾರೆ. “ಇಸ್ಲಾಮ್ ಪ್ರಜಾಪ್ರಭುತ್ವವನ್ನು ಭೋದಿಸಿ ಕಾರ್ಯರೂಪಕ್ಕೆ ತಂದ ಪ್ರಪ್ರಥಮ ಧರ್ಮವಾಗಿದೆ. ಮಸೀದಿಯಿಂದ ಪ್ರಾರ್ಥನೆಗೆ ಕರೆ ನೀಡುವಾಗ ಭಕ್ತರೆಲ್ಲರೂ ಸಾಲು ಸಾಲಾಗಿ ಸೇರಿ, ರೈತ ರಾಜನೆಂಬ ವ್ಯತ್ಯಾಸ ಇಲ್ಲದೆ ಭುಜಕ್ಕೆ ಭುಜ ಸೇರಿಸಿ, ದೇವನ ಮುಂದೆ ಸಾಷ್ಟಾಂಗವೆರಗುತ್ತಾ ‘ದೇವನೊಬ್ಬನೇ ದೊಡ್ಡವನು’ ಎನ್ನುವಾಗ ಇಸ್ಲಾಮಿನ ಪ್ರಜಾಪ್ರಭುತ್ವವು ದಿನನಿತ್ಯ ಐದು ಬಾರಿ ಪ್ರಕಟವಾಗುತ್ತದೆ. ಮನುಷ್ಯನನ್ನು ಜನ್ಮತಃ ಸಹೋದರನೆಂದು ಪರಿಗಣಿಸುವ ಇಸ್ಲಾಮಿನ ಅವಿಭಾಜ್ಯ ಐಕ್ಯತೆಯು ನನ್ನನ್ನು, ಪದೇ ಪದೇ ದಿಗ್ಭ್ರಮೆಗೊಳಿಸುತ್ತಿದೆ.
(Ideals of Islam, vide Speeches – Writings, Madras, 1918, p, 169)
IslamKannada News Portal
