Home / ಲೇಖನಗಳು / ಪವಿತ್ರ ಕುರ್‌ಆನ್ ಮತ್ತು ಧರ್ಮ ಸಹಿಷ್ಣುತೆ

ಪವಿತ್ರ ಕುರ್‌ಆನ್ ಮತ್ತು ಧರ್ಮ ಸಹಿಷ್ಣುತೆ

@ ಮುಷ್ತಾಕ್ ಹೆನ್ನಾಬೈಲ್
ಸಾಹಿತಿ, ಸಮಾಜ ಚಿಂತಕ

ಕುರ್‌ಆನಿನಲ್ಲಿ ಮುಸ್ಲಿಮೇತರರನ್ನು ದ್ವೇಷಿಸಿ ಮತ್ತು ಕೊಲ್ಲಿ ಎನ್ನುವ ವಾಕ್ಯಗಳಿವೆ ಎಂದು ಕೆಲವರು ದುರುದ್ದೇಶಪೂರಿತವಾಗಿ ಆರೋಪಿಸಿ ಅಪಪ್ರಚಾರ ಮಾಡುತ್ತಾರೆ. ಹೀಗೆ ಕೆಲವರು ಆರೋಪಿಸುವುದನ್ನು ಕನಿಷ್ಠ ಅಧ್ಯಯನ ಸಾಮರ್ಥ್ಯವಿಲ್ಲದ ಹಲವರು ನಂಬುತ್ತಾರೆ. ನಿಜವಾಗಿಯೂ ಪವಿತ್ರ ಕುರ್ ಆನಿನ ಪ್ರಾಥಮಿಕ ಅಧ್ಯಯನದಲ್ಲೇ ಅದರೊಳಗಿನ ಸಾಮರಸ್ಯವನ್ನು ಮತ್ತು ಮನುಕುಲದ ಬಗ್ಗೆ ಇರುವ ಸಮಷ್ಠಿತನವನ್ನು ಸುಲಭವಾಗಿ ಗುರುತಿಸಬಹುದು. ಗ್ರಂಥದೊಳಗಿನ ಆರಾಧನೆಗೆ ಸಂಬಂಧಪಟ್ಟ ಸೂಕ್ತಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಸೂಕ್ತಗಳು ಸಮಸ್ತ ಮನುಕುಲವನ್ನು ಸಂಬೋಧಿಸಿ ಇರುವಂತದ್ದು. ಗ್ರಂಥದಲ್ಲಿ ಮನುಕುಲದ ಸಂಬೋಧನೆಯೇ ಸಾಮರಸ್ಯದ ದೊಡ್ಡ ದೃಷ್ಟಾಂತ..

ಜಗತ್ತಿನ ಯಾವುದೇ ಧರ್ಮದ ಮತ್ತು ಕಾಲದ, ಯಾವುದೇ ಗ್ರಂಥದಲ್ಲಿ ಪವಿತ್ರ ಕುರ್‌ಆನಿನಲ್ಲಿರುವಷ್ಟು ಸಹಿಷ್ಣುತೆಯಿಂದ ಕೂಡಿದ ಸೂಕ್ತ ಮತ್ತು ಸೌಹಾರ್ದಕ್ಕೆ ಪ್ರೇರಕವಾಗುವ ಗುಣಗಳು ಇಲ್ಲ ಎನ್ನುವುದು ಅದನ್ನು ಓದುತ್ತಾ ಹೋದಂತೆ ಸುಲಭದಲ್ಲಿ ತಿಳಿಯುತ್ತದೆ. ಪವಿತ್ರ ಕುರ್‌ಆನ್ ಸಮಸ್ತ ಮನುಕುಲವನ್ನು ಒಂದು ಸಮುದಾಯ ಎಂದು ಗುರುತಿಸುತ್ತದೆ. ಇಂದು ಪ್ರತ್ಯೇಕವೆಂದು ಗುರುತಿಸಿಕೊಳ್ಳುವ ಯಹೂದಿ ಮತ್ತು ಕ್ರೈಸ್ತ ಸಮುದಾಯ ಗಳ ಪಾಲಿನ ದೇವದೂತರಾದ ಪ್ರವಾದಿ ಮೂಸಾ (ಮೊಸೆಸ್) ಹಾಗೂ ಪ್ರವಾದಿ ಈಸಾ(ಜಿಸಸ್)ರನ್ನು ಕುರ್‌ಆನ್ ಅತಿಹೆಚ್ಚು ಉಲ್ಲೇಖಗಳ ಮೂಲಕ ಗುರುತಿಸಿ ಗೌರವಿಸುತ್ತದೆ. ಇವರುಗಳ ಮೇಲೆ ನಂಬಿಕೆ ಇರಿಸದವರನ್ನು ಮುಸ್ಲಿಮರೇ ಅಲ್ಲ ಎಂದು ಸಾರುತ್ತದೆ.

ಪ್ರವಾದಿ ಈಸಾರ ತಾಯಿ ಮರ್ಯಮ್‌ರ ತ್ಯಾಗ, ಸಹನೆ ಮತ್ತು ಮಹಾನತೆಯನ್ನು ಗ್ರಂಥದ ಒಂದಿಡೀ ಅಧ್ಯಾಯವಾದ “ಸೂರ: ಮರ್ಯಮ್”ನಲ್ಲಿ ವಿವರಿಸಲಾಗಿದೆ. ಅನ್ಯ ಸಮುದಾಯಗಳ ಯಾವುದೇ ಕಾಲದ ಯಾವುದೇ ಗ್ರಂಥದಲ್ಲಿ ಇತರ ಸಮುದಾಯಗಳ ಮಹಾನರು ಅಥವಾ ವ್ಯಕ್ತಿತ್ವಗಳ ಕುರಿತು ಕುರ್‌ಆನ್‌ನಂತೆ ಗೌರವಿಸುವ ರೀತಿಯ ಉಲ್ಲೇಖಗಳು ಎಲ್ಲಿಯೂ ಕಂಡು ಬರುವುದಿಲ್ಲ. ಗ್ರಂಥದಲ್ಲಿ ಸಾಮರಸ್ಯಕ್ಕೆ ಇದಕ್ಕಿಂತ ಹೆಚ್ಚಿನ ದೃಢವಾದ ಸಾಕ್ಷ್ಯ ಇನ್ನೇನು ಬೇಕು?..

ಪವಿತ್ರ ಕುರ್‌ಆನಿನ ಆರಂಭಿಕ ಅಧ್ಯಾಯಗಳಲ್ಲಿ ಒಂದಾದ 2 ನೇ ಅಧ್ಯಾಯ “ಅಲ್ ಬಕರ:”ದ ಸೂಕ್ತ ಸಂಖ್ಯೆ 256ರಲ್ಲಿ” ಧರ್ಮದಲ್ಲಿ ಬಲವಂತವಿಲ್ಲ” ಎಂಬ ಸ್ಪಷ್ಟ ಉಲ್ಲೇಖ ಇದೆ. 3ನೇ ಅಧ್ಯಾಯ “ಆಲಿ ಇಮ್ರಾನ್”ನಲ್ಲಿನ 3ನೇ ಸೂಕ್ತದಲ್ಲಿ” ಅವನು (ಅಲ್ಲಾಹನು) ನಿಮಗೆ ಈ ಗ್ರಂಥವನ್ನು ಸತ್ಯದೊಂದಿಗೆ ಇಳಿಸಿಕೊಟ್ಟಿರುವನು. ಇದು ತನ್ನ ಹಿಂದಿನವುಗಳನ್ನು (ಗತಕಾಲದ ಇತರ ದಿವ್ಯ ಗ್ರಂಥಗಳನ್ನು) ಸಮರ್ಥಿಸುತ್ತದೆ” ಎಂದಿದೆ. ಇದೇ ಅಧ್ಯಾಯದ 119ನೇ ಸೂಕ್ತದಲ್ಲಿ” ನೀವು (ಮುಸ್ಲಿಮರು) ಎಂಥವರೆಂದರೆ, ಅವರು(ಮುಸ್ಲಿಮೇತರರು) ನಿಮ್ಮನ್ನು ಪ್ರೀತಿಸುವುದಿಲ್ಲವಾದರೂ ನೀವು ಅವರನ್ನು ಪ್ರೀತಿಸುತ್ತೀರಿ ಮತ್ತು ನೀವು ಎಲ್ಲ ಗ್ರಂಥಗಳಲ್ಲಿ ನಂಬಿಕೆ ಇಡುತ್ತೀರಿ” ಎಂಬ ವಚನವಿದೆ.
ಕುರ್‌ಆನಿನ ಅಧ್ಯಾಯ 5 “ಅಲ್ ಮಾಇದ: “ದಲ್ಲಿನ 8ನೇ ಸೂಕ್ತದಲ್ಲಿ” ಒಂದು ಜನಾಂಗದ ಮೇಲಿನ ಹಗೆತನವೂ ನಿಮ್ಮನ್ನು ನ್ಯಾಯ ಪಾಲಿಸದೆ ಇರಲು ಪ್ರಚೋದಿಸಬಾರದು. ನೀವು ಸದಾ ನ್ಯಾಯವನ್ನೇ ಪಾಲಿಸಿರಿ” ಎಂದಿದೆ. ಅಧ್ಯಾಯ 6″ಅಲ್ ಅ ನ್‌ಅಮ್”ನ 108ನೇ ಸೂಕ್ತದಲ್ಲಿ” ಜನರು ಅಲ್ಲಾಹನ ಹೊರತು ಯಾರನ್ನೆಲ್ಲಾ ಪ್ರಾರ್ಥಿಸುತ್ತಾರೋ ಅವರನ್ನು ಮೂದಲಿಸಬೇಡಿ” ಎಂದು ದೇವನು ಆದೇಶಿಸುತ್ತಾನೆ. ಪರಧರ್ಮ ಸಹಿಷ್ಣುತೆ, ಸಮುದಾಯಗಳ ಕುರಿತ ಸಂಯಮ ಮತ್ತು ಸೌಹಾರ್ದಕ್ಕೆ ಪೂರಕವಾಗುವ ಈ ಮೇಲಿನ ಎಲ್ಲ ಉಲ್ಲೇಖಗಳು ಪವಿತ್ರ ಕುರ್‌ಆನಿನ ಆರಂಭಿಕ 6 ಅಧ್ಯಾಯಗಳದ್ದು ಮಾತ್ರವಾಗಿದೆ..

ಗ್ರಂಥದಲ್ಲಿ ಒಟ್ಟು ಹೀಗಿನ 114 ಅಧ್ಯಾಯಗಳಿವೆ. ಮುಂದಿನ ಎಲ್ಲ ಅಧ್ಯಾಯಗಳ ಹೆಚ್ಚಿನ ಉಲ್ಲೇಖಗಳಲ್ಲಿ ಇಂತಹ ಸೌಹಾರ್ದಕ್ಕೆ ಪೂರಕವಾದ ಸೂಕ್ತಗಳು ಹೇರಳವಾಗಿ ಕಂಡು ಬರುತ್ತವೆ. ಸಮುದಾಯಗಳ ನಡುವಿನ ಸಾಮರಸ್ಯದ ಕುರಿತು ಗ್ರಂಥದ ಉಲ್ಲೇಖಗಳು ಹೀಗೆ ನೇರ ಮತ್ತು ಸ್ಪಷ್ಟ ಇರುವಾಗ ಸಾಮರಸ್ಯ ಇಲ್ಲ ಎಂದು ಹೇಳುವುದು ಒಂದು ಬೌದ್ಧಿಕ ಕುರುಡುತನ…

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …