@ ಬಿ.ಎಸ್. ಶರ್ಫುದ್ದೀನ್
ಪ್ರಾಂಶುಪಾಲರು, ಬರಕಾ ಇಂಟರ್ನ್ಯಾಶನಲ್
ಕಾಲೇಜು, ಮಂಗಳೂರು
ಧರ್ಮ ಎಂದರೆ ಲೋಕ ಪರಿತ್ಯಾಗ, ಆರ್ಥಿಕತೆಯ ಬಗ್ಗೆ ಆಲೋಚನೆ ಮಾಡದಿರುವುದು ಮತ್ತು ಸನ್ಯಾಸಿಯಂತೆ ಬದುಕುವುದು ಎಂಬ ಕಲ್ಪನೆಯನ್ನು ಇಸ್ಲಾಮ್ ಪ್ರತಿಪಾದಿಸುವುದಿಲ್ಲ. ಪವಿತ್ರ ಕುರ್ಆನ್ ಮತ್ತು ಪ್ರವಾದಿ ಮುಹಮ್ಮದ್ ರವರ(ಸ) ಬೋಧನೆಗಳನ್ನು ನೋಡಿದಾಗ ಲೋಕ ಮತ್ತು ಪರಲೋಕದ ಯಶಸ್ಸಿಗೆ ಸದಾ ಶ್ರಮಿಸುವುದೇ ಇಸ್ಲಾಮಿನ ಜೀವಾಳ ಎಂದು ನಮಗೆ ವ್ಯಕ್ತವಾಗುತ್ತದೆ.
ಇಸ್ಲಾಮಿನ ಪಂಚಸ್ತಂಭಗಳಾದ ಸತ್ಯ ಸಾಕ್ಷ್ಯ, ನಮಾಝ್, ಝಕಾತ್ ಅಥವಾ ಕಡ್ಡಾಯ ದಾನ, ಉಪವಾಸ ವ್ರತ ಮತ್ತು ಹಜ್ ಗಳಲ್ಲಿ ಎರಡು ಸ್ತಂಭಗಳು ಆರ್ಥಿಕತೆಗೆ ಸಂಬಂಧಿಸಿದ್ದಾಗಿದೆ. ಅದುವೇ ಝಕಾತ್ ಮತ್ತು ಹಜ್. ಅಂದರೆ ಇಸ್ಲಾಮಿನ ಮೂಲಭೂತ ಅಂಶಗಳಲ್ಲಿ 40 ಶೇಕಡಾ ಆರ್ಥಿಕತೆಗೆ ಸಂಬಂಧಿಸಿದ ವಿಷಯವಾಗಿದೆ.
ಇಸ್ಲಾಮಿನ ಎಲ್ಲಾ ಪಂಚಸ್ತಂಭಗಳನ್ನು ಈಡೇರಿಸಿದ ವ್ಯಕ್ತಿಯಾಗಬೇಕಾದರೆ ಒಬ್ಬ ಝಕಾತ್ ಕೊಡುವವನಾಗಿರಬೇಕು ಮತ್ತು ಹಜ್ಗೆ ಹೋದವನಾಗಿರಬೇಕು. ಝಕಾತ್ ಮತ್ತು ಹಜ್ ಆರ್ಥಿಕ ಸುಸ್ಥಿರತೆ ಇರುವವರ ಮೇಲೆ ಮಾತ್ರ ಕಡ್ಡಾಯ. ಝಕಾತ್ ಕೊಡುವ ಮತ್ತು ಹಜ್ ನಿರ್ವಹಿಸುವ ಬಗ್ಗೆ ಪವಿತ್ರ ಕುರ್ಆನ್ನಲ್ಲಿ ಬಹಳ ಒತ್ತುಕೊಟ್ಟು ಆದೇಶಿಸಲಾಗಿದೆ. ಯಾವುದಾದರೂ ಅನಿವಾರ್ಯ ಕಾರಣಗಳಿಂದ ಬಡವನಾದರೆ ಅವನಿಗೆ ಝಕಾತ್ ಮತ್ತು ಹಜ್ನಿಂದ ವಿನಾಯಿತಿ ಇದೆ ಮತ್ತು ಅವನ ಅನುಸರಣೆ ಅಲ್ಲಾಹನ ದೃಷ್ಟಿಯಲ್ಲಿ ಪರಿಪೂರ್ಣವಾದುದಾಗಿದೆ. ಆದರೆ ಪ್ರವಾದಿ ಮುಹಮ್ಮದ್(ಸ) “ಮೇಲಿನ ಕೈ (ಕೊಡುವ ಕೈ) ಕೆಳಗಿನ ಕೈ(ಪಡೆಯುವ ಕೈ)ಗಿಂತ ಉತ್ತಮವಾದುದು” ಎಂದು ಹೇಳುವ ಮೂಲಕ ಸದಾ ತನ್ನ ಅಗತ್ಯಗಳನ್ನು ಈಡೇರಿಸಿ, ಇತರರ ಅಗತ್ಯಗಳ ಬಗ್ಗೆ ಸ್ಪಂದಿಸುವಂತಹ ವ್ಯಕ್ತಿಗಳಾಗುವುದೇ ಇಸ್ಲಾಮಿನ ಬೇಡಿಕೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಹಜ್ ನಿರ್ವಹಿಸಬೇಕಾದರೂ ಪ್ರವಾಸ, ವಾಸ್ತವ್ಯ, ತನ್ನ ಅನುಪಸ್ಥಿತಿಯಲ್ಲಿ ಕುಟುಂಬಸ್ಥರ ವೆಚ್ಚ ಇತ್ಯಾದಿಗಳು ಪೂರ್ಣಗೊಳ್ಳುವಂತಹ ಆರ್ಥಿಕ ಸುಸ್ಥಿತಿ ಇರಬೇಕು. ಹಜ್ನಂತಹ ಶುದ್ಧ ಆಧ್ಯಾತ್ಮಿಕ ಆರಾಧನಾ ಕರ್ಮದ ಸಂದರ್ಭದಲ್ಲೂ ಆರ್ಥಿಕ ಅಗತ್ಯಗಳಿಗಾಗಿ ವ್ಯಾಪಾರ ಮಾಡುವುದಕ್ಕೆ ಅನುಮತಿ ಇದೆ. “ನೀವು (ಹಜ್ ಯಾತ್ರೆಯ ವೇಳೆ) ನಿಮ್ಮೊಡೆಯನ ಅನುಗ್ರಹವನ್ನು ಹುಡುಕುವುದು (ಆರ್ಥಿಕ ಚಟುವಟಿಕೆಯಲ್ಲಿ ತೊಡಗುವುದು) ತಪ್ಪಲ್ಲ.” (ಪವಿತ್ರ ಕುರ್ಆನ್- 2: 197) ಈ ಮೂಲಕ ಆರ್ಥಿಕ ಸಬಲೀಕರಣಕ್ಕೆ ಕುರ್ಆನ್ ಎಷ್ಟು ಮಹತ್ವ ಕಲ್ಪಿಸುತ್ತದೆ ಎಂದು ಅರ್ಥವಾಗುತ್ತದೆ.
ಪ್ರವಾದಿ ಮುಹಮ್ಮದ್(ಸ) ತಮ್ಮ ಪ್ರಥಮ ಹಜ್ನ ಸಂದರ್ಭದಲ್ಲಿ ನೂರು ಒಂಟೆಗಳನ್ನು ಕೊಯ್ದು ಅದರ ಮಾಂಸ ವಿತರಣೆಯ ವ್ಯವಸ್ಥೆ ಮಾಡಿದಷ್ಟು ಆ ಕಾಲದಲ್ಲಿ ಮಾಂಸ ವಿತರಣೆ ಎಂದರೆ ಜನರಿಗೆ ಮಾಡುವ ದೊಡ್ಡ ಉಪಕಾರವಾಗಿತ್ತು. ನೂರು ಒಂಟೆಗಳು ಎಂದರೆ ಬಹಳ ದೊಡ್ಡ ಸಂಖ್ಯೆಯಾಗಿತ್ತು. ಪ್ರವಾದಿವರ್ಯರು(ಸ) ಆ ಮೂಲಕ ಸ್ವತಃ ಆರ್ಥಿಕ ಸುಸ್ಥಿರತೆ ಮತ್ತು ಸಬಲೀಕರಣದ ಉದಾಹರಣೆಯ ಮುಂದಿಟ್ಟಿದ್ದರು.
ಖರ್ಚು ಮಾಡುವಾಗ ಸದಾ ತನ್ನ ಇತಿಮಿತಿಗಳನ್ನು ಅರಿತು ಸಂತುಲನೆಯೊಂದಿಗೆ ಖರ್ಚು ಮಾಡಬೇಕೆಂದು ಪವಿತ್ರ ಕುರ್ಆನ್ ಹೇಳುತ್ತದೆ, “ಅವರು ಖರ್ಚು ಮಾಡುವಾಗ ದುಂದು ವ್ಯಯ ಮಾಡುವುದಿಲ್ಲ. ಜಿಪುಣತೆಯನ್ನೂ ತೋರುವುದಿಲ್ಲ. ಅವೆರಡರ ನಡುವಿನ ಸಂತುಲಿತ ಮಾರ್ಗವನ್ನು ಪಾಲಿಸುತ್ತಾರೆ.” (ಪವಿತ್ರ ಕುರ್ಆನ್- 25: 67) ತನ್ನ ಆರ್ಥಿಕ ಸ್ಥಿತಿಯ ಸರಿಯಾದ ಜ್ಞಾನ ಮತ್ತು ಯಾವುದಕ್ಕೆ ಎಷ್ಟು ಖರ್ಚು ಮಾಡಬಹುದು ಎಂಬ ಯೋಜನೆ ಹಾಗೂ ಭವಿಷ್ಯದ ಖರ್ಚು ಎಲ್ಲವನ್ನೂ ಲೆಕ್ಕ ಹಾಕಿ ಖರ್ಚು ಮಾಡಬೇಕು ಎಂಬ ಈ ತಾಕೀತು ಕೂಡ ಇಸ್ಲಾಮ್ ಆರ್ಥಿಕ ಸಬಲೀಕರಣಕ್ಕೆ ಎಷ್ಟು ಮಹತ್ವ ಕಲ್ಪಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
ಝಕಾತ್ ಅಥವಾ ಸಿರಿವಂತರು ತಮ್ಮ ಆದಾಯ ಮತ್ತು ಉಳಿತಾಯದಲ್ಲಿ ಕೊಡಬೇಕಾದ ಕಡ್ಡಾಯ ದಾನವನ್ನು ಯಾರಿಗೆ ಕೊಡಬೇಕು ಎಂದು ಕುರ್ಆನ್ ಸ್ಪಷ್ಟವಾಗಿ ಆದೇಶ ಕೊಟ್ಟಿದೆ. ಉದಾಹರಣೆಗೆ ಮಸೀದಿ ನಿರ್ಮಾಣದಂತಹ ಅಪ್ಪಟ ಧಾರ್ಮಿಕ ಕಾರ್ಯಕ್ಕೆ ಝಕಾತ್ನ ಹಣವನ್ನು ಖರ್ಚು ಮಾಡುವಂತಿಲ್ಲ. ಝಕಾತ್ನ ಹಣದ ದಾನದ ಮೂಲಕ ಆರ್ಥಿಕ ಸಬಲೀಕರಣ ಮತ್ತು ಬಡತನ ನಿರ್ಮೂಲಕ್ಕೆ ವ್ಯವಸ್ಥೆ ಮಾಡಲಾಗಿದೆ. ಝಕಾತ್ ಹಣವನ್ನು ವಿನಿಯೋಗಿಸುವಾಗ ಬಡವರು, ಆಪೇಕ್ಷಿತರು, ಗುಲಾಮರು (ಜೀತದಾಳುಗಳ ಅಸ್ತಿತ್ವ ಲೋಕದಲ್ಲಿ ಈಗಲೂ ಕೆಲವೆಡೆ ಇದೆ ಎಂಬುದು ಗಮನಾರ್ಹ), ಸಾಲ ಬಾಧೆಗೆ ತುತ್ತಾದವರು, ತೊಂದರೆಗಳಿಗೊಳೊಗಾಗಿರುವ ಯಾತ್ರಿಕರು ಮುಂತಾದ ವ್ಯಯಗಳಿಗೆ ಮಾತ್ರ ವಿನಿಯೋಗವಾಗುವಂತೆ ಎಚ್ಚರಿಕೆ ವಹಿಸುವಂತೆ ಕುರ್ಆನ್ ಆದೇಶಿಸುತ್ತದೆ. (ಪವಿತ್ರ ಕುರ್ಆನ್- 9: 60)
ಝಕಾತ್ನ ಸಂಗ್ರಹ ಮತ್ತು ವಿತರಣೆಯ ಉತ್ತಮ ವ್ಯವಸ್ಥೆ ಜಾರಿಗೆ ಬಂದರೆ ಆರ್ಥಿಕ ಸಬಲೀ ಕರಣ ಮತ್ತು ಬಡತನ ನಿರ್ಮೂಲನ ಸಾಧ್ಯವಾಗುತ್ತದೆ ಎಂಬುದಕ್ಕೆ ಇಸ್ಲಾಮಿನ ಇತಿಹಾಸವೇ ಸಾಕ್ಷಿ. ಇಸ್ಲಾಮಿನ ಆಡಳಿತ ಕಾಲದಲ್ಲಿ ಝಕಾತ್ನ ಸಂಗ್ರಹ ಮತ್ತು ವಿತರಣೆಯ ಮೂಲಕ ಸಂಪೂರ್ಣ ಬಡತನ ನಿರ್ಮೂಲನವಾದ ಹಲವು ಸುಂದರ ಉದಾಹರಣೆಗಳನ್ನು ಕಾಣಬಹುದಾಗಿದೆ.
ಕುರ್ಆನ್ನಲ್ಲಿ ಬಂದಿರುವ ಅತ್ಯಂತ ದೀರ್ಘವಾದ ಸೂಕ್ತ (2: 282) ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ನಿಯಮಗಳ ಕುರಿತಾಗಿದೆ. ಅದರಲ್ಲೂ ಮುಖ್ಯವಾಗಿ ಸಾಲವನ್ನು ಕೊಡುವಾಗ ಯಾವ ರೀತಿ ಬರೆದಿಡುವುದು ಮತ್ತು ಅದರಿಂದಾಗಿ ಯಾವುದೇ ರೀತಿಯ ವಿವಾದ ಮತ್ತು ಸಾಮಾಜಿಕ ಸಮಸ್ಯೆಗಳು ಉಂಟಾಗದಂತೆ ಶಿಷ್ಟಾಚಾರಗಳನ್ನು ಪಾಲಿಸುವುದು ಮುಖ್ಯ ಎಂಬುದನ್ನು ಸೂಚಿಸುತ್ತದೆ. ಸಾಮಾಜಿಕ ಜೀವನದಲ್ಲಿ ಇತರರೊಂದಿಗೆ ಆರ್ಥಿಕ ವ್ಯವಹಾರ ನಡೆಸುವಾಗ ಸದಾ ನ್ಯಾಯವನ್ನು ಪಾಲಿಸಬೇಕೆಂದು ಕುರ್ಆನ್ ಹೇಳುತ್ತದೆ. “ವಿಶ್ವಾಸಿಗಳೇ! ನೀವು ಪರಸ್ಪರರ ಸಂಪತ್ತನ್ನು ಅಕ್ರಮ ವಿಧಾನಗಳಿಂದ ಕಬಳಿಸಬೇಡಿರಿ. ಪರಸ್ಪರ ಒಪ್ಪಿಗೆಯಿಂದ ವ್ಯವಹಾರ ನಡೆಸಿ ಆದಾಯ ಸಂಪಾದಿಸುವುದು ತಪ್ಪಲ್ಲ. (4: 29)
ಸಿಂಧುವಾದ ಮಾರ್ಗದ ಮೂಲಕ ಸಂಪತ್ತನ್ನು ಸಂಪಾದಿಸುವುದು ಮತ್ತು ಮಾನವರ, ಕುಟುಂಬಸ್ಥರ ಮತ್ತು ಹತ್ತಿರದ ಸಂಬಂಧಿಕರ ಅಗತ್ಯಗಳಿಗಾಗಿ ಉದಾರ ಮನಸ್ಸಿನಿಂದ ಖರ್ಚು ಮಾಡಲು ಪ್ರೇರೇಪಿಸುವಂತಹ ಹಲವಾರು ಸೂಕ್ತಗಳು ಪವಿತ್ರ ಕುರ್ಆನ್ನಲ್ಲಿದೆ. ಆದರೆ ಲೋಕಪ್ರಿಯತೆ ಮತ್ತು ಭೌತಿಕವಾದದಿಂದ ದೂರವಿದ್ದು ತನಗಾಗಿಯೂ, ಇತರರಿಗಾಗಿಯೂ ಕಷ್ಟ ಪಟ್ಟು ಸಂಪಾದಿಸುವುದು ಇಸ್ಲಾಮಿನ ಶಿಷ್ಟಾಚಾರವಾಗಿದೆ ಎಂದು ಇಸ್ಲಾಮಿನ ಅಧ್ಯಯನದಿಂದ ನಮಗೆ ವ್ಯಕ್ತವಾಗುತ್ತದೆ.
ಶುಕ್ರವಾರದಂದು ನಮಾಝಿನ ಸಮಯವಾದಾಗ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ನಿಲ್ಲಿಸಿ ಮಸೀದಿಯೆಡೆಗೆ ಧಾವಿಸಿರಿ. ಆದರೆ ಪ್ರಾರ್ಥನೆ ಮುಗಿದ ಬಳಿಕ ಮತ್ತೆ ಆರ್ಥಿಕ ಚಟುವಟಿಕೆಗಳಲ್ಲಿ ತಲ್ಲೀನರಾಗಿರಿ ಎಂದು ಪವಿತ್ರ ಕುರ್ಆನ್ ಹೇಳುತ್ತದೆ. ಈ ಮೂಲಕ ಲೌಕಿಕ ಮತ್ತು ಪಾರಮಾರ್ಥಿಕ ಜೀವನದ ನಡುವೆ ಸುಂದರವಾದ ಸಂತುಲನೆಯನ್ನು ಪಾಲಿಸುವಂತಹ ಆದೇಶವನ್ನು ಇಸ್ಲಾಮ್ ನಮಗೆ ಕೊಡುತ್ತದೆ.
“ವಿಶ್ವಾಸಿಗಳೇ! ಶುಕ್ರವಾರದ ದಿನ ನಿಮ್ಮನ್ನು ನಮಾಝಿಗೆ ಕರೆಯಲಾದಾಗ ಅಲ್ಲಾಹನ ಸ್ಮರಣೆಯೆಡೆಗೆ ಧಾವಿಸಿರಿ ಮತ್ತು ಇತರೆಲ್ಲಾ ವ್ಯವಹಾರಗಳನ್ನು ಬಿಟ್ಟು ಬಿಡಿರಿ. ನೀವು ಅರಿಯುವವನಾಗಿದ್ದರೆ ನಿಮ್ಮ ಪಾಲಿಗೆ ಇದುವೇ ಉತ್ತಮ. ನೀವು ನಮಾಝನ್ನು ಮುಗಿಸಿದ ಬಳಿಕ ಭೂಮಿಯಲ್ಲಿ ಚದುರಿರಿ ಹಾಗೂ ಅಲ್ಲಾಹನ ಅನುಗ್ರಹವನ್ನು ಹುಡುಕಿರಿ. (ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರಿ) ಮತ್ತು ಅಲ್ಲಾಹನನ್ನು ಹೆಚ್ಚು ಹೆಚ್ಚು ಸ್ಮರಿಸಿರಿ. ನೀವು ವಿಜಯಿಗಳಾಗಬಹುದು.” (62: 9-10)
ಹಣದ ಬಗ್ಗೆ ಅಪಾರವಾದ ಮೋಹ ಮಾನವ ಸಹಜವಾದ ದೌರ್ಬಲ್ಯವಾಗಿದೆ. ಇಸ್ಲಾಮ್ ಈ ದೌರ್ಬಲ್ಯವನ್ನು ಅಳಿಸ ಹಾಕಬಯಸುತ್ತದೆ. ಅದೇವೇಳೆ ತನ್ನ ಮತ್ತು ಸಹಜೀವಿಗಳ ಪ್ರಯೋಜನಕ್ಕೆ ಸಿಂಧುವಾದ ಮತ್ತು ನ್ಯಾಯ ಸಮ್ಮತವಾದ ಮಾರ್ಗದಿಂದ ಎಷ್ಟು ಬೇಕಾದರೂ ಸಂಪತ್ತನ್ನು ಸಂಪಾದಿಸಲು ಇಸ್ಲಾಮ್ ಅನುಮತಿ ಕೊಡುತ್ತದೆ. ಅದೇವೇಳೆ ದಾನ ಮಾಡುವುದಕ್ಕೆ ಇಸ್ಲಾಮಿನಲ್ಲಿ ಅತೀ ಹೆಚ್ಚು ಮಹತ್ವ ಇದೆ. ದಾನ ಮಾಡುವುದನ್ನು `ಅಲ್ಲಾಹನಿಗೆ ಕೊಡುವ ಸಾಲ’ ಎಂದು ಕುರ್ಆನ್ ಕರೆಯುತ್ತದೆ. ಇದ್ದುದರಲ್ಲಿ ಸಂತೃಪ್ತಿ ಪಟ್ಟು, ಹೆಚ್ಚು ಸಂಪಾದಿಸಲು ಶ್ರಮಿಸಿ, ಯಾರಿಗೂ ಹೊರೆಯಾಗದೆ ಮಾನವೊಪಕಾರಿಯಾಗಿ ಬದುಕಬೇಕೆಂಬುದು ಕುರ್ಆನ್ ಕಲಿಸುವ ಆರ್ಥಿಕ ಶಿಷ್ಟಾಚಾರವಾಗಿದೆ.
IslamKannada News Portal
