Home / ಲೇಖನಗಳು / ಪ್ರವಾದಿ ಇಬ್ರಾಹೀಮ್‌ರ(ಅ) ಸಂದೇಶ ಪ್ರಚಾರ

ಪ್ರವಾದಿ ಇಬ್ರಾಹೀಮ್‌ರ(ಅ) ಸಂದೇಶ ಪ್ರಚಾರ

ಮುಖ್ತಾರ್ ಅಹ್ಮದ್, ಪಾಣೆಮಂಗಳೂರು

“ಈ ಗ್ರಂಥದಲ್ಲಿ ಇಬ್ರಾಹೀಮರ ಬಗ್ಗೆ ಪ್ರಸ್ತಾಪಿಸಿರಿ. ನಿಶ್ಚಯವಾಗಿಯೂ ಅವರೊಬ್ಬ ಸತ್ಯಸಂಧರೂ ಪ್ರವಾದಿಯೂ ಆಗಿದ್ದರು. ಅವರು ತಮ್ಮ ತಂದೆಯೊಡನೆ, “ಅಪ್ಪಾ, ಆಲಿಸಲಾಗದ, ನೋಡಲಾಗದ ಮತ್ತು ತಮ್ಮ ಯಾವ ಕೆಲಸಕ್ಕೂ ಬಾರದ ವಸ್ತುಗಳನ್ನು ತಾವೇಕೆ ಆರಾಧಿಸುತ್ತೀರಿ? ಅಪ್ಪಾ, ತಮಗೆ ಬಂದಿರದ ಜ್ಞಾನವೊಂದು ನನಗೆ ಬಂದಿದೆ. ತಾವು ನನ್ನನ್ನು ಅನುಸರಿಸಿರಿ. ನಾನು ತಮಗೆ ನೇರ ಮಾರ್ಗವನ್ನು ತೋರಿಸುವೆನು. ಅಪ್ಪಾ, ತಾವು ಶೈತಾನನ ದಾಸ್ಯ-ಆರಾಧನೆ ಮಾಡಬೇಡಿರಿ. ಶೈತಾನನು ರಹ್ಮಾನನ ಆಜ್ಞೆÆÃಲ್ಲಂಘಕನು. ಅಪ್ಪಾ, ತಾವು ರಹ್ಮಾನನ ಶಿಕ್ಷೆಗೆ ಗುರಿಯಾಗಿ ಬಿಡುವಿರಿ ಎಂಬ ಭಯ ನನಗಿದೆ” ಎಂದು ಹೇಳಿದರು. ಆಗ ತಂದೆಯು, “ಇಬ್ರಾಹೀಮ್, ನೀನೇನು ನನ್ನ ಆರಾಧ್ಯರಿಂದ ವಿಮುಖನಾದೆಯಾ? ನೀನು (ಈನೀತಿಯನ್ನು) ಕೈ ಬಿಡದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಕೊಂದು ಹಾಕುವೆನು. ನೀನು ನನ್ನಿಂದ ಶಾಶ್ವತವಾಗಿ ತೊಲಗಿಬಿಡು” ಎಂದನು. (ಅಧ್ಯಾಯ ಮರ್ಯಮ್: 41-46)

ಇಬ್ರಾಹೀಮ್(ಅ)ರ ಜನನ ಬೈಬಲ್ ಪ್ರಕಾರ ಕ್ರಿಸ್ತ ಪೂರ್ವ 2166ರಲ್ಲಿ ಆಗಿತ್ತು. ಅವರು ಹೆಸರಾಂತ ಮನೆತನದಲ್ಲಿ ಹುಟ್ಟಿದ್ದರು. ಅವರ ತಂದೆಯ ಹೆಸರು ತಾರಿಹ್ ಎಂದು ಹೇಳಲಾಗುತ್ತದೆ. ಆಝರ್ ಅವರ ದೊಡ್ಡಪ್ಪನಾಗಿದ್ದ. ಪ್ರವಾದಿಗಳ ತಂದೆ ಮುಶ್ರಿಕರು (ಬಹುದೇವ ವಿಶ್ವಾಸಿಗಳು) ಆಗಿರುವುದಿಲ್ಲ. (ಇದು ವಿದ್ವಾಂಸರ ಮಧ್ಯೆ ಚರ್ಚಾ ವಿಷಯ).

ಅರಬಿ ಭಾಷೆಯಲ್ಲಿ ‘ಅಬೀ’ ಎಂಬ ಪದಕ್ಕೆ ಅಪ್ಪ, ತಾತ, ಅಜ್ಜ, ದೊಡ್ಡಪ್ಪರಿಗೆಲ್ಲ ಬಳಸಲಾಗುತ್ತದೆ. ಇಲ್ಲಿ ಆಝರ್ ಇಬ್ರಾಹೀಮರ ಜೈವಿಕ ತಂದೆಯಲ್ಲ. ಆತ ವಿಗ್ರಹಗಳನ್ನು ಕೆತ್ತನೆ ಮಾಡುತ್ತಿದ್ದ. ಅದರ ಆರಾಧಕನಾಗಿದ್ದ. ಪ್ರಧಾನ ಪುರೋಹಿತನೂ ಆಗಿದ್ದ. ಸುಮಾರು 14-15 ವರ್ಷ ವಯಸ್ಸಿನಲ್ಲಿ ಹ. ಇಬ್ರಾಹೀಮರಿಗೆ ಪ್ರವಾದಿತ್ವ ಲಭಿಸಿತ್ತು ಎಂದು ಹೇಳಲಾಗುತ್ತದೆ. ಚಿಕ್ಕ ಪ್ರಾಯದಲ್ಲಿ ಅವರನ್ನು ಸಂದೇಶವಾಹಕರನ್ನಾಗಿ
ಮಾಡಲಾಗಿತ್ತು. ಜನರು ಜಾತ್ರೆಯಿಂದ ಊರಿಗೆ ಮರಳಿ ಬಂದಾಗ “ವಿಗ್ರಹಗಳ ವಿರುದ್ಧ ಒಬ್ಬ ಯುವಕ ಮಾತನಾಡುತ್ತಿದ್ದ” ಎಂದು ಹೇಳಿದರು.

ಕುರ್‌ಆನ್ ಹೇಳುತ್ತದೆ, ಅವರು ತೌಹೀದ್ (ಏಕದೇವ ವಿಶ್ವಾಸದ) ಆಹ್ವಾನವನ್ನು ತನ್ನ ಮನೆಯಲ್ಲಿ ದೊಡ್ಡಪ್ಪನಿಂದ ಆರಂಭಿಸಿದರು. ಇಬ್ರಾಹೀಮ್ ತನ್ನ ತಂದೆ ಆಝರ್‌ನೊಡನೆ, “ನೀವು ವಿಗ್ರಹಗಳನ್ನು ದೇವರನ್ನಾಗಿ ಮಾಡುತ್ತೀರಾ? ನಾನಂತು ನಿಮ್ಮನ್ನೂ ನಮ್ಮ ಜನಾಂಗವನ್ನೂ ವ್ಯಕ್ತವಾದ ಪಥಭ್ರಷ್ಟತೆಯಲ್ಲಿ ಕಾಣುತ್ತಿರುವೆನು” ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ.

ಇಬ್ರಾಹೀಮರಿಗೆ ನಹೂರ್ ಮತ್ತು ರ‍್ರಾನ್ ಎಂಬ ಇಬ್ಬರು ಸಹೋದರರಿದ್ದರು. ಅವರಿಗೂ ಆಹ್ವಾನ ನೀಡಿದರು. ಅವರಿಬ್ಬರೂ ತೌಹೀದ್‌ನ ದಾವತನ್ನು ತಿರಸ್ಕರಿಸಿದರು. ಎರಡನೇ ಹಂತದಲ್ಲಿ ಅವರು(ಅ) ಸಮಾಜದತ್ತ ತೆರಳಿದರು. ಆ ಸಮಯದಲ್ಲಿ ಅವರಲ್ಲಿ ಉನ್ನತ ಶ್ರೇಯಸ್ಸಿನ ಸಂಸ್ಕೃತಿ, ನಾಗರಿ ಕತೆ, ಕಲೆ, ಕೌಶಲ್ಯ, ವಿನೋದ, ವ್ಯಾಪಾರ ಎಲ್ಲವೂ ಇತ್ತು. ಕೃಷಿ ಅವರ ಮುಖ್ಯ ಕಸುಬಾಗಿತ್ತು. ಇರಾಕಿನ ಮೆಸಪೊಟೇಮಿಯದಲ್ಲಿ ಬಹಳ ದೊಡ್ಡ ಸಾಮ್ರಾಜ್ಯವಿತ್ತು. ಅವರಲ್ಲಿರುವ ಕಲಾ ಕೌಶಲ್ಯದಿಂದ ಅವರು ವಿಗ್ರಹಗಳನ್ನು ತಯಾರಿಸುತ್ತಿದ್ದರು. ವಿಭಿನ್ನ ನಗರಗಳ ವಿಭಿನ್ನ ದೇವರುಗಳಿದ್ದರು. ಎರಿಕ್ ನಗರದ ದೇವರ ಹೆಸರು ಅನೂಹ್ ಬಹಳ ದೊಡ್ಡ ದೇವರಾಗಿ ಗುರುತಿಸಿ ಆರಾಧಿಸಲ್ಪಡುತ್ತಿತ್ತು. ಎರಿದು ಇನ್ನೊಂದು ನಗರವಾಗಿತ್ತು. ಅಲ್ಲಿ ಈಯ ದೇವರ ಪೂಜೆ ನಡೆಯುತ್ತಿತ್ತು. ಅದು ನೀರು ದೇವತೆ, ನೀರು ಜೀವನ ನೀಡುವುದರಿಂದ ಕಲಾಕಾರರು ಅದರ ಪೂಜೆ ಮಾಡುತ್ತಿದ್ದರು. ನಿಪೂರ್ ನಗರದಲ್ಲಿ ಬೇಲ್ ಹೆಸರಿನ ಮಂದಿರವಿತ್ತು. ಅದರ ಪೂಜೆ ನಡೆಯುತ್ತಿತ್ತು. ಅದು ವಾಯು ದೇವರು ಎಂದು ಗುರುತಿಸಲ್ಪಡುತ್ತಿತ್ತು. ದನ ಮತ್ತು ಹೋರಿಯ ಸ್ವರೂಪ ನೀಡಲಾಗಿತ್ತು. ಲಾರ್ಸ ಮತ್ತು ಸಿಪ್ಪಾರ್ ನಗರದಲ್ಲಿ ಸೂರ್ಯ ದೇವರು. ಎರಿಕ್‌ನಲ್ಲಿ ಇಸ್ತರ್ (ವೀನಸ್) ದೇವತೆ, ಮಕ್ಕಳ ಪ್ರಾಪ್ತಿಗಾಗಿ ಪೂಜಿಸಲ್ಪಡುತ್ತಿದ್ದಳು. ಉರ್ ಮತ್ತು ರ‍್ರಾನ್ ನಗರದಲ್ಲಿ ಚಂದ್ರ ದೇವತೆ. ಅದರ ಮಂದಿರಗಳ ಚಿತ್ರಣದಿಂದ ಸಮಾಜ ಏನಾಗಿತ್ತೆಂದು ತಿಳಿದು ಬರುತ್ತದೆ. ಅವರು ಬ್ರಹ್ಮಾಂಡದ ಬೃಹತ್ ಗೃಹ ನಕ್ಷತ್ರಗಳನ್ನು ಪೂಜಿಸುತ್ತಿದ್ದರು. ಲಾಭ, ನಷ್ಟ ಅದರಿಂದ ಎಂದು ನಂಬುತ್ತಿದ್ದರು. ನೀರು, ವಾಯು, ಸೂರ್ಯ, ಚಂದ್ರ, ಸಿಡಿಲು, ಮೋಡಗಳಿಂದ ಲಾಭ ನಷ್ಟವುಂಟಾಗುತ್ತದೆ ಎಂಬ ನಂಬಿಕೆ ಹೊಂದಿದ್ದರು. ನಿಜವಾಗಿ ಅವುಗಳಲ್ಲಿ ಯಾವುದೇ ಶಕ್ತಿಯಿಲ್ಲ. ಅವುಗಳೆಲ್ಲ ಅಲ್ಲಾಹನ ಅಧೀನದಲ್ಲಿ ನಿಯಮ ಪಾಲಿಸುತ್ತಿವೆ.

ಇಬ್ರಾಹೀಮ್(ಅ) ಅಂತರ್‌ಧರ್ಮೀಯ ಸಂಭಾಷಣೆಯನ್ನು ಆರಂಭಿಸಿದರು. ವಿಭಿನ್ನ ನಗರಗಳಿಗೆ ಭೇಟಿ ನೀಡಿ, ಜನರೊಂದಿಗೆ ಚರ್ಚಿಸುತ್ತಿದ್ದರು. ಪ್ರವಾದಿಗಳು ಎಂದೂ ಸಂಶಯಗ್ರಸ್ತರಾಗಿರುವುದಿಲ್ಲ. ಏಕದೇವ ವಿಶ್ವಾಸದಲ್ಲಿ ನಿಷ್ಕಳಂಕರಾಗಿರುತ್ತಾರೆ. ಸೂರ್ಯ ಚಂದ್ರ ನಕ್ಷತ್ರಗಳು ಅಸ್ತಮಿಸುತ್ತವೆ. ಅವು ಬ್ರಹ್ಮಾಂಡದ ನಿರ್ದಿಷ್ಟ ಕಕ್ಷಿಯಲ್ಲಿ ತಿರುಗುತ್ತವೆ ಮತ್ತು ಚಲಿಸುತ್ತವೆ ಎಂದಾದರೆ ಅವು ಇನ್ನೊಬ್ಬನ ನಿಯಂತ್ರಣಕ್ಕೆ ಒಳಪಟ್ಟಿದೆ. ಏಕೆಂದರೆ, ಅದು ನೈಜ ದೇವನ ದಾಸ್ಯತನ ಪಾಲಿಸುತ್ತಿವೆ. ಅಂತಹವುಗಳನ್ನು ನಾನೇಕೆ ಆರಾಧಿಸಲಿ? ಎಂದು ಜನರಲ್ಲಿ ಕೇಳಿದರು. ಇದು ಒಂದು ಚರ್ಚೆಯ ವಿಧಾನವಾಗಿತ್ತು.

ನಿಮ್ಮ ಆರಾಧ್ಯರು ಅವುಗಳ ಸ್ವಯಂ ಶಕ್ತಿಯಿಂದ ಚಲಿಸುತ್ತಿಲ್ಲ. ಇನ್ನೊಬ್ಬನ ಶಕ್ತಿಯಿಂದಾದರೆ ನೀವು ಮಾಡುವ ಬಹು ದೇವಾರಾಧನೆಯಿಂದ ನಾನು ಮುಕ್ತವಾಗಿದ್ದೇನೆ ಎಂದರು. “ನಾನು ಏಕನಿಷ್ಠೆಯಿಂದ ನನ್ನ ಮುಖವನ್ನು ಭೂಮಿ-ಆಕಾಶ ಗಳನ್ನು ಸೃಷ್ಟಿಸಿದವನ ಕಡೆಗೆ ತಿರುಗಿಸಿದೆನು. ನಾನು ಎಷ್ಟು ಮಾತ್ರಕ್ಕೂ ಅಲ್ಲಾಹನೊಂದಿಗೆ ಸಹಭಾಗಿಗಳನ್ನಾಗಿ ಮಾಡುವವರಲ್ಲಿ ಸೇರಿದವನಲ್ಲ.” (6:79) ಇಬ್ರಾಹೀಮ್(ಅ)ರ ಆಹ್ವಾನದಲ್ಲಿ ಯುಕ್ತಿಯನ್ನು ಪ್ರಧಾನ ಅಸ್ತ್ರವಾಗಿ ಬಳಸಿರುವುದನ್ನು ಕಾಣಬಹುದು. ಅದರಲ್ಲಿ ಪುರಾವೆ, ಬುದ್ಧಿವಂತಿಕೆ, ಗಾಂಭೀರ್ಯವಿತ್ತು. ಅಲ್ಲಿ ಆವೇಶವಿರಲಿಲ್ಲ. ಪ್ರತಿಪಾದನೆ ಇತ್ತು.

ಮೂರನೇ ಹಂತದಲ್ಲಿ ಜನರು ಊರಿನ ಜಾತ್ರೆಗೆ ತೆರಳಿದ್ದರು. ಅವರು(ಅ) ಮಾತ್ರ ಜಾತ್ರೆಗೆ ಹೋಗಲು ನಿರಾಕರಿಸಿದ್ದರು. ನಂತರ ಅವರು ವಿಗ್ರಹಗಳಿಗೆ ಹಾನಿಯನ್ನುಂಟು ಮಾಡಿದರು. ಅವರು ವಿಗ್ರಹಾರಾಧಕರ ಮನೆಯಲ್ಲಿ ಹುಟ್ಟಿ ಬೆಳೆದಿದ್ದರು. ಅದೇ ಸಮುದಾಯದ ವ್ಯಕ್ತಿಯಾಗಿದ್ದರು. ಅವರು ಅವರ ಸಮಾಜಕ್ಕೆ ಮನವರಿಕೆ ಮಾಡಿ ಕೊಡಲು ಪ್ರಯತ್ನಿಸಿದರು. ಅಲ್ಲಿ ಒಂದು ವರ್ಗ ಮನೆಯವರು, ಎರಡನೆಯ ವರ್ಗ ಸಮಾಜದ ಬುದ್ಧಿಜೀವಿಗಳು, ಮೂರನೇ ವರ್ಗ ಪುರೋಹಿತರು. ಅವರ ಮಧ್ಯೆ ಚರ್ಚೆ ನಡೆಯುತ್ತಿತ್ತು.

ಅವರಲ್ಲಿ ಹೇಳುತ್ತಾರೆ, “ಈ ದೊಡ್ಡ ವಿಗ್ರಹದೊಂದಿಗೆ ಕೇಳಿ ನೋಡಿ. ಹಾನಿಯನ್ನುಂಟು ಮಾಡಿದ್ದು ಯಾರು ಎಂದು.” ಜನರು ಹೇಳಿದರು, “ಅವು ಮಾತನಾಡುವುದಿಲ್ಲ.” ಆಗ ಅವರು(ಅ) ಹೇಳಿದರು, “ನಾನೂ ಕೂಡಾ ಇದನ್ನೇ ಹೇಳುತ್ತಿದ್ದೇನೆ.” ನೀವು ಜನರ ಹಣ ಕೊಳ್ಳೆ ಹೊಡೆಯಲು ಹರಕೆ ಕಾಣಿಕೆ ಸಲ್ಲಿಸಲು ಹೇಳುತ್ತೀರಿ. ಕೃಷಿ ಕಟಾವ್ ಆದ ನಂತರ ಉಡುಗೊರೆಯಾಗಿ ತನ್ನಿ. ನಿಮ್ಮ ವ್ಯವಹಾರ, ವಿವಾಹ, ಯಾತ್ರೆ ಆರಂಭಿಸುವ ಮುನ್ನಾ ಹರಕೆ ಕಾಣಿಕೆ ಸಲ್ಲಿಸಿದ ನಂತರ ಆರಂಭಿಸಿ. ರಾತ್ರಿ ವೇಳೆ ಈ ವಿಗ್ರಹಗಳು ನಿಮ್ಮ ಅದೃಷ್ಟದ ಬಗ್ಗೆ ಹೇಳುತ್ತವೆ. ಅದನ್ನು ಆಲಿಸಿಕೊಂಡು ನಿಮಗೆ ವಿಷಯ ತಿಳಿಸುತ್ತೇವೆ ಎಂದು ಪುರೋಹಿತರು ಹೇಳುತ್ತಿದ್ದರು. ಅದಕ್ಕೆ ಇಬ್ರಾಹೀಮ್(ಅ) ಹೇಳಿದರು, ರಾತ್ರಿ ಮಾತನಾಡುವುದಾದರೆ ಈಗ ದಿನದ ವೇಳೆ ಯಾಕೆ ಮಾತನಾಡುವುದಿಲ್ಲ? ಈ ಮಾತು ಪುರೋಹಿತರಿಗೆ ಸಹಿಸಲು ಆಗಲಿಲ್ಲ. ಉರ್ ಪಟ್ಟಣದಲ್ಲಿ ಚಂದ್ರ ದೇವತೆಯ ಮಂದಿರವಿತ್ತು. ಅಲ್ಲಿಯ ಮುಖ್ಯ ಅರ್ಚಕಿ ಅಲ್ಲಿಯ ರಾಜನ ಮಗಳಾಗಿದ್ದಳು. ವಿಷಯ ರಾಜನ ಮುಂದೆ ಹಾಕಿದ ಪಂಥಾಹ್ವಾನದಂತಿತ್ತು ಎಂದು ಸಂಶೋಧಕರು ಬರೆದಿರುತ್ತಾರೆ.

ನಾಲ್ಕನೇ ಹಂತದಲ್ಲಿ ಇಬ್ರಾಹೀಮ್(ಅ) ಆಡಳಿತಗಾರರಿಗೆ ಆಹ್ವಾನ ನೀಡಿದರು. ನನ್ನ ಪ್ರಭು ಜೀವನ-ಮರಣ ನೀಡುತ್ತಾನೆ. ನಮ್ರೂದ್ ರಾಜ ಹೇಳಿದ, ನಾನೂ ಕೂಡಾ ಜೀವನ ಮರಣ ನೀಡಬಲ್ಲೆ. ಇಬ್ರಾಹೀಮರು ಹೇಳಿದರು, ನನ್ನ ಪ್ರಭು ಸೂರ್ಯನನ್ನು ಪೂರ್ವದಿಂದ ಉದಯಿಸುತ್ತಾನೆ. ಸಾಧ್ಯವಾ ದರೆ ನೀನು ಪಶ್ಚಿಮದಿಂದ ಉದಯಿಸಿ ತೋರಿಸು. ಅವನು ನಿರುತ್ತರನಾದನು. ಮತ್ತು ದೇಶದ್ರೋಹದ ಆರೋಪ ಹೊರಿಸಿ ಬೆಂಕಿಗೆ ಎಸೆದು ಕೊಲ್ಲುವ ಆಜ್ಞೆ ಹೊರಡಿಸಿದ. ಆದರೆ ಅಲ್ಲಾಹನು ಪವಾಡ ಸದೃಶವಾಗಿ ಕಾಪಾಡಿ ಕೊಂಡನು. ಆ ಬೆಂಕಿ ಕುಂಡವು ಉದ್ಯಾನದ ತಂಪಾಗಿ ಮಾರ್ಪಟ್ಟಿತ್ತು.

ಆ ಬಳಿಕ ಅವರು ಊರು ಬಿಟ್ಟು ಹಿಜ್ರತ್(ವಲಸೆ) ಆರಂಭಿಸಿದರು. ಆ ಮೂಲಕ ಜಗತ್‌ವ್ಯಾಪಿ ಆಹ್ವಾನಕ್ಕಾಗಿ ವಿಶ್ವ ಪರ್ಯಟನೆ ನಡೆಸಿದರು. ಬೃಹತ್ ವಾಣಿಜ್ಯ ಮಾರ್ಗಗಳಲ್ಲಿ ನಾಲ್ಕು ಮಕ್ಕಳನ್ನು ಭಿನ್ನ ಭಿನ್ನ ಪ್ರದೇಶಗಳಲ್ಲಿ ನೇಮಿಸಿ ಸಂದೇಶ ಪ್ರಚಾರದ ಕೆಲಸ ನಿರ್ವಹಿಸಿದರು.

ಇಬ್ರಾಹೀಮ್(ಅ)ರ ಪ್ರಸ್ತಾಪ ಪವಿತ್ರ ಕುರ್‌ಆನಿನ ಅಲ್‌ಬಕರ, ಅನ್ನಿಸಾ, ಅನ್‌ಆಮ್, ಇಬ್ರಾಹೀಮ್, ಮರ್ಯಮ್, ಅಲ್ ಅಂಬಿಯಾ, ಅಶ್ಶುಅರಾ, ಅಸ್ಸಾಫ್ಫಾತ್ ಮುಂತಾದ ಅಧ್ಯಾಯಗಳಲ್ಲಿ ಕಾಣಬಹುದು. ಅದರ ಅಧ್ಯಯನ ನಡೆಸಿದಾಗ ಒಬ್ಬ ಮೂಮಿನ್ ಏಕದೇವ
ವಿಶ್ವಾಸದಲ್ಲಿ ಅಧಿಷ್ಠಿತನಾಗಿರುತ್ತಾನೆ.

ಆದರೆ ಪ್ರಪಂಚದಲ್ಲಿ ಶಿರ್ಕ್ ನ (ಬಹುದೇವ ವಿಶ್ವಾಸದ) ವಿಭಿನ್ನ ರೂಪಗಳಿವೆ.
1. ದೇವನ ಅಸ್ತಿತ್ವವನ್ನು ನಿರಾಕರಿಸುವುದು.
2. ಬ್ರಹ್ಮಾಂಡದಲ್ಲಿ ಸಂಚರಿಸುತ್ತಿರುವ ಗೃಹ, ನಕ್ಷತ್ರ, ಸೂರ್ಯ, ಚಂದ್ರರನ್ನು ಆರಾಧಿಸುವುದು.
3. ಜನರು ಸ್ವತಃ ಕೈಯಿಂದ ತಯಾರಿಸಿದ ವಿಗ್ರಹಗಳ ಆರಾಧನೆ ಮಾಡುವುದು.
4. ಮನೋ ವಿಗ್ರಹವನ್ನು (ಸ್ವೇಚ್ಛೆಯ) ಆರಾಧಿಸುವುದು.

ಈ ನಾಲ್ಕು ವರ್ಗದವರ ಬಹುದೇವ ವಿಶ್ವಾಸಕ್ಕೆ ವಿರುದ್ಧವಾದ ಪುರಾವೆಗಳನ್ನು ಜನರ ಮುಂದಿಟ್ಟರು. ದೇವನು ಯಾರೆಂದು ಪರಿಚಯ ಮಾಡಿಕೊಟ್ಟರು. ಅವನು ಪ್ರಭು, ನಿರ್ಣಾಯಕ ದಿನದ ಅಧಿಪತಿ. ಅವನು ಉಣಿಸುತ್ತಾನೆ ಮತ್ತು ಕುಡಿಸುತ್ತಾನೆ. ಆಹಾರವನ್ನು ಪೂರೈಸುತ್ತಾನೆ. ರೋಗ ಮತ್ತು ಗುಣವನ್ನು ನೀಡುತ್ತಾನೆ. ಅವರ ಆಹ್ವಾನದಲ್ಲಿ ಅತ್ಯಂತ ಪ್ರಮುಖ ವಿಷಯವೆಂದರೆ, ಏಕದೇವ ವಿಶ್ವಾಸವಾಗಿತ್ತು. ಅದರೊಂದಿಗೆ ದೇವನು ಜೀವನ-ಮರಣ ನೀಡುತ್ತಾನೆ. ಮರಣಾ ನಂತರ ಒಂದು ಜೀವನವಿದೆ. ಅದರಲ್ಲಿ ಜನರಿಗೆ ಸ್ವರ್ಗದ ಪುರಸ್ಕಾರ ಮತ್ತು ನರಕದ ಶಿಕ್ಷೆಯಿದೆ ಎಂದು ಪರಿಚಯಿಸಿಕೊಟ್ಟರು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …