✍️ ಏ.ಕೆ.ಕುಕ್ಕಿಲ
ಒಂದೇ ಒಂದು ಚಿತ್ರ ಇಲ್ಲದ, ಒಂದೇ ಒಂದು ಪುತ್ಥಳಿ ಇಲ್ಲದ ಮತ್ತು ಕನಿಷ್ಠ ಕಲಾಕಾರರ ಕುಂಚದಲ್ಲೂ ಮೂಡಿಬರದ ಪ್ರವಾದಿ ಮುಹಮ್ಮದ್(ಸ) ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸ್ಮರಿಸಲ್ಪಡುವ ವ್ಯಕ್ತಿ ಹೇಗಾದರು?
ಮುಹಮ್ಮದ್ ಎಂಬುದು ಜಾಗತಿಕವಾಗಿಯೇ ಅತೀ ಹೆಚ್ಚು ಬಳಕೆಯಲ್ಲಿರುವ ಹೆಸರು ಯಾಕಾಯಿತು?
ಆಕಾರವಾಗಿ ಕಣ್ಣೆದುರು ಇಲ್ಲದ ವ್ಯಕ್ತಿಗೆ ಇವತ್ತು 200 ಕೋಟಿ ಅನುಯಾಯಿಗಳು ಹೇಗೆ ಸಿಕ್ಕರು?
ಜಗತ್ತಿನ ಒಟ್ಟು ಜನಸಂಖ್ಯೆಯ 24%ದಷ್ಟು ಬೃಹತ್ ಜನಸಮೂಹ ಅವರ ಅನುಯಾಯಿಯಾಗಿರುವುದರ ಗುಟ್ಟೇನು?
ಜಗತ್ತಿನ ಒಟ್ಟು ರಾಷ್ಟ್ರಗಳ ಪೈಕಿ 49 ರಾಷ್ಟ್ರಗಳಲ್ಲಿ ಅವರ ಅನುಯಾಯಿಗಳೇ ಬಹುಸಂಖ್ಯಾತರಾಗಿದ್ದಾರೆ. ಇವೆಲ್ಲ ಹೇಗೆ ಸಾಧ್ಯವಾಯಿತು? ಹಾಗಂತ,
ಚಿತ್ರ, ಪುತ್ಥಳಿ, ಕಲಾಕಾರರು ಇಲ್ಲದ ಕಾಲದಲ್ಲಿ ಪ್ರವಾದಿ ಮುಹಮ್ಮದ್(ಸ) ಹುಟ್ಟಿದ್ದಲ್ಲ. ಇವರು ಹುಟ್ಟಿದ್ದು 6ನೇ ಶತಮಾನದಲ್ಲಿ ಆದರೆ ಇವರು ಹುಟ್ಟುವುದಕ್ಕಿಂತ ಐನೂರು, ಸಾವಿರ ವರ್ಷಗಳ ಮೊದಲೇ ಹುಟ್ಟಿರುವ ಗೌತಮ ಬುದ್ಧ, ಮಹಾವೀರ, ಕನ್ ನ್ಯೂಷಿಯಸ್, ಸಾಕ್ರಟೀಸ್, ಲಾವೋತ್ಸು, ಪೈಥಾಗಾರಸ್, ಪೆರಾಕ್ಸಿಟಸ್, ಪ್ಲೇಟೋ, ಅರಿಸ್ಟಾಟಲ್ ಮುಂತಾದವರೆಲ್ಲ ಚಿತ್ರಗಳಾಗಿ ಮತ್ತು ಪುತ್ಥಳಿಗಳಾಗಿ ನಮ್ಮ ನಡುವೆ ಇವತ್ತಿಗೂ ಇದ್ದಾರೆ. ಅವರು ಪರಿಚಯಿಸಿದ ತತ್ವಶಾಸ್ತ್ರ, ತರ್ಕಶಾಸ್ತ್ರ, ಸಂಶೋಧನೆ ಮತ್ತು ಚಿಂತನೆಗಳೆಲ್ಲ ಇವತ್ತಿಗೂ ಪ್ರಚಲಿತದಲ್ಲಿವೆ. ಆದರೆ,
ಪ್ರವಾದಿ ಮುಹಮ್ಮದ್(ಸ) ಇವರೆಲ್ಲರಿಗಿಂತಲೂ ಭಿನ್ನವಾಗಿ, ಅತೀ ಹೆಚ್ಚು ಅನುಯಾಯಿಗಳನ್ನು ಹೊಂದಿದವರಾಗಿ ಮತ್ತು ಇವತ್ತಿಗೂ ಅತೀ ಹೆಚ್ಚು ಜನರಿಂದ ಆಕರ್ಷಣೆಗೆ ಒಳಗಾಗುತ್ತಿರುವ ವ್ಯಕ್ತಿತ್ವವಾಗಿ ಮಾರ್ಪಡಲು ಕಾರಣ ಏನು?
ಇದಕ್ಕೆ ಮೂರ್ನಾಲ್ಕು ಕಾರಣಗಳನ್ನು
ಪಟ್ಟಿ ಮಾಡಬಹುದು.
1.ಸಮಾನತೆ
2.ಬಲಿಷ್ಠ ಕುಟುಂಬ
3.ನಿಷ್ಠುರ ನ್ಯಾಯ
4.ಪರಲೋಕ.
21ನೇ ಶತಮಾನವೂ ಸೇರಿದಂತೆ ಜಗತ್ತು ಸರ್ವ ಕಾಲಗಳಲ್ಲೂ ಎದುರಿಸುತ್ತಾ ಬಂದ ಮತ್ತು ಬರುತ್ತಿರುವ ಅತೀ ದೊಡ್ಡ ಸವಾಲು ಏನೆಂದರೆ ಮಾನವ ಆಸಮಾನತೆ ಪ್ರವಾದಿ ಮುಹಮ್ಮದ್ (ಸ) ಈ ಸವಾಲನ್ನು ಎಷ್ಟು ಯಶಸ್ವಿಯಾಗಿ ಎದುರಿಸಿದರೆಂದರೆ ಐದು ಬಾರಿಯ ನಮಾಝ್ ನಲ್ಲಿ ಪ್ರತಿಯೊಬ್ಬರೂ ಭುಜಕ್ಕೆ ಭುಜ ತಾಗಿಸಿ ಮಸೀದಿಯಲ್ಲಿ ಸಾಲಾಗಿ ನಿಲ್ಲುವುದನ್ನು ಕಡ್ಡಾಯಗೊಳಿಸಿದರು. ಕಾರ್ಯಕ್ರಮಗಳಲ್ಲಿ ಒಂದೇ ಬಟ್ಟಲಿನ ಸುತ್ತ ಒಂದಕ್ಕಿಂತ ಹೆಚ್ಚು ಮಂದಿ ಕುಳಿತು ಊಟ ಮಾಡಿಸುವ ಕ್ರಮ ಜಾರಿಗೆ ತಂದರು, ವಿವಿಧ ಜಾತಿ ಗೋತ್ರಗಳಿಂದ ಓರ್ವಳಂತೆ ವಿಧವೆ ಮತ್ತು ವಿಚ್ಛೇದಿತೆಯರನ್ನು ವರಿಸಿಕೊಂಡು ಆ ಎಲ್ಲ ಜಾತಿಗಳನ್ನೂ ವೈವಾಹಿಕ ಸಂಬಂಧದೊಳಗೆ ಪೋಣಿಸಿದರು. ಇದು ಆ ಕಾಲದ ಅಭೂತಪೂರ್ವ ಕ್ರಾಂತಿಯಾಯಿತು. ಇದರ ಜೊತೆಗೇ,
ಪ್ರವಾದಿ(ಸ) ಅತ್ಯಂತ ಬಲಿಷ್ಠ ಕುಟುಂಬ ಪದ್ಧತಿಗೆ ಅಡಿಗಲ್ಲು ಹಾಕಿದರು. ವಿವಾಹೇತರ ಸಂಬಂಧವನ್ನು ನಿಷಿದ್ಧಗೊಳಿಸಿದ್ದಷ್ಟೇ ಅಲ್ಲ, ವಿವಾಹ ವಿಚ್ಛೇದನ ದೇವನಿಗೆ ಅತೀ ಅಪ್ರಿಯ ಕಾರ್ಯ ಎಂದೂ ಬೋಧಿಸಿದರು. ಪತಿ-ಪತ್ನಿ ನಡುವಿನ ಸಂಬಂಧ ಅತ್ಯಂತ ಬಲಿಷ್ಠವಾಗಿಸುವುದಕ್ಕೆ ಹಲವು ಮಾರ್ಗದರ್ಶನಗಳನ್ನು ನೀಡಿದರು. ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕನ್ನು ಕೊಟ್ಟರು. ಹೆಣ್ಣನ್ನು ಗಾಜಿಗೆ ಹೋಲಿಸಿದರಲ್ಲದೇ ಆಕೆಯೊಂದಿಗೆ ನಾಜೂಕಾಗಿ ವರ್ತಿಸುವಂತೆ ಪತಿಗೆ ಉಪದೇಶಿಸಿದರು. ಹೆತ್ತವರನ್ನು ನಿರ್ಲಕ್ಷಿಸುವ ಮಕ್ಕಳು ಸ್ವರ್ಗ ಪ್ರವೇಶಿಸಲಾರರು ಎಂದು ಉಪದೇಶಿಸಿದರು. ಇದೇವೇಳೆ,
ನ್ಯಾಯದ ವಿಷಯದಲ್ಲಿ ನಿಷ್ಟುರರಾದರು. ನ್ಯಾಯ ನಿಮ್ಮ ಹೆತ್ತವರ ವಿರುದ್ಧ ಇದ್ದರೂ ನೀವು ನ್ಯಾಯದ ಪರ ನಿಲ್ಲಬೇಕೇ ಹೊರತು ಹೆತ್ತವರ ಪರ ಅಲ್ಲ ಎಂದು ಎಚ್ಚರಿಸಿದರು. ಅದರಂತೆ ತನ್ನ ಜೀವಿತಾವಧಿಯಲ್ಲಿ ನ್ಯಾಯ ವಿತರಣೆ ಮಾಡಿದರು. ಇದರ ಜೊತೆಗೇ ಅವರು ಮಂಡಿಸಿದ ಅತೀ ಪ್ರಬಲ ವಿಚಾರಧಾರೆಯೇ ಪರಲೋಕ ಪರಿಕಲ್ಪನೆ ಇಹಲೋಕಕ್ಕೇ ನಿಮ್ಮ ಬದುಕು ಮುಗಿಯುವುದಿಲ್ಲ ಎಂದು ಬೋಧಿಸಿದರು. ಒಂದು ದಿನ ಪ್ರಳಯವಾಗಲಿದೆ ಮತ್ತು ಸತ್ತವರನ್ನೆಲ್ಲ ದೇವನು ಮರಳಿ ಜೀವಂತ ಗೊಳಿಸುತ್ತಾನೆ ಎಂದರು. ಭೂಮಿಯ ಬದುಕಿನ ಬಗ್ಗೆ ಆತ ವಿಚಾರಣೆ ನಡೆಸುತ್ತಾನೆ ಮತ್ತು ಸ್ವರ್ಗ-ನರಕವನ್ನು ನಿರ್ಧರಿಸುತ್ತಾನೆ ಎಂದು ಎಚ್ಚರಿಸಿದರು. ಬಡ್ತಿ ವ್ಯವಹಾರವನ್ನು, ಮದ್ಯಪಾನವನ್ನು ನಿಷೇಧಿಸಿದರು. ದುರ್ಬಲರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದಕ್ಕಾಗಿ ಝಕಾತ್ ಎಂಬ ವಿನೂತನ ಪದ್ಧತಿಯನ್ನು ಪರಿಚಯಿಸಿದರು. ಅಂದಹಾಗೆ,
ಕೇವಲ 63 ವರ್ಷಗಳ ವರೆಗೆ ಮಾತ್ರ ಬದುಕಿದ ಮತ್ತು ಅದರ ಒಳಗಡೆಯೇ ತಾನು ಬೋಧಿಸಿದ್ದನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿ ಯಶಸ್ವಿಯಾದ ಪ್ರವಾದಿ ಮುಹಮ್ಮದ್(ಸ)ರನ್ನು ಭಾರತೀಯರು ಅಧ್ಯಯನ ನಡೆಸಬೇಕಿದೆ. ಅವರ ವಿಚಾರಧಾರೆಯನ್ನು ಪರಾಮರ್ಶೆಗೆ ಒಡ್ಡುವ ಕುತೂಹಲ ಬೆಳೆಸಿಕೊಳ್ಳಬೇಕಿದೆ.
IslamKannada News Portal
