✍🏾 ಮುಷ್ತಾಕ್ ಹೆನ್ನಾಬೈಲ್
ಪ್ರವಾದಿ ಮಕ್ಕಾದಲ್ಲಿ ಜೀವಿಸಿದ ಕಾಲದಲ್ಲಿ ಮಕ್ಕಾದ ಬಹುದೇವಾರಾಧಕರು ನಿತ್ಯವೂ ಇನ್ನಿಲ್ಲದ ಕಾಟವನ್ನು ಅವರಿಗೆ ಮತ್ತು ಅವರ ಕುಟುಂಬದವರಿಗೆ ನೀಡಿದರು. ವರ್ಷಗಟ್ಟಲೆ ಅವರ ಕುಟುಂಬವನ್ನು ಬಹಿಷ್ಕರಿಸಿ, ಅನ್ನ ನೀರಿಗೂ ಗತಿಯಿಲ್ಲದಂತೆ ಮಾಡಿದರು. ಪ್ರವಾದಿಯವರನ್ನು ಬೆಂಬಲಿಸುವ ವ್ಯಕ್ತಿಗಳ ಮತ್ತು ಅವರ ಕುಟುಂಬಸ್ಥರ ಮನೆಗಳನ್ನು ಲೂಟಿ ಮಾಡಿದರು. ವ್ಯಾಪಕ ಮಾನ-ಪ್ರಾಣಗಳ ಹಾನಿಯಾಯಿತು. ಪ್ರವಾದಿಯವರನ್ನು ಬೆಂಬಲಿಸಿದರು ಎನ್ನುವ ಒಂದೇ ಕಾರಣಕ್ಕೆ ಸುಮಯ್ಯಾ ಎನ್ನುವ ಹೆಣ್ಣು ಮಗಳ ಮರ್ಮಾಂಗಕ್ಕೆ ಈಟಿ ಚುಚ್ಚಿದ ಅಬೂಜಹಲ್ ಎಂಬ ಮಕ್ಕಾದ ಪರಮಪಾಪಿ ಇಡೀ ಮಕ್ಕಾದಲ್ಲಿ ಭಾರಿ ಭಯವನ್ನು ಹುಟ್ಟಿಸಿದ್ದ. ಮಕ್ಕಾದಲ್ಲಿ ಪ್ರವಾದಿಯವರನ್ನು ಬೆಂಬಲಿಸುವ ಬೆರಳೆಣಿಕೆಯವರನ್ನು ಬಿಟ್ಟರೆ ಉಳಿದವರೆಲ್ಲರೂ ಪ್ರವಾದಿ ವಿರೋಧಿಗಳಾಗಿದ್ದರು. ಅವರೆಲ್ಲ ಬಹುದೇವಾರಾಧಕರಾಗಿದ್ದರು. ಕಾಟ ತಾಳಲಾರದೆ, ಪ್ರವಾದಿ ಮಕ್ಕಾ ತೊರೆದು ಮದೀನಾಗೆ ಹೋಗುತ್ತಾರೆ..
ಅಲ್ಲಿಗೂ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇನೆ ಕಟ್ಟಿಕೊಂಡು ಬಂದ ಮಕ್ಕಾದವರು ಪ್ರವಾದಿಯವರ ಮೇಲೆ 3 ಘೋರ ಯುದ್ಧಗಳನ್ನು ಮಾಡುತ್ತಾರೆ. ಪ್ರವಾದಿಯವರ ಬಹಳಷ್ಟು ಕುಟುಂಬ ಸದಸ್ಯರೂ ಈ ಯುದ್ಧಗಳಲ್ಲಿ ಬಲಿಯಾಗುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಪ್ರೀತಿಯ ಚಿಕ್ಕಪ್ಪ ಹಂಝ ಬಿನ್ ಅಬ್ದುಲ್ ಮುತ್ತಲಿಫ್ ಮಕ್ಕಾದವರ ಸಂಚಿಕೆಗೆ ಸಿಕ್ಕಿ ಸಾಯುತ್ತಾರೆ. ಮಕ್ಕಾದ ಮಹಿಳೆಯೊಬ್ಬಳು ಅವರ ಮೃತ ದೇಹವನ್ನೂ ಬಿಡದೆ ಕರುಳನ್ನು ಬಾಯಿಯಲ್ಲಿ ಜಗಿಯುವುದರ ಮೂಲಕ ಯುದ್ಧ ರಂಗದ ಮಧ್ಯೆ ಎರಡು ಸೇನೆಗಳ ಸಮ್ಮುಖದಲ್ಲಿ ವಿಕೃತಿ ಮೆರೆಯುತ್ತಾಳೆ..
ಕಾಲ ಕಳೆದಂತೆ, ಮದೀನಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾದಿಯ ಪ್ರಭಾವ ವ್ಯಾಪಕವಾಗ ತೊಡಗುತ್ತದೆ. ಮದೀನಕ್ಕೆ ಬಂದು 10 ವರ್ಷದ ನಂತರ ಮಕ್ಕಾದ ಮೇಲೆ ಹಕ್ಕು ಸ್ಥಾಪಿಸಲು ಪ್ರವಾದಿ ದೊಡ್ಡ ಸೇನೆಯೊಂದಿಗೆ ಹೊರಡುತ್ತಾರೆ. ಮದೀನಾದಿಂದ ಬೃಹತ್ ಗಾತ್ರದ ಸೇನೆ ಬರುತ್ತಿರುವುದು ಕೇಳಿಯೇ ಭಾರೀ ಪ್ರತೀಕಾರದ ಭಯದಲ್ಲಿ ಮಕ್ಕಾದವರು ನಗರವನ್ನು ತೊರೆಯಲು ತೊಡಗುತ್ತಾರೆ. ಪ್ರವಾದಿ ಮಕ್ಕಾದಲ್ಲಿದ್ದ ಸಂದರ್ಭ ತಾವೆಲ್ಲ ಕೊಟ್ಟ ಕಾಟ ಪ್ರತೀಕಾರವಾಗಿ ಪ್ರಾಣಹರಣ ಮಾಡುವುದು ಖಚಿತ ಎನ್ನುವ ಭಯ ಅವರಿಗಿತ್ತು. ಇದನ್ನು ಮನಗಂಡ ಪ್ರವಾದಿ, ನಗರಕ್ಕೆ ಸೇನೆ ಪ್ರವೇಶ ಮಾಡುವ ಮುಂಚೆಯೇ ಕೆಲವು ತಮ್ಮ ಆಪ್ತರನ್ನು ಕಳಿಸಿ, ಯಾರ ಮೇಲೂ ಯಾವ ವಿಚಾರದಲ್ಲಿಯೂ ಪ್ರತೀಕಾರವನ್ನು ತೆಗೆದುಕೊಳ್ಳುವುದಿಲ್ಲ. ಯಾರೂ ಭಯಪಟ್ಟು ನಗರವನ್ನು ತೊರೆಯಬೇಡಿ ಎಂಬ ಸಂದೇಶ ಕಳಿಸುತ್ತಾರೆ. ಪ್ರವಾದಿಯವರನ್ನು ವಿರೋಧಿಸಿದರೂ ಕೂಡ, ಜೀವನಪೂರ್ತಿ ಪ್ರವಾದಿ ಮಾತಿಗೆ ತಪ್ಪದೇ ಇರುವುದು ಮತ್ತು ಸತ್ಯಸಂಧರೆಂದು ಕರೆಸಿಕೊಂಡಿರುವುದು ಮಕ್ಕಾದ ಅವರ ಕಡು ವಿರೋಧಿಗಳಿಗೂ ಗೊತ್ತಿತ್ತು. ಪ್ರವಾದಿ ಯಾರ ಮೇಲೂ ಪ್ರತೀಕಾರ ತೆಗೆದುಕೊಳ್ಳುವುದಿಲ್ಲ ಎನ್ನುವ ಸಂದೇಶವನ್ನು ಕೇಳಿ ಭರವಸೆ ಇಟ್ಟು ನಿರಾಯುಧರಾಗಿ ಬಂದು ಅವರೆಲ್ಲ ಸೇನೆಯ ಮುಂದೆ ನಿಲ್ಲುತ್ತಾರೆ. ಆ ಗುಂಪಿನಲ್ಲಿ ಪ್ರವಾದಿಯ ಚಿಕ್ಕಪ್ಪನ ಕರುಳು ಜಗಿದ ಮಹಿಳೆಯೂ ಇದ್ದಳು..
ವರ್ಷಗಳ ಕಾಲ ಮಾನ ಪ್ರಾಣ ಹಾನಿ ಮಾಡಿ, ಅಪಮಾನ ಅವಮಾನ ಮಾಡಿದ ಬಹುದೇವಾರಾಧಕ ಮಕ್ಕಾದವರು ಎದುರಿಗೆ ಬಂದು ನಿಂತಾಗ “ಅಜ್ಞಾನ ಕಾಲದಲ್ಲಿ ಅಜ್ಞಾನದಿಂದ ನೀವು ಮಾಡಿದ ಎಲ್ಲ ಕೃತ್ಯಗಳನ್ನು ಕ್ಷಮಿಸಿದ್ದೇನೆ. ನಿಮ್ಮ ಪೂರ್ವ ಕೃತ್ಯಗಳಿಗಾಗಿ ಯಾರಿಗೂ ಯಾವುದೇ ರೀತಿಯ ನೋವಾಗಲಿ ಶಿಕ್ಷೆಯಾಗಲಿ ನಾನು ಕೊಡುವವನಲ್ಲ. ನನ್ನ ಕುಟುಂಬದವರನ್ನು ನೀವು ಕೊಂದಿದ್ದೀರಿ. ವರ್ಷಗಳ ಕಾಲ ನಮ್ಮನ್ನು ಉಪವಾಸ ಇಟ್ಟಿದ್ದೀರಿ. ನಗರದಿಂದಲೇ ಬಹಿಷ್ಕರಿಸಿದ್ದೀರಿ. ನನ್ನ ಮೇಲೆ ಕಸ-ಕಡ್ಡಿಗಳನ್ನು ಎಸೆದು ವಿಕೃತವಾಗಿ ಆನಂದಿಸಿದ್ದೀರಿ. ಅವಾಚ್ಯ ಶಬ್ದಗಳನ್ನು ಬಳಸಿ ಬೈದಿದ್ದೀರಿ. ನಿಮ್ಮ ಕಾಟ ತಾಳಲಾರದೆ ನಾನು ಈ ನಗರವನ್ನು ಬಿಟ್ಟು ದೂರ ಸರಿದರೂ ಹಿಂಬಾಲಿಸಿಕೊಂಡು ಬಂದು ನನ್ನ ಬದುಕನ್ನು ಮದೀನಾದಲ್ಲೂ ಬರ್ಬರಗೊಳಿಸಿ ದುಸ್ತರವಾಗಿಸಿದ್ದೀರಿ. ನೀವು ನನ್ನಲ್ಲಿದ್ದ ಎಲ್ಲವನ್ನು ಕಸಿದುಕೊಂಡಿದ್ದೀರಿ. ನಾನು ನಿಮ್ಮಿಂದ ಏನನ್ನೂ ಪಡೆಯಲಿಲ್ಲ. ದೇವತ್ವದ ಕುರಿತಾದ ಸತ್ಯ ಒಂದೇ ನಿಮ್ಮ ಮುಂದೆ ಇಡುವುದು ನನ್ನ ಉದ್ದೇಶವಾಗಿತ್ತು. ದೇವನ ಮೇಲಿನ ಅಚಲ ವಿಶ್ವಾಸಕ್ಕಾಗಿ ನಾನು ಸರ್ವಸ್ವವನ್ನು ಕಳೆದುಕೊಂಡರೂ ತಾಳ್ಮೆಯನ್ನು ಕಳೆದುಕೊಳ್ಳಲಿಲ್ಲ. ನಿಮ್ಮ ಅಜ್ಞಾನವನ್ನು ತೊಲಗಿಸುವುದರಿಂದ ಹೊರತಾಗಿ ನನಗೆ ಯಾವ ಉದ್ದೇಶವೂ ಇಲ್ಲ. ಹೀಗಿನ ಮನಸ್ಥಿತಿಯನ್ನು ಸರ್ವಶಕ್ತನು ನನಗೆ ಕರುಣಿಸಿದ ಕಾರಣಕ್ಕೆ ದ್ರೋಹ ಅನ್ಯಾಯ ಅಕ್ರಮ ಅನಾಚಾರ ಮಾಡಿದ ನಿಮಗೆಲ್ಲರನ್ನು ನಾನು ಕ್ಷಮಿಸಿದ್ದೇನೆ”ಎಂಬ ಅರ್ಥದಲ್ಲಿ ಮಕ್ಕಾದ ಬಹುದೇವಾರಾಧಕರನ್ನು ಉದ್ದೇಶಿಸಿ ಪ್ರವಾದಿ ಹೀಗೆ ಮಾತನಾಡಿದಾಗ ನೆರೆದವರ ಕಣ್ಣಾಲಿಗಳಲ್ಲಿ ಅಶ್ರುಧಾರೆ ಧಾರಾಕಾರವಾಗಿ ಸುರಿಯುತಿತ್ತು. ನಿಂದಿಸಿದವರನ್ನು, ಅವಮಾನಿಸಿದವರನ್ನು, ಹಸಿವು ಬಾಯಾರಿಕೆಗಳಿಂದ ಬಳಲುವಂತೆ ಮಾಡಿದವರನ್ನು, ಪ್ರೀತಿಪಾತ್ರರನ್ನು ಕೊಂದವರನ್ನು ಕ್ಷಮಿಸಲು ಪ್ರವಾದಿಗೆ ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಪ್ರವಾದಿಯ ಕುರಿತಾದ ಲಿಖಿತ ರೂಪದಲ್ಲಿರುವ ಜೀವಂತ ಇತಿಹಾಸ ಹೀಗಿದ್ದರೂ, ಪ್ರವಾದಿ ಮುಹಮ್ಮದ್ (ಸ)ರನ್ನು ಪ್ರೀತಿಸುವುದು ಅಪರಾಧವಾಗುತ್ತದೆ ಎಂದಾದರೆ ಮನುಷ್ಯ ಮೃಗವಾಗಿದ್ದಾನೆ ಮತ್ತು ಬೌದ್ಧಿಕ ಕುರುಡುತನ ಎಲ್ಲೆಡೆಯೂ ಆವರಿಸಿದೆ ಎಂದೇ ಅರ್ಥ..
IslamKannada News Portal
