Home / ಲೇಖನಗಳು / ಪ್ರವಾದಿಗಳ ಇತಿಹಾಸ

ಪ್ರವಾದಿಗಳ ಇತಿಹಾಸ

ಸಕಲ ಮಾನವರು ಒಂದೇ ತಂದೆ ತಾಯಿಯ ಸಂತಾನವಾಗಿದ್ದಾರೆ. ನಾವೆಲ್ಲರೂ ಪ್ರಥಮ ಮಾನವ ಮತ್ತು ಪ್ರವಾದಿ ಆದಮ್ ರ(ಅ) ಮಕ್ಕಳಾಗಿದ್ದೇವೆ. ಆದಮ್‌ ರು(ಅ) ತಮ್ಮ ಸಂತಾನಗಳಿಗೆ ದೇವನ ಆದೇಶಗಳನ್ನು ಹೇಳಿಕೊಡಬೇಕೆಂದು ದೇವನು ಆದೇಶಿಸಿದನು. ಅದರಂತೆ “ದೇವನೊಬ್ಬನೇ ಅವನಲ್ಲದೆ ಅನ್ಯ ಆರಾಧ್ಯನಿಲ್ಲ, ಅವನೇ ನಿಮ್ಮ ಪ್ರಭು. ಅವನ ಆದೇಶಗಳ ಪಾಲನೆಯಿಂದ ಜೀವನದಲ್ಲಿ ಅವನ ಸಂತೃಪ್ತಿಗೆ ಪ್ರಯತ್ನಿಸಬೇಕು. ನೀವು ಸಹಾಯಕ್ಕಾಗಿ ದೇವನನ್ನು ಪ್ರಾರ್ಥಿಸಿರಿ. ಭೂಮಿಯಲ್ಲಿ ಅವನಿಗೆ ಮಾತ್ರ ಕೃತಜ್ಞರಾಗಿ ಜೀವಿಸಿರಿ. ಹೀಗೆ ಮಾಡಿದರೆ ನೀವು ನ್ಯಾಯದಲ್ಲಿರುವಿರಿ. ನಿಮಗೆ ಮೋಕ್ಷ (ಶಾಶ್ವತತೆ) ಲಭಿಸುವುದು. ಆನಂತರ ಅಲ್ಲಿ ನಿಮಗೆ ಆನಂದಕರವಾದ ಜೀವನವಿದೆ. ಅಲ್ಲಿ ದುಃಖ ಪರಿತಾಪಗಳಿಲ್ಲ, ಯಾವುದೇ ರೀತಿಯ ಕೊರತೆಗಳಿಲ್ಲ’ ಎಂದು ಆದಮರು(ಅ) ಸಂತಾನಗಳಿಗೆ ಕಲಿಸಿದ್ದರು.

ಕ್ರಮೇಣ ಆದಮರ(ಅ) ಸಂತಾನವು ಭೂಮಿಯ ವಿವಿಧ ಭಾಗಗಳಿಗೆ ಹರಡಿ ವಿವಿಧ ಜನಾಂಗಗಳು ತಲೆ ಎತ್ತಿದವು. ಕ್ರಮೇಣ ಅವರು ದೇವಾದೇಶಗಳನ್ನು ಮರೆತರು. ಕೆಡುಕುಗಳು ಸಂಭವಿಸಿತು. ತುಚ್ಚ ಬಯಕೆಗಳ ಈಡೇರಿಕೆಗಾಗಿ ನಾನಾ ಸಂಪ್ರದಾಯಗಳನ್ನು ಅವರು ಹುಟ್ಟು ಹಾಕಿದರು. ಬೇರೆ ಬೇರೆ ಮತಗಳಾದವು. ದೇವಾದೇಶಗಳನ್ನು ಸಂಪೂರ್ಣವಾಗಿ ಮರೆತರು. ಹೀಗೆ ಇವರ ಸುಧಾರಣೆಗಾಗಿ ದೇವನು ಪ್ರವಾದಿಗಳನ್ನು ಕಳುಹಿಸಲು ಪ್ರಾರಂಭಿಸಿದನು.

ಈ ರೀತಿ ದೇವನಿಂದ ಪ್ರತಿಯೊಂದು ಜನಾಂಗಗಳಿಗೆ ಮತ್ತು ಭೂಭಾಗಗಳಿಗೆ ಪ್ರವಾದಿಗಳು ನಿಯೋಜಿಸಲ್ಪಟ್ಟಿದ್ದಾರೆ. ಅವರೆಲ್ಲರೂ ಒಂದೇ ಮೂಲಭೂತ ಶಿಕ್ಷಣ ನೀಡಿದರು. ಜನರೆಡೆಯಲ್ಲಿ ಹರಡಿರುವ ಅಜ್ಞಾನ, ಅಂಧಕಾರಗಳ ಮೂಲೋತ್ಪಾಟನೆಗೆ ವಿಶೇಷ ಪ್ರಯತ್ನ ನಡೆಸಿದರು.

ಪ್ರವಾದಿಗಳ ಸತ್ಯಧರ್ಮ ಪ್ರಚಾರವು ಸುಲಭದ ತುತ್ತಾಗಿರಲಿಲ್ಲ. ಅವರು ಜನರ ವಿರೋಧವನ್ನು ಎದುರಿಸಬೇಕಾಯಿತು. ನಿರಂತರ ಪ್ರಯತ್ನದಿಂದ ಕ್ರಮೇಣ ಪ್ರವಾದಿಗಳಿಗೆ ಅನುಯಾಯಿಗಳು ಸಿಕ್ಕಿದರು. ಆದರೆ ಇದೇ ಜನ ವಿಭಾಗ ಪ್ರವಾದಿಗಳ ಕಾಲಾನಂತರ ಅವರ ಶಿಕ್ಷಣಗಳನ್ನೇ ಕೆಡಿಸಿದರು. ತಮಗೆ ತೋಚುವಂತೆ ತಿದ್ದುಪಡಿ ಮಾಡಿದರು. ದೈವಿಕ ಗ್ರಂಥಗಳ ಮೇಲೆಯೂ ಹಸ್ತಕ್ಷೇಪ ನಡೆಸಿದರು. ತಮ್ಮ ಸುಳ್ಳು ಕಥೆಗಳನ್ನು ಸೇರಿಸಿದರು. ಈ ರೀತಿ ದೇವ ಶಿಕ್ಷಣ ಮತ್ತು ಆದೇಶಗಳನ್ನು ಎಲ್ಲಿವರೆಗೆ ಈ ಜನರು ಕೆಡಿಸಿದರೆಂದರೆ ಅದರಲ್ಲಿ ಇವರು ಸೇರಿಸಿದ ಅಂಶ ಯಾವುದು ದೇವನ ಆದೇಶಗಳಾವುದೆಂದೂ ಕಂಡು ಹುಡುಕುವುದು ಕ್ಲಿಷ್ಟಕರವಾಗಿತ್ತು. ಯಾಕೆಂದರೆ ದೈವಿಕ ಗ್ರಂಥದಲ್ಲಿ ತಮ್ಮ ಕಾನೂನು-ನಿಯಮಗಳನ್ನು ಸೇರ್ಪಡೆಗೊಳಿಸಿದ್ದರು. ಕೆಲವು ಶತಮಾನಗಳು ಕಳೆದ ಬಳಿಕ ನಕಲಿ ಧಾರ್ಮಿಕ ಶಿಕ್ಷಣಗಳು ಯಾವುವು? ಮತ್ತು ಸರಿಯಾದ ಧಾರ್ಮಿಕ ವಿಧಾನಗಳು ಯಾವುವು ಎಂದು ಬೇರ್ಪಡಿಸಿ ತಿಳಿಯುವ ಯಾವ ಮಾನದಂಡವೂ ಉಳಿಯಲಿಲ್ಲ.

ಗತ ಪ್ರವಾದಿಗಳ ಚರಿತ್ರೆಯಲ್ಲಿ ಅಸಹ್ಯಕರ ವಿಚಾರಗಳನ್ನು ಇವರು ಹೇರಿದ್ದರು. ನಿಜವಾದ ಪ್ರವಾದಿ ಚರಿತ್ರೆಗಳನ್ನು ತಿಳಿಯುವುದೇ ಕಷ್ಟಕರ ಕೆಲಸವೆನಿಸಿತು. ಇಷ್ಟೆಲ್ಲ ಆಗಿದ್ದರೂ ಗತ ಪ್ರವಾದಿಗಳ ಶಿಕ್ಷಣದ ಕೆಲವಾರು ನೈಜಾಂಶಗಳು ಈಗಲೂ ಉಳಿದುಕೊಂಡಿವೆ. ನಾವು ಬೇರೆ ಬೇರೆ ಜನಾಂಗಗಳ ಬದುಕಿನಲ್ಲಿ ಈಗಲೂ ಅದರ ಪ್ರಭಾವವನ್ನು ಕಾಣಬಹುದಾಗಿದೆ. ಅದರ ಅಧ್ಯಯನವನ್ನು ಇಂದೂ ನಡೆಸಲು ಸಾಧ್ಯವಿದೆ. ದೇವ ವಿಶ್ವಾಸ, ಪರಲೋಕ ವಿಶ್ವಾಸ ಎಲ್ಲ ಜನರಲ್ಲಿಯೂ ಇಂದಿಗೂ ಕಂಡು ಬರುತ್ತವಷ್ಟೇ? ಇವು ಪ್ರವಾದಿಗಳ ಶಿಕ್ಷಣಗಳಲ್ಲಿರುವ ನೈಜಾಂಶಗಳಾಗಿವೆ.

ಜನರಲ್ಲಿ ಕೆಡುಕು ಮಿತಿಮೀರಿ ವ್ಯಾಪಿಸಿದಾಗ ಅವರ ಸುಧಾರಣೆಗಾಗಿ ಪ್ರವಾದಿಗಳು ನಿರಂತರವಾಗಿ ಆಗಮಿಸಿದರು. ಅಂತಿಮ ಪ್ರವಾದಿ ಮುಹಮ್ಮದರು(ಸ) ಹೇಳಿರುವಂತೆ ಲಕ್ಷಾಂತರ ಪ್ರವಾದಿಗಳು ಇತಿಹಾಸದಲ್ಲಿ ಆಗಿ ಹೋಗಿದ್ದಾರೆ. ಭೂಮುಖದಲ್ಲಿರುವ ಎಲ್ಲ ಜನಾಂಗಗಳಿಗೂ ಪ್ರವಾದಿಗಳು ಆಗಮಿಸಿರುವುದರಿಂದ ಲಕ್ಷಾಂತರ ಪ್ರವಾದಿಗಳಾಗಿರಬಹುದು. ಪ್ರವಾದಿ ಮುಹಮ್ಮದರು(ಸ) ಭೂಮುಖಕ್ಕೆ 1 ಲಕ್ಷದ 24 ಸಾವಿರ ಪ್ರವಾದಿಗಳು ಆಗಮಿಸಿದ್ದಾರೆಂದು ಹೇಳಿರುವುದಾಗಿ ವರದಿಯಾಗಿದೆ. ಪವಿತ್ರ ಕುರ್‌ಆನ್ ಕೆಲವು ವಿಶೇಷ ಪ್ರವಾದಿಗಳು, ಅವರ ಜೀವನ ಚರಿತ್ರೆ ಮತ್ತು ಕಾರ್ಯಕ್ಷೇತ್ರವನ್ನು ಉಲ್ಲೇಖಿಸಿದೆ.

1.ಆದಮ್, 2.ಇದ್ರಿಸ್, 3.ನೂಹ್, 4.ಹೂದ್, 5.ಸಾಲಿಹ್, 6.ಇಬ್‌ರಾಹೀಮ್, 7.ಲೂತ್, 8.ಇಸ್ಮಾಯಿಲ್, 9.ಇಸ್ಹಾಕ್, 10.ಯಾಕೂಬ್, 11.ಯೂಸುಫ್,
12.ಅಯ್ಯಬ್, 13.ಶುಐಬ್, 14.ಮೂಸಾ, 15.ಹಾರೂನ್,
16.ಝಲ್‌ಕಿಲ್ಫ್, 17.ದಾವೂದ್,18. ಸುಲೈಮಾನ್, 19.ಇಲಿಯಾಸ್, 20.ಅಲ್-ಯಸಅ್ , 21.ಯೂನುಸ್, 22.ಝಕರಿಯ್ಯಾ, 23.ಯಹ್ಯಾ, 24.ಈಸಾ, 25.ಮುಹಮ್ಮದ್. ಇದು ಪವಿತ್ರ ಕುರ್‌ಆನ್ ವಿವರಿಸಿರುವ ವಿಶೇಷ ಪ್ರವಾದಿಗಳ ಹೆಸರಾಗಿದೆ. ಇವರ ಮೇಲೆ ಅಲ್ಲಾಹನ ಅನುಗ್ರಹವಿರಲಿ.

ಪವಿತ್ರ ಕುರ್‌ಆನ್ ಮತ್ತು ಕೆಲವು ಜನಾಂಗಗಳ ಹೆಸರನ್ನು ಪ್ರಸ್ತಾಪಿಸಿದೆ. ನೂಹ್ ಜನಾಂಗ, ಆದ್-ಸಮೂದ್, ತುಬ್ಬಅ್, ಮದ್ಯನ್ ನಿವಾಸಿಗಳು, ಅಸ್ ಹಾಬುರಸ್ಸ್, ಅಸ್‌ಹಾಬುಲ್ ಐಕಃ ಮತ್ತು ಲೂತ್‌ರ ಜನಾಂಗ, ಬನಿ ಇಸ್ರಾಯೀಲ್ ಮತ್ತು ಸಬಾದ ಜನಾಂಗ ಮುಂತಾದ ವಿಶೇಷ ಜನಾಂಗಗಳ ಹೆಸರು ಪವಿತ್ರ ಕುರ್‌ಆನಿನಲ್ಲಿ ಉಲ್ಲೇಖವಾಗಿದೆ.

ಪವಿತ್ರ ಕುರ್‌ಆನ್ ಪ್ರಥಮವಾಗಿ ಅರಬ್ ಜನಾಂಗವನ್ನು ಸಂಬೋಧಿಸಿದ್ದರೆ, ಆನಂತರ ಯಹೂದಿ ಮತ್ತು ಕ್ರೈಸ್ತ ಸಮುದಾಯವನ್ನು ಸಂಬೋಧಿಸಿರುವುದು. ಯಹೂದಿಗಳ ಗ್ರಾಮಗಳು ಮತ್ತು ಬೃಹತ್ ಸಂಖ್ಯೆಯಲ್ಲಿ ಕ್ರೈಸ್ತರೂ ಅರೇಬಿಯಾದಲ್ಲಿ ವಾಸವಿದ್ದರು.

ಆದುದರಿಂದ ಅರಬರಿಗೆ ಪರಿಚಯವಿದ್ದ ಯಹೂದಿಗಳು ಮತ್ತು ಕ್ರೈಸ್ತರನ್ನು ಪವಿತ್ರ ಕುರ್‌ಆನ್ ಉಲ್ಲೇಖಿಸಿತು. ಯಹೂದಿಗಳು ಮತ್ತು ಕ್ರೈಸ್ತರಿಗೆ ತಿಳಿದಿದ್ದ ಪ್ರವಾದಿಗಳನ್ನು ಹಾಗೂ ಅವರ ಜನಾಂಗಗಳನ್ನು ಅದು ಉಲ್ಲೇಖಿಸಿತು. ಯಾಕೆಂದರೆ ಅರಬರು, ಕ್ರೈಸ್ತರು ಮತ್ತು ಯಹೂದಿಗಳಿಗೆ ತಿಳಿದಿರುವ ಪ್ರವಾದಿಗಳು ಮತ್ತು ಜನಾಂಗಗಳ ಉಲ್ಲೇಖವು ಅವರ ಮಾರ್ಗದರ್ಶನಕ್ಕೆ ಉಪಯುಕ್ತವಾಗಿತ್ತು. ಪವಿತ್ರ ಕುರ್‌ಆನ್ ಉಲ್ಲೇಖಿಸಿದ ಜನಾಂಗಗಳನ್ನು ಅರೇಬಿಯಾದ ಜನರು ಅರಿತಿದ್ದರು. ಅವರು ವ್ಯಾಪಾರ ನಿಮಿತ್ತ ಈ ಜನಾಂಗಗಳ ವಸತಿಗಳಿರುವ ನಾಡುಗಳಲ್ಲಿ ಸುತ್ತಾಡುತ್ತಿದ್ದರು. ನಮ್ಮ ಮಾರ್ಗದರ್ಶನಕ್ಕೆ ಪವಿತ್ರ ಕುರ್‌ಆನಿನಲ್ಲಿರುವ ಜನಾಂಗಗಳು ಮತ್ತು ಪ್ರವಾದಿಗಳ ಚರಿತ್ರೆ ಸಾಕಾಗುವುದು.

ಆದರೆ ಹಝ್ರತ್ ಆದಮ್(ಅ) ಮತ್ತು ಹಝ್ರತ್ ನೂಹ್ (ಅ) ಮಧ್ಯೆ ಸುದೀರ್ಘ ಕಾಲದಲ್ಲಿದ್ದ ಜನಾಂಗಗಳ ಚರಿತ್ರೆಯನ್ನು ಅರಬರು ತಿಳಿದಿರಲಿಲ್ಲ. ಆದುದರಿಂದ ಅದನ್ನು ಪವಿತ್ರ ಕುರ್‌ಆನ್ ಉಲ್ಲೇಖಿಸದೆ ಹಝ್ರತ್ ನೂಹ್ ರಿಂದ(ಅ) ಪ್ರವಾದಿಗಳ ಇತಿಹಾಸವನ್ನು ಪ್ರಾರಂಭಿಸಿದೆ.

ತಮ್ಮ ಪ್ರವಾದಿಗಳನ್ನು ಆಯಾ ಜನಾಂಗಗಳು ವಿರೋಧಿಸಿತ್ತೆಂದು ಈ ಹಿಂದೆಯೇ ಸೂಚಿಸಲಾಗಿದೆಯಷ್ಟೇ. ಅವರು ಪ್ರವಾದಿಗಳ ಶಿಕ್ಷಣದ ಲಾಭವೆತ್ತುವಲ್ಲಿ ವಿಫಲಗೊಂಡರು. ಒಂದು ವೇಳೆ ಈ ಜನಾಂಗಗಳಲ್ಲಿ ಯಾವುದೇ ಜನ ವಿಭಾಗ ಅಥವಾ ಸಮುದಾಯ ಪ್ರವಾದಿಗಳನ್ನು ಅನುಸರಿಸಿದರೂ ಅವು ಪ್ರವಾದಿ ಶಿಕ್ಷಣಗಳನ್ನು ಸುರಕ್ಷಿತವಾಗಿ ಇರಿಸಲು ವಿಫಲವಾಗಿವೆ ಮತ್ತು ನಂತರದ ಪೀಳಿಗೆಯಂತೂ ಪ್ರವಾದಿಗಳ ಶಿಕ್ಷಣವನ್ನೇ ಬದಲಾಯಿಸಿತು. ಆದುದರಿಂದ ಅವರ ಕಟ್ಟುಕತೆಗಳೊಂದಿಗೆ, ಪ್ರವಾದಿಗಳ ನೈಜ ಶಿಕ್ಷಣ ಮತ್ತು ಚರಿತ್ರೆಯೂ ಮಿಶ್ರಣಗೊಂಡಿವೆ. ಕಾಲಕ್ರಮೇಣ, ಮಾನವರನ್ನೇ ದೇವನೆಂದು ಆರಾಧಿಸುವ ಕಾರ್ಯ ಆರಂಭವಾಗಿತ್ತು. ಮಾನವನು ದೇವನೆಂದೂ ದೇವಪುತ್ರನೆಂದೂ ದೇವನ ಅವತಾರವೆಂದೂ ಅವನಿಗೆ ಪೂಜೆ-ವಂದನೆಗಳು ನಡೆದವು. ತಮ್ಮ ಧಾರ್ಮಿಕ ನೇತಾರರು ಹೇಳುವುದನ್ನು ಜನರು ಅನುಸರಿಸತೊಡಗಿದರು. ಈ ಪಥಭ್ರಷ್ಟ ನೇತಾರರ ಅಂಧಾನುಕರಣೆಗಿಳಿದರು. ಧರ್ಮವು ಛಿದ್ರಗೊಂಡಿತು. ಜನರಿಗೂ ತಮ್ಮಲ್ಲಿರುವ ತಿಳುವಳಿಕೆ, ಬುದ್ಧಿ ಶಕ್ತಿಯನ್ನು ಬಳಸಬೇಕೆಂದು ಅನ್ನಿಸಲಿಲ್ಲ. ಆದ ಕಾರಣ ಧಾರ್ಮಿಕ ನೇತಾರರೆನಿಸಿಕೊಂಡವರು ಜನರನ್ನು ನೈತಿಕವಾಗಿ ಮತ್ತು ವ್ಯಾವಹಾರಿಕವಾಗಿ ಹೀಗೆ ಸಕಲ ರೀತಿಯಿಂದ ಪಥಭ್ರಷ್ಟಗೊಳಿಸುವಲ್ಲಿ ಯಶಸ್ವಿಯಾದರು. ನೈಜ ಶಿಷ್ಟಾಚಾರ-ಸಂಸ್ಕೃತಿ-ನೈತಿಕತೆಗಳು ನಾಶವಾದವು. ಪ್ರವಾದಿಗಳಿದ್ದಾಗ ಪ್ರವಾದಿಗಳ ವಿರುದ್ಧವೇ ಜನರು ಬಂಡಾಯವೆದ್ದರು. ಈ ಮನುಷ್ಯ ನಮ್ಮ ಮಾರ್ಗದರ್ಶನ ಮಾಡುವುದೇ ಎಂದು ಪ್ರವಾದಿಗಳನ್ನು ಅಣಕಿಸಿದ್ದರು. ಪ್ರವಾದಿಗಳ ಮೇಲೆ ವಿಶ್ವಾಸವಿರಿಸಲು ನಿರಾಕರಿಸಿದ್ದರು.

ಏನಿದು? ಪ್ರವಾದಿಗಳನ್ನು ಧಿಕ್ಕರಿಸಿದ ಜನರು ಧರ್ಮ ಗುರುಗಳನ್ನು ತಲೆ ಮೇಲೆ ಹೊತ್ತುಕೊಂಡರೇ….! ಪ್ರವಾದಿಗಳ ಮಾತನ್ನೇ ನಿರಾಕರಿಸುವ ಜನರು ಧರ್ಮಗುರುಗಳ ಮಾತನ್ನು ಸಂತೋಷದಿಂದ ಸ್ವೀಕರಿಸುತ್ತಿರುವುದು ವಿಚಿತ್ರವಲ್ಲವೇ? ಅದು ಕೂಡಾ ಈ ಪಥಭ್ರಷ್ಟ ಧರ್ಮಗುರುಗಳ ಮಾರ್ಗದರ್ಶನವನ್ನು ಚಾಚೂತಪ್ಪದೆ ಪಾಲಿಸುತ್ತಿದ್ದರು. ಹಾಗಿದ್ದರೆ ಈ ಜನರಿಗೆ ಅಲೆದಾಟ ಪಥಭ್ರಷ್ಟತೆಗಳು ಪ್ರಿಯವಾಗಿರಬಹುದು. ಆದುದರಿಂದ ಅವರು ಸತ್ಯದ ಬೆಳಕಿನೆಡೆಗೆ ಸಾಗಲು ವಿಫಲರಾದರು. ಸಚ್ಚಾರಿತ್ರ್ಯ- ಜ್ಞಾನ- ವಿವೇಕಗಳಿಂದ ವಂಚಿಸುತ್ತಿದ್ದ ತಮ್ಮ ಮಾರ್ಗದರ್ಶಕರೇ ಅವರಿಗೆ ಪ್ರಿಯವಾಗಿದ್ದರು.

ಪ್ರವಾದಿಗಳ ಸಮಾನ ಶಿಕ್ಷಣ
ಪ್ರವಾದಿಗಳು ಜಗತ್ತಿಗೆ ನೀಡಿದ ಶಿಕ್ಷಣದಲ್ಲಿ ಯಾವುದೇ ಮೂಲಭೂತ ವ್ಯತ್ಯಾಸಗಳಿರಲಿಲ್ಲ. ದೇವನೊಬ್ಬನೇ ಮತ್ತು ನಾವೆಲ್ಲರೂ ಆ ದೇವನ ದಾಸರಾಗಿದ್ದೇವೆ ಎಂಬ ಮೂಲಭೂತ ಶಿಕ್ಷಣವನ್ನು ಎಲ್ಲ ಪ್ರವಾದಿಗಳು ಜನರ ಮುಂದಿರಿಸಿದರು. ದೇವನದಾಸ್ಯ ಮತ್ತು ಅನುಸರಣೆಯಿಂದ ಬದುಕಬೇಕು. ದೇವನ ಮುಂದೆ ತಮ್ಮ ಕರ್ಮಗಳ ಲೆಕ್ಕಪತ್ರವನ್ನು ಸಮರ್ಪಿಸಲಿಕ್ಕಿದೆ. ಪ್ರಪಂಚದ ಭೌತಿಕ ಜೀವನದ ನಂತರ ಪರಲೋಕದಲ್ಲಿಯೂ ಮಾನವರು ಜೀವಿಸಬೇಕಾಗಿದೆ. ಅಲ್ಲಿ ಅವರವರ ಕರ್ಮಗಳ ಪ್ರಕಾರ ಕೆಲವರಿಗೆ ಸಂತೋಷದಾಯಕ ಇನ್ನು ಕೆಲವರಿಗೆ ದುಃಖಭರಿತ ಮತ್ತು ಯಾತನೆಯ ಜೀವನವಿದೆ ಎಂದು ಪ್ರವಾದಿಗಳು ಕರೆ ನೀಡಿದರು.

ದೇವ ಸಂಪ್ರೀತಿ ಗಳಿಕೆ ಮಾನವರ ಕರ್ತವ್ಯವಾಗಿದೆ. ಸನ್ಮಾರ್ಗದಲ್ಲಿ ಸಂಚರಿಸಿದರೆ ಸಫಲರಾಗಬಹುದು. ಮೂಲಭೂತ ಶಿಕ್ಷಣವನ್ನು ಎಲ್ಲ ಪ್ರವಾದಿಗಳು ತಮ್ಮ ಜನಾಂಗಗಳಿಗೆ ನೀಡಿದರು. ಆದುದರಿಂದ ಪ್ರವಾದಿಗಳೆಲ್ಲರ ಮೂಲಭೂತ ಶಿಕ್ಷಣ ಒಂದಾಗಿತ್ತು.

ಆನಂತರ ದೇವನ ಹಕ್ಕು, ಅಧಿಕಾರಗಳು ಮತ್ತು ದಾಸರ ಹಕ್ಕುಗಳನ್ನು ಜನರು ಅರಿತುಕೊಳ್ಳಬೇಕು. ಭೂಮುಖದಲ್ಲಿ ಯಾವ ವ್ಯಕ್ತಿಯ ಮೇಲೂ ಯಾವುದೇ ಅನ್ಯಾಯ ನಡೆಯಬಾರದು ಮತ್ತು ದೌರ್ಜನ್ಯವಾಗಬಾರದು. ಜನರು ನ್ಯಾಯ ಮತ್ತು ತ್ಯಾಗ ಆಧಾರಿತವಾಗಿ ಜೀವನ ನಡೆಸಬೇಕು. ಪರಸ್ಪರ ಕರುಣೆ, ಹಿತಮಿತವಾಗಿ ವರ್ತಿಸಬೇಕು. ತಮ್ಮ ಅಗತ್ಯಕ್ಕಿಂತ ಇತರರ ಅಗತ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಬಡವರು, ಅಸಹಾಯಕ ಜನರಿಗೆ ಉಪಕಾರಿಗಳಾಗಬೇಕು ಎಂಬ ಸಮಾನ ಶಿಕ್ಷಣಗಳನ್ನು ಎಲ್ಲ ಪ್ರವಾದಿಗಳು ನೀಡಿದ್ದಾರೆ. ಈ ಮೂಲಭೂತ ಶಿಕ್ಷಣಗಳನ್ನು ಎಲ್ಲ ಪ್ರವಾದಿಗಳೂ ನೀಡಿದ್ದಾರೆ.

ಭೂಮಿಯಲ್ಲಿ ದೇವೇಚ್ಛೆಯನ್ನು ನಿರ್ಲಕ್ಷಿಸಿದರೆ ಅಂತಹವರು ಪಥಭ್ರಷ್ಟರಾಗುವರು. ಪರಲೋಕದಲ್ಲಿ ದೇವನ ಯಾತನೆಗೀಡಾಗುವರು. ಇನ್ನು ದೇವೇಚ್ಛೆಯಂತೆ ಜೀವನ ವ್ಯಯಿಸಿದ ದಾಸರಿಗೆ ಅಲ್ಲಿ ದೇವ ಸಂಪ್ರೀತಿ ಮತ್ತು ಉತ್ತಮ ಜೀವನಾಧಾರ ಅರ್ಥಾತ್ ಸ್ವರ್ಗವಾಸ ದೊರೆಯುವುದು.

ಸ್ವರ್ಗವಾಸಿಗಳು ನರಕವಾಸಿಗಳನ್ನು ಹೇಗೆ ನರಕಕ್ಕೆ ಹೋದಿರೆಂದು ಪ್ರಶ್ನಿಸುವ ಸಂದರ್ಭ ಪವಿತ್ರ ಕು‌ರ್ ಆನ್‌ನಲ್ಲಿದೆ.

ಅವರು ಹೇಳುವರು; ನಾವು ನಮಾಝ್ ಮಾಡುವವರಾಗಿರಲಿಲ್ಲ- ಮತ್ತು ದರಿದ್ರರಿಗೆ ಉಣಿಸುತ್ತಿರಲಿಲ್ಲ. ಮತ್ತು ಸತ್ಯದ ವಿರುದ್ಧ ಮಾತುಗಳನ್ನು ಸೃಷ್ಟಿಸುವವರ ಜೊತೆ ಸೇರಿ ನಾವೂ ಮಾತುಗಳನ್ನು ಸೃಷ್ಟಿಸುತ್ತಿದ್ದೆವು- ಮತ್ತು ನಾವು ಪ್ರತಿಫಲದ ದಿನವನ್ನು ಸುಳ್ಳೆಂದು ಹೇಳುತ್ತಿದ್ದೆವು- ಕೊನೆಗೆ ಆ ಖಚಿತ ದಿನವು ನಮಗೆ ಎದುರಾಗಿಯೇ ಬಿಟ್ಟಿತು. (ಪವಿತ್ರ ಕು‌ರ್ ಆನ್, 74:43-47)

ಈ ರೀತಿ ಪ್ರವಾದಿ ಶಿಕ್ಷಣಗಳ ನಿರಾಕರಣೆಗೆ ಏನು ಪರಿಣಾಮವೆಂದು ಪವಿತ್ರ ಕುರ್‌ಆನ್ ವಿವರಿಸುತ್ತಿದೆ. ಎಲ್ಲ ಪ್ರವಾದಿಗಳು ಜನರಿಗೆ ನ್ಯಾಯವಾದ ಶಿಕ್ಷಣವನ್ನು ನೀಡಿದ್ದರು. ಅದು ಸಾಮಾಜಿಕ, ವೈಯಕ್ತಿಕ ಹೀಗೆ ಎಲ್ಲ ಕೆಡುಕುಗಳಿಂದ ಜನರು ಮುಕ್ತರಾಗುವ ಶಿಕ್ಷಣವಾಗಿತ್ತು. ಪ್ರವಾದಿಗಳು ಒಳಿತಿನ ಕಾರ್ಯವನ್ನು ಮಾಡಲು ಪ್ರೇರೇಪಿಸುತ್ತಿದ್ದರು. ಜನರ ಪ್ರತಿಯೊಂದು ಕರ್ಮವೂ ದೇವನಿಗಾಗಿ, ದೇವಾನುಗ್ರಹ ಪಡೆಯುವುದಕ್ಕಾಗಿರಬೇಕು. ತೋರಿಕೆಯ ಮತ್ತು ಪ್ರಪಂಚದಲ್ಲಿ ಕೀರ್ತಿ ಸಂಪಾದಿಸುವ ಆಶೆಗಳಿಂದ ನಿಮ್ಮ ಕರ್ಮಗಳಿರಬಾರದೆಂಬ ಮೂಲಭೂತ ಶಿಕ್ಷಣವನ್ನು ಸಮಾನವಾಗಿ ಎಲ್ಲ ಪ್ರವಾದಿಗಳು ಜನರಿಗೆ ನೀಡಿದರು.

ಪವಾಡ (ಮುಅ್ ಜಿಝಃ Miracle)
ಮಾನವರಿಂದ ಮಾಡಲು ಅಸಾಧ್ಯವಾದ ಮತ್ತು ಮಾನವರ ಮುಂದೆ ಜರಗುವ ಕಾರ್ಯಗಳನ್ನು ಮುಅ್ ಜಿಝಃ (Miracle) ಎಂದು ಕರೆಯುತ್ತೇವೆ. ಇದನ್ನು ಪವಿತ್ರ ಕುರ್‌ಆನ್ ಆಯತ್, ಆಯಾತ್ ಎಂಬ ಪದಗಳಿಂದ ಪ್ರಸ್ತಾಪಿಸಿದೆ. ಆಯತೆಂದರೆ ಗುರುತು, ಪ್ರಮಾಣ, ದೃಷ್ಟಾಂತ ಅಥವಾ ಆದೇಶಗಳೆಂದಾಗುವುದು. ಪವಿತ್ರ ಕು‌ರ್ ಆನ್ ಈ ರೀತಿ ವಿವರಿಸಿದೆ.

ಆಕಾಶಗಳಲ್ಲೂ ಭೂಮಿಯಲ್ಲೂ ಎಷ್ಟೋ ನಿದರ್ಶನಗಳಿವೆ. ಅವುಗಳನ್ನು ಇವರು ಹಾದು ಕೊಂಡು ಹೋಗುತ್ತಿರುತ್ತಾರೆ ಮತ್ತು ಅವುಗಳ ಕಡೆಗೆ ಕಿಂಚಿತ್ ಗಮನ ಹರಿಸುವುದಿಲ್ಲ. (ಪವಿತ್ರ ಕುರ್‌ಆನ್, 12:105)

ಆಯತ್‌ಗಳು ಯಾವುದೇ ರೂಪದ್ದಾದರೂ ಅದು ಮಾನವನ ಬುದ್ದಿ ಶಕ್ತಿ ಮತ್ತು ಆಂತರ್ಯವನ್ನು ಎಚ್ಚರಿಸುವ ಶಕ್ತಿಯನ್ನು ಹೊಂದಿದೆ. ಪ್ರಪಂಚದಲ್ಲಿ ಅಸಂಖ್ಯಾತ ಆಯತ್‌ಗಳು (ದೃಷ್ಟಾಂತಗಳು) ಹರಡಿವೆ. ಅವು ಪ್ರಪಂಚವನ್ನು ಮಾಧ್ಯಮವಾಗಿಟ್ಟು ದೇವನ ದಯೆ, ಗುಣ, ತತ್ವಾದರ್ಶಿತ್ವ ಮಹಾನತೆ, ಉಚ್ಚತೆ, ನ್ಯಾಯ ಹಾಗೂ ಕೊಡುಗೆಗಳನ್ನು ಪ್ರಕಟಿಸುತ್ತಿವೆ. ಇದೇ ರೀತಿ ದೈವಿಕ ವಚನಗಳು ಓದುವ, ಆಲಿಸುವ ಆಯಾತ್ (ದೃಷ್ಟಾಂತಗಳು) ಗಳಾಗಿವೆ. ಅವುಗಳು ಪ್ರಾಮಾಣಿಕ, ಅತ್ಯಂತ ಸ್ಪಷ್ಟ ಮತ್ತು ವಿಶಾಲವಾಗಿದೆ. ಜಗತ್ತಿನಲ್ಲಿರುವ ಅಸಂಖ್ಯಾತ ಆಯಾತ್ (ದೃಷ್ಟಾಂತ, ಗುರುತು, ಪ್ರಮಾಣ)ಗಳಿಗೆ ಪವಿತ್ರ ಕುರ್‌ಆನಿನ ಮೂಲಕ ವಿಶ್ಲೇಷಣೆ ದೊರಕಿತು. ಆ ವರೆಗೂ ಮೂಕವಾಗಿದ್ದ ಅವುಗಳು ಪವಿತ್ರ ಕುರ್‌ಆನಿನ ಅವತೀರ್ಣದೊಂದಿಗೆ ಅರ್ಥವನ್ನು ಪಡೆದವು.

ಪವಿತ್ರ ಕುರ್‌ಆನಿನ ದೃಷ್ಟಾಂತಗಳನ್ನು ಪವಿತ್ರ ಕುರ್‌ಆನ್ ‘ರಹ್ಮತ್'(ಅನುಗ್ರಹ) ಎಂಬ ವಿಶ್ಲೇಷಿಸಿದೆ ಮತ್ತು ‘ರಿಝ್ಕ್ ಹಸನ್’ (ಉತ್ತಮ ಜೀವನಾಧಾರ) ಎಂಬ ಗುರುತನ್ನು ನೀಡಿದೆ. ‘ದಿಕ್ರ್’ (ಸ್ಮರಣೆ) ಹಾಗೂ ‘ನೂರ್’ (ಪ್ರಕಾಶ) ಎಂದೂ ಅದು ನೀಡಿದೆ. ಇದರಿಂದ ವಿವೇಕಿಗಳಿಗೆ ಜ್ಞಾನೋದಯವಾಗುವುದು. ಪವಿತ್ರ ಕು‌ರ್ ಆನಿನಲ್ಲಿ ವಿಶ್ವಾಸವಿರಿಸಿ ಉತ್ತಮ ಕರ್ಮಗಳನ್ನು ಮಾಡಬೇಕೆಂಬ ಪವಿತ್ರ ಕುರ್ ಆನಿನ ಕರೆಗೆ ವಿವೇಕಿಗಳು ಓಗೊಡುವರು. ಪವಿತ್ರ ಕು‌ರ್ ಆನಿನ ಕರೆಯು ಬುದ್ದಿ ವಿವೇಕಗಳಿಗೆ ಸಂಬಂಧಿಸಿರುವ ಕರೆಯಾಗಿದೆ. ಮಾನವರ ನೈಜ ಪ್ರಕೃತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಅದು ಮಾಡುವುದು. ಆದುದರಿಂದ ಸ್ವಯಂ ಪವಿತ್ರ ಕು‌ರ್ ಆನ್ ತನ್ನನ್ನು ದಿಕ್ರ್ ಮತ್ತು ತಬ್ಸಿರಾ (ಸ್ಮರಣೆ ಹುಟ್ಟಿಸುವ ಮತ್ತು ಕಣ್ತೆರೆಸುವ ಗ್ರಂಥ) ಎಂದು ಕರೆದುಕೊಂಡಿದೆ. ವಿವೇಕಿಗಳ ಜ್ಞಾನ ಮತ್ತು ವಿಚಾರವು ಪವಿತ್ರ ಕು‌ರ್ ಆನಿನ ದೃಷ್ಟಾಂತ(ಆಯಾತ್)ಗಳಿಂದ ಸುದೃಢಗೊಳ್ಳುವುದು. ಮಾನವರ ಸಕಲ ಸಂದೇಹಗಳು ದೂರಗೊಳ್ಳುವುದು. ಪವಿತ್ರ ಕುರ್‌ಆನ್ ತನ್ನನ್ನು ಹುದಾ(ಮಾರ್ಗದರ್ಶಿ),’ ತಿಬ್‌ಯಾನ್(ಸುಸ್ಪಷ್ಟಪಡಿಸುವುದು),’ ಹಕ್(ಸತ್ಯ),’ ಬು‌ರ್ ಹಾನಿ(ಪ್ರಮಾಣ),’ ಬಸಾಇರ್(ಕಿರಣ),’ ನೂರ್(ಪ್ರಕಾಶ),’ ಶಿಫಾ(ಆರೋಗ್ಯ),’ ಎಂದು ಕೂಡಾ ಹೆಸರಿಸಿದೆ.

ಜನರನ್ನು ಆಶ್ಚರ್ಯಚಕಿತಗೊಳಿಸುವ ಪವಾಡವನ್ನು ತೋರಿಸಿ, ಜನರು ಅಪ್ರಾಕೃತಿಕ ಕಾರ್ಯಗಳನ್ನು ಪ್ರೀತಿಸುವಂತೆ ಮಾಡುವುದು ಪ್ರವಾದಿಗಳ ಶಿಕ್ಷಣದ ಉದ್ದೇಶವಲ್ಲವೆಂದು ಪವಿತ್ರ ಕುರ್‌ಆನ್‌ನಿಂದಲೇ ತಿಳಿದು ಬರುವುದು. ಪವಾಡ (ಮುಅ್ ಜಿಝ)ಗಳಿಂದ ಜನರಿಗೆ ಮನರಂಜನೆ ಒದಗಿಸುವುದು ಪ್ರವಾದಿಗಳ ಕಾರ್ಯವಲ್ಲವೆಂದು ಪವಿತ್ರ ಕು‌ರ್ ಆನ್‌ನಿಂದ ನಮಗೆ ಸ್ಪಷ್ಟವಾಗುವುದು. ಹಾಗೆಯೇ ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಶಿಕ್ಷಣದ ಅಧ್ಯಯನ ನಡೆಸಿದಾಗ ಅದರಲ್ಲಿ ಸತ್ಯವೇ ಅಮೂಲ್ಯ ವಸ್ತುವಾಗಿದೆ ಎಂದು ನಮಗೆ ತಿಳಿದು ಬರುವುದು.

ಜನರು ಸಕಲ ಭ್ರಮೆ, ಜಡತನ, ಮೂರ್ಖತನ ಮತ್ತು ಅಂಧವಿಶ್ವಾಸದಿಂದ ಮುಕ್ತರಾಗಬೇಕೆಂದು ಪವಿತ್ರ ಕು‌ರ್ ಆನ್ ಕಲಿಸುತ್ತದೆ. ಜನರು ಪವಿತ್ರ ಕುರ್ ಆನಿನ ಬೆಳಕಿನಲ್ಲಿ ಜೀವಿಸಬೇಕು ಮತ್ತು ಜೀವನದ ನೈಜ ಅರ್ಥ ಮತ್ತು ಆಶಯಗಳನ್ನು ಅದರಿಂದ ಮನವರಿಕೆ ಮಾಡಿಕೊಳ್ಳಬೇಕೆಂದು ಪವಿತ್ರ ಕು‌ರ್ ಆನ್ ಮಾರ್ಗದರ್ಶನ ನೀಡುತ್ತದೆ.

ಮಾನವರ ಮನಮಸ್ತಿಷ್ಕಗಳು ದುರಾಗ್ರಹಕ್ಕೊಳಗಾಗಬಾರದು, ಸಂದೇಹಕ್ಕೊಳಗಾಗಬಾರದು, ನೈತಿಕತೆ, ಸಚ್ಚಾರಿತ್ರ್ಯಗಳಿಂದ ಅವರ ಜೀವನ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಪವಿತ್ರ ಕು‌ರ್ ಆನಿನ ಅಧ್ಯಯನದಿಂದ ನಾವು ಸ್ಪಷ್ಟವಾಗಿ ತಿಳಿದುಕೊಳ್ಳುತ್ತೇವೆ. ಮಾನವರ ಈ ಜೀವನ ಶೈಲಿಯ ಮುಂದೆ ಪವಾಡಗಳಿಗೆ ಬೆಲೆಯಿಲ್ಲವೆಂದೂ ಜನರಿಗೆ ಪವಾಡ ಅಥವಾ ಮುಅ್ ಜಿಝಃಗಳನ್ನು ತೋರಿಸುವುದು ಪ್ರವಾದಿಗಳ ಕಾರ್ಯವಲ್ಲವೆಂದೂ ಪವಿತ್ರ ಕು‌ರ್ ಆನ್‌ನಿಂದ ಸ್ಪಷ್ಟವಾಗುತ್ತದೆ.

ಪವಾಡ ದೇವನಿಂದ ಪ್ರಕಟವಾಗುವ ಕಾರ್ಯವಾಗಿದೆ. ಪ್ರವಾದಿತ್ವದ ಪುಷ್ಟಿಕರಣಕ್ಕಾಗಿ ಅದು ಪ್ರದರ್ಶಿಸಲ್ಪಡುವುದು. ಪ್ರವಾದಿಗಳಲ್ಲಿ ಯಾವುದಾದರೂ ಪವಾಡ ತೋರಿಸಿದರೆ ವಿಶ್ವಾಸವಿರಿಸುತ್ತೇವೆ ಎನ್ನುವವರಿಗಾಗಿ ಅವರು ವಿಶ್ವಾಸವಿರಿಸುತ್ತಾರೆಂದು ಅದು ಪ್ರಕಟಗೊಳ್ಳುವುದಿಲ್ಲ. ಅದನ್ನು ದೇವನು ತನ್ನ ನಿದರ್ಶನಗಳ ಹೊಣೆಗಾರಿಕೆ ಪೂರ್ತಿಗೊಳಿಸುವುದಕ್ಕಾಗಿ ಪ್ರಕಟಿಸುತ್ತಾನೆ. ನಾಳೆ (ಪರಲೋಕದಲ್ಲಿ) ಸತ್ಯವನ್ನು ಧಿಕ್ಕರಿಸಿದವರು ಯಾವುದಾದರೂ ಪವಾಡವನ್ನು ತೋರಿಸಿರುತ್ತಿದ್ದರೆ ನಾವು ಸತ್ಯವಿಶ್ವಾಸವಿರಿಸುತ್ತಿದ್ದೆವು ಎಂದು ಹೇಳುವ ಸಾಧ್ಯತೆಗಳೇ ಉಳಿಯಬಾರದು ಎಂದು ದೇವನು ಅದನ್ನು ಪ್ರಕಟಿಸುತ್ತಾನೆ.

ಯಾವುದಾದರೂ ಜನಾಂಗವನ್ನು ಅದರ ಉದ್ದಟತನಗಳಿಗಾಗಿ ಮಾತ್ರ ಶಿಕ್ಷಿಸುವುದು ದೇವೇಚ್ಛೆಯಾಗಿದೆ. ಒಂದು ವೇಳೆ, ಜನಾಂಗಗಳ ಬೇಡಿಕೆಯಂತೆ ಪವಾಡ ತೋರಿಸಿಯೂ ಸತ್ಯದಲ್ಲಿ ವಿಶ್ವಾಸವಿರಿಸದಿದ್ದರೆ ಅದಕ್ಕಿಂತ ದೊಡ್ಡ ಬಂಡಾಯವೇನಿದೆ? ಆದುದರಿಂದ ಮೂಜಿಝಃ ಅಥವಾ ಪವಾಡ ಪ್ರಕಟಗೊಂಡ ಬಳಿಕ ಒಂದೋ ಸತ್ಯವಿಶ್ವಾಸವಿರಿಸುವುದು ಅಥವಾ ದೈವಿಕ ಯಾತನೆಗೆ ಗುರಿಯಾಗುವುದು ಅನಿವಾರ್ಯವಾಗಿದೆ.

ಪವಿತ್ರ ಕುರ್‌ಆನ್ ಜನಾಂಗಗಳ ಉದ್ಭಟವಾದವನ್ನು ಹೀಗೆ ಉಲ್ಲೇಖಿಸಿದೆ:
”ಈ ಪ್ರವಾದಿಯ ಮೇಲೆ ಒಬ್ಬ ‘ದೇವಚರ’ ಏಕೆ ಇಳಿಸಲ್ಪಡಲಿಲ್ಲವೆಂದು ಇವರು ಕೇಳುತ್ತಾರೆ. ನಾವು ದೇವಚರನನ್ನು ಇಳಿಸುತ್ತಿದ್ದರೆ, ಇಷ್ಟರೊಳಗೆ ಎಂದೋ ತೀರ್ಮಾನವೇ ಆಗಿಬಿಡುತ್ತಿತ್ತು. ಅನಂತರ ಇವರಿಗೆ ಅವಧಿ ಕೊಡಲಾಗುತ್ತಿರಲಿಲ್ಲ.” (ಪವಿತ್ರ ಕುರ್‌ಆನ್, 6:8)

ಯಾವ ಪ್ರವಾದಿಯೂ ದೇವನ ವತಿಯಿಂದಲ್ಲದೆ ಪವಾಡ ತೋರಿಸಲಾರರು. ಹೀಗೆ ದೇವನ ನೆರವಿನಿಂದ ಪವಾಡಗಳು ಪ್ರಕಟಗೊಳ್ಳುತ್ತವೆ. ದೇವನ ಸಂದೇಶವನ್ನು ಜನರ ಬಳಿಗೆ ತಲುಪಿಸುವುದು ಮಾತ್ರ ಪ್ರವಾದಿಗಳ ಕರ್ತವ್ಯವಾಗಿದೆ.

ಪವಿತ್ರ ಕು‌ರ್ ಆನ್ ಪ್ರವಾದಿಗಳ ಕರ್ತವ್ಯಗಳ ಕುರಿತು ಹೀಗೆ ವಿಶ್ಲೇಷಿಸಿದೆ:

“ನೀವು ನಮ್ಮ ಹಾಗಿರುವ ಮನುಷ್ಯರಲ್ಲದೆ ಇನ್ನೇನೂ ಅಲ್ಲ. ನಮ್ಮ ಪೂರ್ವಿಕರಿಂದಲೇ ಆರಾಧಿಸಲ್ಪಡುತ್ತಾ ಬಂದಿರುವವುಗಳ ದಾಸ್ಯ- ಆರಾಧನೆಯಿಂದ ನೀವು ನಮ್ಮನ್ನು ತಡೆಯಲಿಚ್ಛಿಸುತ್ತೀರಿ. ಹಾಗಿದ್ದರೆ ಸುವ್ಯಕ್ತ ಆಧಾರ ಪ್ರಮಾಣ ತನ್ನಿರಿ. ಅವರ ರಸೂಲರು ಅವರೊಡನೆ ಹೇಳಿದರು; ನಿಜಕ್ಕೂ ನಾವು ನಿಮ್ಮಂತಹ ಮನುಷ್ಯರೇ ವಿನಾ ಇನ್ನೇನೂ ಅಲ್ಲ. ಆದರೆ ಅಲ್ಲಾಹನು ತನ್ನ ದಾಸರ ಪೈಕಿ ತನಗಿಷ್ಟ ಬಂದವರನ್ನು ಅನುಗ್ರಹಿಸುತ್ತಾನೆ ಮತ್ತು ನಿಮಗೇನಾದರೂ ಆಧಾರ ಪ್ರಮಾಣ ತರುವುದು ನಮ್ಮ ಅಧಿಕಾರದಲ್ಲಿಲ್ಲ. ಆಧಾರ ಪ್ರಮಾಣ ಅಲ್ಲಾಹನ ಅನುಜ್ಞೆಯಿಂದಲೇ ಬರಬಲ್ಲುದು ಮತ್ತು ಸತ್ಯವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆ ಇಡಬೇಕು.” (ಪವಿತ್ರ ಕುರ್ ಆನ್, 14:10-11)

ಪವಿತ್ರ ಕುರ್‌ಆನಿನ ಈ ವಚನಗಳು ಪವಾಡವನ್ನು ತೋರಿಸುವುದು ಅಲ್ಲಾಹನ ಕೆಲಸವಾಗಿದೆ ಮತ್ತು ಪ್ರವಾದಿಗಳ ಪ್ರವಾದಿತ್ವದ ಪುಷ್ಟಿಕರಣಕ್ಕಾಗಿ ಅದನ್ನು ಅಲ್ಲಾಹನು ತೋರಿಸುತ್ತಾನೆ. ಪವಾಡ ತೋರಿಸುವುದು ಪ್ರವಾದಿಗಳ ಕೆಲಸವಲ್ಲವೆಂದು ಸ್ಪಷ್ಟಪಡಿಸುತ್ತದೆ. ಪ್ರವಾದಿಗಳು ಜನರಿಗೆ ದೇವನ ಏಕತ್ವವನ್ನು ಸ್ವೀಕರಿಸುವಂತೆ ಕರೆ ನೀಡುತ್ತಾರೆ. ಆ ದೇವನಿಗೆ ತಮ್ಮನ್ನು ಅರ್ಪಿಸಿಕೊಳ್ಳಿ ಎಂಬ ಸಂದೇಶವನ್ನು ಜನರಿಗೆ ತಲುಪಿಸುತ್ತಾರೆ. ಜನರ ಕರ್ಮಫಲ ಚಾರಿತ್ರ್ಯಗಳ ಲೆಕ್ಕ ಮಾಡುವ (ಲೋಕಾಂತ್ಯದ) ದಿನ ಎದುರಾಗುವುದಕ್ಕಿಂತ ಮುಂಚೆ ದೇವನಲ್ಲಿ ವಿಶ್ವಾಸವಿರಿಸಬೇಕೆಂದು ಜನರನ್ನು ಎಚ್ಚರಿಸುವ ಕಾರ್ಯ ಮಾಡುತ್ತಾರೆ.

ಪವಾಡವನ್ನು ನೋಡಿಯೂ ಪ್ರವಾದಿಗಳ ಮೇಲೆ ವಿಶ್ವಾಸವಿರಿಸದಿರುವ ಜನಾಂಗಗಳು ತಮ್ಮ ಧಿಕ್ಕಾರ ನೀತಿಯಲ್ಲೇ ಉಳಿದುಕೊಂಡರೆ ಆ ಜನಾಂಗಗಳೇ ಸ್ವಯಂ ವಿನಾಶವನ್ನು ತಮ್ಮ ಮೇಲೆ ಆಹ್ವಾನಿಸಿದಂತಾಗುವುದು. ಆದರೆ ಬಹಿರಂಗ ನಿದರ್ಶನಗಳು ಅಥವಾ ಪವಾಡಗಳು ಒಮ್ಮೆ ಪ್ರಕಟವಾದರೆ ಅಲ್ಲಿಗೇ ಜನರಿಗೆ ಸುಧಾರಿಸಿಕೊಳ್ಳುವ ಅವಕಾಶವೇ ಮುಗಿಯಿತೆಂದು ಅರ್ಥವಾಗಿದೆ. ಆಮೇಲೆ ಅವರನ್ನು ವಿನಾಶವು ಆವರಿಸಿಕೊಳ್ಳುವುದು.

ಸಾಮಾನ್ಯ ಪವಾಡಗಳು ಮತ್ತು ನಿರ್ಣಾಯಕ ಹಾಗೂ ಬೃಹತ್ತಾದ ಪವಾಡಗಳ ನಡುವೆ ಸಮಯದ ಅಂತರವಿರುವುದು. ದೇವನು ನಿಶ್ಚಯಿಸಿದ ಅವಧಿಯಲ್ಲಿ ಅದು ಪ್ರಕಟಗೊಳ್ಳುವುದು. ವಿಶ್ವಾಸವಿರಿಸಲು ಅದನ್ನು ಕಾದು ಕುಳಿತವರು ಅದನ್ನು ನೋಡಿದ ಮೇಲೆ ವಿಶ್ವಾಸವಿರಿಸಿದ ಘಟನೆ ಬಹಳ ವಿರಳವಾಗಿದೆಯೆಂದು ಇತಿಹಾಸದಿಂದ ಸ್ಪಷ್ಟವಾಗುವುದು.

ಆದರೆ ಈ ಪವಾಡ ಪ್ರಕಟವಾಗುವ ಅವಧಿ ಯಾವುದೆಂದು ದೇವನು ಬಹಿರಂಗಗೊಳಿಸಿಲ್ಲ. ಅಂತ್ಯ ದಿನದಂತೆ ಅದನ್ನೂ ಅವನು ರಹಸ್ಯವಾಗಿರಿಸಿದ್ದಾನೆ. ದೇವನು ಪ್ರವಾದಿಗಳಿಗೂ ಅದು ಪ್ರಕಟಗೊಳ್ಳುವ ಅವಧಿಯನ್ನು ತಿಳಿಸಿಲ್ಲ.

”ಈ ಪ್ರವಾದಿಯ ಮೇಲೆ ಇವನ ಪ್ರಭುವಿನ ಕಡೆಯಿಂದ ಒಂದು ದೃಷ್ಟಾಂತವೇಕೆ ಅವತೀರ್ಣಗೊಳಿಸಲ್ಪಡಲಿಲ್ಲವೆಂದು ಇವರು ಕೇಳುತ್ತಾರಲ್ಲ. ಅವರೊಡನೆ, ‘ನಿಶ್ಚಯವಾಗಿಯೂ ಅದೃಶ್ಯ ಜ್ಞಾನದ ಒಡೆಯ ಅಲ್ಲಾಹನೇ ಆಗಿರುತ್ತಾನೆ. ನೀವು ಕಾಯುತ್ತಿರಿ, ನಾನೂ ನಿಮ್ಮೊಂದಿಗೆ ಕಾದುಕೊಂಡಿರುತ್ತೇನೆ’ ಎಂದು ಹೇಳಿರಿ.” (ಪವಿತ್ರ ಕುರ್‌ಆನ್, 10:20)

ಪವಿತ್ರ ಕು‌ರ್ ಆನ್ ವಿವರಿಸಿರುವ ಈ ಪವಾಡವು ಶಾಶ್ವತವಾದ ಹಾಗೂ ಸ್ಮೃತಿಪಟಲದಲ್ಲಿ ಉಳಿಯುವಂತಹ ಘಟನೆಯಾಗಿದೆ. ಆದರೆ ಸ್ವಯಂ ಪವಿತ್ರ ಕುರ್‌ಆನ್ ಒಂದು ಜೀವಂತ ಪವಾಡವಾಗಿದ್ದು ಈಗಲೂ ನಮ್ಮೊಂದಿಗಿಲ್ಲವೇ?

ಈ ಜಗತ್ತು ಯಾವತ್ತೂ ಪವಿತ್ರ ಕು‌ರ್ ಆನಿಗೆ ಸರಿಸಾಟಿಯಾದ ವಚನಗಳನ್ನು ತಂದಿಲ್ಲ, ಅದು (ಪವಿತ್ರ ಕುರ್‌ಆನಿನ) ಪವಾಡವಲ್ಲವೇ? ಪವಿತ್ರ ಕುರ್‌ಆನ್ನಂತಹ ವಚನಗಳನ್ನು ಯಾರೂ ಎಂದಿಗೂ ತರುವುದು ಅಸಾಧ್ಯವಾಗಿದೆ. ಯಾಕೆಂದರೆ ದೈವಿಕ ವಚನಗಳವು. ಹೃದಯ ತಂತಿಯನ್ನು ಮೀಟಿ ಆತ್ಮವನ್ನು ಜಾಗೃತಗೊಳಿಸುವ ಶಕ್ತಿ ಅದಕ್ಕೆ ಮಾತ್ರ ಇದೆ. ಅದು ಮಾನವರ ನಿರ್ಲಕ್ಷ್ಯವನ್ನು ಕೊಡವಿಕೊಳ್ಳುವಂತಹ ಅದ್ವಿತೀಯ ಶಕ್ತಿಯಾಗಿದೆ. ಅದರ ಮಾರ್ಗದರ್ಶನವನ್ನು ಮೀರಿ ನಿಲ್ಲಲು ಯಾವ ಗ್ರಂಥಕ್ಕೂ ಸಾಧ್ಯವಿಲ್ಲ. ಪವಿತ್ರ ಕುರ್‌ಆನಿನ ಶಬ್ದಾರ್ಥ ಅಲಂಕಾರವನ್ನು ದೊಡ್ಡ ದೊಡ್ಡ ವಿಚಾರವಾದಿಗಳು, ಸಾಹಿತಿಗಳು ಕೂಡಾ ಅಧ್ಯಯನ ನಡೆಸಿದ್ದಾರೆ. ಆದರೂ ಪವಿತ್ರ ಕುರ್‌ಆನಿನ ವಿಶೇಷತೆ, ಸಾಹಿತ್ಯಕ ಸರಳತನಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಅವರಿಂದ ಸಾಧ್ಯವಾಗಿಲ್ಲ.

ಜನರ ಬುದ್ದಿ, ವಿವೇಕ, ಸೂಕ್ಷ್ಮದರ್ಶಿತ್ವ ಹಾಗೂ ಸೌಂದರ್ಯ ಪ್ರಜ್ಞೆಗಳಿಗೆ ಪವಾಡ ಸದೃಶ ಆಹ್ವಾನವು ಅದರ ಗುಣವಾಗಿದೆ.

ಜನರಲ್ಲಿರುವ ಅಜ್ಞಾನ ಕೊನೆಗೊಂಡು ಸಮಾನತೆ, ಸದ್ವಿವೇಕವನ್ನು ಅವರು ಆದರ್ಶವಾಗಿ ಸ್ವೀಕರಿಸಬೇಕೆಂದು ಪವಿತ್ರ ಕುರ್‌ಆನ್ ಬಯಸುತ್ತಿದೆಯೇ ಹೊರತು ಜನರು ಯಾವುದೋ ಪವಾಡಗಳ ಬೆನ್ನು ಬಿದ್ದು ವಿನಾಶವನ್ನು ಆಹ್ವಾನಿಸದಿರಲಿ ಎಂದು ಅದು ಆಗ್ರಹಿಸುತ್ತದೆ.

ಅವತಾರವಾದ
ಕ್ರೈಸ್ತರು ಮತ್ತು ಯಹೂದಿಯರಲ್ಲಿ ಕೂಡಾ ನೆಬಿ, ರಸೂಲ್ ಅಥವಾ ಪೈಗಂಬರ್ (ಪ್ರವಾದಿತ್ವದ) ಎಂಬ ನಂಬಿಕೆಗಳು ಕಂಡು ಬಂದಿದೆ. ಬನೀ ಇಸ್ರಾಈಲ್ ಸಮುದಾಯದಲ್ಲಿ ಅತ್ಯಧಿಕ ಪ್ರವಾದಿಗಳು ಆಗಿ ಹೋಗಿದ್ದಾರೆ. ಭಾರತದ ಧರ್ಮಗಳಲ್ಲಿ ಕೂಡಾ ಪ್ರವಾದಿತ್ವದ ಕಲ್ಪನೆಯಿದ್ದು ಅದು ಅವತಾರವಾದದ ರೂಪದಲ್ಲಿ ಪ್ರಚಲಿತವಾಗಿದೆ.

ಅವತಾರವಾದವೆಂದರೆ ಧರ್ಮಕ್ಕೆ ಹಾನಿ ಸಂಭವಿಸಿದಾಗ ದುಷ್ಟರ ಸಂಹಾರಕ್ಕಾಗಿ ದೇವನು ಯಾವುದಾದರೊಂದು ಅವತಾರದಲ್ಲಿ ಪ್ರಕಟವಾಗುತ್ತಾನೆ ಎಂಬ ನಂಬಿಕೆಯಾಗಿದೆ. ಆದರೆ ಚಿಂತಿಸಿದಂತೆ ಅದು ಅವತಾರ ಎಂಬುದರ ತಪ್ಪು ಅರ್ಥವೆಂದು ಮನವರಿಕೆಯಾಗುವುದು. ‘ಅವತಾರ’ ಶಬ್ದಕ್ಕೆ ದೇವನು ಸ್ವಯಂ ಪ್ರಕಟಗೊಳ್ಳುತ್ತಾನೆಂಬ ಅರ್ಥವಿಲ್ಲ. ದೇವನ ಮುಖಾಂತರ ಅವತೀರ್ಣವಾಗಿರುವುದು ಅಥವಾ ದೇವನಿಂದ ನಿಯೋಜಿಸಲ್ಪಟ್ಟಿರುವುದು ಎಂದು ಅದರ ನಿಜಾರ್ಥವಾಗಿದೆ.

ಪಾಣಿನಿ’ಯು ಈ ಶಬ್ದದ ವ್ಯಾಖ್ಯಾನವನ್ನು ರಚಿಸಿದ್ದಾರೆ. ಅವತಾರ್ ಅಂದರೆ ‘ಅವತರಣ್ ಅವತಾರಂ’ ಎಂದಾಗುವುದು. ಅರ್ಥಾತ್ ಕೆಳಗೆ ಇಳಿಸಿರುವುದೆಂದಾಗುವುದೆಂದು ಅವರು ವಿಶ್ಲೇಷಿಸಿದ್ದಾರೆ. ‘ಕಲ್ಕಿ ಅವತಾರ್’ ಎಂಬ ಗ್ರಂಥದಲ್ಲಿ ಡಾ| ವೇದಪ್ರಕಾಶ ಉಪಾಧ್ಯಾಯರು ಭಾರತದಲ್ಲಿ ಪ್ರಚಲಿತದಲ್ಲಿರುವ ಅವತಾರ ನಂಬಿಕೆಯನ್ನು ವಿರೋಧಿಸಿದ್ದಾರೆ. ಅವತಾರಕ್ಕೆ ದೇವನು ದೂತರನ್ನು ಕಳಿಸುವುದೆಂಬ ಅರ್ಥ ನೀಡಿದ್ದಾರೆ. ಅರ್ಥಾತ್ ಜನರ ಮಾರ್ಗದರ್ಶನಕ್ಕಾಗಿ ಪ್ರವಾದಿಗಳನ್ನು ದೇವನು ನಿಯೋಜಿಸುವನು. ಈ ಪ್ರವಾದಿಗಳಲ್ಲಿ ಪ್ರವಾದಿ ಮುಹಮ್ಮದ್‌ರು(ಸ) ಕೊನೆಯ ಕೊಂಡಿಯೆಂದು ವೇದಪ್ರಕಾಶರು ಬರೆದಿದ್ದಾರೆ.

ಸರ್ವವ್ಯಾಪಿ, ಸರ್ವಶಕ್ತ, ಅದ್ವಿತೀಯ, ಸರ್ವಾಧಾರ, ಕರ್ತಾರ, ನಿಯಂತ್ರಕ, ಅಗೋಚರ, ಆದಿಗಳಂತಹ ದೇವನ ಗುಣಗಳನ್ನು ಅವಲೋಕಿಸಿದರೆ ಮಾನವನ ಅಥವಾ ಸಿಂಹದ ರೂಪದಲ್ಲಿ ದೇವನು ಅವತಾರವೆತ್ತುತ್ತಾನೆಂಬ ವಿಚಾರ ಬುದ್ದಿಗೆ ನಿಲುಕುವುದಿಲ್ಲ… ದೇವನು ಜೀವಿಗಳ ರೂಪದಲ್ಲಿರುತ್ತಾನೆಂಬ ಅವತಾರವಾದದ ನಂಬಿಕೆಯಿಂದ ದೇವನು ಸರ್ವ ವ್ಯಾಪಕನಲ್ಲ ಎಂದಂತಾಗುವುದು ಮತ್ತು ಅಸೀಮನಲ್ಲ, ಮಿತಿಯಿರುವವನು, ಒಂದು ದೇಶಕ್ಕೆ ಸೀಮಿತನಾಗಿ ಬಿಡುವವನು. ಆಮೇಲೆ ದೇವನನ್ನು ಹೇಗೆ ಸರ್ವಜ್ಞನೆಂದು ಕರೆಯುವುದು? ಹಾಗಾದರೆ ದೇವನನ್ನು ಆದಿ, ಅನಾದಿಯೆಂದು ಹೇಗೆ ಕರೆಯಲು ಸಾಧ್ಯ?

ಒಂದು ವಿಚಿತ್ರವನ್ನು ನೋಡಿ. ರಾಮಚಂದ್ರ ಮತ್ತು ಪರಶುರಾಮರು ಒಂದೇ ಕಾಲದ ಅವತಾರ ಪುರುಷರೆಂದು ಹೇಳಲಾಗುತ್ತದಷ್ಟೇ. ಪರಸ್ಪರ ಯುದ್ದಕ್ಕೂ ಅವರಿಬ್ಬರು ಸಿದ್ದರಾಗಿದ್ದಾರೆಂದು ವಿವರಿಸಲಾಗುತ್ತದೆ. ಒಬ್ಬ ದೇವನು ಇನ್ನೊಬ್ಬ ದೇವನಲ್ಲಿ ಯುದ್ಧಕ್ಕೆ ಹೊರಡುವುದೆಂದರೆ ಆ ಇನ್ನೊಬ್ಬನನ್ನು ಮತ್ತೊಬ್ಬ ಪರಮಾತ್ಮನೆಂದು ತಿಳಿದಿರಲಿಲ್ಲ ಎಂದಾಗುವುದು. ಹೀಗೆ ದೇವನೇ ದೇವನಲ್ಲಿ ಕಾದಾಡುವ ಸ್ಥಿತಿ ವಿಚಿತ್ರವಾಗಿಲ್ಲವೇ? ಪ್ರಚಲಿತ ಅವತಾರವಾದ ಬುದ್ದಿ ಸಂಗತವಲ್ಲ, ಧರ್ಮ ಸಂಗತವೆಂದೂ ಹೇಳಲು ಸಾಧ್ಯವಿಲ್ಲ, ಮಾತ್ರವಲ್ಲ, ಈ ವಾದವು ದೇವನ ಮಹಾತ್ಮಗೆ ವಿರುದ್ಧವಾಗಿದೆ. ದೇವನನ್ನು ಪೂರ್ಣನಲ್ಲ ಆಂಶಿಕ ಅವತಾರವೆಂದು ಒಪ್ಪಿಕೊಂಡಂತಾಗುವುದು. ದೇವನ ಅಖಂಡ ಪ್ರಭುತ್ವದ ಖಂಡನೆಯೆಂದು ಇದನ್ನು ವಿಶ್ಲೇಷಿಸಬಹುದಾಗಿದೆ.

ದೇವನು ಮಾನವ ಮತ್ತು ಬೇರೆ ರೂಪದಲ್ಲಿಯೂ ಅವತಾರವೆತ್ತುವನೆಂಬುದು ಸರಿಯಲ್ಲ. ಅದು ದೇವಚರರ ಕುರಿತ ಊನ ನಂಬಿಕೆಯಾಗಿರಬಹುದು. ಭಾರತದಲ್ಲಿ ದೇವಚರರನ್ನೇ ದೇವತೆಗಳೆಂದು ಹೆಸರಿಸಲಾಗುವಂತೆ ಪ್ರವಾದಿ ಮತ್ತು ಸಂದೇಶವಾಹಕರ ನಂಬಿಕೆಯು ದೇವಾವತಾರವಾಗಿ ರೂಪಾಂತರಗೊಂಡಿರಬಹುದು. ಇಂದು ಪ್ರಚಲಿತದಲ್ಲಿರುವ ಅವತಾರವಾದದ ರೂಪದಲ್ಲಿ ಪ್ರವರ್ಧಮಾನಕ್ಕೆ ಬಂದಿರಬಹುದು ಎಂದು ಅರ್ಥವಾಗುತ್ತದೆ. ಆದರೆ ದೇವನ ಅವತಾರದಿಂದ ದೇವನನ್ನು ವಿಕಾರಗೊಳಿಸಿದಂತಾಗುವುದೆಂಬ ವಿಚಾರ ಗಮನಿಸಲ್ಪಟ್ಟಿಲ್ಲವೆಂದು ವ್ಯಕ್ತಗೊಂಡಿದೆ.

ವಿದ್ವಾಂಸರು ಅವತಾರ ಶಬ್ದವನ್ನು ಪ್ರವಾದಿಗೆ ಹೋಲಿಸಿದ್ದಾರೆ. ಮುಹಮ್ಮದ್ ಗಜನಿಯ ನಾಣ್ಯದಲ್ಲಿರುವ ಸಂಸ್ಕೃತ ಉಲ್ಲೇಖದಲ್ಲಿ ಇದು ಸ್ಪಷ್ಟವಾಗಿದೆ. ಗಜನಿಯ ನಾಣ್ಯದಲ್ಲಿ ಇಸ್ಲಾಮಿನ ಸಾಕ್ಷ್ಯ ವಚನ (ಕಲಿಮಾ) ‘ಲಾ ಇಲಾಹ ಇಲ್ಲಲ್ಲಾಹ್ ಮುದ್ರಣವಾಗಿದ್ದು ಅದನ್ನು ‘ಅವ್ಯಕ್ತ’ ಏಕಮ್, ಮುಹಮ್ಮದ್ ಔತಾರಮ್’ ಎಂದು ಸಂಸ್ಕೃತಕ್ಕೆ ಭಾಷಾಂತರಿಸಲಾಗಿದೆ.

ಇಲ್ಲಿ ಅಲ್ಲಾಹನನ್ನು ‘ಅವ್ಯಕ್ತಮ್’ ಎಂದು ಪ್ರವಾದಿಯನ್ನು ‘ಔತಾರಮ್’ ಎಂದೂ ಸಂಬೋಧಿಸಿರುವುದನ್ನು ನಾವು ಕಾಣಬಹುದು. ‘ಅವ್ಯಕ್ತಮ್’ ಶಬ್ದ ಅಲ್ಲಾಹನಿಗೆ ಅರ್ಥ ಪೂರ್ಣವಾದ ಶಬ್ದ ಬಳಕೆಯಾಗಿದೆ. ಅತ್ಯಂತ ರಹಸ್ಯ ಪ್ರಭುತ್ವವೆಂಬುದು ಅಲ್ಲಾಹನ ಅರ್ಥಗಳಲ್ಲಿ ಒಂದಾಗಿದೆ. ರಹಸ್ಯ ಪ್ರಭುತ್ವವೆಂದರೆ ಅದು ಅವ್ಯಕ್ತವಾಗಿರುತ್ತದೆಯಷ್ಟೇ.

‘ಔತಾರಮ್’ ಎಂದರೆ ವಿದ್ವಾಂಸರ ಪ್ರಕಾರ ಪ್ರವಾದಿಗಳಿಗೆ ದೂತ- ಸಂದೇಶವಾಹಕ ಎಂಬ ಬಳಕೆಯಾಗಿದೆ. ಹೀಗಾಗಿ ಪ್ರವಾದಿಗಳಿಗೆ ‘ಔತಾರಿ ಪುರುಷ್’ ಎಂಬ ಸಂಕೇತವನ್ನು ನೀಡಿರಬಹುದು. ಅಂದರೆ ‘ಪ್ರವಾದಿ’ ಶಬ್ದದ ವಾಸ್ತವಿಕ ಅಭಿವ್ಯಕ್ತಿಯೇ ಎಂದು ಅದನ್ನು ಹೇಳಬಹುದು.

ಸ್ವರ್ಗ-ನರಕ-ಪರಲೋಕ ಎಂಬ ನಂಬಿಕೆಯು ವೇದಗಳಲ್ಲಿವೆ. ಅದು ಪವಿತ್ರ ಕುರ್‌ಆನ್ ಮತ್ತು ವೇದಗಳಲ್ಲಿ ಸಮಾನ ಪ್ರತಿಪಾದನೆಯಾಗಿದೆ. ಸಂಸ್ಕೃತದ ವಿದ್ವಾಂಸರಾದ ದುರ್ಗಾ ಶಂಕರ ಸತ್ಯಾರ್ಥಿಯವರು ರಿಸಾಲತ್ ಅಥವಾ ಪ್ರವಾದಿತ್ವ ನಂಬಿಕೆಗಳು ವೇದಗಳಲ್ಲಿಯೂ ಇವೆ ಎಂದು ಸಾಧಿಸಿರುವರು. ಅವರು ಉದ್ದರಿಸಿರುವ ವೇದದ ಕೆಲವು ಮಂತ್ರಗಳನ್ನು ಇಲ್ಲಿ ನೀಡಲಾಗುವುದು.

ಅಗ್ನಿಂ ದೂತಂ ವೃಣೀಮಹೆ ಹೋತಾರಮ್ ವಿಶ್ವ ವೇದಸಂ(ಋ. 1/4/12/1)
ಅರ್ಥಾತ್ “ನಾವು ವಿಶ್ವದ ವೇದನೆಗಳ ಹವನ ಮಾಡುವ ಅಗ್ನಿಯನ್ನು ದೂತನೆಂದು ಆಯ್ದುಕೊಳ್ಳುತ್ತೇವೆ.” ವೇದಗಳ ಈ ಶ್ಲೋಕಗಳು ಪ್ರವಾದಿತಕ್ಕೆ ಒಂದು ಸಮರ್ಥನೆಯಾಗಿದೆಯೆಂದು ಸತ್ಯಾರ್ಥಿಯವರ ಅಭಿಪ್ರಾಯವಾಗಿದೆ.

ತಾಂ ಅಶತೋ ವಿ ಭೋದಯ ಯದಗ್ನೆ ಯಾಸಿದ್ಯೂತಮ್ (ಋ. 1/12/4)

ತ್ರಾಮಿದಸ್ಯ ಉಪಸೋ ವ್ಯುಷ್ಟಿಷು ದೂತಂ (ಋ. 10/122/7)

ತ್ವಂ ದೂತಃ ಪ್ರಥಮೋವರಣ್ಯೇಯಃ (ಋ. 10/1/22/5)

ಶಾಶ್ವತಮ್ ಮಿಳತೆ ದೂತ್ಯಾಯ (ಋ 10/70/3)

ಈ ಶ್ಲೋಕಗಳನ್ನು ಉಲ್ಲೇಖಿಸುತ್ತಾ ಸತ್ಯಾರ್ಥಿಯವರು ಈ ರೀತಿ ಬರೆದಿದ್ದಾರೆ.

“ವೇದಗಳಲ್ಲಿ ಇಂತಹ ಹಲವಾರು ಶ್ಲೋಕಗಳಿದ್ದು ‘ದೂತ್’ ಶಬ್ದವು ವೇದಗಳ ಸಾಮಾನ್ಯ (Common) ಪದ ಪ್ರಯೋಗವಾಗಿದೆ. ಅನೇಕ ಕಡೆಗಳಲ್ಲಿ ಅವು ಪ್ರಯೋಗವಾಗಿರುವುದನ್ನು ನಾವು ಕಾಣಬಹುದು.” ಒಂದು ವೇಳೆ ವೇದದ ಶ್ಲೋಕಗಳ ‘ದೂತ್’ ಶಬ್ದವು ಪ್ರವಾದಿಯನ್ನೇ ಅಭಿಸಂಬೋಧಿಸದಿದ್ದರೂ ಅಭಿಸಂಬೋಧಿಸಿದರೂ ದೇವನ ಪ್ರವಾದಿಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಯುಗಗಳಲ್ಲಿ ಆಗಮಿಸುತ್ತಿದ್ದರು ಎಂಬುದಕ್ಕೆ ಪವಿತ್ರ ಕುರ್‌ ಆನಿನಲ್ಲಿ ಸಾಕ್ಷಿಯಿದೆ.

ಪ್ರವಾದಿ ಮುಹಮ್ಮದರು(ಸ) ಪ್ರವಾದಿಗಳ ಸರಣಿಯಲ್ಲಿ ಅಂತಿಮ ಕೊಂಡಿಯಾಗಿದ್ದಾರೆ. ಅವರು ಇಡೀ ಪ್ರಪಂಚಕ್ಕೆ ಅಂತಿಮ ಪ್ರವಾದಿ ಮತ್ತು ಸಂದೇಶವಾಹಕರಾಗಿ ನಿಯೋಜಿಸಲ್ಪಟ್ಟಿದ್ದಾರೆ. ಅವರ ನಂತರ ಯಾವ ಪ್ರವಾದಿಯು ಆಗಮಿಸುವುದಿಲ್ಲವೆಂಬ ಸತ್ಯವನ್ನು ಪವಿತ್ರ ಕು‌ರ್ ಆನ್ ಸ್ಪಷ್ಟವಾಗಿ ಘೋಷಿಸಿದೆ.

ದ ಮೆಸೇಜ್ ಎಂಬ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …