Home / ಲೇಖನಗಳು / ಹಜ್: ವಿಶ್ವಭ್ರಾತೃತ್ವದ ಸಂದೇಶ

ಹಜ್: ವಿಶ್ವಭ್ರಾತೃತ್ವದ ಸಂದೇಶ

✍️ ಲಬೀದ್ ಶಾಫಿ
ರಾಜ್ಯ ಕಾರ್ಯದರ್ಶಿ JIH ಕರ್ನಾಟಕ

ನಿಶ್ಚಯವಾಗಿಯೂ ಮಾನವರಿಗಾಗಿ ನಿರ್ಮಿಸಲ್ಪಟ್ಟ ಪ್ರಥಮ ಆರಾಧನಾಲಯವು ಮಕ್ಕಾದಲ್ಲಿರುವುದೇ ಆಗಿರುತ್ತದೆ. ಅದಕ್ಕೆ ಶುಭಸಮೃದ್ಧಿಗಳನ್ನು ನೀಡಲಾಗಿತ್ತು ಮತ್ತು ಅದು ಸಮಗ್ರ ಲೋಕದವರಿಗೆ ಸನ್ಮಾರ್ಗದರ್ಶನದ ಕೇಂದ್ರವನ್ನಾಗಿ ಮಾಡಲ್ಪಟ್ಟಿತ್ತು. ಅದರಲ್ಲಿ ಸುವ್ಯಕ್ತ ಕುರುಹುಗಳಿವೆ. ‘ಮಕಾಮು ಇಬ್ರಾಹೀಮ್’ (ಇಬ್ರಾಹೀಮರು ದೇವಾರಾಧನೆಗಾಗಿ ನಿಂತ ಸ್ಥಾನ) ಇದೆ ಮತ್ತು ಅದರೊಳಗೆ ಪ್ರವೇಶಗೊಂಡವನು ಸಂರಕ್ಷಣೆ ಹೊಂದಿದನು. ಈ ಭವನದವರೆಗೆ ತಲಪಲು ಸಾಧನಾನುಕೂಲತೆಗಳಿರುವವನು ಅದರ ‘ಹಜ್’ಯಾತ್ರೆ ಕೈಗೊಳ್ಳಬೇಕೆಂಬುದು ಜನರ ಮೇಲೆ ಅಲ್ಲಾಹನ ಹಕ್ಕಾಗಿರುತ್ತದೆ. ಈ ಆಜ್ಞೆಯ ಅನುಸರಣೆಯನ್ನು ಯಾರಾದರೂ ನಿರಾಕರಿಸಿದರೆ, ಅಲ್ಲಾಹ್ ಸಕಲ ಜಗತ್ತಿನವರಿಂದ ನಿರಪೇಕ್ಷನಾಗಿರುತ್ತಾನೆಂಬುದನ್ನು ಅವನು ಅರಿತಿರಬೇಕು. (ಪವಿತ್ರ ಕುರ್‌ಆನ್‌ 3: 96-97)

ದೇವನು ನಿಶ್ಚಯಿಸಿದ ಪ್ರತಿಯೊಂದು ಆರಾಧನೆಯಲ್ಲೂ ಒಂದು ಉದ್ದೇಶ ಅಡಕವಾಗಿದೆ. ಅದು ಮಾನವನ ಸಾಮಾಜಿಕ, ಸಾಂಸ್ಕೃತಿಕ, ರಾಷ್ಟ್ರೀಯ ಮತ್ತು ಆರ್ಥಿಕ ಹೀಗೆ ಎಲ್ಲಾ ಕ್ಷೇತ್ರಗಳಿಗೂ ವ್ಯಾಪಿಸುತ್ತದೆ. ನಮಾಝ್ ದಿನಕ್ಕೆ ಐದು ಬಾರಿ ದೇವಸ್ಮರಣೆಯ ತರಬೇತಿಯನ್ನು ನೀಡುವುದರ ಜತೆಗೆ ನಾವು ಅಲ್ಲಾಹನ ದಾಸರು ಎಂಬ ಅರಿವನ್ನು ಮೂಡಿಸುತ್ತದೆ. ಉಪವಾಸವು ದೇವನ ಸಂಪ್ರೀತಿಗಾಗಿ ನಮ್ಮ ಇಚ್ಛೆಗಳನ್ನು ತ್ಯಾಗ ಮಾಡಲು ಪ್ರೇರಣೆ ನೀಡುವುದರ ಜತೆಗೆ ಬಡವರ ಹಸಿವಿನ ನೋವನ್ನು ನಮಗೆ ಅರ್ಥ ಮಾಡಿಸುತ್ತದೆ. ಝಕಾತ್ ನಮ್ಮ ಸಂಪತ್ತನ್ನು ದೇವನ ಮಾರ್ಗದಲ್ಲಿ ಹೇಗೆ ವಿನಿಯೋಗಿಸಬೇಕು ಎಂಬುದನ್ನು ಕಲಿಸುತ್ತದೆ. ಆದರೆ ಹಜ್ ಕರ್ಮ ಸಮಗ್ರವಾಗಿದೆ; ಅದರಲ್ಲಿ ದೇವಸ್ಮರಣೆಯಿದೆ, ತ್ಯಾಗ-ಬಲಿದಾನವಿದೆ ಮತ್ತು ದೇವನ ಮಾರ್ಗದಲ್ಲಿ ಖರ್ಚು ಮಾಡುವ ತರಬೇತಿಯೂ ಇದೆ. ಎಲ್ಲಕ್ಕಿಂತ ಮಿಗಿಲಾಗಿ, ಅದರಲ್ಲಿ ಐಕ್ಯತೆ ಮತ್ತು ವಿಶ್ವಭ್ರಾತೃತ್ವದ ಉದಾತ್ತ ಸಂದೇಶವಿದೆ.

ಇಸ್ಲಾಮಿನ ಹೆಚ್ಚಿನ ಆರಾಧನಾ ಕರ್ಮಗಳನ್ನು ಸಾಮೂಹಿಕವಾಗಿ ನಿರ್ವಹಿಸಲು ಪ್ರೋತ್ಸಾಹಿಸಲಾಗಿದೆ. ನಮಾಝನ್ನು ಜಮಾಅತ್ ಆಗಿ (ಸಾಮೂಹಿಕವಾಗಿ) ನಿರ್ವಹಿಸಬೇಕೆಂದು ಇಸ್ಲಾಮ್ ಬೋಧಿಸುತ್ತದೆ. ವಿಶ್ವಾಸಿಗಳು ಎಲ್ಲಾ ಭೇದಭಾವಗಳನ್ನು ಬದಿಗೊತ್ತಿ, ಒಬ್ಬ ದೇವನ ಮುಂದೆ ಹೆಗಲಿಗೆ ಹೆಗಲು ಸೇರಿಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ವೈಶಿಷ್ಟ್ಯವು ಉಪವಾಸದಲ್ಲೂ ಎದ್ದು ಕಾಣುತ್ತದೆ; ಒಂದು ನಿರ್ದಿಷ್ಟ ತಿಂಗಳಲ್ಲಿ ವಿಶ್ವದಾದ್ಯಂತವಿರುವ ಮುಸ್ಲಿಮರು ಏಕಕಾಲದಲ್ಲಿ ಹಗಲು ಉಪವಾಸ ಮತ್ತು ರಾತ್ರಿ ಪ್ರಾರ್ಥನೆಯಲ್ಲಿ ಮಗ್ನರಾಗುತ್ತಾರೆ. ಹಾಗೆಯೇ, ಹಜ್ ಕರ್ಮವೂ ಸಹ ಸಾಮೂಹಿಕವಾಗಿ ನಿರ್ವಹಿಸುವ ಒಂದು ವಿಶಿಷ್ಟ ಆರಾಧನಾ ಕರ್ಮವಾಗಿದೆ. ಈ ಕರ್ಮದಲ್ಲಿ ಸಹೋದರತ್ವ, ಸಮಾನತೆ, ಒಗ್ಗಟ್ಟು ಮತ್ತು ಸಮುದಾಯದ ಏಕತೆಯ ಮಹೋನ್ನತ ಸಂದೇಶ ಅಡಕವಾಗಿದೆ.

ಇಂದು ವರ್ಣಭೇದ, ಜಾತಿ ಪದ್ಧತಿ ಮತ್ತು ಸಾಮಾಜಿಕ ಅಸಮಾನತೆಗಳು ಸಮಾಜದ ಶಾಂತಿಯನ್ನು ಕದಡುತ್ತಿವೆ. ಈ ಅಸಮಾನತೆಯ ಬೇರುಗಳು ಎಲ್ಲಾ ಕಡೆಯೂ ವ್ಯಾಪಿಸಿವೆ. ಮನುಷ್ಯನು ದೇಶ, ಭಾಷೆ, ವರ್ಣ, ವರ್ಗ ಮತ್ತು ಜನಾಂಗೀಯತೆಯ ನೆಲೆಯಲ್ಲಿ ಸಮಾಜವನ್ನು ಒಡೆದು ಹಾಕಿದ್ದಾನೆ. ಎಲ್ಲರೂ ‘ನಾನು’ ಎಂಬ ಅಹಮ್ಮಿನ ಕೋಟೆಯಲ್ಲಿ ಬಂಧಿತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ, ಮಾನವರೆಲ್ಲರೂ ಒಂದೇ ಕುಟುಂಬದ ಸದಸ್ಯರು ಮತ್ತು ಎಲ್ಲರ ಸೃಷ್ಟಿಕರ್ತ ಒಬ್ಬನೇ ಎಂಬ ಹಜ್ ಯಾತ್ರೆಯ ಸಂದೇಶವು ಅತ್ಯಂತ ಪ್ರಸ್ತುತವಾಗಿದೆ. ಒಬ್ಬನೇ ಸೃಷ್ಟಿಕರ್ತ, ಅವನದ್ದೇ ಭೂಮಿ, ಮನುಷ್ಯರೆಲ್ಲರೂ ಅವನ ಸೃಷ್ಟಿಗಳು ಎನ್ನುವುದೇ ಪರಮಸತ್ಯ. ಈ ಅರ್ಥದಲ್ಲಿ ಜಾಗತಿಕ ಮಟ್ಟದಲ್ಲಿ ಬಲಿಷ್ಠವಾದ ವಿಶ್ವಭ್ರಾತೃತ್ವದ ಸುಂದರ ಸಂಗಮವೇ ಹಜ್.

ಈ ವಿಶ್ವಭ್ರಾತೃತ್ವದ ಆಶಯವನ್ನು ಅಲ್ಲಾಮಾ ಇಕ್ಬಾಲ್ ಬಹಳ ಸುಂದರವಾಗಿ ತಮ್ಮ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ:

ಮಹಮೂದ್ ಮತ್ತು ಅಯಾಜ್ ಒಂದೇ ಸಾಲಿನಲ್ಲಿ ನಿಂತರು, ಅಲ್ಲಿ ಸೇವಕನೂ ಉಳಿಯಲಿಲ್ಲ, ಯಜಮಾನನೂ ಉಳಿಯಲಿಲ್ಲ. ಸೇವಕ, ಮಾಲೀಕ, ಬಡವ ಮತ್ತು ಶ್ರೀಮಂತರೆಲ್ಲರೂ ಒಂದಾದರು, ನಿನ್ನ ದರ್ಬಾರಿಗೆ (ದೇವನ ಸನ್ನಿಧಿಗೆ) ಬಂದಾಗ ಎಲ್ಲರೂ ಸಮಾನರಾದರು.

ಹಜ್ ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಅದು ಮನುಷ್ಯರನ್ನು ಬೆಸೆಯುವ ಮಹತ್ತರ ಆರಾಧನಾ ಕರ್ಮವಾಗಿದೆ. ಪ್ರಪಂಚದ ಮೂಲೆಮೂಲೆಗಳಿಂದ ಬರುವ ಲಕ್ಷಾಂತರ ಜನರು ತಮ್ಮ ಭಾಷೆ, ಬಣ್ಣ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಮರೆತು ಒಂದೇ ವೇದಿಕೆಯಲ್ಲಿ ಒಟ್ಟು ಸೇರುತ್ತಾರೆ. ಅಮೆರಿಕದ ಒಬ್ಬ ಮೇಯರ್, ಭಾರತದ ಸಾಮಾನ್ಯ ರೈತನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಪ್ರಾರ್ಥಿಸುತ್ತಾನೆ. ಇಂಗ್ಲೆಂಡಿನ ಒಬ್ಬ ಪ್ರೊಫೆಸರ್ ಮತ್ತು ಬಾಂಗ್ಲಾದೇಶದ ಒಬ್ಬ ಕೂಲಿ ಕಾರ್ಮಿಕ ಅಕ್ಕಪಕ್ಕದಲ್ಲೇ ನಿಂತು ಕಅಬಾ ಭವನವನ್ನು ಸುತ್ತು ಬರುತ್ತಾರೆ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ; ಎಲ್ಲರೂ ಒಂದೇ ರೀತಿಯ ಉಡುಪು (ಇಹ್ರಾಮ್) ಧರಿಸಿ, ಒಂದೇ ಘೋಷ ವಾಕ್ಯವನ್ನು (ತಲ್ಬಿಯತ್) ಉಚ್ಚರಿಸುತ್ತಾ ಸೃಷ್ಟಿಕರ್ತನ ಮುಂದೆ ಸಮಾನರಾಗಿ ನಿಲ್ಲುತ್ತಾರೆ.

ವಿಶ್ವ ಭ್ರಾತೃತ್ವದ ಈ ಅದ್ಭುತ ದೃಶ್ಯವನ್ನು ಕಂಡು ಅಮೆರಿಕದ ಮಾನವ ಹಕ್ಕುಗಳ ಹೋರಾಟಗಾರ ಮಾಲ್ಕಮ್ ಎಕ್ಸ್, 1964ರಲ್ಲಿ ಹಜ್ ನಿರ್ವಹಿಸಿದ ನಂತರ ಹೀಗೆ ಬರೆಯುತ್ತಾರೆ:

“ಅಮೆರಿಕವು ಇಸ್ಲಾಮ್ ಧರ್ಮವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ, ಏಕೆಂದರೆ ಇದು ವರ್ಣಭೇದ ನೀತಿಯನ್ನು ಬುಡಸಮೇತ ಕಿತ್ತೆಸೆದ ಧರ್ಮವಾಗಿದೆ. ಹಜ್ ಸಮಯದಲ್ಲಿ ನಾನು ವಿವಿಧ ಬಣ್ಣದ ಜನರು ಅಪ್ಪಟ ಸಹೋದರತ್ವದಿಂದ ಬದುಕುವುದನ್ನು ಕಂಡೆ. ಅಮೆರಿಕದಲ್ಲಿ ಯಾರನ್ನು ‘ಬಿಳಿಯರು’ ಎಂದು ಕರೆಯಲಾಗುತ್ತದೆಯೋ, ಅಂತಹವರು ಇಲ್ಲಿ ಕಪ್ಪಗಿನ ಜನರೊಂದಿಗೆ ಪ್ರೀತಿ ಮತ್ತು ಗೌರವದಿಂದ ಬೆರೆಯುತ್ತಿದ್ದರು. ಇಸ್ಲಾಮ್ ಅವರ ಮನಸ್ಸಿನಿಂದ ಜನಾಂಗೀಯ ಶ್ರೇಷ್ಠತೆಯ ವ್ಯಸನವನ್ನು ದೂರ ಮಾಡಿದೆ.”

ಹಜ್ ಎಂಬುದು ಕೇವಲ ಒಂದು ಪವಿತ್ರ ನಗರಕ್ಕೆ ಹೋಗಿ ಬರುವುದರ ಹೆಸರಲ್ಲ. ಅದು ನಮ್ಮ ಅಂತರಾತ್ಮದ ಕಡೆಗೆ ನಡೆಸುವ ಪಯಣ. ಅದು ಮಾನವ ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಂತಸ್ತು ಮತ್ತು ಹಮ್ಮಿನ ಮುಖವಾಡಗಳನ್ನು ಕಳಚಿಹಾಕುವ ದಿಟ್ಟ ಹೆಜ್ಜೆಯಾಗಿದೆ. ಮನುಷ್ಯನ ಗೌರವವು ಅವನ ಬಣ್ಣ ಅಥವಾ ಸಂಪತ್ತಿನ ಮೇಲೆ ನಿಂತಿಲ್ಲ, ಬದಲಿಗೆ ಅವನ ಸ್ವಭಾವ ಗುಣ ಮತ್ತು ದೇವನಿಷ್ಠೆಯ ಮೇಲೆ ನಿಂತಿದೆ ಎಂಬುದನ್ನು ಹಜ್ ಜಗತ್ತಿಗೆ ಸಾರುತ್ತದೆ.

ಹಜ್‌ನ ಸಂದರ್ಭ ಪ್ರವಾದಿ ಮುಹಮ್ಮದ್ (ಸ) ರವರು ತಮ್ಮ ಐತಿಹಾಸಿಕ ವಿದಾಯ ಭಾಷಣದಲ್ಲಿ ಈ ವಿಶ್ವ ಮಾನವತೆಯ ಸಂದೇಶವನ್ನು ಸ್ಪಷ್ಟಪಡಿಸಿದ್ದರು:

“ಜನರೇ, ಖಂಡಿತವಾಗಿಯೂ ಅಲ್ಲಾಹನು ಈ ರೀತಿ ಹೇಳಿರುವನು: ಮನುಷ್ಯರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು. ನಾನು ನಿಮ್ಮನ್ನು ವಿವಿಧ ಕುಲ ಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಪಡುವಂತಾಗಲಿಕ್ಕಾಗಿದೆ. ಖಂಡಿತವಾಗಿಯೂ ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯಧಿಕ ಭಯಭಕ್ತಿಯುಳ್ಳವನೇ ಅತ್ಯಂತ ಗೌರವಾರ್ಹನಾಗಿರುವನು. ಅರಬನಿಗೆ ಅರಬೇತರನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗೆ ಬಿಳಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ. ಬಿಳಿಯನಿಗೆ ಕರಿಯನ ಮೇಲೆ ಯಾವುದೇ ಮೇಲ್ಮೆ ಇಲ್ಲ – ಧರ್ಮನಿಷ್ಠೆ ಮತ್ತು ದೇವಭಕ್ತಿಯ ಹೊರತು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು”.

ನಮ್ಮನ್ನು ವಿಭಜಿಸುವ ಗೋಡೆಗಳ ನಡುವೆ, ಹಜ್ ನಮ್ಮನ್ನು ಒಂದುಗೂಡಿಸಲು ಪ್ರಯತ್ನಿಸುತ್ತದೆ. ಇದು ಜನಾಂಗೀಯತೆ, ವರ್ಣ, ವರ್ಗ ಅಥವಾ ಭಾಷೆಯ ಆಧಾರದಲ್ಲಾಗಲಿ, ದೇಶ, ಗಡಿಗಳ ಸಂಕುಚಿತ ಮನೋಭಾವನೆಯಿಂದಾಗಲಿ ಅಲ್ಲ; ಬದಲಾಗಿ ಮನುಷ್ಯತ್ವದ ಆಧಾರದ ಮೇಲೆ ಎಲ್ಲರೂ ಸಮಾನರು ಎಂಬ ಮಾನವೀಯ ಮೌಲ್ಯದ ಆಧಾರದ ಮೇಲೆ ಒಂದುಗೂಡಿಸುತ್ತದೆ.

ಹಜ್ ನೀಡುವ ಅದ್ಭುತ ಸಂದೇಶವೆಂದರೆ, ಮನುಷ್ಯನು ಇಡೀ ಮಾನವಕುಲದೊಂದಿಗೆ ಶಾಂತಿಯಿಂದ ಬದುಕಬೇಕು ಎಂಬುದು. ವಿಭಿನ್ನ ಹಿನ್ನೆಲೆಯುಳ್ಳ ವಿಶ್ವಾಸಿಗಳು ಒಂದೇ ದಿಕ್ಕಿಗೆ (ಕಿಬ್ಲಾ) ಮುಖ ಮಾಡಿ, ಒಂದೇ ರೀತಿಯ ಆರಾಧನಾ ಕ್ರಮಗಳನ್ನು ಅನುಸರಿಸುತ್ತಾ, ಸಮಾನವಾದ ಉಡುಪನ್ನು ಧರಿಸಿ ಹಜ್ ನಿರ್ವಹಿಸುವಾಗ ಜಗತ್ತಿಗೇ ಮಾದರಿಯಾದ ಭ್ರಾತೃತ್ವ ಗೋಚರಿಸುತ್ತದೆ.

ಹಜ್ ಕರ್ಮದ ಸಮಯದಲ್ಲಿ ಇತರರೊಂದಿಗೆ ತರ್ಕಿಸುವುದಾಗಲಿ ಅಥವಾ ಯಾವುದೇ ಜೀವಿಗೆ ನೋವುಂಟು ಮಾಡುವುದಾಗಲಿ ನಿಷಿದ್ಧವಾಗಿದೆ. ಯಾವಾಗಲೂ ಶಾಂತಿಯುತವಾಗಿರಬೇಕು ಎಂಬುದು ಇಹ್ರಾಮ್ (ಹಜ್‌ನ ಪವಿತ್ರ ವಸ್ತ್ರ ಮತ್ತು ಸ್ಥಿತಿ) ನೀಡುವ ದೊಡ್ಡ ಪಾಠವಾಗಿದೆ. ತನ್ನ ಸುತ್ತಲಿರುವ ಜನರಿಂದ ತನಗೆ ತೊಂದರೆಯಾದರೂ ಸಹ, ಒಬ್ಬ ವಿಶ್ವಾಸಿ ಶಾಂತನಾಗಿರಬೇಕು ಎಂಬ ಪಾಠವನ್ನು ಹಜ್ ಕಲಿಸುತ್ತದೆ. ಎಲ್ಲರೂ ಇದನ್ನು ಪಾಲಿಸಿದಾಗ ಅಲ್ಲಿ ಶಾಂತಿಯ ನೀತಿ ನಿರ್ಮಾಣವಾಗುತ್ತದೆ. ಈ ಮೂಲಕ ಹಜ್ ಒಬ್ಬ ಮುಸ್ಲಿಮನಿಗೆ ತನ್ನೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರ ಜೊತೆಗೂ ಹೇಗೆ ಶಾಂತಿಯಿಂದ ಬದುಕಬೇಕು ಎಂಬ ತರಬೇತಿಯನ್ನು ಕೊಡುತ್ತದೆ.

ಪ್ರವಾದಿ (ಸ) ಹೇಳಿದರು: “ಯಾರು ಅಲ್ಲಾಹನಿಗಾಗಿ ಹಜ್ ನಿರ್ವಹಿಸುತ್ತಾರೋ ಮತ್ತು ಆ ಸಂದರ್ಭದಲ್ಲಿ ಎಲ್ಲಾ ಅಸಭ್ಯ ಮಾತುಗಳು, ಜಗಳ ಮತ್ತು ಕೆಟ್ಟ ಕೆಲಸಗಳಿಂದ ದೂರವಿರುತ್ತಾರೋ, ಅವರು ಹಜ್ ಮುಗಿಸಿ ಹಿಂದಿರುಗುವಾಗ ತಾಯಿಯ ಹೊಟ್ಟೆಯಿಂದ ಜನಿಸಿದ ಮಗುವಿನಂತೆ ಪಾಪಮುಕ್ತರಾಗಿರುತ್ತಾರೆ.” (ಬುಖಾರಿ ಮತ್ತು ಮುಸ್ಲಿಂ)

ಹಜ್‌ನ ಪವಿತ್ರ ಸ್ಥಿತಿಗೆ (ಇಹ್ರಾಮ್) ಪ್ರವೇಶಿಸಿದ ನಂತರ, ಯಾವುದೇ ಜೀವಿಯನ್ನು ಹಿಂಸಿಸುವುದಾಗಲಿ ಅಥವಾ ಬೇಟೆಯಾಡುವುದಾಗಲಿ ಮಾಡಬಾರದು. ಅದು ಆಹಾರಕ್ಕಾಗಿಯೇ ಇರಲಿ ಅಥವಾ ಇಲ್ಲದಿರಲಿ, ಜೀವಹಾನಿ ಮಾಡುವುದು ನಿಷಿದ್ಧವಾಗಿದೆ. ಅದೇ ರೀತಿ, ಇಹ್ರಾಮ್‌ನಲ್ಲಿರುವಾಗ ಮರಗಿಡಗಳನ್ನು, ಅಷ್ಟೇ ಏಕೆ ಮುಳ್ಳಿನ ಗಿಡವನ್ನೂ ಸಹ ಕತ್ತರಿಸಬಾರದು ಅಥವಾ ಕೀಳಬಾರದು.

ಪವಿತ್ರ ಕುರ್‌ಆನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ: “ಓ ಸತ್ಯವಿಶ್ವಾಸಿಗಳೇ ಇಹ್ರಾಮಿನ ಸ್ಥಿತಿಯಲ್ಲಿ ಬೇಟೆ ಪ್ರಾಣಿಗಳನ್ನು ಕೊಲ್ಲಬೇಡಿರಿ. ನಿಮ್ಮಲ್ಲಾರಾದರೂ ಉದ್ದೇಶಪೂರ್ವಕವಾಗಿ ಹೀಗೆ ಮಾಡಿಬಿಟ್ಟರೆ, ಅವನು ತಾನು ಮಾಡಿದ ಕರ್ಮದ ಸವಿಯನ್ನು ಅನುಭವಿಸುವಂತಾಗಲು ನಿಮ್ಮಲ್ಲಿನ ಇಬ್ಬರು ನ್ಯಾಯನಿಷ್ಠರು ತೀರ್ಮಾನಿಸುವಂತೆ ಅವನು ಕೊಂದ ಪ್ರಾಣಿಗೆ  ಸಮಾನವಾದ ಒಂದು ಬಲಿಪಶುವನ್ನು ಕಾಣಿಕೆಯಾಗಿ ಕೊಡಬೇಕಾಗುವುದು ಮತ್ತು ಈ ಕಾಣಿಕೆಯು ‘ಕಅಬಾ’ಕ್ಕೆ ತಲಪಿಸಲಾಗುವುದು. ಇಲ್ಲವಾದರೆ ಅವನು ಮಾಡಿದುದರ ಫಲವುಣ್ಣುವಂತಾಗಲು ಈ ಪಾಪದ ಪ್ರಾಯಶ್ಚಿತ್ತ ರೂಪದಲ್ಲಿ ಕೆಲವು ಮಂದಿ ದರಿದ್ರರಿಗೆ ಊಟ ಕೊಡಬೇಕಾಗುವುದು ಅಥವಾ ಅದಕ್ಕನುಗುಣವಾಗಿ ಉಪವಾಸವಿಡಬೇಕಾಗುವುದು. ಹಿಂದೆ ಆಗಿ ಹೋದುದನ್ನು ಅಲ್ಲಾಹನು ಕ್ಷಮಿಸಿಬಿಟ್ಟನು. ಆದರೆ, ಇನ್ನು ಯಾರಾದರೂ ಈ ಕೃತ್ಯವನ್ನು ಪುನರಾವರ್ತಿಸಿದರೆ, ಅಲ್ಲಾಹ್ ಅವನಿಂದ ಪ್ರತೀಕಾರ ಪಡೆದೇ ತೀರುವನು. ಅಲ್ಲಾಹ್ ಮಹಾ ಪ್ರತಾಪಶಾಲಿಯೂ ಪ್ರತೀಕಾರ ಪಡೆಯಲು ಶಕ್ತನೂ ಆಗಿರುತ್ತಾನೆ. (5:95)

ಹಜ್ ಕೇವಲ ಮನುಷ್ಯರೊಂದಿಗೆ ಮಾತ್ರವಲ್ಲ, ಸಕಲ ಜೀವಜಾಲಗಳೊಂದಿಗೆ ಮತ್ತು ಪರಿಸರದೊಂದಿಗೆ ಹೇಗೆ ವರ್ತಿಸಬೇಕು ಎಂಬ ಸೂಕ್ಷ್ಮ ತರಬೇತಿಯನ್ನು ನೀಡುತ್ತದೆ. ಒಬ್ಬ ಮುಸ್ಲಿಮನಿಗೆ ತನ್ನ ಪರಿಸರವನ್ನು ಕಲುಷಿತಗೊಳಿಸಬಾರದು, ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸಬಾರದು ಮತ್ತು ದೇವನ ಯಾವುದೇ ಸೃಷ್ಟಿಗೆ ವಿನಾಕಾರಣ ಹಾನಿ ಮಾಡಬಾರದು ಎಂಬ ಸೂಕ್ಷ್ಮ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ.

ಹಾಜಿರಾ : ಅಚಲ ವಿಶ್ವಾಸದ ಸಂಕೇತ

ಒಬ್ಬ ಸಾಮಾನ್ಯ ದಾಸಿ ಇಡೀ ಜಗತ್ತಿನ ವಿಶ್ವಾಸಿಗಳಿಗೆ ಮಾದರಿಯಾದ ಇತಿಹಾಸವು ಅತ್ಯಂತ ರೋಚಕವಾದುದು. ಅವರೇ ಪ್ರವಾದಿ ಇಬ್ರಾಹಿಮ(ಅ)ರ ಪತ್ನಿ ಹಾಜಿರಾ. ಹಜ್ ಸಂದರ್ಭದಲ್ಲಿ ಅತ್ಯಂತ ಹೆಚ್ಚಾಗಿ ಸ್ಮರಿಸಲ್ಪಡುವ ವ್ಯಕ್ತಿತ್ವ ಇವರದ್ದಾಗಿದೆ. ಹಾಜಿರಾ ರವರು ಅನುಭವಿಸಿದ ಕಷ್ಟಗಳು ಮತ್ತು ಆ ಸಂದರ್ಭದಲ್ಲಿ ಅವರು ದೇವನ ಮೇಲೆ ಇಟ್ಟಿದ್ದ ಅಚಲವಾದ ವಿಶ್ವಾಸ ನಿಜಕ್ಕೂ ಅದ್ಭುತ. ನಿರ್ಜನವಾದ ಮರುಭೂಮಿಯಲ್ಲಿ ಹಸುಗೂಸಿನೊಂದಿಗೆ ಒಂಟಿಯಾಗಿ ಬಿಡಲ್ಪಟ್ಟಾಗಲೂ ಅವರು ಎದೆಗುಂದದೆ ಪ್ರದರ್ಶಿಸಿದ ಧೈರ್ಯ ಮತ್ತು ಸಹನೆಗೆ ಸರಿಸಾಟಿ ಇಲ್ಲ. ಇಂದು ಪ್ರಪಂಚದಾದ್ಯಂತ ಇರುವ ಹಾಜಿಗಳು (ಯಾತ್ರಿಕರು), ಹಾಜಿರಾ ರವರು ಅಂದು ನೀರಿಗಾಗಿ ಓಡಿದ ಸಫಾ ಮತ್ತು ಮರ್ವಾ ಬೆಟ್ಟಗಳ ನಡುವೆ ಓಡುವುದು (ಸಅಯಿ) ಕಡ್ಡಾಯವಾಗಿದೆ. ಒಬ್ಬ ಸಾಮಾನ್ಯ ಮಹಿಳೆ ತನ್ನ ಅಚಲ ವಿಶ್ವಾಸದ ಮೂಲಕ ಜಗತ್ತಿನಾದ್ಯಂತ ಇರುವ ವಿಶ್ವಾಸಿಗಳಿಗೆ ಹೇಗೆ ಆದರ್ಶವಾಗಬಲ್ಲರು ಎಂಬುದಕ್ಕೆ ಹಾಜಿರಾ ಅವರೇ ಅತ್ಯುತ್ತಮ ಉದಾಹರಣೆ.

ಪವಿತ್ರ ಕುರ್‌ಆನ್‌ನಲ್ಲಿ ಅಲ್ಲಾಹನು ಹೇಳುತ್ತಾನೆ: “ನಿಶ್ಚಯವಾಗಿಯೂ ‘ಸಫಾ’ ಮತ್ತು ‘ಮರ್ವಾ’ಗಳು ಅಲ್ಲಾಹನ ಸಂಕೇತಗಳಲ್ಲಾಗಿರುತ್ತವೆ. ಆದುದರಿಂದ ಪವಿತ್ರ ಭವನದ ‘ಹಜ್’ ಯಾ ‘ಉಮ್ರಾ’ ಮಾಡುವಾತನು ಆ ಎರಡು ಬೆಟ್ಟಗಳ ನಡುವೆ ‘ಸಯೀ’ ಮಾಡುವುದರಲ್ಲೇನೂ ದೋಷವಿಲ್ಲ ಮತ್ತು ಸ್ವಯಂಪ್ರೇರಣೆಯಿಂದ ಸತ್ಕರ್ಮ ಮಾಡುವವನನ್ನು ಅಲ್ಲಾಹ್ ಬಲ್ಲವನೂ ಅವನನ್ನು ಗೌರವಿಸುವವನೂ ಆಗಿರುತ್ತಾನೆ. (2:158)

ಹಜ್ ಯಾತ್ರೆಯು ವ್ಯಕ್ತಿಯಲ್ಲಿ ತಾಳ್ಮೆ, ನಮ್ರತೆ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ. ಹಜ್ ಯಾತ್ರೆಯು ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಅದು ಜಗತ್ತಿಗೆ ಸಮಾನತೆ ಮತ್ತು ಭ್ರಾತೃತ್ವದ ಸಂದೇಶ ಸಾರುವ ಮಹಾನ್ ಸಮ್ಮೇಳನವಾಗಿದೆ. ಪ್ರಪಂಚದ ನಾನಾ ಭಾಗಗಳಿಂದ ಬರುವ ಲಕ್ಷಾಂತರ ಜನರು ತಮ್ಮ ದೇಶ, ಭಾಷೆ ಮತ್ತು ವರ್ಗ-ವರ್ಣಗಳ ಭೇದಭಾವಗಳನ್ನು ಮರೆತು, ಕೇವಲ ಎರಡು ತುಂಡು ಬಿಳಿ ವಸ್ತ್ರವನ್ನು ಧರಿಸಿ ಒಂದೇ ಕಡೆ ಸೇರುವ ಮೂಲಕ ಮನುಕುಲದ ಏಕತೆಯನ್ನು ಸಾರುತ್ತಾರೆ. “ಲಬ್ಬೈಕಲ್ಲಾಹುಮ್ಮ ಲಬ್ಬೈಕ್‌, ಲಬ್ಬೈಕ್‌ ಲಾ ಶರೀಕಲಕ ಲಬ್ಬೈಕ್‌, ಇನ್ನಲ್ ಹಮ್ದ, ವನ್ನಿಅಮತ ಲಕವಲ್ ಮುಲ್ಕ್ ಲಾ ಶರೀಕಲಕ್.” ಅರ್ಥಾತ್: “ನಾನು ಹಾಜರಿದ್ದೇನೆ ಓ ಅಲ್ಲಾಹ್, ನಾನು ಹಾಜರಿದ್ದೇನೆ. ನಿನಗಾರೂ ಸಹಭಾಗಿಗಳಿಲ್ಲ. ನಾನು ಹಾಜರಿದ್ದೇನೆ. ಸ್ತುತಿ ಸ್ತೋತ್ರಗಳೆಲ್ಲವೂ ನಿಸ್ಸಂದೇಹವಾಗಿಯೂ ನಿನಗೆ ಮಾತ್ರ ಆಗಿವೆ. ಅನುಗ್ರಹವೆಲ್ಲವೂ ನಿನ್ನದೇ ಆಗಿವೆ. ಆಧಿಪತ್ಯವು ಸರ್ವ ಸಂಪೂರ್ಣವಾಗಿ ನಿನ್ನದೇ ಆಗಿದೆ. ನಿನಗಾರೂ ಸಹಭಾಗಿಗಳಿಲ್ಲ.” – ಎಂಬ ಈ ಘೋಷಣೆಯೊಂದಿಗೆ ತಮ್ಮ ಅಹಂಕಾರವನ್ನು ತೊರೆದು, ದೇವನೊಬ್ಬನಿಗೇ ಸಂಪೂರ್ಣವಾಗಿ ಶರಣಾಗುತ್ತಾರೆ. ಸಕಲ ಸ್ತುತಿ ಮತ್ತು ಆಧಿಪತ್ಯ ದೇವನಿಗೆ ಮಾತ್ರ ಸೇರಿದ್ದೆಂದು ಸಾರುವ ಈ ಯಾತ್ರೆಯು, ಮನುಷ್ಯರೆಲ್ಲರೂ ಸಮಾನರು ಮತ್ತು ಪರಸ್ಪರ ಪ್ರೀತಿ-ವಿಶ್ವಾಸದಿಂದ ಬಾಳುವುದೇ ಬದುಕಿನ ಜೀವಾಳ ಎಂಬ ಪವಿತ್ರ ಸತ್ಯವನ್ನು ಜಗತ್ತಿಗೆ ಮನವರಿಕೆ ಮಾಡಿಕೊಡುತ್ತದೆ.

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …