✍️ ಲಬೀದ್ ಶಾಫಿ
ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ
ಮಾನವರ ಮಧ್ಯೆ ಹಲವಾರು ವೈವಿಧ್ಯತೆಗಳಿವೆ. ಧರ್ಮ, ಜಾತಿ, ಭಾಷೆ, ಜನಾಂಗ, ಉಡುಗೆ-ತೊಡುಗೆಗಳಲ್ಲೂ, ಜೀವನ ಕ್ರಮದಲ್ಲೂ, ಆಹಾರ ಪದ್ಧತಿಯಲ್ಲೂ ಈ ವೈವಿಧ್ಯತೆಗಳನ್ನು ನಾವು ಕಾಣಬಹುದು. ವಿವಿಧ ಜನಸಮುದಾಯಗಳ ನಡುವೆ ಇರುವ ನಂಬಿಕೆಗಳು, ಆಚರಣೆಗಳು ಮತ್ತು ಆಲೋಚನಾ ವಿಧಾನಗಳನ್ನು ಹಾಗೂ ಅವರಲ್ಲಿರುವ ವೈವಿಧ್ಯತೆಯನ್ನು ಪರಸ್ಪರ ಸಹಿಷ್ಣುತೆಯಿಂದ ನೋಡುವುದು ಮತ್ತು ಒಳಗೊಳ್ಳುವುದನ್ನು ಬಹುತ್ವ ಸಮಾಜ ಎನ್ನಬಹುದು. ಮಾನವನ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸುವುದೇ ಬಹುತ್ವದ ತಿರುಳಾಗಿದೆ.
ಬಹುತ್ವ ಮತ್ತು ಇಸ್ಲಾಮ್
ಮನುಷ್ಯನ ಭಾಷೆ, ಸಂಸ್ಕೃತಿ, ಉಡುಗೆ-ತೊಡುಗೆ ಹಾಗೂ ಆಹಾರ ಪದ್ಧತಿಗಳು ಭೌಗೋಳಿಕವಾಗಿ ಭಿನ್ನವಾಗಿವೆ. ಇಂತಹ ವೈವಿಧ್ಯತೆಯನ್ನು ಇಸ್ಲಾಮ್ ತನ್ನ ನೈತಿಕ ಚೌಕಟ್ಟಿನೊಳಗೆ ಒಪ್ಪಿಕೊಳ್ಳುತ್ತದೆ. ಪವಿತ್ರ ಕುರ್ಆನ್ನಲ್ಲಿ ಅಲ್ಲಾಹನು ಈ ವೈವಿಧ್ಯತೆಯ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ.
“ಆಕಾಶಗಳ ಹಾಗೂ ಭೂಮಿಯ ಸೃಷ್ಟಿ ಮತ್ತು ನಿಮ್ಮ ಭಾಷೆ ಹಾಗೂ ಬಣ್ಣಗಳಲ್ಲಿರುವ ವ್ಯತ್ಯಾಸಗಳು ಅವನ ಸಂಕೇತಗಳ ಸಾಲಿಗೆ ಸೇರಿವೆ. ಜ್ಞಾನ ಉಳ್ಳವರಿಗೆ ಇದರಲ್ಲಿ ಖಂಡಿತ ಸೂಚನೆಗಳಿವೆ” (ಅರ್ರೂಮ್ – 22)
ಇಸ್ಲಾಮ್ ಈ ಸಾಂಸ್ಕೃತಿಕ ವೈವಿಧ್ಯತೆಯನ್ನು ಅಂಗೀಕರಿಸುತ್ತದೆ. ಈ ಭಿನ್ನತೆಗಳು ಸಂಘರ್ಷಕ್ಕಲ್ಲ, ಬದಲಿಗೆ ಪರಸ್ಪರ ಅರಿತುಕೊಳ್ಳುವುದಕ್ಕಾಗಿದೆ ಎಂಬುವುದು ಇಸ್ಲಾಮಿನ ಸಂದೇಶ. ಮುಸ್ಲಿಮ್ ಸಮುದಾಯದ ಒಳಗೂ ಸಹ ಭಾಷೆ, ಆಹಾರ, ಉಡುಪು ಮತ್ತು ಆಚರಣೆಗಳಲ್ಲಿ ಇಂತಹ ಭಿನ್ನತೆಗಳನ್ನು ಕಾಣಬಹುದು. ಆದರೆ ಈ ಎಲ್ಲಾ ವೈವಿಧ್ಯತೆಗಳು ಇಸ್ಲಾಮಿನ ನೈತಿಕ ಮತ್ತು ಧಾರ್ಮಿಕ ಚೌಕಟ್ಟಿಗೆ ಒಳಪಟ್ಟಿರುವವರೆಗೆ ಮಾನ್ಯವಾಗಿರುತ್ತವೆ. ಒಟ್ಟಾರೆಯಾಗಿ ಹೇಳುವುದಾದರೆ, ಇಸ್ಲಾಮ್ ಈ ಸಾಂಸ್ಕೃತಿಕ ವೈವಿಧ್ಯತೆಯನ್ನು ಕೇವಲ ಒಪ್ಪಿಕೊಳ್ಳುವುದಷ್ಟೇ ಅಲ್ಲದೆ, ಅದನ್ನು ರಕ್ಷಿಸುತ್ತದೆ ಮತ್ತು ಪೋಷಿಸುತ್ತದೆ.
ಆದರೆ ಮೂಲಭೂತ ವಿಶ್ವಾಸ ಮತ್ತು ತತ್ವಗಳ ವಿಷಯದಲ್ಲಿ ಇಸ್ಲಾಮ್ ಇತರ ಸಂಸ್ಕೃತಿಗಳೊಂದಿಗೆ ಲೀನವಾಗುವುದಿಲ್ಲ; ಹಾಗೆಯೇ ಅದನ್ನು ಅನುಸರಿಸಲು ಇತರರನ್ನು ಒತ್ತಾಯಿಸುವುದೂ ಇಲ್ಲ. ಇಲ್ಲಿ ಇಸ್ಲಾಮ್ ಅಲ್ಲಾಹನ ಆಜ್ಞೆಗಳಿಗೆ ಸಂಪೂರ್ಣ ಶರಣಾಗತಿಯನ್ನು ಬಯಸುತ್ತದೆ. ‘ಸರ್ವ ಧರ್ಮ ಸಮಭಾವ’ ಎಂಬ ವಾದವನ್ನು ಇಸ್ಲಾಮ್ ಒಪ್ಪುವುದಿಲ್ಲ ಮತ್ತು ಎಲ್ಲವೂ ಸರಿ ಎಂಬ ನಿಲುವನ್ನು ಅದು ಮುಂದಿಡುವುದಿಲ್ಲ. ವಾಸ್ತವದಲ್ಲಿ ‘ಎಲ್ಲವೂ ಸರಿ’ ಎನ್ನುವುದು ಕಪಟತನವಾಗಿದೆ. ಇಸ್ಲಾಮ್ ಸಾಮಾನ್ಯ ಅರ್ಥದಲ್ಲಿ ‘ಧಾರ್ಮಿಕ ವೈವಿಧ್ಯತೆ’ಯನ್ನು ಪ್ರೋತ್ಸಾಹಿಸುವುದಿಲ್ಲ. ಜನರು ತಮ್ಮ ಸ್ವಂತ ಇಚ್ಛೆ ಮತ್ತು ಆಯ್ಕೆಯಿಂದ ಈ ಸತ್ಯವನ್ನು ಒಪ್ಪಿಕೊಳ್ಳಬೇಕೆಂದು ಇಸ್ಲಾಮ್ ಬಯಸುತ್ತದೆ. ಆದರೆ, ಈ ವಿಶ್ವಾಸವನ್ನು ಇಸ್ಲಾಮ್ ಇನ್ನೊಬ್ಬರ ಮೇಲೆ ಹೇರುವುದಿಲ್ಲ; ಬದಲಾಗಿ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ.
ಪವಿತ್ರ ಕುರ್ಆನ್ನಲ್ಲಿ ಅಲ್ಲಾಹನು ಈ ರೀತಿ ಹೇಳುತ್ತಾನೆ: “ಧರ್ಮದಲ್ಲಿ ಬಲವಂತವಿಲ್ಲ. ಖಂಡಿತವಾಗಿಯೂ ಸರಿದಾರಿಯು ತಪ್ಪು ದಾರಿಗಳಿಂದ ಪ್ರತ್ಯೇಕವಾಗಿದೆ. ಎಲ್ಲ ಮಿಥ್ಯ ಶಕ್ತಿಗಳನ್ನು ಧಿಕ್ಕರಿಸಿ ಅಲ್ಲಾಹನಲ್ಲಿ ನಂಬಿಕೆ ಇಟ್ಟವನು ಬಲಿಷ್ಠ ಆಶ್ರಯವೊಂದನ್ನು ಅವಲಂಬಿಸಿದನು. ಅದು ಎಂದಿಗೂ ಮುರಿಯದ ಆಶ್ರಯವಾಗಿದೆ ಮತ್ತು ಅಲ್ಲಾಹನು ಎಲ್ಲವನ್ನೂ ಕೇಳುವವನೂ ಎಲ್ಲವನ್ನೂ ಬಲ್ಲವನೂ ಆಗಿದ್ದಾನೆ.” (ಅಲ್ ಬಕರಃ : 256)
“(ದೂತರೇ,) ಹೇಳಿರಿ; ಸತ್ಯನಿಷೇಧಿಗಳೇ, ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ. ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ. ಇನ್ನು ನಾನಂತೂ ನೀವು ಪೂಜಿಸುತ್ತಿರುವುದನ್ನು ಪೂಜಿಸಲಾರೆ. ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ. ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ.” (ಅಲ್ ಕಾಫಿರೂನ್ : 1 – 6)
ವಿಶ್ವ ಮಾನವತೆಯ ಸಂದೇಶ
‘ಯಾ ಅಯ್ಯುಹನ್ನಾಸ್’ ಎಂದರೆ ‘ಓ ಮಾನವ ಸಮೂಹವೇ’ ಎನ್ನುವುದು ಕುರ್ಆನ್ನ ಸಂಬೋಧನಾ ಶೈಲಿಯಾಗಿದೆ. ಕಾರ್ಮಿಕ ವರ್ಗವೇ, ಬಂಡವಾಳಶಾಹಿ ವರ್ಗವೇ, ಸವರ್ಣೀಯರೇ, ಅವರ್ಣೀಯರೇ, ಬಡವರೇ ಅಥವಾ ಬಲ್ಲಿದರೇ ಎಂಬ ಭೇದಭಾವದ ಭಾಷೆ ಪವಿತ್ರ ಕುರ್ಆನ್ಗೆ ಅನ್ಯವಾಗಿದೆ. ಜಗತ್ತಿನ ಎಲ್ಲಾ ಮನುಷ್ಯರೂ ಒಂದೇ ಮೂಲದಿಂದ ಬಂದವರು. ಎಲ್ಲರೂ ಒಬ್ಬನೇ ಗಂಡು ಮತ್ತು ಹೆಣ್ಣಿನ (ಆದಮ್ ಮತ್ತು ಹವ್ವ) ಸಂತತಿಯಾಗಿದ್ದಾರೆ. ಆದ್ದರಿಂದ ಹುಟ್ಟಿನ ಆಧಾರದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಈ ವಿಶ್ವ ಮಾನವತೆಯ ಸಂದೇಶವನ್ನು ಇಸ್ಲಾಮ್ ಪ್ರಥಮವಾಗಿ ಎತ್ತಿಹಿಡಿಯುತ್ತದೆ.
ಪವಿತ್ರ ಕುರ್ಆನ್ನಲ್ಲಿ ಅಲ್ಲಾಹನು ಹೇಳುತ್ತಾನೆ: “ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ”. (ಅಲ್ ಹುಜುರಾತ್ : 13)
“ಒಮ್ಮೆ ಪ್ರವಾದಿ ಮುಹಮ್ಮದ್ (ಸ) ರವರ ಮುಂದಿನಿಂದ ಒಂದು ಶವಯಾತ್ರೆ ಸಾಗಿತು, ಆಗ ಅವರು ಎದ್ದು ನಿಂತರು. ತಕ್ಷಣ ಜನರು, ‘ಓ ಅಲ್ಲಾಹನ ಪ್ರವಾದಿಯವರೇ, ಅದು ಒಬ್ಬ ಯಹೂದಿಯ ಶವ’ ಎಂದರು. ಅದಕ್ಕೆ ಪ್ರವಾದಿಯವರು: ‘ಅದೂ ಒಂದು ಮನುಷ್ಯ ಜೀವ ಅಲ್ಲವೇ?’ ಎಂದು ಉತ್ತರಿಸಿದರು.” (ಬುಖಾರಿ)
ಸಮಾನ ನಾಗರಿಕ ಹಕ್ಕುಗಳು
ಪ್ರವಾದಿಯವರು ಮದೀನಾಕ್ಕೆ ವಲಸೆ ಬಂದ ನಂತರ, ಅಲ್ಲಿನ ಮುಸ್ಲಿಮರು, ಪ್ರಭಾವಿ ಯಹೂದಿ ಬುಡಕಟ್ಟುಗಳು ಮತ್ತು ಇತರ ಸಮುದಾಯಗಳನ್ನು ಒಟ್ಟುಗೂಡಿಸಿ ಒಂದು ಬಲಿಷ್ಠ ಒಕ್ಕೂಟ ವ್ಯವಸ್ಥೆಯನ್ನು ರೂಪಿಸಿದರು. ಇತಿಹಾಸದ ಮೊದಲ ಲಿಖಿತ ಸಂವಿಧಾನವೆನ್ನಲಾದ ಈ ಒಪ್ಪಂದವು, ಎಲ್ಲಾ ಸಮುದಾಯಗಳಿಗೆ ಸಮಾನ ನಾಗರಿಕ ಹಕ್ಕುಗಳು, ಆಂತರಿಕ ಸುರಕ್ಷತೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿತು.
ಪವಿತ್ರ ಕುರ್ಆನ್ನಲ್ಲಿ ಅಲ್ಲಾಹನು ಹೇಳುತ್ತಾನೆ: “ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿಲ್ಲದ ಮತ್ತು ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಿಲ್ಲದ ಜನರೊಡನೆ ನೀವು ಸೌಜನ್ಯ ತೋರುವುದನ್ನು ಮತ್ತು ಅವರ ಜೊತೆ ನ್ಯಾಯವಾಗಿ ವ್ಯವಹರಿಸುವುದನ್ನು ಅಲ್ಲಾಹನು ತಡೆಯುವುದಿಲ್ಲ. ನ್ಯಾಯ ಪಾಲಿಸುವವರನ್ನು ಅಲ್ಲಾಹನು ಖಂಡಿತ ಪ್ರೀತಿಸುತ್ತಾನೆ.” (ಅಲ್ ಮುಮ್ತಹಿನಃ : 8)
ಒಮ್ಮೆ ನಜ್ರಾನ್ ಪ್ರಾಂತ್ಯದಿಂದ ಕ್ರೈಸ್ತರ ನಿಯೋಗವು ಪ್ರವಾದಿಯವರನ್ನು ಸಂದರ್ಶಿಸಲು ಮಸ್ಜಿದುನ್ನಬವಿಗೆ ಬಂದಾಗ, ಅವರಿಗೆ ಮಸೀದಿಯ ಒಳಗಡೆಯೇ ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಪ್ರವಾದಿಯವರು ಅನುವು ಮಾಡಿಕೊಟ್ಟರು. ಮದೀನಾ ಒಪ್ಪಂದದ ಅನ್ವಯ ಯಹೂದಿಗಳು ಹಲವು ಯುದ್ಧಗಳಲ್ಲಿ ಮುಸ್ಲಿಮರ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಉಹುದ್ ಯುದ್ಧದ ಮುನ್ನ ನಳ್ರ್ ಗೋತ್ರದ ಮುಖೈರಿಕ್ ಎಂಬ ಯಹೂದಿ ಪ್ರಮುಖರು ಪ್ರವಾದಿಯವರನ್ನು ಭೇಟಿ ಮಾಡಿ, “ನಾನು ನಿಮ್ಮ ಪರವಾಗಿ ಯುದ್ಧ ಮಾಡಲು ಸಿದ್ಧನಾಗಿದ್ದೇನೆ, ಒಂದು ವೇಳೆ ನಾನು ಮರಣ ಹೊಂದಿದರೆ ನನ್ನ ಸಂಪತ್ತೆಲ್ಲವೂ ನಿಮಗೇ ಸೇರಬೇಕು” ಎಂದು ಘೋಷಿಸಿದ್ದರು. ಅವರು ಆ ಯುದ್ಧದಲ್ಲಿ ವೀರಮರಣ ಹೊಂದಿದರು.
ಮುಸ್ಲಿಮೇತರ ಸಮುದಾಯದ ಪ್ರಾರ್ಥನಾ ಸ್ಥಳಗಳಿಗೆ ಸಂರಕ್ಷಣೆಯನ್ನು ಘೋಷಿಸಲಾಯಿತು.
ಪವಿತ್ರ ಕುರ್ಆನ್ನಲ್ಲಿ ಅಲ್ಲಾಹನು ಹೇಳುತ್ತಾನೆ: “ಒಂದು ವೇಳೆ ಅಲ್ಲಾಹನು ಕೆಲವು ಜನರ ಮೂಲಕ ಮತ್ತೆ ಕೆಲವರನ್ನು ತೊಲಗಿಸದೆ ಇದ್ದಿದ್ದರೆ (ವಿರಕ್ತರ) ಆಶ್ರಮಗಳನ್ನು, (ಕ್ರೈಸ್ತರ) ಇಗರ್ಜಿಗಳನ್ನು, (ಯಹೂದ್ಯರ) ಪ್ರಾರ್ಥನಾಲಯಗಳನ್ನು ಮತ್ತು ಧಾರಾಳವಾಗಿ ಅಲ್ಲಾಹನ ಹೆಸರನ್ನು ಉಚ್ಚರಿಸಲಾಗುವ ಮಸೀದಿಗಳನ್ನು ಕೆಡವಿ ಹಾಕಲಾಗುತ್ತಿತ್ತು. ತನಗೆ ನೆರವಾಗುವಾತನಿಗೆ ಅಲ್ಲಾಹನು ಖಂಡಿತ ನೆರವಾಗುತ್ತಾನೆ. ಖಂಡಿತವಾಗಿಯೂ ಅಲ್ಲಾಹನು ತುಂಬಾ ಶಕ್ತಿಶಾಲಿಯೂ ಪ್ರಬಲನೂ ಆಗಿದ್ದಾನೆ.” (ಅಲ್ ಹಜ್ಜ್ : 40)
ಹಾಗೆಯೇ ದ್ವಿತೀಯ ಖಲೀಫಾ ಉಮರ್ರ ಪತ್ರ: “ಅಲ್ಲಾಹನ ಹೆಸರಿಂದ – ಅವನು ಅಪಾರ ದಯಾಳು, ಕರುಣಾಮಯಿ. ‘ಇದು ದೇವನ ದಾಸ ಮತ್ತು ವಿಶ್ವಾಸಿಗಳ ನಾಯಕನಾಗಿರುವ ಉಮರ್, ಈಲಿಯಾದ ಜನರಿಗೆ ನೀಡುತ್ತಿರುವ ಸುರಕ್ಷತೆಯ ಭರವಸೆಯಾಗಿದೆ. ಅವರ ಪ್ರಾಣಗಳಿಗೆ, ಸ್ವತ್ತುಗಳಿಗೆ, ಚರ್ಚ್ಗಳಿಗೆ, ಶಿಲುಬೆಗಳಿಗೆ, ಅನಾರೋಗ್ಯ ಪೀಡಿತರಿಗೆ, ಆರೋಗ್ಯವಂತರಿಗೆ ಮತ್ತು ಅವರ ಇಡೀ ಸಮುದಾಯಕ್ಕೆ ಸುರಕ್ಷತೆಯನ್ನು ಒಡಗಿಸಲಾಗಿದೆ. ಅವರ ಚರ್ಚ್ಗಳನ್ನು ಯಾರೂ ವಾಸಸ್ಥಳವಾಗಿ ಬಳಸಬಾರದು, ಅವುಗಳನ್ನು ಧ್ವಂಸಗೊಳಿಸಬಾರದು, ಅವುಗಳ ಯಾವುದೇ ಭಾಗಕ್ಕಾಗಲಿ ಅಥವಾ ಅವುಗಳ ಆವರಣಕ್ಕಾಗಲಿ ಯಾವುದೇ ಹಾನಿ ಮಾಡಬಾರದು. ಅವರ ಶಿಲುಬೆಗಳನ್ನಾಗಲಿ ಅಥವಾ ಅವರ ಯಾವುದೇ ಸೊತ್ತು ವಿತ್ತಗಳನ್ನಾಗಲಿ ಕಸಿಯಬಾರದು. ಧರ್ಮದ ವಿಷಯದಲ್ಲಿ ಅವರ ಮೇಲೆ ಬಲಾತ್ಕರ ಮಾಡಬಾರದು ಮತ್ತು ಅವರಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡಬಾರದು’” (ತಾರಿಖ್ ಅತ್-ತಬರಿ)
ಧಿಮ್ಮಿ (ಸಂರಕ್ಷಿಸಲ್ಪಟ್ಟ ನಾಗರಿಕರು)
ಇಸ್ಲಾಮಿನ ಆಡಳಿತದಲ್ಲಿ ವಾಸಿಸುವ ಮುಸ್ಲಿಮೇತರ ನಾಗರಿಕರಿಗೆ ‘ಧಿಮ್ಮಿ’ ಎಂಬ ಗೌರವಾನ್ವಿತ ಸ್ಥಾನಮಾನವಿತ್ತು. ಇವರ ಜೀವ, ಆಸ್ತಿ, ಘನತೆ ಮತ್ತು ಆರಾಧನಾ ಸ್ವಾತಂತ್ರ್ಯವನ್ನು ರಕ್ಷಿಸುವುದು ಸರ್ಕಾರದ ಪರಮ ಕರ್ತವ್ಯವಾಗಿದೆ. ಮುಸ್ಲಿಮರಿಗೆ ಕಡ್ಡಾಯವಾಗಿದ್ದ ಸೈನಿಕ ಸೇವೆಯಿಂದ ಇವರಿಗೆ ವಿನಾಯಿತಿ ಇತ್ತು.
ಪೈಗಂಬರರು ಹೇಳಿದ್ದಾರೆ: “ಯಾರಾದರೂ ಒಬ್ಬ ಧಿಮ್ಮಿ (ಸಂರಕ್ಷಿಸಲ್ಪಟ್ಟ ನಾಗರಿಕರು) ಗೆ ತೊಂದರೆ ಕೊಟ್ಟರೆ, ಆತ ನನಗೆ ತೊಂದರೆ ಕೊಟ್ಟಂತೆ; ಯಾರು ನನಗೆ ಕೇಡುಂಟು ಮಾಡಲು ಬಯಸುತ್ತಾರೋ, ಅವರು ದೇವನಿಗೆ ಕೇಡುಂಟು ಮಾಡಿದಂತೆ” (ತಬ್ರಾನಿ).
ನ್ಯಾಯ ಮತ್ತು ಸಮಾನತೆ
ಇಸ್ಲಾಮಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲು ಅವಕಾಶವಿಲ್ಲ. ತಪ್ಪಿತಸ್ಥನು ಮುಸ್ಲಿಮನಾಗಿದ್ದರೂ, ಸಂತ್ರಸ್ತನು ಮುಸ್ಲಿಮೇತರನಾಗಿದ್ದರೂ ನ್ಯಾಯಾಂಗವು ಮುಸ್ಲಿಮೇತರನ ಪರವಾಗಿಯೇ ತೀರ್ಪು ನೀಡಬೇಕು.
ವಾಸಿಲಾ ಬಿನ್ ಅಲ್-ಅಸ್ಖಅ್(ರ) ವರದಿ ಮಾಡುತ್ತಾರೆ: ನಾನು ಪ್ರವಾದಿಯವರಲ್ಲಿ, “ಓ ಅಲ್ಲಾಹನ ಪ್ರವಾದಿಯವರೇ, ಕೋಮುವಾದ(ಅಸ್ಬಿಯ್ಯತ್) ಎಂದರೇನು?” ಎಂದು ಕೇಳಿದೆ. ಅದಕ್ಕೆ ಪ್ರವಾದಿಯವರು: “ನಿನ್ನ ಸಮುದಾಯದವರು ಅನ್ಯಾಯ(ಅಕ್ರಮ) ಮಾಡುತ್ತಿದ್ದರೂ ಅವರಿಗೆ ಸಹಾಯ ಮಾಡುವುದು (ಅವರ ಪರ ನಿಲ್ಲುವುದು)” ಎಂದು ಉತ್ತರಿಸಿದರು. (ಅಬೂ ದಾವೂದ್)
ಎರಡನೇ ಖಲೀಫಾ ಉಮರ್ ಫಾರೂಕರ (ರ) ನ್ಯಾಯ
ಉಮರ್ ಫಾರೂಕರ ಆಡಳಿತ ಕಾಲದಲ್ಲಿ ಅವರ ಈಜಿಪ್ಟ್ನ ರಾಜ್ಯಪಾಲರಾಗಿದ್ದ ಅಮ್ರ್ ಬಿನ್ ಆಸ್ರ ಪುತ್ರ ಮುಹಮ್ಮದ್ ಮತ್ತು ಕೋಪ್ಟ್ ವಂಶದ ಓರ್ವ ಕ್ರೈಸ್ತ, ಓಟ ಸ್ಪರ್ಧೆ ನಡೆಸಿದರು. ಅದರಲ್ಲಿ ಮುಹಮ್ಮದ್ ಸೋತರು. ಪ್ರತೀಕಾರಕ್ಕಾಗಿ ಅವರು ತನ್ನ ಕ್ರೈಸ್ತ ಸಹೋದರನಿಗೆ ಚಾಟಿಯಿಂದ ಹೊಡೆದರು. ಪುತ್ರ ಮಾಡಿದ ತಪ್ಪಿಗೆ ರಾಜ್ಯಪಾಲರು ಕ್ರಮಕೈಗೊಳ್ಳಲಾರರೆಂದು ಭಾವಿಸಿ ರಾಜ್ಯಪಾಲರಿಗೆ ತಿಳಿಸದೆ ನೇರವಾಗಿ ಖಲೀಫಾ ಉಮರರಿಗೆ ಆ ಕ್ರೈಸ್ತ ವ್ಯಕ್ತಿ ದೂರು ನೀಡಿದನು. ಆ ಕೂಡಲೇ ಉಮರ್(ರ) ಫಿರ್ಯಾದಿದಾರನನ್ನೂ ರಾಜ್ಯಪಾಲ ಅಮ್ರ್ ಮತ್ತು ಅವರ ಪುತ್ರ ಮುಹಮ್ಮದನನ್ನೂ ಕರೆಸಿ ವಿಚಾರಣೆ ನಡೆಸಿದರು. ಘಟನೆಯು ನಿಜವೆಂದು ಮನಗಂಡ ಬಳಿಕ ಕೋಪ್ಟ್ ವಂಶದ ಕ್ರೈಸ್ತ ಸಹೋದರನಿಗೆ ಚಾಟಿ ನೀಡಿ ಮುಹಮ್ಮದನಿಗೆ ಹೊಡೆಯುವಂತೆ ಆದೇಶಿಸಿದರು. ಹಾಗೆಯೇ ಆತ ತನಗೆ ಹೊಡೆದುದಕ್ಕೆ ಪ್ರತಿಯಾಗಿ ರಾಜ್ಯಪಾಲರ ಮಗ ಮುಹಮ್ಮದನಿಗೆ ಹೊಡೆದನು. ಪುನಃ ಉಮರ್ ಫಾರೂಕ್ ಹೇಳಿದರು: “ಈಗ ಅಮ್ರ್ರ ತಲೆಗೂ ಹೊಡೆಯಿರಿ. ಅಲ್ಲಾಹನಾಣೆ! ಕೇವಲ ಅವರ ಅಧಿಕಾರ ಬಲದಿಂದಾಗಿಯೇ ಅವರ ಮಗ ಮುಹಮ್ಮದ್ ನಿಮಗೆ ಹೊಡೆದಿದ್ದಾನೆ.”
“ಸತ್ಯವಿಶ್ವಾಸಿಗಳ ನಾಯಕರೇ! ನನಗಿಷ್ಟೇ ಸಾಕು. ನನಗೆ ಹೊಡೆದವನೊಂದಿಗೆ ನಾನು ಪ್ರತೀಕಾರ ತೀರಿಸಿದ್ದೇನೆ.” ಕ್ರೈಸ್ತ ಬಾಂಧವ ಸಂತೃಪ್ತಿಯಿಂದ ಹೇಳಿದ. ಈ ಘಟನೆಯ ಸಂದರ್ಭದಲ್ಲಿ ಹಝ್ರತ್ ಉಮರ್(ರ) ಹೇಳಿದ ಮಾತುಗಳು ಇತಿಹಾಸದಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆದಿಡಲು ಯೋಗ್ಯವಾಗಿವೆ: “ಅಮ್ರ್ ಬಿನ್ ಆಸ್, ನೀವು ಎಂದಿನಿಂದ ಜನರನ್ನು ಗುಲಾಮರನ್ನಾಗಿ ಮಾಡಲು ತೊಡಗಿದಿರಿ? ವಸ್ತುತಃ ಅವರ ತಾಯಂದಿರು ಅವರನ್ನು ಸ್ವತಂತ್ರರಾಗಿಯೇ ಹೆತ್ತಿರುತ್ತಾರೆ.”
ಕೋಮು ಸಾಮರಸ್ಯ
ನಮ್ಮಲ್ಲಿ ಕೋಮು ಸೌಹಾರ್ದತೆ ಮೂಡಲು ‘ನಾಗರಿಕ ಸಂವಾದ’ ಅತ್ಯಗತ್ಯ. ಧರ್ಮ ಧರ್ಮಗಳ ನಡುವೆ ವೈಚಾರಿಕ ಚರ್ಚೆಗಳು ನಡೆಯಬೇಕು. ಯಾರನ್ನೂ ಅವಮಾನಿಸದೆ, ಪರಸ್ಪರ ಗೌರವ ಕೊಟ್ಟು ಸಂವಾದ ನಡೆಸಬೇಕು ಎನ್ನುವುದು ಇಸ್ಲಾಮಿನ ಶಿಕ್ಷಣ.
ಪವಿತ್ರ ಕುರ್ಆನ್ನಲ್ಲಿ ಅಲ್ಲಾಹನು ಹೇಳುತ್ತಾನೆ: “ನೀವು (ಜನರನ್ನು) ಯುಕ್ತಿಯೊಂದಿಗೆ ಹಾಗೂ ಸದುಪದೇಶದೊಂದಿಗೆ ನಿಮ್ಮ ಒಡೆಯನ ಕಡೆಗೆ ಕರೆಯಿರಿ – ಮತ್ತು ಅತ್ಯುತ್ತಮ ರೀತಿಯಲ್ಲಿ ಅವರೊಡನೆ ವಾದಿಸಿರಿ”. (ಅನ್ನಹ್ಲ್ : 125)
“ಗ್ರಂಥದವರೇ, ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ಅಂಶದೆಡೆಗೆ ಬನ್ನಿರಿ” (ಆಲಿ ಇಮ್ರಾನ್: 64 )
ವೈವಿಧ್ಯತೆಯ ಮಧ್ಯೆ ಸಮಾಜದಲ್ಲಿ ಪರಸ್ಪರ ಸಹಬಾಳ್ವೆಯಿಂದ ಬದುಕುವುದು ಹೇಗೆ ಎಂಬುದನ್ನು ಇಸ್ಲಾಮ್ ಧರ್ಮವು ಅತ್ಯಂತ ನಿಖರವಾಗಿ ಮತ್ತು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದೆ. ಇಸ್ಲಾಮಿನ ಇತಿಹಾಸವನ್ನು ಅವಲೋಕಿಸಿದರೆ, ಇಸ್ಲಾಮಿಗಿಂತಲೂ ಸುಂದರವಾಗಿ ಬಹುತ್ವವನ್ನು ನಿರ್ವಹಿಸಿದ ಮತ್ತೊಂದು ಜೀವನಕ್ರಮ ಇಲ್ಲ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
IslamKannada News Portal
