Home / ಲೇಖನಗಳು / ನಮಗರಿವಿಲ್ಲದೇ ಹೋಗಬಾರದ ಅತಿಥಿ

ನಮಗರಿವಿಲ್ಲದೇ ಹೋಗಬಾರದ ಅತಿಥಿ

ಮರ್ಯಮ್ ಶಹೀರಾ

ಇಬ್ಬರು ವ್ಯಕ್ತಿಗಳು ಪ್ರವಾದಿ(ಸ)ರ ಬಳಿಗೆ ಬಂದರು. ಪ್ರವಾದಿ(ಸ)ರೊಂದಿಗೆ ಮಾತುಕತೆ ನಡೆಸಿದ ನಂತರ ಇವರಿಬ್ಬರೂ ಇಸ್ಲಾಮ್ ಸ್ವೀಕರಿಸಿದರು. ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಅನಂತರದ ದಿನಗಳಲ್ಲಿ ಅವರಿಬ್ಬರು ಇಸ್ಲಾಮಿನ ಮಾರ್ಗದಲ್ಲಿ  ಕರ್ಮೋತ್ಸುಕರಾಗಿದ್ದರು. ಹೀಗಿರುವಾಗ ಆ ಪೈಕಿ ಒಬ್ಬನು ಯುದ್ಧ ರಂಗದಲ್ಲಿ ಹುತಾತ್ಮನಾಗುತ್ತಾನೆ. ಇನ್ನೊಬ್ಬ ಒಂದು ವರ್ಷದ ಬಳಿಕ ಸಾಮಾನ್ಯ ರೀತಿಯಲ್ಲಿ ಮರಣ ಹೊಂದುತ್ತಾನೆ.

ಒಂದು ದಿನ ತಲ್ಹಾ ಬಿನ್ ಉಬೈದುಲ್ಲಾ(ರ) ಎಂಬ ಓರ್ವ ಸಹಾಬಿ ಕನಸು ಕಾಣುತ್ತಾರೆ. ಆ ಕನಸಿನಲ್ಲಿ ಈ ಹಿಂದೆ ಮರಣ ಹೊಂದಿದ ಆ ಇಬ್ಬರು ಸ್ನೇಹಿತರು ಮತ್ತು ತಲ್ಹಾ ಸ್ವರ್ಗ ಪ್ರವೇಶಕ್ಕಾಗಿ ಸ್ವರ್ಗದ ಬಾಗಿಲ ಬಳಿ ನಿಂತಿದ್ದಾರೆ. ಸ್ವರ್ಗದ ಕಾವಲುಗಾರನಾದ ದೇವಚರ ಒಬ್ಬೊಬ್ಬರನ್ನೇ ಸ್ವರ್ಗದೊಳಗೆ ಪ್ರವೇಶಗೊಳಿಸುತ್ತಿದ್ದರು. ಈ ಮೂವರ ಸರದಿ ಬಂದಾಗ ಮೊದಲು ಕರೆದದ್ದು ಸಾಮಾನ್ಯ ಮರಣ ಹೊಂದಿದ ವ್ಯಕ್ತಿಯನ್ನಾಗಿತ್ತು. ನಂತರ ಯುದ್ಧ ರಂಗದಲ್ಲಿ ಹುತಾತ್ಮನಾದವನನ್ನು ಕರೆಯಲಾಯಿತು. ಮೂರನೆಯದಾಗಿ ತಲ್ಹಾ(ರ)ರ ಸರದಿ ಬಂದಾಗ “ನಿನ್ನ ಸಮಯ ಸನ್ನಿಹಿತವಾಗಲಿಲ್ಲ. ಈಗ ಮರಳಿ ಹೋಗು. ಸಮಯವಾದಾಗ ಬಾ” ಎಂದು ಆ ವ್ಯಕ್ತಿಯನ್ನು ಮರಳಿ ಕಳಿಸಿದರು. ಈ ಕನಸಿನ ಬಗ್ಗೆ ತಲ್ಹಾ(ರ)ರಲ್ಲಿ ಕುತೂಹಲ ಮೂಡಿತ್ತು. ತನ್ನನ್ನು ಮರಳಿ ಕಳಿಸಿದ ಮರ್ಮವೂ ತಿಳಿದಿತ್ತು. ಆದರೆ  ಹುತಾತ್ಮನಾದ ವ್ಯಕ್ತಿಗಿಂತ ಮೊದಲು ಆ ವ್ಯಕ್ತಿ ಹೇಗೆ ಸ್ವರ್ಗ ಪ್ರವೇಶಿಸಿದ? ಈ ಬಗ್ಗೆ ಪ್ರವಾದಿ(ಸ)ರಲ್ಲಿ ವಿಚಾರಿಸಿದಾಗ ಪ್ರವಾದಿ(ಸ)ರು ಆ ಸ್ವಪ್ನವನ್ನು ವ್ಯಾಖ್ಯಾನಿಸುತ್ತಾ, “ಹುತಾತ್ಮನಾದ ವ್ಯಕ್ತಿಗಿಂತ ಒಂದು ರಮಝಾನ್ ಹೆಚ್ಚುವರಿಯಾಗಿ ಆ ವ್ಯಕ್ತಿಗೆ ಲಭಿಸಿದೆ. ಕಾರಣ ಈ ಮುಖಾಂತರ ಆ ವ್ಯಕ್ತಿ ಸತ್ಯ ವಿಶ್ವಾಸ ಮತ್ತು ಪರಲೋಕ ಪ್ರತಿಫಲಾಪೇಕ್ಷೆಯಿಂದ ಅದನ್ನು ಆಚರಿಸಿದ್ದಾನೆ. ಅಲ್ಲಾಹನು ಆ ವ್ಯಕ್ತಿಗೆ ಹುತಾತ್ಮನಿಗಿಂತಲೂ ಉನ್ನತವಾದ ಪದವಿ ನೀಡಿದನು” ಎಂದರು.

ಸತ್ಯವಿಶ್ವಾಸಿಗಳ ಪಾಲಿಗೆ ಪವಿತ್ರ ರಮಝಾನ್ ಸೀಸನ್ ಆಗಿದೆ. ಧಾರಾಳ ಪುಣ್ಯಗಳನ್ನು ಶೇಖರಿಸಲು, ದೇವ ಸಾಮೀಪ್ಯಗಳಿಸಲು ಸತ್ಯವಿಶ್ವಾಸಿಗಳಿಗೆ ಲಭಿಸಿರುವ ಒಂದು ಸುವರ್ಣಾವಕಾಶವಾಗಿದೆ. ಪ್ರವಾದಿ(ಸ)ರು ಹೇಳಿರುವರು: “ಜನರ ಪೈಕಿ  ಅತ್ಯುತ್ತಮರು ಯಾರೆಂದರೆ ಯಾರ ಆಯುಷ್ಯವು ದೀರ್ಘವೊ ಮತ್ತು ಕರ್ಮಗಳು ಉತ್ತಮವೋ ಅವರೇ ಜನರ ಪೈಕಿ ಅತ್ಯುತ್ತಮರಾಗಿದ್ದಾರೆ.”

ರಮಝಾನ್ ಯಾಕಾಗಿ ಬಂದಿದೆ ಎಂಬ ಮುಖ್ಯವಾದ ಪ್ರಶ್ನೆಗೆ ಸರಿಯಾದ ಉತ್ತರ ಗತಿಸಿ ಹೋದ ದಿನಗಳಲ್ಲಿ ಆಗಿ ಹೋದ ಪಾಪಗಳಿಂದ ಮುಕ್ತವಾಗಲಿಕ್ಕಾಗಿದೆ ಎಂಬುದೇ ಆಗಿದೆ. ಈ ಉತ್ತರವನ್ನು ರಮಝಾನಿಗೆ ಸಂಬಂಧಿಸಿ ಹೇಳಿದ ಎಲ್ಲ  ವಿಷಯಗಳಲ್ಲಿಯೂ ಸೇರಿಸಲು ಪ್ರವಾದಿ(ಸ)ರು ಮರೆಯಲಿಲ್ಲ. ಪ್ರವಾದಿ(ಸ)ರು ಪವಿತ್ರ ರಮಝಾನಿನ ಬಗ್ಗೆ ಹೇಳಿರುವ ಎಲ್ಲ ಮಾತುಗಳಲ್ಲಿಯೂ ಈ ಒಂದು ವಿಚಾರ ಎದ್ದು ಕಾಣುತ್ತದೆ.

“ಒಬ್ಬನು ಸತ್ಯವಿಶ್ವಾಸ ಮತ್ತು ಆತ್ಮಾವಲೋಕನದೊಂದಿಗೆ ರಮಝಾನ್ ತಿಂಗಳ ಉಪವಾಸ ಆಚರಿಸಿದರೆ ಅಲ್ಲಾಹನು ಅವನ ಗತ ಪಾಪಗಳನ್ನು ಕ್ಷಮಿಸಿ ಬಿಡುವನು.”

“ಒಬ್ಬನು ಸತ್ಯವಿಶ್ವಾಸ ಸಹಿತ ಪರಲೋಕದ ಪುಣ್ಯದ ಸಂಕಲ್ಪದೊಂದಿಗೆ ರಮಝಾನ್‍ನಲ್ಲಿ ರಾತ್ರಿ ನಮಾಝ್ ನಿರ್ವಹಿಸಿದರೆ ಅಲ್ಲಾಹನು ಆತನ ಗತ ಪಾಪಗಳನ್ನು ಮನ್ನಿಸುವನು.”

“ಒಬ್ಬನು ಸತ್ಯವಿಶ್ವಾಸ ಮತ್ತು ಆತ್ಮಾವಲೋಕನದೊಂದಿಗೆ ಲೈಲತುಲ್ ಕದ್ರ್‍ನ ರಾತ್ರಿ ಜಾಗರಣೆ ಮಾಡಿದರೆ ಅಲ್ಲಾಹನು ಆತನ ಗತ ಪಾಪಗಳನ್ನು ಮನ್ನಿಸುವನು.”

ರಮಝಾನಿನ ವ್ರತಾಚಾರಣೆ, ರಾತ್ರಿ ನಮಾಝ್, ಲೈಲತುಲ್ ಕದ್ರ್ ಇವು ಮೂರು ಆಗಿದೆ ರಮಝಾನ್. ಈ ಮೂರು ವಿಷಯಗಳನ್ನು ಹೇಳುವಾಗ ಪುನರಾವರ್ತನೆಯಾಗಿ ಬಂದಿರುವ ಒಂದು ವಿಷಯ “ಅವನ ಹಿಂದಿನ ಎಲ್ಲ ಪಾಪಗಳೂ ಕ್ಷಮಿಸಲ್ಪಡುವುದು” ಎಂದಾಗಿದೆ. ರಮಝಾನ್ ಎಂಬ ಪದದ ಅರ್ಥ ಕೂಡಾ “ಹೊತ್ತಿಸಿ ಬಿಡುವುದು” ಎಂದಾಗಿದೆ. ನಮ್ಮ ಜೀವನದ ರೆಕಾರ್ಡ್ ನಲ್ಲಿ ದೇವಚರರು ಬರೆದಿಟ್ಟ ಎಲ್ಲ ಪಾಪಗಳನ್ನು ಹೊತ್ತಿಸಿ ಬಿಡಲು ಅಲ್ಲಾಹನು ಒಂದು ಅವಕಾಶವನ್ನು  ನೀಡುತ್ತಿದ್ದಾನೆ. ಇದಕ್ಕಿಂತ ದೊಡ್ಡ ಪ್ರತಿಫಲ ಸತ್ಯವಿಶ್ವಾಸಿಯ ಪಾಲಿಗೆ ಬೇರೇನಿದೆ? ಏಕೆಂದರೆ ನಾಳೆ ಪರಲೋಕದಲ್ಲಿ ಅಲ್ಲಾಹನ ಮಗ್ಫಿರತ್‍ಗೆ ಪಾತ್ರರಾದವರು ಮಾತ್ರ ವಿಜಯಶಾಲಿಗಳು ಎಂಬುದು ಪವಿತ್ರ ಕುರ್‍ಆನ್ ನಮಗೆ ಮನವರಿಕೆ  ಮಾಡಿಕೊಡುತ್ತದೆ.

ಪ್ರವಾದಿ(ಸ)ರು: ಹೇಳಿದರು, “ಯಾವುದೇ ವ್ಯಕ್ತಿಯನ್ನು ಅವನ ಕರ್ಮವು ಸ್ವರ್ಗಕ್ಕೆ ಒಯ್ಯಲಾರದು?” ಜನರು: “ಅಲ್ಲಾಹನ ಸಂದೇಶವಾಹಕರೇ, ನಿಮ್ಮನ್ನೂ ಒಯ್ಯಲಾರದೇ? ಎಂದು ವಿಚಾರಿಸಿದರು. ಅದಕ್ಕೆ ಪ್ರವಾದಿ(ಸ)ರು: “ನನ್ನನ್ನೂ ಒಯ್ಯಲಾರದು. ಅಲ್ಲಾಹನು ನನ್ನನ್ನು ತನ್ನ ಕೃಪೆ ಮತ್ತು ಅನುಗ್ರಹದಿಂದ ಆವರಿಸಿ ಬಿಟ್ಟರೆ ಮಾತ್ರ. ನೀವು ಸ್ಥಿರಚಿತ್ತರಾಗಿದ್ದು ಸನ್ಮಾರ್ಗಗಾಮಿಗಳಾಗಿ, ದೇವ ಸಾಮೀಪ್ಯದ ಮಾರ್ಗವನ್ನು ಅನುಸರಿಸಿರಿ. ಇನ್ನು ನಿಮ್ಮಲ್ಲಿ ಯಾರೂ ಮರಣವನ್ನು ಅ ಪೇಕ್ಷಿಸಬಾರದು. ಏಕೆಂದರೆ ಅವನು (ಬದುಕಿದ್ದರೆ) ಸತ್ಕರ್ಮಿಯಾಗಿದ್ದರೆ, ಅವನ ಸತ್ಕರ್ಮ ಹೆಚ್ಚಲೂಬಹುದು. ಅಥವಾ ಅವನು ದುಷ್ಟನಾಗಿದ್ದರೆ ಬಹುಶಃ (ಪಶ್ಚಾತ್ತಾಪ) ಅಲ್ಲಾಹನ ಮೆಚ್ಚುಗೆ ಗಳಿಸಲೂಬಹುದು” (ಬುಖಾರಿ). ಅಲ್ಲಾಹನ ಕ್ಷಮೆಗಿಂತ ದೊಡ್ಡ  ಪ್ರತಿಫಲ ಸತ್ಯವಿಶ್ವಾಸಿಯ ಪಾಲಿಗೆ ಬೇರೇನಿದೆ? ಇದು ನಮಗೆ ಈ ರಮಝಾನಿನಲ್ಲಿ ಸಾಧ್ಯವಾಗಬೇಕು. ಈ ಮೂಲಕ ಒಂದು ಹೊಸ ಮಗುವಾಗಿ ಈದುಲ್ ಫಿತ್ರ್‍ಗೆ ಹೊಸ ಜನ್ಮ ಹೊಂದಲು ನಮಗೆ ಸಾಧ್ಯವಾಗಬೇಕು. ಅದಾಗಿದೆ ರಮಝಾನ್.  ಅದಕ್ಕಾಗಿಯೇ ರಮಝಾನ್.

ಹಾಗೆಯೇ ನಮ್ಮ ಆರಾಧನೆಗಳು ಚೈತನ್ಯರಹಿತವಾಗಿ ಹೋಗುತ್ತಿವೆ. ಯಾಂತ್ರಿಕವಾಗುತ್ತಿವೆ. ಕೇವಲ ಆಚಾರಗಳಾಗಿಯೂ ಪುನರಾವರ್ತನೆಗಳಾಗಿಯೂ ನಡೆಯುತ್ತಿದೆ. (ಉಮ್ಮತ್-ಮುಸ್ಲಿಮ್) ಮುಸ್ಲಿಮ್ ಸಮುದಾಯ ಪ್ರವಾದಿಗಳ ದೌತ್ಯವನ್ನು  ನೆರವೇರಿಸಬೇಕಾದ ಒಂದು ಸಮುದಾಯವಾಗಿದೆ. ಇಸ್ಲಾಮ್ ಕೇವಲ ಪಾರಲೌಕಿಕ ಮಾತ್ರವಲ್ಲ, ಇಹಲೋಕದ ಸುಧಾರಣೆಯನ್ನು ಬಯಸುತ್ತದೆ. ಆದ್ದರಿಂದ ಈ ದೌತ್ಯವನ್ನು ನೆರವೇರಿಸಲು ಬೇಕಾದ ಶಕ್ತಿ ಸಾಮಥ್ರ್ಯಗಳನ್ನು ಗಳಿಸಲಿಕ್ಕಿರುವ ಒಂದು  ಅವಕಾಶವಾಗಿದೆ. ಇಸ್ಲಾಮಿನ ಆರಾಧನೆಗಳು ಈ ನಿಟ್ಟಿನಲ್ಲಿ ಮುಸ್ಲಿಮ್ ಸಮುದಾಯದ ತರಬೇತಿಯ ಭಾಗಗಳಾಗಿವೆ.

ಆದ್ದರಿಂದಲೇ ಪ್ರವಾದಿ(ಸ) ರಮಝಾನ್ ತಿಂಗಳ ವೈಶಿಷ್ಯಗಳನ್ನು ವಿವರಿಸುತ್ತಾ ಆ ತಿಂಗಳ ಮೂಲಕ ನಾವು ಗಳಿಸಬೇಕಾದ ಟಾರ್ಗೆಟ್ ಗಳನ್ನು ಬೊಟ್ಟು ಮಾಡಿಕೊಟ್ಟಿದ್ದಾರೆ. ತಕ್ವಾ, ಸಹನೆ, ಸಹಾನುಭೂತಿ, ಆರೋಗ್ಯ ಇತ್ಯಾದಿ ಗುಣಗಳನ್ನು ಪ್ರಾಯೋಗಿಕವಾಗಿ ತರಬೇತಿ ನೀಡುವ ಮೂಲಕ ಮುಸ್ಲಿಮ್ ಸಮುದಾಯವನ್ನು ಶಕ್ತಗೊಳಿಸಲು ರಮಝಾನ್ ತಿಂಗಳು ಪ್ರತಿ ವರ್ಷವೂ  ಆಗಮಿಸುತ್ತಿದೆ. ಆದ್ದರಿಂದ ಇಸ್ಲಾಮಿನ ಆರಾಧನೆಗಳ ಮೂಲಕ ಗಳಿಸಲಿಕ್ಕಿರುವ ಗುರಿಗಳನ್ನು ತಿಳಿದು ಆ ಮೂಲಕ ಈ ಬಾರಿಯ ರಮಝಾನ್ ಫಲಪ್ರದಗೊಳಿಸುವೆನೆಂಬ ತೀರ್ಮಾನದೊಂದಿಗೆ ಅದನ್ನು ಸ್ವಾಗತಿಸಬೇಕಾಗಿದೆ. ಅದನ್ನು  ದುರ್ಬಲಗೊಳಿಸುವ ಒಂದು ಕರ್ಮ ಕೂಡಾ ನಮ್ಮೊಂದಿಗೆ ಆಗದಿರಲು ಖಾತ್ರಿಪಡಿಸಿಕೊಳ್ಳಬೇಕು.

ಪ್ರವಾದಿಯವರು(ಸ) ಹೇಳಿರುವರು: “ಒಬ್ಬ ವ್ಯಕ್ತಿಯು (ಉಪವಾಸದ ಸ್ಥಿತಿಯಲ್ಲಿ) ಸುಳ್ಳಾಡುವುದನ್ನು ಅದರಂತೆ ವರ್ತಿಸುವುದನ್ನೂ ತೊರೆಯದಿದ್ದರೆ  ಅಲ್ಲಾಹನಿಗೆ ಅವನು ತನ್ನ ಊಟ, ನೀರು ತೊರೆಯಬೇಕೆಂಬ ಯಾವ ಬಯಕೆಯೂ ಇಲ್ಲ.” ಇಂತಹ ನಾಮಧಾರಿ ಉಪವಾಸಿಗರ ಬಗ್ಗೆ ಪ್ರವಾದಿ(ಸ)ರು ಎಚ್ಚರಿಸಿದ್ದಾರೆ: “ತಮ್ಮ ಉಪವಾಸ ವ್ರತದ ಮೂಲಕ ಹಸಿವು ಬಾಯಾರಿಕೆಗಳಲ್ಲದೆ ಬೇರಾವುದನ್ನೂ  ಗಳಿಸದ ಎಷ್ಟೋ ಉಪವಾಸಿಗರಿದ್ದಾರೆ” (ಬುಖಾರಿ).

ತಿನ್ನುವುದು ಕುಡಿಯುವುದರಿಂದ ದೂರವಿರುವುದು ಮಾತ್ರ ಉಪವಾಸವಲ್ಲ. ಅದು ಉಪವಾಸದ ಬಾಹ್ಯರೂಪ ಮತ್ತು ಕಾನೂನು ಪರ ಸಂಕೇತವಾಗಿದೆ. ಒಬ್ಬ ವ್ಯಕ್ತಿ ಈ ಬಾಹ್ಯ ಮತ್ತು ಕಾನೂನು ಪರ ಮೇರೆಯ ಬಳಿ ಹೋಗಿ ನಿಂತು ಬಿಟ್ಟರೆ ಅವನ ಸ್ಥಿತಿಯು ಉಪವಾಸ ವ್ರತವೆಂಬ ನಾಲ್ಕೆಡೆಗಳಿಗೂ ಹೋಗಿ ಸುತ್ತಾಡಿಯೂ ಅದರೊಳಗೆ ಪ್ರವೇಶಿಸದೆ ಹಿಂದಿರುಗಿದಂತಾಗುತ್ತದೆ. ಆದ್ದರಿಂದ ಉಪವಾಸ ವ್ರತದ ಉದ್ದೇಶಗಳು ಮತ್ತು ಪ್ರಯೋಜನಗಳು  ಸಿಗಬೇಕಾದರೆ ಅದು ಅಗತ್ಯ ಶಿಷ್ಟಾಚಾರಗಳು ಮತ್ತು ನಿಬಂಧನೆಗಳೊಂದಿಗೆ ಆಚರಿಸಲ್ಪಡಬೇಕು. ಸಂಕಲ್ಪ ಶುದ್ಧಿ, ದೃಢ ನಂಬಿಕೆ, ಅನುಸರಣೆಯ ಪ್ರಜ್ಞೆ, ದೇವ ಸಂಪ್ರೀತಿಯ ಬಯಕೆ, ಪರಲೋಕ ಮೋಕ್ಷದ ಆಸೆ ಇರಬೇಕು. ಪ್ರವಾದಿ(ಸ)ರ ಮಾತಿನಲ್ಲಿ  ಹೇಳಬೇಕಾದರೆ: “ಸತ್ಯವಿಶ್ವಾಸ ಮತ್ತು (ಇಹ್ತಿಸಾಬ್) ಆತ್ಮಾವಲೋಕನ”ದೊಂದಿಗೆ ಆಚರಿಸಲ್ಪಡಬೇಕು.

ಇನ್ನೊಂದರ್ಥದಲ್ಲಿ ಹೇಳುವುದಾದರೆ, ರಮಝಾನ್ ನಮ್ಮ ಬಳಿಗೆ ಬರುವ ಅಲ್ಲಾಹನ ಅತಿಥಿಯಾಗಿದೆ. ಗೌರವದೊಂದಿಗೆ ಅತಿಥಿ ಸತ್ಕಾರ ಮಾಡಬೇಕಾದುದು ಆತಿಥೇಯನ ಕರ್ತವ್ಯವಾಗಿದೆ. ಆ ಅತಿಥಿ ಆತಿಥೇಯನ ಪರವಾಗಿ ನಾಳೆ  ಪರಲೋಕದಲ್ಲಿ ಸಾಕ್ಷಿ ಹೇಳುವುದು. “ಉಪವಾಸವು ದೇವಾ! ನಾನು ಈ ವ್ಯಕ್ತಿಯನ್ನು ಆಹಾರ ಮತ್ತು ಇತರ ಸುಖಗಳಿಂದ ತಡೆದಾಗ ಈತನು ತಡೆದು ನಿಂತನು. ಈತನ ಪರವಾಗಿ ನನ್ನ ಶಿಫಾರಸ್ಸನ್ನು ಸ್ವೀಕರಿಸು” ಎಂದು ಹೇಳುವುದು (ಹದೀಸ್).  ಆದ್ದರಿಂದ ನಮಗರಿವಿಲ್ಲದೆ ಆ ಅತಿಥಿ ಬಂದು ಹೋಗಬಾರದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …