Home / ಲೇಖನಗಳು / ‘ಅದಾನ್’ ಅಥವಾ ಬಾಂಗ್ ಮತ್ತು ನಮಾಝ್

‘ಅದಾನ್’ ಅಥವಾ ಬಾಂಗ್ ಮತ್ತು ನಮಾಝ್

ನಮಾಝ್

ಮುಸ್ಲಿಮರು ದಿನಕ್ಕೆ ಐದು ಬಾರಿ ಮಸೀದಿಗೆ ಹೋಗಿ ಸಾಮೂಹಿಕವಾಗಿ ನಮಾಝ್ ಮಾಡುವುದು ಕಡ್ಡಾಯವಾಗಿದೆ. ನಮಾಝ್ ಎಂಬುದು ಇಸ್ಲಾಮ್ ಧರ್ಮದ ವಿಶಿಷ್ಟ ಪ್ರಾರ್ಥನೆ. ಅದನ್ನು ವಯಸ್ಕರಾದ ಸ್ತ್ರೀ-ಪುರುಷರೆಲ್ಲರೂ ಕಡ್ಡಾಯವಾಗಿ ನಿರ್ವಹಿಸಬೇಕು. ಪುರುಷರು ಅದನ್ನು ಮಸೀದಿಗಳಲ್ಲಿ ಸಂಘಟಿತವಾಗಿ ನೆರವೇರಿಸಬೇಕೆಂಬುದು ಇಸ್ಲಾಮಿನ ವಿಧಿ.

ಮಸೀದಿಗಳಿಂದ ದಿನಕ್ಕೆ ಐದು ಬಾರಿ ಕೇಳಿ ಬರುವ ‘ಅದಾನ್’ ಅಥವಾ ಬಾಂಗ್ ಈ ನಮಾಝ್‍ನ ಕರೆಯಾಗಿದೆ. ಅನೇಕ ದೇಶ ಬಾಂಧವರು ಈ ‘ಅದಾನ್’ ಕರೆಯನ್ನೇ ಪ್ರಾರ್ಥನೆ ಎಂದು ಭಾವಿಸುವುದಿದೆ. ‘ಅದಾನ್’ ಕರೆಯನ್ನು ಮಸೀದಿಗಳಿಂದ ಸಾಮಾನ್ಯವಾಗಿ ಮೈಕುಗಳಲ್ಲಿ ಕೊಡಲಾಗುತ್ತದೆ. ಕೆಲವರು ಪ್ರಾರ್ಥನೆಯನ್ನು ಇಷ್ಟು ಗಟ್ಟಿಯಾಗಿ ಯಾಕೆ ಹೇಳಬೇಕು, ದೇವರಿಗೆ ಕಿವಿ ಕೇಳಿಸುವುದಿಲ್ಲವೆ? ಎಂದು ಕೇಳುವುದುಂಟು. ನಿಜವಾಗಿ ‘ಅದಾನ್’ ಪ್ರಾರ್ಥನೆಯಲ್ಲ. ಅದು “ಪ್ರಾರ್ಥನೆಗೆ ಸಮಯವಾಯಿತು, ಮಸೀದಿಗೆ ಬನ್ನಿ” ಎಂದು ಜನರಿಗೆ ನೀಡುವ ಕರೆ. ಊರಿನ ಅಥವಾ ಪರಿಸರದ ಎಲ್ಲ ಜನರೂ ಕೇಳುವಂತಾಗಲು ಅದನ್ನು ಮೈಕ್‍ನಲ್ಲಿ ನೀಡಲಾಗುತ್ತದೆ. ಅದಾನ್‍ನಲ್ಲಿ ಹೇಳಲಾಗುವ ವಚನಗಳ ಅರ್ಥ ತಿಳಿದರೆ ಈ ಬಗ್ಗೆ ಇರುವ ಹಲವು ಗೊಂದಲಗಳು ನಿವಾರಣೆಯಾಗುತ್ತದೆ.

ಅಲ್ಲಾಹು ಅಕ್ಬರ್
ಅಲ್ಲಾಹನೇ ಅತ್ಯಂತ ಮಹಾನನು (ಇದನ್ನು ನಾಲ್ಕು ಬಾರಿ ಹೇಳಲಾಗುತ್ತದೆ).
ಅಶ್‍ಹದು ಅಲ್ಲಾ ಇಲಾಹ ಇಲ್ಲಲ್ಲಾಹ್
ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರು ಯಾರೂ ಇಲ್ಲವೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. (ಎರಡು ಬಾರಿ)
ಅಶ್‍ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್
ಪ್ರವಾದಿ ಮುಹಮ್ಮದ್‍ರವರು(ಸ) ಅಲ್ಲಾಹನ ಸಂದೇಶವಾಹಕರಾಗಿರುವರೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. (ಎರಡು ಬಾರಿ)
ಹಯ್ಯ ಅಲಸ್ಸಲಾಃ
ಬನ್ನಿ ನಮಾಝ್‍ನ ಕಡೆಗೆ (ಎರಡು ಸಲ)
ಹಯ್ಯ ಅಲಲ್ ಫಲಾಹ್
ಬನ್ನಿ ವಿಜಯದ ಕಡೆಗೆ (ಎರಡು ಸಲ)
ಅಲ್ಲಾಹು ಅಕ್ಬರ್
ಅಲ್ಲಾಹನೇ ಅತ್ಯಂತ ಮಹಾನನು (ಎರಡು ಸಲ)
ಲಾ ಇಲಾಹ ಇಲ್ಲಲ್ಲಾಹ್
ಅಲ್ಲಾಹನಲ್ಲದೆ ಮತ್ತಾರೂ ಆರಾಧನೆಗೆ ಅರ್ಹರಲ್ಲ.
ನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕೆ ಸುಮಾರು 80 ನಿಮಿಷ ಮುಂಚೆ ದಿನದ ಪ್ರಥಮ ನಮಾಝ್‍ಗೆ ಕರೆ ನೀಡುವಾಗ ಎರಡು ಸಲ ಈ ಕೆಳಗಿನ ನುಡಿಯನ್ನು ಸೇರಿಸಿ ಹೇಳಲಾಗುತ್ತದೆ:
ಅಸ್ಸಲಾತು ಖೈರುಂಮಿನನ್ನೌಮ್
ನಮಾಝ್ ನಿದ್ರೆಗಿಂತ ಉತ್ತಮವಾದುದು.
ಉಳಿದ ನಾಲ್ಕು ನಮಾಝ್‍ಗಳನ್ನು ಈ ಕೆಳಗಿನ ವೇಳೆಗಳಲ್ಲಿ ನೆರವೇರಿಸಲಾಗುತ್ತದೆ- ಮಧ್ಯಾಹ್ನ ಸೂರ್ಯನು ನಡುನೆತ್ತಿಯಿಂದ ಸ್ವಲ್ಪ ಪಶ್ಚಿಮದ ಕಡೆ ವಾಲಿದಾಗ, ಅಪರಾಹ್ನ ವಸ್ತುವಿನ ನೆರಳು ವಸ್ತುವಿನ ಆಕಾರಕ್ಕಿಂತ ಉದ್ದವಾದಾಗ, ಸಂಜೆ ಸೂರ್ಯನು ಅಸ್ತಮಿಸಿದಾಗ ಮತ್ತು ರಾತ್ರೆ ಮಲಗುವುದಕ್ಕೆ ಮುಂಚೆ.

ಈ ಐದು ಹೊತ್ತಿನ ನಮಾಝ್‍ಗಳ ಪೈಕಿ ಪ್ರತಿಯೊಂದರಲ್ಲೂ ಕುರ್‍ಆನಿನ ಪೀಠಿಕೆಯಂತಿರುವ ಅದರ ಪ್ರಥಮ ಅಧ್ಯಾಯವನ್ನು ಪಠಿಸ ಲಾಗುತ್ತದೆ. ಅದುವೇ ನಮಾಝ್‍ನ ಮುಖ್ಯ ಪ್ರಾರ್ಥನೆ. ಅದರ ಅನುವಾದ ಈ ರೀತಿ ಇದೆ:
“ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ಅಲ್ಲಾಹನಿಗೇ ಸರ್ವಸ್ತುತಿ ಅವನು ಸಕಲ ವಿಶ್ವದ ಪ್ರಭು. ಪರಮ ದಯಾಳು, ಕರುಣಾನಿಧಿ- ನಿರ್ಣಾಯಕ ದಿನದ ಅಧಿಪತಿ (ಆದ ಪ್ರಭುವೇ)- ನಾವು ನಿನಗೆ ಮಾತ್ರ ಇಬಾದತ್ ಮಾಡುತ್ತೇವೆ ಮತ್ತು ನಿನ್ನಿಂದ ಮಾತ್ರ ಸಹಾಯ ಬೇಡುತ್ತೇವೆ. ನಮಗೆ ಸನ್ಮಾರ್ಗವನ್ನು ತೋರಿಸು. ನೀನು ಅನುಗ್ರಹಿಸಿದವರ ಮಾರ್ಗ. ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗವಲ್ಲ. (ನೀನು ತೋರಿದ) ದಾರಿಯನ್ನು ತಪ್ಪಿ ನಡೆದವರ ಮಾರ್ಗವೂ ಅಲ್ಲ.” (ಪವಿತ್ರ ಕುರ್‍ಆನ್, 1:1-7)

ಕಅಬಾಕ್ಕೆ ಮುಖ ಮಾಡುವುದು

ನಮಾಝ್ ಮಾಡುವಾಗ ಮುಸ್ಲಿಮರು ಪವಿತ್ರ ಕಅಬಾ ಭವನದತ್ತ ಮುಖ ಮಾಡುತ್ತಾರೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ವಾಸಿಸುವ ನಮಗೆ ಅದು ಪಶ್ಚಿಮ ದಿಕ್ಕಿನಲ್ಲೇ ಇದೆ. ಕಅಬಾ ಭವನವು ಏಕದೇವಾರಾಧನೆಗಾಗಿ ಈ ಭೂಮಿಯ ಮೇಲೆ ನಿರ್ಮಿಸಲ್ಪಟ್ಟ ಪ್ರಥಮ ಆರಾಧನಾಲಯ. ಆದ್ದರಿಂದಲೇ ಜಗತ್ತಿನ ಎಲ್ಲ ಕಡೆಯ ಮುಸ್ಲಿಮರೂ ಆ ಕಡೆಗೇ ಮುಖ ಮಾಡಿ ನಮಾಝ್ ಮಾಡುತ್ತಾರೆ. ಲೋಕದ ಎಲ್ಲ ಮಸೀದಿಗಳೂ ಕಅಬಾಕ್ಕೆ ಅಭಿಮುಖವಾಗಿರುವಂತೆಯೇ ನಿರ್ಮಿಸಲ್ಪಡುತ್ತವೆ.

ನಮಾಝ್ ಅತ್ಯಂತ ಸರಳವೂ ಸುಂದರವೂ ಆದ ಆರಾಧನಾ ಕ್ರಮ. ಒಬ್ಬ ವಿನೀತ ಸೇವಕನಂತೆ ಕೈಕಟ್ಟಿ ನಿಲ್ಲುವುದು. ಮೊಣಕಾಲಿನ ಮೇಲೆ ಕೈಗಳನ್ನಿಟ್ಟು ಬಾಗುವುದು. ಪುನಃ ಎದ್ದು ನೇರವಾಗಿ ನಿಲ್ಲುವುದು, ಪಾದದ ಬೆರಳುಗಳು, ಮೊಣಕಾಲು, ಅಂಗೈ, ಹಣೆ ಮತ್ತು ಮೂಗನ್ನು ನೆಲಕ್ಕೆ ತಾಗಿಸಿ ಸಾಷ್ಟಾಂಗವೆರಗುವುದು. ಆ ಬಳಿಕ ಎದ್ದು ಎರಡು ಕಾಲುಗಳ ಮೇಲೆ ಕುಳಿತುಕೊಳ್ಳುವುದು ಹಾಗೂ ಪುನಃ ಅದೇ ರೀತಿಯ ಸಾಷ್ಟಾಂಗ ವಂದನೆ ಮಾಡುವುದು. ಇದು ನಮಾಝ್‍ನ ಒಂದು ‘ರಕಅತ್’ (Unit) ಆಗಿದೆ. ಪ್ರಭಾತದ ನಮಾಝ್‍ನಲ್ಲಿ ಇಂತಹ ಎರಡು ರಕಅತ್‍ಗಳು. ಮಧ್ಯಾಹ್ನ, ಅಪರಾಹ್ನ ಮತ್ತು ರಾತ್ರಿ ತಲಾ ನಾಲ್ಕು ರಕಅತ್‍ಗಳು ಮತ್ತು ಸಂಜೆಯ ನಮಾಝ್‍ನಲ್ಲಿ ಮೂರು ರಕಅತ್‍ಗಳು ಇವೆ. ಇವಲ್ಲದೆ ನಿಷ್ಠಾವಂತ ಸತ್ಯವಿಶ್ವಾಸಿಗಳು ಅನೇಕ ರಕಅತ್‍ಗಳ ಐಚ್ಛಿಕ ನಮಾಝ್ ಗಳನ್ನೂ ಮಾಡುತ್ತಾರೆ. ಇವುಗಳ ಪೈಕಿ ಕಡ್ಡಾಯ ನಮಾಝ್‍ಗಳಿಗೆ ಮುಂಚೆ ಮತ್ತು ಅವುಗಳ ಬಳಿಕ ಮಾಡುವ ಐಚ್ಛಿಕ ನಮಾಝ್ ಮತ್ತು ರಾತ್ರಿಯ ಅಂತ್ಯ ಯಾಮಗಳಲ್ಲಿ ಎದ್ದು ಮಾಡುವ ಐಚ್ಛಿಕ ನಮಾಝ್ ಪ್ರಮುಖವಾಗಿದೆ. ಐಚ್ಛಿಕ ನಮಾಝ್‍ಗಳನ್ನು ಮಸೀದಿಗಿಂತ ಮನೆಯಲ್ಲಿ ನಿರ್ವಹಿಸುವುದೇ ಶ್ರೇಷ್ಠವೆಂದು ಪ್ರವಾದಿ ಮುಹಮ್ಮದ್(ಸ) ಬೋಧಿಸಿರುವರು.

ನಮಾಝ್‍ನ ಮಹತ್ವ
ನಮಾಝ್‍ನ ಮಹತ್ವದ ಕುರಿತು ಪವಿತ್ರ ಕುರ್‍ಆನಿನಲ್ಲಿ ಅನೇಕ ಸೂಕ್ತಗಳಿವೆ. ಅವುಗಳ ಪೈಕಿ ಒಂದೆರಡನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತೇವೆ-
“ನನ್ನ ಸ್ಮರಣೆಗಾಗಿ ನಮಾಝನ್ನು ಸಂಸ್ಥಾಪಿಸಿರಿ.” (20:14)
“ಖಂಡಿತವಾಗಿಯೂ ನಮಾಝ್ ಸಮಯ ನಿರ್ಣಯದೊಂದಿಗೆ ಸತ್ಯವಿಶ್ವಾಸಿಗಳ ಮೇಲೆ ಕಡ್ಡಾಯವಾಗಿದೆ.” (4:103)
“ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ಪಾಲನೆಯೊಂದಿಗೆ ನೆರವೇರಿಸಲು ವಿಧಿಸಲ್ಪಟ್ಟಿರುವ ಕಡ್ಡಾಯ ವಿಧಿಯಾಗಿರುತ್ತದೆ.” (29:45)

ಸಾಮೂಹಿಕ ನಮಾಝ್
ಮಸೀದಿಗಳಲ್ಲಿ ಐದು ಹೊತ್ತಿನ ಕಡ್ಡಾಯ ನಮಾಝ್‍ಗಳನ್ನು ಸಂಘಟಿತವಾಗಿ ನಿರ್ವಹಿಸಲಾಗುತ್ತದೆ ಎಂದು ಹೇಳಿದೆವಷ್ಟೆ. ಈ ನಮಾಝ್‍ನಲ್ಲಿ ಒಬ್ಬರು ಮುಂದೆ ನಿಂತು ಇತರರು ಅವರ ಹಿಂದೆ ಸಾಲುಗಟ್ಟಿ ನಿಲ್ಲುತ್ತಾರೆ. ನಮಾಝ್‍ನ ನಾಯಕತ್ವ ವಹಿಸುವವರನ್ನು ‘ಇಮಾಮ್'(ನಾಯಕ) ಎನ್ನುತ್ತಾರೆ. ಅವರನ್ನು ಅನುಕರಿಸುತ್ತಾ ಹಿಂದೆ ಇದ್ದವರೆಲ್ಲರೂ ನಮಾಝ್ ಮಾಡುತ್ತಾರೆ. ಒಂದು ಇಸ್ಲಾವಿೂ ರಾಷ್ಟ್ರದಲ್ಲಿ ಆಯಾ ಪ್ರದೇಶದ ಮುಖ್ಯ ಆಡಳಿತಗಾರರೇ ಮಸೀದಿಯ ಇಮಾಮರೂ ಆಗಿರುತ್ತಾರೆ. ರಾಜಧಾನಿಯ ಮುಖ್ಯ ಮಸೀದಿಯ ನಮಾಝ್‍ನ ನೇತೃತ್ವವನ್ನು ರಾಷ್ಟ್ರದ ಅಧ್ಯಕ್ಷ ಅಥವಾ ಖಲೀಫ ಅವರೇ ವಹಿಸುತ್ತಾರೆ. ಪ್ರಾಂತೀಯ ರಾಜಧಾನಿಯ ಮುಖ್ಯ ಮಸೀದಿಯಲ್ಲಿ ರಾಜ್ಯಪಾಲರು ನಮಾಝ್‍ನ ನಾಯಕತ್ವ ವಹಿಸುತ್ತಾರೆ ಮತ್ತು ಜಿಲ್ಲಾ ಕೇಂದ್ರದ ಮುಖ್ಯ ಮಸೀದಿಯಲ್ಲಿ ಜಿಲ್ಲೆಯ ಆಡಳಿತಗಾರ. ಈ ರೀತಿ ಪ್ರತಿಯೊಂದು ಕಡೆಯ ಆಯಾ ಪ್ರದೇಶದ ಮುಖ್ಯಾಧಿಕಾರಿಯೇ ನಮಾಝ್‍ನ ನೇತೃತ್ವವನ್ನು ವಹಿಸುವರು. ಇಸ್ಲಾವಿೂ ರಾಷ್ಟ್ರವಲ್ಲದ ಕಡೆ ಮುಸ್ಲಿಮರು ತಂತಮ್ಮ ಪ್ರದೇಶದ ಮಸೀದಿಗೆ ಇಮಾಮರನ್ನು ನೇಮಕ ಮಾಡುತ್ತಾರೆ.

ಇಸ್ಲಾಮಿನಲ್ಲಿ ಪೌರೋಹಿತ್ಯವಿಲ್ಲ
ಇಸ್ಲಾಮಿನಲ್ಲಿ ಪೌರೋಹಿತ್ಯವಿಲ್ಲ. ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಯಾವುದೇ ವಿಶಿಷ್ಟ ವರ್ಗದ ಅಗತ್ಯವಿಲ್ಲ. ಇಸ್ಲಾಮಿನಲ್ಲಿ ಸನ್ಯಾಸವಿಲ್ಲ. ಧರ್ಮದ ಜ್ಞಾನ, ಕುರ್‍ಆನಿನ ವಿದ್ಯೆ, ದೇವ ಭಕ್ತಿ ಮತ್ತು ಧರ್ಮನಿಷ್ಠೆ ಇವುಗಳೇ ಇಮಾಮತ್‍ಗೆ(ನೇತೃತ್ವ) ಬೇಕಾದ ಗುಣಗಳು. ಈ ಗುಣಗಳಿರುವ ಯಾವ ವ್ಯಕ್ತಿಯೂ ಇಮಾಮತ್(ನೇತೃತ್ವ) ಮಾಡಬಹುದು. ಅವನ ಕುಲ ಗೋತ್ರಗಳಿಗಾಗಲೀ ವರ್ಣ, ವರ್ಗಗಳಿಗಾಗಲೀ ಯಾವುದೇ ಮಹತ್ವವಿಲ್ಲ. ಇಮಾಮತ್‍ಗೆ ನೇಮಿಸಲ್ಪಟ್ಟ ವ್ಯಕ್ತಿ ಕಾರಣಾಂತರದಿಂದ ಯಾವುದಾದರೂ ನಮಾಝ್‍ಗೆ ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಅವರ ಸ್ಥಾನದಲ್ಲಿ ನಮಾಝ್‍ಗೆ ಸೇರಿದವರ ಪೈಕಿ ಕುರ್‍ಆನ್ ಹೆಚ್ಚು ಬಲ್ಲವರು ಮತ್ತು ಹೆಚ್ಚು ದೇವ ಭಕ್ತಿಯುಳ್ಳವರನ್ನು ಇಮಾಮತ್‍ಗೆ ನಿಲ್ಲಿಸಲಾಗುತ್ತದೆ. ನಮಾಝ್‍ನಲ್ಲಿ ಎಲ್ಲರೂ ಸಮಾನವಾಗಿ ಒಂದೇ ಪಂಕ್ತಿಯಲ್ಲಿ ಭುಜಕ್ಕೆ ಭುಜ, ಪಾದಕ್ಕೆ ಪಾದ ತಾಗಿಸಿ ಸಾಲಾಗಿ ನಿಲ್ಲುತ್ತಾರೆ. ಮೊದಲು ಬಂದವರು ಮುಂದಿನ ಸಾಲಲ್ಲಿ ಮತ್ತು ಅನಂತರ ಬಂದವರು ಹಿಂದಿನ ಸಾಲುಗಳಲ್ಲಿ ನಿಲ್ಲಬೇಕು. ಇಲ್ಲಿ ಯಾರಿಗೂ ಸ್ಥಳ ಕಾದಿರಿಸುವಿಕೆಯಿಲ್ಲ. ಯಾರನ್ನೂ ಕಾಯುವ ಪ್ರಸಂಗವಿಲ್ಲ.

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …