“ಅಲ್ಲಾಹ್” ಎಂಬ ಪದವನ್ನು ಕೇಳಿದಾಗ ಅನೇಕರ ಮನಸ್ಸಿನಲ್ಲಿ ಅದು ಮುಸ್ಲಿಮರು ಆರಾಧಿಸುವ ದೇವರ ಹೆಸರು ಎಂಬ ಕಲ್ಪನೆ ಮೂಡುತ್ತದೆ. ಆದರೆ ಈ ವಿಷಯವನ್ನು ಭಾಷೆ, ಸಂಸ್ಕೃತಿ ಮತ್ತು ಕುರ್ಆನಿನ ದೃಷ್ಟಿಯಿಂದ ನೋಡಿದಾಗ ವಿಶಾಲವಾದ ಚಿತ್ರಣ ಗೋಚರಿಸುತ್ತದೆ.
ಪ್ರಪಂಚದ ಪ್ರತಿಯೊಂದು ಭಾಷೆಯಲ್ಲಿಯೂ ಸೃಷ್ಟಿಕರ್ತನನ್ನು ಸೂಚಿಸುವ ವಿಭಿನ್ನ ಪದಗಳಿವೆ. ಕನ್ನಡದಲ್ಲಿ ದೇವರು (ದಿವ್ಯ – ಪ್ರಕಾಶಿಸುವವನು), ಈಶ್ವರ (ಆಳುವವನು), ಪರಮೇಶ್ವರ (ಸರ್ವೋನ್ನತ ಅಧಿಪತಿ), ಭಗವಂತ (ಸಂಪೂರ್ಣ ಐಶ್ವರ್ಯ ಮತ್ತು ಮಹಿಮೆಯ ಒಡೆಯ) ಎಂಬ ಪದಗಳು ಬಳಕೆಯಲ್ಲಿವೆ. ಸಂಸ್ಕೃತದಲ್ಲಿ ಪರಬ್ರಹ್ಮ, ಹಿಂದಿಯಲ್ಲಿ ಈಶ್ವರ, ಭಗವಾನ್, ತಮಿಳಿನಲ್ಲಿ ಕಡವುಳ್( ಎಲ್ಲ ಮಿತಿಗಳನ್ನು ಮೀರಿರುವವನು) ಮಲಯಾಳದಲ್ಲಿ ದೈವಂ, ತೆಲುಗಿನಲ್ಲಿ ದೇವುಡು ಎಂಬ ಪದಗಳು ಬಳಕೆಯಲ್ಲಿವೆ. ಈ ಪದಗಳು ವಿಭಿನ್ನ ಭಾಷೆಗಳಿಗೆ ಸೇರಿದ್ದರೂ, ಅವೆಲ್ಲವೂ ಸೃಷ್ಟಿಕರ್ತನ ಒಂದು ಗುಣ, ಸ್ಥಾನ ಅಥವಾ ಪರಿಕಲ್ಪನೆಯನ್ನು ವ್ಯಕ್ತಪಡಿಸುತ್ತವೆ.
ಅದೇ ರೀತಿಯಲ್ಲಿ ಅರಬಿ ಭಾಷೆಯಲ್ಲಿ “ಅಲ್ಲಾಹ್” ಎಂದರೆ ಪೂಜೆಗೆ ಅರ್ಹನಾದ ಸೃಷ್ಟಿಕರ್ತ ಎಂದು ಅರ್ಥ ಬರುತ್ತದೆ. ಆದರೆ ಇಸ್ಲಾಮ್ ಅಲ್ಲಿಯೇ ನಿಲ್ಲುವುದಿಲ್ಲ. ಒಂದು ಹೆಸರಿನಿಂದ ಸೃಷ್ಟಿಕರ್ತನ ಅನಂತ ಗುಣಗಳನ್ನು ವಿವರಿಸಲಾಗುವುದಿಲ್ಲ ಎಂಬ ಕಾರಣದಿಂದ ಕುರ್ಆನ್ ದೇವರನ್ನು ಅಲ್-ಅಸ್ಮಾಉಲ್ ಹುಸ್ನಾ (ಅತ್ಯುತ್ತಮ ನಾಮಗಳು) ಮೂಲಕ ಪರಿಚಯಿಸುತ್ತದೆ.
ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಅಲ್ಲಾಹನಿಗೆ ತೊಂಬತ್ತೊಂಬತ್ತು ನಾಮಗಳಿವೆ. ಯಾರು ಅವುಗಳನ್ನು ಅರಿತು, ಮನನ ಮಾಡಿ, ಅದರಂತೆ ಬದುಕುತ್ತಾರೋ ಅವರು ಯಶಸ್ಸನ್ನು ಪಡೆಯುವರು.” (ಸಹೀಹ್ ಅಲ್-ಬುಖಾರಿ, ಸಹೀಹ್ ಮುಸ್ಲಿಂ)
ಈ ನಾಮಗಳಲ್ಲಿ ಕೆಲವು ಹೀಗಿವೆ: ಅರ್-ರಹ್ಮಾನ್ (ಪರಮ ಕರುಣಾಮಯಿ), ಅರ್-ರಹೀಮ್ (ನಿರಂತರ ದಯಾಳು), ಅಲ್-ಮಾಲಿಕ್ (ಸರ್ವಾಧಿಕಾರಿ), ಅಲ್-ಖಾಲಿಕ್ (ಸೃಷ್ಟಿಕರ್ತ), ಅಲ್-ಬಾರಿಅ್ (ಸಮರ್ಪಕವಾಗಿ ರೂಪಿಸುವವನು), ಅಲ್-ಮುಸವ್ವಿರ್ (ರೂಪದಾತ), ಅಲ್-ಅಲೀಮ್ (ಸರ್ವಜ್ಞ), ಅಲ್-ಹಕೀಮ್ (ಪರಮ ಯುಕ್ತಿ ಜ್ಞಾನಿ), ಅಲ್-ಅದ್ಲ್ (ಪರಿಪೂರ್ಣ ನ್ಯಾಯವಂತ), ಅಲ್-ಗಫೂರ್ (ಅತ್ಯಂತ ಕ್ಷಮಾಶೀಲ), ಅಲ್-ವದೂದ್ (ಅಪಾರ ಪ್ರೀತಿಯುಳ್ಳವನು), ಅನ್-ನೂರ್ (ಪ್ರಕಾಶ ಮೂಲ), ಅಸ್-ಸಲಾಮ್ (ಶಾಂತಿಯ ಮೂಲ) ಮತ್ತು ಅಲ್-ಹಯ್ಯ್ (ಚಿರಂಜೀವಿ).
ಕುರ್ಆನ್ ಈ ಕುರಿತು ಹೀಗೆ ಹೇಳುತ್ತದೆ: “ಅತ್ಯುತ್ತಮ ನಾಮಗಳು ಅಲ್ಲಾಹನಿಗೇ ಸೇರಿವೆ. ಆದ್ದರಿಂದ ಅವನನ್ನು ಆ ನಾಮಗಳಿಂದಲೇ ಕರೆಯಿರಿ.” (7:180)
ಮತ್ತೊಂದು ಕಡೆ: “ಹೇಳಿರಿ: ‘ಅಲ್ಲಾಹ್’ ಎಂದು ಕರೆಯಿರಿ ಅಥವಾ ‘ಅರ್-ರಹ್ಮಾನ್’ ಎಂದು ಕರೆಯಿರಿ. ನೀವು ಯಾವ ಹೆಸರಿನಿಂದ ಕರೆದರೂ, ಅತ್ಯುತ್ತಮ ನಾಮಗಳು ಅವನಿಗೇ ಸೇರಿವೆ.” (17:110)
ಹೀಗಾಗಿ, ಇಸ್ಲಾಮ್ನ ದೃಷ್ಟಿಯಲ್ಲಿ “ಅಲ್ಲಾಹ್” ಎಂಬುದು ಕೇವಲ ಒಂದು ಉಚ್ಚಾರಣೆಯಲ್ಲ. ಅದು ಸೃಷ್ಟಿಕರ್ತನನ್ನು ಸೂಚಿಸುವ ವಿಶಿಷ್ಟ ನಾಮವಾಗಿದೆ. ಆದರೆ ಅವನನ್ನು ಅರಿಯುವುದು ಆ ಒಂದೇ ನಾಮದಲ್ಲಿ ಸೀಮಿತವಾಗುವುದಿಲ್ಲ. ಅವನ 99 ಸುಂದರ ನಾಮಗಳು ಅವನ ಅನಂತ ಗುಣಗಳನ್ನು ಮಾನವನಿಗೆ ಪರಿಚಯಿಸುತ್ತವೆ. ಆದ್ದರಿಂದ ಇಸ್ಲಾಮ್ ಸೃಷ್ಟಿಕರ್ತನನ್ನು ಅವನ ಯಾವುದೇ ಸುಂದರ ನಾಮದಿಂದ ಕರೆಯಲು ಆಹ್ವಾನಿಸುತ್ತದೆ. ಏಕೆಂದರೆ ಅವೆಲ್ಲವೂ ಒಂದೇ ಪರಮ ಸೃಷ್ಟಿಕರ್ತನ ಗುಣಗಳನ್ನು ಪ್ರತಿಬಿಂಬಿಸುತ್ತವೆ.
▪️ಅಬೂಕುತುಬ್
IslamKannada News Portal
