ಭಾರತದ ಹಿಂದೂ ವೇದಗ್ರಂಥಗಳು ದೇವನಿಂದ ಅವತೀರ್ಣವಾದದ್ದೆಂದು ಅಂಗೀಕರಿಸುವಿರಾ?
ವಿದ್ಯೆ, ಜ್ಞಾನ ಎಂಬುದು ವೇದ ಎಂಬ ಪದದ ಅರ್ಥ ಆಧ್ಯಾತ್ಮಿಕ ಜ್ಞಾನವೆಂದಾಗಿದೆ. ಅದು ದೇವದತ್ತವೆಂದು ಕೆಲವು ವೇದ ಪಂಡಿತರು ಹೇಳುತ್ತಾರೆ. ಆದರೆ ವೇದಗಳು ಸ್ವತಃ ಅದನ್ನು ಘೋಷಿಸಿಕೊಳ್ಳುವುದಿಲ್ಲ. ಇತಿಹಾಸದಲ್ಲಿ ಎಲ್ಲಾ ಜನಾಂಗಗಳಿಗೆ ದೇವಸಂದೇಶವಾಹಕರು ಬಂದಿದ್ದಾರೆಂದೂ ಅವರಿಗೆ ದೇವಸಂದೇಶಗಳು ಲಭಿಸಿದೆಯೆಂದೂ ಇಸ್ಲಾಮ್ ವಾದಿಸುತ್ತದೆ. ಆದ್ದರಿಂದ ವೇದಗಳು ಆರ್ಯರಿಗೆ ಅವತೀರ್ಣವಾದ ದಿವ್ಯ ಸಂದೇಶದ ಭಾಗವಾಗಿರುವ ಸಾಧ್ಯತೆಯನ್ನು ನಿರಾಕರಿಸುವುದು ಸರಿಯಲ್ಲ. ಅಂತಹ ಒಂದು ಸಾಧ್ಯತೆ ಖಂಡಿತವಾಗಿಯೂ ಇದೆ.
(ವಿ.ಸೂ: ಮಲಯಾಳದಲ್ಲಿ ದೇವನನ್ನು ಈಶ್ವರ ಎಂದು ಸಂಬೋಧಿಸುವುದರಿಂದ ನಾನು ಹಾಗೆಯೇ ಮಾಡಿದ್ದೇನೆ. ಈಶ್ವರ ಎಂದು ಹೇಳುವುದು ತಪ್ಪೆಂದಾದರೆ ತಿದ್ದಿಕೊಳ್ಳಿ. ಸರ್ವೇಶ್ವರ ಅಂತಲೂ ಬಳಸಬಹುದು)
ಆದರೆ ಈಗ ಚಾಲ್ತಿಯಲ್ಲಿರುವ ಋಗ್ವೇದ, ಯಜುರ್ವದ, ಸಾಮವೇದ, ಅಥರ್ವವೇದ ಎಂಬ ನಾಲ್ಕು ವೇದಗ್ರಂಥಗಳನ್ನು ದೈವಿಕವೆಂದು ಭಾವಿಸುವಂತಿಲ್ಲ. ಅವು ಮಾನವನ ಹಸ್ತಕ್ಷೇಪದಿಂದ ಅದರ ಮೂಲಸಿದ್ಧಾಂತಕ್ಕೆ ಧಕ್ಕೆಯುಂಟಾಗಿ, ಮಾನವೀಯತೆಯನ್ನು ಕಳಕೊಂಡಿದೆ. ವೇದದ ವಿಶ್ವಾಸಿಗಳೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಡಾ| ರಾಧಾಕೃಷ್ಣನ್ ಬರೆಯುತ್ತಾರೆ: ಆರ್ಯರ ಬಳಿ ತಮ್ಮ ಮೂಲ ವಾಸಸ್ಥಳದಿಂದ ತಮ್ಮ ಬೆಲೆಬಾಳುವ ಸಂಪತ್ತೆಂಬ ರೀತಿಯಲ್ಲಿ ಭಾರತಕ್ಕೆ ತಂದ ದಿವ್ಯ ಸಂದೇಶಗಳನ್ನೊಳಗೊಂಡ ಗಾನಗಳು ಇದ್ದವು. ಹೊಸ ದೇಶದಲ್ಲಿ ಇತರ ದೇವರುಗಳನ್ನು ಆರಾಧಿಸುವ ಜನರೊಂದಿಗೆ ಬೆರೆಯಬೇಕಾಗಿ ಬಂದಾಗ ತಾವು ತಂದ ಗಾನಗಳನ್ನು ಸಂರಕ್ಷಿಸುವುದು ಅನಿವಾರ್ಯವಾಯಿತು. ಹೀಗೆ ವೇದಗಳು ಅ ಗಾನಗಳನ್ನು ಶೇಖರಿಸಿ, ಕ್ರೋಡೀಕರಿಸಿದ ಗಾನಗಳ ಸಮಾಹಾರವೆಂದು ನಂಬಲಾಗುತ್ತದೆ.
ಬಹಳ ಕಾಲದವರೆಗೆ ಅಥರ್ವ ವೇದಕ್ಕೆ ಒಂದು ವೇದಕ್ಕೆ ದೊರೆಯುವ ಸ್ಥಾನ ಲಭಿಸಿರಲಿಲ್ಲ. ಆದರೂ ನಮ್ಮ ಈಗಿನ ಉದ್ದೇಶಕ್ಕೆ ಸಂಬಂಧಿಸಿ ಋಗ್ವೇದದಂತೆ ಅಥರ್ವ ವೇದವೂ ಸ್ವತಂತ್ರ ನಿಲುಮೆಯಿಂದ ಕೂಡಿದೆ. ಐತಿಹ್ಯಗಳ ಸಮಾಹಾರವಾಗಿದೆ. ಪುರಾತನ ಚಿಂತನೆಗಳ ಕಾಲದಲ್ಲಿ ರಚಿತವಾದ ಈ ಗ್ರಂಥದಲ್ಲಿ ವಿಭಿನ್ನ ಮನೋಭಾವಗಳು ಗೋಚರಿಸುತ್ತದೆ. ತಾವು ಮೆಲ್ಲ ಮೆಲ್ಲನೆ ಆಕ್ರಮಿಸಿಕೊಳ್ಳುತ್ತಿರುವ ದೇಶದ ಜನತೆಯು ಆರಾಧಿಸುತ್ತಿದ್ದ ದೇವರುಗಳ, ಭೂತಪ್ರೇತಗಳ ಕುರಿತು ವೈದಿಕರು ತಗೆದುಕೊಂಡ ರಾಜಿ ನಿರ್ಧಾರಗಳು ಅವರ ಮನೋಭಾವದಲ್ಲಿ ಪ್ರತಿಫಲಿಸುವುದು ಕಂಡುಬರುತ್ತದೆ. (ಭಾರತೀಯ ದರ್ಶನಂ ಮಾತೃಭೂಮಿ ಪ್ರಿಂಟಿಂಗ್ ಆ್ಯಂಡ್ ಪಬ್ಲಿಶಿಂಗ್ ಕಂಪೆನಿ ಲಿಮಿಟೆಡ್ ಕಲ್ಲಿಕೋಟೆ ಪುಟ 44-45)
ವೇದಗಳಲ್ಲಿನ ದೇವರ ನಂಬಿಕೆಯಲ್ಲಿಯೂ ಬಹಳ ಗಂಭೀರ ಬದಲಾವಣೆಗಳು ಸಂಭವಿಸಿದೆಯೆಂದು ಡಾ| ರಾಧಾಕೃಷ್ಣನ್ ಹೇಳುತ್ತಾರೆ: 1017 ಸೂಕ್ತಗಳು 10472 ಋತುಗಳು, 8 ಅಷ್ಟಕಗಳು, 10 ಮಂಡಲಗಳಿರುವ ಋಗ್ವೇದದ 10ನೇ ಮಂಡಲದ ಕುರಿತು ಡಾ| ರಾಧಾಕೃಷ್ಣನ್ ಹೇಳುತ್ತಾರೆ:
10 ನೇ ಮಂಡಲವು ನಂತರದ ಕಾಲದಲ್ಲಿ ಸೇರಿಸಲ್ಪಟ್ಟಂತೆ ಕಾಣುತ್ತದೆ. ವೇದ ಸೂಕ್ತಗಳ ಪುನ ಪುನರ್ನಿರ್ಮಾಣದ ಕೊನೆಯ ಕಾಲದಲ್ಲಿ ಪ್ರಚಾರದಲ್ಲಿದ್ದ ದೃಷ್ಟಿಕೋನಗಳು ಅದರಲ್ಲಿ ಸೇರಿಕೊಂಡಿವೆಯೆಂಬುದರಲ್ಲಿ ಸಂದೇಹವಿಲ್ಲ. ಆರಂಭಿಕ ಕಾಲದ ದೇವಭಕ್ತಿ ತುಂಬಿದ ಕವಿತೆಯ ನೈಜ ಸಿದ್ಧಾಂತಗಳಿಗೆ ದಾರ್ಶನಿಕ ಚಿಂತನೆಯು ಕಲಬೆರಕೆಗೊಂಡು ರೋಗಬಾಧಿತವಾದಂತೆ ಕಂಡು ಬರುತ್ತದೆ.
ಸೃಷ್ಟಿಯ ಉದ್ಭವದಂತಹ ವಿಷಯಗಳ ಕುರಿತು ಊಹೆ ಪ್ರಧಾನವಾದ ಸೂಕ್ತಗಳು ಇದರಲ್ಲಿದೆ. ಈ ರೀತಿಯ ಸಿದ್ಧಾಂತದ ಚರ್ಚೆಗಳೊಂದಿಗೆ ಅಥರ್ವ ವೇದಕಾಲದಲ್ಲಿದ್ದ ಮೂಢ ನಂಬಿಕೆಗಳಾದ ಆಕರ್ಷಣೋಚ್ಚಾಟನ ಮಂತ್ರಗಳು ಇದರಲ್ಲಿ ಕಾಣುತ್ತದೆ. ಭಾವ ಪ್ರಧಾನವಾದ ಸೂಕ್ತಗಳಲ್ಲಿ ಸ್ವಯಂ ಅನಾವರಣಗೊಂಡ ಮನಸ್ಸನ್ನು ಸೂಚಿಸುವ ಊಹೆಯಾಧಾರಿತ ಸೂಕ್ತಗಳೇ ಇದೆ. ಇನ್ನು ಅಂಧವಿಶ್ವಾಸಿಗಳ ಸೂಕ್ತಗಳನ್ನು ಗಮನಿಸಿದಾಗ ಭಾರತದ ಆದಿವಾಸಿಗಳ ಸಿದ್ಧಾಂತಗಳು ಹಾಗೂ ಆಚಾರಗಳ ಪರಿಚಯ ವೈದಿಕರಿಗಾಗಿತ್ತು ಎಂಬ ಅರಿವಾಗುತ್ತದೆ. ಹತ್ತನೇ ಮಂಡಲವು ನಂತರದ ಕಾಲದಲ್ಲಿ ರಚಿತವಾಗಿದೆಯೆಂದು ಇದು ಸಾಕ್ಷ್ಯವಹಿಸುತ್ತದೆ. (lbid ಪುಟ 47) ಋಗ್ವೇದದಲ್ಲೂ ಒಂದು ದೈವಿಕ ಗ್ರಂಥಕ್ಕೆ ಭೂಷಣವಲ್ಲದ ಕೋಮುವಾದವು ಕೂಡಿಕೊಂಡಿರುವುದು ಕಂಡುಬರುತ್ತದೆ.
”ಬ್ರಾಹ್ಮನೋಸ್ಯ ಮುಖಮಾಸೀದ್ ಬಹು ರಾಜನ್ಯ ಕೃತ:
ಊರು ತದಸ್ಯ ಯದೈಶ್ಯ: ಪದ್ ಬ್ಯಾಂ ಶೂದ್ರೋ ಅಜಾಯತ’ (ಋಗ್ವೇದ 10:90:12)
(ಆ ಪ್ರಜಾಪತಿಗೆ ಬ್ರಾಹ್ಮಣನು ಮುಖವಾಗಿ, ಮುಖದಿಂದ ಆತ ಉತ್ಪನ್ನವಾಗಿ ಕ್ಷತ್ರಿಯನು ಬಾಹುಗಳಿಂದ ಉಂಟಾದವನಾಗಿ ವೈಶ್ಯನೂ ಉಂಟಾದ ಮತ್ತು ಅವರ ಪಾದಗಳಿಂದ ಶೂದ್ರನು ಜನಿಸಿದನು.) ಋಗ್ವೇದದ ಎರಡನೇ ಭಾಗದ ಅವತರಣಿಕೆಯಲ್ಲಿ ವೇದಗಳ ಸಂಪೂರ್ಣ ಭಾಗವು ಇಂದು ಲಭ್ಯವಿಲ್ಲದೆಯೂ, ಅವುಗಳಲ್ಲಿ ಹಲವನ್ನು ಸೇರಿಸಿಕೊಳ್ಳಲಾಗಿದೆಯೆಂದೂ ಅಸ್ಪಷ್ಟ ಹಾಗೂ ಸಂಶಯಾಸ್ಪದ ವಿಷಯಗಳು ಸೇರಿದೆಯೆಂದೂ ಎನ್.ವಿ. ಕೃಷ್ಣವಾರಿಯರ್ ಸ್ಪಷ್ಟಪಡಿಸಿದ್ದಾರೆ.
ವೇದಗಳು ದೋಷರಹಿತ ಅಥವಾ ಪರಿಪೂರ್ಣ ಗ್ರಂಥವಲ್ಲವೆಂದು ಡಾ| ಎಸ್.ರಾಧಾಕೃಷ್ಣನ್ ತನ್ನ Indian Religions (ಪುಟ 22)ನಲ್ಲಿ ವಿವರಿಸಿದ್ದಾರೆ. ನರೇಂದ್ರ ಭೂಷಣ್ ಬರೆಯುತ್ತಾರೆ, ‘ಕಾಲಕ್ರಮೇಣ ಪದಗಳು, ಪಾಠ ಭಾಗಗಳಲ್ಲಿ ಕಂಡು ಬಂದವು. ಕೆಲವು ಬ್ರಾಹ್ಮಣ ತತ್ವಗಳನ್ನು ವೇದಗಳಲ್ಲಿ ಸೇರಿಸಲಾಯಿತು. ಹೀಗೆ ವೇದಸಂಹಿತೆಯೂ, ಬ್ರಾಹ್ಮಣ್ಯವೂ ಕಲಬೆರೆಕೆಯಾದಾಗ ವ್ಯಾಸರು ಅದನ್ನು ಪುನರಚಿಸರಬಹುದು. ಹೀಗೆ ಕುಮಾರ ವ್ಯಾಸರು ವೇದಗಳನ್ನು ರಚಿಸಿದರೆಂದು ಪ್ರಚಲಿತವಾಗಿರಬಹುದು! ಹೀಗೆ ನಾಮ ಪುರಾಣಗಳು, ಬ್ರಾಹ್ಮಣ್ಯಗಳ ಕಲಬೆರಕೆಗಳಲ್ಲಿ ನಿಜ ವೇದ ಯಾವುದು? ಮಂತ್ರ ಯಾವುದು? ಶಾಖೆಗಳು ಯಾವುವು ಎಂದು ತಿಳಿಯಬಹುದಾಗಿದ್ದ ಕಾಲವೊಂದಿತ್ತು ಎಂಬುದಾಗಿದೆ.’ (ವೈದಿಕ ಸಾಹಿತ್ಯ ಚರಿತ್ರೆ ಪುಟ 51-53) ಸತ್ಯವ್ರತ ಪಟೇಲರ ಭಾಷೆಯಲ್ಲಿ ‘ಹಿಂದೂ ಧರ್ಮದ ಮೂಲ ಸ್ರೋತ ವೇದಗಳಾಗಿವೆ. ಎಲ್ಲಾ ವಿಭಾಗಗಳು ಅದನ್ನು ಬೆಂಬಲಿಸುತ್ತದೆಯಲ್ಲದೆ ಅದರ ಮೌಲ್ಯಗಳನ್ನು ಅಂಗೀಕರಿಸುತ್ತದೆ. ಕೆಲವು ವೇದದ ಸೂಕ್ತಗಳು ಕಳೆದು ಹೋಗಿದೆ. ಆದರೆ ಈಗ ಇರುವುದೇ ಧಾರಾಳ ಸಾಕು” (Hindhusum Religion and way of life Page 5)
ಋಗ್ವೇದದ 10ನೇ ಕಾಂಡದ 10ನೇ ಸೂಕ್ತದಲ್ಲಿ ಸ್ವಂತ ಸಹೋದರನನ್ನು ಲೈಂಗಿಕ ಕ್ರಿಯೆಗೆ ಅಹ್ವಾನಿಸುವ ಸಹೋದರಿಯ ಭಾಷೆ ಹಾಗೂ ಶೈಲಿಯು ಒಂದು ದೇವಗ್ರಂಥಕ್ಕೆ ಖಂಡಿತ ಯೋಗ್ಯವಲ್ಲ, ಅದೇ ವೇಳೆ ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣದ ಕುರಿತು ಋಗ್ವೇದ ಮತ್ತು ಅಥರ್ವಣ ವೇದದಲ್ಲಿರುವ ವಿಚಾರಗಳು ಅಸಂಬದ್ಧ ಸಂಕೀರ್ಣತೆಯಿಂದ ಹಾಗೂ ಅಂಧವಿಶ್ವಾಸದಿಂದ ಕೂಡಿದೆ. ಅದ್ದರಿಂದ ವೇದಗಳಿಂದ ಅಳಿಸಿ ಹಾಕಬೇಕಾದ ಹಲವು ವಿಷಯಗಳಿವೆಯೆಂದು ಪ್ರಮುಖ ಹಿಂದೂ ಪಂಡಿತರು ಪ್ರಬಲವಾಗಿ ವಾದಿಸಿದ್ದಾರೆ. ಗುರು ನಿತ್ಯಚೈತನ್ಯಯತಿ’ ಬರೆಯುತ್ತಾರೆ: ವೇದಗಳು ಅತ್ಯಂತ ನಿಕೃಷ್ಟವಾದ ಹಿಂಸೆಗೆ ಅನುಮತಿ ನೀಡುತ್ತದೆ. ಮಾತ್ರವಲ್ಲ ಅವೆಲ್ಲವನ್ನೂ ಕಾರ್ಯಗತಗೊಳಿಸಬೇಕೆಂದು ವಿವರಿಸುವ ಹಲವಾರು ಮಂತ್ರಗಳಿವೆ. ನಿಷ್ಪಕ್ತಮತಿಗಳಾದ ಯಾರೂ ಇದನ್ನು ಕಂಡಿಲ್ಲವೆಂದು ನಟಿಸಲು ಸಾಧ್ಯವಿಲ್ಲ. ಹಿಂದೂಗಳ ಅತ್ಯಂತ ಉತ್ಕೃಷ್ಟವಾದ ಕೃತಿ ವೇದವೆಂದು ಹೇಳುವ ಅದೇ ನಾಲಿಗೆಯಿಂದ ಅದರಲ್ಲಿ ಅತ್ಯಂತ ನಿಕೃಷ್ಟವಾದ ಮಂತ್ರಗಳು ಇವೆಯಂದು ಹೇಳಲು ಯಾವುದೇ ಹಿಂದೂ ಪಂಡಿತನಿಗೂ ನೋವೆನಿಸಬಹುದು. ಆದರೆ ಕೆಲವು ಪಂಡಿತರು ಐತಿಹಾಸಿಕ ಸತ್ಯದೊಂದಿಗೆ ನ್ಯಾಯ ತೋರದ ವೇದಗಳಿಂದ ಅಳಿಸಿ ಹಾಕಬೇಕಾದ ಇಂತಹ ಮಂತ್ರಗಳನ್ನು ಸಮರ್ಥಿಸಲು ಶ್ರಮಿಸಿರುವುದು ಕ್ಷಮಾರ್ಹವಲ್ಲ. ( ಗುರುಕುಲ ಮಾಸಿಕ, ಉದ್ಧರಣೆ: ಭಾರತೀಯ ನವೋತ್ಥಾನದ ರೂಪರೇಷೆ ಪುಟ 212) ಒಟ್ಟಿನಲ್ಲಿ ಚಾಲ್ತಿಯಲ್ಲಿರುವ ವೇದಗಳು ದೇವದತ್ತವೋ, ಅಪೌರುಷೇಯವೋ ಎಂದು ವೇದ ವಿಶ್ವಾಸಿಗಳು ಕೂಡಾ ವಾದಿಸುವುದಿಲ್ಲ, ಅದರಲ್ಲಿ ಹಲವನ್ನು ಸೇರಿಸಿ ಅದು ಶಸ್ತ್ರಕ್ರಿಯೆಗೆ ಒಳಗಾಗಿದೆ. ಹಲವು ಅಳಿದು ಹೋಗಿವೆ. ಆದರೆ ಇದರಲ್ಲಿ ಆಶ್ಚರ್ಯಪಡುವಂತ ಹದ್ದು ಇಲ್ಲ. ಏಕೆಂದರೆ ವೇದದ ಇತಿಹಾಸ ಯಾರಿಗೂ ತಿಳಿದಿಲ್ಲವಲ್ಲಾ ಅದರ ಕಾಲದ ಕುರಿತು ಬಹಳ ಅಂತರದ ಅಭಿಪ್ರಾಯ ವ್ಯತ್ಯಾಸವಿದೆ. ಕ್ರಿಸ್ತನಿಗಿಂತ 6000 ವರ್ಷ ಮೊದಲು ಎಂದೂ 4500 ಎಂದೂ, 3000 ಎಂದೂ, 1500 ಎಂದೂ ವಾದಿಸುವವರಿದ್ದಾರೆ. ಆದ್ದರಿಂದ ಯಾವುದಕ್ಕೂ ಸ್ಪಷ್ಟ ಆಧಾರಗಳಿಲ್ಲ. ಆದರೆ ಆರ್ಯರು ಭಾರತಕ್ಕೆ ಬಂದ ಬಳಿಕ ವೇದಗಳನ್ನು ಕ್ರೋಡೀಕರಿಸಲಾಯಿತೆಂಬ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ವೇದವು ಅವತೀರ್ಣಗೊಂಡ ಹಾಗೂ ಅದರ ಕ್ರೋಡೀಕರಣದ ನಡುವೆ ಸುದೀರ್ಘ ಕಾಲ ವ್ಯತ್ಯಾಸವು ಅದರಲ್ಲಿ ಬಹಳ ಗಂಭೀರವಾದ ಬದಲಾವಣೆಗೂ ಕತ್ತರಿ ಪ್ರಯೋಗಕ್ಕೂ ಕಾರಣವಾಯಿತೆಂಬುದು ಸ್ವಾಭಾವಿಕ. ಡಾ| ರಾಧಾಕೃಷ್ಣನ್ ಬರೆಯುತ್ತಾರೆ: ಆರ್ಯರು ತಾವು ತಂದ ಆಚಾರ, ವಿಚಾರ, ವಿಶ್ವಾಸಗಳನ್ನು ಭಾರತದ ಮಣ್ಣಿನಲ್ಲಿ ಪುನಃ ವಿಕಾಸಗೊಳಿಸಿದರು. ಈ ಸೂಕ್ತಗಳನ್ನು ರಚಿಸಿದ ಬಹಳ ದೀರ್ಘ ಕಾಲದ ಬಳಿಕ ಅದನ್ನು ಕ್ರೋಡೀಕರಿಸಲಾಯಿತು (ಭಾರತೀಯ ದರ್ಶನಂ ಪುಟ 46)
ವೇದಗಳು ಪ್ರಕಟವಾದ ಪ್ರೋಕ್ತನ ವೈದಿಕ ಭಾಷೆಯೇ, ಈಗಿಲ್ಲವೆಂದೂ, ಈಗಿರುವ ಸಂಸ್ಕೃತವು ಅದರ ರೂಪಾಂತರವೆಂದೂ, ವೇದಕಾಲ ಕಳೆದು ಬಹಳ ವರ್ಷಗಳ ನಂತರ ಅದನ್ನು ರಚಿಸಲಾಯಿತೆಂದು ನರೇಂದ್ರ ಭೂಷಣ್ ಸೇರಿದಂತೆ ಹಲವು ಪಂಡಿತರು ಸ್ಪಷ್ಟಪಡಿಸಿದ್ದಾರೆ. (ವೈದಿಕ ಸಾಹಿತ್ಯ ಚರಿತ್ರೆ ಪುಟ 27-39)
ಇಂತಹ ಎಲ್ಲ ರೀತಿಯ ಮಾನವ ಹಸ್ತಕ್ಷೇಪದಿಂದ ಮುಕ್ತವಾದ, ಆದರ ಅವತೀರ್ಣಕಾಲದಿಂದ ಒಂದು ಪದದ ವ್ಯತ್ಯಾಸವಿಲ್ಲದೆ ಮಾನವ ಕುಲದ ಮುಂದೆ ಬೆಳಕು ಚೆಲ್ಲಿನಿಂತ ಗ್ರಂಥ ಕುರ್ಆನ್. ಆದ್ದರಿಂದ ಅದನ್ನು ಈಗಿರುವ ಏಕೈಕ ದೇವಗ್ರಂಥ ಎನ್ನಲಾಗುತ್ತದೆ. ಅದು ಪೂರ್ವಗ್ರಂಥಗಳನ್ನು ದೃಢೀಕರಿಸುತ್ತದೆ.
ಭಗವದ್ಗೀತೆಯು ದೇವಗ್ರಂಥವಲ್ಲವೆಂದು ನಿಮ್ಮ ಅಭಿಪ್ರಾಯವೇ?
ಈಗ ಚಾಲ್ತಿಯಲ್ಲಿರುವ ವೇದಗಳು ಮಾನವ ಹಸ್ತಕ್ಷೇಪಕ್ಕೆ ಗುರಿಯಾಗಿದ್ದವೆಂದು ಡಾ| ರಾಧಾಕೃಷ್ಣನ್, ಎನ್.ವಿ. ಕೃಷ್ಣ ವಾರಿಯರ್, ನರೇಂದ್ರ ಭೂಷಣ್, ಸತ್ಯವೃತ ಪಟೇಲರಂತಹ ವೇದಪಂಡಿತರು ಸುಸ್ಪಷ್ಟವಾಗಿ ವಿವರಿಸಿದ್ದಾರೆ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೌರವರೊಂದಿಗೆ ಯುದ್ಧ ಮಾಡಲು ಪಾಂಡವರು ಒಂದಾದಾಗ ಪಾಂಡವ ವೀರನಾದ ಅರ್ಜುನನಿಗೆ ಸೋದರ ಸಂಬಂಧಿಗಳನ್ನು ಕೊಲ್ಲಲು ದುಃಖವಾಯಿತು. ಆಗ ಅರ್ಜುನನ ಗುರುವಾದ ಶ್ರೀಕೃಷ್ಣನು ಅರ್ಜುನನ ಆಗಿನ ಹೃದಯ ದೌರ್ಬಲ್ಯವನ್ನು ಹೋಗಲಾಡಿಸಲು ಹೇಳಿದ ತತ್ವೋಪದೇಶಗಳು ಗೀತೆಗಳೆಂದು ನಂಬಲಾಗುತ್ತಿದೆ. ವ್ಯಾಸ ಮಹರ್ಶಿಯು ಗೀತೆಯೂ ಸೇರಿದಂತೆ ಮಹಾಭಾರತವನ್ನು ರಚಿಸಿದರು. ಶ್ರೀ ಕೃಷ್ಣನು ಭಗವಾನರ ಅವತಾರವಾದುದರಿಂದ ಗೀತೆಯು ಭಗವದ್ಗೀತೆಯೆಂದೂ ಪ್ರಚುರಪಡಿಸಲಾಗುತ್ತದೆ. ಆದರೆ ಭಗವಾನ್’ ಎಂದೂ ಮಾನವ ರೂಪದಲ್ಲಿ ಅವತರಿಸುವುದಿಲ್ಲವೆಂದು ಪ್ರಮುಖ ಹಿಂದೂ ದಾರ್ಶನಿಕರು ಸ್ಪಷ್ಟಪಡಿಸುತ್ತಾರೆ.
ಸ್ವಾಮಿ ದಯಾನಂದ ಸರಸ್ವತಿಯವರು ಪ್ರಶೋತ್ತರ ರೂಪದಲ್ಲಿ ಅದನ್ನು ತಿಳಿಸಿದ್ದಾರೆ:
ಪ್ರಶ್ನೆ: ಈಶ್ವರನು ಅವತಾರ ಸ್ವೀಕರಿಸುತ್ತಾನೆಯೇ?
ಉತ್ತರ: ಇಲ್ಲ ಏಕೆಂದರೆ ‘ಅಜ ಏಕ ವಾತ್'(35-53)
‘ಸಪರ್ಯಗಾತು ಕ್ರಮಕಾಯಂ'(40-8) ಎಂದು ಆರಂಭವಾದ ಯಜುರ್ವೇದ ವಚನಗಳಿಂದ ಪರಮೇಶ್ವರನು ಜನ್ಮತಾಳುವುದಿಲ್ಲವೆಂದು ವ್ಯಕ್ತವಾಗುತ್ತದೆ.
ಪ್ರಶ್ನೆ: ಯದಾ ಯದಾ ಹಿಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯೋತ್ಥಾನಮಧರ್ ಮಸ್ಯ, ತದಾತ್ಮಾನಂ ಸೃಜಾವ್ಯಹಂ
( ಭಗವದ್ಗೀತೆ ಅಧ್ಯಾಯ 4 ಶ್ಲೋಕ 7)
ಧರ್ಮಕ್ಕೆ ಲೋಪ ಬರುವಾಗಲೆಲ್ಲಾ ನಾನು ಶರೀರ ಧರಿಸುತ್ತೇನೆ ಎಂದು ಶ್ರೀ ಕೃಷ್ಣನು ಹೇಳುತ್ತಾನಲ್ಲವೇ?
ಉತ್ತರ: ವೇದ ವಿರೋಧಿಯಾದುದರಿಂದ ಇದು ಆಧಾರವಾಗುವುದಿಲ್ಲ.
ಧರ್ಮಾತ್ಮ ಹಾಗೂ ಧರ್ಮವನ್ನು ರಕ್ಷಿಸಬಯಸುವ ಶ್ರೀಕೃಷ್ಣನು ‘ನಾನು ಯುಗ ಯುಗಾಂತರಗಳಲ್ಲಿ ಜನ್ಮತಾಳಿ ಸಜ್ಜನರನ್ನು ಪರಿಪಾಲಿಸುವೆನೆಂದೂ ದುಷ್ಟರನ್ನು ಸಂಹರಿಸ ಬೇಕೆಂದೂ ಬಯಸಿರಬಹುದು. ಹೀಗೆ ಬಯಸುವುದರಲ್ಲಿ ತಪ್ಪೇನಿಲ್ಲ. ಏಕೆಂದರೆ ಪರೋಪಕಾರನಾದ ಸತಾಂ ವಿಭೂತಯ – ಸಜ್ಜನರ ಶರೀರ, ಮನಸ್ಸು, ಧನ ಎಲ್ಲಾ ಪರೋಪಕಾರಕ್ಕಾಗಿಯೇ ಮೀಸಲಾಗಿರುವುದಲ್ಲವೇ? ಆದರೆ ಶ್ರೀಕೃಷ್ಣನು ಈ ಕಾರಣದಿಂದ ದೇವರೆಂದು ಹೇಳುವುದರಲ್ಲಿ ಅರ್ಥವಿಲ್ಲ. ( ಸತ್ಯಾರ್ಥಪ್ರಕಾಶ ಪುಟ 304-305)
ಈಶ್ವರನಿಗೆ ಅವತಾರವಿಲ್ಲವೆಂದು ಶ್ರೀವಾಗ್ಭಟಾನಂದ ಗುರುವೂ ಸ್ಪಷ್ಟಪಡಿಸಿದ್ದಾರೆ. (ವಾಗ್ಭಟಾನಂದರ ಸಂಪೂರ್ಣ ಕೃತಿಗಳು ಪುಟ 357-359) (751,752 ಮಾತೃಭೂಮಿ ಪ್ರಿಂಟಿಂಗ ಆ್ಯಂಡ್ ಪಬ್ಲಿಶಿಂಗ್ ಕಂಪೆನಿ (ಲಿ) ಕಲ್ಲಿಕೋಟೆ)
ಗೀತೆಯು ಅವತಾರ ಸಿದ್ಧಾಂತವನ್ನು ನಿರಾಕರಿಸುತ್ತದೆ.
ಅವಜಾನಂತಿ ಮಾಂ ಮೂಢಾ ಮನುಷೀಂ ತನುಮಾಶ್ರಿತಮ್ ||
ಪರ೦ಭಾವ ಮಜಾನಂತೋ ಮಮ ಭೂಕಮಹೇಶ್ವರಮ್ ।।
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನಾ ವಿಚೇತಸಃ।।
ರಾಕ್ಷಿಸೀ ಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರಿತಾಃ||
ವಿ.ಸೂ (ಈ ಶ್ಲೋಕಕ್ಕೆ ಭಗವದ್ಗೀತೆಯನ್ನು ನೋಡಿದಾಗ ಅದು ಗ್ರಂಥಕರ್ತರ ಅನುವಾದಕ್ಕೆ ವಿರುದ್ಧವಾಗಿ ಕಂಡಿದೆ. ಅದಕ್ಕಾಗಿ ಅದನ್ನು ಇಲ್ಲಿ ಸೇರಿಸುತ್ತೇನೆ; ಇಡೀ ಮಾನವ ಕೋಟಿಗೆಲ್ಲಾ ಮಹೇಶ್ವರನಾದ ನನ್ನ ಪರಮಭಾವವನ್ನು ತಿಳಿಯದ ಮೂಢರು ಮನುಷ್ಯ ರೂಪವನ್ನು ಅರ್ಥಾತ್ ಮಾನವ ಶರೀರವನ್ನು ಧರಿಸಿರುವ ಪರಮಾತ್ಮನಾದ ನನ್ನನ್ನು ಕೀಳಾಗಿ ಕಾಣುತ್ತಾರೆ.)
(ಭೂತಗಳ ಮಹೇಶ್ವರನಾದ ಪರಮನಾದ ನನ್ನ ಭಾವವನ್ನು ಅರಿಯದ ಮೂಢರು ನನ್ನನ್ನು ಮನುಷ್ಯ ಶರೀರವನ್ನು ಆಶ್ರಯಿಸಿರುವವನಾಗಿ ತಪ್ಪಾಗಿ ಅರ್ಥೈಸುತ್ತಾರೆ. ಹೀಗೆ ವ್ಯರ್ಥವಾದ ಆಸೆ, ವ್ಯರ್ಥವಾದ ಕಾರ್ಯ ಮತ್ತು ವ್ಯರ್ಥವಾದ ಜ್ಞಾನನವುಳ್ಳ) ಅಜ್ಞಾನಿಗಳು ರಾಕ್ಷಸರ ಮತ್ತು ಅಸುರರಂತಹ ಮೋಹಕಾರಿ ತಾಮಸ ಸ್ವಭಾವವನ್ನೇ ಆಶ್ರಯಿಸಿರುತ್ತಾರೆ. ( ರಾಜ ಗುಹ್ಯ ಯೋಗಂ ಶ್ಲೋಕ 11-12)
ಗೀತೆಯ ಇಂತಹ ಸೂಕ್ತಗಳು ದಿವ್ಯವಚನಗಳಾಗುವ ಸಾಧ್ಯತೆಯನ್ನು ನಿರಾಕರಿಸಲಾಗದು. ಆದರೆ ಶ್ರೀ ಕೃಷ್ಣನು ಭಗವಾನ್’ ಎಂಬ ನಂಬಿಕೆಯು ಅರ್ಥಹೀನವಾದದು. ಇದು ಗೀತೆಯ ಆಶಯಕ್ಕೆ ತೀರಾ ವಿರುದ್ಧವಾಗಿದೆ. ಶ್ರೀ ಕೃಷ್ಣನು ದೇವಸಂದೇಶವಾಹಕ ಎಂಬ ಸಾಧ್ಯತೆಗಳು ಹೆಚ್ಚಾಗಿದೆ. ಆದರೆ ಕೃಷ್ಣನ ನೈಜ ಹಾಗೂ ಮೂಲ ಚರಿತ್ರೆಯು ಲಭ್ಯವಿಲ್ಲದ ಕಾರಣ ಅದನ್ನು ಖಂಡಿತ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಗೀತೆಯ ಸ್ಪಷ್ಟವಾದ ಚರಿತ್ರೆಯೂ ಲಭ್ಯವಿಲ್ಲ, ಅದು ಮಹಾಭಾರತದ ಯುದ್ಧಕ್ಕೆ ಸಂಬಂಧಿಸಿ ರಚನೆಯಾಗಿದೆಯೇ ಎಂಬ ವಿಷಯದಲ್ಲೂ ಭಿನ್ನಾಭಿಪ್ರಾಯವಿದೆ. ಗೀತೆ ರಚನೆಯ ಕಾಲವೂ ವಾದಾತ್ಮಕವಾಗಿದೆ. ಕ್ರಿ.ಪೂ 5ನೇ ಶತಮಾನ, 4ನೇ ಶತಮಾನ, 3ನೇ ಶತಮಾನವೆಂದೂ, ಕ್ರಿ.ಶ 2ನೇ ಶತಮಾನ 4ನೇ ಶತಮಾನವೆಂದೂ ಅಭಿಪ್ರಾಯ ಇದೆ. ಇದರ ಅಸ್ಪಷ್ಟತೆಯ ಕುರಿತು ಡಾ| ರಾಧಾಕೃಷ್ಣನ್ ಹೇಳುತ್ತಾರೆ. ‘ಭಗವದ್ಗೀತೆಯು ಮಹಾಭಾರತದ ನೈಜ ಭಾಗವೆಂದು ಒಪ್ಪಿಕೊಂಡರೂ ಅದರಲ್ಲಿ ಹಲವು ಕಾಲಘಟ್ಟಗಳ ಕೃತಿಗಳನ್ನು ಸೇರಿಸಿರುವುದರಿಂದ ನಮಗೆ ಗೀತೆಗಳ ಕಾಲದ ಕುರಿತು ನಿರ್ಧಾರಕ್ಕೆ ಬರಲಾಗುವುದಿಲ್ಲ’ (ಭಾರತೀಯ ದರ್ಶನ ಭಾಗ-1 ಪುಟ 481)
ಗೀತೆಯ ರಚನಕಾರರು ತನ್ನ ಕಾಲದ ವಿವಿಧ ಚಿಂತನೆಗಳನ್ನು ಸಮನ್ವಯಗೊಳಿಸಿ ಕ್ರೋಡೀಕರಿಸಿದ್ದಾರೆಂದು ಡಾ| ರಾಧಾಕೃಷ್ಣನ್ ಮುಂದುವರಿಸುತ್ತಾರೆ ‘ಏನಿದ್ದರೂ ಗೀತ ದೈವಿಕವೆಂಬುದರಲ್ಲಿ ಅವರಿಗೆ ಭಿನ್ನಾಭಿಪ್ರಾಯವಿಲ್ಲ. ‘ದರ್ಶನ, ಧರ್ಮ, ಸದಾಚಾರ ಮೌಲ್ಯಗಳನ್ನೊಳಗೊಂಡ ಗ್ರಂಥವನ್ನು ಶೃತಿಯೆಂದೂ ಅಥವಾ ದೇವರ ವಚನಗಳೆಂದೋ ಭಾವಿಸಲಾಗದು. ಸ್ಮೃತಿ ಎಂದು ಹೇಳಬಹುದು.’ (Ibid ಪುಟ 473)
ಸಂಕ್ಷಿಪ್ತದಲ್ಲಿ ದೇವ ಸಂದೇಶದ ಅಂಶಗಳು, ಆಶಯಗಳು ಇರಬಹುದಾದರೂ ಅದೊಂದು ದೇವಗ್ರಂಥವಲ್ಲ, ತನ್ನನ್ನು ದೇವಗ್ರಂಥವೆಂದು ಗೀತೆಯೂ ಸ್ವಯಂ ಹೇಳಿ ಕೊಳ್ಳುವುದಿಲ್ಲ.
“ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”
IslamKannada News Portal
