Home / ಲೇಖನಗಳು / ದಾನವೇ ಧರ್ಮ – ಕುರ್‍ಆನಿನ ಸಾಮಾಜಿಕ ಚಿಂತನೆಗಳು

ದಾನವೇ ಧರ್ಮ – ಕುರ್‍ಆನಿನ ಸಾಮಾಜಿಕ ಚಿಂತನೆಗಳು

@ ಅಶೀರುದ್ದೀನ್ ಆಲಿಯಾ ಮಂಜನಾಡಿ

“ನಾವೇನನ್ನು ಖರ್ಚು ಮಾಡಬೇಕೆಂದು ಜನರು ಕೇಳುತ್ತಾರೆ. ನೀವು ಏನು ಖರ್ಚು ಮಾಡುತ್ತೀರೋ ಅದನ್ನು ನಿಮ್ಮ  ಮಾತಾಪಿತರ, ಸಂಬಂಧಿಕರ, ಅನಾಥರ, ಬಡವರ ಮತ್ತು ಪ್ರಯಾಣಿಕರ ಮೇಲೆ ಖರ್ಚು ಮಾಡಿರೆಂದೂ ನೀವು  ಮಾಡುವ ಎಲ್ಲ ಒಳಿತುಗಳನ್ನು ಅಲ್ಲಾಹ್ ಚೆನ್ನಾಗಿ ಅರಿಯುವವನಾಗಿರುತ್ತಾನೆಂದೂ ಉತ್ತರ ಹೇಳಿರಿ.”  (ಅಲ್‍ಬಕರ: 215)

ಪರಿಶುದ್ಧತೆಯ ಪ್ರತೀಕವಾಗಿದೆ `ದಾನ’. ಕೊಡುವುದು, ಸಹಾಯ ಮಾಡುವುದು, ಉಪಕಾರ ಮಾಡುವುದು, ಸೇವೆ  ಮಾಡುವುದು, ನೀಡುವುದು ಇತ್ಯಾದಿ ಸಮಾನಾರ್ಥ ಪದಗಳ ರೂಪವಾಗಿಯೂ ದಾನವನ್ನು ಕಾಣಬಹುದು. ದಾನ  ಮಾಡುವುದನ್ನು ವಿರೋಧಿಸುವ, ನಿಷೇಧಿಸುವ, ತಡೆಯುವ ಧರ್ಮವೋ, ಧರ್ಮಾ ಧಿಕಾರಿಗಳೋ ಧರ್ಮ ಪಂಡಿತರೋ ಇಲ್ಲ. ಮನುಷ್ಯರೆಲ್ಲರೂ ಕೊಡುವುದನ್ನು ಪ್ರೋತ್ಸಾಹಿಸುತ್ತಾರೆ. ದಾನವೆಂಬುದು ಹಣದ ರೂಪದಲ್ಲೇ  ಇರಬೇಕಿಲ್ಲ. ಒಬ್ಬನಿಂದ ಇನ್ನೊಬ್ಬನಿಗೆ ಆಗುವ ಎಲ್ಲಾ ರೀತಿ ಪ್ರಯೋಜನಗಳು ಉಪಕಾರಗಳು ದಾನವಾಗಿವೆ.  ಜಲದಾನ, ರಕ್ತದಾನ, ಜೀವದಾನ, ಅನ್ನದಾನ ಇತ್ಯಾದಿ ಪ್ರಯೋಗಗಳು ಉದಾಹರಣೆಯಾಗಿವೆ.

ಬರಿಗೈಯಲ್ಲಿ ಬಂದ ದೇಹ ಬರಿಗೈಯಲ್ಲೇ ಮರಳುವುದೆಂಬ ಜಗತ್ತಿನಲ್ಲಿ ಸಾವು ಖಚಿತ. ಇಲ್ಲಿ ಮಾಡಿಟ್ಟದ್ದು ಇಲ್ಲಿ ಬಿಟ್ಟು ಹೋಗಬೇಕು. ಇನ್ನೊಬ್ಬರಿಗೆ ಕೊಟ್ಟು ಹೋಗುವುದಾದರೆ ಇಹಪರ ಬದುಕು ಸುಂದರವಾಗಿರುವುದು.  ಪುರಂದರ ದಾಸರು ಹೇಳೀರುವಂತೆ, “ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸಯ್ಯ.”

ಕುರ್‍ಆನ್ ದಾನಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ. ಕುರ್‍ಆನ್ ಹೇಳುತ್ತದೆ, “ತಮ್ಮ ಸಂಪತ್ತನ್ನು ಆಹೋರಾತ್ರಿ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುವವರ ಪ್ರತಿಫಲ ಅವರ ಪ್ರಭುವಿನ ಬಳಿ ಇದೆ. ಅವರಿಗೆ  ಯಾವ ಭಯವೂ ವ್ಯಥೆಯೂ ಇರುವುದಿಲ್ಲ.”  (ಅಲ್‍ ಬಕರ: 274)

ಪಾಂಡವರು ಕುರುಕ್ಷೇತ್ರದಲ್ಲಿ ವಿಜಯಿಯಾದಾಗ ಶ್ರೀಕೃಷ್ಣನು ಅವರಲ್ಲಿ ಕೇಳುತ್ತಾನೆ, `ನಿಮ್ಮ ವಿಜಯಕ್ಕೆ ಪ್ರಮುಖ  ಕಾರಣವೇನು?’ ಅವರು ತಮ್ಮ ಧೀರತೆಯ ಮತ್ತು ಶೌರ್ಯದ ಬಗ್ಗೆ ಮೆಚ್ಚುಗೆಯ ಒಂದೊಂದು ಉದಾಹರಣೆಯನ್ನು  ಹೇಳುತ್ತಾರೆ. ಆಗ ಕೃಷ್ಣನು ಹೇಳುತ್ತಾನೆ- ಅದ್ಯಾವುದಲ್ಲ, ಕರ್ಣನ ದಾನವಾಗಿದೆ ನಿಮ್ಮ ವಿಜಯಕ್ಕೆ ಕಾರಣ.

ದಾನದಲ್ಲಿ ಪ್ರಮುಖವಾದುದೆಂದರೆ ಅನ್ನ ನೀಡುವುದು. ಹಸಿದವನ ಹೊಟ್ಟೆ ತಣ್ಣಗಾಗಿಸುವುದಕ್ಕಿಂತ ಉತ್ತಮವಾದ ದಾನ ಬೇರೊಂದಿಲ್ಲ. ಕಾರಣ ಮನುಷ್ಯನಿಗೆ ಹಣದ ಮೇಲೆ ಅತಿಯಾದ ಮೋಹವಿರುತ್ತದೆ. ಅದು ಸಾಕೆನಿಸುವುದಿಲ್ಲ.  ಮತ್ತೆ ಮತ್ತೆ ಬೇಕೆನಿಸುತ್ತದೆ. ಊಟ ಹಾಗಲ್ಲ, ಹೊಟ್ಟೆಗೆ ಎಷ್ಟು ಬೇಕೋ ಅಷ್ಟೇ ಸಾಕೆನಿಸುತ್ತದೆ. “ಅನ್ನದಾನಂ  ಪರಂದಾನಂ”- ಅನ್ನದಾನ ಪರಮಶ್ರೇಷ್ಠದಾನವೆಂದು ವೇದಗಳು ಸಾರಿವೆ. ಅನ್ನದಾನ ಮಾಡಿದರೆ ಯಾವುದೇ  ಕಾಲಕ್ಕೂ ದಾರಿದ್ರ್ಯ ಇರುವುದಿಲ್ಲ, ಸುಃಖ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ಹಿಂದೂ ಧರ್ಮದಲ್ಲಿ  ನಂಬಿಕೆಯಿದೆ.” ಒಬ್ಬನು ಹಸಿದವನಿಗೆ ಉಣ ಬಡಿಸಿದರೆ ಅಲ್ಲಾಹನು ಪುನರುತ್ಥಾನದ ದಿನ ಸ್ವರ್ಗದ ಆಹಾರದಿಂದ  ಉಣ ಬಡಿಸುವನೆಂದು ಪ್ರವಾದಿ(ಸ) ಹೇಳಿರುವರು.

ಬೈಬಲ್‍ನಲ್ಲಿ ಇಸ್ರೇಲ್ ಜನತೆಗೆ ದೇವರು ನೀಡುವ ಮೂರು ಪ್ರಮುಖ ವಿಚಾರಗಳಿವೆ. ಪ್ರಾರ್ಥನೆ, ಉಪವಾಸ, ದಾನ. ಒಬ್ಬ ಮನುಷ್ಯನು ತಪ್ಪು ಎಸಗಿ ಅದರಿಂದ ಪಶ್ಚಾತ್ತಾಪ ಪಟ್ಟು ಮರಳುವುದಾದರೆ ಅವನಿಗೆ ದಾನ ನೀಡಲು ಪವಿತ್ರ ಕುರ್‍ಆನ್ ಹೆಚ್ಚು ಪ್ರೇರಣೆ ನೀಡುತ್ತದೆ. ಪಾಪದ ತಪ್ಪಿಗೆ ದಾನವೇ ಪರಿಹಾರ.

ಕುರ್‍ಆನಿನ ಪ್ರಕಾರ ಒಬ್ಬನ ನಮಾಝ್,  ಹಜ್ಜ್, ಉಪವಾಸ ಕರ್ಮಗಳು ಪರಿಪೂರ್ಣವಾಗಬೇಕಾದರೆ ಅವನು ತನ್ನಲ್ಲಿರುವುದರಿಂದ ಖರ್ಚು ಮಾಡಬೇಕು.  ಮೂವತ್ತು ದಿನಗಳು ಉಪವಾಸ ವ್ರತ ಆಚರಿಸಿದ ಒಬ್ಬ ವಿಶ್ವಾಸಿ ಫಿತ್ರ್ ಝಕಾತ್ ನೀಡುವುದರಿಂದ ತನ್ನ ಹಬ್ಬ ಮತ್ತು  ಉಪವಾಸವನ್ನು ಸಮೃದ್ಧ ಗೊಳಿಸಬೇಕಾಗುತ್ತದೆ. ದಾನ ಕೊಡುವಾಗಲೂ ಹಾಗೆಯೇ ತಾನು ಇಷ್ಟಪಡುವ ವಸ್ತುಗಳನ್ನೇ ಕೊಡಬೇಕು. ಒಳ್ಳೆಯದನ್ನು ತನಗಿಟ್ಟು ಕೆಟ್ಟದ್ದನ್ನು ಕೊಡಬಾರದು. ಅದಕ್ಕೆ ಕುರ್‍ಆನ್ ಈ ರೀತಿ  ಹೇಳುತ್ತದೆ, “ಓ ಸತ್ಯವಿಶ್ವಾಸಿಗಳೇ, ನೀವು ಸಂಪಾದಿಸಿದ ಸಂಪತ್ತಿನಿಂದ ಮತ್ತು ನಾವು ನಿಮಗಾಗಿ ಭೂಮಿಯಿಂದ  ಉತ್ಪಾದಿಸಿದವುಗಳಿಂದ ಉತ್ತಮವಾದವುಗಳನ್ನು ದೇವ ಮಾರ್ಗದಲ್ಲಿ ಖರ್ಚು ಮಾಡಿರಿ, ಅವನ ಮಾರ್ಗದಲ್ಲಿ ಕೊಡಲು  ಅತ್ಯಂತ ಕೆಟ್ಟ ವಸ್ತುವನ್ನು ಪ್ರತ್ಯೇಕಿಸಿಡಲು ಪ್ರಯತ್ನಿಸಬಾರದು. ಯಾರಾದರೂ ಅದೇ ವಸ್ತು ವನ್ನು ನಿಮಗೆ ಕೊಟ್ಟಾಗ  ಅಲಕ್ಷಿಸುವ ಹೊರತು ನೀವು ಅದನ್ನು ಸ್ವೀಕರಿಸಲು ಇಷ್ಟಪಡಲಾರಿರಿ. ಅಲ್ಲಾಹ್ ನಿರಪೇಕ್ಷಕನಾಗಿದ್ದು ಅತ್ಯುನ್ನತ ಗುಣವಿಶೇಷಗಳನ್ನು ಹೊಂದಿರುವವನಾಗಿರುತ್ತಾನೆ. (ಬಕರ: 267) “ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ ಮತ್ತು  ನಿಮ್ಮನ್ನು ನೀವೇ ವಿನಾಶಕ್ಕೊಳಪಡಿಸಬೇಡಿ” ಎಂದು ಕುರ್‍ಆನ್ ಹೇಳುತ್ತದೆ.

ಒಬ್ಬ ವ್ಯಕ್ತಿ ಯಾವ ರೀತಿಯಲ್ಲೆಲ್ಲಾ ದಾನ ಮಾಡಬಹುದೆಂದು ನಾವು ಆಲೋಚಿಸುವುದಾದರೆ ನಿತ್ಯ ಜೀವನದ ಪ್ರತಿಯೊಂದು ಸಮಯದಲ್ಲೂ ದಾನ ಧರ್ಮವು ಜೀವನದ ಭಾಗವಾಗಿ ಹೋಗುತ್ತದೆ. ಹಸಿದವನಿಗೆ  ಉಣ ಬಡಿಸುವುದು, ರಕ್ತದಾನ ಮಾಡುವುದು, ಮೂಖ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದು, ಹಸಿರು ಸಸ್ಯ  ಜೀವಜಾಲಗಳಿಗೆ ನೀರುಣಿಸುವುದು, ನೆರೆಮನೆಯೊಂದಿಗೆ ಉತ್ತಮ ಸಹವಾಸ ಬೆಳೆಸುವುದು, ಮರಗಿಡಗಳನ್ನು ನೆಟ್ಟು ಬೆಳೆಸುವುದು ಇತ್ಯಾದಿಗಳು ದಾನವಾಗಿದೆ. ಅಕ್ಷರ ಜ್ಞಾನವು ಇನ್ನೊಂದು ಮಹಾ ದಾನವಾಗಿದೆ. ಪ್ರವಾದಿ(ಸ)  ಹೇಳಿರುವರು, ಖರ್ಜೂರದ ಸೀಳನ್ನಾದರೂ ನೀಡಿ ನರಕದಿಂದ ರಕ್ಷಣೆ ಹೊಂದಿರಿ.

ದಾನವು ಯಾರಿಗೆ ಕೊಡಬೇಕು, ಯಾವಾಗ ಕೊಡಬೇಕು, ಹೇಗೆ ಕೊಡಬೇಕು ಎಂಬುವುದರ ಪರಿಜ್ಞಾನವಿಲ್ಲದೆ  ಇತ್ತೀಚೆಗೆ ಹೆಚ್ಚಿನ ದಾನಗಳು ನೀಡಲ್ಪಡುತ್ತಿವೆ. ದಾನದ ಪ್ರಥಮ ಅರ್ಹ ವ್ಯಕ್ತಿ ಗಳೆಂದರೆ ಕುಟುಂಬದೊಳಗಿನ  ವ್ಯಕ್ತಿಗಳು ಮತ್ತು ಬಡವರು. ಮಾತಾಪಿತರ ಹಕ್ಕು ಪೂರೈಕೆಯಾದ ನಂತರವೇ ಮನುಷ್ಯನ ಪ್ರತಿಯೊಂದು ಒಳಿತು  ಕರ್ಮಗಳು ಸಿಂಧುವಾಗುವುದು. ನಂತರ ಬಡವರು, ಸಾಲಗಾರರು, ನಿರಾಶ್ರಿತರು ಇತ್ಯಾದಿ. ಪ್ರವಾದಿ(ಸ)  ಹೇಳಿರುವಂತೆ ಭಿಕ್ಷುಕನಾಗಿ ಜನರ ಮುಂದೆ ತುತ್ತು ಅನ್ನ ಮತ್ತು ಖರ್ಜೂರಕ್ಕಾಗಿ ಕೈಚಾಚುವವನಲ್ಲ, ಸ್ವಾಭಿಮಾನ ಮತ್ತು ಸಂಕೋಚದಿಂದ ಬದುಕುವ ಮತ್ತು ಜನರೆದುರು ಬೇಡದವನೇ ನಿಜವಾಗಿ ದಾನಕ್ಕೆ ಅರ್ಹ ವ್ಯಕ್ತಿ.’  (ಬುಖಾರಿ) ತಾನುಂಡು ಮಿಕ್ಕಿದ್ದನ್ನು ಇತರರಿಗೆ ಕೊಡುವುದು ಸರಿಯಲ್ಲ. “ತೇನ ತ್ಯಕ್ತೇನ ಭುಂಜಿಥಾ” `ಮೊದಲು ಅನ್ಯರಿಗೆ ನೀಡಿ. ತದ ನಂತರವೇ ನೀನು ಅನುಭವಿಸು’ ಎಂದು ಕಂಠೋಪನಿಷತ್‍ನಲ್ಲಿ ಹೇಳಲಾಗಿದೆ. ದಾನದಿಂದ ಸಂಪತ್ತು ಕಡಿಮೆಯಾಗುವುದಿಲ್ಲ ಅದು ವೃದ್ಧಿಸುತ್ತದೆ. ದಾನವು ಆಧ್ಯಾತ್ಮಿಕ ಪರಿಶುದ್ಧತೆಯನ್ನು ಹೆಚ್ಚಿಸುತ್ತದೆ. ಅದು ಆತ್ಮಸಂಸ್ಕರಣೆಯ ಭಾಗ ಮನುಷ್ಯನಲ್ಲಿರುವ ಸ್ವಾರ್ಥ, ಆಸೆ, ಅಹಂಗಳನ್ನು ಇಲ್ಲವಾಗಿಸುತ್ತದೆ. ಕುರ್‍ಆನಿನ ಅತ್ತೌಬಃದ  60ನೇ ಸೂಕ್ತದಲ್ಲಿ ಕಡ್ಡಾಯವಾಗಿ ಮಾಡಲೇಬೇಕಾದ ದಾನದ ಅರ್ಹ ವ್ಯಕ್ತಿಗಳ ಹೆಸರನ್ನು ಪಟ್ಟಿ ಮಾಡಲಾಗಿದೆ. 1) ಫಕೀರ (ಬಡವ), 2) ದರಿದ್ರ, 3) ಸಮಾಜ ಸೇವೆಯಲ್ಲಿ ತೊಡಗಿರುವವರು, 4) ಗುಲಾಮರ  ವಿಮೋಚನೆಗೆ, 5) ಸಾಲಗಾರರಿಗೆ, 6) ದೇವನ ಮಾರ್ಗದಲ್ಲಿರುವವರಿಗೆ, 7) ಪ್ರಯಾಣಿಕರಿಗೆ, 8) ಬಡತನದಿಂದಾಗಿ  ಸತ್ಯನಿಷೇಧದ ಪಾಲಿನಲ್ಲಿ ಸೇರಿದವರನ್ನು ಸರಿದಾರಿಯಲ್ಲಿ ತರಲು ದಾನ ನೀಡಬೇಕು. ಕೊಟ್ಟವರಿಗೆ ಕೊಡುವುದು,  ಅನರ್ಹರಿಗೆ ಕೊಡುವುದು, ಕುಡುಕರಿಗೆ, ಅಮಲು ಸೇವಕರಿಗೆ ಕೊಡುವುದರಿಂದ ಜಾಗೃತರಾಗಬೇಕು. ದಾನ ಪಡೆಯುವವರು ಅವರ ಕಷ್ಟದಿಂದ ಸ್ವಲ್ಪಮಟ್ಟಿಗಾದರೂ ಸುಧಾರಿಸುವವರಾಗಬೇಕು. ನೀಡಲು ನಮ್ಮಲ್ಲೇನೂ  ಇಲ್ಲದಿದ್ದರೂ ನೀಡಬೇಕೆಂಬ ಮನಸ್ಸು ಇದ್ದರೆ ನಾವು ಪುಣ್ಯ ಸಿದ್ದಿಸಿ ಕೊಂಡೆವು.
ಬಸವಣ್ಣ ಹೇಳುವಂತೆ,
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ-ನೀಡುವ ನಿಜ ಗುಣವುಳ್ಳೊಡೆ
ಕೂಡಿ ಕೊಂಬ ನಮ್ಮ ಕೂಡಲ ಸಂಗಮ ದೇವಾ.

ದಾನ ಮಾಡಿದ ಮೇಲೂ ಚಂಚಲತೆಯ ಮನಸ್ಥಿತಿ ಇರಬಾರದು. ಮನಸ್ಸು ತುಂಬ, ಕೈ ತುಂಬ ಕೊಡಬೇಕು. ಕೊಟ್ಟ  ಮೇಲೆ ಕೊರಗಬಾರದು. ಮರುಗಬಾರದು. ಪುಣ್ಯ ಪ್ರತಿಫಲಾಪೇಕ್ಷೆಯಿಂದ ಕೊಡಬೇಕು. ಭಗವತ್‍ಗೀತೆ ಹೇಳುವಂತೆ,  “ಶ್ರದ್ಧೆಯಿಲ್ಲದೆ ಮಾಡಿದ ದಾನ `ಅಸತ್’ ಎನಿಸಿಕೊಳ್ಳುವುದು. ಈ ಲೋಕದಲ್ಲಾಗಲಿ ಪರಲೋಕದಲ್ಲಾಗಲಿ ಕೆಲಸಕ್ಕೆ  ಬಾರದು. ಶ್ರೀ ಕೃಷ್ಣನು ಹೇಳಿರುವಂತೆ, `ಮಯ್ಯೇವ ಮನ ಆಧತ್ಸ್ವ’ ಅವಶ್ಯಕ.
ಭಗವದ್‍ಗೀತೆಯಲ್ಲಿ ಇನ್ನೊಂದು ಕಡೆ ಹೀಗೆ ಹೇಳುತ್ತದೆ,
“ಆ ದೇಶ ಕಾಲೇ ಯದ್ದಾನಂ ಅಷಾತ್ರೆ ಭ್ಯಶ್ಚ ದೀಯತೆ!
ಅಸತ್ಕøತದುವಜ್ಞಾತಂ ತತ್ತಾಮ ಸಮುದಾ ಹೃತಮ್ ||2||
“ಯಾವ ಸತ್ಕಾರವಿಲ್ಲದೆ, ತಿರಸ್ಕಾರ ಅವಹೇಳನಾಪೂರ್ವಕ ಗದರಿಸಿ ಅಕಾಲದಲ್ಲಿ ಆದೇಶದಲ್ಲೂ ಅವಧಿಕಾರಿಗೆ  ಕೊಡುವ ದಾನವು ತಾಮಸವೆಂದು ಕರೆಯಲ್ಪಡುವುದು.”  (ಯಥಾರ್ಥ ಗೀತ ಅಧ್ಯಾಯ 17)

ಬೇಡಲು ಬಂದವರನ್ನು, ದರಿದ್ರರನ್ನು ದೂರಕ್ಕೆ ಅಟ್ಟುವುದರಿಂದ ಅಥವಾ ಚಿಲ್ಲರೆಗಳನ್ನು ಬಿಸಾಕುವುದರಿಂದಲೂ ಯಾವ ಪ್ರತಿಫಲವೂ ಇಲ್ಲ. ಕುರ್‍ಆನ್ ಹೇಳುತ್ತದೆ, “ಒಂದು ಸವಿ ನುಡಿ ಮತ್ತು ಕ್ಷಮಾಗುಣವು ಮನ ನೋಯಿಸುವ  ದಾನಕ್ಕಿಂತ ಉತ್ತಮ.” (ಅಲ್‍ ಬಕರ 263)

ಪ್ರಚಾರಾರ್ಥ ಮಾಡುವ ದಾನ ಒಳ್ಳೆಯದಲ್ಲ. ಬಹಿರಂಗವಾಗಿ ಕೊಡಬಹುದು. ಅದು ಪಡೆಯುವವನ ಸ್ವಾಭಿಮಾನಕ್ಕೆ ಧಕ್ಕೆ ಬರುವುದಾದರೆ ರಹಸ್ಯವಾಗಿಯೇ ಉತ್ತಮ. ಕುರ್‍ಆನ್ ಹೇಳುತ್ತದೆ, “ನಿಮ್ಮ ದಾನ-ಧರ್ಮಗಳನ್ನು ಬಹಿರಂಗವಾಗಿ ಕೊಡುವುದಿದ್ದರೂ ಒಳ್ಳೆಯದೇ. ಆದರೆ ರಹಸ್ಯವಾಗಿ ಬಡಬಗ್ಗರಿಗೆ ಕೊಡುವುದು ಹೆಚ್ಚು ಉತ್ತಮ.  ಈ ಕ್ರಮದಿಂದ ನಿಮ್ಮ ಹಲವಾರು ದೋಷಗಳ ಪರಿಹಾರಗೊಳ್ಳುವುವು. ಅಲ್ಲಾಹನಿಗಂತು ನೀವು ಮಾಡುವುದರ  ಅರಿವು ಇದ್ದೇ ಇದೆ. (ಅಲ್‍ ಬಕರ 271)

ಅದನ್ನೇ ಬೈಬಲ್‍ನಲ್ಲಿ ಹೀಗೆ ಹೇಳಲಾಗಿದೆ, “ಜನರು ನೋಡಲಿ ಎಂದು ನೀವು ನಿಮ್ಮ ದಾನವನ್ನು ಅವರ ಮುಂದೆ ಮಾಡದಂತೆ ಎಚ್ಚರಿಕೆ ತಂದುಕೊಳ್ಳಿ, ಇಲ್ಲವಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ  ಸಿಗಲಾರದು (ಮತ್ತಾಯ: 1) ಮತ್ತೊಂದು ಕಡೆ “ನೀನು ದಾನ ಮಾಡುವಾಗ ನಿನ್ನ ತುತ್ತೂರಿಯನ್ನೂರಬೇಡ.”  (ಮತ್ತಾಯ: 2)

“ಬಲಗೈ ಕೊಟ್ಟದ್ದು ಎಡಗೈಗೆ ತಿಳಿಯಬಾರದೆಂದು” ಪ್ರವಾದಿ ಹೇಳಿದರು.

“ನೀನು ದಾನ ಮಾಡುವಾಗ ನಿನ್ನ ಬಲಗೈ ಮಾಡುವುದು ನಿನ್ನ ಎಡಗೈಗೆ ತಿಳಿಯಬಾರದೆಂದು (ಮತ್ತಾಯ: 3)  ಬೈಬಲ್ ಸಾರಿದೆ. ದಾನದಲ್ಲಿ ಅಷ್ಟು ಪಾರದರ್ಶಕತೆ ಇರಬೇಕು.

ದಾನ-ಧರ್ಮದಿಂದ ದೂರವಿರುವುದು ಸಾಮೂಹಿಕ ವಿನಾಶಕ್ಕೆ ಕಾರಣವಾಗುತ್ತದೆ. ದಾನವು ಕೆಡುಕನ್ನು ದೂರೀಕರಿಸುವ ಸಾಧನ. ಪುಣ್ಯ ದ್ವಾರದ ಬೀಗದ ಕೈ ದಾನವಾಗಿದೆ. ದಾನವು ನಾವು ಅಲ್ಲಾಹನಿಗೆ ಕೊಡುವ  ಸಾಲವಾಗಿದೆ. ಅದರ ಮರುಪಾವತಿ ಪರಲೋಕದಲ್ಲಿ ಸಿಗಲಿದೆ. ಆಯುಷ್ಕಾಲದಲ್ಲಿ ಮತ್ತು ಆರೋಗ್ಯದ ಸ್ಥಿತಿಯಲ್ಲಿ  ಮಾಡುವ ದಾನವೇ ದೇವ ಮಾರ್ಗದ ದಾನವೆಂದು ಕುರ್‍ಆನ್ ಹೇಳುತ್ತದೆ, ಮರಣಾ ಸಮಯದಲ್ಲಿ ಮಾಡುವ  ನೂರು ದಿರ್‍ಹಮ್‍ಗಿಂತ ಜೀವನದ ಅವಧಿಯಲ್ಲಿ ಮಾಡುವ ಒಂದು ದಿರ್‍ಹಂ ಶ್ರೇಷ್ಠ ದಾನವಾಗಿ  ಪರಿಗಣಿಸಲಾಗುವುದೆಂದು ಪ್ರವಾದಿ(ಸ) ಹೇಳಿದರು. ತನು-ಧನಗಳ ದಾನವು ಎಂತಹ ಅವಸ್ಥೆಯಲ್ಲೂ ಹೆಚ್ಚು  ಬೆಲೆಯುಳ್ಳವುಗಳಾಗಿವೆ.

ದಾನದಿಂದ ಬಡತನ, ದಾರಿದ್ರ ನೀಗುತ್ತದೆ. ಸ್ವಾಭಿಮಾನ, ಸ್ವಾತಂತ್ರ್ಯ, ಸಮಾನತೆ ಬೆಳೆಯುತ್ತದೆ. ಅದಕ್ಕಾಗಿಯೇ  ಇಸ್ಲಾಮ್ ಸೊತ್ತು ಸಂಪತ್ತು ಇರುವ ಸಜ್ಜನರಿಗೆ, ವ್ಯಾಪಾರಿಗಳಿಗೆ, ಶ್ರೀಮಂತರಿಗೆ `ಝಕಾತ್’ ಎಂಬ ಸಾಮಾಜಿಕ  ವ್ಯವಸ್ಥೆಯನ್ನು ಜಾರಿಗೊಳಿಸಿದೆ ಮತ್ತು ಮುಸ್ಲಿಮರಿಗೆ ಅದನ್ನು ಕಡ್ಡಾಯಗೊಳಿಸಲಾಗಿದೆ. ಕುರ್‍ಆನಿನ ಹೆಚ್ಚು  ಕಡೆಗಳಲ್ಲಿ ಝಕಾತ್‍ನ ಬಗ್ಗೆ ಪ್ರಸ್ತಾಪವಿದೆ. ನಮಾಝ್ ಎಷ್ಟು ಪ್ರಾಮುಖ್ಯವೋ ಅಷ್ಟೇ ಝಕಾತ್‍ಗೆ ಪ್ರಾಮುಖ್ಯತೆಯಿದೆ.  ತನ್ನ ಆದಾಯದ ಶೇಕಡಾ 2.5ರಷ್ಟು ಅಂಶವನ್ನು ದೇವನ ಮಾರ್ಗದಲ್ಲಿ ಕಡ್ಡಾಯವಾಗಿ ನೀಡಬೇಕು. ಇದು  ಪ್ರತಿಯೊಬ್ಬ ಮನುಷ್ಯನ ಬಾಧ್ಯತೆಯಾಗಿದೆ. ಇದನ್ನು ಸಮಾಜದಲ್ಲಿ ಹಿಂದುಳಿದ ಬಡವ ದರಿದ್ರರಿಗೆ ನೀಡಿ ಅವರಿಗೆ  ಸಮಾಜದಲ್ಲಿ ಗೌರವಯುತವಾದ ಬದುಕು ನೀಡಲಾಗುವುದು.

ದಾನದ ಇನ್ನೊಂದು ಪ್ರಮುಖ ಅಂಶವೆಂದರೆ ಮಾನಸಿಕ ಸಂತೃಪ್ತಿ. ಆತ್ಮ ತೃಪ್ತಿಯಿಂದ ದಾನ ನೀಡಬೇಕು. ಒಳ್ಳೆಯ  ಮನಸ್ಸಿನಿಂದ ನೀಡಬೇಕು. ಪೀಡೆ ತೊಲಗಿತು ಎಂಬ ಮನೋಭಾವ ಇರದೆ ನನ್ನಿಂದಾದಷ್ಟು ನಾನು ಮಾಡಿದೆ  ಎಂಬ ವಿಶಾಲ ಮನಸ್ಸು ನಮ್ಮದಾಗಿರಬೇಕು. ಬಡವರನ್ನು ಮೂದಲಿಸಬಾರದು. ಬಂದ ಕೈಯನ್ನು ಬರಿಗೈಯಲ್ಲಿ  ಮರಳಿಸಬಾರದು. ಇದ್ದದರಲ್ಲಿ ಒಳ್ಳೆಯದನ್ನು ಕೊಟ್ಟು ಅವರ ಮನಸ್ಸನ್ನು ಸಂತೃಪ್ತಿಗೊಳಿಸಬೇಕು.

ಸರ್ವಜ್ಞರು ಹೇಳುವಂತೆ,
“ಆಗಬಾ, ಈಗಬಾ ಹೋಗಿಬಾ ಎನದೆ
ಆಗಲೇ ಕರೆದು ಕೊಡುವವನ ದಾನ
ಹೊನ್ನಾಗದೆ ಇರದು ಸರ್ವಜ್ಞ.”

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …