Home / ಲೇಖನಗಳು / ಶುಚಿತ್ವವೇ ಕೊರೋನಾಕ್ಕಿರುವ ಪ್ರತಿರೋಧ!

ಶುಚಿತ್ವವೇ ಕೊರೋನಾಕ್ಕಿರುವ ಪ್ರತಿರೋಧ!

  • @ ಸಲೀಮ್ ಬೋಳಂಗಡಿ

ಕೊರೋನಾ ಪಿಡುಗಿಗೆ ಬಲಿಯಾದವರ ಸಂಖ್ಯೆ ನಿರಂತರ ಏರುತ್ತಿದೆ. ವಿಶ್ವವೇ ಕೊರೋನಾ ಮಹಾಮಾರಿಗೆ ತಲ್ಲಣಗೊಂಡಿದೆ. ಸಾರಿಗೆ ವ್ಯವಸ್ಥೆ ಕೂಡಾ ಅಸ್ತವ್ಯಸ್ಥಗೊಂಡು ಸ್ಥಬ್ದವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಸೇರುವುದರ ವಿರುದ್ಧ ನಿಯಂತ್ರಣ ಹೇರಲಾಗುತ್ತಿದೆ. ಪ್ರಾರ್ಥನಾ ಸ್ಥಳಗಳಲ್ಲಿಯೂ ನಿರ್ಬಂಧ ಹೇರಲಾಗಿದೆ. ಎಲ್ಲೆಡೆ ಜನರು ಬೇಕಾಬಿಟ್ಟಿಯಾಗಿ ಸೇರದಂತೆ ವ್ಯಾಪಕ ಕ್ರಮ ಕೈಗೊಳ್ಳಲಾಗುತ್ತಿದೆ. ಜನರಲ್ಲಿ ಒಂದು ರೀತಿಯ ನಿಗೂಢ ಭಯ ಕಾಣಿಸತೊಡಗಿದೆ. ಜನರು ದೇವನ ಬಗ್ಗೆ ಪ್ರಜ್ಞಾವಂತರಾಗುತ್ತಿದ್ದಾರೆ. ಮನುಷ್ಯ ಮಾನವೀಯತೆಯನ್ನು ಮರೆತು ಬಿಟ್ಟಿರುವಾಗ ಇದು ದೇವನಿಂದಲೇ ಬಂದಂತಹ ಯಾತನೆ ಎಂಬ ಮಾತು ಜನಸಾಮಾನ್ಯರಿಂದಲೂ ಕೇಳಿ ಬರುತ್ತಿದೆ. ಕೊರೋನಾ ರೋಗವನ್ನು ನಿಯಂತ್ರಿಸಲು ವಿಶ್ವವು ಹರಸಾಹಸ ಪಟ್ಟು ವಿಫಲವಾಗುತ್ತಿದೆ. ನಿರಂತರ  ಆಹಾರ ಪದಾರ್ಥಗಳನ್ನು ಶುಚಿಯಾಗಿಡಲು ಜನರು ಮುಂದಾಗುತ್ತಿದ್ದಾರೆ. ಸೋಪುಗಳ ಮಾರಾಟಗಳು ಭರದಿಂದ ಸಾಗುತ್ತಿದೆ. ಶುಚಿಯಿಂದ ಮಾತ್ರ ಈ ವೈರಾಣುಗಳನ್ನು ತಡೆಯಬಹುದೆಂಬುದಾಗಿ ವೈದ್ಯರು ವೈದ್ಯಕೀಯ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಈ ರೀತಿಯ ಶುಚಿಗೊಳಿಸುವಿಕೆಯಿಂದ ಮಾತ್ರ ಈ ರೋಗಬಾಧಿತರಾಗುವುದರಿಂದ ತಡೆಯಬಹುದು. ಹಸ್ತವನ್ನು ಚೆನ್ನಾಗಿ ತೊಳೆದು ಶುಚಿಯಾಗಿಡುವುದರಿಂದ ಈ ವೈರಸ್‍ಗೆ ತುತ್ತಾಗದಂತೆ ನಮ್ಮನ್ನು ನಾವೇ ಕಾಪಾಡಿಕೊಳ್ಳಬಹುದು.

ಶುಚಿತ್ವಕ್ಕೆ ಇಸ್ಲಾಮ್‍ನಲ್ಲಿ ಭಾರೀ ಮಹತ್ವವಿದೆ. ಶುಚಿತ್ವವು ಸತ್ಯವಿಶ್ವಾಸದ ಅರ್ಧಾಂಶವಾಗಿದೆಯೆಂದು ಪ್ರವಾದಿ ಮುಹಮ್ಮದ್(ಸ)ರವರು ಹೇಳಿರುವರು. ಅಂದರೆ ಆತ್ಮವನ್ನು ಶುಚಿಯಾಗಿಡುವುದು ಸತ್ಯವಿಶ್ವಾಸದ ಅರ್ಧಾಂಶವಾಗಿದ್ದರೆ ಉಳಿದರ್ಧ ಭಾಗ ದೇಹವನ್ನು ಮಲಿನದಿಂದ ಕಾಪಾಡಿ ಶುಚಿಯಾಗಿಡುವುದಾಗಿದೆ. ಹೀಗೇ ದೈಹಿಕವಾಗಿಯೂ ಮಾನಸಿಕವಾಗಿಯೂ ಇಸ್ಲಾಮ್ ನೈರ್ಮಲ್ಯವನ್ನು ಪ್ರತಿಪಾದಿಸುತ್ತದೆ. ಹೀಗೇ ಎರಡೂ ವಲಯಗಳಲ್ಲಿ ಶುಚಿತ್ವ ಪಾಲಿಸಿದವರು ದೇವನ ಪ್ರತಿಫಲಕ್ಕೆ ಅರ್ಹರಾಗುತ್ತಾರೆ.

ಪ್ರಸಕ್ತ ಕಾಲದಲ್ಲಿ ಕೋರೋನಾ ವೈರಸ್ ದಾಳಿಯನ್ನು ಪ್ರತಿರೋಧಿಸುವ ಆಯುಧವಾಗಿ ಶುಚಿತ್ವವು ಬದಲಾಗಿದೆ. ಆದ್ದರಿಂದ ಶುಚಿತ್ವದ ಬಗ್ಗೆ ಹೆಚ್ಚು ಪ್ರಜ್ಞಾವಂತರಾಗಬೇಕಾದ ಅಗತ್ಯ ಸಮಾಜಕ್ಕಿದೆ. ಎಲ್ಲಾ ಆರೋಗ್ಯ ಕೇಂದ್ರಗಳ ಕಾರ್ಯಕರ್ತರು ಪರಿಸರದ ಸ್ವಚ್ಚತೆಯ ಬಗ್ಗೆ ಜನರನ್ನು ಎಚ್ಚರಿಸುವ  ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ.  ಶುಚಿತ್ವಕ್ಕೆ ಇಸ್ಲಾಮಿನಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಿರುವುದನ್ನು ಅಧ್ಯಯನ ಮಾಡಿದಾಗ ಕಾಣಬಹುದು. ಶುಚಿತ್ವವು ಜನರ ಜೀವನದ ಅವಿಭಾಜ್ಯ ಘಟಕವಾಗಿದೆ. ದೇವನ ಕಡ್ಡಾಯ ಆರಾಧನಾ ಕರ್ಮವಾದ ನಮಾಝ್‍ಗೆ ತೆರಳುವಾಗ ಕಡ್ಡಾಯವಾಗಿ ಕೈಕಾಲು ಮುಖ ತೊಳೆಯಬೇಕೆಂದು ಅಲ್ಲಾಹನು ಆದೇಶಿಸಿದ್ದಾನೆ.

“ಓ ಸತ್ಯವಿಶ್ವಾಸಿಗಳೇ, ನೀವು ನಮಾಝಿಗೆಂದು ಹೊರಟಾಗ ನಿಮ್ಮ ಮುಖಗಳನ್ನು ಮತ್ತು ಮೊಣಗಂಟುಗಳ ವರೆಗೆ ಕೈಗಳನ್ನು ತೊಳೆದುಕೊಳ್ಳಿರಿ. ತಲೆಯನ್ನು ಸವರಿರಿ. ಮತ್ತು ಹರಡು ಗಂಟುಗಳ ತನಕ ಕಾಲುಗಳನ್ನು ತೊಳೆದುಕೊಳ್ಳಿರಿ. ಜನಾಬತ್ (ವೀರ್ಯ ಸ್ಖಲನದ ನಂತರದ ಮಾಲಿನ್ಯ) ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿ ಶುದ್ದರಾಗಿಕೊಳ್ಳಿರಿ. ನೀವು ಅನಾರೋಗ್ಯದಿಂದ ಇದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲಾರಾದರೂ ಮಲಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತ್ರೀಯರನ್ನು ಸ್ಪರ್ಷಿಸಿದ್ದರೆ ಮತ್ತು ಆ ಬಳಿಕ ನೀರು ಸಿಗದೇ ಇದ್ದರೆ ಶುದ್ಧ ಮಣ್ಣನ್ನು ಉಪಯೋಗಿಸಿಕೊಳ್ಳಿರಿ. ಅದರ ಮೇಲೆ ಹಸ್ತಗಳನ್ನು ಬಡಿದು ನಿಮ್ಮ ಮುಖ ಕೈಗಳ ಮೇಲೆ ಸವರಿಕೊಳ್ಳಿರಿ. ಅಲ್ಲಾಹನು ನಿಮ್ಮ ಜೀವನವನ್ನು ಸಂಕುಚಿತಗೊಳಿಸುವುದಿಲ್ಲ. ಬದಲಾಗಿ ನೀವು ಕೃತಜ್ಞರಾಗಲೆಂದು ಅವನು ನಿಮ್ಮನ್ನು ಪರಿಶುದ್ದಗೊಳಿಸಲಿಕ್ಕೂ ನಿಮ್ಮ ಮೇಲೆ ಕೊಡುಗೆಗಳನ್ನು ಪರಿಪೂರ್ಣಗೊಳಿಸಲೂ ಇಚ್ಚಿಸುತ್ತಾನೆ. (ಅಲ್ ಮಾಇದ: 6)

ಪತಿ-ಪತ್ನಿಯರ ನಡುವೆ ದೈಹಿಕ ಸಂಪರ್ಕದ ಬಳಿಕ ಸ್ನಾನ ಮಾಡಬೇಕೆಂದು ಮಹಿಳೆಯರು ಋತುಸ್ರಾವದ ಅವಧಿ ಮುಗಿದ ಬಳಿಕ ಸ್ನಾನ ಮಾಡಬೇಕೆಂದೂ ಪ್ರವಾದಿವರ್ಯರು(ಸ) ಆದೇಶಿಸಿದ್ದಾರೆ. ಜನರ ಸಂಪರ್ಕ ಸಾಧಿಸುವಂತಹ ಜುಮಾ ನಮಾಝ್ ಮತ್ತು ಈದ್ ನಮಾಝ್‍ಗೆ ಮಸೀದಿಗೆ ತೆರಳುವ ಮುನ್ನ ಸ್ನಾನ ನಿರ್ವಹಿಸಿ ಮಸೀದಿಗೆ ತೆರಳಿರೆಂದು ಪ್ರವಾದಿವರ್ಯರು(ಸ) ಆದೇಶಿಸಿದ್ದಾರೆ. ಮಾತ್ರವಲ್ಲ ಆಹಾರ ಸೇವಿಸುವಾಗ ಎರಡೂ ಕೈಗಳನ್ನು ತೊಳೆಯಲು ಆದೇಶಿಸಿರುತ್ತಾರೆ. ನಿದ್ದೆಯಿಂದ ಎಚ್ಚೆತ್ತ ಕೂಡಲೇ ನೀರಿಗೆ ಕೈ ಮುಳುಗಿಸದಿರಿ, ಚೆನ್ನಾಗಿ ಮೂರು ಬಾರಿ ಕೈ ತೊಳೆದ ಬಳಿಕ ಕೈ ಮುಳುಗಿಸಿರಿ ಎಂಬ ಪ್ರವಾದಿ ಸಂದೇಶವನ್ನು ಕಾಣಬಹುದು. ದುರ್ಗಂಧಗಳಿಂದ ದೇಹ, ಹಲ್ಲು, ಕೂದಲನ್ನು ಶುಚಿಯಾಗಿಡಲು ಇಸ್ಲಾಮ್ ಕಲಿಸುತ್ತದೆ. ಎಲ್ಲಿವರೆಗೆಂದರೆ ಮಸೀದಿಗೆ ಹೊರಡುವಾಗ  ಈರುಳ್ಳಿ ತಿನ್ನಬಾರದು ಎಂದೂ ಕಲಿಸಿದ್ದಾರೆ. ಅದರ ದುರ್ವಾಸನೆಯಿಂದ ಜನರಿಗೆ ತೊಂದರೆಯಾಗದಿರಲಿ ಎಂದಾಗಿದೆ. ಉಗುರು ಕತ್ತರಿಸುವುದು, ಮೀಸೆ ಕತ್ತರಿಸುವುದು ಕೂಡಾ ಶುಚಿತ್ವದ ಭಾಗವಾಗಿದೆ ಎಂದು ಇಸ್ಲಾಮ್ ಕಲಿಸುತ್ತದೆ. ಹೀಗೆ ಧರ್ಮದ ಬಗ್ಗೆ ಧರ್ಮದ ಸಂದೇಶಗಳ ಬಗ್ಗೆ ನಾವು ಅಧ್ಯಯನವನ್ನು ಮಾಡಬೇಕಾಗಿದೆ.

ಶುಚಿತ್ವ, ನೈರ್ಮಲ್ಯದ ಕೊರತೆಯೇ ರೋಗಗಳು ಉದ್ಭವವಾಗಲು ಕಾರಣ ಎಂದು ಆರೋಗ್ಯ ಇಲಾಖೆಗಳು ಹಲವು ಬಾರಿ ಎಚ್ಚರಿಸಿದರೂ ನಾವು ಅದನ್ನು ಕಿವಿಗೆ ಹಾಕಿಕೊಳ್ಳದಿರುವುದು ಸಾಂಕ್ರಾಮಿಕ ರೋಗಗಳು ಹಬ್ಬಲು ಕಾರಣವಾಗುತ್ತದೆ, ಹಸ್ತಗಳನ್ನು ಚೆನ್ನಾಗಿ ತೊಳೆಯಬೇಕೆಂದು ಆರೋಗ್ಯ ಇಲಾಖೆಗಳು ಎಚ್ಚರಿಸುತ್ತಿರುವಾಗಲೂ ನಾವು ಎಷ್ಟು ಮಂದಿ ಅದನ್ನು ಪಾಲಿಸುತ್ತಿದ್ದೇವೆ ಎಂಬುದು ಕೂಡಾ ಚಿಂತಿಸಬೇಕಾದ ವಿಚಾರವಾಗಿದೆ. ಆ ಸಾಂಕ್ರಾಮಿಕ ಮಹಾ ವ್ಯಾಧಿಯನ್ನು ತಡೆಯಲು ನಮ್ಮದೇ ಆದ ರೀತಿಯಲ್ಲಿ ನಾವು ಪ್ರಯತ್ನಿಸಬೇಕು. ನಮ್ಮ ಪರಿಸರದಲ್ಲಿ ಸ್ವಚ್ಛತೆ ನೈರ್ಮಲ್ಯತೆಯ ಬಗ್ಗೆ ಜಾಗೃತಿ  ಮೂಡಿಸಬೇಕಾಗಿದೆ. ಪರಿಸರದ ಸ್ವಚ್ಚತೆ ಹಾಗೂ ದೈಹಿಕ ಸ್ವಚ್ಛತೆಯ ಜೊತೆಗೆ ಮಾನಸಿಕ ಸ್ವಚ್ಛತೆಯೂ ಸೇರಿದರೆ ಎಂತಹ ಪಿಡುಗುಗಳನ್ನೂ ಎದುರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಜನಜಾಗೃತಿಯಾಗಬೇಕು.  ಅದಕ್ಕಾಗಿ ಪ್ರಯತ್ನಿಸೋಣ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …