Home / ಲೇಖನಗಳು / ಕೊರೋನಾ-ಇಸ್ಲಾಮಿನ ದೃಷ್ಟಿಯಲ್ಲಿ

ಕೊರೋನಾ-ಇಸ್ಲಾಮಿನ ದೃಷ್ಟಿಯಲ್ಲಿ

ಸಂಗ್ರಹ: ಎನ್.ಎಂ. ಪಡೀಲ್  

ಅನ್ ಅಬ್ದುರ್ರಹ್ಮಾನ್ ಬಿನ್ ಔಫ್(ರ) ಕಾಲ, ಸಮಿಅïತು ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಂ ಯಕೂಲು, ಇದಾ ಸಮಿಅïತುಂ ಬಿಹಿ (ಅಯ್‍ಬಿತ್ವಾಊನ್) ಬಿಅರ್‍ದಿನ್ ಫಲಾ ತಕ್‍ದಮೂ  ಅಲೈಹಿ, ವಇದಾ ವಕಅ ಬಿಅರ್‍ದಿನ್ ವಅನ್ತುಂ ಬಿಹಾ, ಫಲಾ ತಕ್‍ರುದೂ ಫಿರಾರನ್ ಮಿನ್‍ಹು. (ರವಾಹುಲ್ ಬುಖಾರಿ)

ಅಬ್ದುರ್ರಹ್ಮಾನ್ ಬಿನ್ ಔಫ್(ರ)ರಿಂದ ವರದಿ ಯಾಗಿದೆ, ಪ್ರವಾದಿ(ಸ) ಈ ರೀತಿ ಹೇಳುವುದನ್ನು ಕೇಳಿದೆ: ಒಂದು ಊರಿನಲ್ಲಿ ಪ್ಲೇಗ್ ಎಂಬ ಸಾಂಕ್ರಾಮಿಕ ರೋಗವಿದೆ ಎಂದು ತಿಳಿದರೆ ಆ ಊರಿಗೆ  ಪ್ರವೇಶಿಸದಿರಿ. ನೀವು ಇರುವ ನಾಡಿನಲ್ಲಿ ಆ ಕಾಯಿಲೆಯಿದ್ದರೆ ನೀವು ಅಲ್ಲಿಂದ ಪಲಾಯನ ಮಾಡಲೂಬಾರದು.

ಹಿಂದಿನ ಕಾಲದಲ್ಲಿ ಕೋಟಿಗಟ್ಟಲೆ ಜನರನ್ನು ಬಲಿಪಡೆದ ರೋಗವೇ ಪ್ಲೇಗ್. ಅದರಂತೆ ಸಾರ್ಸ್, ಎಬೋಲ, ಹಕ್ಕಿಜ್ವರ ಮುಂತಾದ ಅನೇಕ ಸಾಂಕ್ರಾಮಿಕ ರೋಗಗಳು ಕಳೆದು ಹೋಗಿವೆ. ಅಂತಹವೇ  ಒಂದು ರೋಗ ಕೊರೋನಾ (ಕೋವಿಡ್-19).

1400 ವರ್ಷಕ್ಕಿಂತ ಮೊದಲು ಪ್ರವಾದಿ ಹೇಳಿದ ವಚನವು ಇಂದಿಗೆ ಪಾಠದಾಯಕವಾಗಿದೆ. ರೋಗವಿರುವ ನಾಡಿಗೆ ಹೋಗಬಾರದು. ಅಲ್ಲಿದ್ದರೆ ಬೇರೆ ಕಡೆ ತೆರಳಬಾರದೆಂಬ ಆದೇಶವನ್ನು  ನಿರ್ಲಕ್ಷಿಸಿರುವುದರಿಂದ ಜಗತ್ತಿನಾದ್ಯಂತ ಇಂದು ಕೊರೋನಾ ಹರಡುವಂತಾಯಿತು. ನಮ್ಮ ಊರಿನಲ್ಲಿ ರೋಗವಿರಲಿಲ್ಲ. ಆದರೆ ವಿದೇಶಗಳಿಂದ ಬಂದವರಿಂದ ಅದು ವ್ಯಾಪಿಸಿತು. ಅಮೇರಿಕ, ಯುರೋಪ್ ಮೊದಲಾದ ದೇಶಗಳು ಅದು ನಮಗೆ ಭಾದಿಸಲಾರದು, ಅದು ಚೀನಾದಲ್ಲಿಯೇ ಉಳಿಯಬಹುದೆಂದು ಭಾವಿಸಿದ್ದವು. ಆದರೆ ಅಲ್ಲಾಹನ ಪರೀಕ್ಷೆಯ ಮುಂದೆ ಎಲ್ಲಾ ಅತಿರಥ ಮಹಾರಥರು ಮಂಡಿಯೂರಿದ್ದಾರೆ. ಅಮೇರಿಕದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ ಲಕ್ಷವನ್ನು ದಾಟಿದೆ.

ಸೂಟು ಬೂಟು ಹಾಕಿ ವಿದೇಶ ಸಂಚಾರ ಮಾಡುತ್ತಿದ್ದಂತಹ ವ್ಯಕ್ತಿಗಳು ಇಂದು ಕೋಣೆಯೊಳಗೆ ಬಂದಿಯಾಗಿ ಅಸಹಾಯಕರಾಗಿದ್ದಾರೆ. ಕಣ್ಣಿಗೆ ಕಾಣದ ವೈರಸ್‍ನ ಮುಂದೆ ಜನರ ಎಲ್ಲಾ ಅಹಂಕಾರ,  ದರ್ಪ ಮಣ್ಣು ಪಾಲಾಗಿದೆ. ಇದು ಅಲ್ಲಾಹನ ಪರೀಕ್ಷೆಯೆಂದು ನಾವು ಭಾವಿಸಬೇಕು.

ಸೂರಃ ಅಲ್‍ಬಕರದ 155ರಲ್ಲಿ ಈ ರೀತಿ ಹೇಳಲಾಗಿದೆ: “ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗೊಳಪಡಿಸಿ ಅವಶ್ಯವಾಗಿಯೂ ಪರೀಕ್ಷಿಸುವೆವು.  ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ.

ಅಕ್ರಮ, ಅನ್ಯಾಯಗಳು ಮಿತಿ ಮೀರಿದಾಗ ದೇವನು ಹಲವು ರೂಪಗಳಲ್ಲಿ ಅವರನ್ನು ನಾಶಗೊಳಿಸಿದ ಘಟನೆಗಳು ಕುರ್‍ಆನ್‍ನಲ್ಲಿ ಕಾಣಬಹುದು.
ಇಂದು ಅರ್ಥವ್ಯವಸ್ಥೆಯು ಪತನಗೊಂಡಿದೆ. ಕೋಟಿಗಟ್ಟಲೆ ಜನರು ನಿರುದ್ಯೋಗಿಗಳಾಗಿದ್ದಾರೆ. ಆಹಾರವಿಲ್ಲದೆ ಅನೇಕಾರು ಮಂದಿ ಮರಣ ಹೊಂದಿದರು. ಇಡೀ ವಿಶ್ವವೇ ಅಲ್ಲೋಲ ಕಲ್ಲೋಲವಾಗಿದೆ.  ಯಾರಿಗೂ ಇದರ ಅಂತ್ಯದ ಬಗ್ಗೆ ತಿಳಿದಿಲ್ಲ. ಎಲ್ಲರೂ ಚಿಂತಿತರಾಗಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಸತ್ಯವಿಶ್ವಾಸಿಗಳು ಕ್ಷಮೆಯನ್ನು ಅವಲಂಬಿಸುತ್ತಾರೆ. ಯಥಾರ್ಥ ಸನ್ಮಾರ್ಗಿಗಳು ಧೈರ್ಯವಂತರಾಗಿರಬೇಕು. ಅಲ್ಲಾಹನ ಕಡೆಗೆ ಮರಳಬೇಕಾಗಿದೆ. ನಮಗೆ ಯಾವ ಭಯವೂ ಇರಬಾರದು. ಕೇವಲ ಅಲ್ಲಾಹನ ಭಯ ಮಾತ್ರ ಇರಬೇಕು. ಅವರಿಗೆ ಅಲ್ಲಾಹನ ಅನುಗ್ರಹ ಮತ್ತು ಕಾರುಣ್ಯ ಲಭಿಸುತ್ತದೆ.

ಇಂದು ಸರಕಾರವು ಅನೇಕ ಸಲಹೆ ಸೂಚನೆಗಳನ್ನು ನೀಡುತ್ತಾ ಇದೆ. ಆಗಾಗ ಕೈ ತೊಳೆಯಿರಿ. ಮುಖಗವಸು ಹಾಕಿ. ಸ್ವಚ್ಛತೆ ಕಾಪಾಡಿ ಎಂಬಿತ್ಯಾದಿ. ಆದರೆ ಇಸ್ಲಾಮ್ ಶುಚಿತ್ವಕ್ಕೆ ಬಹಳ ಪ್ರಾಮುಖ್ಯತೆ ನೀಡಿದೆ. ಅತ್ತಹೂರು ಸತ್ರುಲ್ ಈಮಾನ್. ಮುಸ್ಲಿಮ್ ಆಗಬೇಕಾದರೆ ಈಮಾನಿಗನೂ ಆಗಿರಬೇಕು. ಕುರ್‍ಆನಿನಲ್ಲಿ ವಶಿಯಾಬಕ ಫತಹ್ಹಿರ್ ಎಂದು ಹೇಳಲಾಗಿದೆ. ನಿಮ್ಮ ವಸ್ತ್ರಗಳನ್ನು ಶುಚಿಯಾಗಿಟ್ಟುಕೊಳ್ಳಲು ಆದೇಶಿಸಲಾಗಿದೆ. ಚಿಕ್ಕ ಅಶುದ್ಧಿಗೆ ವುಝೂ ಮತ್ತು ದೊಡ್ಡ ಅಶುದ್ಧಿಗೆ ಸ್ನಾನ ಮಾಡಬೇಕು. ಐದು ಸಲ ಅಂಗ ಶುದ್ಧಿ ಮಾಡಬೇಕು. ನನ್ನ ಸಮುದಾಯಕ್ಕೆ ಕಷ್ಟಕರವಲ್ಲದಿದ್ದರೆ 5 ಸಲವೂ ಹಲ್ಲುಜ್ಜಲು ಆದೇಶಿಸುತ್ತಿದ್ದೆ ಎಂದು ಪ್ರವಾದಿ(ಸ) ಹೇಳಿದ್ದರು. ರೋಗವು ಮೂಗು, ಬಾಯಿ, ಕಣ್ಣಿನ ಮೂಲಕ ದೇಹ ಪ್ರವೇಶಿಸುತ್ತದೆ. ವುಝೂ ಮಾಡುವಾಗ ಮೂಗು, ಬಾಯಿಯ ಒಳಗೂ ನೀರು ಹಾಕಿ ಶುಚಿ ಗೊಳಿಸುತ್ತೇವೆ. ಮುಖ, ಕೈ, ಕಾಲುಗಳನ್ನು ಚೆನ್ನಾಗಿ ತೊಳೆಯುತ್ತೇವೆ. ಇದು ಇಸ್ಲಾಮ್ ಕಲಿಸಿದ ಪಾಠವಾಗಿದೆ.

ಅದೇ ರೀತಿ ಸೀನುವಾಗ ಕೆಮ್ಮುವಾಗ ಬಾಯಿಗೆ ಕೈ ಅಡ್ಡ ಹಿಡಿಯಲು ಪ್ರವಾದಿ(ಸ) ಕಲಿಸಿಕೊಟ್ಟಿದ್ದಾರೆ. ಇತರರ ಮೇಲೆ ಹನಿಗಳು ಚೆಲ್ಲಬಾರದೆಂದು ಹೀಗೆ ಆದೇಶಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲ್ಲಿ ಉಗುಳಬಾರದು. ರೋಗ ಹರಡುವ ಭೀತಿಯಿದ್ದರೆ ಮಸೀದಿಯನ್ನು ಮುಚ್ಚಿ ಮನೆಯಲ್ಲೇ ನಮಾಝ್ ಮಾಡಬೇಕು. ರೋಗವಿರುವ ಸ್ಥಳಕ್ಕೆ ಹೋಗಬಾರದೆಂಬ ಆದೇಶವಿದೆ. ಮನೆ ವಠಾರವನ್ನು ಶುಚಿಗೊಳಿಸಬೇಕು. ಶುಚಿತ್ವವನ್ನು ಅಲ್ಲಾಹನು ಇಷ್ಟಪಡುತ್ತಾನೆ. ಅನೇಕ ಸೂಕ್ತಗಳು ಶುಚಿತ್ವದ ಬಗ್ಗೆ ವಿವವರಿಸಿದೆ.

ಒಳ್ಳೆಯ ಆಹಾರ ತಿನ್ನಿರಿ. ಅಮಿತ ಆಹಾರ ಸೇವನೆ ಮಾಡುವುದರಿಂದ ದೇಹವು ರೋಗಕ್ಕೆ ತುತ್ತಾಗುತ್ತದೆ. ಆಹಾರ ಪೋಲು ಮಾಡದಿರಿ. ಪೌಷ್ಠಿಕಾಂಶ ಭರಿತ ಆಹಾರ ಸೇವಿಸಲು ಪ್ರಯತ್ನಿಸಿ. ಭಕ್ಷ್ಯ ಪಾತ್ರೆಗಳನ್ನು ಮುಚ್ಚಿಡಿರಿ. ಬಿಸಿ ಆಹಾರಕ್ಕೆ ಊದಿ ಕುಡಿಯಬಾರದು. ಬಾಯಿಯ ವೈರಸ್ ಆಹಾರವನ್ನು ಸೇರುತ್ತದೆ. ಮದ್ಯವನ್ನು ಇಸ್ಲಾಮ್ ನಿಷೇಧಿಸಿದೆ. ಆದರೆ ಇಂದಿನ ಸರಕಾರವು ಮದ್ಯಪಾನವನ್ನು ಪ್ರೋತ್ಸಾಹಿಸುತ್ತದೆ.

ಗ್ರಾಮೀಣ ಅರಬರು ಪ್ರವಾದಿಯೊಂದಿಗೆ ಕೇಳಿದರು, ನಾವು ರೋಗ ಬಂದರೆ ಔಷಧಿ ಕುಡಿಯಬೇಕಾ? ಮಂತ್ರಿಸಿ ಊದಿದರೆ ಸಾಕಾಗಲಾರದೇ? ಆಗ ಪ್ರವಾದಿ(ಸ) ಹೇಳಿದರು, ಪ್ರತಿಯೊಂದು ರೋಗಕ್ಕೂ ಅಲ್ಲಾಹನು ಮದ್ದನ್ನು ಸಿದ್ಧಗೊಳಿಸಿಟ್ಟಿದ್ದಾನೆ. ಅವನ್ನು ಕಂಡು ಹಿಡಿಯಬೇಕಾಗಿದೆ.

ಪ್ರವಾದಿ(ಸ) ಈ ರೀತಿ ಪ್ರಾರ್ಥಿಸುತ್ತಿದ್ದರು: ಅಲ್ಲಾಹನೇ ನನ್ನ ಕಣ್ಣು, ಕಿವಿ ಎಲ್ಲಾ ಅವಯವಗಳಿಗೂ ಆರೋಗ್ಯ ನೀಡು. ಎಲ್ಲಾ ರೀತಿಯ ನಮಾಝ್, ಉಪವಾಸ ಶರೀರದ ಆರೋಗ್ಯಕ್ಕೆ ಪೂರಕವಾಗಿದೆ.  ಅದು ಆರೋಗ್ಯಕ್ಕೆ ವ್ಯಾಯಾಮದಂತೆ ಕೆಲಸ ನಿರ್ವಹಿಸುತ್ತದೆ. ಈ ರೀತಿ ದೇವನು ಆದೇಶದಂತೆ ಜೀವಿಸಿದರೆ ಯಶಸ್ಸು ಖಚಿತ. ದೇವನ ಎಲ್ಲಾ ಮಾರಕ ರೋಗಗಳಿಂದ ನಮ್ಮನ್ನು ರಕ್ಷಿಸಲಿ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …