Home / ಲೇಖನಗಳು / ತಲಾಕ್‍ನ ಸರಿಯಾದ ಕ್ರಮ

ತಲಾಕ್‍ನ ಸರಿಯಾದ ಕ್ರಮ

ತಲಾಕ್ ಅಥವಾ ವಿವಾಹ ವಿಚ್ಛೇದನವು ಒಂದು ಅರೋಚಕ ಮತ್ತು ಅಪ್ರಿಯ ಕ್ರಿಯೆ ಎಂಬುದು ನಿರ್ವಿವಾದ. ಆದರೂ ಅದು ಮನುಷ್ಯ ಸಮಾಜದ ಒಂದು ಅನಿವಾರ್ಯತೆ. ತಲಾಕ್‍ನ ದ್ವಾರವು ಮುಚ್ಚಲ್ಪಟ್ಟರೆ ಪತಿಯು ತನಗೆ ಒಲ್ಲದ ಪತ್ನಿಯಿಂದ ಮುಕ್ತಿ ಪಡೆಯಲು ಅವಳನ್ನು ವಿಷ ಹಾಕಿ, ಕತ್ತು ಹಿಸುಕಿ, ಸುಟ್ಟು ಹಾಕಿ ಅಥವಾ ಇನ್ನಾವುದೇ ವಿಧಾನದಿಂದ ಸಾಯಿಸುತ್ತಾನೆ. ಇಲ್ಲವೆ ಅವಳ ಹಕ್ಕು ಬಾಧ್ಯತೆಗಳನ್ನು ಪೂರೈಸದೆ ಆಕೆಯನ್ನು ಜೀವನದಾದ್ಯಂತ ತ್ರಿಶಂಕು ಸ್ಥಿತಿಯಲ್ಲಿ ಹಾಕಿಡುತ್ತಾನೆ. ಹೀಗೆ ಆ ಬಡಪಾಯಿ ಮರಣಕ್ಕಿಂತಲೂ ಅಸಹ್ಯವಾದ ಜೀವನ ಸಾಗಿಸಲು ನಿರ್ಬಂಧಿತಳಾಗುತ್ತಾಳೆ. ಈ ಅನಾಹುತಗಳಿಂದ ಆಕೆಯನ್ನು ರಕ್ಷಿಸುವ ಸಲುವಾಗಿ ಇಸ್ಲಾಮ್ ತಲಾಕ್‍ನ ವ್ಯವಸ್ಥೆಯನ್ನು ಇರಿಸಿದೆ. ಅದು ಪತಿ – ಪತ್ನಿಯರು ಕೊನೆ ತನಕವೂ ಪರಸ್ಪರ ಸಾಮರಸ್ಯದಿಂದ ಹಾಲು-ಜೇನಿನಂತೆ ಬಾಳಲು ಬೇಕಾದ ಬೋಧನೆಗಳನ್ನು ನೀಡಿದೆ. ಆದರೂ ಒಂದು ವೇಳೆ ಪತಿಗೆ ತನ್ನ ಪತ್ನಿಯೊಂದಿಗೆ ದಾಂಪತ್ಯ ಜೀವನ ಮುಂದುವರಿಸುವುದು ಸಾಧ್ಯವೇ ಇಲ್ಲ ಎಂದು ಮನಗಂಡಾಗ ಆಕೆಯನ್ನು ಅತ್ಯುತ್ತಮ ರೀತಿಯಲ್ಲಿ ಬಿಡುಗಡೆಗೊಳಿಸುವಂತಾಗಲು ಇಸ್ಲಾಮ್ ತೋರಿಸಿರುವ ವಿಧಾನವೇ ತಲಾಕ್.

ತಲಾಕ್‍ನ ನಿಯಮಗಳು
ತಲಾಕ್ ಯಾವಾಗ ನೀಡಬಹುದು? ಹೇಗೆ ನೀಡಬೇಕು? ಅದಕ್ಕಿರುವ ನಿಬಂಧನೆಗಳೇನು? ಅದರಿಂದುಂಟಾಗುವ ಸಮಸ್ಯೆಗಳನ್ನು ಹೇಗೆ ನಿವಾರಿಸಬಹುದು? ಎಂಬಿತ್ಯಾದಿ ವಿಷಯಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲು ಪ್ರಯತ್ನಿಸಲಾಗಿದೆ:

ಪವಿತ್ರ ಕುರ್‍ಆನ್ ತಲಾಕ್‍ನ ಕುರಿತು ಈ ರೀತಿ ಹೇಳುತ್ತದೆ:
“ತಲಾಕ್ ಎರಡು ಸಲ, ಅನಂತರ ನ್ಯಾಯೋಚಿತವಾಗಿ ಸ್ತ್ರೀಯನ್ನು ತಡೆದಿರಿಸಿಕೊಳ್ಳಬೇಕು ಅಥವಾ ಯೋಗ್ಯ ರೀತಿಯಲ್ಲಿ ಅವಳನ್ನು ಬಿಡುಗಡೆಗೊಳಿಸಬೇಕು. ಬಿಡುಗಡೆ ಗೊಳಿಸುವಾಗ ನೀವು ಈ ಹಿಂದೆ ಪತ್ನಿಯರಿಗೆ ಕೊಟ್ಟಿದ್ದ ಸಾಧನಗಳ ಪೈಕಿ ಏನನ್ನೂ ಮರಳಿ ಪಡೆಯುವುದು ನಿಮಗೆ ಧರ್ಮಸಮ್ಮತವಲ್ಲ.
ದಂಪತಿಗಳಿಗೆ, ತಾವು ಅಲ್ಲಾಹನ ಮೇರೆಗಳಲ್ಲೇ ನೆಲೆ ನಿಲ್ಲಲು ಅಸಾಧ್ಯವಾದೀತೆಂಬ ಸಂದೇಹವುಂಟಾಗುವ ಸ್ಥಿತಿಯು ಇದಕ್ಕೆ ಹೊರತಾಗಿದೆ. ಇಂತಹ ಸ್ಥಿತಿಯಲ್ಲಿ ಅವರಿಬ್ಬರೂ ಅಲ್ಲಾಹನ ಮೇರೆಗಳಲ್ಲೇ ನೆಲೆ ನಿಲ್ಲಲಾರರೆಂದು ನಿಮಗೆ ಶಂಕೆಯುಂಟಾದಾಗ ಸ್ತ್ರೀಯು ತನ್ನ ಪತಿಗೆ ಏನಾದರೂ ಪರಿಹಾರ ಕೊಟ್ಟು ಬಿಡುಗಡೆ ಹೊಂದುವುದರಲ್ಲಿ ದೋಷವಿಲ್ಲ. ಅಲ್ಲಾಹನಿಂದ ನಿಶ್ಚಯಿಸಲ್ಪಟ್ಟ ಮೇರೆಗಳಿವು. ಇವುಗಳನ್ನು ಉಲ್ಲಂಘಿಸಬೇಡಿರಿ. ಅಲ್ಲಾಹನ ಮೇರೆಗಳನ್ನು ಯಾರಾದರೂ ವಿೂರಿದರೆ ಅವರೇ ಅಕ್ರಮಿಗಳು.”

“ಮತ್ತು (ಪತಿಯು ಎರಡು ಸಲ ತಲಾಕ್ ಕೊಟ್ಟ ಬಳಿಕ ಮೂರನೇ ಸಲವೂ) ತಲಾಕ್ ಕೊಟ್ಟು ಬಿಟ್ಟರೆ ಆ ಸ್ತ್ರೀಯ ನಿಕಾಹ್ ಇನ್ನೊಬ್ಬನೊಂದಿಗೆ ಆಗಿ ಅವನು ತಲಾಕ್ ಕೊಡುವ ತನಕ ಅವಳು ಪುನಃ ಮೊದಲಿನ ಪತಿಗೆ ಹಲಾಲ್ ಆಗಲಾರಳು. ಆಗ (ದ್ವಿತೀಯ ಪತಿ ತಲಾಕ್ ಕೊಟ್ಟಾಗ) ಮೊದಲಿನ ಪತಿಯೂ ಈ ಸ್ತ್ರೀಯೂ ತಾವು ಅಲ್ಲಾಹನ ಮೇರೆಯೊಳಗೆ ಇರುವೆವೆಂದು ಭಾವಿಸುವುದಾದರೆ, ಅವರು ಪರಸ್ಪರ ಒಲಿದುಕೊಳ್ಳುವುದರಲ್ಲಿ ದೋಷವಿಲ್ಲ. ಅಲ್ಲಾಹನಿಂದ ನಿಶ್ಚಯಿಸಲ್ಪಟ್ಟ ಮೇರೆಗಳಿವು. (ಅವನ ಮೇರೆಗಳನ್ನು ವಿೂರುವುದರ ಪರಿಣಾಮವನ್ನು) ತಿಳಿದಿರುವವರ ಮಾರ್ಗದರ್ಶನಕ್ಕಾಗಿ ಅವನು ಇವುಗಳನ್ನು ಅಭಿವ್ಯಕ್ತಗೊಳಿಸುತ್ತಾನೆ.”

“ನೀವು ಸ್ತ್ರೀಯರಿಗೆ ತಲಾಕ್ ಕೊಟ್ಟು ಅವರ ‘ಇದ್ದತ್’ ಪೂರ್ಣಗೊಳ್ಳಲು ಸವಿೂಪಿಸಿದಾಗ ಅವರನ್ನು ನ್ಯಾಯೋಚಿತ ರೀತಿಯಲ್ಲಿ ಇರಿಸಿಕೊಳ್ಳಿರಿ ಇಲ್ಲವೇ ನ್ಯಾಯೋಚಿತ ರೀತಿಯಿಂದ ಬಿಡುಗಡೆಗೊಳಿಸಿರಿ. ಕೇವಲ ಸತಾಯಿಸಲಿಕ್ಕಾಗಿ ಅವರನ್ನು ತಡೆದಿರಿಸಿಕೊಂಡರೆ ಅದು ಅತಿಕ್ರಮ ವಾಗುವುದು. ಹೀಗೆ ಮಾಡಿದಾತನು ವಾಸ್ತವದಲ್ಲಿ ತನ್ನ ಮೇಲೆ ತಾನೇ ಅಕ್ರಮವೆಸಗುವನು. ಅಲ್ಲಾಹನ ಸೂಕ್ತಗಳನ್ನು ಅಪಹಾಸ್ಯ ಮಾಡಬೇಡಿರಿ. ಅಲ್ಲಾಹನು ನಿಮ್ಮ ಮೇಲೆ ಎಷ್ಟು ದೊಡ್ಡ ಅನುಗ್ರಹ ಮಾಡಿರುತ್ತಾನೆಂಬುದನ್ನು ಮರೆಯದಿರಿ. ನಿಮ್ಮ ಮೇಲೆ ಇಳಿಸಿದ ಗ್ರಂಥ ಮತ್ತು ಸದ್ವಿವೇಕಗಳ ಗೌರವವನ್ನು ಕಾಪಾಡಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ. ಅಲ್ಲಾಹನನ್ನು ಭಯಪಡಿರಿ. ಅಲ್ಲಾಹನಿಗೆ ಸರ್ವ ವಿಷಯಗಳ ಅರಿವಿದೆ ಎಂಬುದನ್ನು ಚೆನ್ನಾಗಿ ಅರಿತುಕೊಳ್ಳಿರಿ.”

“ನೀವು ನಿಮ್ಮ ಪತ್ನಿಯರಿಗೆ ತಲಾಕ್ ಕೊಟ್ಟ ಬಳಿಕ ಅವರು ತಮ್ಮ ಇದ್ದತ್ ಪೂರ್ತಿ ಗೊಳಿಸಿಕೊಂಡಾಗ ತಮಗಿಷ್ಟ ಬಂದ ಪುರುಷರೊಂದಿಗೆ ವಿವಾಹ ಮಾಡಿಕೊಳ್ಳಲು ನ್ಯಾಯೋಚಿತ ರೀತಿಯಲ್ಲಿ ಒಪ್ಪಿಕೊಂಡರೆ ಅವರು ಪರಸ್ಪರ ನಿಕಾಹ್ ಮಾಡಿಕೊಳ್ಳುವುದನ್ನು ಅಡ್ಡಿಪಡಿಸ ಬಾರದು. ನೀವು ಅಲ್ಲಾಹನ ಮೇಲೂ ಪರಲೋಕದ ಮೇಲೂ ವಿಶ್ವಾಸವಿಡುವವರಾಗಿದ್ದರೆ ಹೀಗೆ ಮಾಡಬಾರದೆಂದು ನಿಮಗೆ ಉಪದೇಶ ನೀಡಲಾಗುತ್ತಿದೆ. ನಿಮಗೆ ಸಭ್ಯವೂ ಪರಿಶುದ್ಧವೂ ಆಗಿರುವ ನಡವಳಿಕೆ ಇದೇ ಆಗಿರುತ್ತದೆ. ಅಲ್ಲಾಹ್ ಬಲ್ಲವನು. ನೀವು ಬಲ್ಲವರಲ್ಲ.”
(2:229-232)

ಪವಿತ್ರ ಕುರ್‍ಆನಿನ ಈ ಸೂಕ್ತಗಳ ಮೂಲಕ ಅಜ್ಞಾನ ಕಾಲದ ಅರಬರಲ್ಲಿದ್ದ ಒಂದು ದುಷ್ಟ ಪದ್ಧತಿಯನ್ನು ಸುಧಾರಿಸಲು ಪ್ರಯತ್ನಿಸಲಾಗಿದೆ. ಆ ಪದ್ಧತಿಯ ಪ್ರಕಾರ ಅರಬರು ತಮ್ಮ ಪತ್ನಿಯರಿಗೆ ಲೆಕ್ಕಮಿತಿ ಇಲ್ಲದಷ್ಟು ಸಲ ತಲಾಕ್ ಕೊಡುವ ಅಧಿಕಾರ ಹೊಂದಿದ್ದರು. ಪತ್ನಿಯೊಂದಿಗೆ ಏನಾದರೂ ವಿರಸವಾದೊಡನೆ ಪತಿಯು ಅವಳಿಗೆ ಆಗಾಗ ತಲಾಕ್ ಕೊಟ್ಟು ಆ ಬಳಿಕ ಆಕೆಯನ್ನು ಮರಳಿ ಸ್ವೀಕರಿಸುತ್ತಿದ್ದನು. ಆ ಬಡಪಾಯಿ ಅವನೊಂದಿಗೆ ಸಹಬಾಳುವೆ ನಡೆಸಲೂ ಬಾರದು ಮತ್ತು ಅವನಿಂದ ಮುಕ್ತವಾಗಿ ಇನ್ನೊಬ್ಬನೊಂದಿಗೆ ವಿವಾಹ ಮಾಡಿ ಕೊಳ್ಳಲೂ ಸಾಧ್ಯವಾಗಬಾರದು ಎಂಬುದೇ ಇದರ ಉದ್ದೇಶವಾಗಿರುತ್ತಿತ್ತು. ಮೇಲೆ ಪ್ರಸ್ತಾಪಿಸಿದ ಪ್ರಥಮ ಸೂಕ್ತವು ಈ ಅಕ್ರಮದ ದ್ವಾರವನ್ನು ಮುಚ್ಚುತ್ತದೆ. ಅದರ ಪ್ರಕಾರ ಒಬ್ಬ ಪುರುಷನು ತನ್ನ ಪತ್ನಿಗೆ ಎರಡು ಸಲ ಮಾತ್ರ ‘ಮರಳಿ ಸ್ವೀಕರಿಸಬಹುದಾದ ತಲಾಕ್’ ಕೊಡಬಹುದು. ಹಾಗೆ ಎರಡು ಸಲ ತಲಾಕ್ ಕೊಟ್ಟು ಮರಳಿ ಸ್ವೀಕರಿಸಿಕೊಂಡಾತನು ಅನಂತರ ತನ್ನ ಜೀವಮಾನದಲ್ಲಿ ಎಂದಾದರೂ ಮೂರನೆಯ ಸಲ ತಲಾಕ್ ಕೊಟ್ಟು ಬಿಟ್ಟರೆ ಆ ಸ್ತ್ರೀಯು ಅವನಿಂದ ಶಾಶ್ವತವಾಗಿ ಅಗಲುವಳು.

ಕುರ್‍ಆನ್ ಮತ್ತು ಪ್ರವಾದಿ ವಚನಗಳಿಂದ ತಿಳಿದು ಬರುವಂತೆ ತಲಾಕ್‍ನ ಸರಿಯಾದ ವಿಧಾನವೇನೆಂದರೆ ಸ್ತ್ರೀಗೆ ಅವಳು ಆರ್ತವದಲ್ಲಿಲ್ಲದ ಶುದ್ಧಾವಸ್ಥೆಯಲ್ಲಿ ಒಂದು ಸಲ ತಲಾಕ್ ಕೊಡಬೇಕು. ಅನಂತರ ತಲಾಕ್ ಕೊಡಬೇಕೆಂದಾದರೆ ಆರ್ತವದ ನಂತರ ಪುನಃ ಇನ್ನೊಂದು ತಲಾಕನ್ನು ಕೊಡಬಹುದು. ಅಲ್ಲವಾದರೆ ಮೊದಲನೆಯ ಒಂದೇ ತಲಾಕ್ ಸಾಕಾಗುತ್ತದೆ. ಆಗ ಇದ್ದತ್‍ನ ಅವಧಿ ಮುಗಿಯುವುದಕ್ಕಿಂತ ಮುಂಚೆ ಯುಕ್ತ ಕಂಡಾಗ ಆಕೆಯನ್ನು ಮರಳಿ ಸ್ವೀಕರಿಸುವ ಹಕ್ಕು ಪತಿಗಿರುತ್ತದೆ. ಇದ್ದತ್‍ನ ಅವಧಿ ಮುಗಿದು ಹೋದರೂ ಉಭಯತ್ರರು ಪರಸ್ಪರ ಒಪ್ಪಿಗೆಯಿಂದ ಪುನಃ ನಿಕಾಹ್ ಮಾಡಿಕೊಳ್ಳಬಹುದು. ಆದರೆ ಮೂರನೆ ಶುದ್ಧಾವಸ್ಥೆಯಲ್ಲಿ ತೃತೀಯ ತಲಾಕನ್ನೂ ಕೊಟ್ಟು ಬಿಟ್ಟಾಗ ಪತಿಗೆ ಆಕೆಯನ್ನು ಮರಳಿ ಸ್ವೀಕರಿಸುವ ಅವಕಾಶವಿರುವುದಿಲ್ಲ. ಇಬ್ಬರಿಗೆ ಪುನಃ ವಿವಾಹ ಮಾಡಿಕೊಳ್ಳಲೂ ಸಾಧ್ಯವಿಲ್ಲ.

ಅಜ್ಞಾನದಿಂದಾಗಿ ಸಾಮಾನ್ಯವಾಗಿ ಇಂದು ಮುಸ್ಲಿಮರಲ್ಲಿ ರೂಢಿಯಲ್ಲಿರುವಂತೆ ಒಂದೇ ಸಲಕ್ಕೆ ಮೂರು ತಲಾಕ್‍ಗಳನ್ನು ಕೊಟ್ಟು ಬಿಡುವುದು ಇಸ್ಲಾಮಿನ ಪ್ರಕಾರ ಮಹಾ ಪಾಪ ಕಾರ್ಯವಾಗಿದೆ. ಪ್ರವಾದಿ(ಸ) ಅದನ್ನು ಕಟುವಾಗಿ ಖಂಡಿಸಿದ್ದಾರೆ. ಹ. ಉಮರ್(ರ) ಏಕ ಕಾಲದಲ್ಲಿ ಮೂರು ತಲಾಕ್ ಕೊಟ್ಟಾತನಿಗೆ ಛಡಿಯೇಟಿನ ಶಿಕ್ಷೆ ವಿಧಿಸುತ್ತಿದ್ದರು.

ಉತ್ತಮ ಬೀಳ್ಕೊಡುಗೆ

ಪತಿಯು ತನ್ನ ಪತ್ನಿಗೆ ಈ ಹಿಂದೆ ಕೊಟ್ಟ ಆಭರಣ, ಬಟ್ಟೆ ಬರೆ ಇತ್ಯಾದಿಗಳಿಂದ ಏನನ್ನೂ ಮರಳಿ ಕೇಳುವ ಹಕ್ಕು ಪತಿಗಿಲ್ಲ. ಒಬ್ಬನು ಇನ್ನೊಬ್ಬನಿಗೆ ಪಾರಿತೋಷಕ, ಉಡುಗೊರೆ ಅಥವಾ ಕಾಣಿಕೆಯ ರೂಪದಲ್ಲಿ ಕೊಟ್ಟ ಯಾವುದಾದರೂ ವಸ್ತುವನ್ನು ಮರಳಿ ಪಡೆಯುವುದು ಇಸ್ಲಾಮಿನ ನೈತಿಕ ತತ್ವಗಳಿಗೆ ವಿರುದ್ಧವಾಗಿದೆ. ಪ್ರವಾದಿ ವಚನಗಳಲ್ಲಿ ಈ ನೀಚ ಕೃತ್ಯವನ್ನು ತಾನು ವಾಂತಿ ಮಾಡಿದುದನ್ನು ತಾನೇ ನೆಕ್ಕುವ ನಾಯಿಯ ಸ್ವಭಾವಕ್ಕೆ ಹೋಲಿಸಲಾಗಿದೆ. ಹೀಗಿರುವಾಗ ಪತ್ನಿಗೆ ತಲಾಕ್ ಕೊಟ್ಟು ಕಳುಹಿಸುವಾಗ ಅವಳಿಗೆ ಒಮ್ಮೆ ಪ್ರೀತಿ ಪೂರ್ವಕವಾಗಿ ತಾನೇ ಕೊಟ್ಟಿದ್ದುದನ್ನೆಲ್ಲಾ ಹಿಂದಿರುಗಿ ಪಡೆದುಕೊಳ್ಳುವುದು ಪತಿಯ ಪಾಲಿಗೆ ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಪತ್ನಿಗೆ ತಲಾಕ್ ಕೊಟ್ಟು ಬೀಳ್ಕೊಡುವಾಗ ಸಾಧ್ಯವಿದ್ದಷ್ಟು ಕೊಟ್ಟು ಕಳುಹಿಸಿ ಕೊಡಬೇಕೆಂಬಂತಹ ಹೃದಯ ವೈಶಾಲ್ಯ ನೀತಿಯನ್ನು ಇಸ್ಲಾಮ್ ಬೋಧಿಸುತ್ತದೆ.

ಸ್ವತಃ ಪತ್ನಿಯೇ ಪತಿಯಿಂದ ತಲಾಕನ್ನು ಅಪೇಕ್ಷಿಸಿದರೆ ಅದನ್ನು ಶರೀಅತ್‍ನ ಪಾರಿಭಾಷಿಕದಲ್ಲಿ ‘ಖುಲಾ’ ಎನ್ನುತ್ತಾರೆ. ಇದು ಸ್ತ್ರೀಯ ಹಕ್ಕಾಗಿದೆ. ‘ಖುಲಾ’ದಲ್ಲಿ ಸ್ತ್ರೀಯು ತನ್ನ ಪತಿಗೇನಾದರೂ ಕೊಟ್ಟು ಅವನಿಂದ ತಲಾಕ್ ಪಡೆಯುತ್ತಾಳೆ. ಈ ಬಗ್ಗೆ ದಂಪತಿಗಳೊಳಗೆ ಏನಾದರೂ ನಿರ್ಣಯವಾದರೆ ಆ ನಿರ್ಣಯವೇ ಜಾರಿಯಾಗುವುದು. ಆದರೆ ಈ ಪ್ರಕರಣವು ನ್ಯಾಯಾಲಯಕ್ಕೆ ತಲುಪಿದರೆ ಆ ಸ್ತ್ರೀಯು ಅವನೊಂದಿಗೆ ಎಂದೆಂದಿಗೂ ಜೀವನ ನಿರ್ವಹಿಸಲಾರದಷ್ಟು ಜಿಗುಪ್ಸೆ ಹೊಂದಿರುತ್ತಾಳೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳ ಲಾಗುವುದು. ಹಾಗಾದರೆ ಸ್ತ್ರೀಯು ‘ಖುಲಾ’ ಪಡೆಯಲು ಎಷ್ಟು ‘ಫಿದಿಯ’ (ಪರಿಹಾರ) ಕೊಡಬೇಕೆಂಬುದನ್ನು ನ್ಯಾಯಾಲಯವು ತೀರ್ಮಾನಿಸುವುದು. ಅದನ್ನು ಸ್ವೀಕರಿಸಿ ಪತಿಯು ತಲಾಕ್ ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ಪತಿಯು ಪತ್ನಿಗೆ ಕೊಟ್ಟಿದ್ದ ಸೊತ್ತಿಗಿಂತ ಹೆಚ್ಚಿನ ‘ಫಿದಿಯ’ ಕೊಡಿಸಲಾಗುವುದಿಲ್ಲ.

ಖುಲಾದ ರೂಪದಲ್ಲಿ ನೀಡಲ್ಪಟ್ಟ ತಲಾಕ್‍ನಲ್ಲಿ ಪತಿಗೆ ಪತ್ನಿಯನ್ನು ಮರಳಿ ಸ್ವೀಕರಿಸುವ ಅಧಿಕಾರವಿರುವುದಿಲ್ಲ. ಆದರೆ ಅವರು ಪರಸ್ಪರ ಒಲಿದು ಪುನರ್ವಿವಾಹ ಮಾಡಲು ನಿರ್ಧರಿಸಿದರೆ ಮಾಡಿಕೊಳ್ಳಬಹುದಾಗಿದೆ.

ವ್ಯಭಿಚಾರವೆನಿಸುವ ಪುನರ್ವಿವಾಹ!

ತಲಾಕ್‍ನ(ವಿವಾಹ ವಿಚ್ಛೇದನ) ಬಳಿಕ ಮಹಿಳೆಯು ಬೇರೆ ಯಾರಾದರೂ ಪುರುಷನೊಂದಿಗೆ ವಿವಾಹ ಮಾಡಿಕೊಳ್ಳುವುದಾದರೆ, ತರುವಾಯ ಆ ಪತಿಯೂ ಆಕೆಗೆ ತಲಾಕ್ ನೀಡಿದರೆ ಇದ್ದತ್ ಅವಧಿ ಕಳೆದ ಬಳಿಕ ಆ ಮಹಿಳೆ ಮತ್ತು ಆಕೆಯ ಪೂರ್ವ ಪತಿ ಇಬ್ಬರೂ ಬಯಸಿದರೆ ಅವರು ಪರಸ್ಪರ ವಿವಾಹವಾಗಬಹುದಾಗಿದೆ. ಆದರೆ ಒಬ್ಬನು ತನ್ನ ವಿಚ್ಛೇದಿತ ಪತ್ನಿಯೊಂದಿಗೆ ವಿವಾಹವನ್ನು ಧರ್ಮಬದ್ಧಗೊಳಿಸಲಿಕ್ಕಾಗಿ ಬೇರೊಬ್ಬನು ಅವಳನ್ನು ನಿಕಾಹ್ ಮಾಡಿ ತಲಾಕ್ ಕೊಡಬೇಕೆಂಬ ಕುತಂತ್ರದ ಒಪ್ಪಂದ ಮಾಡಿಕೊಂಡರೆ ಅದು ಧರ್ಮ ಬಾಹಿರ ಕೃತ್ಯವಾಗುತ್ತದೆ. ಅಂತಹ ವಿವಾಹವನ್ನು ಪ್ರವಾದಿವರ್ಯರು(ಸ) ವ್ಯಭಿಚಾರವೆಂದು ಕರೆದಿರುವರು. ಇಂತಹ ಒಪ್ಪಂದದ ವಿವಾಹ ಮತ್ತು ವಿಚ್ಛೇದನದಿಂದ ಆ ಸ್ತ್ರೀಯು ತನ್ನ ಪೂರ್ವ ಪತಿಗೆ ಧರ್ಮಸಮ್ಮತವಾಗಲಾರಳೆಂದು ಪ್ರವಾದಿ ವಚನಗಳಿಂದ ತಿಳಿದು ಬರುತ್ತದೆ. ಈ ತರದ ವಿವಾಹ ಮಾಡುವುದನ್ನೂ ಮಾಡಿಸುವುದನ್ನೂ ಪ್ರವಾದಿ ವರ್ಯರು(ಸ) ಶಪಿಸಿದ್ದಾರೆ.

ಅಂತೆಯೇ ಪತ್ನಿಗೆ ತಲಾಕ್ ಕೊಟ್ಟು, ಕೇವಲ ಅವಳನ್ನು ಸತಾಯಿಸಲು ಇನ್ನೊಂದು ಅವಕಾಶ ಸಿಗಲೆಂದು ಇದ್ದತ್ ಅವಧಿ ಮುಗಿಯುವುದಕ್ಕಿಂತ ಮುಂಚೆ ಆಕೆಯನ್ನು ಪುನಃ ಸ್ವೀಕರಿಸುವುದೂ ಧರ್ಮಸಮ್ಮತವಲ್ಲ. ಮರಳಿ ಸ್ವೀಕರಿಸುವುದಿದ್ದರೆ ಮುಂದೆ ಸದ್ವರ್ತನೆಯೊಂದಿಗೆ ಬಾಳುವೆ ನಡೆಸುವೆನೆಂಬ ಸತ್ಸಂಕಲ್ಪದೊಂದಿಗೆ ಮಾಡಬೇಕು, ಅನ್ಯಥಾ ಆಕೆಯನ್ನು ಉತ್ತಮ ರೀತಿಯಲ್ಲಿ ಬೀಳ್ಕೊಡುವುದೇ ಲೇಸು.

ವಿಚ್ಛೇದಿತ ಮಹಿಳೆಯು ‘ಇದ್ದತ್’ ಕಾಲಾವಧಿ ಮುಗಿದ ಬಳಿಕ ನಿಯಮ ಬದ್ಧವಾಗಿ ಪೂರ್ವ ಪತಿಯೊಂದಿಗೆ ನಿಕಾಹ್ ಮಾಡಿಕೊಳ್ಳಲು ಒಪ್ಪಿಕೊಂಡರೆ ಮಹಿಳೆಯ ಸಂಬಂಧಿಕರು ಇದಕ್ಕೆ ಅಡ್ಡಿಪಡಿಸುವಂತಿಲ್ಲ. ಅಂತೆಯೇ ಆಕೆ ಬೇರೊಬ್ಬನೊಂದಿಗೆ ನಿಕಾಹ್ ಮಾಡಿ ಕೊಳ್ಳಬಯಸಿದರೆ, ಅವಳ ಮೊದಲಿನ ಪತಿಯು ಆ ವಿವಾಹವಾಗುವುದನ್ನು ತಡೆಯುವ ಅಥವಾ ಆಕೆಯನ್ನು ಬೇರೆ ಯಾರೂ ವಿವಾಹ ಮಾಡಲು ಒಪ್ಪದಂತೆ ಮಾಡುವ ನೀಚ ಕೃತ್ಯಗಳಲ್ಲಿ ತೊಡಗುವುದನ್ನು ಕುರ್‍ಆನ್ ನಿಷೇಧಿಸಿದೆ.

ಇವು ತಲಾಕ್‍ನ ಕುರಿತು ಇಸ್ಲಾಮಿನ ಸ್ಪಷ್ಟವಾದ ವಿಧಿ ನಿಯಮಗಳು. ದಾಂಪತ್ಯ ಜೀವನವನ್ನು ಮುಂದುವರಿಸಲಸಾಧ್ಯವಾದ ದಂಪತಿಗಳು ಈ ನಿಯಮಗಳನ್ನು ಪಾಲಿಸಿ ಪರಸ್ಪರ ಬೇರ್ಪಡುವುದು ಕೇವಲ ಅವರಿಬ್ಬರ ಹಿತದೃಷ್ಟಿಯಿಂದ ಮಾತ್ರವಲ್ಲ ಸಮಾಜದ ಒಟ್ಟು ಹಿತಕ್ಕೂ ಅನಿವಾರ್ಯವಾಗಿದೆ. ಇಂದು ಈ ನಿಯಮಗಳನ್ನು ಮುಸ್ಲಿಮ್ ಸಮಾಜದಲ್ಲಿ ಪೂರ್ಣವಾಗಿ ಪಾಲಿಸಲಾಗುತ್ತಿಲ್ಲವೆಂಬುದು ಒಂದು ವಾಸ್ತವಿಕತೆ. ತಲಾಕ್‍ನ ದುರುಪಯೋಗದಿಂದ ಅನೇಕ ಮಹಿಳೆಯರಿಗೆ ಅನೇಕ ಕಷ್ಟ ನಷ್ಟಗಳು ಎದುರಾಗುತ್ತವೆ ಎಂಬುದೂ ನಿಜವೇ. ಆದರೆ ಅದಕ್ಕೆ ಹೊಣೆಗಾರರು ಇಸ್ಲಾಮಿನ ವಿಧಿ ನಿಯಮಗಳ ತಿಳುವಳಿಕೆಯಿಲ್ಲದ ಜನಸಾಮಾನ್ಯರು, ಅದನ್ನು ಜನರಿಗೆ ಸರಿಯಾಗಿ ತಿಳಿ ಹೇಳದ ಧರ್ಮ ಪಂಡಿತರು ಮತ್ತು ಅದನ್ನು ದುರುಪಯೋಗಿಸಲು ಪ್ರೇರೇಪಿಸುವ ನ್ಯಾಯವಾದಿಗಳೇ ಹೊರತು ಇಸ್ಲಾಮಿನ ತಲಾಕ್ ನಿಯಮವಲ್ಲವೆಂದು ಮೇಲಿನ ವಿವರಣೆಯಿಂದ ವ್ಯಕ್ತವಾಗುತ್ತದೆ.

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …