ರಹ್ಮತುನ್ನಿಸಾ
ರಾಷ್ಟ್ರೀಯ ಕಾರ್ಯದರ್ಶಿ, ಮಹಿಳಾ ವಿಭಾಗ, ಜಮಾಅತೆ ಇಸ್ಲಾಮೀ ಹಿಂದ್
ಮತ್ತೊಮ್ಮೆ ಮಹಿಳಾ ದಿನಾಚರಣೆಯ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಚರ್ಚೆಗಳು, ಘೋಷಣೆಗಳು, ಭರವಸೆಗಳು… ಇತ್ಯಾದಿಗಳು ಸಾಮಾನ್ಯ. ವಿಶ್ವಸಂಸ್ಥೆಯು ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲು ನಿಗದಿಪಡಿಸಿದೆ. ಪ್ರತೀ ವರ್ಷದಂತೆ 2021ರಲ್ಲಿ ‘ವಿಮೆನ್ ಇನ್ ಲೀಡರ್ ಶಿಪ್: ಎಚೀವಿಂಗ್ ಆ್ಯನ್ ಈಕ್ವಲ್ ಫ್ಯೂಚರ್ ಇನ್ ಎ ಕೋವಿಡ್- 19′ ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿತ್ತು. ಈ ವರ್ಷ “ಸುಸ್ಥಿರ ನಾಳೆಗಾಗಿ ಲಿಂಗ ಸಮಾನತೆ (ಜೆಂಡರ್ ಈಕ್ವಾಲಿಟಿ ಟುಡೇ ಫಾರ್ ಎ ಸಸ್ಟೈನೇಬಲ್ ಟುಮಾರೋ) ಎಂಬ ವಿಷಯವಾಗಿ ದಿನವನ್ನು ಆಚರಿಸಲಾಗುತ್ತಿದೆ.
ಪ್ರಪಂಚದ ಅನೇಕ ಭಾಗಗಳಲ್ಲಿ ಈ ರೀತಿಯ ಆಚರಣೆಗಳು ಮತ್ತು ಚಳುವಳಿಗಳಿಂದ ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಹಾಗೂ ಶಿಕ್ಷಣ, ವೃತ್ತಿ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶಗಳು ದೊರೆತಿವೆ ಎಂಬುದು ನಿಜ. ಮಹಿಳೆಯರ ಸಾಮಾಜಿಕ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವಲ್ಲಿ ಸ್ವಲ್ಪ ಮಟ್ಟಿಗೆ ಇಂತಹ ಚಳುವಳಿ, ಆಚರಣೆಗಳು ಸಹಕಾರಿಯಾಗಿದ್ದರೂ, ಮಹಿಳೆಯರ ಪ್ರಸ್ತುತ ಸ್ಥಿತಿಯ ದಯನೀಯತೆಯನ್ನು ಸಮಾಜದ ಮುಂದೆ ಇಡುವುದು ಕೂಡಾ ಇದರಿಂದ ಸಾಧ್ಯವಾಗಿದೆ.
ಆದರೆ ವಾಸ್ತವವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ, ಈ ಆಚರಣೆಗಳು ಕೇವಲ ಶಬ್ದಗಳಾಗಿ ಉಳಿಯುತ್ತವೆ ಮತ್ತು ಪ್ರಪಂಚದಾದ್ಯಂತ ಬಹುಪಾಲು ಮಹಿಳೆಯರ ಜೀವನದಲ್ಲಿ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ. ಎಷ್ಟರ ಮಟ್ಟಿಗೆ ಎಂದರೆ ವರ್ಷಂಪ್ರತೀ ಅವರ ಹೆಸರಿನಲ್ಲಿ ಒಂದು ದಿನವನ್ನು ಆಚರಿಸಲಾಗುತ್ತಿದೆ ಎಂಬುದೇ ಅವರಿಗೆ ತಿಳಿದಿಲ್ಲ. ಮತ್ತು ಪರಿಸ್ಥಿತಿಗಳು ಉತ್ತಮವಾಗಿರುವ ಪ್ರದೇಶಗಳಲ್ಲಿ ಮಹಿಳೆಯರು ಪುರುಷರೊಂದಿಗೆ ಸಮಾನ ಅವಕಾಶ ಹಾಗೂ ಸಮಾನತೆಗಾಗಿ ಹೋರಾಡುತ್ತಿದ್ದಾರೆ ಮತ್ತು ಹೆಣಗಾಡುತ್ತಿದ್ದಾರೆ. ನಾವೂ ಪುರುಷರಿಗೆ ಸಮಾನವಾಗಿದ್ದೇವೆ ಎಂದು ಸಾಬೀತು ಪಡಿಸಲು ಕಷ್ಟಪಡುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ದನಿಯನ್ನು ಇನ್ನೊಬ್ಬರಿಗೆ ತಲುಪಿಸಲು ಇನ್ನೂ ಉತ್ತರಿಸುತ್ತಿದ್ದಾರೆ. ಬ್ಯಾಂಕಿಂಗ್ ವಲಯದ ವ್ಯವಸ್ಥಾಪಕಿಯೋರ್ವರ ಪ್ರಕಾರ ಪುರುಷರ ಮಧ್ಯೆ ತನ್ನ ಧ್ವನಿಯನ್ನು ಕೇಳಿಸಲು ಮತ್ತು ಅವರೊಂದಿಗೆ ಹೊಂದಿಕೊಳ್ಳಲು ನಾನು ನನ್ನ ಧ್ವನಿಯನ್ನು ದೊಡ್ಡದು ಮಾಡಿಕೊಂಡಿದ್ದೇನೆ.
ಹಿರಿಯ ಪುರುಷ ಅಧಿಕಾರಿಯು ಕಛೇರಿಗೆ ಪ್ರಯಾಣಿಸುವಾಗ ಚಾಲಕನ ಹಿಂದಿನ ಸೀಟಿನಲ್ಲಿ ಆರಾಮವಾಗಿ ಕುಳಿತು ವಿಶ್ರಾಂತಿ ಪಡೆಯುವುದನ್ನು ಸ್ಥಾನಮಾನ ಹಾಗೂ ಘನತೆ ಎಂದು ಪರಿಗಣಿಸಲಾಗುತ್ತದೆ. ಅದೇವೇಳೆ ಓರ್ವ ಮಹಿಳಾ ಅಧಿಕಾರಿ ಅದೇ ರೀತಿ ಪ್ರಯಾಣಿಸುತ್ತಿದ್ದರೆ, “ನಿಮಗೆ ಡ್ರೈವಿಂಗ್ ಗೊತ್ತಿಲ್ಲವೋ? ಹಾಗಾದರೆ ನೀವು ಯಾವ ಸಮಾನತೆ ಮತ್ತು ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದೀರಿ?” ಎಂದು ಕೇಳುತ್ತಾರೆ. ಸಬಲೀಕರಣ ಮತ್ತು ಸಮಾನತೆಯ ಹೆಸರಿನಲ್ಲಿ ಆಕೆಯನ್ನು ಅವಳಿಗೆ ಅರಿವಿಲ್ಲದಂತೆ ಜವಾಬ್ದಾರಿ ಹಾಗೂ ಹೊಣೆ ಗಾರಿಕೆಯನ್ನು ಆಕೆಯ ಮೇಲೆ ಹೊರಿಸಲಾಗುತ್ತದೆ. ವೃತ್ತಿಪರ ಕ್ಷೇತ್ರಗಳಲ್ಲಿ ಮಹಿಳೆಯ ಕಡೆಯಿಂದ ಏನಾದರೂ ತಪ್ಪುಗಳು ಸಂಭವಿಸಿದ್ದಲ್ಲಿ, “ಅವರು ಮಹಿಳೆಯಾಗಿರುವುದರಿಂದ” ಎಂಬ ಕಾರಣಗಳು ಸಾಮಾನ್ಯವಾಗಿದೆ. ವಾಸ್ತವದಲ್ಲಿ ರಸ್ತೆಯ ಅಪಘಾತಗಳಲ್ಲಿ ಮಹಿಳೆಯರಿಂದ ಆಗುವ ಅಪಘಾತಗಳ ಪ್ರಮಾಣ ತೀರಾ ಕಡಿಮೆಯಾಗಿದೆ.
2018ರಲ್ಲಿ W.H.O. ರಸ್ತೆ ಸುರಕ್ಷತೆಯ ಬಗ್ಗೆ ನಡೆಸಿದ ಜಾಗತಿಕ ಸ್ಥಿತಿಯ ವರದಿಯಂತೆ, ರಸ್ತೆ ಅಪಘಾತಗಳ ಪ್ರಕರಣಗಳಲ್ಲಿ ಮಹಿಳೆಯರಿಗಿಂತ ಪುರುಷರು ಚಿಕ್ಕ ವಯಸ್ಸಿನಿಂದಲೇ ಭಾಗಿಯಾಗಿರುತ್ತಾರೆ. ಸ್ಥಿತಿ ಹೀಗಿದ್ದರೂ, ಒಂದು ವೇಳೆ ಅಪಘಾತದಲ್ಲಿ ಮಹಿಳೆಯ ಪಾತ್ರ ಇದ್ದರೆ, ಜನರು ಸಾಮಾನ್ಯವಾಗಿ ಮಹಿಳೆಯ ಅಸಮರ್ಥತೆಯ ಬಗ್ಗೆಯೇ ಮಾತನಾಡಲು ತೊಡಗುತ್ತಾರೆ. ಅವರ ಹೆಣ್ತನದ ದೌರ್ಬಲ್ಯದ ಬಗ್ಗೆ ನಿಂದನೀಯ ಟೀಕೆಗಳನ್ನು ಮಾಡುತ್ತಾರೆ. ಕೊನೆಗೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಮಹಿಳೆ ಅಲ್ಲಿರುವ ಉತ್ತಮ ಪುರುಷನಿಗಿಂತ ತನ್ನನ್ನು ಅತ್ಯುತ್ತಮಳಾಗಿ ತೋರ್ಪಡಿಸಿ ಕೊಳ್ಳಬೇಕಾಗುವುದು.
ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡಿದ್ದೇವೆ ಎಂದು ಹೇಳಿಕೊಳ್ಳುವ ಸಮಾಜದಲ್ಲೂ ಕೂಲಂಕುಷವಾಗಿ ಪರಿಶೀಲಿಸಿದರೆ ಸಮಾನತೆಯ ಹೋರಾಟದಲ್ಲಿ ಮಹಿಳೆ ಅನುಭವಿಸುವ ಒತ್ತಡ, ಹೋರಾಟ, ತ್ಯಾಗಗಳೇ ಗೋಚರಿಸುತ್ತವೆ ಹೊರತು ಸಾಧನೆಗಳು ಬಹಳ ಕಡಿಮೆ ಎಂದು ಹೇಳಬಹುದು. ಸ್ವತಂತ್ರ, ಶಕ್ತಿಯುತ ಹಾಗೂ ಯಶಸ್ವೀ ಮಹಿಳಾ ಪರಿಕಲ್ಪನೆಯು ಪುರುಷರೊಂದಿಗೆ ಸಮಾನತೆಯನ್ನು ಸಾಧಿಸುವಲ್ಲಿ ಅವಳಿಗೂ ಅವಳ ಕುಟುಂಬಕ್ಕೂ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನೇ ಉಂಟು ಮಾಡುತ್ತದೆ.
“ನನಗೂ ಪುರುಷರಂತೆ ಸಮಾನ ಅವಕಾಶಗಳು, ಅಂಗೀಕಾರಗಳು ಬೇಕು” ಅನ್ನುವುದಕ್ಕೂ “ನಾನೂ ಪುರುಷರಂತೆ ಇರಲು ಬಯಸುತ್ತೇನೆ” ಎನ್ನುವುದರಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ನಾವು ಯಾರೊಬ್ಬರಂತೆ ಇರಲು ಬಯಸಿದರೆ, ಆ ವ್ಯಕ್ತಿಯಲ್ಲಿ ನಾವು ಏನನ್ನಾದರೂ ಉತ್ತಮವಾದದ್ದನ್ನು ಕಾಣುತ್ತೇವೆ ಮತ್ತು ನಮ್ಮಲ್ಲಿ ಕೆಲವು ನ್ಯೂನತೆಗಳಿವೆ ಎಂದು ನಾವೇ ಒಪ್ಪಿಕೊಂಡಂತಾಗುತ್ತದೆ. ಹಾಗಾಗಿ ಆತ್ಮವಿಶ್ವಾಸ ಹಾಗೂ ಆತ್ಮ ಗೌರವವನ್ನು ಮೂಡಿಸುವ ಬದಲು ಈ ಘೋಷವಾಕ್ಯಗಳು ಮತ್ತೆ ಪರೋಕ್ಷವಾಗಿ ಮಹಿಳೆಯರಿಗೆ ನೀವು ಕೀಳು ಮತ್ತು ನೀವು ಬದಲಾಗಬೇಕು ಎನ್ನುತ್ತವೆ ಮತ್ತು ಬದಲಾವಣೆಗಳು ಯಾವಾಗಲೂ ಪುರುಷ ಪ್ರಧಾನವಾಗಿರುತ್ತದೆ. -(ಲಿಂಗ ಸಮಾನತೆಯ ಯಾವ ಹೆಸರಿನಿಂದ ಕೂಗಿದರೂ) ಸಮಾಜದಲ್ಲಿರುವ ಲಿಂಗ ಅಸಮಾನತೆಯ ಕಾರಣದಿಂದಲೇ ಈ ರೀತಿಯ ಚಿಂತನೆಗಳು ಸೃಷ್ಟಿಯಾಗಿವೆ.
ಡೆಬ್ರಾ ಸೋಹ್ ಅವರು ತಮ್ಮ ಪುಸ್ತಕ, “ದಿ ಎಂಡ್ ಆಫ್ ಜೆಂಡರ್”ನಲ್ಲಿ ಹೇಳುವಂತೆ, “ಪುರುಷ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮಹಿಳೆಯ ಯಶಸ್ಸಿನಿಂದ ಮಹಿಳೆಯ ಮೌಲ್ಯವನ್ನು ಏಕೆ ವ್ಯಾಖ್ಯಾನಿಸಬೇಕು?”
ಪುರಾತನ ಸಮಾಜದಲ್ಲಿ ಮೂಲ ಪಾಪದ ಪರಿಕಲ್ಪನೆ ಹಾಗೂ ಪುರುಷರಂತೆ ಮಹಿಳೆಯರನ್ನು ಸೃಷ್ಟಿಸಲಾಗಿಲ್ಲ ಎಂಬ ನಂಬಿಕೆಯ ಆಧಾರದಲ್ಲಿ ಮಹಿಳೆಯರನ್ನು ಮೂಢನಂಬಿಕೆಗಳು, ಸಂಪ್ರದಾಯಗಳು, ಆಚಾರಗಳು, ಕಟ್ಟಳೆಗಳಲ್ಲಿ ಕಟ್ಟಿ ಹಾಕುವ ಪ್ರಯತ್ನ ನಡೆದಿತ್ತು. ಈ ಆಧಾರದ ಮೇಲೆ ಮಹಿಳೆಯರು ಶತಮಾನಗಳಿಂದ ಗುಲಾಮರಂತೆ ಬದುಕುವಂತೆ ಮಾಡಿದ್ದಾರೆ. ಎಲ್ಲ ದೌರ್ಜನ್ಯಗಳನ್ನು ಅನುಭವಿಸುತ್ತಾ ಪುರುಷರಿಗೆ ಸಂತೋಷವನ್ನು ನೀಡುವ ಕೇವಲ ಸರಕುಗಳಾಗಿ ಅವರನ್ನು ಪರಿಗಣಿಸಲಾಗುತ್ತಿತ್ತು. ಆಧುನಿಕ ಸಮಾಜವು ತಮ್ಮ `ಸಮಾನತೆಯ’ ಘೋಷಣೆಗಳ ಮೂಲಕ ಮಹಿಳೆಯರಿಗೆ ಅದಕ್ಕಿಂತಲೂ ಹೆಚ್ಚು ಹಾನಿಯನ್ನು ಉಂಟು ಮಾಡುತ್ತಿದೆ. ಹಳೆಯ ಸಂಪ್ರದಾಯ, ಕಟ್ಟಳೆಗಳಿಂದ ಕಳಚಿಕೊಂಡ ಮಹಿಳೆಯ ಜೀವನವು ಆಧುನಿಕ ಗುಲಾಮಗಿರಿಗೆ ತನ್ನನ್ನು ತೆರೆದು ಕೊಂಡಿದೆ. ಅನಾಗರಿಕ ರೀತಿಯ ಗುಲಾಮಗಿರಿಯಿಂದ ಬುದ್ಧಿವಂತ ಹಾಗೂ ಕೌಶಲ್ಯಗಳನ್ನು ಹೊಂದಿರುವ ಆಧುನಿಕ ಆವೃತ್ತಿಗೆ ಬದಲಾಗಿದೆ ಎನ್ನಬಹುದು. ಅವರ ದೇಹವನ್ನು ಕಾರ್ಪೊರೇಟ್ ಜಗತ್ತು ನಿಗದಿ ಪಡಿಸಿದ ಮೌಲ್ಯದ ಸರಕಾಗಿ ಪರಿಗಣಿಸಲಾಗುತ್ತದೆ. ಅವಳು ಹೇಗೆ ನಡೆಯಬೇಕು? ಎಷ್ಟು ತಿನ್ನಬೇಕು? ಅವಳ ಮೈಬಣ್ಣ, ಎತ್ತರ, ತೂಕ ಹೇಗಿರಬೇಕು ಇತ್ಯಾದಿಗಳನ್ನು ಅವರು ನಿರ್ಧರಿಸುತ್ತಾರೆ. ಮುಕ್ತ ಹಾಗೂ ವಿಮರ್ಶಾತ್ಮಕ ಚಿಂತನೆಗಳಿಗೆ ಇಲ್ಲಿ ಅವಕಾಶಗಳೇ ಇಲ್ಲ ಅಥವಾ ನೀಡಲಾಗುತ್ತಿಲ್ಲ.
ಪ್ರಮುಖ ಸಮಸ್ಯೆ ಇರುವುದು ಸಮಾನತೆಯನ್ನು ಅರ್ಥೈಸುವ ವಿಧಾನದಲ್ಲಿ. ಹೆಚ್ಚಿನ ಪ್ರಗತಿಪರ ಮಹಿಳೆಯರಿಗೆ ಸಮಾನತೆಯೆಂದರೆ, ಒಂದೇ ರೀತಿ ಇರುವುದು ಎಂದಾಗಿದೆ. ಆಲೋಚನೆ, ವಸ್ತ್ರಧಾರಣೆ, ನಡಿಗೆ, ಕೇಶ ವಿನ್ಯಾಸ, ಉದ್ಯೋಗ, ತಿನಿಸು- ಎಲ್ಲವೂ ಸಮಾನವಾಗಿರಬೇಕು ಅಂದರೆ ಪುರುಷರಂತೆ ಆಗಿರಬೇಕು ಎಂಬುದು ಅವರ ಚಿಂತನೆ. ಸ್ತ್ರೀವಾದಿ ಲೇಖಕಿ ಸಿಮೋನ್ ಡಿ ಬೆವೊಯಿರ್ ತಮ್ಮ ಪುಸ್ತಕ “ದಿ ಸೆಕೆಂಡ್ ಸೆಕ್ಸ್”ನಲ್ಲಿ 1949ರಲ್ಲಿ ಬರೆಯುತ್ತಾರೆ, “ಮಹಿಳೆಯರು ಹುಟ್ಟಿಸಲ್ಪಟ್ಟಿಲ್ಲ ಆದರೆ ತಯಾರಿಸಲ್ಪಟ್ಟಿದ್ದಾರೆ” ಎಂದು. ಇದೇ ಕಲ್ಪನೆಯನ್ನು ಇನ್ನೋರ್ವ ಲೇಖಕಿ ಬಟ್ಲರ್ 1990ರಲ್ಲಿ ತನ್ನ ಪುಸ್ತಕ “ಜೆಂಡರ್ ಟ್ರಬಲ್”ನಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿಯ ಚಿಂತನೆಗಳು ಓರ್ವ ಹೆಣ್ಣು ಅಥವಾ ಮಹಿಳೆಯನ್ನು ಸದಾ ಪುರುಷರೊಂದಿಗೆ ಪೈಪೋಟಿಯಲ್ಲಿರುವಂತೆ ಮಾಡಿತು ಮತ್ತು ಸುತ್ತಮುತ್ತಲಿನ ಪುರುಷರೊಂದಿಗೆ ಸಮಾನತೆಯನ್ನು ಸಾಬೀತು ಪಡಿಸಲು ಹೆಣಗಾಡುವಂತೆ ಮಾಡಿತು.
ಮಹಿಳೆಯರ ಶಾರೀರಿಕ ಮತ್ತು ಮಾನಸಿಕವಾದ ವಿಶಿಷ್ಟ ಗುಣಗಳನ್ನು ದೌರ್ಬಲ್ಯದ ಚಿಹ್ನೆಗಳಾಗಿ ಪರಿಗಣಿಸಲಾಗುತ್ತದೆ ಮತ್ತು ಅವಳನ್ನು ಅಬಲೆ ಎಂದೇ ಪರಿಗಣಿಸಲಾಗುತ್ತದೆ. ಅಳುವುದು, ಆತ್ಮೀಯ ಮತ್ತು ನಿಕಟವರ್ತಿಗಳೊಂದಿಗೆ ತೋರುವ ಹೆಚ್ಚಿನ ಕಾಳಜಿ, ಪ್ರೀತಿ, ಆತಂಕಗಳನ್ನು ಭಾವನೆಗಳ ದೌರ್ಬಲ್ಯವೆಂದು ಪ್ರತಿಬಿಂಬಿಸಲಾಗಿದೆ. ವಿಪರ್ಯಾಸ ವೆಂದರೆ, ಈ ಎಲ್ಲಾ ಘೋಷಣೆಗಳು ಮಹಿಳೆಯರನ್ನು ಅವರ ಮನೆ ಕೆಲಸ, ಮಕ್ಕಳ ಪಾಲನೆ ಮತ್ತು ಶಿಕ್ಷಣದ ಜೊತೆಗೆ ಹಿರಿಯರ ಆರೈಕೆ ಮುಂತಾದ ಕೆಲಸಗಳಿಂದ ಮುಕ್ತಗೊಳಿಸಲಿಲ್ಲ. ಬದಲಾಗಿ ಕುಟುಂಬದ ಪಾಲನೆಗಾಗಿ ಸಮಾನವಾಗಿ ಸಂಪಾದಿಸುವ ಮೂಲಕ ಪುರುಷರಿಗೆ ಸಮಾನ ಎಂದು ಸಾಬೀತು ಪಡಿಸುವ ಹೆಚ್ಚುವರಿ ಹೊರೆಯನ್ನು ಸೇರಿಸಿತು.
ಪುರುಷರೊಂದಿಗಿನ ಸ್ಪರ್ಧಾತ್ಮಕ ಓಟದಲ್ಲಿ ಮಹಿಳೆ ತನ್ನ ಹೆಣ್ತನದ ಎಲ್ಲ ರೀತಿಯ ಸಂತೋಷಗಳು ಒಂದೋ ತ್ಯಾಗ ಮಾಡಬೇಕಾಯಿತು ಅಥವಾ ಅದನ್ನು ಮಿತಿಗೊಳಿಸಬೇಕಾಯಿತು. ಜನ್ಮ ನೀಡುವುದು, ಸ್ತನ್ಯಪಾನ ಮಾಡುವುದು ಮತ್ತು ನವಜಾತ ಶಿಶುಗಳ ಲಾಲನೆ-ಪಾಲನೆ ಮಾಡುವುದು ಪ್ರತಿಯೋರ್ವ ಮಹಿಳೆಗೂ ಅತೀವ ಸಂತಸ ನೀಡುವ ಕಾರ್ಯವಾಗಿದ್ದು ಅದಕ್ಕಾಗಿ ಅವರು ಸರ್ವ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಆದರೆ ಆಧುನಿಕ ಯುವತಿಯರು ಈ ಘೋಷ ವಾಕ್ಯಗಳಿಂದ ಪ್ರೇರಿತರಾಗಿ, ತಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಬಹುದು ಅಥವಾ ಕೆಲಸ, ಉದ್ಯಮಗಳಲ್ಲಿ ಪುರುಷರಿಂದ ಹಿಂದೆ ಉಳಿಯಬೇಕಾಗಬಹುದು ಎಂಬ ಕಾರಣದಿಂದ ಮದುವೆಗಳನ್ನೇ ವಿಳಂಬಗೊಳಿಸುತ್ತಾರೆ. ಹಲವರು ಸ್ತ್ರೀ -ಪುರುಷರಲ್ಲಿ ಬೇಧವಿಲ್ಲ ಎಂದು ನಂಬುತ್ತಾರೆ. ಪುರುಷನು ಮಾಡಬಹುದಾದ ಎಲ್ಲವನ್ನೂ ಮಹಿಳೆಯರು ಮಾಡಬಹುದು ಎಂದು ಭಾವಿಸುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ಕೆಲವು ಕೆಲಸಗಳನ್ನು ಸ್ತ್ರೀ-ಪುರುಷರು ಇಬ್ಬರೂ ಮಾಡಬಹುದಾಗಿದೆ. ಆದರೆ ಕೆಲವು ಕೆಲಸಗಳು ಪುರುಷರಿಗೆ ಮಾತ್ರ ಸಾಧ್ಯ. ಅಂತೆಯೇ ಕೆಲವು ಮಹಿಳೆಯರಿಗೆ ಮಾತ್ರ ಸಾಧ್ಯ. ಸಮಾಜವು ಮಹಿಳೆಯರ ಮೇಲೆ ಮನೆ ಕೆಲಸ, ಮಕ್ಕಳನ್ನು ಬೆಳೆಸುವುದು- ಇತ್ಯಾದಿಗಳನ್ನು ಹೇರುತ್ತಿದೆ. ಆದರೆ ಇವುಗಳು ಹಂಚಿಕೆಯಾಗಬೇಕಾದ ಜವಾಬ್ದಾರಿಗಳಾ ಗಿವೆ. ವಿಶೇಷವಾಗಿ ಇಬ್ಬರೂ ಮನೆಯಿಂದ ಹೊರಗೆ ಕೆಲಸ ಮಾಡುವಾಗ ಮತ್ತು ಸಂಪಾದಿಸುವಾಗ ಮನೆ ಹಾಗೂ ಮಕ್ಕಳ ಜವಾಬ್ದಾರಿಯನ್ನು ಹಂಚಿಕೊಂಡು ಮಾಡಬಹುದು. ಹಾಗೆ ಮಾಡಬೇಕು ಕೂಡಾ. ಇದಕ್ಕೆ ಪ್ರತಿಕ್ರಿಯೆಯಾಗಿ ಸ್ತ್ರೀವಾದಿ ಸಂಘಟನೆಗಳು ಸ್ತ್ರೀಯ ನೈಜ ಹೊಣೆಗಾರಿಕೆಗಳಿಗೆ ಪ್ರಾಮುಖ್ಯತೆ ನೀಡುವ ಬದಲು ಅದನ್ನು ನಿರಾಕರಿಸುವಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸಿವೆ. ಇದರಿಂದ ಸರಕಾರಗಳು ಕೂಡಾ ಮಹಿಳೆಯರಿಗೆ ತಮ್ಮ ಪಾತ್ರಗಳನ್ನು ನಿರ್ವಹಿಸಲು ಅವಕಾಶಗಳನ್ನು ನೀಡುವುದಕ್ಕೆ ಪ್ರಾಮುಖ್ಯತೆ ನೀಡಲಿಲ್ಲ. ಈಗಂತೂ ಮದುವೆಯಾದ ಅಥವಾ ಗರ್ಭಿಣಿ ಮಹಿಳೆಯರಿಗೆ ಅವಕಾಶವನ್ನು ನೀಡದೆ ಅವರಿಂದಾಗುವ ನಷ್ಟದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಒಂದುವೇಳೆ ಅವಕಾಶ ನೀಡಲ್ಪಟ್ಟರೂ ಅವರಿಗೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸುವುದಿಲ್ಲ. ಕ್ಯಾಂಪಸ್ ನೊಳಗಿನ ಮೂಲ ಸೌಕರ್ಯದಲ್ಲಿ ಸ್ತ್ರೀಯರ ವಿಶೇಷ ಅಗತ್ಯಗಳನ್ನು ನಿರಾಕರಿಸಿದ ಕಾರಣ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಬಹಳಷ್ಟು ಬಳಲುತ್ತಿದ್ದಾರೆ. ಪ್ರಾಧ್ಯಾಪಕರೊಬ್ಬರು ತಮ್ಮ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಂತೆ, “ನೀವು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನಿಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಬೇಕು. ನೀವು ವೈಯಕ್ತಿಕ ಜೀವನವನ್ನು ಆರಿಸುವುದಾದರೆ ನಿಮ್ಮ ವೃತ್ತಿ ಜೀವನವನ್ನು ತ್ಯಾಗ ಮಾಡಬೇಕು. ನೀವು ಎರಡರಲ್ಲೂ ಯಶಸ್ವಿಯಾಗಲು ಬಯಸಿದರೆ, ನೀವು ನಿಮ್ಮನ್ನು ತ್ಯಾಗ ಮಾಡಬೇಕು.”
ಹಳೆಯ ಸಂಪ್ರದಾಯಗಳು ಹಾಗೂ ಆಲೋಚನೆಗಳನ್ನು ಆಧುನಿಕೋತ್ತರ ಅಥವಾ ಉದಾರವಾದಿ ಸಿದ್ಧಾಂತಗಳೆಂದು ಬದಲಾಯಿಸುವುದು ಹೆಣ್ಣಿಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿಯೇ ಮಾಡಿದೆ. ಅವಳು ಪುರುಷರಿಗಿಂತ ಕೀಳಲ್ಲ ಎಂದು ಒಪ್ಪಿಕೊಂಡರೆ ಮತ್ತು ಅವಳ ಸ್ತ್ರೀತ್ವವು ಸಮಾಜಕ್ಕೆ ಉತ್ಪಾದಕ ಹಾಗೂ ಉಪಯುಕ್ತವಾಗಿ ಪರಿಣಮಿಸಿದರೆ, ಮಹಿಳೆ ಜೀವನದಲ್ಲಿ ನಿಜವಾದ ಸಂತೋಷ ಹಾಗೂ ಆನಂದವನ್ನು ಪಡೆಯಬಹುದು. ಮಹಿಳೆಯರು ತಮ್ಮ ಗುರುತು ಅಥವಾ ತಮ್ಮ ಸ್ಥಾನವನ್ನು ಕಳೆದುಕೊಳ್ಳದೆ ಅಥವಾ ಯಾವುದೇ ಒತ್ತಡಗಳಿಗೆ ಮಣಿಯದೇ ಜೀವನದ ಕ್ಷೇತ್ರಗಳಾದ ಶಾಲೆಗಳು, ಕಾಲೇಜುಗಳು, ಮಾರುಕಟ್ಟೆ ಸ್ಥಳಗಳು, ಕಛೇರಿಗಳು, ಸಾರ್ವಜನಿಕ ಸಾರಿಗೆಗಳು, ಸಂಸತ್ತುಗಳು, ಪಂಚಾಯತ್ಗಳು ಮುಂತಾದ ಸ್ಥಳಗಳಲ್ಲಿ ಆರಾಮವಾಗಿ ಗುರುತಿಸಿಕೊಳ್ಳಬಹುದು.
ನಾವು ಸ್ತ್ರೀಯರು ಏಕೆ ಅಪಹಾಸ್ಯಕ್ಕೆ ಗುರಿಯಾಗಿದ್ದೇವೆ? ಏಕೆ ರೂಢಿಗತ ಸ್ತ್ರೀ ಲಕ್ಷಣಗಳನ್ನು ತೊಡೆದು ಹಾಕಬೇಕು? ಮಹಿಳೆಯರು ಪುರುಷರಂತೆ ಏಕೆ ಇರಬೇಕು? ಎಂಬುದನ್ನು ಮಹಿಳೆಯರು ಪ್ರಶ್ನಿಸಬೇಕು. ಸಮಾನತೆಯ ಕೂಗಿನಲ್ಲಿ ಅಡಗಿರುವ ಅಪಾಯವನ್ನು ಅರಿಯುವ ಸಮಯ ಸನ್ನಿಹಿತವಾಗಿದೆ. ನಮಗೆ ಅದಕ್ಕಿಂತಲೂ ಹೆಚ್ಚಿನದರ ಅಗತ್ಯವಿದೆ. ಪ್ರವಾದಿಯವರು(ಸ) ಕಲಿಸಿದಂತೆ, ಮಾನವೀಯತೆಯು ತಾಯಿಯಾಗಿ ಮಹಿಳೆಗೆ ಹೆಚ್ಚು ಋಣಿಯಾಗಿದೆ. ತಾಯಿಯ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ. ಬನ್ನಿ ಸ್ತ್ರೀಯರನ್ನು ಗೌರವಿಸೋಣ, ಸ್ತ್ರೀತನವನ್ನು ಆಚರಿಸೋಣ, ಸ್ತ್ರೀಯರಾಗಿರುವುದಕ್ಕೆ ಸಂತೋಷ ಪಡೋಣ. ಹಾಗೂ ಕುಟುಂಬದಲ್ಲೂ, ಸಮಾಜದಲ್ಲೂ ಸಂತೋಷವಾಗಿರಲು, ತನ್ನ ಪಾತ್ರವನ್ನು ಆನಂದಿಸಲು ಹೆಚ್ಚಿನದನ್ನು ಆಶಿಸೋಣ. ಸಂತೃಪ್ತಿಯ ಜೀವನವನ್ನು ನಡೆಸಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಸದಸ್ಯರಾಗೋಣ.
ಕೃಪೆ: ಅನುಪಮ ಮಹಿಳಾ ಮಾಸಿಕ
IslamKannada News Portal
