Home / ಲೇಖನಗಳು / ಅಪಾಯಕಾರಿ ನಾಲಗೆ

ಅಪಾಯಕಾರಿ ನಾಲಗೆ

ಸಂಗ್ರಹ: ಎನ್.ಎಂ. ಪಡೀಲ್

ಅನ್ ಸುಫ್‍ಯಾನ್ ಇಬ್ನು ಅಬ್‍ದಿಲ್ಲಾಹಿ ಅಸ್ಸಖಫಿ(ರ) ಖಾಲ: ಕುಲ್ತು ಯಾ ರಸೂಲಲ್ಲಾಹಿ ಹದ್ದಿಸ್‍ನೀ, ಬಿಅಮ್ರಿನ್ ಅಅïತಸ್ಸಿಮು ಬಿಹೀ? ಖಾಲ ರಸೂಲುಲ್ಲಾಹಿ(ಸ) ಕುಲ್ ರಬ್ಬಿಯಲ್ಲಾಹು ಸುಮ್ಮಸ್ತಕಿಮ್ ಖಾಲ: ಕುಲ್ತು ಯಾ ರಸೂಲಲ್ಲಾಹಿ ಮಾ ಅಖ್‍ವಫು ಮಾ ತಖಾಫು ಅಲೈಯ್ಯ? ಫಅಖಝ ಬಿಲಿಸಾನಿ ನಿಫ್ಸಿಹೀ ಸುಮ್ಮ ಖಾಲ ಹಾಝಾ. (ತಿರ್ಮದಿ, ಇಬ್ನುಮಾಜ, ಹಾಕಿಮ)

ಸುಫ್‍ಯಾನ್ ಇಬ್ನು ಅಬ್ದುಲ್ಲ ಅಸ್ಸಖಫಿ(ರ) ರಿಂದ ವರದಿಯಾಗಿದೆ. ನಾನು ಪ್ರವಾದಿ(ಸ)ರಲ್ಲಿ ಕೇಳಿದೆ: “ನಾನು ಪಾಪ ಮುಕ್ತನಾಗಿರಲು ಸಾಧ್ಯವಾಗುವ ಒಂದು ವಿಷಯ ಹೇಳಿಕೊಡಿ.” ಪ್ರವಾದಿ(ಸ)ರು ಹೇಳಿದರು, “ನನ್ನ ಪ್ರಭು ಅಲ್ಲಾಹನೆಂದು ತಾವು ಘೋಷಿಸಿರಿ ಮತ್ತು ಅದರಲ್ಲಿ ಸ್ಥಿರವಾಗಿರಿ.” ಪುನಃ ನಾನು ಕೇಳಿದೆ: “ತಾವು ನನ್ನ ವಿಷಯದಲ್ಲಿ ಹೆಚ್ಚು ಭಯ ಪಡುವ ಕಾರ್ಯ ಯಾವುದು? ಆಗ ಪ್ರವಾದಿಯವರು(ಸ) ತನ್ನ ನಾಲಗೆಯನ್ನು ಹಿಡಿದುಕೊಂಡು ಹೇಳಿದರು: “ಇದುವೇ.” (ತಿರ್ಮಿದಿ, ಹಾಕಿಂ)

Close up of a tongue that is on fire.

ಈ ಪ್ರವಾದಿ ವಚನವು ಪ್ರಧಾನವಾದ ಹಲವು ಉಪದೇಶಗಳನ್ನು ನೀಡುತ್ತದೆ. ಅದು ನಮ್ಮ ಜೀವನದಲ್ಲಿ ಪ್ರಾಯೋಗಿಕಗೊಳಿಸಬೇಕಾಗಿದೆ. ಇಸ್ಲಾಮ್ ಧರ್ಮವನ್ನು ಸ್ವೀಕರಿಸುತ್ತಿದ್ದ ಸಹಾಬಿಗಳು ಉಪದೇಶಗಳನ್ನು ಬಯಸಿ ಪ್ರವಾದಿವರ್ಯರ(ಸ) ಸನ್ನಿಧಿಗೆ ಬರುತ್ತಿದ್ದರು. ಅವರು ಪ್ರವಾದಿ(ಸ)ರ ಉಪದೇಶಗಳನ್ನು ಬಹಳ ಗಮನವಿಟ್ಟು ಆಲಿಸುತ್ತಿದ್ದರು ಮತ್ತು ತಮ್ಮ ಬದುಕಿನಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದರು. ಬರುವವರ ಸ್ವಭಾವ, ಅವರ ಗುಣ, ಮಾನಸಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ಪ್ರವಾದಿವರ್ಯರು ಸಂದರ್ಭೋಚಿತವಾದ ಉಪದೇಶಗಳನ್ನು ನೀಡುತ್ತಿದ್ದರು.

ಇಲ್ಲಿ ಸಹಾಬಿಯೋರ್ವರು ತಾನು ಪಾಪ ಮುಕ್ತನಾಗಿ ಜೀವಿಸಬೇಕಾದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರವಾದಿ(ಸ)ರು ಸಮಗ್ರವಾದ ಉತ್ತರವನ್ನು ನೀಡಿದರು. ತನ್ನ ಪ್ರಭುವನ್ನು ತಿಳಿದುಕೊಳ್ಳುವುದು, ಅವನ ಅನುಗ್ರಹಗಳನ್ನು ನೆನಪಿಸುವುದು, ದೇವನ ಶಕ್ತಿ, ಕರುಣೆಯನ್ನು ಪಡೆಯುವುದು, ಬಳಿಕ ಅಲ್ಲಾಹನೇ ತನ್ನ ಪ್ರಭು ಎಂದು ಹೇಳುವುದು. ಈ ಆದರ್ಶವನ್ನು ಮನಸ್ಸಿನಲ್ಲಿ ದೃಢಪಡಿಸಿ ಕೊಂಡರೆ, ಬಳಿಕ ನಮ್ಮ ಪ್ರತಿಯೊಂದು ಚಲನೆಯೂ ಈ ಆದರ್ಶದಲ್ಲೇ ಕೇಂದ್ರೀಕೃತವಾಗಿರಬೇಕು. ಅದರಲ್ಲಿ ನಿರ್ಲಕ್ಷ್ಯ, ಉದಾಸೀನ ಸುಳಿಯಬಾರದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈಮಾನ್ ಮತ್ತು ಇಸ್ಲಾಮ್ ಸಮನ್ವಯಗೊಳ್ಳಬೇಕು. ವಿಶ್ವಾಸ-ಆದರ್ಶ ಕಾರ್ಯಗಳಿಗೆ ಈಮಾನ್ ಎನ್ನಲಾಗುತ್ತದೆ. ಕರ್ಮಗಳನ್ನು ಅನುಷ್ಠಾನಿಸುವುದಕ್ಕೆ ಇಸ್ಲಾಮ್ ಕಾರ್ಯಗಳು ಎನ್ನಲಾಗುತ್ತದೆ. ಆದರಿಂದ ದೃಢವಿಶ್ವಾಸದೊಂದಿಗೆ ಕರ್ಮನಿರತನಾಗಲು ವಿಶ್ವಾಸಿಗೆ ಈ ಪ್ರಜ್ಞೆ ಸಾಕಾಗುತ್ತದೆ.

ಇಲ್ಲಿ ಸುಫ್‍ಯಾನ್(ರ) ಎಂಬ ಸಹಾಬಿ ಇನ್ನೊಂದು ಪ್ರಶ್ನೆಯನ್ನು ಕೇಳುತ್ತಾರೆ. ತಾನು ತನ್ನ ಬಗ್ಗೆ ಯಾವುದರ ಕುರಿತು ಹೆಚ್ಚು ಭಯ ಪಡಬೇಕು ಎಂಬುದಾಗಿತ್ತು ಪ್ರಶ್ನೆ. ತನ್ನ ಪ್ರಭುವಿನ ಇಷ್ಟ ಹಾಗೂ ತೃಪ್ತಿಯನ್ನು ಗಳಿಸಲು ತನಗೆ ಮುಖ್ಯವಾದ ತಡೆ ಯಾವುದು ಎಂಬುದು ಅವರಿಗೆ ತಿಳಿಯಬೇಕಾಗಿತ್ತು. ಪ್ರವಾದಿ(ಸ) ತನ್ನ ನಾಲಗೆಯನ್ನು ಹಿಡಿದುಕೊಂಡು, ಇದುವೇ ಅಡ್ಡಿಪಡಿಸುವ ವಸ್ತು ಎಂದು ಎತ್ತಿ ತೋರಿಸಿದರು. ಭಾಷೆ ಮತ್ತು ಮಾತು ಅಲ್ಲಾಹನ ಅಪಾರವಾದ ಅನುಗ್ರಹವಾಗಿದೆ. ಮನುಷ್ಯರಿಗೆ ಹೊರತುಪಡಿಸಿ ಅಲ್ಲಾಹನು ಯಾವ ಸೃಷ್ಟಿಗೂ ಆ ಅನುಗ್ರಹವನ್ನು ನೀಡಲಿಲ್ಲ. ಅಲ್ಲಾಹನು ಅದನ್ನು ತನ್ನ ದೃಷ್ಟಾಂತವೆಂದು ಹೇಳಿದ್ದಾನೆ. ಈ ಮಹಾ ಅನುಗ್ರಹವನ್ನು ಸೂಕ್ತ ರೀತಿಯಲ್ಲಿ ನಾವು ಉಪಯೋಗಿಸುತ್ತಿದ್ದೇವೆಯೇ? ತಮಗೆ ಇಷ್ಟವಾದರೆ ಬಾಯಿ ತುಂಬಾ ಹೊಗಳುವ ನಾವು, ಅವರಿಂದ ವಿರೋಧ ವ್ಯಕ್ತವಾದರೆ ಎಲ್ಲಾ ಪರಿಧಿಯನ್ನು ಮೀರಿ ಸಹ ಜೀವಿಗಳನ್ನು ನಾಲಗೆಯಿಂದ ಬೈಯ್ಯುತ್ತೇವಲ್ಲವೇ? ಅವರಿಗೆ ನೋವುಂಟು ಮಾಡುವ ಮಾತುಗಳು ನಮ್ಮಿಂದ ಬರುತ್ತದೆ.

ಅಸ್ತ್ರದಿಂದ ಆದ ಗಾಯ ಒಣಗಬಹುದು ಆದರೆ ನಾಲಗೆಯಿಂದ ಉಂಟಾದ ಗಾಯವು ಒಣಗುವುದಿಲ್ಲ. ಈ ಗಾಯವು ಮರಣದವರೆಗೂ ಮುಂದುವರಿಯುತ್ತದೆ ಎಂದು ಓರ್ವ ಅರಬಿ ಕವಿ ಹಾಡಿದ್ದಾರೆ.

“ನಾಳೆ ಪರಲೋಕದಲ್ಲಿ ನನ್ನಿಂದ ಹೆಚ್ಚು ದೂರವಿರುವುದು ಅಗತ್ಯವಿಲ್ಲದೆ ತನ್ನ ನಾಲಗೆಯಿಂದ ಮಾತನಾಡುವವರಾಗಿದ್ದಾರೆ ಎಂದು ಪ್ರವಾದಿಯವರು(ಸ) ಹೇಳಿರುವರು.

ಎಲುಬಿಲ್ಲದ ನಾಲಗೆಯಿಂದಾಗುವ ಅವಾಂತರ ಸಣ್ಣದಲ್ಲ. ಪರಸ್ಪರ ಸೌಹಾರ್ದ ಸಂಬಂಧವನ್ನು ಕೆಡಿಸಲು, ಸುಳ್ಳು ಮಾತುಗಳಿಂದ ಹೃದಯ ಕಳಂಕಿತಗೊಳ್ಳಲು ನಾಲಗೆ ಪ್ರಮುಖ ಪಾತ್ರವಹಿಸುತ್ತದೆ. ಪರಲೋಕದಲ್ಲಿ ಹಾಜರುಪಡಿಸಲಾಗುವ ಮನುಷ್ಯನ ಕರ್ಮಪತ್ರದಲ್ಲಿ ನಾವಾಡುವ ಪ್ರತಿಯೊಂದು ಮಾತೂ ಉಲ್ಲೇಖಿಸಲ್ಪಡುತ್ತದೆಯೆಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಯಾವ ಮಾತನ್ನಾಡುವಾಗಲೂ ಬಹಳ ಜಾಗರೂಕರಾಗಿರಬೇಕೆಂದು ಈ ಪ್ರವಾದಿ ವಚನ ಎಚ್ಚರಿಸುತ್ತದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …