Home / ಲೇಖನಗಳು / ಹಜ್ಜ್: ವಿಶ್ವ ಭ್ರಾತೃತ್ವ ಸಮ್ಮೇಳನ

ಹಜ್ಜ್: ವಿಶ್ವ ಭ್ರಾತೃತ್ವ ಸಮ್ಮೇಳನ

ಪ್ರವಾದಿ ಮುಹಮ್ಮದ್(ಸ) ಹೇಳಿರುವರು: ಇಸ್ಲಾಮಿನ ಸೌಧವನ್ನು ಪಂಚ ಬುನಾದಿಗಳ ಮೇಲೆ ಕಟ್ಟಲಾಗಿದೆ. ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲವೆಂದೂ ಮುಹಮ್ಮದ್(ಸ) ಅಲ್ಲಾಹನ ಪ್ರವಾದಿಯಾಗಿರುವರೆಂದೂ ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮಝಾನ್ ತಿಂಗಳ ಉಪವಾಸ ವ್ರತ ಆಚರಿಸುವುದು ಮತ್ತು ಹಜ್ಜ್ ನಿರ್ವಹಿಸುವುದು.

ಹಜ್ಜ್ ಇಸ್ಲಾಮಿನ ಐದು ಬುನಾದಿ ಅಥವಾ ಸ್ತಂಭಗಳ ಪೈಕಿ ಒಂದಾಗಿದೆ ಎಂಬುದು ಈ ಪ್ರವಾದಿ ವಚನದಿಂದ ವ್ಯಕ್ತವಾಗುತ್ತದೆ. ನಮಾಝ್, ಝಕಾತ್ ಮತ್ತು ಉಪವಾಸ ವ್ರತದಂತೆಯೇ ಹಜ್ಜ್ ಕೂಡಾ ಒಂದು ಕಡ್ಡಾಯ ಆರಾಧನಾ ವಿಧಿಯಾಗಿದೆ.

ಆರ್ಥಿಕವಾಗಿಯೂ ದೈಹಿಕವಾಗಿಯೂ ಸಾಮರ್ಥ್ಯವುಳ್ಳ ಪ್ರತಿಯೊಬ್ಬ ವಯಸ್ಕ ಮುಸ್ಲಿಮ್ ಸ್ತ್ರೀ-ಪುರುಷರ ಮೇಲೆ ಜೀವನದಲ್ಲಿ ಒಮ್ಮೆ ಹಜ್ಜ್ ನಿರ್ವಹಿಸುವುದು ಕಡ್ಡಾಯವಾಗಿದೆ.

ಅರೇಬಿಯಾದ ಮಕ್ಕಾ ಪಟ್ಟಣವನ್ನು ಸಂದರ್ಶಿಸಿ ಅಲ್ಲಿರುವ ಕಅಬಾ ಭವನಕ್ಕೆ ಏಳು ಬಾರಿ ಪ್ರದಕ್ಷಿಣೆ ಬರುವುದು, ಕಅಬಾ ಭವನದ ಬಳಿಯಲ್ಲೇ ಇರುವ ಸಫಾ ಮತ್ತು ಮರ್ವಾ ಎಂಬ ಬೆಟ್ಟಗಳ ಮಧ್ಯೆ ಏಳು ಬಾರಿ ನಡೆದಾಡುವುದು, ಮಕ್ಕಾದ ಪರಿಸರದಲ್ಲಿರುವ ಮಿನಾ, ಅರಫಾತ್ ಮತ್ತು ಮುಝ್ದಲಿಫಾಗಳಲ್ಲಿ ನಿರ್ದಿಷ್ಟ ದಿನಗಳಲ್ಲಿ ತಂಗಿ ಅಲ್ಲಾಹನ ಸ್ತುತಿ-ಸ್ತೋತ್ರ ಮತ್ತು ಪ್ರಾರ್ಥನೆಗಳಲ್ಲಿ ನಿರತರಾಗಿರುವುದು, ಇವಿಷ್ಟು ಹಜ್ಜ್ ಕರ್ಮದ ಪ್ರಮುಖ ಪ್ರತ್ಯಕ್ಷ ವಿಧಿಗಳು. ಪ್ರಾಣಿ ಬಲಿಯೂ ಹಜ್ಜ್ ಕಾರ್ಯಗಳಲ್ಲಿ ಸೇರಿದೆ.

ಪವಿತ್ರ ಕಅಬಾ

ಕಅಬಾ ಭವನವು ಜಗತ್ತಿನ ಅತ್ಯಂತ ಪುರಾತನ ಮಸೀದಿಯಾಗಿದೆ. ಅದನ್ನು ಅಲ್ಲಾಹನ ಆಜ್ಞೆಯ ಪ್ರಕಾರ ಪ್ರವಾದಿ ಇಬ್ರಾಹೀಮ್(ಅ) ಮತ್ತವರ ಪುತ್ರ ಪ್ರವಾದಿ ಇಸ್ಮಾಈಲ್(ಅ) ಸುಮಾರು 4 ಸಾವಿರ ವರ್ಷಗಳ ಹಿಂದೆ ನಿರ್ಮಿಸಿದರು. ಹಜ್ಜ್ ಕರ್ಮವೂ ಕಅಬಾ ಭವನದಷ್ಟೇ ಪುರಾತನವಾದ ಒಂದು ಆರಾಧನಾ ವಿಧಿಯಾಗಿದೆ. ಕಅಬಾ ಭವನದ ನಿರ್ಮಾಣ ಕಾರ್ಯ ಪೂರ್ಣಗೊಂಡಾಗ ಅಲ್ಲಾಹನು ಪ್ರವಾದಿ ಇಬ್ರಾಹೀಮ್‍ರವರಿಗೆ(ಅ) ಜನರನ್ನು ಆ ಭವನದೆಡೆಗೆ ಆಹ್ವಾನಿಸಲು ಆಜ್ಞಾಪಿಸಿದನು. ಅಂತೆಯೇ ಅವರು ಜನರನ್ನು ಆ ಪವಿತ್ರ ಭವನದ ಹಜ್ಜ್ ನಿರ್ವಹಿಸಲು ಆಹ್ವಾನಿಸಿದರು. ಅಂದಿನಿಂದ ಈ ತನಕ ಆ ಕರೆಗೆ ಓ ಗೊಡುತ್ತಾ ಜಗತ್ತಿನ ದಶ ದಿಕ್ಕುಗಳಿಂದಲೂ ಜನರು ಪ್ರತಿ ವರ್ಷ ಚಾಂದ್ರಮಾನ ವರ್ಷದ ದುಲ್‍ಹಜ್ಜ್ ತಿಂಗಳಲ್ಲಿ ಆ ಪುಣ್ಯ ಭವನದ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ನಾನು ಹಾಜರಿದ್ದೇನೆ!
ಚಾಂದ್ರಮಾನ ವರ್ಷದ ಕೊನೆಯ ತಿಂಗಳಾದ ದುಲ್‍ಹಜ್ಜ್ ನಲ್ಲಿ ಜಗತ್ತಿನ ಏಕದೇವ ವಿಶ್ವಾಸಿಗಳ ಕೇಂದ್ರವಾದ ಈ ಭವನದಲ್ಲಿ ಒಂದು ವಿಶ್ವ ಸಮ್ಮೇಳನವೇ ಏರ್ಪಡುತ್ತದೆ. ಎಲ್ಲರೂ ಅಲ್ಲಾಹನ ಕರೆಗೆ ಓಗೊಡುತ್ತಾ,
“ನಾನು ಹಾಜರಿದ್ದೇನೆ, ಅಲ್ಲಾಹನೇ ನಾನು ಹಾಜರಿದ್ದೇನೆ. ನಾನು ಹಾಜರಿದ್ದೇನೆ, ನಿನಗಾರೂ ಭಾಗೀದಾರರಿಲ್ಲ, ನಾನು ಹಾಜರಿದ್ದೇನೆ. ಖಂಡಿತವಾಗಿಯೂ ಸ್ತುತಿಸ್ತೋತ್ರಗಳೂ ಅನುಗ್ರಹಗಳೂ ಆಧಿಪತ್ಯವೂ ನಿನಗೇ ವಿೂಸಲು. ನಿನಗಾರೂ ಭಾಗೀದಾರರಿಲ್ಲ.”
ಎಂಬ ಘೋಷಣೆಯೊಂದಿಗೆ ಮಕ್ಕಾ ಪಟ್ಟಣದತ್ತ ಧಾವಿಸುತ್ತಾರೆ. ಪುರುಷರು ಹೊಲಿಗೆಯಿಲ್ಲದ ಕೇವಲ ಎರಡು ಬಿಳಿ ವಸ್ತ್ರಗಳನ್ನು ಧರಿಸಿರುತ್ತಾರೆ. ಒಂದನ್ನು ಲುಂಗಿಯಂತೆ ಉಟ್ಟುಕೊಂಡು ಇನ್ನೊಂದನ್ನು ಹೆಗಲ ಮೇಲೆ ಹೊದ್ದುಕೊಳ್ಳುತ್ತಾರೆ. ಸ್ತ್ರೀಯರು ಮುಖ ಮತ್ತು ಹಸ್ತಗಳನ್ನು ಬಿಟ್ಟು ಉಳಿದ ದೇಹವನ್ನು ಬಿಳಿ ವಸ್ತ್ರದಿಂದ ಪೂರ್ಣ ಮುಚ್ಚಿಕೊಳ್ಳುತ್ತಾರೆ.
ಬಿಳಿಯರು, ಕರಿಯರು, ಹಳದಿ ವರ್ಣದವರು, ಅರಬರು, ತುರ್ಕರು, ಭಾರತೀಯರು, ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ, ಯೂರೋಪ್ ಮತ್ತು ಏಷ್ಯಾ ಖಂಡದವರು. ಜಗತ್ತಿನ ಎಲ್ಲ ಭಾಷೆಗಳನ್ನಾಡುವವರು. ಶ್ರೀಮಂತರು, ಬಡವರು, ರಾಜರು, ರಾಷ್ಟ್ರಾಧ್ಯಕ್ಷರುಗಳು, ಮಂತ್ರಿಗಳು, ಪ್ರಜೆಗಳು, ವಿದ್ಯಾವಂತರು, ಅವಿದ್ಯಾವಂತರು ಎಲ್ಲರೂ ಒಂದೇ ಸಮವಸ್ತ್ರ ಧರಿಸಿ ಒಂದೇ ಘೋಷಣೆಯನ್ನು ಕೂಗುತ್ತಾ ಹಜ್ಜ್ ನ ವಿಧಿ ಕರ್ಮಗಳನ್ನು ನೆರವೇರಿಸುವ ದೃಶ್ಯ ಎಂತಹ ಮನುಷ್ಯನ ಮನಸ್ಸಿನಿಂದಲೂ ಜನಾಂಗೀಯ, ರಾಷ್ಟ್ರೀಯ, ಭಾಷೀಯ, ವಂಶೀಯ, ವರ್ಣೀಯ, ವರ್ಗೀಯ ಮೇಲ್ಮೆಗಳ ಮತ್ತು ಪಕ್ಷಪಾತಗಳ ಮಿಥ್ಯ ಕಲ್ಪನೆಗಳನ್ನು ಕಿತ್ತೆಸೆಯಲು ಪರ್ಯಾಪ್ತವಿದೆ.

ಲಕ್ಷೋಪಲಕ್ಷ ಜನರು ನೆರೆಯುವ ಈ ವಾರ್ಷಿಕ ಹಜ್ಜ್ ಯಾತ್ರೆಯಲ್ಲಿ ವಾದ್ಯ ಘೋಷಗಳಾಗಲೀ, ಆಡಂಬರದ ಆಚರಣೆಗಳಾಗಲೀ, ಅಪವ್ಯಯ ಕಂದಾಚಾರಗಳಾಗಲೀ ಇಲ್ಲ. ಯಾವುದೇ ರೀತಿಯ ಜಗಳವಾಗಲೀ, ಗಲಭೆ ಗದ್ದಲವಾಗಲೀ, ಉತ್ಸವ-ಜಾತ್ರೆಗಳಲ್ಲಿ ಸಾಮಾನ್ಯವಾಗಿರುವ ಮನೋರಂಜನಾ ಕಾರ್ಯಕ್ರಮಗಳಾಗಲೀ, ಆಟ ವಿನೋದಗಳಾಗಲೀ ಇಲ್ಲ. ಸಾಂಸ್ಕ್ರತಿಕ ಕಾರ್ಯಕ್ರಮದ ಹೆಸರಲ್ಲಿ ನಡೆಯುವ ನೃತ್ಯ-ಸಂಗೀತಗಳಾಗಲೀ, ಸ್ತ್ರೀ-ಪುರುಷರ ಅನಿರ್ಬಂಧಿತ ಮಿಲನಗಳಾಗಲೀ ಇಲ್ಲಿ ನಡೆಯುವುದಿಲ್ಲ. ಸ್ತ್ರೀಯೂ ಮುಖ ಮತ್ತು ಹಸ್ತಗಳನ್ನು ಬಿಟ್ಟು ದೇಹದ ಉಳಿದ ಎಲ್ಲ ಭಾಗಗಳನ್ನೂ ಉಬ್ಬು-ತಗ್ಗುಗಳು ಗೋಚರಿಸದಂತೆ ಮುಚ್ಚಿಕೊಳ್ಳಬೇಕಾದುದು ಕಅಬಾ ಭವನದೊಳಗೂ ಕಡ್ಡಾಯವಾಗಿದೆ. ಪತಿ-ಪತ್ನಿಯರು ಕೂಡಾ ಪರಸ್ಪರರೊಂದಿಗೆ ಕಾಮಾಸಕ್ತಿಯ ಮಾತು ಕೃತಿಗಳನ್ನು ಪೂರ್ಣವಾಗಿ ವರ್ಜಿಸಬೇಕು.

ಕಅಬಾ ಪ್ರದಕ್ಷಿಣೆ

ಕಅಬಾ ಭವನದ ತವಾಫ್ ಹಜ್ಜ್ ಕರ್ಮದ ಒಂದು ಕಡ್ಡಾಯ ವಿಧಿಯಾಗಿದೆ. ಕಅಬಾ ಭವನಕ್ಕೆ ಏಳು ಬಾರಿ ಕಾಲ್ನಡಿಗೆಯಿಂದ ಸುತ್ತು ಬರುವುದಕ್ಕೆ ತವಾಫ್ ಎನ್ನಲಾಗುತ್ತದೆ. ನಾಲ್ಕು ಗೋಡೆಗಳಿರುವ ಈ ಭವನದ ಪ್ರದಕ್ಷಿಣೆಯನ್ನು ಎಲ್ಲಿಂದ ಆರಂಭಿಸಬೇಕೆಂದು ಸೂಚಿಸಲು ಅದರ ಒಂದು ಮೂಲೆಯಲ್ಲಿ ಎರಡು ಗೋಡೆಗಳು ಸೇರುವ ಕಡೆ ಒಂದು ಕರಿ ಶಿಲೆಯನ್ನು ಆಳೆತ್ತರದಲ್ಲಿ ಗೋಡೆಗೆ ಜೋಡಿಸಿ ಇಡಲಾಗಿದೆ. ಇದನ್ನು ‘ಹಜರುಲ್ ಅಸ್ವದ್’ ಎನ್ನುತ್ತಾರೆ. ‘ಕಪ್ಪು ಕಲ್ಲು’ ಎಂಬುದೇ ‘ಹಜರುಲ್‍ಅಸ್ವದ್’ನ ಅರ್ಥ. ಆ ಕಪ್ಪು ಶಿಲೆಯು ಪ್ರವಾದಿ ಇಬ್ರಾಹೀಮ್(ಅ) ನಿರ್ಮಿಸಿದ ಕಅಬಾ ಭವನದ ಒಂದು ಭಾಗವಾಗಿತ್ತು. ಇಂದಿನ ತನಕವೂ ಅದನ್ನು ಉಳಿಸಿಕೊಳ್ಳಲಾಗಿದೆ. ಒಂದು ತವಾಫ್ ಆಗಬೇಕಾದರೆ ಏಳು ಸಲ ಪ್ರದಕ್ಷಿಣೆ ಬರಬೇಕು. ಒಂದು ಪ್ರದಕ್ಷಿಣೆಯು ‘ಹಜರುಲ್ ಅಸ್ವದ್’ನಿಂದ ಆರಂಭಗೊಂಡು ಅಲ್ಲಿಗೇ ಕೊನೆಗೊಳ್ಳುತ್ತದೆ. ತೀವ್ರ ಜನಸಂದಣಿಯಲ್ಲಿಯೂ ಪ್ರದಕ್ಷಿಣೆಯ ಆರಂಭ ಮತ್ತು ಅಂತ್ಯ ತಿಳಿಯುವಂತಾಗಲು ಪ್ರತಿಸಲ ಪ್ರದಕ್ಷಿಣೆ ಬರುವಾಗ ‘ಹಜರುಲ್ ಅಸ್ವದ್’ ಅನ್ನು ಚುಂಬಿಸಬೇಕು ಅಥವಾ ಅದರೆಡೆಗೆ ಕೈ ಸನ್ನೆ ಮಾಡಬೇಕು ಎಂಬ ನಿಯಮವಿದೆ.

‘ಹಜರುಲ್ ಅಸ್ವದ್’ ಕೇವಲ ಒಂದು ಕರಿಯ ಶಿಲೆ. ಅದಕ್ಕೆ ಯಾವುದೇ ವಸ್ತುವಿನ ಆಕಾರವಿಲ್ಲ. ಅದು ಆರಾಧ್ಯವೋ ಪೂಜ್ಯವೋ ಅಲ್ಲ. ಪ್ರವಾದಿವರ್ಯರ(ಸ) ಆಪ್ತ ಸಂಗಾತಿಗಳಲ್ಲೊಬ್ಬರೂ ದ್ವಿತೀಯ ಖಲೀಫರೂ ಆದ ಹ. ಉಮರ್ ಫಾರೂಕ್(ರ) ಒಮ್ಮೆ ‘ಹಜರುಲ್ ಅಸ್ವದ್’ನ ಕುರಿತು ಈ ರೀತಿ ಹೇಳಿರುವುದು ಇತಿಹಾಸ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ:

“ಹಜರುಲ್ ಅಸ್ವದ್! ನೀನು ಒಂದು ಶಿಲೆ ಮಾತ್ರ. ಯಾರಿಗೂ ಲಾಭ-ನಷ್ಟ ಉಂಟು ಮಾಡಲು ನಿನ್ನಿಂದಾಗದು. ಪ್ರವಾದಿವರ್ಯರು(ಸ) ಚುಂಬಿಸಿದ ಕಾರಣಕ್ಕೆ ಮಾತ್ರ ನಿನ್ನನ್ನು ನಾನು ಚುಂಬಿಸುತ್ತಿದ್ದೇನೆ. ಅನ್ಯಥಾ ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ.” (ಬುಖಾರಿ-ಮುಸ್ಲಿಮ್)
ಇದರಿಂದ ‘ಹಜರುಲ್ ಅಸ್ವದ್’ ಪೂಜ್ಯವೆಂಬ ಭಾವನೆಯನ್ನು ಸಂಪೂರ್ಣ ನಿರಾಕರಿಸಿದಂತಾಗುತ್ತದೆ. ಪ್ರವಾದಿ ಇಬ್ರಾಹೀಮ್‍ರಿಂದ(ಅ) ಪ್ರವಾದಿ ಮುಹಮ್ಮದ್‍ರವರ(ಸ)
ತನಕ ಅನೇಕ ಪ್ರವಾದಿಗಳು, ಪ್ರವಾದಿಯ ಲಕ್ಷಗಟ್ಟಲೆ ಸಂಗಾತಿಗಳು(ರ), ಕೋಟಿಗಟ್ಟಲೆ ಮಹಾತ್ಮರು, ಪುಣ್ಯ ಪುರುಷರು, ಧರ್ಮನಿಷ್ಠರು ಅದನ್ನು ಚುಂಬಿಸಿದ್ದಾರೆಂಬುದೇ ಅದಕ್ಕಿರುವ ಪ್ರಾಮುಖ್ಯತೆ. ಅದರ ಚುಂಬನವು ಹಜ್ಜ್ ನ ಕಡ್ಡಾಯ ವಿಧಿಯೇನಲ್ಲ. ಅದೊಂದು ಐಚ್ಛಿಕ ಪುಣ್ಯ ಕಾರ್ಯ ಮಾತ್ರ. ಅದನ್ನು ಚುಂಬಿಸದೆ ಅದರೆಡೆಗೆ ಸನ್ನೆ ಮಾಡಿ ಅಥವಾ ಅದನ್ನು ನೋಡಿ ತವಾಫ್ ಆರಂಭಿಸಿದರೂ ಸಾಕಾಗುತ್ತದೆ.

ಹಜ್ಜ್ ಯಾತ್ರೆಯಾದ್ಯಂತ ಸತ್ಯವಿಶ್ವಾಸಿಗಳು ಮಾಡುವ ಮುಖ್ಯ ಪ್ರಾರ್ಥನೆ ಹೀಗಿದೆ:

“ನಮ್ಮ ಪ್ರಭೂ! ನಮಗೆ ಇಹಲೋಕದಲ್ಲೂ ಒಳಿತನ್ನು ದಯಪಾಲಿಸು, ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನರಕಾಗ್ನಿಯ ಶಿಕ್ಷೆಯಿಂದ ನಮ್ಮನ್ನು ರಕ್ಷಿಸು.”
ಈ ಪ್ರಾರ್ಥನೆಯಲ್ಲಿ ಬಾಳಿನ ಬಗ್ಗೆ ಸತ್ಯವಿಶ್ವಾಸಿಯ ಕಲ್ಪನೆಯು ಅಭಿವ್ಯಕ್ತವಾಗುತ್ತದೆ. ಅವನು ಲೋಕವನ್ನೂ ಅದರ ಸುಖಗಳನ್ನೂ ತ್ಯಜಿಸುವ ವೈರಾಗಿಯಲ್ಲ. ಅಂತೆಯೇ ಪರಲೋಕದ ಶಾಶ್ವತ ಜೀವನದ ಬಗ್ಗೆ ನಂಬಿಕೆಯಿಲ್ಲದ ಅಥವಾ ಅದರ ಬಗ್ಗೆ ನಿಶ್ಚಿಂತನಾಗಿ ಲೌಕಿಕ ಸುಖಾಡಂಬರಗಳಲ್ಲೇ ತಲ್ಲೀನನಾಗುವ ಭೌತಿಕವಾದಿಯೂ ಅಲ್ಲ. ಅವನು ಇಹ-ಪರಗಳೆರಡರ ಹಿತವನ್ನು ಬಯಸುತ್ತಾ ಅದನ್ನು ಗಳಿಸಲು ಶ್ರಮಿಸುತ್ತಿರುವ ಸಮತೋಲನವಾದಿ ಎಂಬುದಕ್ಕೆ ಪವಿತ್ರ ಕುರ್‍ಆನ್ ಕಲಿಸಿರುವ ಈ ಪ್ರಾರ್ಥನಾ ನುಡಿಗಳೇ ಸಾಕ್ಷಿ.

ಬಲಿದಾನ

ಪ್ರಾಣಿ ಬಲಿಯೂ ಹಜ್ಜ್ ನ ವಿಧಿಗಳಲ್ಲಿ ಒಂದು ಪ್ರಮುಖ ವಿಧಿ. ಮುಸ್ಲಿಮರಿಗೆ ತಿನ್ನಲು ಅನುಮತಿಯಿರುವ ಜಾನುವಾರುಗಳ ಪೈಕಿ ಯಾವುದಾದರೊಂದು ಜಾನುವಾರನ್ನು ಹಜ್ಜ್ ಯಾತ್ರಿಕನು ಬಲಿ ನೀಡಬೇಕು. ಆದರೆ ಈ ಬಲಿದಾನವು ಕಅಬಾ ಭವನದಲ್ಲಾಗಲೀ ಅದರ ಸುತ್ತಲಿರುವ ‘ಮಸ್ಜಿದುಲ್ ಹರಾಮ್’ ಎಂಬ ಪವಿತ್ರ ಮಸೀದಿಯಲ್ಲಾಗಲೀ ಅಥವಾ ಅದರ ಪರಿಸರದಲ್ಲಾಗಲೀ ನೀಡುವುದಲ್ಲ. ಬದಲಾಗಿ ‘ಮಿನಾ’ದ ಮೈದಾನದಲ್ಲಿ ಈ ಬಲಿದಾನವನ್ನು ನೀಡಲಾಗುತ್ತದೆ. ಹ. ಇಬ್ರಾಹೀಮ್‍ರವರು(ಅ) ಅಲ್ಲಾಹನ ಆಜ್ಞೆಯ ಮೇರೆಗೆ ತಮ್ಮ ವೃದ್ಧಾಪ್ಯದ ಏಕೈಕ ಆಸರೆಯಾಗಿದ್ದ ಪುತ್ರ ಇಸ್ಮಾಈಲ್‍ರನ್ನು(ಅ) ಬಲಿ ಕೊಡಲು ಸಿದ್ಧರಾದ ಘಟನೆಯ ಸ್ಮರಣಾರ್ಥವಾಗಿ ಈ ಬಲಿದಾನವನ್ನು ನೀಡಲಾಗುತ್ತದೆ. ಬಲಿ ನೀಡಿದ ಜಾನುವಾರಿನ ರಕ್ತವಾಗಲೀ ಅದರ ಮಾಂಸವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಆತನಿಗೆ ತಲುಪುವುದು ಸತ್ಯವಿಶ್ವಾಸಿಯ ಧರ್ಮನಿಷ್ಠೆ ಮತ್ತು ದೇವಭಕ್ತಿ ಮಾತ್ರ ಎಂದು ಪವಿತ್ರ ಕುರ್‍ಆನ್ ಸ್ಪಷ್ಟಪಡಿಸುತ್ತದೆ. ಈ ಪ್ರಾಣಿ ಬಲಿಯನ್ನು ಕೇವಲ ದೇವ ಭಕ್ತಿಯ ಸಂಕೇತದ ರೂಪದಲ್ಲಿ ಮಾಡಿ ಅದರ ಮಾಂಸವನ್ನು, ಸ್ವತಃ ಬಲಿ ನೀಡಿದವನೂ ತಿನ್ನಬೇಕು ಮತ್ತು ಬಂಧುಗಳಿಗೂ ಬಡಬಗ್ಗರಿಗೂ ಹಂಚಬೇಕು ಎಂದು ಆಜ್ಞಾಪಿಸಲಾಗಿದೆ. ಅಂತೆಯೇ ಲಕ್ಷಗಟ್ಟಲೆ ಯಾತ್ರಾರ್ಥಿಗಳು ಬಲಿ ನೀಡಿದ ಪ್ರಾಣಿಗಳ ಮಾಂಸವನ್ನು ಸೌದಿ ಸರಕಾರವು ಜಗತ್ತಿನ ಬಡ ರಾಷ್ಟ್ರಗಳಿಗೆ ತಲುಪಿಸಿ ಧರ್ಮಾರ್ಥ ವಿತರಣೆಯ ವ್ಯವಸ್ಥೆ ಮಾಡುತ್ತದೆ.

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …