@ ಶೈಖ್ ಮುಹಮ್ಮದ್ ಕಾರಕುನ್ನು
ಅಮೇರಿಕನ್ ಕಾಂಗ್ರೆಸ್‍ನ ಡೆಮಾಕ್ರಟಿಕ್ ನಾಲ್ವರು ಮಹಿಳಾ ಅಭ್ಯರ್ಥಿಗಳ ವಿರುದ್ಧ, ಅವರ ಧರ್ಮದ ವಿರುದ್ಧ ಡೊನಾಲ್ಡ್ ಟ್ರಂಪ್ ಮಾತಾಡಿದ್ದು ಅಂದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಮಿನಸೋಟ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಇಲ್ಹಾನ್ ಉಮರ್, ಮಿಶಿಗನ್‍ನ ಅಭ್ಯರ್ಥಿ ರಾಶಿದಾ ತಾಲಿಬ್, ನ್ಯೂಯಾರ್ಕ್ ಅಭ್ಯರ್ಥಿ ಅಲೆಗ್ಸಾಂಡ್ರಿಯಾ ಮತ್ತು ಮೆಸ್ಸಾಚುಸೆಟ್ಸ್ ಅಭ್ಯರ್ಥಿ ಅಯಾನಾ ಪ್ರೆಸ್ಲಿಯವರು ಟ್ರಂಪ್ ನಡೆಸುತ್ತಿದ್ದ ಈ ಕೋಮು ಆಧಾರಿತ ದಾಳಿಗೆ ತುತ್ತಾಗಿದ್ದ ನಾಲ್ವರು ಮಹಿಳೆಯರು. ಸಾಮಾಜಿಕ ಜಾಲತಾಣದಲ್ಲಿ ದ ಸ್ಕ್ವಾಡ್ ಎಂಬ ಹೆಸರಿನಲ್ಲಿ ಈ ನಾಲ್ವರು ಮಹಿಳೆಯರು ಟ್ರಂಪ್‍ರ ನಿಲುವುಗಳನ್ನು ತೀವ್ರವಾಗಿ ವಿಮರ್ಶಿಸುತ್ತಿದ್ದರು. ವಿಶೇಷವಾಗಿ ಈ ನಾಲ್ವರು ವಲಸಿಗರ ವಿರುದ್ಧ ಟ್ರಂಪ್ ತಾಳುತ್ತಿದ್ದ ಕಠೋರ ನಿಲುವುಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ವಲಸಿಗರಾಗಿದ್ದ ಈ ನಾಲ್ವರ ವಿರುದ್ದ ಟ್ರಂಪ್ ಕೂಡಾ ಅವರ ಧರ್ಮಾಧಾರಿತವಾಗಿ ಗುಲ್ಲು ಎಬ್ಬಿಸುವಂತೆ ಮಾಡಿದ್ದರು. ಅಮೇರಿಕಾದಲ್ಲಿ ಬದುಕಲು ಆಗುವುದಿಲ್ಲವೆಂದಾದರೆ ನಿಮ್ಮ ಸ್ವಂತ ದೇಶಗಳಿಗೆ ಮರಳಿರಿ, ಎಂಬಂತೆ `ಗೋ ಬ್ಯಾಕ್’ ಎಂದು ಟ್ವೀಟ್ ಮಾಡಿದ್ದರು. ಇದರಲ್ಲಿ ಇಲ್ಹಾನ್ ಉಮರ್ ತೀವ್ರವಾದ ಟೀಕೆಗಳಿಗೆ ಗುರಿಯಾಗಬೇಕಾಯಿತು. ಟ್ರಂಪ್ ಕೆಂಗಣ್ಣಿಗೆ ಗುರಿಯಾದ ನಾಲ್ವರು ಮಹಿಳೆಯರು ಬಿಳಿಯರಲ್ಲ, ಅವರು ಅಮೇರಿಕನ್ನರಲ್ಲ ಎಂಬ ಕಾರಣಕ್ಕಾಗಿ ಸಾರ್ವಜನಿಕವಾಗಿ ಅವರ ವಿರುದ್ದ ಟೀಕಾಸ್ತ್ರಗಳನ್ನು ಎಸೆದು ವಿರೋಧಿಗಳನ್ನು ಸಂಘಟಿಸುವ ಶ್ರಮದಲ್ಲಿ ಟ್ರಂಪ್ ನಿರತರಾಗಿದ್ದರು. ಆದರೆ ಅಮೇರಿಕದ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ನಾಲ್ವರು ಕೂಡಾ ಜಯಭೇರಿ ಬಾರಿಸಿದರು. ಇದು ಅಮೇರಿಕಾದಲ್ಲಿ ನಡೆಯುತ್ತಿರುವಂತಹ ಜನಾಂಗವಾದಿ ಕರಿಯರ ವಿರುದ್ಧದ ಅಕ್ರಮ ಮತ್ತು ಬಿಳಿಯರ ಮೇಧಾವಿತ್ವದ ವಿರುದ್ಧದ ಜಯವಾಗಿ ಪರಿಗಣಿಸಲ್ಪಡುತ್ತಿದೆ.
ಅಮೇರಿಕನ್ ಕಾಂಗ್ರೆಸ್‍ಗೆ ನಡೆದ ಚುನಾವಣೆಯಲ್ಲಿ ಇಲ್ಹಾನ್ ಉಮರ್ ದ್ವಿತೀಯ ಬಾರಿಗೆ ಚುನಾಯಿತರಾಗುತ್ತಿದ್ದಾರೆ. ಮಿನಿಪಾಲಿಸಿಯ ಮಿನ್ಸೋಟಾದಿಂದ ಅವರು ಗೆಲುವು ಸಾಧಿಸಿದ್ದರು. ರಿಪಬ್ಲಿಕನ್ ಅಭ್ಯರ್ಥಿ ಲೇಸೀ ಜಾನ್ಸನ್‍ರನ್ನು ಗಣನೀಯ ಮತಗಳ ಆಧಾರದಲ್ಲಿ ಸೋಲಿಸಿದ್ದರು. ಇಲ್ಹಾನ್ ಉಮರ್ ಅಮೇರಿಕಾದ ಕಾಂಗ್ರಸ್‍ಗೆ ಚುನಾಯಿತರಾಗುತ್ತಿರುವ ಎರಡನೇಯ ಮುಸ್ಲಿಮ್ ಮಹಿಳೆ ಮತ್ತು ಮೊತ್ತ ಮೊದಲ ಸೋಮಾಲಿಯನ್ ವಂಶಸ್ತರಾಗಿದ್ದಾರೆ. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಈಕೆ ಅಮೇರಿಕಾದವಳಲ್ಲ ಎಂದು ಟ್ರಂಪ್ ಬಹಿರಂಗವಾಗಿ ಅವಮಾನಿಸಿದ್ದರು. ಆದರೆ ಟ್ರಂಪ್ ಮಹಾ ಕೋಮುವಾದಿಯೆಂದು ಬಹಿರಂಗವಾಗಿ ಹೇಳಿ ಇಲ್ಹಾನ್ ಉಮರ್ ಟೀಕಾಸ್ತ್ರ ಎಸೆದಿದ್ದರು. ಇಸ್ರೇಲನ್ನು ಕುರುಡಾಗಿ ಬೆಂಬಲಿಸುತ್ತಿದ್ದ ಅಮೇರಿಕಾದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದ ಕಾರಣಕ್ಕಾಗಿ ರಿಪಬ್ಲಿಕ್ ಪಾರ್ಟಿಯಿಂದ ಮಾತ್ರವಲ್ಲ ಸ್ವಕ್ಷೀಯರಿಂದಲೂ ಟೀಕೆಗೆ ಇಲ್ಹಾನ್ ಉಮರ್ ಗುರಿಯಾಗಬೇಕಾಯಿತು. ಅಮೇರಿಕಾದ ಇಸ್ರೇಲ್ ಪರ ನಿಲುವಿನಲ್ಲಿ ಝಿಯೋನಿಸ್ಟ್ ಲಾಬಿಯ ಹಣದ ಕೈವಾಡವಿದೆಯೆಂಬ ಇಲ್ಹಾನ್ ಆರೋಪಗಳು ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಇಸ್ರೇಲ್ ಬೆಂಬಲಿಸುವವರ ದೊಡ್ಡ ವಿಭಾಗವೊಂದು ಇರುವಂತಹ ಅಮೇರಿಕಾದಲ್ಲಿ ಇಸ್ರೇಲ್ ವಿರುದ್ಧದ ನಿಲುವು ಎಂದರೆ ಸೆಮಿಟಿಕ್ ವಿರುದ್ಧದ ನಿಲುವು ಎಂದು ಪರಿಗಣಿಸುವಂತಹ ಅಮೇರಿಕಾದಲ್ಲಿದ್ದು ಕೊಂಡೇ ಅದನ್ನು ತೀವ್ರವಾಗಿ ಟೀಕಿಸುವ ಧೈರ್ಯ ತೋರಿಸಿದ್ದು ಸಾಮಾನ್ಯ ವಿಚಾರವಲ್ಲ.
ಅಸ್ಸಲಾಮು ಅಲೈಕುಮ್, ಅಲ್‍ಹಮ್ದುಲಿಲ್ಲಾಹ್ ಎಂದು ಪ್ರಾರಂಭಿಸುತ್ತಾ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಅಮೇರಿಕಾದ ಇತಿಹಾಸದಲ್ಲಿಯೇ ಅತೀ ದೊಡ್ಡ ಇಸ್ಲಾಮೋಫೋಬಿಕ್ ಚುನಾವಣೆ ಎಂದೇ ಪ್ರಸಿದ್ಧವಾದ ಚುನಾವಣೆಯ ಬಳಿಕ ಒಂದು ವೇದಿಕೆಯಲ್ಲಿ ಸಲಾಮ್ ಹೇಳುತ್ತಾ ಮಾತುಗಳನ್ನಾಡುವುದು ಕೂಡಾ ನನ್ನ ಯಶಸ್ಸಿನ ಭಾಗವಾಗಿ ಅನುಭವವಾಗುತ್ತಿದೆಯೆಂದು ಇಲ್ಹಾನ್ ಉಮರ್ ಹೇಳುತ್ತಿದ್ದಾರೆ.
ಚುನಾವಣೆಯಲ್ಲಿ ಗೆದ್ದ ಬಳಿಕ ತನ್ನ ಮೊತ್ತ ಮೊದಲ ಭಾಷಣದಲ್ಲಿ ತಾನು ಅರಿತ ಅಮೇರಿಕಾದ ಕುರಿತು ಬಹಳ ಸೊಗಸಾದ ಭಾಷಣ ಮಾಡಿದ್ದರು. ನಾನು ಕೇವಲ ಟೀಕೆ ಮಾಡುತ್ತಿಲ್ಲವೆಂದೂ ಅಮೇರಿಕದಲ್ಲಿ ಬದುಕಲು ಆಗಮಿಸುತ್ತಿರುವ ವಲಸಿಗರು ಅನೇಕ ಬಾರಿ ಜನಾಂಗೀಯತೆಗೆ ಗುರಿಯಾಗಿ ತಮ್ಮ ದೇಶದಲ್ಲಿಯೇ ಪರಕೀಯರಾಗಿ ಜೀವಿಸಬೇಕಾಗಿ ಬರುವುದು ನನ್ನನ್ನು ಹೆಚ್ಚು ಘಾಸಿಗೊಳಿಸಿದೆ. ಕರಿಯ ಜನಾಂಗದಿಂದ ಸಂಸತ್ತಿಗೆ ಆಯ್ಕೆಯಾಗುತ್ತಿರುವ ಮೊದಲ ಮಹಿಳೆ, ಹಿಜಾಬ್ ಧರಿಸುತ್ತಿರುವ ಮೊದಲ ಮಹಿಳೆ, ಕಾಂಗ್ರೆಸ್ (ಸಂಸತ್ತು)ಗೆ ಆಯ್ಕೆಯಾಗುತ್ತಿರುವ ಪ್ರಥಮ ವಲಸಿಗ ಮಹಿಳೆ, ಮುಂತಾದ ಅನೇಕ ವಿಶೇಷತೆಗಳು ತನಗಿದೆಯೆಂದು ಅವರು ಭಾವನಾತ್ಮಕವಾಗಿ ಹೇಳಿದರು.
2016ರಲ್ಲಿ ಅಮೇರಿಕನ್ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಯಾಗಿದ್ದಾಗ ಅಮೇರಿಕಕ್ಕೆ ಪ್ರವೇಶಿಸುವ ಎಲ್ಲಾ ಮುಸ್ಲಿಮರನ್ನು ತಡೆಯಬೇಕೆಂದು ಟ್ರಂಪ್ ಕುಪ್ರಚಾರ ನಡೆಸಿದ್ದರು. ಅಧ್ಯಕ್ಷರಾಗಿ ಚುನಾಯಿತರಾದ ಕೂಡಲೇ ವಿವಿಧ ಮುಸ್ಲಿಮ್ ಬಾಹುಳ್ಯವಿರುವ ರಾಷ್ಟ್ರಗಳಿಂದ ಅಮೇರಿಕಕ್ಕೆ ಬರುವ ಮುಸ್ಲಿಮರಿಗೆ ನಿಷೇಧನ್ನೂ ಹೇರಿದ್ದರು. ಈ ಮಧ್ಯೆ ವಾಷಿಂಗ್ಟನ್ ನಿಂದ ಇಲ್ಹಾನ್ ಉಮರ್ ರ ಸದ್ದು ಮೊಳಗ ತೊಡಗಿತು. ಇದು ಟ್ರಂಪ್‍ರನ್ನು ಕೆರಳಿಸಿತ್ತು. ಇಲ್ಹಾನ್ ಉಮರ್ ಗೆ ಭಯೋತ್ಪಾದಕರ ಜೊತೆ ಸಂಬಂಧವಿದೆಯೆಂದೂ ಆಕೆ ಅಮೇರಿಕಾವನ್ನು ದ್ವೇಷಿಸುತ್ತಾಳೆಂದೂ ಬಹಿರಂಗವಾಗಿ ಹೇಳಿದ್ದರು. ಆದರೆ ಇಲ್ಹಾನ್ ಉಮರ್ ಗೆ ಅಮೇರಿಕಾದ ಜನತೆಯಲ್ಲಿ ನಂಬಿಕೆ ಹೆಚ್ಚಾಗುತ್ತಾ ಹೋಯಿತು. ಅವರ ಹೋರಾಟ ಮತ್ತು ಅದಕ್ಕೆ ಜನರು ನೀಡಿದ ಬೆಂಬಲದ ಫಲವೇ ಈ ವಿಜಯವಾಗಿದೆ.
ಸೋಮಾಲಿಯಾದಲ್ಲಿ ಜನ್ಮತಾಳಿದ ಇಲ್ಹಾನ್ ಉಮರ್ ಎಂಟು ವರ್ಷದಲ್ಲಿದ್ದಾಗ ತನ್ನ ದೇಶದಲ್ಲಿ ಉದ್ಭವಿಸಿದ ಆಂತರಿಕ ಕಲಹದ ಸಂದರ್ಭದಲ್ಲಿ ಕುಟುಂಬದ ಜೊತೆಗೆ ದೇಶ ತೊರೆಯಬೇಕಾಯಿತು. ಹಾಗೆಯೇ ಅಮೇರಿಕಾ ಪ್ರವೇಶಿಸುವ ಮೊದಲು ಕೆನ್ಯಾದ ಒಂದು ನಿರಾಶ್ರಿತರ ಕೇಂದ್ರದಲ್ಲಿ ನಾಲ್ಕು ವರ್ಷ ತಂಗಬೇಕಾಯಿತು. 1997ರಲ್ಲಿ ಮಿನಿಯೋ ಪಾಲಿಸಿಗೆ ಕುಟುಂಬದ ಜೊತೆ ಬಂದರು. ಅಲ್ಲಿ ಬಿಳಿಯರ ಮಧ್ಯೆ ಇರಬೇಕಾದುದರಿಂದ ಸೊಮಾಲಿಯದವರಾದ್ದರಿಂದ ಹಲವು ಕಿರುಕುಳಗಳನ್ನು ಅನುಭವಿಸಬೇಕಾಯಿತು. ತನ್ನ ತಾತನ ಮುಖಾಂತರ ಅವರು ರಾಜಕೀಯ ರಂಗ ಪ್ರವೇಶಿಸಿದರು. ಅಮೇರಿಕಾದ ಪಾರ್ಲಿಮೆಂಟಲ್ಲಿ ಹಿಜಾಬ್ ಧರಿಸಿ ಪ್ರಮಾಣ ವಚನ ಸ್ವೀಕರಿಸಿದರು. ಹಿಜಾಬ್ ಏಕೆ ಧರಿಸುತ್ತೀರಿ ಎಂಬ ಪ್ರಶ್ನೆಗೆ ಇದು ನನ್ನ ವಿಶ್ವಾಸವನ್ನು ಬಹಿರಂಗವಾಗಿ ಪ್ರತಿನಿಧೀಕರಿಸುವ ಅಂಶವಾಗಿದೆ. ಅಮೇರಿಕದ ಮುಸ್ಲಿಮರಂತೆ ನನ್ನ ಮೇಲೆ ನಂಬಿಕೆಯಿಟ್ಟು ಪಾರ್ಲಿಮೆಂಟ್‍ಗೆ ಕಳುಹಿಸಿದ ಮತದಾರರ ಋಣ ತೀರಿಸಲು ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಇಲ್ಹಾನ್ ಉಮರ್ ತನ್ನ ಭಾಷಣದಲ್ಲಿ ಹೇಳಿದ್ದಾರೆ.
IslamKannada News Portal
