@ ಶಿಹಾಬುದ್ದೀನ್ ಇಬ್ನು ಹಂಝ
ಕೆಲವು ವರ್ಷಗಳ ಹಿಂದೆ ಕೇರಳದ ಕಡಲುಂಡಿಯಲ್ಲಿ ನಡೆದ ರೈಲು ಅಪಘಾತದ ಘಟನೆಯನ್ನು ಪ್ರಸ್ತಾಪಿಸಿ ಗೆಳೆಯ ಒಂದು ವಿಚಾರವನ್ನು ತಿಳಿಸಿದ್ದ. ಪ್ರಸ್ತುತ ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿದ್ದ ಆತ ಮನೆಯಿಂದ ಹೊರಡುವಾಗ ತಡವಾಗಿತ್ತು. ಗಡಿಬಿಡಿಯಿಂದ ರೈಲು ನಿಲ್ದಾಣದತ್ತ ಧಾವಿಸಿದ. ಓಡುತ್ತಾ ಬರುವಾಗ “ದೇವಾ ಆ ರೈಲು ಸಿಗುವಂತೆ ಮಾಡು ದೇವಾ” ಎಂದು ಪ್ರಾರ್ಥಿಸುತ್ತಾ ಲಗು ಬಗನೆ ಧಾವಿಸಿದ್ದ. ಆದರೆ ರೈಲು ನಿಲ್ದಾಣ ತಲುಪುವಷ್ಟರಲ್ಲಿ ರೈಲು ನಿಲ್ದಾಣದಿಂದ ಹೊರಟಿತ್ತು. ಅಯ್ಯೋ ನಾನು ಪ್ರಾರ್ಥಿಸಿದ್ದು ಫಲ ನೀಡಲಿಲ್ಲವಲ್ಲಾ ಎಂದು ಮನದೊಳಗೆ ಕಳವಳದಿಂದ ಗುನುಗುನಿಸಿದ್ದ. ಸರಿ ಇನ್ನು ಮುಂದಿನ ರೈಲೇ ಗತಿ ಎಂದು ನಿಲ್ದಾಣದ ಬೆಂಚಲ್ಲಿ ಕುಳಿತು ಕಾಯತೊಡಗಿದನು.
ಸ್ವಲ್ಪ ಹೊತ್ತು ಕಳೆಯುವಷ್ಟರಲ್ಲಿ ಜನರು ದಿಗ್ಬ್ರಾಂತರಾಗಿ ಪರಸ್ಪರ ಮಾತನಾಡ ತೊಡಗಿದ್ದರು. ತಾನು ಏರಲು ಸಾಧ್ಯವಾಗದೆ ಹೋಗಿದ್ದ ರೈಲು ಅವಘಡಕ್ಕೊಳಪಟ್ಟಿತ್ತು. ಸೇತುವೆಯಿಂದ ರೈಲು ಬೋಗಿ ಹೊಳೆಗೆ ಉರುಳಿ ಹಲವಾರು ಜನರು ಸಾವಿಗೀಡಾಗಿದ್ದರು.
ಆ ವ್ಯಕ್ತಿ “ರೈಲು ತಪ್ಪದೇ ಸಿಗಬೇಕೆಂದು ದೇವನಲ್ಲಿ ಮೊರೆಯಿಟ್ಟಿದ್ದ. ಪ್ರಯಾಣವು ಸುಖಮಯವಾಗಲೆಂಬ ಆ ವ್ಯಕ್ತಿಯ ಯಥಾರ್ಥವಾದ ಉದ್ದೇಶವನ್ನು ಅಲ್ಲಾಹನು ಸ್ವೀಕರಿಸಿದ್ದ. ನನಗೆ ರೈಲು ಏರಲು ಅವಕಾಶ ದೊರೆಯದೇ ಇದ್ದದ್ದು ದೊಡ್ಡ ಅನುಗ್ರಹವಾಗಿದೆಯೆಂದು ಆತ ತಡವಾಗಿ ಚಿಂತಿಸಿದನು.
ನಮ್ಮ ಪ್ರಾರ್ಥನೆಯ ಬಗ್ಗೆ ನಾವು ಸ್ವಲ್ಪ ಗಂಭೀರವಾಗಿ ಚಿಂತಿಸಬೇಕಾಗಿದೆ. ನಾವು ಏನನ್ನು ದೇವನಲ್ಲಿ ಮೊರೆಯಿಡುತ್ತಿದ್ದೇವೆಯೋ ಅದೇ ದೊರೆಯಬೇಕೆಂದಿಲ್ಲ. ಯಾಕೆಂದರೆ ಯಾಚಿಸುವ ನಮಗೆ ಅದರ ಭವಿಷ್ಯದ ಬಗ್ಗೆ ಅರಿವಿರುವುದಿಲ್ಲ. ಪ್ರಾರ್ಥನೆಗಳನ್ನು ಅಲ್ಲಾಹನು ಸ್ವೀಕರಿಸುತ್ತಾನೆ. ನನ್ನೊಂದಿಗೆ ಯಾಚಿಸಿರಿ. ನಾನು ಉತ್ತರ ನೀಡುತ್ತೇನೆಂದು ಅಲ್ಲಾಹನು ವಾಗ್ದಾನ ನೀಡಿದ್ದಾನೆ, ಆದರೆ ನಾವು ಕೇಳಿದ್ದನ್ನೇ ಕೊಡಬೇಕೆಂದಿಲ್ಲ. ಎಂಬುದನ್ನು ಮೇಲೆ ತಿಳಿಸಿದ ಉದಾಹರಣೆಗಳಿಂದ ತಿಳಿಯಬಹುದು.
ಕೆಲವೊಮ್ಮೆ ಕೇಳಿದುದಕ್ಕಿಂತ ಉತ್ತಮವಾದುದನ್ನೇ ನೀಡಬಹುದು. ಸಣ್ಣ ಮಗುವೊಂದು ಆಟವಾಡಲು ಬೆಂಕಿಯ ಉಂಡೆ ಬೇಕು ಎಂದು ಹಠ ಹಿಡಿಯುವಾಗ ವಾತ್ಸಲ್ಯ ಭರಿತಳಾದ ಮಾತೆಯು ಬೆಂಕಿಯ ಬದಲು ಆಟದ ಸಾಮಾನುಗಳನ್ನು ನೀಡಿದಂತೆ.
ಹಲವು ಬಾರಿ ನಮಗೆ ಬರಲಿಕ್ಕಿರುವ ಆಪತ್ತುಗಳಿಂದ ನಮ್ಮನ್ನು ಅಲ್ಲಾಹನು ಕಾಪಾಡುವನು. ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಪ್ರಾರ್ಥನೆಯು ಪರಲೋಕದಲ್ಲಿ ಪ್ರತಿಫಲಾರ್ಹವಾದ ಸಂಪಾದನೆಯಾಗಿರುತ್ತದೆ. ಯಾವುದೇ ಪ್ರಾರ್ಥನೆಯನ್ನು ಅಲ್ಲಾಹನು ನಿರಾಕರಿಸಲಾರ. ಅವನಲ್ಲಿ ಮಾತ್ರ ಯಾಚಿಸಿದರೆ ಜೊತೆಗೆ ನಾವು ಸೇವಿಸುವ ಆಹಾರದಲ್ಲಿ ನಿಷಿದ್ಧವಾದುದು ಬೆರೆಯದೇ ಇದ್ದರೆ.
ಒಮ್ಮೆ ಪ್ರವಾದಿವರ್ಯರು(ಸ) ತನ್ನ ಅನುಚರರ ಜೊತ ಸಂಚರಿಸುತ್ತಿರುವಾಗ ಅವರ ಮುಂದಿನಿಂದ ಓರ್ವರು ಹಾದು ಹೋದರು. ಅವರು ಹೋಗುತ್ತಿರುವಾಗ ತನ್ನೆರಡೂ ಕೈಗಳನ್ನೆತ್ತಿ ಮೊರೆಯಿಡುತ್ತಾ ಹೋಗುತ್ತಿದ್ದರು. ಅವರನ್ನು ನೋಡುವಾಗ ಓರ್ವ ಸದ್ಭಕ್ತನಂತೆ ಕಾಣುತ್ತದೆ. ಪ್ರಾರ್ಥಿಸುತ್ತಾ ಸಾಗುವ ಆ ವ್ಯಕ್ತಿಯನ್ನು ತೋರಿಸುತ್ತಾ ಪ್ರವಾದಿವರ್ಯರು(ಸ) ಹೇಳುತ್ತಾರೆ: “ಈ ವ್ಯಕ್ತಿಯ ಪ್ರಾರ್ಥನೆಯಿಂದ ಯಾವುದೇ ಪ್ರಯೋಜನವಿಲ್ಲ.”
ಓರ್ವ ಅಪ್ಪಟ ಭಕ್ತನಂತೆ ತೋರಿಕೆಯ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸಲಾರನು ಎಂದು ಪ್ರವಾದಿವರ್ಯರು(ಸ) ಹೇಳಿದಾಗ ಅನುಯಾಯಿಗಳು ಆಶ್ಚರ್ಯ ಚಕಿತರಾಗಿ ನೋಡಿದರು. ಪ್ರವಾದಿವರ್ಯರು(ಸ) ಮುಂದುವರಿಸಿದರು.
“ಅವರು ತಿನ್ನುವ ಆಹಾರವು ನಿಷಿದ್ಧವಾದುದು. ಅವರು ಧರಿಸುವ ಬಟ್ಟೆ ನಿಷಿದ್ಧವಾದುದು. ಅವರು ಕುಡಿಯುವ ಪಾನೀಯವೂ ನಿಷಿದ್ಧವಾದದ್ದು. ಅವರು ಬೆಳೆದು ಬಂದದ್ದೇ ನಿಷಿದ್ಧ ಸಂಪಾದನೆಯಿಂದ. ಹೀಗಿರುವಾಗ ಆ ವ್ಯಕ್ತಿಯ ಪ್ರಾರ್ಥನೆ ಹೇಗೆ ಸ್ವೀಕಾರವಾದೀತು?”
ತನಗೆ ಮನಬಂದಂತೆ ಯಾರನ್ನಾದರೂ ಕಬಳಿಸಿ ವಂಚಿಸಿ ಮೋಸ ಮಾಡಿ ಸಂಪಾದಿಸಬಹುದು ಎಂದು ಭಾವಿಸಿದವರ ಪ್ರಾರ್ಥನೆ ಸ್ವೀಕಾರವಾಗದು.
ಮತ್ತೊಮ್ಮೆ ಪ್ರವಾದಿವರ್ಯರು(ಸ) ಕಲಿಸಿದರು. ನೀವು ನಿರಂತರ ಸಾಷ್ಟಾಂಗ ಮಾಡಿ ನಮಾಝ್ ನಿರ್ವಹಿಸಿ ಎಲುಬು ಕಾಣುವಷ್ಟು ದುರ್ಬಲರಾದರೂ ನಿಮ್ಮ ಆಹಾರದಲ್ಲಿ ನಿಶಿಷಿದ್ಧವಾದದ್ದು ಸೇರಿ ಕೊಂಡರೆ ನಿಮ್ಮ ನಮಾಝ್ ಸ್ವೀಕಾರವಾಗದು.
ನೀವು ಉಪವಾಸ ವ್ರತಧಾರಿಗಳಾಗಿ ನಿಮ್ಮ ದೇಹವು ಅತ್ಯಂತ ದುರ್ಬಲವಾದರೂ ನಿಮ್ಮ ಆಹಾರದಲ್ಲಿ ನಿಷಿದ್ಧವಾದುದು ಏನಾದರೂ ಸೇರಿಕೊಂಡರೆ ಅಲ್ಲಾಹನು ನಿಮ್ಮ ಪ್ರಾರ್ಥನೆ ಸ್ವೀಕರಿಸಲಾರ.
ಅನ್ಯಾಯವಾಗಿ ಸಂಪಾದಿಸಿರುವ ಸೊತ್ತು ನಮ್ಮ ಸಂಪಾದನೆಯಲ್ಲಿ ಬೆರೆತಿರುವ ಕಾಲದ ವರೆಗೂ ಅಲ್ಲಾಹನು ನಮ್ಮನ್ನು ಇಷ್ಟಪಡಲಾರ ಎಂಬುದು ವಾಸ್ತವವಾಗಿದೆ.
ನಮಗೆ ಅರ್ಹವಾದುದನ್ನು ಮಾತ್ರ ನಾವು ಪಡೆಯಬೇಕು. ಅದು ಒಂದು ನಯಾ ಪೈಸೆಯಾದರೂ ಸರಿ. ನಮಗೆ ಅನುಮತಿಸಿದ್ದನ್ನು ಮಾತ್ರ ಗಳಿಸಿಕೊಳ್ಳಿರಿ. ಅದು ನಮ್ಮ ಪ್ರಾರ್ಥನೆಯ ಸ್ವೀಕಾರದ ದಾರಿಯಾಗಿರುತ್ತದೆ. ನಾವು ಅಲ್ಲಾಹನಿಗೆ ಹತ್ತಿರವಾದರೆ ಮನುಷ್ಯರಿಗೂ ಹತ್ತಿರವಾಗುತ್ತೇವೆ. ನಾವು ದೇವನನ್ನು ಪ್ರೀತಿಸುವಾಗ ಮನುಷ್ಯನನ್ನೂ ಪ್ರೀತಿಸಬೇಕು.
“ಓ ಪೈಗಂಬರರೇ ನನ್ನ ದಾಸರು ನನ್ನ ಬಗ್ಗೆ ನಿಮ್ಮೊಡನೆ ಕೇಳಿದರೆ ನಾನು ಅವರಿಗೆ ನಿಕಟನಾಗಿದ್ದೇನೆಂದೂ ಪ್ರಾರ್ಥಿಸುವವನು ಪ್ರಾರ್ಥಿಸಿದಾಗ ನಾನು ಅವನ ಪ್ರಾರ್ಥನೆಯನ್ನು ಆಲಿಸುವೆನೆಂದೂ ಅದಕ್ಕೆ ಉತ್ತರಿಸುವೆನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ ಓಗೊಡಲಿ. ಮತ್ತು ನನ್ನ ಮೇಲೆ ವಿಶ್ವಾಸ ವಿರಿಸಲಿ. ಅವರು ಸನ್ಮಾರ್ಗ ಪಡೆಯಲೂ ಬಹುದು.” (ಅಲ್ಬಕರ: 186)
IslamKannada News Portal


