Home / ಪ್ರಶ್ನೋತ್ತರ / ಪರಲೋಕವು ಯಥಾರ್ಥವೇ?

ಪರಲೋಕವು ಯಥಾರ್ಥವೇ?

ಮನುಷ್ಯ ಮರಣ ಹೊಂದಿದರೆ ಕೆಲವರು ಮಣ್ಣಿನಲ್ಲಿ ದಫನ ಮಾಡುತ್ತಾರೆ. ಹೆಚ್ಚಿನ ಕಾಲಾವಕಾಶವಿಲ್ಲದೆ ಮೃತ ಶರೀರ ಮಣ್ಣಿನೊಂದಿಗೆ ಲೀನವಾಗುತ್ತದೆ. ಇನ್ನು ಕೆಲವರು ಚಿತೆಯಲ್ಲಿ ಉರಿಸುತ್ತಾರೆ. ಅದರೊಂದಿಗೆ ದೇಹ ಬೂದಿಯಾಗುತ್ತದೆ. ನೀರು ಪಾಲಾದ ಜಡದೇಹಗಳನ್ನು ಮೀನುಗಳು ತಿಂದು ಮುಗಿಸುತ್ತವೆ. ಹೀಗೆ ಸಂಪೂರ್ಣ ನಾಶವಾದ ವ್ಯಕ್ತಿಗಳು ಪುನಃ ಎದ್ದೇಳಿಸಲ್ಪಡುತ್ತಾರೆ ಎಂಬುದು ಇಸ್ಲಾಮಿನ ವಾದ. ಇದರಲ್ಲಿ ವಿಶ್ವಾಸವಿರಿಸಬಹುದೆ? ಇದನ್ನು ಮನುಷ್ಯ ಬುದ್ದಿ ಒಪ್ಪುತ್ತದೆಯೇ?

ಈ ಎಲ್ಲ ಕಾಲಗಳಲ್ಲೂ ಬಹು ಸಂಖ್ಯಾತ ಜನರು ದೇವವಿಶ್ವಾಸಿಗಳಾಗಿದ್ದರು. ಇತಿಹಾಸದ ಪುಟಗಳನ್ನು ತಿರುಚಿ ನೋಡುವಾಗ ದೇವ ವಿಶ್ವಾಸವಿಲ್ಲದ ಸಮೂಹಗಳು ಬಹಳ ಕಡಿಮೆ. ಆದ್ದರಿಂದ ದೇವದೂತರಿಗೆ ನಾಸ್ತಿಕವಾದಿಗಳನ್ನು ಎದುರಿಸಬೇಕಾಗಿ ಬರಲಿಲ್ಲ, ಬದಲಾಗಿ ಮರಣಾನಂತರದ ಜೀವನದಲ್ಲಿ ವಿಶ್ವಾಸವಿಲ್ಲದ ದೇವವಿಶ್ವಾಸಿಗಳನ್ನು ಎದುರಿಸಬೇಕಾಯಿತು. ವಿವಿಧ ಕಾಲಗಳಲ್ಲಿ ವಿವಿಧ ದೇಶಗಳಲ್ಲಿ ಬಂದ ಪ್ರವಾದಿಗಳ ಕಾಲದಲ್ಲಿ ಜನರು ಪರಲೋಕವನ್ನು ನಿರಾಕರಿಸುವವರಾಗಿದ್ದರು. ಅವರ ಸಂಶಯ ಹಾಗೂ ವಾದಗಳಿಗೆ ಪವಿತ್ರ ಕುರ್ ಆನ್ ಸೂಕ್ತ ಉತ್ತರ ನೀಡಿದೆ. “ ಸತ್ತವನನ್ನು ಅಲ್ಲಾಹನು ಎಬ್ಬಿಸಲಾರನೆಂದು ಇವರು ದೃಢವಾಗಿ ಅಲ್ಲಾಹನ ಆಣೆ ಹಾಕಿ ಹೇಳುತ್ತಾರೆ.” (ಪವಿತ್ರ ಕುರ್ ಆನ್ 16:38) “ಜೀವನವೇನಿದ್ದರೂ ಕೇವಲ ನಮ್ಮ ಈ ಇಹಲೋಕದ ಜೀವನ ಮಾತ್ರ. ನಾವು ಮರಣಾನಂತರ ಎಷ್ಟು ಮಾತ್ರಕ್ಕೂ ಪುನಃ ಎಬ್ಬಿಸಲ್ಪಡಲಾರೆವೆಂದು ಇಂದು ಅವರು ಹೇಳುತ್ತಾರೆ.’ (ಪವಿತ್ರ ಕುರ್ ಆನ್ 6:29)

“ನೀವು ಸತ್ತು ಮಣ್ಣಾಗಿ ಹೋದ ಬಳಿಕ ಮತ್ತು ಅಸ್ಥಿಪಂಜರವಾಗಿ ಬಿಟ್ಟ ಬಳಿಕ ನೀವು(ಸಮಾಧಿಗಳಿಂದ ಹೊರ ತೆಗೆಯಲ್ಪಡುವಿರೆಂದು ಇವನು ನಿಮಗೆ ತಿಳಿಸುತ್ತಿದ್ದಾನೆಯೇ?”

“ಅಸಾಧ್ಯ, ನಿಮಗೆ ನೀಡಲಾಗುತ್ತಿರುವ ಈ ವಾಗ್ದಾನ ತೀರಾ ಅಸಾಧ್ಯವಾದದ್ದು. ಜೀವನವೆಂದರೆ ಕೇವಲ ಈ ಲೋಕದ ಜೀವನವಲ್ಲದೆ ಮತ್ತೇನೂ ಅಲ್ಲ ಇಲ್ಲೇ ನಾವು ಸಾಯಬೇಕಾಗಿದೆ, ಇಲ್ಲೇ ಬದುಕಬೇಕಾಗಿದೆ.ಖಂಡಿತವಾಗಿಯೂ ನಾವು ಎಬ್ಬಿಸಲ್ಪಡುವವರಲ್ಲ,”(ಪವಿತ್ರ ಕುರ್ ಆನ್ 23: 35-37)
ಇವರು ಇವರ ಪೂರ್ವಜರು ಹೇಳಿರುವುದನ್ನೇ ಹೇಳುತ್ತಾರೆ, ಅವರು ಹೇಳುತ್ತಾರೆ, “ನಾವು ಸತ್ತು ಮಣ್ಣು ಮತ್ತು ಅಸ್ಥಿಪಂಜರವಾಗಿ ಬಿಟ್ಟ ಬಳಿಕ ನಿಮ್ಮನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲಾದೀತೆ? ಈ ವಾಗ್ದಾನಗಳನ್ನು ನಾವು ತುಂಬಾ ಕೇಳಿದ್ದೇವೆ ಮತ್ತು ನಮಗಿಂತ ಮುಂಚೆ ನಮ್ಮ ಪೂರ್ವಜರೂ ಕೇಳುತ್ತಲೇ ಬಂದಿದ್ದಾರೆ. ಇವೆಲ್ಲಾ ಹಳೆಯ ಕಟ್ಟುಕತೆಗಳಲ್ಲದೆ ಇನ್ನೇನು ಅಲ್ಲ.” (ಪವಿತ್ರ ಕುರ್ ಆನ್ 23:82-83)

ಅವರು ಕೇಳುತ್ತಾರೆ: “ನಾವು ಸತ್ತು ಮಣ್ಣಾಗಿ ಅಸಿಪಂಜರವಾಗಿ ಬಿಟ್ಟ ಬಳಿಕ ಪುನಃ ಜೀವಂತಗೊಳಿಸಿ ಎಬ್ಬಿಸಲ್ಪಡಲಿದ್ದೇವೆಯೇ? ಗತಕಾಲದ ನಮ್ಮ ಪೂರ್ವಜರೂ ಎಬ್ಬಿಸಲ್ಪಡುವರೇ.?” (ಪವಿತ್ರ ಕುರ್ ಆನ್ 37:16-17).

ಪುರಾತನ ಕಾಲದಿಂದಲೇ ದೇವವಿಶ್ವಾಸಿಗಳಲ್ಲಿ ಹೆಚ್ಚಿನವರು ಪರಲೋಕದಲ್ಲಿ ವಿಶ್ವಾಸವಿರಿಸಲಿಲ್ಲವೆಂದು ಇದು ಸ್ಪಷ್ಟಪಡಿಸುತ್ತದೆ. ಇಂದಿನ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಅವಿಶ್ವಾಸಿಗಳು ನಮ್ಮ ಪುನರುಜ್ಜೀವನವನ್ನು ನಿಷೇಧಿಸಿ ಎತ್ತಿದ ಪ್ರಶ್ನೆಗಳಿಗೆ ಪವಿತ್ರ ಕುರ್ ಆನ್ ಸ್ಪಷ್ಟವಾಗಿ ಉತ್ತರಿಸುತ್ತದೆ. ಅವರು ಕೇಳುತ್ತಾರೆ: “ನಾವು ಬರೇ ಎಲುಬುಗಳಾಗಿ ಮತ್ತು ಮಣ್ಣಾಗಿ ಬಿಟ್ಟ ಮೇಲೆ ನಮ್ಮನ್ನು ಮತ್ತೆ ಹೊಸದಾಗಿ ಹುಟ್ಟಿಸಿ ಎಬ್ಬಿಸಲಾಗುವುದೇ?” ಎಂದು ಅವರು ಕೇಳುತ್ತಾರೆ. ಅವರೊಡನೆ ಹೇಳಿರಿ- ”ನೀವು ಶಿಲೆ ಅಥವಾ ಕಬ್ಬಿಣವೇ ಆಗಿ ಹೋದರೂ ಅಥವಾ ಅದಕ್ಕಿಂತ ಹೆಚ್ಚು ಕಠಿಣವಾಗಿದ್ದು ನಿಮ್ಮ ಊಹೆಯಂತೆ ಜೀವವನ್ನು ಸ್ವೀಕರಿಸುವುದೇ ಅಸಂಭವನಿಯವಾಗಿರುವಂತಹ ವಸ್ತುವಾಗಿ ಬಿಟ್ಟರೂ(ನೀವು ಎಬ್ಬಿಸಲ್ಪಟ್ಟೇ ತೀರುವಿರಿ)” “ನಮ್ಮನ್ನು ಪುನಃ ಜೀವಂತಗೊಳಿಸುವವನಾರು?” ಎಂದು ಅವರು ಖಂಡಿತ ಕೇಳುವರು. ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದವನೇ ಎಂದು ಉತ್ತರ ಕೊಡಿರಿ, ಅವನು ತಲೆಯಾಡಿಸುತ್ತಾ ” ಓಹೋ! ಇದೆಲ್ಲ ಆಗುವುದು ಯಾವಾಗ? ” ಎಂದು ಕೇಳುವರು. ನೀವು ಹೇಳಿರಿ, ಆ ಸಮಯ ಸನ್ನಿಹಿತವಾಗಿರಲೂಬಹುದು. ದೇವನು ನಿಮ್ಮನ್ನು ಕೂಗಿ ಕರೆಯುವಂದು ನೀವು ಅವನನ್ನು ಪ್ರಶಂಸಿಸುತ್ತಾ ಅವನ ಕರೆಗೆ ಓಗೊಟ್ಟು ಹೊರಟು ಬರುವಿರಿ. ಆಗ ನಾವೇನೋ ತುಸು ಹೊತ್ತು ಮಾತ್ರವೇ ಈ ಅವಸ್ಥೆಯಲ್ಲಿ ಬಿದ್ದುಕೊಂಡಿದ್ದೆವೆಂದು ಊಹಿಸುವಿರಿ.’ (ಪವಿತ್ರ ಕುರ್ ಆನ್ 17:49-52) ನಮ್ಮ ಪ್ರತ್ಯಕ್ಷ ಪ್ರಮಾಣಗಳನ್ನು ಧಿಕ್ಕರಿಸಿ ”ನಾವು ಎಲುಬುಗಳೂ ಮಣ್ಣೂ ಆಗಿ ಹೋದ ಬಳಿಕ ನಮ್ಮನ್ನು ಹೊಸದಾಗಿ ಸೃಷ್ಟಿಸಿ ಎಬ್ಬಿಸಲಾಗುವುದೇ? ” ಎಂದು ಅವರು ಹೇಳಿದುದರ ಪ್ರತಿಫಲವಿದು. ಆಕಾಶಗಳನ್ನೂ ಭೂಮಿಯನ್ನೂ ಯಾವ ದೇವನು ಸೃಷ್ಟಿಸಿರುತ್ತಾನೋ ಅವನು ಖಂಡಿತವಾಗಿಯೂ ಇವರಂಥವರನ್ನು ಸೃಷ್ಟಿಸಲು ಶಕ್ತನೆಂಬುದು ಇವರಿಗೆ ಹೊಳೆಯಲಿಲ್ಲವೆ? ಅವನು ಇವರನ್ನು ಒಂದಡೆ ಸೇರಿಸಲಿಕ್ಕಾಗಿ ಒಂದು ಸಮಯವನ್ನು ನಿಶ್ಚಯಸಿದ್ದಾನೆ. ಅದರ ಬರುವಿಕೆಯು ಖಚಿತ. ಆದರೆ ಅದನ್ನು ನಿರಾಕರಿಸಿಯೇ ತೀರುವೆವೆಂಬುದು ಅಕ್ರಮಿಗಳ ಹಠವಾಗಿದೆ. (ಪವಿತ್ರ ಕುರ್ ಆನ್ 17:98-99)

“ಜನರೇ, ನಿಮಗೆ ಮರಣಾನಂತರದ ಜೀವನದ ಬಗೆಗೇನಾದರೂ ಸಂಶಯವಿದ್ದರೆ, ನಾವು ನಿಮ್ಮನ್ನು ಮಣ್ಣಿನಿಂದಲೂ, ಅನಂತರ ವೀರ್ಯದಿಂದಲೂ, ಆ ಮೇಲೆ ರಕ್ತಪಿಂಡದಿಂದಲೂ ಆ ಬಳಿಕ ರೂಪವಿರುವ ಮತ್ತು ರೂಪವಿಲ್ಲದ ಮಾಂಸದ ತುಣುಕಿನಿಂದಲೂ ಸೃಷ್ಟಿಸಿದೆವು ಎಂಬುದು ನಿಮಗೆ ತಿಳಿದಿರಲಿ. ನಿಮಗೆ ವಸ್ತುಸ್ಥಿತಿ ವಿವರಿಸಲಿಕ್ಕಾಗಿ (ನಾವು ಇದನ್ನು ತಿಳಿಸುತ್ತಿದ್ದೇವೆ) ನಾವು ನಮಗಿಷ್ಟವಿರುವುದನ್ನು (ವೀರ್ಯವನ್ನು ಒಂದು ನಿರ್ದಿಷ್ಟ ಅವಧಿ ತನಕ ಗರ್ಭಾಶಯದೊಳಗೆ ತಡೆದಿರಿಸುತ್ತೇವೆ. ಅನಂತರ ನಿಮ್ಮನ್ನು ಒಂದು ಶಿಶುವಿನ ರೂಪದಲ್ಲಿ ಹೊರತರುತ್ತೇವೆ. (ತರುವಾಯ) ನೀವು ತಾರುಣ್ಯಕ್ಕೆ ತಲುಪವಂತಾಗಲು (ನಿಮ್ಮನ್ನು ಪೋಷಿಸುತ್ತೇವೆ) ಮತ್ತು ನಿಮ್ಮಲ್ಲಿ ಕೆಲವರನ್ನು ಮೊದಲೇ ಹಿಂದಕ್ಕೆ ಕರೆಸಿಕೊಳ್ಳಲಾಗುತ್ತದೆ ಮತ್ತು ಕೆಲವರನ್ನು ಎಲ್ಲವನ್ನೂ ತಿಳಿದುಕೊಂಡ ಬಳಿಕ ಏನೂ ತಿಳಿಯದಂತಾಗಲು ಅತಿ ವೃದ್ದಾಪ್ಯದೆಡೆಗೆ ತಿರುಗಿಸಿ ಬಿಡಲಾಗುತ್ತದೆ. ನೆಲವು ಒಣಗಿರುವುದನ್ನು ನೀವು ನೋಡುತ್ತೀರಿ, ಅನಂತರ ನಾವು ಅದರ ಮೇಲೆ ಮಳೆಗರೆದಾಗ ಅದು ಒಮ್ಮೆಲೆ ಮೊಳೆಯಿತು, ಉಬ್ಬಿತು ಮತ್ತು ಎಲ್ಲ ಬಗೆಯ ನಯನ ಮನೋಹರ ಸಸ್ಯಗಳನ್ನು ಹೊರಗೆಡಹ ತೊಡಗಿಬಿಟ್ಟಿತು.
ಪುನರುತ್ಥಾನದ ಘಳಿಗೆಯು ಬಂದೇ ತೀರುವುದು (ಎಂಬುವುದಕ್ಕಿದು ಆಧಾರ) ಇದರಲ್ಲಿ ಸಂಶಯಕ್ಕೆ ಅವಕಾಶ ಇಲ್ಲ ಮತ್ತು ಸಮಾಧಿಯೊಳಗೆ ಹೋಗಿರುವವರನ್ನು ಅಲ್ಲಾಹನು ಖಂಡಿತವಾಗಿಯೂ ಎಬ್ಬಿಸುವನು.” (ಪವಿತ್ರ ಕುರ್ ಆನ್ 22:5-7)

“ನಿಮ್ಮಲ್ಲರನ್ನೂ ಸೃಷ್ಟಿಸುವುದೂ ಅನಂತರ ಪುನಃ ಜೀವಂತಗೊಳಿಸಿ ಎಬ್ಬಿಸುವುದೂ (ಅವನ ಮಟ್ಟಿಗೆ) ಕೇವಲ ಒಂದು ಜೀವಿಯನ್ನು ಸೃಷ್ಟಿಸುವ ಮತ್ತು ಪುನಃ ಜೀವಂತಗೊಳಿಸುವ ಹಾಗಿದೆ.’ (ಪವಿತ್ರ ಕುರ್ ಆನ್ 31:28)

ಮರಣಾನಂತರ ಎಷ್ಟು ಮಾತ್ರಕ್ಕೂ ನಾವು ಎಬ್ಬಿಸಲ್ಪಡಲಾರೆವೆಂದು ಸತ್ಯನಿಷೇಧಿಗಳು ಬಹಳ ಧೈರ್ಯದಿಂದ ಸಾರಿದ್ದಾರೆ. ಅವರೊಡನೆ ಹೇಳಿರಿ, “ಹಾಗಲ್ಲ, ನನ್ನ ಪ್ರಭುವಿನಾಣೆ! ನೀವು ಖಂಡಿತವಾಗಿಯೂ ಎಬ್ಬಿಸಲ್ಪಡುವಿರಿ. ತರುವಾಯ ನೀವು ಭೂಲೋಕದಲ್ಲಿ ಏನೇನು ಮಾಡಿರುವಿರೆಂಬುದನ್ನು ನಿಮಗೆ ಖಂಡಿತ ತೋರಿಸಿ ಕೊಡಲಾಗುವುದು ಮತ್ತು ಹೀಗೆ ಮಾಡುವುದು ಅಲ್ಲಾಹನ ಮಟ್ಟಿಗೆ ಬಹಳ ಸುಲಭವಾಗಿದೆ.’ (ಪವಿತ್ರ ಕುರ್ ಆನ್ 64:7)

ಈ ಭೂಮಿ ಆಕಾಶಗಳನ್ನು ಸೃಷ್ಟಿಸಿದ ಹಾಗೂ ಇವುಗಳನ್ನು ಉಂಟುಮಾಡುವುದರಲ್ಲಿ ದಣಿಯದ ಅಲ್ಲಾಹನು ಮೃತರನ್ನು ಪುನಃ ಜೀವಂತಗೊಳಿಸಲು ಖಂಡಿತ ಶಕ್ತನೆಂಬುದು ಇವರಿಗೆ ತೋಚುವುದಿಲ್ಲವೇ? ಏಕೆಲ್ಲ ! ನಿಶ್ಚಯವಾಗಿಯೂ ಅವನು ಸಕಲ ವಿಷಯಗಳ ಸಾಮರ್ಥ್ಯವುಳ್ಳವನು. (ಪವಿತ್ರ ಕುರ್ ಆನ್ 46:33)

ಮಾನವನು ತನ್ನನ್ನು ಸುಮ್ಮನೆ ಬಿಟ್ಟುಬಿಡಲಾಗುವುದೆಂದು ಭಾವಿಸಿಕೊಂಡಿರುವನೇ? ಅವನು (ತಾಯಿಯ ಗರ್ಭದೊಳಗೆ ಸುರಿಸಲ್ಪಡುವಂತಹ ಒಂದು ತುಚ್ಚ ವೀರ್ಯ ಬಿಂದುವಾಗಿರಲಿಲ್ಲವೇ? ತರುವಾಯ ಅವನು ಒಂದು ಪಿಂಡವಾದನು, ಅನಂತರ ಅಲ್ಲಾಹನು ಅವನ ಶರೀರವನ್ನು ನಿರ್ಮಿಸಿದನು ಮತ್ತು ಅಂಗಾಂಗಗಳನ್ನು ರೂಪಿಸಿದನು. ಆ ಬಳಿಕ ಅದರಿಂದ ಪುರುಷ ಮತ್ತು ಸ್ತ್ರೀಯ ಎರಡು ವರ್ಗಗಳನ್ನು ಮಾಡಿದನು. ಅವನು ಮೃತರನ್ನು ಪುನಃ ಜೀವಂತಗೊಳಿಸಲು ಶಕ್ತನಲ್ಲವೇ? (ಪವಿತ್ರ ಕುರ್ ಆನ್ 75:36-40)

”ನಾವು ಅವನ ಎಲುಬುಗಳನ್ನು ಒಟ್ಟುಗೂಡಿಸಲಾರೆವೆಂದು .ಮಾನವನು ಭಾವಿಸುತ್ತಿರುವನೇ? ಯಾಕಿಲ್ಲ? ನಾವಂತು ಅವನ ಬೆರಳುಗಳ ತುದಿಗಳನ್ನು ಕೂಡಾ ಸರಿಯಾಗಿ ರಚಿಸಲು ಶಕ್ತರಿದ್ದೇವೆ.’ (ಪವಿತ್ರ ಕುರ್ ಆನ್ 75:3-4)

ಒಟ್ಟಿನಲ್ಲಿ ಶೂನ್ಯದಿಂದ ಮಾನವರನ್ನು ಸೃಷ್ಟಿಸಿದ ದೇವನಿಗೆ ಅವರನ್ನು ಪುನಃ ಜೀವಂತಗೊಳಿಸುವುದು ಕಷ್ಟಕರವಲ್ಲ, 600 ಕೋಟಿ ಮನುಷ್ಯರನ್ನು ವಿಭಿನ್ನ ಹಾಗೂ ವ್ಯತಿರಿಕ್ತವಾದ ಕೈಬೆರಳುಗಳು, ತಲೆಗೂದಲು, ರಕ್ತದ ಹನಿ, ಶರೀರದ ವಾಸನೆಯನ್ನು ನೀಡಿ ಸೃಷ್ಟಿಸಿದವನಿಗೆ ಅವರ ಪುನರ್ ನಿರ್ಮಾಣ ಕಷ್ಟಕರವಾಗುವುದು ಹೇಗೆ? ನಿರ್ಜೀವವಾದ ಭೂಮಿ ಮಳೆಯ ನೀರಿಗೆ ಹಸಿರಿನಿಂದ ಕಂಗೊಳಿಸುವಂತೆ, ಸತ್ತು ಮಣ್ಣಾದ ಮನುಷ್ಯನು ಅಲ್ಲಾಹನು ಕರೆಯುವಾಗ ಓಡಿಬರುವನೆಂಬುದು ಅದ್ಭುತವೋ ಅವಿಶ್ವಸನೀಯವೋ ಅಲ್ಲ, ಶರೀರದ ಒಂದು ಕಣದಿಂದ ಕ್ಲೋನಿಂಗ್ ಮೂಲಕ ಪೂರ್ಣ ಮನುಷ್ಯನನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿರುವ ಈ ಕಾಲದಲ್ಲಿ ಸರ್ವಶಕ್ತನಾದ ದೇವನು ಮನುಷ್ಯರನ್ನು ಪುನಃ ಸೃಷ್ಟಿಸುವನೆಂಬುದನ್ನು ಒಪ್ಪಿಕೊಳ್ಳದಿರುವುದೇ ಅತ್ಯಂತ ಆಶ್ಚರ್ಯಕರ ವಿಚಾರವಾಗಿದೆ.

‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …