ಮುಸ್ಲಿಮ್ ರಾಷ್ಟ್ರದಲ್ಲಿ ದೇವಾಲಯಗಳಿಗೆ ಅನುಮತಿಯಿದೆಯೇ? ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಸ್ಲಾಮೀ ರಾಷ್ಟ್ರಗಳಲ್ಲಿ ಜಾತ್ಯತೀತ ರಾಷ್ಟ್ರಗಳಂತೆ ಅಥವಾ ಅದಕ್ಕಿಂತಲೂ ಹೆಚ್ಚಾದ ಧಾರ್ಮಿಕ ಸ್ವಾತಂತ್ರವಿದೆಯೆಂದು ನೀವು ಹೇಳಿದ್ದೀರಿ? ಆದರೆ ವಿಶ್ವದ ಯಾವುದಾದರೂ ಮುಸ್ಲಿಮ್ ರಾಷ್ಟ್ರಗಳಲ್ಲಿ ಹಿಂದುಗಳ ದೇವಾಲಯ ನಿರ್ಮಾಣಕ್ಕೆ ಅನುಮತಿಯಿದೆಯೇ? ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ದೇವಾಲಯಗಳನ್ನು ನಾಶಗೊಳಿಸಲಾಗುತ್ತಿದೆಯಲ್ಲವೇ?
ಪಾಕಿಸ್ತಾನ, ಬಾಂಗ್ಲಾದೇಶವೂ ಸೇರಿದಂತೆ ವಿಶ್ವದಲ್ಲಿ ಹಿಂದೂ ಪ್ರಜೆಗಳಿರುವ ಮುಸ್ಲಿಮ್ ರಾಷ್ಟ್ರಗಳಲ್ಲೆಲ್ಲಾ ದೇವಾಲಯ ನಿರ್ಮಾಣಕ್ಕೆ ಹಾಗೂ ಪ್ರಾರ್ಥನೆ, ಹಬ್ಬಗಳನ್ನು ನಡೆಸಲು ಅನುಮತಿಯಿದೆ. ಸರಕಾರ ಹಾಗೂ ಜನರು ಅದಕ್ಕೆ ತಡೆಯೊಡ್ಡುವುದಿಲ್ಲ, ಮಾತ್ರವಲ್ಲ ಅಗತ್ಯವಿರುವ ಸಹಕಾರವನ್ನು ನೀಡುತ್ತಾರೆ. ಕೆಲವು ವರ್ಷಗಳ ಹಿಂದೆ ಪ್ರಕಟವಾದ ಪತ್ರಿಕಾ ವರದಿಯನ್ನು ನೋಡಬಹುದು: ‘ಬಾಂಗ್ಲಾದೇಶದ ಹಿಂದೂ ಕ್ಷೇತ್ರಗಳು ಹಾಗೂ ಧಾರ್ಮಿಕ ಸಂಸ್ಥೆಗಳ ಪುನರುತ್ಥಾನಕ್ಕಾಗಿ ಸರಕಾರವು ಸುಮಾರು ಆರು ಲಕ್ಷ ರೂಪಾಯಿಯನ್ನು ಬಿಡುಗಡೆಗೊಳಿಸಿತು. ಈ ತೀರ್ಮಾನ ಕೈಗೊಂಡ ಮಂತ್ರಿ ನೂರುಲ್ ಇಸ್ಲಾಮ್, ಎಲ್ಲ ಧರ್ಮದ ಏಳಿಗೆಗಾಗಿ ನಾವು ಸಿದ್ಧರಿದ್ದೇವೆ ಎಂದರು.’ ( ಮಾತೃ ಭೂಮಿ 4-10-1985)
ಇನ್ನೊಂದು ಮುಸ್ಲಿಮ್ ರಾಷ್ಟ್ರವಾದ ಇಂಡೋನೇಶ್ಯದ ಕುರಿತು ಆರ್.ಎಸ್.ಎಸ್ ವಾರಪತ್ರಿಕೆ ‘ಕೇಸರಿ’ ಬರೆಯುತ್ತದೆ: ‘ಜಾತ್ಯತೀತ ಸಂವಿಧಾನವಿರುವ ಇಂಡೋನೇಶ್ಯದಲ್ಲಿ ಎಲ್ಲಾ ಧರ್ಮಿಯರಿಗೂ ಸಂಪೂರ್ಣ ಆರಾಧನಾ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇಸ್ಲಾಮ್, ಕ್ರೈಸ್ತ, ಬೌದ್ಧ, ಹಿಂದೂ ಧರ್ಮ ಮೊದಲಾದ ನಾಲ್ಕು ಧರ್ಮಗಳಿಗೆ ಸಮಾನವಾದ ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕಾಗಿ ಸರಕಾರದ ನಿಯಂತ್ರಣದಲ್ಲಿ ಒಂದು ಪ್ರತ್ಯೇಕ ಇಲಾಖೆ ಇದೆ. ವಿವಿಧ ಧರ್ಮಾನುಯಾಯಿಗಳು ಇಲ್ಲಿ ಪರಸ್ಪರ ಪ್ರೀತಿ, ಸೌಹಾರ್ದದಿಂದ ಬಾಳುತ್ತಿದ್ದಾರೆ.’ (7-6-1987)
ಪಾಕಿಸ್ತಾನದಲ್ಲಿ ಜನ್ಮಾಷ್ಟಮಿ, ದೀಪಾವಳಿಯಂತಹ ಹಬ್ಬದ ದಿನಗಳಲ್ಲಿ ಹಿಂದೂ ಬಾಂಧವರಿಗೆ ಅಕ್ಕಿ, ಸಕ್ಕರೆಯನ್ನು ವಿಶೇಷವಾಗಿ ನೀಡಲಾಗುತ್ತದೆ. ಅಲ್ಲದೆ ಲಾಹೋರ್ ಜಿಲ್ಲೆಯ ಅಧಿಕೃತ ಶಾಲಾ ಕಾಲೇಜುಗಳ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನೂ ನೀಡಲಾಗುತ್ತಿದೆ. ಲಾಹೋರ್ನ ಕೈಸ್ತ ಧರ್ಮೀಯರಿಗೆ ಸ್ಮಶಾನ ನಿರ್ಮಿಸಲು ಆರು ಲಕ್ಷ ರೂಪಾಯಿ ಸಹಾಯ ಧನ ನೀಡಲಾಗಿತ್ತು.
1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಕೆಲವು ತಿಳಿಗೇಡಿಗಳು ದೇವಾಲಯಗಳನ್ನು ಆಕ್ರಮಿಸಿ ಹಾನಿಯುಂಟು ಮಾಡಿದರು. ಆಗ ಹಿಂದೂ ಆರಾಧನಾಲಯಗಳನ್ನು ರಕ್ಷಿಸಲಿಕ್ಕಾಗಿ ಅಲ್ಲಿನ ಇಸ್ಲಾಮೀ ಕಾರ್ಯಕರ್ತರು ಅವರನ್ನು ತಡೆದರು. ಅಂದು ದೇವಾಲಯಗಳ ಮೇಲಾದ ಆಕ್ರಮಣದ ಕುರಿತು ಸುಗತ ಕುಮಾರಿ ಇಂಡಿಯಾ ಟುಡೆಯಲ್ಲಿ ಬರೆದರು: ‘ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಮೂಲಕ ಹಿಂದುಗಳಿಗೆ ಏನು ಲಭಿಸಿತು. ನೆರೆಯ ದೇಶಗಳಲ್ಲಿ ಹಲವಾರು ದೇವಾಲಯಗಳು ಹಾನಿಗೊಂಡವು. ಧ್ವಂಸಗೊಂಡ ಮಸೀದಿಯನ್ನು ಪುನರ್ನಿಮಿಸಿ ಕೊಡದಿರಲು ನಮ್ಮ ಸಂಸ್ಕೃತಿ ಒಪ್ಪುವುದಿಲ್ಲ. ಆದರೆ ಆಕ್ರಮಿಸಲ್ಪಟ್ಟ ದೇವಾಲಯಗಳ ಜೀರ್ಣೋದ್ಧಾರ ಸಾಧ್ಯವಿದೆಯೇ?’
ಆದರೆ, ನಡೆದದ್ದೇ ಬೇರೆ. ಒಂಬತ್ತು ತಿಂಗಳ ಒಳಗೆ ಆಕ್ರಮಿಸಲ್ಪಟ್ಟ ಎಲ್ಲ ದೇವಾಲಯಗಳನ್ನು ಪಾಕಿಸ್ತಾನ ಹಾಗೂ ಬಾಂಗ್ಲಾ ಸರಕಾರ ಪುನಃ ನಿರ್ಮಿಸಿತು. ಇದನ್ನು ಭಾರತೀಯ ಪತ್ರಿಕೆಗಳೇ ಪ್ರಕಟಿಸಿದುವು. ಆ ವಾರ್ತೆಯ ಕಟ್ಟಿಂಗ್ಗಳು ಇಂಡಿಯಾ ಟುಡೆಯ ಲೇಖನದ ಕಾಪಿಯನ್ನು ಕಳುಹಿಸಿ ಕೊಟ್ಟು ಪ್ರತಿಕ್ರಿಯೆ ಬಯಸಿದರೂ ಸುಗತ ಕುಮಾರಿ ಉತ್ತರಿಸುವ ಸೌಜನ್ಯ ತೋರಿಸಲಿಲ್ಲ. ಕಾರಣವೇನೆಂದರೆ ವಾಸ್ತವ ಅವರ ಊಹೆಗಿಂತ ಮತ್ತು ದೇಶದಲ್ಲಿ ನಡೆಸಲಾಗಿರುವ ಪ್ರಚಾರಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು.
ಅನ್ಯಧರ್ಮಿಯರ ಆರಾಧ್ಯ ವಸ್ತುಗಳನ್ನು ಅವಹೇಳನಗೊಳಿಸಲು, ಅವರ ಆರಾಧನಾ ಸ್ಥಳಗಳನ್ನು ಹಾಳುಗೆಡವಲು ಇಸ್ಲಾಮ್ ಯಾರಿಗೂ ಅನುಮತಿ ನೀಡಿಲ್ಲ. ಆದ್ದರಿಂದ ಮುಸ್ಲಿಮ್ ರಾಷ್ಟ್ರಗಳಲ್ಲಿ ಆರಾಧನಾಲಯಗಳು ಆಕ್ರಮಿಸಲ್ಪಡುವುದೋ, ಧ್ವಂಸಕ್ಕೀಡಾಗುವುದೋ ಸಾಧ್ಯವಿಲ್ಲ, ಅಥವಾ ಯಾವುದಾದರೂ ಅವಿವೇಕಿಗಳು ಅಂತಹ ಕೃತ್ಯ ನಡೆಸಿದರೆ ಅದನ್ನು ಪುನರ್ನಿಮಿಸಲು ಇಸ್ಲಾಮೀ ಸಮಾಜ ಹಾಗೂ ಸರಕಾರ ಬದ್ಧವಾಗಿದೆ.
ಗಲ್ಫ್ ದೇಶಗಳಲ್ಲಿ ಕ್ಷೇತ್ರಗಳಿಗೆ ವಿರೋಧ
ಗಲ್ಫ್ ರಾಷ್ಟ್ರಗಳಲ್ಲಿ ಹಿಂದೂ ಕ್ಷೇತ್ರಗಳನ್ನು ನಿರ್ಮಿಸುವ ಅನುಮತಿಯಿಲ್ಲವೆಂದು ಕೇಳಿದ್ದೇನೆ. ಅದಕ್ಕೆ ಕಾರಣವೇನು?
ಗಲ್ಫ್ ದೇಶಗಳಲ್ಲಿ ಹಿಂದೂ ಪ್ರಜೆಗಳು ಇಲ್ಲ. ಅಲ್ಲಿ ವಾಸ್ತವ್ಯವಿರುವ ಹಿಂದುಗಳು ಉದ್ಯೋಗಕ್ಕಾಗಿ ಹೋದ ವಿದೇಶಿಯರು. ಮುಸ್ಲಿಮರೂ ಸೇರಿದಂತೆ ವಿದೇಶಿಗಳಿಗೆ ಅಲ್ಲಿ ಸ್ಥಳ ಖರೀದಿಸುವ, ಆರಾಧನಾಲಯಗಳನ್ನು ನಿರ್ಮಿಸುವ ಅನುಮತಿ ಇಲ್ಲ ವಿದೇಶಿ ಮುಸ್ಲಿಮರಿಗೂ ಮಸೀದಿಯನ್ನು ನಿರ್ಮಿಸುವ ಅನುಮತಿ ಇಲ್ಲ. ವಿದೇಶಿಗಳಿಗೆ ಭಾರತದಲ್ಲೂ ಇತರ ಜಾತ್ಯತೀತ ರಾಷ್ಟ್ರಗಳಲ್ಲೂ ಸ್ವಂತ ಆರಾಧನಾಲಯ ಕಟ್ಟುವ ಅನುಮತಿ ಇಲ್ಲ ಎಂಬುದು ಗಮನಾರ್ಹ.
ಹಾಗಿದ್ದರೂ ದೀರ್ಘಕಾಲದಿಂದ ಗಲ್ಫ್ ದೇಶಗಳಲ್ಲಿ ಬದುಕುತ್ತಿರುವ ಸಿಂಧಿ ಹಿಂದುಗಳಿಗೆ ದೇವಾಲಯ ನಿರ್ಮಿಸುವ ವಿಶೇಷ ಪರವಾನಿಗೆಯನ್ನು ಸರಕಾರವು ನೀಡಿತ್ತು. ಮಲಯಾಳಂನ ಆರ್.ಎಸ್.ಎಸ್. ವಾರಪತ್ರಿಕೆ ಕೇಸರಿ ಬರೆಯುತ್ತದೆ. ‘ಮಸ್ಕತ್, ಬಹರೈನ್, ದುಬೈ ಮುಂತಾದ ಗಲ್ಫ್ ದೇಶಗಳಲ್ಲಿ ಭಾರತೀಯರು, ಹಿಂದೂಗಳಾದ ಸಿಂಧಿಗಳು ವಾಸಿಸುತ್ತಿದ್ದಾರೆ. ಆ ದೇಶಗಳ ಅಭಿವೃದ್ಧಿಯಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಂಡಿರುವ ಅಲ್ಲಿನ ಆಡಳಿತಗಾರರು ಅವರಿಗೆ ವಿಶೇಷ ಪರಿಗಣನೆಯನ್ನು ನೀಡುತ್ತಿದ್ದಾರೆ.’ (6-4-1986)
‘ದುಬೈಯ ಶೇಖ್ ಅವರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ವಿಶೇಷವಾಗಿ ಪ್ರಯತ್ನಿಸುತ್ತಿದ್ದಾರೆ. ಸಿಂಧಿಗಳ ಬೇಡಿಕೆಯಂತೆ ಒಂದು ಹಿಂದೂ ಕ್ಷೇತ್ರ, ಇಷ್ಟದೇವತೆಗಳನ್ನಿರಿಸಿ ಪೂಜಿಸುವ ಮತ್ತು ಉತ್ಸವಗಳನ್ನು ನಡೆಸುವ ಅನುಮತಿಯನ್ನು ನೀಡಲಾಗಿದೆ. ಹಿಂದೂಗಳಿಗೆ ಅಂತ್ಯ ಸಂಸ್ಕಾರಕ್ಕಾಗಿ ಒಂದು ಪ್ರತ್ಯೇಕ ಶ್ಮಶಾನಕ್ಕಾಗಿ ಸ್ಥಳವನ್ನು ನೀಡಲಾಗಿದೆ.’ (ಕೇಸರಿ 5-1-1986)
ಜಿಝಿಯಾ
ಇಸ್ಲಾಮೀ ರಾಷ್ಟ್ರವು ಮುಸ್ಲಿಮೇತರರಿಂದ ಜಿಝಿಯಾ ಎಂಬ ತೆರಿಗೆಯನ್ನು ಪಡೆಯುತ್ತಿದೆಯಲ್ಲವೇ? ಇದು ದೊಡ್ಡ ಅನ್ಯಾಯವಲ್ಲವೇ?
ಜೀಝಿಯಾ ಧಾರ್ಮೀಕ ತೆರಿಗೆಯಲ್ಲ. ಅದು ಸ್ಪಷ್ಟ ತಪ್ಪು ಧಾರಣೆಯಾಗಿದೆ. ಇದು ಅತ್ಯಂತ ಹೆಚ್ಚು ತಪ್ಪುಕಲ್ಪನೆಗೊಳಗಾದ ವಿಷಯವಾದುದರಿಂದ ಸ್ವಲ್ಪ ವಿವರಿಸಿದರೆ ಉತ್ತಮವೆಂದು ಭಾವಿಸಿದ್ದೇನೆ. ಮುಸ್ಲಿಮರು ತಮ್ಮ ಕೃಷಿ ಉತ್ಪನ್ನದ ವರಮಾನದ ಹತ್ತು ಶೇಕಡಾ ಮತ್ತು ಇತರ ಆರ್ಥಿಕ ವರಮಾನಗಳ ಎರಡೂವರೆ ಶೇಕಡಾವನ್ನು ಸರಕಾರಿ ಬೊಕ್ಕಸಕ್ಕೆ, ಒಪ್ಪಿಸಲೇಬೇಕು. ಇದು ಧಾರ್ಮಿಕ ಆರಾಧನಾ ಕರ್ಮವೂ ಆಗಿರುವುದರಿಂದ ಇತರ ಧರ್ಮೀಯರ ಮೇಲೆ ಹೇರುವುದು ಸಮಂಜಸವಲ್ಲ. ಏಕೆಂದರೆ ಅದು ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸಿದಂತಾಗುತ್ತದೆ. ಆದ್ದರಿಂದ ಸಮಾಜದಲ್ಲಿ ಆರ್ಥಿಕ ಸಮಾನತೆ ಕಾಪಾಡಲು ಮುಸ್ಲಿಮೇತರ ಪ್ರಜೆಗಳಿಗೆ ಇಸ್ಲಾಮಿನ ಆರಾಧನೆಗಳೊಂದಿಗೆ ಸಂಬಂಧವಿಲ್ಲದ ಇನ್ನೊಂದು ತೆರಿಗೆಯನ್ನು ನಿರ್ಧರಿಸಲಾಯಿತು. ಅದುವೇ ಜಿಝಿಯಾ. ಮುಸ್ಲಿಮರಿಂದ ಕಡ್ಡಾಯವಾಗಿ ವಸೂಲಿ ಮಾಡುತ್ತಿರುವ ಝಕಾತಿಗೆ ಬದಲಿಯಾದ ತೆರಿಗೆಯಿದು.
ಆರ್ಥಿಕವಾಗಿ ಸಬಲವಾಗಿರುವ ಮುಸ್ಲಿಮರೆಲ್ಲಾ ಝಕಾತ್ ನೀಡುವುದು ಕಡ್ಡಾಯವಾಗಿದೆ. ಸ್ತ್ರೀಯರು, ಮಕ್ಕಳು, ವೃದ್ಧರು, ರೋಗಿಗಳು… ಹೀಗೆ ಯಾರೂ ಕೂಡಾ ಇದರಿಂದ ಮುಕ್ತರಲ್ಲ, ಆದರೆ ಜಿಝಿಯಾದಲ್ಲಿ ಹಲವಾರು ಅನುಕೂಲತೆಗಳು, ರಿಯಾಯಿತಿಯೂ ಇದೆ. ಸ್ತ್ರೀಯರು, ಮಕ್ಕಳು, ಅಂಧರು, ವೃದ್ಧರು, ಮಾನಸಿಕ ಅಸ್ವಸ್ಥರು, ನಿತ್ಯರೋಗಿಗಳು, ಮಠದಲ್ಲಿರುವ ಸನ್ಯಾಸಿಗಳು, ಪುರೋಹಿತರಂತಹವರಿಗೆ ಜಿಝಿಯಾ ವಿಧಿಸಲಾಗುವುದಿಲ್ಲ. ಆದ್ದರಿಂದ ಜಿಝಿಯಾ ಮುಸ್ಲಿಮೇತರ ಪ್ರಜೆಗಳೊಂದಿಗೆ ಮಾಡಿದ ಅನ್ಯಾಯವಲ್ಲ, ಅವರಿಗೆ ಆರ್ಥಿಕವಾಗಿ ರಿಯಾಯಿತಿ ನೀಡುವ ಉಪಾಧಿಯಾಗಿದೆ.
ಯಾರಾದರೂ ಮುಸ್ಲಿಮರಂತೆ ಝಕಾತ್ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದರೆ ಇಸ್ಲಾಮೀ ರಾಷ್ಟ್ರವು ಅವರಿಂದ ಜಿಝಿಯಾ ವಸೂಲು ಮಾಡುವುದಿಲ್ಲ, ಇತಿಹಾಸದಲ್ಲಿ ಇದಕ್ಕೆ ಬಹಳಷ್ಟು ಉದಾಹರಣೆಗಳನ್ನು ಕಾಣಬಹುದು. ಒಂದು ಹೀಗಿದೆ: ಸರ್ ಥಾಮ ಆರ್ನಲ್ಡ್ ಬರೆಯುತ್ತಾರೆ: ‘ಅವರೊಂದಿಗೆ (ತಗ್ಲೀಬ್ ಗೋತ್ರ) ಮುಸ್ಲಿಮೇತರ ಗೋತ್ರಗಳಿಗೆ ನೀಡುವ ರಕ್ಷಣೆಗೆ ಬದಲಾಗಿ ನೀಡಬೇಕಾದ ತೆರಿಗೆ ‘ಜಿಝಿಯಾ’ ಪಾವತಿಸುವಂತೆ ಖಲೀಫ್ ಉಮರುಲ್ ಫಾರೂಕ್ ಹೇಳಿದರು. ಆದರೆ ಜಿಝಿಯಾ ಪಾವತಿಸುವುದು ಅವಮಾನವೆಂದು ಭಾವಿಸಿದ ತಗ್ಲೀಬ್ ಗೋತ್ರವು ತಮಗೆ ಮುಸ್ಲಿಮರಂತೆ ತೆರಿಗೆ (ಝಕಾತ್) ಪಾವತಿಸಲು ಅನುಮತಿಸಬೇಕೆಂದು ಕೇಳಿಕೊಂಡಿತು. ಖಲೀಫರು ಒಪ್ಪಿಗೆ ನೀಡಿದ ಬಳಿಕ ಅವರು ಮುಸ್ಲಿಮರಂತೆ ಜಿಝಿಯಾಕ್ಕಿಂತ ಎರಡು ಪಟ್ಟು ಹೆಚ್ಚು ಮೊತ್ತವನ್ನು ಖಜಾನೆಗೆ ನೀಡುತ್ತಿದ್ದರು.’ (ಇಸ್ಲಾಮ್: ಸಂದೇಶವೂ ಪ್ರಚಾರವೂ ಪುಟ 62)
ಇಸ್ಲಾಮೀ ರಾಷ್ಟ್ರದ ಸರ್ವ ಪ್ರಜೆಗಳ ರಕ್ಷಣೆಯು ಹೊಸ ಸರಕಾರದ ಮೇಲಿದೆ. ಮುಸ್ಲಿಮ್ -ಮುಸ್ಲಿಮೇತರ ಎಂಬ ಭೇದವಿಲ್ಲದೆ ಎಲ್ಲರೂ ಸೊತ್ತು ಸ್ವಾಭಿಮಾನವನ್ನು ರಕ್ಷಿಸಲು ಕಡ್ಡಾಯ ಸೈನಿಕ ಸೇವೆಯನ್ನು ಮುಸ್ಲಿಮರಿಗೆ ಜಾರಿಗೊಳಿಸಲಾಗಿತ್ತು. ಈ ರೀತಿ ಅವರ ಸಂರಕ್ಷಣೆಯನ್ನು ಸಂಪೂರ್ಣವಾಗಿ ವಹಿಸಿಕೊಂಡು ಸೈನಿಕ ಸೇವೆಯಿಂದ ಅವರನ್ನು ಮುಕ್ತಗೊಳಿಸಿದ್ದಕ್ಕೆ ಬದಲಾಗಿಯೂ ಜಿಝಯಾ ವಸೂಲಿ ಮಾಡಲಾಗುತ್ತಿತ್ತು. ಸೈನಿಕ ಸೇವೆಗೆ ಅಂದು ಸಂಬಳವಿರಲಿಲ್ಲವೆಂಬುದು ಗಮನಾರ್ಹ. ಯಾವುದೋ ಪರಿಸ್ಥಿತಿಯಲ್ಲಿ ದೇಶವಾಸಿಗಳಿಗೆ ಸಂರಕ್ಷಣೆ ನೀಡಲು ಸರಕಾರಕ್ಕೆ ಸಾಧ್ಯವಾಗದಿದ್ದರೆ ಜಿಝಯಾವನ್ನು ಮರಳಿ ನೀಡುವುದು ವಾಡಿಕೆಯಾಗಿತ್ತು. ಅದೇ ರೀತಿ ಸೈನಿಕ ಸೇವೆಗೆ ಸ್ವಯಂ ಸನ್ನದ್ಧರಾಗಿ ಮುಂದೆ ಬಂದವರನ್ನು ಜಿಝಿಯಾದಿಂದ ಮುಕ್ತಗೊಳಿಸಲಾಗುತ್ತಿತ್ತು. ಸರ್ ಥಾಮಸ್ ಆರ್ನಲ್ಡ್ ಬರೆಯುತ್ತಾರೆ: ‘ಕೆಲವರು ಹೇಳುವ ಪ್ರಕಾರ ಇಸ್ಲಾಮ್ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದವರಿಗೆ ಶಿಕ್ಷೆಯ ರೂಪದಲ್ಲಿ ಕ್ರೈಸ್ತರಿಂದ ಜಿಝಿಯಾವನ್ನು ವಸೂಲು ಮಾಡುತ್ತಿದ್ದುದಲ್ಲ. ಎಲ್ಲಾ ಮುಸ್ಲಿಮೇತರ ಪ್ರಜೆಗಳಿಂದಲೂ ಇದನ್ನು ಸಂಗ್ರಹಿಸಲಾಗುತ್ತಿತ್ತು. ಧಾರ್ಮಿಕ ಕಾರಣಗಳಿಂದ ಅವರನ್ನು ಕಡ್ಡಾಯ ಸೈನಿಕ ಸೇವೆಯಿಂದ ದೂರವಿರಿಸಲಾಗಿತ್ತು. ಮುಸ್ಲಿಮರು ನೀಡುತ್ತಿದ್ದ ರಕ್ಷಣೆಗೆ ಬದಲಿಯಾಗಿ ಅವರು ಜಿಝಿಯಾ ಕೊಡಬೇಕಾಗಿತ್ತು.’
‘ತುರ್ಕಿ ಆಡಳಿತ ಕಾಲದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಕ್ರೈಸ್ತರಿಗೆ ಜಿಝಿಯಾದಿಂದ ವಿನಾಯಿತಿ ನೀಡಲಾಗಿತ್ತು. ತೀರ ಪ್ರದೇಶಗಳಾದ ಸಿತ್ತಿರೋಸ್, ಗರಾನಿಯವನ್ನು ಕಾಯಲು ಶಸ್ತ್ರಧಾರಿಗಳ ಒಂದು ತಂಡವನ್ನು ನೀಡುತ್ತೇವೆಂಬ ಶರತ್ತಿನೊಂದಿಗೆ ಅಲ್ಬೇನಿಯಾದ ಕ್ರೈಸ್ತ ವರ್ಗವಾದ ಮೆಗಾರಿಗಳನ್ನು ತುರ್ಕಿಯಲ್ಲಿ ಜಿಝಿಯಾದಿಂದ ಮುಕ್ತಗೊಳಿಸಲಾಗಿತ್ತು. ತುರ್ಕಿ ಸೈನ್ಯಕ್ಕೆ ಮುಂಚೆಯೇ ಮೊದಲು ತೆರಳಿ ಸೇತುವೆ, ಹಾದಿಗಳನ್ನು ಸರಿಪಡಿಸುತ್ತಿದ್ದ ಕ್ರೈಸ್ತರಿಂದ ಜಿಝಿಯಾ ಪಡೆಯುತ್ತಿರಲಿಲ್ಲ, ಮಾತ್ರವಲ್ಲ ಕಂದಾಯ ವಸೂಲಿ ಮಾಡದೆ ಭೂಮಿಯನ್ನು ನೀಡಲಾಗಿತ್ತು.
ಹೈಸ್ರದ ಕ್ರೈಸ್ತರು ಸುಲ್ತಾನ್ ರಿಗೆ ಜಿಝಿಯಾ ನೀಡುತ್ತಿರಲಿಲ್ಲ. ಅದಕ್ಕೆ ಬದಲಾಗಿ 250 ದೃಢಕಾಯದ ನಾವಿಕರನ್ನು ತುರ್ಕಿ ಸೇನೆಗೆ ನೀಡಿದರು.
ಅರ್ಮತ್ತೋಳಿ ಎಂದು ಕರೆಯಲಾಗುತ್ತಿದ್ದ ದಕ್ಷಿಣ ರುಮೇನಿಯಾದವರು ಹದಿನಾರು, ಹದಿನೇಳನೇ ಶತಮಾನದಲ್ಲಿ ತುರ್ಕಿ ಸೈನ್ಯದ ಮುಖ್ಯ ಅಂಗವಾಗಿದ್ದರು. ಸ್ಕುಟಾರ್ಗೆ ಪಶ್ಚಿಮದಲ್ಲಿರುವ ಪರ್ವತಗಳಲ್ಲಿ ವಾಸಿಸಿದ್ದ ಮಿರ್ದಿಗಳು ಎಂಬ ಅರೇಬಿಯನ್ ಕ್ಯಾಥೋಲಿಕರನ್ನು ತೆರಿಗೆಯಿಂದ ಮುಕ್ತಗೊಳಸಲಾಗಿತ್ತು. ಯುದ್ಧದ ಸಂದರ್ಭದಲ್ಲಿ ಆಯುಧ ಧಾರಿಗಳನ್ನು ನೀಡುತ್ತೇವೆಂಬ ಒಪ್ಪಂದವಿತ್ತು. ಅದರಂತೆ ಗ್ರೀಕ್ನ ಕ್ರೈಸ್ತರಿಗೂ ಜಿಝಿಯಾ ವಿಧಿಸಲಿಲ್ಲ. ಕಾನ್ ಸ್ಟಾಂಟಿನೋಪಲ್ಗೆ ಶುದ್ಧ ಜಲವನ್ನುತರುತ್ತಿದ್ದ ಕಲ್ಲು ಗುಂಡಿಗಳನ್ನು ಅವರೇ ಸಂರಕ್ಷಿಸಿದ್ದರು. ನಗರದ ಮದ್ದುಗುಂಡಿನ ಕಾರ್ಖಾನೆಗೆ ಕಾವಲುಗಾರರಾದವರಿಗೂ ಜಿಝಿಯಾ ಇರಲಿಲ್ಲ. ಆದರೆ ಈಜಿಪ್ಟಿನ ಗ್ರಾಮೀಣ ಕೃಷಿಕರನ್ನು ಸೈನಿಕ ಸೇವೆಯಿಂದ ದೂರವಿರಿಸಿದಾಗ ಅವರಿಗೂ ಕೂಡ ಕ್ರೈಸ್ತರಂತೆ ತೆರಿಗೆಯನ್ನು ವಿಧಿಸಲಾಯಿತು.’ (ಸರ್ ಥಾಮಸ್-ಆರ್ನಲ್ಡ್ ಇಸ್ಲಾಮ್: ಸಂದೇಶವೂ ಪ್ರಚಾರವೂ, ಪುಟ 73-76)
ಪ್ರವಾದಿವರ್ಯರ ಕಾಲದಲ್ಲಿ ಮದೀನಾದ ಮುಸ್ಲಿಮೇತರ ವಿಭಾಗಗಳು ರಾಷ್ಟ್ರದ ರಕ್ಷಣಾ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದುದರಿಂದ ಜಿಝಿಯಾವನ್ನು ಪಡೆಯುತ್ತಿರಲಿಲ್ಲ.
ಸಂಕ್ಷಿಪ್ತವಾಗಿ, ಪಾಶ್ಚಾತ್ಯರ ಅಪಪ್ರಚಾರದಂತ, ವಿಶೇಷವಾಗಿ ವರ್ಣಿಸುವಂತೆ ಜಿಝಿಯಾ ಧಾರ್ಮಿಕ ತೆರಿಗೆ ಖಂಡಿತ ಅಲ್ಲ, ವಾಸ್ತವದಲ್ಲಿ ಯುದ್ಧದ ತೆರಿಗೆಯಾಗಿದೆ. ಶಕ್ತಿ, ಸಾಮರ್ಥ್ಯವಿದ್ದರೂ ಕೂಡ ಸೈನ್ಯದಲ್ಲಿ ಸೇವೆಗೆ ಸಿದ್ಧರಾಗದವರಿಂದ ಅದನ್ನು ಸಂಗ್ರಹಿಸಲಾಗುತ್ತದೆ. ಅಂದು ಕಡ್ಡಾಯ ಸೈನಿಕ ಸೇವೆಯಿದ್ದ ಸಂದರ್ಭದಲ್ಲೂ ವಿನಾಯಿತಿ ನೀಡಲ್ಪಟ್ಟು ದೈಹಿಕ ಹಾಗೂ ಆರ್ಥಿಕ ಸುರಕ್ಷತೆ ಅನುಭವಿಸಿದುದರ ಪ್ರತಿಫಲವಾಗಿತ್ತು. ಆದರೆ ಇಸ್ಲಾಮೀ ರಾಷ್ಟ್ರದ ಮುಸ್ಲಿಮ್ ಪ್ರಜೆಗಳು ಕಡ್ಡಾಯ ಸೈನಿಕ ಸೇವೆಯನ್ನು ನೀಡಿದರೂ ಸರ್ಕಾರಕ್ಕೆ ಝಕಾತ್ ನೀಡಬೇಕಾಗಿತ್ತು. ಎಲ್ಲಾ ಕಾಲದಲ್ಲೂ ಝಕಾತ್ ನ ಮೌಲ್ಯವು ಜಿಝಿಯಾಕ್ಕಿಂತ ಬಹಳಷ್ಟ ಹೆಚ್ಚಾಗಿತ್ತು ಎಂಬುದು ಗಮನಾರ್ಹ. ಮುಸ್ಲಿಮೇತರ ಪ್ರಜೆಗಳು ಝಕಾತ್ ನೀಡಲು ಅಥವಾ ಸೈನಿಕ ಸೇವೆ ನೀಡಲು ಸ್ವಯಂ ಸಿದ್ಧರಾದರೆ ಜಿಝಿಯಾದಿಂದ ಮುಕ್ತಗೊಳಿಸಿಲಾಗುತ್ತಿತ್ತು. ಸೇನಾವೃತ್ತಿಯು ವರಮಾನವಿರುವ ಉದ್ಯೋಗವಾಗಿ ಬದಲಾದ ಇಂದಿನ ಕಾಲದಲ್ಲೂ ಮುಸ್ಲಿಮೇತರ ಪ್ರಜೆಗಳಿಗೆ ಜಿಝಿಯಾ ಹೇರಬಾರದು. ಆದ್ದರಿಂದ ಇಸ್ಲಾಮೀ ರಾಷ್ಟ್ರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಸಂಕಷ್ಟ ಅನುಭವಿಸುತ್ತಿಲ್ಲ, ಮಾತ್ರವಲ್ಲದೆ ಝಕಾತ್ ನಿಂದ ಮುಕ್ತರಾಗಿರುವುದರಿಂದ ಮುಸ್ಲಿಮರಿಗಿಂತಲೂ ಉತ್ತಮ ಆರ್ಥಿಕತೆಯನ್ನು ಜೀವನ ಸೌಕರ್ಯವನ್ನು ಅನುಭವಿಸುತ್ತಿದ್ದಾರೆ.
ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ
IslamKannada News Portal
