Home / ಪ್ರಶ್ನೋತ್ತರ / ಪರಲೋಕಕ್ಕೆ ಆಧಾರವಿದೆಯೇ?

ಪರಲೋಕಕ್ಕೆ ಆಧಾರವಿದೆಯೇ?

ಮರಣದ ಬಳಿಕ ನಮ್ಮನ್ನು ಪುನಃ ಎಬ್ಬಿಸಲಾಗುವಂತಹ ಪರಲೋಕವಿದೆಯೆಂಬುದಕ್ಕೆ ಆಧಾರವಿದೆಯೇ? ಪರಲೋಕವಿದೆಯೆಂಬ ವಿಶ್ವಾಸ ಸರಿಯೇ?

ಜ್ಞಾನವನ್ನು ಅರಿಯಲು ನಮಗೆ ಐದು ಇಂದ್ರಿಯಗಳಿವೆ. ಇಲ್ಲಿ ಲೌಕಿಕ ವಿದ್ಯೆಗೆ ಹಲವು ವಿಧಗಳಿವೆ. ಅವುಗಳ ಪ್ರತಿಯೊಂದು ಬಾಗಿಲು ತೆರೆಯಲು ಬೇರೆ ಬೇರೆ ಕೀಲಿಕೈ ಬೇಕು. ಒಂದೊಂದಕ್ಕೂ ವಿಶೇಷವಾದ ಮಾನದಂಡಗಳಿವೆ. ಗಣಿತ ಶಾಸ್ತ್ರವನ್ನು ಕಲಿಯಲು ಉಪಯೋಗಿಸುವ ವಿಧಾನದಿಂದ ಜೀವಶಾಸ್ತ್ರ ಕಲಿಯಲು ಸಾಧ್ಯವಿಲ್ಲ, ಗಣಿತದ ವಿವಿಧ ಮಗ್ಗಲುಗಳಿಗೆ ವಿವಿಧ ವಿಧಾನಗಳು ಬೇಕು. ವೃತ್ತಕ್ಕೆ 360 ಡಿಗ್ರಿ, ತ್ರಿಭುಜಕ್ಕೆ 180 ಡಿಗ್ರಿಯೆಂಬ ಸೂತ್ರವನ್ನು ಸ್ವೀಕರಿಸದೆ ರೇಖಾಗಣಿತ ಕಲಿಯಲಾಗುವುದಿಲ್ಲ, ಬೀಜಗಣಿತದ ವಿಧಾನವೇ ಬೇರೆ. ಪ್ರಾಣಿಶಾಸ್ತ್ರ ಸಸ್ಯಶಾಸ್ತ್ರಗಳಿಗೂ ಪ್ರತ್ಯೇಕ ರೀತಿ ನಿಯಮಗಳಿವೆ.

ಲೌಕಿಕ ವಿದ್ಯೆಗೆ ಬೇರೆ ಬೇರೆ ಸೂತ್ರಗಳು, ವಿಧಾನಗಳು ಅನಿವಾರ್ಯವಾಗಿರುವಾಗ ಆಧ್ಯಾತ್ಮಿಕ ಜ್ಞಾನ ಗಳಿಸಲು ಖಂಡಿತವಾಗಿಯೂ ಭಿನ್ನವಾದ ಮಾರ್ಗ ಅನಿವಾರ್ಯವಾಗಿದೆ. ದೇವ, ಪರಲೋಕ, ಸ್ವರ್ಗ, ನರಕ, ದೇವಚರ ಹಾಗು ಪಿಶಾಚಿಯಂತಹ ಅಲೌಕಿಕ ವಿಷಯಗಳ ಅರಿವಿಗೆ ಮನುಷ್ಯರಲ್ಲಿ ವಿಶೇಷ ವಿಧಾನಗಳಿಲ್ಲ, ಇತಿಹಾಸದಲ್ಲಿ ವಿವಿಧ ಕಾಲ, ದೇಶ, ಭಾಷೆಗಳಲ್ಲಿ ನಿಯೋಜಿತರಾದ ದೇವ ಸಂದೇಶವಾಹಕರ ದಿವ್ಯ ಸಂದೇಶಗಳು ಮಾತ್ರ ಇದೆ. ತಮ್ಮ ಆರನೇಯ ಇಂದ್ರಿಯ ಮೂಲಕ ಪಡೆದ ಅನುಗ್ರಹಿತರಾದ ಪ್ರವಾದಿಗಳು ಹೇಳುವ ದಿವ್ಯಬೋಧನೆಗಳನ್ನು ಪಂಚೇಯಂದ್ರಿಗಳು ಮಾತ್ರ ಇರುವವರು ನಿಷೇಧಿಸುವುದು ಕಣ್ಣು ಇರುವವರು ಹೇಳುವುದನ್ನು ಕೇಳಿ ಕುರುಡರು ಪ್ರಶ್ನೆ ಕೇಳಿದಂತಾಗುತ್ತದೆ. ಎಲೆಯ ಬಣ್ಣ ಹಸಿರು, ಕಾಗೆಯ ಬಣ್ಣ ಕಪ್ಪು, ಹಾಲಿನ ಬಣ್ಣ ಬಿಳಿ ಎಂದು ನಾವು ಹೇಳುವಾಗ, ತಾವು ಅದನ್ನು ಕಂಡಿಲ್ಲವೆಂದು ಅಂಧರು ನಿರಾಕರಿಸುತ್ತಾರೆಂದಾದರೆ ವರ್ಣಮಯ ಪ್ರಪಂಚ ಅವರಿಗೂ ಅನ್ಯವೂ ಅಪರಿಚಿತವೂ ಅಪ್ರಾಪ್ತವಾಗುತ್ತದೆ. ದಿವ್ಯಸಂದೇಶವನ್ನು ಅಂಗೀಕರಿಸದವರ ಸ್ಥಿತಿಯೂ ಅಷ್ಟೆ ಅಲೌಕಿಕ ಜ್ಞಾನದಿಂದ ಅವರು ಎಂದೆಂದೂ ವಂಚಿತರಾಗುತ್ತಾರೆ.

ಮರಣದ ಬಳಿಕದ ಲೋಕದ ಕುರಿತು, ಅಲ್ಲಿನ ಸ್ವರ್ಗ-ನರಕಗಳ ಕುರಿತು ಕಾಲ ಕಾಲಕ್ಕೆ ವಿವಿಧ ಕಡೆಗಳಲ್ಲಿ ಬಂದ ದೇವಸಂದೇಶವಾಹಕರು ಮಾನವರಿಗೆ ತಿಳಿಸಿಕೊಟ್ಟಿದ್ದರು. ಅವರು ಅವುಗಳ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಅದರೊಂದಿಗೆ ಈ ಭೌತಿಕ ಲೋಕದ ಹಾಗೂ ಮನುಷ್ಯನ ಪರಿಸ್ಥಿತಿಗಳು ಪರಲೋಕವೆಂಬ ವಾಸ್ತವಿಕತೆಯೆಡೆಗೆ ಬೆಳಕು ಚೆಲ್ಲುತ್ತದೆ.

ನ್ಯಾಯ ಪಾಲನೆಯಾಗಬಾರದೆಂದು ಭಾವಿಸುವವರು ಬಹಳ ವಿರಳ. ಅನ್ಯಾಯ ಮಾಡುವವರೂ ನ್ಯಾಯಕ್ಕಾಗಿ ವಾದಿಸುತ್ತಾರೆ. ತಾವು ನ್ಯಾಯದ ವಾಹಕರೆಂದು ಹೇಳಿಕೊಳ್ಳುತ್ತಾರೆ. ಒಬ್ಬನು ವಧಿಸಲ್ಪಟ್ಟರೆ ಆತನ ಆಶ್ರಿತರು ಕೊಲೆಗಾರನಿಗೆ ಶಿಕ್ಷೆಯಾಗಬೇಕೆಂದು ಬಯಸುತ್ತಾರೆ. ನ್ಯಾಯದ ಬೇಡಿಕೆಯೇ ಲೋಕದಲ್ಲಿ ನೀತಿ, ನ್ಯಾಯ ವ್ಯವಸ್ಥೆಗಳು, ನ್ಯಾಯಾಲಯಗಳು, ನಿಯಮ ಪಾಲಕರು ಇರಲು ಕಾರಣವಾಗಿದೆ. ನ್ಯಾಯ ಸ್ಥಾಪನೆಯಾಗಿರುವ ದೇಶ ಅಥವಾ ಸಮೂಹವು ನಮಗೆ ಗೋಚರಿಸುತ್ತಿಲ್ಲ. ಯಾರು ಎಷ್ಟೇ ಶ್ರಮಪಟ್ಟರೂ ಸಣ್ಣ ಪ್ರಮಾಣದ ನ್ಯಾಯ ಮಾತ್ರ ದೊರೆಯುತ್ತದೆ. ಉದಾಹರಣೆಗೆ ಓರ್ವ ವ್ಯಕ್ತಿಯನ್ನು ಕೊಂದವನಿಗೆ ಹೆಚ್ಚೆಂದರೆ ಮರಣದಂಡನೆಯನ್ನು ನೀಡಬಹುದು. ಆದರೆ ಅದರಿಂದ ಕೊಲೆಯಾದವನ ಪತ್ನಿಯ ವಿರಹದ ನೋವು, ಅನಾಥತೆಯ ದುಃಖ ಅನುಭವಿಸುವ ಮಕ್ಕಳಿಗೆ ತಂದೆ ಮರಳಿ ಲಭಿಸುವುದು ಅಸಾಧ್ಯ. ಅಂದರೆ ಕೊಲೆಗಾರನನ್ನು ಕೊಂದರೂ ಮರ್ದಿತರಿಗೆ ಅದು ಸೂಕ್ತ ಪರಿಹಾರವಾಗುವುದಿಲ್ಲವೆಂದು ಇದರಿಂದ ಮನವರಿಕೆಯಾಗುತ್ತದೆ. ಆದ್ದರಿಂದ ಇದು ಭೂಮಿಯ ಶಾಂತಿ ಸ್ಥಾಪನೆಗೆ ಒಂದು ಉಪಾಧಿ ಮಾತ್ರ. ಅದೂ ಕೊಲೆಗಾರರಿಗೆ ಶಿಕ್ಷೆಯಾದರೆ ಮಾತ್ರ.

ಆದರೆ ಇಂದು ನಮ್ಮ ಸಮಾಜದ ಪರಿಸ್ಥಿತಿ ಹೇಗಿದೆ? ಎಲ್ಲೆಡೆಯೂ ಕೊಲೆಗಡುಕರು ಸ್ವಚ್ಛಂದವಾಗಿ ವಿಹರಿಸುತ್ತಿದ್ದಾರೆ. ದರೋಡೆಕೋರರು ಎಲ್ಲವನ್ನೂ ತಮ್ಮ ವಶಕ್ಕೆ ಪಡೆದಿದ್ದಾರೆ. ವಂಚಕರು ಗೌರವ ಪಡೆಯುತ್ತಿದ್ದಾರೆ. ಅಕ್ರಮಿಗಳು ದೇಶವನ್ನಾಳುತ್ತಿದ್ದಾರೆ. ಅಪರಾಧಿಗಳು ಯಾವುದೇ ಭಯವಿಲ್ಲದೆ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾರೆ. ಹಣ ಸ್ಥಾನಮಾನಕ್ಕಾಗಿ ಬಲಶಾಲಿಗಳು ಪಕ್ಷ ಸೇರುತ್ತಾರೆ. ಆಡಳಿತಗಾರರು ಸಾರ್ವಜನಿಕ ಬೊಕ್ಕಸವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ, ಜನಸಾಮಾನ್ಯರು ಶೋಷಣೆಗೊಳಗಾಗುತ್ತಿದ್ದಾರೆ. ಅನ್ಯಾಯ, ಅಕ್ರಮ ಮೇರೆ ಮೀರಿದೆ. ನ್ಯಾಯಕ್ಕಾಗಿ ಹೋರಾಟವು ವ್ಯರ್ಥವಾಗುತ್ತಿದೆ. ನ್ಯಾಯವು ಹಲವೊಮ್ಮೆ ಮರೀಚಿಕೆಯೇ ಆಗಿ ಬಿಡುತ್ತದೆ. ಬಹುಪಾಲು ಜನರಿಗೆ ನ್ಯಾಯವು ಅಪರಿಚಿತವಾಗಿದೆ. ಸಜ್ಜನರು ಹಾಗೂ ಸಮಾಜ ಸೇವಕರು ತೀವ್ರ ಕಷ್ಟನಷ್ಟ ಅನುಭವಿಸುತ್ತಿದ್ದಾರೆ. ಅಮಾಯಕರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಿಸ್ವಾರ್ಥ ಸೇವಕರು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಆದರೆ ಸಮಾಜ ಘಾತುಕ ಶಕ್ತಿಗಳು ಸ್ವಲ್ಪವೂ ರೋಮ ಕೊಂಕದೆ ಮೆರೆಯುತ್ತಿದ್ದಾರೆ. ಒಬ್ಬ ವ್ಯಕ್ತಿಯನ್ನು ಕೊಂದವನನ್ನು ಬದಲಿಯಾಗಿ ಕೊಲ್ಲಲು ಸಾಧ್ಯವಾಗಬಹುದು. ಆದರೆ ಹತ್ತು, ನೂರು, ಸಾವಿರು ಜನರನ್ನು ಕೊಂದವನನ್ನು ಶಿಕ್ಷಿಸುವುದು ಸುಲಭವಲ್ಲ. ಅಂತಹ ಕ್ರೂರ ಕೃತ್ಯಗಳಿಗೆ ಸೂಕ್ತ ಶಿಕ್ಷೆ ನೀಡಲು ಇಲ್ಲಿನ ಕಾನೂನು ವ್ಯವಸ್ಥೆಗೂ ಇನ್ನಾವ ಶಕ್ತಿಗೂ ಸಾಧ್ಯವಿಲ್ಲ ಕೊಲ್ಲಲ್ಪಟ್ಟ ಮುಗ್ಧರು ಹಾಗೂ ಅವರ ಆಶ್ರಿತರಿಗೆ ಸಮಸ್ಯೆಗೆ ಸೂಕ್ತ ಪರಿಹಾರ ನೀಡಲು ಎಲ್ಲರೂ ಅಶಕ್ತರೆ. ಆದ್ದರಿಂದ ಮರಣದಿಂದ ಮನುಷ್ಯ ಜೀವನ ಕೊನೆಗೊಳ್ಳವುದೆಂದಾದರೆ ಅದು ಅನ್ಯಾಯವೇ ಸರಿ.

ಹಾಗಾದರೆ ಈ ಪ್ರಪಂಚದ ಸುವ್ಯವಸಿತ ಸೃಷ್ಟಿಯು ಅರ್ಥಶೂನ್ಯವೂ ಅಸಂಬದ್ಧವೂ ಆಗುತ್ತದೆ. ಆರುನೂರು ಕೋಟಿ ಮನುಷ್ಯರಿಗೆ 600 ಕೋಟಿ ಮುಖ, ಕೈಬೆರಳುಗಳು, ವ್ಯತಿರಿಕ್ತ ದೇಹ ವಾಸನೆ, ತಲೆಕೂದಲುಗಳು, ರಕ್ತದ ಹನಿಗಳು ನೀಡಲ್ಪಟ್ಟ ಅತ್ಯಂತ ಯುಕ್ತಿಪೂರ್ಣವಾಗಿ ಸೃಷ್ಟಿಸಲಾದ ಮನುಷ್ಯನ ಅಂತ್ಯ ಹೀಗೆ ಅನ್ಯಾಯದಲ್ಲಿ ಕೊನೆಗೊಳ್ಳುವುದು ಅಸಂಭವ. ಆದ್ದರಿಂದ ಸಂಪೂರ್ಣ ನ್ಯಾಯ ವ್ಯವಸ್ಥೆ ಇರಲೇಬೇಕು. ಅದು ಭೂಮಿಯ ಮೇಲೆ ಅಸಾಧ್ಯವಾದುದರಿಂದ ಪರಲೋಕವು ಅನಿವಾರ್ಯ. ಎಲ್ಲರೂ ತಮ್ಮ ಕರ್ಮಗಳ ಫಲವನ್ನು ಅಲ್ಲಿ ಅನುಭವಿಸುತ್ತಾರೆ. ಒಳಿತನ್ನು ಮಾಡಿದವನಿಗೆ ಸತ್ಪಲವು, ಕೆಡುಕಿಗೆ ಶಿಕ್ಷೆಯು ಲಭಿಸುತ್ತದೆ.

ಮರಣದ ನಂತರ ನ್ಯಾಯ ದೊರೆಯುವ ಪರಲೋಕವಿಲ್ಲವೆಂದಾದರೆ ನ್ಯಾಯ ಪ್ರಜ್ಞೆಯುಳ್ಳವರು ನಿತ್ಯವೂ ನಿರಾಶರಾಗಿರುತ್ತಾರೆ. ಸದಾ ಅಸ್ವಸ್ಥತೆ, ಅಸಂತೃಪ್ತಿ ಅವರನ್ನು ಕಾಡುತ್ತಿರುತ್ತದೆ. ಎಲ್ಲ ಮಾನವರು ಸ್ವಭಾವತಃ ನ್ಯಾಯ ಬಯಸುವವರಾಗಿದ್ದಾರೆ. ಆದ್ದರಿಂದ ಅದನ್ನು ನೀಡುವ ಪರಲೋಕವು ನ್ಯಾಯದ ಬೇಡಿಕೆಯಾಗಿದೆ. ಮಾನವ ಮನಸ್ಸಿನ ಆಶೆಯ ಬಯಕೆಯ ಸಾಕ್ಷಾತ್ಕಾರವೂ ಹೌದು. ಬಹಳ ಸುಸೂತ್ರವಾಗಿ ಸೃಷ್ಟಿಸಲ್ಪಟ್ಟ ಮಾನವನ ಅಮೂಲ್ಯ ಜೀವವು ಅನ್ಯಾಯವಾಗಿ ಮರಣದೊಂದಿಗೆ ಕೊನೆಗೊಳ್ಳುವುದೆಂದು ಭಾವಿಸುವುದಕ್ಕಿಂತ, ಪ್ರತಿಯೊಬ್ಬರಿಗೂ ನ್ಯಾಯವನ್ನು ದೊರಕಿಸಿಕೊಡುವ ಪರಲೋಕವಿದೆಯೆಂಬ ವಿಶ್ವಾಸವೇ ಯುಕ್ತಿಪೂರ್ಣವೂ ಬುದ್ದಿವಂತಿಕೆಯೂ ಅಲ್ಲವೇ?

ಮಾನವ ಜೀವನವು ಸಾಗುವ ಪ್ರತಿಯೊಂದು ವಿಷಯಗಳನ್ನು ಬಹಳ ಸ್ಪಷ್ಟವಾಗಿ, ಜಾಗೂರುಕತೆಯಿಂದ ದಾಖಲಿಸಿಡಲಾಗುತ್ತದೆ. ಆದರೆ ಪ್ರತಿಭಾಶಾಲಿಯಾದ ವೈದ್ಯರಿಗೆ ಶಸ್ತ್ರಕ್ರಿಯೆಯಿಂದ ಅದನ್ನು ಕಾಣಲು ಸಾಧ್ಯವಿಲ್ಲ, ಆಧುನಿಕ ಲೋಕದ ತಂತ್ರಜ್ಞಾನದಿಂದ ಅದರ ಪತ್ತೆ ಸಾಧ್ಯವಿಲ್ಲ, ಆದರೆ ಮನುಷ್ಯನಿಗೆ ಅದನ್ನು ನೆನಪಿಸಲು ಸಾಧ್ಯವಿದೆ. ಆದ್ದರಿಂದ ನಾವು ಸ್ಪರ್ಶಿಸುವ ಸ್ಥಳಗಳಲ್ಲಿ ನಮ್ಮ ಬೆರಳಚ್ಚು ಉಳಿಯುತ್ತದೆ. ನಾವು ಸಂಚರಿಸುವ ಕಡೆಗಳಲ್ಲಿ ನಮ್ಮ ದೇಹದ ವಾಸನೆಯು ಹರಡುತ್ತದೆ, ನಮ್ಮ ಮಾತುಗಳು ಅಂತರಿಕ್ಷದಲ್ಲಿ ಸೇರಿ ಬಿಡುತ್ತದೆ. ಹೀಗೆ ನಮ್ಮ ಮಾತು, ಕೃತಿ, ಚಲನಗಳು, ವಿಚಾರ ಚಿಂತನೆಗಳೆಲ್ಲವು ನಮ್ಮ ಪರವಾಗಿಯೋ, ವಿರುದ್ಧವಾಗಿಯೋ ಪ್ರತಿಕ್ರಿಯಸಲು, ಅಥವಾ ಸಾಕ್ಷ್ಯವಹಿಸಲು ದಾಖಲಿತವಾಗಿದೆ. ನಮ್ಮಿಂದ ಉದುರುವ ಕೂದಲುಗಳು, ಸುರಿಯುವ ರಕ್ತ, ಸ್ರವಿಸುವ ಇಂದ್ರಿಯ ಹನಿಗಳು ಸಾಕ್ಷ್ಯವಾಗಿ ಪರಿವರ್ತಿತವಾಗುತ್ತದೆ.

ಒಟ್ಟಿನಲ್ಲಿ ಶೂನ್ಯದಿಂದ ಪ್ರಪಂಚವನ್ನು, ಮಾನವರೂ ಸೇರಿದಂತೆ ಸರ್ವವನ್ನು ಬಹಳ ಸುವ್ಯವಸ್ಥಿತ ಹಾಗೂ ಯುಕ್ತಿಪೂರ್ಣವಾಗಿ ಸೃಷ್ಟಿಸಿದ ದೇವನಿಗೆ ಮಾನವರನ್ನು ಪುನಃ ಸೃಷ್ಟಿಸುವುದು ಕಷ್ಟಕರವೋ ಅಸಾಧ್ಯವೋ ಅಲ್ಲ, ಆದ್ದರಿಂದ ಮರಣಾನಂತರ ಮನುಷ್ಯರೆಲ್ಲ ಎಬ್ಬಿಸಲ್ಪಡುವರೆಂದು, ತಮ್ಮ ಕರ್ಮಗಳ ಫಲವನ್ನು ಅನುಭವಿಸುತ್ತಾರೆಂದು, ದೇವನು ತನ್ನ ಸಂದೇಶವಾಹಕರ ಮೂಲಕ ತಿಳಿಸಿದ ವಿಷಯವು ಖಂಡಿತವಾಗಿಯೂ ಸಂಭವಿಸುವುದು. ಅದು ಅಸಂಭವನೀಯವೊ, ಯುಕ್ತಿಗೆ ನಿಲುಕದಂತಹ ಮಾತೋ ಅಲ್ಲ, ಬದಲಾಗಿ ಅತ್ಯಂತ ಅದ್ಭುತಕರ ವಾದ. ಮಾನವ ಸೃಷ್ಟಿಯು ಅನ್ಯಾಯವಾಗಿ, ಅರ್ಥರಹಿತವಾಗಿ ಶಾಶ್ವತವಾಗಿ ಕೊನೆಗೊಳ್ಳುತ್ತದೆಂಬ ವಾದವು ವಿಶ್ವಾಸಕ್ಕೆ ಅನರ್ಹವೂ ಯುಕ್ತಿಗೆ ವಿರುದ್ದವೂ ಅಗಿದೆ.

ಇನ್ನೊಂದು ವಿಷಯವೇನೆಂದರೆ, ನಾವು ಈಗಿರುವ ಪರಿಸ್ಥಿತಿಯಲ್ಲೇ ಇದ್ದುಕೊಂಡು ವಾಸ್ತವಿಕತೆಯನ್ನು ಮನದಟ್ಟು ಮಾಡಿಕೊಂಡಿದ್ದೇವೆಂದು ಭಾವಿಸುವುದು ಸರಿಯಲ್ಲ, ಉಪಕರಣವಿಲ್ಲದೆ ನೆರಳನ್ನು ನೋಡುವಾಗ ಅದು ನಿಶ್ಚಲವೆಂದು ತೋರುತ್ತದೆ. ಆದರೆ ನೆರಳಿಗೆ ಸದಾ ಸ್ವಲ್ಪ ಚಲನೆಯಿದೆಯಲ್ಲವೇ? ಮರೀಚಿಕೆಯನ್ನು ನೀರೆಂದು ಗ್ರಹಿಸುವುದಿದೆ. ಆದರೆ ಅದರ ಸಮೀಪ ತಲುಪಿದಾಗ ಸತ್ಯಸಂಗತಿ ಅರಿವಾಗುತ್ತದೆ. ನಿದ್ದೆಯಲ್ಲಿ ಕಾಣುವ ಕನಸುಗಳಲ್ಲಿರುವ ಸಂಗತಿಗಳು ಸತ್ಯವೆಂದೇ ಭಾಸವಾಗುತ್ತದೆ. ಆದರೆ ನಮಗೆ ಎಚ್ಚರವಾಗುವುದರೊಂದಿಗೆ ನಮ್ಮ ಅನುಭವವೇ ಬೇರೆಯಾಗಿರುತ್ತದೆ. ಆದ್ದರಿಂದ ಪಂಚೇಂದ್ರಿಯಗಳಿಂದ ನಮಗೆ ತಿಳಿಯದ ದಿವ್ಯಜ್ಞಾನವನ್ನು ಆರನೇ ಇಂದ್ರಿಯದ ಮೂಲಕ ದೇವಸಂದೇಶವಾಹಕರಿಗೆ ಗ್ರಹಿಸಲು ಸಾಧ್ಯವಿದೆ. ಕನಸು ಕಂಡವನು ಹೇಳುವ ವಿಷಯಗಳಿಂದ ವಾಸ್ತವವು ಭಿನ್ನವಾಗಿರುತ್ತದೆಯೆಂದು ಎಚ್ಚರ ಇರುವವರು ತಿಳಿಯುವಂತೆ, ಪಂಚೇಂದ್ರಿಯಗಳು ಮಾತ್ರ ಇರುವ ಮನುಷ್ಯನಿಗೆ ಕಾಣುವ ಭಿನ್ನವಾದ ಲೋಕವಿದೆಯೆಂದು ದೇವ ಸಂದೇಶವಾಹಕರಿಗೆ ತಿಳಿಯುತ್ತದೆ. ಅವರು ಅದನ್ನೇ ಸಮಾಜಕ್ಕೆ ಬೋಧಿಸುತ್ತಾರೆ. ಅಲೌಕಿಕ ಜ್ಞಾನವನ್ನು ಪಡೆಯುವ ಏಕ ಮಾರ್ಗ ಅದು ಮಾತ್ರ.

‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …