Home / ಪ್ರಶ್ನೋತ್ತರ / ಇಸ್ಲಾಮ್ ಮತ್ತು ಪರೋಕ್ಷ ಜ್ಞಾನ?

ಇಸ್ಲಾಮ್ ಮತ್ತು ಪರೋಕ್ಷ ಜ್ಞಾನ?

ಪ್ರಶ್ನೆ: ಲೋಕದಲ್ಲಿ ಯಾರಿಗೂ ತಮ್ಮ ಭಾವೀ ಜೀವನದ ಕುರಿತು ಜ್ಞಾನವಿಲ್ಲವೆಂದು ಪೀಠಿಕೆಯಲ್ಲಿ ತಿಳಿಸಿದ್ದೀರಿ. ಆದರೆ ಜನನ ವೇಳೆಯ ನಕ್ಷತ್ರಗಳ ಆಧಾರದಲ್ಲಿ ಜಾತಕ ಫಲಗಳು ಹೇಳಲಾಗುತ್ತದೆ. ಪ್ರಮುಖ ಜ್ಯೋತಿಷಿಗಳ ಜಾತಕಗಳು ಹಲವೊಮ್ಮೆ ಸತ್ಯವಾಗುತ್ತದೆ. ಇದರ ಕುರಿತು ನೀವೇನು ಹೇಳುವಿರಿ?

ಉತ್ತರ: ನಮ್ಮ ಜನ್ಮ ದಿನಾಂಕ, ವೇಳೆ, ರಾಶಿ ಹಾಗೂ ನಕ್ಷತ್ರಗಳ ಆಧಾರದಲ್ಲಿ ಭವಿಷ್ಯದ ವಿವರಗಳನ್ನು ತಿಳಿಯಬಹುದೆಂಬ ಭಾವನೆ ನಮ್ಮ ಸಮಾಜದಲ್ಲಿದೆ. ನಮ್ಮಲ್ಲಿ ದಿನಂಪ್ರತಿ ಸಾವಿರಾರು ಸಂಖ್ಯೆಗಳಲ್ಲಿ ಮಾರಾಟವಾಗುವ ಹಲವು ಪತ್ರಿಕೆಗಳು ಈ ವಾರ ನಮಗೇನು ಸಂಭವಿಸುತ್ತದೆ ಎಂದು ನಮಗೆ ತಿಳಿಸಿಕೊಡುತ್ತದೆಯಲ್ಲವೇ? ಪ್ರತಿ ವಾರದಲ್ಲಿ ಸಂಭವಿಸಲಿರುವ ಘಟನೆಗಳ ವಿವರಗಳು ಮೊದಲೇ ತಿಳಿಯುವುದಿದ್ದರೆ ಅದು ಒಂದು ಮಹತ್ವಪೂರ್ಣ ಸಾಧನೆಯಾಗಿದೆ. ಅನಾವಶ್ಯಕವಾದ ಭಯ, ಗೊಂದಲಗಳಿಂದ ದೂರವಿರಲು, ಈಡೇರದ ನಿರೀಕ್ಷೆಗಳನ್ನು ಬೆಂಬತ್ತದಿರಲು ಹಾಗೂ ಅತ್ಯಂತ ಯೋಜನಾಬದ್ಧವಾಗಿ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿತ್ತು. ಆದರೆ ನಕ್ಷತ್ರ ಫಲಗಳಿಂದ ಇವೆಲ್ಲಾ ಸಾಧ್ಯವಿಲ್ಲವೆಂಬುದು ಒಂದು ವಾಸ್ತವಿಕತೆಯಾಗಿದೆ. ನಮ್ಮ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ತಮ್ಮ ಜನ್ಮ ದಿನಾಂಕ, ಸಮಯ, ರಾಶಿ, ನಕ್ಷತ್ರಗಳ ಅರಿವಿತ್ತು. ಅವರು ಜ್ಯೋತಿಷಿಗಳನ್ನು ನಿರಂತರ ಭೇಟಿಯಾಗುತ್ತಿದ್ದರು. ಆದರೆ ಸ್ವಂತ ಅಂಗರಕ್ಷಕನಿಂದ ಅವರ ಹತ್ಯೆಯಾಗುತ್ತದೆಂದು ಯಾವ ಜ್ಯೋತಿಷಿಯೂ ಅವರಲ್ಲಿ ಹೇಳಿರಲಿಲ್ಲ. ರಾಜೀವ್ ಗಾಂಧಿಯವರ ಹತ್ಯೆಯೂ ತಮಿಳ್ನಾಡಿನಲ್ಲಿ ಬಾಂಬ್ ಸ್ಫೋಟದಿಂದ ಸಂಭವಿಸುತ್ತದೆಯೆಂದು ಯಾರೂ ಹೇಳಿರಲಿಲ್ಲ. ಲಾತೂರ್ ನಲ್ಲಿ ಸಂಭವಿಸಿದ ಭೂಕಂಪಕ್ಕೆ ಗುರಿಯಾದ ಹಾಗೂ ಸುನಾಮಿಯಲ್ಲಿ ಕೊಚ್ಚಿ ಹೋದ ಜನರಲ್ಲಿ ತಮ್ಮ ಜನ್ಮ ದಿನಾಂಕ, ವೇಳೆ, ರಾಶಿ ನಕ್ಷತ್ರದ ಕುರಿತು ತಿಳಿದವರಿದ್ದರು. ಜಾತಕ ಸಿದ್ದಪಡಿಸುವ ಜ್ಯೋತಿಷಿಗಳೂ ಅಲ್ಲಿದ್ದರು. ಆದರೆ ಆ ಪ್ರಕೃತಿ ವಿಕೋಪಗಳ ಕುರಿತು ಯಾರಿಗೂ ತಿಳಿಯಲಿಲ್ಲ ಜಾತಕದಿಂದ ಭವಿಷ್ಯದ ಅರಿವಾಗುತ್ತಿದ್ದರೆ ಇಂತಹ ದುರಂತ ಸಾವು ನೋವುಗಳು ಸಂಭವಿಸುತ್ತಿರಲಿಲ್ಲ.

ಪಿ.ಜೆ. ಎಸ್ ಶಿಯಾನಿ, ಪಿ.ಕೆ ಚಕ್ರವರ್ತಿ, ಜಗಜಿತ್ ಉಪ್ಪಳ, ರಾಮನ್ ದಕ್ಕಾರ್, ಮಾಲತಿ ಸಿಸೀಕ್ಕಾರ್ ಮೊದಲಾದ ಪ್ರಖ್ಯಾತ ಜ್ಯೋತಿಷಿಗಳ ಭವಿಷ್ಯದ ಕುರಿತ ಹೇಳಿಕೆಗಳು ಯಾವುದೂ ನಿಜವಾಗಿಲ್ಲ ಎಂಬುದಕ್ಕೆ ಅನುಭವವೇ ಸಾಕ್ಷಿಯಾಗಿದೆ. ಒಂಬತ್ತನೇ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ಅಧಿಕಾರಕ್ಕೇರುವರೆಂದು ಉಪ್ಪಳ ರ ಭವಿಷ್ಯ ನಿಜವಾಗಿರಲಿಲ್ಲ. ಗಲ್ಫ್ ಯುದ್ಧದ ಒಂದು ದಿನ ಮೊದಲು ಯುದ್ಧ ಸದ್ಯಕ್ಕೆ ಸಂಭವಿಸದೆಂದು ಬಜನ್ ವಾಭರುಲ ಹೇಳಿದ್ದರು. ಇಂತಹ ಘಟನೆಗಳು ನಿರಂತರ ಸಂಭವಿಸುತ್ತಲೇ ಇರುತ್ತದೆ. ಆದರೆ ಹಾಗೆ ಸುಳ್ಳಾದ ಹೇಳಿಕೆಗಳನ್ನು ಎಲ್ಲರೂ ಮರೆತು ಬಿಡುತ್ತಾರೆ. ಅಲ್ಲದೆ ಕಾಕತಾಳೀಯವಾಗಿ ಅಥವಾ ವ್ಯಾಖ್ಯಾನಿಸಿ ಒಪ್ಪಿಸುವಂತಹ ಹೇಳಿಕೆಗಳಿಗೆ ವ್ಯಾಪಕ ಪ್ರಚಾರ ದೊರೆಯುತ್ತದೆ. ಭೋಪಾಲ ಅಣು ದುರಂತದ ಕುರಿತು, ಬಾಂಗ್ಲಾದ ಭೀಕರ ಬಿರುಗಾಳಿ ಹಾಗೂ ಇರಾನ್ ಭೂಕಂಪದ ಬಗ್ಗೆ ಮುನ್ನೆಚ್ಚರಿಕೆ ನೀಡಲು ಓರ್ವ ಜ್ಯೋತಿಷಿಗೂ, ಭವಿಷ್ಯಗಾರನಿಗೂ, ಕಣಿ ಹೇಳುವವನಿಗೂ ಸಾಧ್ಯವಾಗಿರಲಿಲ್ಲವೆಂಬುದು ಇತಿಹಾಸ. ಇಂದಿಗೂ ಈ ಪರಿಸ್ಥಿತಿ ಮುಂದುವರಿದಿದೆ.

ಅಜ್ಞಾನ, ಮೂಢನಂಬಿಕೆ ಹಾಗೂ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಆತುರಗಳಿಂದ ಜನರು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಸುಶಿಕ್ಷಿತರು, ಬುದ್ಧಿ ಜೀವಿಗಳು, ವಿಜ್ಞಾನಿಗಳು, ಆಡಳಿತಗಾರರು ಹಾಗೂ ಸಾಮಾಜಿಕ ನೇತಾರರು ಇದರಿಂದ ಹೊರತಲ್ಲ, ಆದ್ದರಿಂದ ಜ್ಯೋತಿಷಿಗಳಲ್ಲಿ ಪರೋಕ್ಷ ಜ್ಞಾನವಿದೆ, ಅವರು ಭವಿಷ್ಯದ ಕುರಿತು ತಿಳಿದಿದ್ದಾರೆ ಎಂಬ ನಂಬಿಕೆ ಬಲವಾಗಿದೆ. ಆದರೆ ಪ್ರಪಂಚದ ಸೃಷ್ಟಿಕರ್ತನ ಹೊರತು ಯಾರಿಗೂ ಪರೋಕ್ಷ ಜ್ಞಾನವಿಲ್ಲ, ಭವಿಷ್ಯದಲ್ಲಿ ಏನು ನಡೆಯುತ್ತದೆಂದು ಯಾರಿಗೂ ತಿಳಿಯಲು ಸಾಧ್ಯವಿಲ್ಲವೆಂದು ಇಸ್ಲಾಮ್ ಸ್ಪಷ್ಟಪಡಿಸುತ್ತದೆ. ದೂರದಲ್ಲಿರುವ ಅತ್ತಿ ಮರದಲ್ಲಿ ಹಣ್ಣು ಇಲ್ಲವೆಂದು ತಿಳಿಯಲು ಸಾಧ್ಯವಾಗದ್ದರಿಂದ ಏಸುಕ್ರಿಸ್ತರು ತನ್ನ ಅನುಚರರನ್ನು ಅದರ ಬಳಿಗೆ ಕರೆದೊಯ್ದರು. ಪ್ರವಾದಿ ಪತ್ನಿ ಆಯಿಶಾ(ರ)ರ ವಿರುದ್ಧ ವ್ಯಭಿಚಾರದ ಆರೋಪ ಉಂಟಾದಾಗ ಅದು ದೊಡ್ಡ ಸುಳ್ಳೆಂದು ಹೇಳಲು ಪ್ರವಾದಿ ಮುಹಮ್ಮದ್(ಸ) ರಿಗೆ ಸಾಧ್ಯವಾಗಲಿಲ್ಲ. ದೇವವಾಣಿ ಬಂದ ಬಳಿಕವೇ ಅದು ಸುಳ್ಳಾರೋಪವೆಂದು ಪ್ರವಾದಿಯವರಿಗೆ ಮನವರಿಕೆಯಾಯಿತು. ಶ್ರೀ ರಾಮನಿಗೆ ಕಾಡಿನಲ್ಲಿ ಹುಟ್ಟಿ ಬೆಳೆದ ತನ್ನ ಮಕ್ಕಳಾದ ಲವ-ಕುಶರು ಎದುರು ಬಂದು ರಾಮಚರಿತ ಪಠಿಸಿದರೂ ಗುರುತಿಸಲಾಗಲಿಲ್ಲ. ತನ್ನ ಪತ್ನಿ ಲಂಕಾದಲ್ಲಿರುವಾಗ ಪರೋಕ್ಷ ಜ್ಞಾನದಿಂದ ರಾಮನಿಗೆ ಅದನ್ನು ಕಂಡು ಹಿಡಿಯಲಾಗಲಿಲ್ಲ. ಪ್ರವಾದಿಗಳು, ಮಹಾ ಪುರುಷರಿಗೂ ಪರೋಕ್ಷ ಜ್ಞಾನವಿಲ್ಲವೆಂದು, ಭವಿಷ್ಯದ ಬಗ್ಗೆ ಅವರಿಗೇನೂ ತಿಳಿದಿರುವುದಿಲ್ಲವೆಂದು ಇಂತಹ ಘಟನೆಗಳೇ ಸಾಬೀತು ಪಡಿಸಿದೆ.

ಪರೋಕ್ಷ ಜ್ಞಾನವು ಸೃಷ್ಟಿಕರ್ತನಾದ ದೇವನಿಗೆ ಹೊರತು ಬೇರಾರಿಗೂ ಇಲ್ಲವೆಂಬುದು ಇಸ್ಲಾಮ್ ನ ಮೂಲಭೂತ ವಿಶ್ವಾಸವಾಗಿದೆ. ಕುರ್‌ಆನ್ ಹೇಳುತ್ತದೆ: ‘ಇವರೊಡನೆ ಹೇಳಿರಿ, ಭೂಮಿ ಆಕಾಶಗಳಲ್ಲಿ ಪರೋಕ್ಷ ಜ್ಞಾನವುಳ್ಳವರು ಅಲ್ಲಾಹನ ಹೊರತು ಯಾರೂ ಇಲ್ಲ.’ (ಪವಿತ್ರ ಕುರ್‌ಆನ್ 27:65)

“ಓ ಪೈಗಂಬರರೇ, ಇವರೊಡನೆ ಹೇಳಿರಿ ನನ್ನಲ್ಲಿ ಅಲ್ಲಾಹನ ಖಜಾನೆಗಳಿವೆಯೆಂದು ನಾನು ನಿಮ್ಮೊಡನೆ ಹೇಳುವುದಿಲ್ಲ, ನಾನು ಪರೋಕ್ಷ ಜ್ಞಾನಿಯೂ ಅಲ್ಲ.”(ಕುರ್‌ಆನ್ 6:50)

ನಮ್ಮ ಕಾಲದಲ್ಲಿ ವಿಶ್ವದ ಇತರೆಡೆಗಳಂತೆ ಮಹಾ ಪುರುಷರಿಗೆ ಪರೋಕ್ಷ ಜ್ಞಾನ ಲಭಿಸುತ್ತದೆಯೆಂಬ ಮೂಢನಂಬಿಕೆ ಜನರಲ್ಲಿ ನೆಲೆನಿಂತಿತ್ತು. ಆದ್ದರಿಂದ ಎಲ್ಲಾ ಪ್ರವಾದಿಗಳು ಜನರ ನಂಬಿಕೆಯನ್ನು ತಿದ್ದಿ, ಅಂಧ ವಿಶ್ವಾಸವನ್ನು ಕೊನೆಗೊಳಿಸಲು ಪ್ರಯತ್ನಿಸಿದರು. ಸಂದೇಶವಾಹಕರಾಗಿರುವ ನಾನೂ ಸೇರಿದಂತೆ ಯಾರಿಗೂ ಪರೋಕ್ಷ ಜ್ಞಾನವಿಲ್ಲವೆಂದು ಪ್ರವಾದಿಗಳು ಹೇಳುತ್ತಿದ್ದರು. ದೇವ ಸಂದೇಶವಾಹಕರಾದ ನೂಹ್ (ಅ) ತನ್ನ ಜನತೆಯೊಡನೆ ಹೇಳಿದರು: “ನನ್ನಲ್ಲಿ ಅಲ್ಲಾಹನ ಖಜಾನೆಗಳಿವೆಯೆಂದು ನಾನು ನಿಮ್ಮೊಡನೆ ಹೇಳುವುದಿಲ್ಲ. ನಾನು ಪರೋಕ್ಷ ಜ್ಞಾನಿಯೂ ಅಲ್ಲ,” (ಪವಿತ್ರ ಕುರ್ ಆನ್ 11:31)

ಆದ್ದರಿಂದ ನಮ್ಮ ಅವಯವಗಳಿಗೆ ಅತೀತವಾದ ಪರೋಕ್ಷ ಜ್ಞಾನ ದೇವದೂತರಿಗೋ, ಸಂತರಿಗೋ, ಸ್ವಘೋಷಿತ ದೇವ ಮಾನವರಿಗೋ, ಜ್ಯೋತಿಷಿಗಳಿಗೋ, ಭವಿಷ್ಯಕಾರರಿಗೋ ಇಲ್ಲ. ಇದೆಯೆಂದು ವಾದಿಸುವುದು ಮಿಥ್ಯವಾದವಾಗಿದೆ. ನಕ್ಷತ್ರಫಲ, ಶಕುನ ನೋಡುವುದು, ಜ್ಯೋತಿಷ್ಯ ಎಲ್ಲವೂ ಮೂಢನಂಬಿಕೆಯಾಗಿದೆ.

ನಕ್ಷತ್ರ ಫಲವು ಸುಳ್ಳು ಮತ್ತು ಮಹಾವಂಚನೆಯೆಂದು ಸ್ವಾಮಿ ದಯಾನಂದ ಸರಸ್ವತಿ ಪ್ರತಿಪಾದಿಸಿದ್ದಾರೆ. ಸರಳವಾಗಿ ಪ್ರಶ್ನೋತ್ತರ ರೂಪದಲ್ಲಿ ಅವರು ವಿವರಿಸಿದ್ದಾರೆ.

ಪ್ರಶ್ನೆ: ರಾಜ ಹಾಗೂ ಪ್ರಜೆಗಳು ತುಂಬಿರುವ ಈ ಲೋಕದಲ್ಲಿ ಹಲವರು ಸುಖದ ಸುಪ್ಪತ್ತಿಗೆಯಲ್ಲೂ ಇನ್ನು ಕೆಲವರು ದುಃಖಿತರಾಗಿಯೂ ಕಂಡು ಬರುವುದಕ್ಕೆ ಅವರ ಗ್ರಹಗತಿಗಳು ಕಾರಣವಲ್ಲವೇ?

ಉತ್ತರ: ಖಂಡಿತಾ ಅಲ್ಲ, ಅದು ಅವರ ಪಾಪ ಮತ್ತು ಪುಣ್ಯದ ಫಲವಾಗಿದೆ

ಪ್ರಶ್ನೆ: ಜ್ಯೋತಿಷ್ಯ ಶಾಸ್ತ್ರದ ಕುರಿತು ಏನು ಹೇಳುವಿರಿ?

ಉತ್ತರ: ಆ ಶಾಸ್ತ್ರವು ಒಳಗೊಂಡಿರುವ ಅಂಕಗಣಿತ, ರೇಖಾಗಣಿತ, ಬೀಜಗಣಿತ ಮೊದಲಾದ ಗಣಿತ ಭಾಗಗಳೆಲ್ಲವೂ ಸರಿಯಾಗಿದೆ. ಆದರೆ ಅದರಿಂದ ದೊರಕುವ ಫಲವು ಮಾತ್ರ ದೊಡ್ಡ ಸುಳ್ಳು..

ಪ್ರಶ್ನೆ: ಜಾತಕವು ನಿಷ್ಟಯೋಜಕವೇ?

ಉತ್ತರ: ಅದಕ್ಕೆ ಜನ್ಮಜಾತಕ ಎಂದು ಹೇಳುವುದು ಸರಿಯಲ್ಲ ಶೋಕ ಪತ್ರ ಎನ್ನಬೇಕಾಗಿದೆ. ಏಕೆಂದರೆ ಒಂದು ಮಗುವಿನ ಜನನವು ಎಲ್ಲರನ್ನೂ ಸಂತಸ ಪಡಿಸುತ್ತದೆ. ಆದರೆ ಆ ಸಂತೋಷ ಮಗುವಿನ ಜಾತಕ ಪರಿಶೀಲಿಸಿ ಗ್ರಹಗತಿ ಹಾಗೂ ಭವಿಷ್ಯವನ್ನು ತಿಳಿದುಕೊಳ್ಳವವರೆಗೆ ಮಾತ್ರ ಉಳಿಯುವುದು. ಮಗುವಿನ ಜಾತಕವನ್ನು ಬರೆಯಬೇಕೆಂದು ಜ್ಯೋತಿಷಿಗಳು ಮಗುವಿನ ತಂದೆಯೊಡನೆ ಹೇಳುವಾಗ ತಂದೆಯು ಬಹಳ ವಿಶೇಷವಾದ ಜಾತಕವನ್ನು ಬರೆಯುವಂತೆ ವಿನಂತಿಸುತ್ತಾರೆ. ಮಗುವಿನ ಮನೆಯವರು ಶ್ರೀಮಂತರಾಗಿದ್ದರೆ ಕೆಂಪು ಹಾಗೂ ಹಳದಿ ಬಣ್ಣದ ಗೆರೆಗಳು,ಮತ್ತು ಚಿತ್ರಗಳಿಂದ ಅದನ್ನು ಆಕರ್ಷಕಗೊಳಿಸಲಾಗುತ್ತದೆ. ಬಡವರಾಗಿದ್ದರೆ ಸಾಮಾನ್ಯ ರೀತಿಯಲ್ಲಿ ಜಾತಕವನ್ನು ಬರೆದು ಓದಿ ಹೇಳಲಾಗುತ್ತದೆ. ಆಗ ಮಗುವಿನ ಹೆತ್ತವರು ನಮ್ಮ ಮಗುವಿನ ಜಾತಕ ಉತ್ತಮವಾಗಿದೆಯಲ್ಲವೇ ಎಂದು ಜ್ಯೋತಿಷಿಯೊಡನೆ ಕೇಳುತ್ತಾರೆ. ಆಗ ಜ್ಯೋತಿಷಿಯು ‘ಇರುವುದನ್ನೆಲ್ಲಾ ನಾನು ಓದಿ ಕೇಳಿಸುತ್ತೇನೆ. ಇದು ಇವನ ಜನ್ಮಗ್ರಹ. ಗ್ರಹಗಳು ಶುಭಕರವಾಗಿದೆ. ಇದರಿಂದ ಅವನು ಶ್ರೀಮಂತನಾಗುತ್ತಾನೆ. ಯಾವುದೇ ಸಭೆ ಸಮಾರಂಭಗಳಲ್ಲಿ ಅವನ ತೇಜಸ್ಸು ಇತರರಿಗಿಂತ ಮೇಲ್ಪಟ್ಟದ್ದಾಗಿರುತ್ತದೆ. ಆರೋಗ್ಯವಂತನೂ, ರಾಜಂದಿರಿಂದ ಗೌರವಿಸಲ್ಪಡುವವನೂ ಆಗುತ್ತಾನೆ ಎನ್ನುತ್ತಾರೆ. ಇದು ಕೇಳಿ ಮಗುವಿನ ತಂದೆ ಸಂತೋಷದಿಂದ ಖುಷಿಯಾಯಿತು ಜ್ಯೋತಿಷಿಗಳೆ ತುಂಬಾ ಧನ್ಯವಾಗಳು’ ಎನ್ನುತ್ತಾನೆ. ಆದರೆ ಇದರಿಂದ ತನಗೇನೂ ಲಾಭವಿಲ್ಲವೆಂದು ಜ್ಯೋತಿಷಿಗೆ ತಿಳಿದಿದೆ. ಆದ್ದರಿಂದ ಜ್ಯೋತಿಷಿಯು ಪುನಃ ಮುಂದುವರಿಸತ್ತಾನೆ, “ಹೇಳಿರುವ ಗ್ರಹಗಳೆಲ್ಲಾ ಬಹಳ ಶುಭಕರವಾಗಿದೆ. ಆದರೆ ಈ ಶುಭಗ್ರಹಗಳು ಕೆಲವು ಕಡೆಗಳಲ್ಲಿ ಕುದ್ರಗ್ರಹದೊಂದಿಗೆ ಸೇರಿಕೊಂಡಿದೆ. ಆದ್ದರಿಂದ ಈ ಮಗುವಿಗೆ ಎರಡು ವರ್ಷದಲ್ಲಿ ಮೃತ್ಯು ಯೋಗವಿದೆ. ಇದನ್ನು ಕೇಳಿದ ಹೆತ್ತವರ ಪುತ್ರ ಜನನದ ಸಂತೋಷ ಮಾಯವಾಗಿ ಶೋಕ ತಪ್ತವಾಗುತ್ತದೆ. ಗಾಬರಿಯಿಂದ ಇದಕ್ಕೇನಾದರೂ ಪರಿಹಾರವಿದೆಯೇ? ಎಂದು ಕೇಳುವಾಗ, ಅದಕ್ಕೆ ಪರಿಹಾರವಿದೆ. ನೀವು ದಾನ ಧರ್ಮಗಳನ್ನು ಮಾಡಬೇಕು, ಗೃಹ ಶಾಂತಿಗಾಗಿ ಮಂತ್ರಗಳನ್ನು ಜಪಿಸಬೇಕು. ದಿನಂಪ್ರತಿ ಬ್ರಾಹ್ಮಣರ ಕಾಲು ತೊಳೆದು ಹೊಟ್ಟೆ ತುಂಬಾ ಅನ್ನ ಬಡಿಸಬೇಕು. ಹೀಗೆ ಮಾಡಿದರೆ ನಿಮಗೆದುರಾಗಲಿರುವ ಸಂಕಷ್ಟ ಮಾಯವಾಗಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಇಲ್ಲಿ ಜ್ಯೋತಿಷಿಯು ‘ಬಹುದು’ ಎಂಬ ಶಬ್ದವನ್ನು ಬಹಳ ಎಚ್ಚರಿಕೆಯಿಂದ ಬಳಸಿದ್ದಾನೆ. ಒಂದು ವೇಳೆ ಮಗು ತೀರಿಕೊಂಡರೆ ಹೀಗೆ ಹೇಳಬಹುದು, ‘ನಮ್ಮಿಂದೇನು ಮಾಡಲು ಸಾಧ್ಯ? ಪರಮೇಶ್ವರನಿಗಿಂತ ದೊಡ್ಡವರು ಯಾರೂ ಇಲ್ಲ, ನಾವು ತುಂಬಾ ಪ್ರಯತ್ನಿಸಿದೆವು, ನೀವೂ ಪ್ರಯತ್ನ ಪಟ್ಟಿರಿ. ಆದರೆ ಅವನ ಕರ್ಮಫಲವೇ ಅಷ್ಟು ಮಗು ಬದುಕುಳಿದರೆ ಹೀಗೂ ಹೇಳಬಹುದು- ನಮ್ಮ ಜಪತಪಗಳ, ದೇವರುಗಳ ಹಾಗೂ ಬ್ರಾಹ್ಮಣರ ಶಕ್ತಿ ಎಷ್ಟು ಅದ್ಭುತವಾಗಿದೆ, ಅದು ನಿಮ್ಮ ಮಗುವನ್ನು ರಕ್ಷಿಸಲಿಲ್ಲವೇ? ಫಲ ಉಂಟಾಗದಿದ್ದರೆ ನೀವು ದೂರ್ತರಿಗೆ ನೀಡಿದ ಹಣದ ಇಮ್ಮಡಿ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಮರಳಿ ಪಡೆಯಬೇಕು. ಮಗು ಜೀವಂತ ಇದ್ದರೂ ಮರಳಿ ಪಡೆಯಬೇಕು. ಏಕೆಂದರೆ ಜ್ಯೋತಿಷಿಗಳೇ ಹೇಳುವಂತೆ ಅದು ಅವರ ಕರ್ಮಫಲ. ದೇವರ ವಿಧಿನಿಯಮಗಳನ್ನು ಉಲ್ಲಂಘಿಸುವ ಶಕ್ತಿ ಯಾರಿಗೂ ಇರುವುದಿಲ್ಲ. ಒಟ್ಟಿನಲ್ಲಿ ಆತನ ಕರ್ಮಫಲ ಮತ್ತು ಈಶ್ವರನ ನಿಯಮವೇ ಅವನನ್ನು ರಕ್ಷಿಸಿದೆ. ನಿಮ್ಮ ಶೌರ್ಯಗಳಿಂದಲ್ಲ ಎಂದು ಯಜಮಾನನಿಗೆ ಜ್ಯೋತಿಷಿಯೊಡನೆ ಹೇಳಬಹುದಲ್ಲವೇ? ದಾನ ಧರ್ಮ ಮತ್ತು ಪುಣ್ಯಕರ್ಮಾದಿಗಳಿಂದ ಗ್ರಹಗತಿಗಳನ್ನು ಬದಲಿಸಿದ್ದೇವೆಂದು ಹೇಳಿಕೊಳ್ಳುವವರೊಡನೆ ಜ್ಯೋತಿಷಿಗೆ ಹೇಳಿದಂತೆ ಹೇಳಬೇಕು. (ಸತ್ಯಾರ್ಥ ಪ್ರಕಾಶ, ಆರ್ಯ ಪ್ರಾದೇಶಿಕ ಪ್ರತಿನಿಧಿ ಸಭೆ, ಪಂಜಾಬ್ ಪುಟ:45-47)

ಜ್ಯೋತಿಷಿಗಳ ವಂಚನೆಯನ್ನು ಸ್ಪಷ್ಟಪಡಿಸಲು ಸ್ವಾಮಿ ವಿವೇಕಾನಂದರು ಒಂದು ಕಥೆ ಹೇಳುತ್ತಾರೆ: ಜ್ಯೋತಿಷಿಯೊಬ್ಬರು ಓರ್ವ ರಾಜನಲ್ಲಿ ತಾವು ಆರು ತಿಂಗಳಲ್ಲಿ ಮರಣ ಹೊಂದುವಿರೆಂದು ಭವಿಷ್ಯ ನುಡಿದ. ಅದನ್ನು ಕೇಳಿ ರಾಜ ಆಗಲೇ ಸಾಯುವ ಸ್ಥಿತಿಗೆ ಬಂದು ತಲುಪಿದ. ರಾಜನ ಸ್ಥಿತಿಯನ್ನು ಕಂಡು ಮರುಕಗೊಂಡ ಮಂತ್ರಿಯು ಆ ಜ್ಯೋತಿಷಿಯ ಮಾತು ಶತ ಸುಳ್ಳು ಎಂದು ಸಮಜಾಯಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಮಂತ್ರಿಯು ಜ್ಯೋತಿಷಿಯೊಡನೆ ನೀವು ಈಗಲೂ ನಿಮ್ಮ ಭವಿಷ್ಯವಾಣಿಯಲ್ಲಿ ಸ್ಥಿರವಾಗಿದ್ದೀರಾ? ಎಂದು ಪ್ರಶ್ನಿಸುತ್ತಾನೆ. ಜ್ಯೋತಿಷಿಯು ಪುನಃ ಜಾತಕ ನೋಡಿ ಕಳೆದು ಕೂಡಿಸಿ ತನ್ನ ಮೊದಲ ವಾದದಲ್ಲೇ ಸ್ಥಿರವಾಗುತ್ತಾನೆ. ಆಗ ಮಂತ್ರಿಯು ಜ್ಯೋತಿಷಿಯೊಡನೆ ನಿಮ್ಮ ಮರಣ ಯಾವಾಗ ಸಂಭವಿಸುವುದೆಂದು ಕೇಳುತ್ತಾನೆ. ಆಗ ಜ್ಯೋತಿಷಿಯು 12 ವರ್ಷದ ಬಳಿಕ ನನ್ನ ಮರಣ ಸಂಭವಿಸುತ್ತದೆ ಎನ್ನುತ್ತಾನೆ. ತಟ್ಟನೆ ಮಂತ್ರಿ ತನ್ನ ಒರೆಯಿಂದ ಕತ್ತಿ ತೆಗೆದು ಜ್ಯೋತಿಷಿಯ ನೇರಕ್ಕೆ ಬೀಸುತ್ತಾನೆ. ಜ್ಯೋತಿಷಿ ಕುಸಿದು ಬಿದ್ದಾಗ ಮಂತ್ರಿ ರಾಜನೊಡನೆ ಹೇಳುತ್ತಾನೆ. ‘ಈಗ ನಿಮಗೆ ನಿಜ ಸಂಗತಿ ಅರ್ಥವಾಯಿತಲ್ಲವೇ? ಅವನು ಮಹಾ ಸುಳ್ಳುಗಾರನೆಂದು ತಿಳಿದಿರಲಿಲ್ಲವೇ? 12 ವರ್ಷ ಬದುಕುತ್ತೇನೆಂದು ಹೇಳಿದ ವ್ಯಕ್ತಿ ಈಗಲೇ ಸತ್ತು ಬಿದ್ದನಲ್ಲಾ” (ವಿವೇಚನಾ ಕಾಂಡ, ಸಾಹಿತ್ಯ ಸಂಪದ ಭಾಗ-4 ಪುಟ-87)

ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ವಿಧಿಯ ಕುರಿತು ಹೆಚ್ಚಾಗಿ ವಯಸ್ಸಾದವರು ಆತಂಕಪಡುತ್ತಾರೆ.ಯುವ ಜನಾಂಗವು ಜ್ಯೋತಿಷಿಗಳನ್ನು ಆಶ್ರಯಿಸುವುದು ಕಡಿಮೆ. ಗ್ರಹಗಳು ನಮ್ಮ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಿರಬಹುದು. ಆದರೆ ನಾವು ಅದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬಾರದು. ಜ್ಯೋತಿರ್ಗಣಗಳು ಬಂದರೂ ಅದರಿಂದ ದೋಷವೇನು? ಒಂದು ನಕ್ಷತ್ರಕ್ಕೆ ನಮ್ಮ ಜೀವನವನ್ನು ಬುಡಮೇಲುಗೊಳಿಸಲು ಸಾಧ್ಯವಿದೆಯೆಂದಾದರೆ ನಮ್ಮ ಜೀವನಕ್ಕೆ ಕಿಂಚಿತ್ತೂ ಬೆಲೆ ಇಲ್ಲ. ಜೋತಿಷ್ಯ ಹಾಗೂ ಅದರಂತಹ ನಿಗೂಢ ವಿದ್ಯೆಗಳು ದುರ್ಬಲ ಮನದ ಚಿಹ್ನೆಗಳಾಗಿವೆಯೆಂದು ನಿಮಗೆ ತಿಳಿಯಬಹುದು. ದುರ್ಬಲ ಚಿಂತನೆಗಳು ಮನವನ್ನು ಕೊರೆಯಲಾರಂಭಿಸುವಾಗ ತಜ್ಞ ವೈದ್ಯರಿಂದ ಚಿಕಿತ್ಸೆ, ಉತ್ತಮ ಆಹಾರ ಸೇವನೆ ಹಾಗೂ ವಿಶ್ರಾಂತಿ ಪಡೆಯಬೇಕು (ವಿಮೋಚನಾ ಕಾಂಡ, ಸಾಹಿತ್ಯ ಸಂಪದ ಭಾಗ-4 ಪುಟ-86)

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …