Home / ಪ್ರಶ್ನೋತ್ತರ / ದೇವನನ್ನು ಸೃಷ್ಟಿಸಿದವರು ಯಾರು?

ದೇವನನ್ನು ಸೃಷ್ಟಿಸಿದವರು ಯಾರು?

ಪ್ರಶ್ನೆ: ಪ್ರಪಂಚದ ಸೃಷ್ಟಿಕರ್ತನು ಓರ್ವನೆಂದೂ, ಅವನೇ ಅದನ್ನು ಸೃಷ್ಟಿಸಿದನೆಂದೂ ಧರ್ಮ ವಿಶ್ವಾಸಿಗಳಾದ ನೀವು ಹೇಳುತ್ತೀರಿ. ಹಾಗಾದರೆ ನಿಮ್ಮ ದೇವನನ್ನು ಸೃಷ್ಟಿಸಿದವರು ಯಾರು? ದೇವ ಹಾಗೂ ಧರ್ಮವು ವಿಶ್ವಾಸ ಕಾರ್ಯವೆಂದೂ, ಅದರ ಹೊರತು ಬುದ್ದಿಗೆ ಇದರಲ್ಲಿ ಪ್ರಾಮುಖ್ಯತೆ ಇಲ್ಲವೆಂಬ ವಾಡಿಕೆಯ ಉತ್ತರಕ್ಕಿಂತ ಬೇರೇನಾದರೂ ಹೇಳಲಿಕ್ಕಿದೆಯೇ?

ಉತ್ತರ: ವಿಶ್ವದ ಕುರಿತು ಎರಡು ರೀತಿಯ ದೃಷ್ಟಿಕೋನವಿರುವವರು ಇದ್ದಾರೆ. ಒಂದನೇಯದಾಗಿ ಧರ್ಮದಲ್ಲಿ ನಂಬಿಕೆ ಇರಿಸುವವರು. ಅವರು ನಂಬಿಕೆಯಂತೆ ಪ್ರಪಂಚವನ್ನು ಸೃಷ್ಟಿಸಲಾಗಿದೆ. ದೇವನು ಅದರ ಸೃಷ್ಟಿಕರ್ತ. ಎರಡನೇಯ ವರ್ಗವನ್ನು ನಾಸ್ತಿಕರು ಎನ್ನಲಾಗುತ್ತದೆ. ಅವರು ಈ ಪ್ರಪಂಚವು ಅನಾದಿಕಾಲದಿಂದಲೂ ಆಸ್ತಿತ್ವದಲ್ಲಿದೆ ಎನ್ನುತ್ತಾರೆ. ಅದನ್ನು ಯಾರೂ ಸೃಷ್ಟಿಸಿದ್ದಲ್ಲ ಆದ್ದರಿಂದ ಅದಕ್ಕೆ ಆದಿಯೂ ಅಂತ್ಯವೂ ಇಲ್ಲವೆಂದು ಅವರ ವಾದ.

ಸಾವಿರದ ಐನೂರು ಅಥವಾ ಎರಡು ಸಾವಿರ ಕೋಟಿ ವರ್ಷಗಳ ಹಿಂದೆ ಪ್ರಪಂಚವು ಅತಿ ಸಾಂದ್ರತೆಯಿರುವ ಒಂದು ವಸ್ತುವಾಗಿತ್ತು ಎಂದು ಲೌಕಿಕವಾದಿಗಳು ಹೇಳುತ್ತಾರೆ. ಅಂದು ಸಾಂದ್ರತೆ ಹಾಗೂ ಶಾಖ ಪರಾಕಾಷ್ಠೆಗೆ ತಲುಪಿದಾಗ ದೊಡ್ಡ ಸ್ಫೋಟವುಂಟಾಯಿತು. ಅದು ಅಸಂಖ್ಯಾತ ಸ್ಪೋಟಗಳಿಗೆ ಕಾರಣವಾಯಿತು. ಆದಿಪದಾರ್ಥದ ತಾಪ ಹಾಗೂ ಸಾಂದ್ರತೆಯು ಮಿತಿಮೀರಿದಾಗ ಉಂಟಾದ ಘನಸ್ತೋಟವು ಊಹಿಸಲು ಅಸಾಧ್ಯವಾದಂತಹ ಶಬ್ದವಾಗಿತ್ತು. ಹೀಗೆ ಘನಸ್ಪೋಟಗೊಂಡ ಕ್ಷಣದಲ್ಲೇ ಮೂರು ಸಾವಿರ ಕೋಟಿ ಡಿಗ್ರಿ ತಾಪಮಾನದ ಪ್ರಪಂಚದ ಸೃಷ್ಟಿಯಾಯಿತು. ನಂತರ ಅದು ವಿಕಾಸಗೊಂಡಿತು. ವಿಶಾಲವಾದುದರಿಂದ ಭೂಮಿಯ ತಾಪಮಾನ ಕಡಿಮೆಯಾಗಲಾರಂಭಿಸಿತು. ಸ್ಫೋಟದ ನಾಲ್ಕು ನಿಮಿಷಗಳ ಬಳಿಕ ನ್ಯೂಟ್ರೋನ್ ಹಾಗೂ ಪ್ರೋಟಾನುಗಳು ಸೇರಿಕೊಂಡಿತು. ಆ ಸಂಗಮವೇ ನಕ್ಷತ್ರದಿಂದ ಮಾನವರ ವರೆಗಿನ ಎಲ್ಲಾ ಸೃಷ್ಟಿಗಳ ಜನ್ಮಕ್ಕೂ ನಾಂದಿಹಾಡಿತು.

ಪ್ರಪಂಚ ನಿರ್ಮಾಣಗೊಂಡ ಕುರಿತು ಈ ವಿಚಾರಗಳು ಹಲವಾರು ಸಂಶಯಗಳನ್ನು ಉಂಟು ಮಾಡುತ್ತದೆ. ಆ ಮೂಲ ವಸ್ತುವಿನ ತಾಪಮಾನ ಹಾಗೂ ಸಾಂದ್ರತೆಯು ಯಾವಾಗ ಪರಾಕಾಷ್ಠೆಗೆ ತಲುಪಿತು? ಅದಕ್ಕಿಂತ ಮೊದಲೇ ಅದು ಸ್ಫೋಟಗೊಳ್ಳಲಿಲ್ಲವೇಕೆ? ಅಥವಾ ನಂತರ ಸ್ಫೋಟಗೊಳ್ಳಲಿಲ್ಲವೇಕೆ? ಮೊದಲೇ ಅದರ ಶಾಖ ಹಾಗೂ ಸಾಂದ್ರತೆ ಕಾವೇರಿದ್ದರೆ ಆಗಲೇ ಸ್ಫೋಟಗೊಳ್ಳಲಿಲ್ಲವೇಕೆ? ಅಥವಾ ಮೊದಲು ಅಷ್ಟೊಂದು ತಾಪಮಾನವಿಲ್ಲದಿದ್ದರೆ ನಂತರ ಆ ಪರಿಸ್ಥಿತಿ ಹೇಗೆ ಬಂತು? ಹೊರಗಿನ ಯಾವುದಾದರೂ ಕ್ರಿಯೆ ಅದಕ್ಕೆ ಕಾರಣವಾಯಿತೇ? ಹಾಗಾದರೆ ಇಲ್ಲಿ ಮಧ್ಯಸ್ಥಿಕೆ ವಹಿಸಿದ್ದು ಯಾವುದು? ಇಲ್ಲದಿದ್ದರೆ ತಾಪಮಾನ ಏಕಾ ಏಕಿ ಏರಲು ಕಾರಣ ಬೇಕಲ್ಲವೇ? ಮೊದಲ ಸ್ಫೋಟ ನಡೆದದ್ದು ಯಾವಾಗ? ಒಂದೇ ಆಗಿದ್ದ ಸೂರ್ಯ ಹಾಗೂ ಚಂದ್ರ ಬೇರ್ಪಟ್ಟಿದ್ದು ಯಾವಾಗ? ಆ ಪ್ರಕ್ರಿಯ ನಿರ್ದಿಷ್ಟ ಸಮಯದಲ್ಲೇ ನಡೆಯಲು ಕಾರಣವೇನು? ಅದು ಮುಂಚೆಯೋ ಅಥವಾ ಮೊದಲೋ ಸಂಭವಿಸಬಹುದಾಗಿತ್ತಲ್ಲಾ? ಇಂತಹ ಪ್ರಶ್ನೆಗಳಿಗೆ ನಾಸ್ತಿಕರು ಇಂದಿಗೂ ಉತ್ತರಿಸಿಲ್ಲ ಉತ್ತರಿಸಲು ಸಾಧ್ಯವೂ ಇಲ್ಲ.

ಈ ಪ್ರಪಂಚದ ಸೃಷ್ಟಿ ಬಹಳ ಸುವ್ಯವಸ್ಥಿತವಾಗಿದೆಯೆಂದು ಎಲ್ಲರೂ ಒಪ್ಪುತ್ತಾರೆ. ವಿಶ್ವ ವ್ಯವಸ್ಥೆಯನ್ನು ಗಮನಿಸುವಾಗ ಯುಕ್ತಿಪೂರ್ಣವಾಗಿ ಹಾಗೂ ಯೋಜನಾಬದ್ದವಾಗಿ ನಿರ್ಮಾಣಗೊಂಡಿದೆಯೆಂದು ಮನವರಿಕೆಯಾಗುತ್ತದೆ. ನಾವು ಬದುಕುವ ಈ ಪ್ರಪಂಚದಲ್ಲಿ 600 ಕೋಟಿ ಮಾನವರಿದ್ದಾರೆ. ಅವರೆಲ್ಲರೂ ಉಸಿರಾಡುವ ಗಾಳಿಯು ಒಂದೇ. ಕುಡಿಯುವ ನೀರು ಒಂದೇ ರೀತಿ, ಆಹಾರಗಳಲ್ಲೂ ವಿಶೇಷ ವ್ಯತ್ಯಾಸವಿಲ್ಲ. ಹಾಗಿದ್ದರೂ 600 ಕೋಟಿ ಜನರಿಗೆ 600 ಕೋಟಿ ರೀತಿಯ ಮುಖವಿದೆ. ನಮ್ಮಂತಹ ಒಬ್ಬರನ್ನು ಈ ಭೂಮಿಯಲ್ಲಿ ಕಾಣಲು ಸಾಧ್ಯವಿಲ್ಲ. ನಮ್ಮ ಹೆಬ್ಬರಳು ಎಷ್ಟು ಸಣ್ಣ ಅಂಗವಲ್ಲವೇ? ಆದರೆ 600 ಕೋಟಿ ಜನರಲ್ಲಿ ಒಬ್ಬರಿಗೂ ನಮ್ಮಂತಹ ಕೈ ಬೆರಳುಗಳಿಲ್ಲ, ಮರಣ ಹೊಂದಿದ ಕೋಟ್ಯಂತರ ಮನುಷ್ಯರಿಗೂ ಇರಲಿಲ್ಲ, ಇನ್ನು ಜನಿಸಲಿರುವವರಿಗೂ ಇರುವುದಿಲ್ಲ, ನಮ್ಮಲ್ಲಿ ಪ್ರತಿಯೊಬ್ಬರ ತಲೆಯಲ್ಲಿ ಸಾವಿರಾರೂ ಕೂದಲುಗಳಿವೆ. ಆದರೆ ವಿಶ್ವದ 600 ಕೋಟಿ ತಲೆಯ ಕೋಟ್ಯಾಂತರ ಕೂದಲುಗಳಲ್ಲಿ ಒಂದು ಕೂದಲೂ ನಮ್ಮ ಕೂದಲಿನಂತಿಲ್ಲ. ಡಿ.ಎನ್.ಎ. ಪರೀಕ್ಷೆಯ ಮೂಲಕ ಅದನ್ನು ಗುರುತಿಸಲು ಸಾಧ್ಯವಿದೆ. ನಮ್ಮ ತಲೆಯಲ್ಲಿ ಸಾವಿರಾರೂ ರಕ್ತ ಕಣಗಳು ಹರಿಯುತ್ತಿರುತ್ತದೆ. ಆದರೆ ಪ್ರತಿಯೊಬ್ಬರದೂ ಭಿನ್ನವಾಗಿದೆ. ನಮ್ಮ ದೇಹದ ವಾಸನೆಯೂ ಭಿನ್ನ ಭಿನ್ನವಾಗಿದೆ. ಹೀಗೆ ಅತ್ಯದ್ಭುತವಾದ, ವ್ಯವಸ್ಥಿತ ಹಾಗೂ ಯೋಜನಾಬದ್ಧವಾಗಿ ಸೃಷ್ಟಿಸಲಾದ ಪ್ರಪಂಚವನ್ನು ಕೇವಲ ಕಾಕತಾಳೀಯವಾಗಿ, ಮೂಲವಸ್ತುಗಳ ಚಲನೆಯ ಪರಿಣಾಮದಿಂದ ಉಂಟಾಯಿತೆಂದು ಹೇಳವುದು ಖಂಡಿತ ಬುದ್ದಿವಂತಿಕೆಯಲ್ಲ, 600 ಕೋಟಿ ಮನುಷ್ಯರಿಗೆ ವಿಭಿನ್ನ ಮುಖ ಚಹರೆ, ಕೈಬೆರಳು, ದೇಹದ ವಾಸನೆ, ತಲೆಗೂದಲು ಹಾಗೂ ರಕ್ತ ಕಣಗಳನ್ನು ನೀಡಿ ಸೃಷ್ಟಿಸಿದ ಮಹಾ ಶಕ್ತಿಯೊಂದಿದೆ. ಅವನು ಸರ್ವಶಕ್ತನೂ, ಸರ್ವಜ್ಞನೂ, ಯುಕ್ತಿವಂತನೂ ಆಗಿದ್ದಾನೆಂದು ಒಪ್ಪಿಕೊಳ್ಳವುದು ಬುದ್ದಿವಂತಿಕೆಯ ಲಕ್ಷಣವಾಗಿದೆ. ಆ ಶಕ್ತಿಯೇ ಈ ಪ್ರಪಂಚದ ದೇವನಾಗಿದ್ದಾನೆ.

ಪ್ರಪಂಚದಲ್ಲಿ ಹೊಸತೇನೂ ಸೃಷ್ಟಿಯಾಗುವುದಿಲ್ಲವೆಂದು ವಿಚಾರವಾದಿಗಳು ಹೇಳುತ್ತಾರೆ. ಹೊಸತಾಗಿ ಏನಾದರೂ ಸೃಷ್ಟಿಯಾದರೆ ಅದನ್ನುಂಟು ಮಾಡಿದವರು ಯಾರೆಂಬ ಪ್ರಶ್ನೆ ಉದ್ಭವಿಸುತ್ತದೆಯಲ್ಲವೇ? ಇಂದು ಭೂಮಿಯಲ್ಲಿರುವ ಮನುಷ್ಯರಿಗೆ ಬುದ್ದಿ ಪ್ರಜ್ಞೆ ಹಾಗೂ ಜ್ಞಾನವೂ ಇದೆ. ಈ ಪ್ರಜ್ಞೆ ಬುದ್ಧಿ ಶಕ್ತಿ ಎಲ್ಲಿತ್ತು? ಸ್ಫೋಟಗೊಂಡ ಮೂಲವಸ್ತುವು ಅವುಗಳನ್ನೆಲ್ಲಾ ಒಳಗೊಂಡಿತ್ತಾ? ಹಾಗಿದ್ದರೆ ಆ ಮೂಲವಸ್ತುವಿನ ಜ್ಞಾನ, ಬುದ್ಧಿಶಕ್ತಿಗೆ ಮೇರೆಯೆಂಬುದೇ ಇರಲಿಕ್ಕಿಲ್ಲ ಹಾಗಿದ್ದರೆ ಅಚೇತನವಾದ ಒಂದು ಮೂಲವಸ್ತು ಹೀಗೆ ಸರ್ವಜ್ಞವೂ, ಯುಕ್ತಿಪೂರ್ಣವೂ ಆಗಿತ್ತೇ?

ಆದ್ದರಿಂದ 600 ಕೋಟಿ ಮನುಷ್ಯರಿಗೆ ಬುದ್ದಿವಂತಿಕೆ, ಅರಿವು ಹಾಗೂ ಜ್ಞಾನವನ್ನು ನೀಡಿದ್ದು ಸರ್ವಜ್ಞನೂ ಯುಕ್ತಿವಂತನೂ ಆದ ದೇವನೆಂದು ವಿಶ್ವಾಸವಿರಿಸುವುದು ನ್ಯಾಯ ಸಮ್ಮತವಾಗಿದೆ. ಸತ್ಯನಿಷ್ಠವಾದ ಹಾಗೂ ವಿವೇಕಯುತವಾದ ನಿಲುವು ಅದುವೇ ಆಗಿದೆ.

ಅನಾದಿಯಾದ ಒಂದು ಶಕ್ತಿಯಿದೆಯೆಂದು ಎಲ್ಲರೂ ಒಪ್ಪುತ್ತಾರೆ. ಅದು ನಿರ್ಜೀವವಾದ ಮೂಲ ವಸ್ತುವೆಂದು ನಾಸ್ತಿಕರೂ, ಸರ್ವಶಕ್ತನು ಸರ್ವಜ್ಞನಾದ ದೇವನೆಂದು ಧರ್ಮ ವಿಶ್ವಾಸಿಗಳೂ ಹೇಳುತ್ತಾರೆ. ಆದಿಯೂ, ಅಂತ್ಯವು ಇಲ್ಲದ ಒಂದು ಶಕ್ತಿಯ ಕುರಿತು ಅದನ್ನು ಯಾರು ಸೃಷ್ಟಿಸಿದರು? ಅದು ಹೇಗಾಯಿತು? ಎಂದು ಕೇಳುವುದಕ್ಕೆ ಅರ್ಥವಿಲ್ಲ, ಮೂಲವಸ್ತುವನ್ನು ಯಾರುಂಟು ಮಾಡಿದರೆಂಬ ಪ್ರಶ್ನೆಯು ಅಪ್ರಸ್ತುತವೆಂದು ಹೇಳುವವರೇ, ಅನಾದಿಯಾದ ದೇವನನ್ನು ಸೃಷ್ಟಿಸಿದ್ದು ಯಾರು? ಎಂದು ಪ್ರಶ್ನಿಸುವುದು ಅರ್ಥಶೂನ್ಯವೂ ಅಸಂಬದ್ದವೂ ಆಗಿದೆ.

ಯಾವುದೇ ವಸ್ತವೂ ನಿರ್ಮಿಸುವವನಿಲ್ಲದೆ ಉಂಟಾಗುವುದಿಲ್ಲ ಆದ್ದರಿಂದ ಮೂಲವಸ್ತುವಿನಿಂದ ಉಂಟಾದ ಪ್ರಪಂಚಕ್ಕೆ ಸೃಷ್ಟಿಕರ್ತನಿರುವುದು ಅನಿವಾರ್ಯವಾಗಿದೆ. ಅದರೆ ಪದಾರ್ಥ(ಮೂಲವಸ್ತು)ದ ನಿಯಮವೂ ಅವಸ್ಥೆಯೂ ಪದಾರ್ಥವಿಲ್ಲದಿರುವುದನ್ನು ಬಾಧಿಸುವುದಿಲ್ಲ. ದೇವನು ಮೂಲವಸ್ತುವಿಗೆ ಅತೀತನಾಗಿದ್ದಾನೆ. ಆದ್ದರಿಂದ ಮೂಲವಸ್ತುಗಳಿಂದ ಸೃಷ್ಟಿಸಲಾದ ಪ್ರಪಂಚದ ಮಾನದಂಡವನ್ನು ಆಧಾರವಾಗಿಸಿ, ಪದಾರ್ಥಗಳಿಂದ ಅತೀತನಾದ ದೇವನನ್ನು ಸೃಷ್ಟಿಸಿದವನಾರೆಂಬ ಪ್ರಶ್ನೆಯೇ ಅಪ್ರಸ್ತುತವಾಗಿದೆ.

ಅನಾದಿಯೂ, ಆರಂಭವಿಲ್ಲದ, ಎಂದೆಂದಿಗೂ ಶಾಶ್ವತವಾಗಿರುವ ಒಂದು ಶಕ್ತಿ ಇರಲೇಬೇಕೆಂಬುದು ನಿರಾಕರಿಸಲಾಗದ ಸರ್ವಸಮ್ಮತ ಸತ್ಯವಾಗಿದೆ. ಅವನೇ ಸರ್ವಶಕ್ತನೂ, ಸರ್ವಪ್ರಪಂಚಗಳ ಸಂರಕ್ಷಕನೂ ಆದ ದೇವನಾಗಿದ್ದಾನೆ.

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …