- ನಾಗೇಶ್ ಹೆಗಡೆ
ಖ್ಯಾತ ಪರಿಸರ ಮತ್ತು ವಿಜ್ಞಾನ ಲೇಖಕರು
ಕುಂದಾಪುರ ತಾಲ್ಲೂಕಿನ ಕೋಡಿ ಗ್ರಾಮದಲ್ಲಿರುವ ಬದ್ರಿಯಾ ಮಸೀದಿಯ ಬಗ್ಗೆ ಕೇಳಿದ್ದೀರಾ?
ಇದು ಜಗತ್ತಿನ ಮೊತ್ತಮೊದಲ ‘ಹಸಿರು ಮಸೀದಿ’ ಎಂದೇ ಪ್ರಖ್ಯಾತವಾಗಿದೆ. ಹಸಿರು ಎಂದರೆ ಬಣ್ಣದ ಹಸಿರಲ್ಲ. ಈ ಮಸೀದಿ ಅಚ್ಚ ಬಿಳಿ ಬಣ್ಣದಲ್ಲಿದೆ. ಆದರೆ ಮಸೀದಿಯೊಳಗೆ ಮರಗಳಿವೆ. ಪರಿಸರ ರಕ್ಷಣೆಯ ಅನೇಕ ತತ್ವಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಮಸೀದಿ ತನಗೆ ಬೇಕಾದ ವಿದ್ಯುತ್ ಶಕ್ತಿಯನ್ನು ಗಾಳಿಯಂತ್ರ ಮತ್ತು ಸೋಲಾರ್ ಫಲಕಗಳ ಮೂಲಕ ತಾನೇ ಉತ್ಪಾದಿಸಿಕೊಳ್ಳುತ್ತದೆ. ಕಟ್ಟಡ ನಿರ್ಮಾಣ ಗುತ್ತಿಗೆ ಕೆಲಸಗಳನ್ನು ಕೈಗೊಳ್ಳುವ ಖ್ಯಾತ ‘ಬ್ಯಾರಿಸ್ ಗ್ರುಪ್’ ಕಂಪನಿಯ ಮುಖ್ಯಸ್ಥ ಸಯ್ಯದ್ ಮೊಹಮ್ಮದ್ ಬ್ಯಾರಿಯವರು ಈ ಮಸೀದಿಯನ್ನು ಕಟ್ಟಿಸಿದ್ದಾರೆ. ಪ್ರಕೃತಿಯ ಸಹಜ ಶಕ್ತಿಗಳಾದ ಬೆಳಕು ಮತ್ತು ಗಾಳಿ ಇಲ್ಲಿ ಸಹಜವಾಗಿಯೇ ಸೂಸುತ್ತವೆ. ಇಸ್ಲಾಮಿಕ್ ವಾಸ್ತುಶಿಲ್ಪದ ಹೆಗ್ಗುರುತೆನಿಸಿದ ಜಾಲಂಧ್ರಗಳನ್ನು ಮತ್ತು ಮಿನಾರ್ ಗಳನ್ನು ಇಲ್ಲಿ ಪರಿಸರ ಸಮತೋಲನಕ್ಕೆ ಸಹಾಯಕವಾಗುವಂತೆ ಬಳಸಲಾಗಿದೆ. ಮಿನಾರ್ ಗಳು ಮಸೀದಿಯೊಳಗಿನ ಬಿಸಿಗಾಳಿಯನ್ನು ಹೊರಕ್ಕೆ ಕಳಿಸುತ್ತವೆ. ಜಾಲಂಧ್ರಗಳು ತಂಪುಗಾಳಿಯನ್ನು ಒಳಕ್ಕೆ ಸೆಳೆಯುತ್ತವೆ. ಜಾಲಂಧ್ರದ ಕಿಂಡಿಗಳಲ್ಲಿ ಹಸಿರು ಲತೆಗಳು ಪುಷ್ಕಳವಾಗಿ ಬೆಳೆದಿವೆ. ಅವುಗಳ ಮೂಲಕ ಆಮ್ಲಜನಕ ಧಾರಾಳವಾಗಿ ಸೂಸುತ್ತದೆ. ಮಸೀದಿಯ ಮಹಾದ್ವಾರದಲ್ಲೇ ತೆಂಗಿನ ಮರವೊಂದು ಛಾವಣಿಯ ಮೂಲಕ ಆಕಾಶದತ್ತ ಸಾಗಿದೆ. ಈ ಬದ್ರಿಯಾ ಮಸೀದಿ ಈಗ ಮುಸ್ಲಿಮರನ್ನಷ್ಟೇ ಅಲ್ಲ, ಎಲ್ಲ ಧರ್ಮಗಳಿಗೆ ಸೇರಿದ ಜನರನ್ನು ಸೆಳೆಯುವ ಪ್ರವಾಸೀಧಾಮವೂ ಆಗಿದೆ.
ಮಸೀದಿಯ ಗೋಡೆಗಳ ಮೇಲೆ ಈ ಕೆಳಗಿನ ಧ್ಯೇಯವಾಕ್ಯಗಳಿವೆ:
‘ಉಣ್ಣಿರಿ, ಕುಡಿಯಿರಿ ಮತ್ತು ಮಿತಿಮೀರಬೇಡಿರಿ. ಅಲ್ಲಾಹನು ಮಿತಿಮೀರುವವರನ್ನು ಮೆಚ್ಚುವುದಿಲ್ಲ’ (ಕುರ್ಆನ್ 7:31)
‘ಅಲ್ಲಾಹನು ಭೂಮಿಯನ್ನು ಸಕಲ ಪ್ರಾಣಿಗಳಿಗೆ ಉಂಟು ಮಾಡಿರುವನು. ಅಲ್ಲಾಹನು ಸೃಷ್ಟಿಸಿದ ಪ್ರಕೃತಿಯಲ್ಲಿ ಸಮತೋಲನವಿದೆ, ಸಮತೋಲನವನ್ನು ಕೆಡಿಸಬೇಡಿರಿ. ’ (ಕುರ್ಆನ್ 55:8,9)
ಗಾಳಿ, ನೀರು, ಮಣ್ಣು ಈ ಮೂರನ್ನೂ ಪ್ರಕೃತಿ ಹೇಗೆ ಕೊಟ್ಟಿದೆಯೋ ಅದೇ ಸಮತೋಲನದ ಪರಿಶುದ್ಧ ಸ್ಥಿತಿಯಲ್ಲಿ ರಕ್ಷಿಸಿಕೊಳ್ಳುವುದು ನಮ್ಮ ಈ ಕಾಲದ ಅತಿ ದೊಡ್ಡ ಸವಾಲಾಗಿದೆ. ಮೂಲತಃ ಪ್ರಕೃತಿ ಸದಾಕಾಲ ಜೀವಪೋಷಕವಾಗಿರುತ್ತದೆ. ತಾನಾಗಿ ಎಂದೂ ಕೊಳೆಯಾಗುವುದಿಲ್ಲ. ಆಗೊಮ್ಮೆ ಈಗೊಮ್ಮೆ ಕೊಳೆಯಾದಂತೆ, ಗಾಳಿಯಲ್ಲಿ ದೂಳು ಕವಿದಂತೆ, ನೆಲ ಬಿಸಿಯಾದಂತೆ ಕಂಡರೂ ಅದು ಕ್ಷಣಿಕವಾಗಿರುತ್ತದೆ. ನಿಂತ ನೀರು ಪಾಚಿ ಕಟ್ಟಿದಂತೆ ಕಂಡರೂ ಅದು ಜೀವಪೋಷಕವಾಗಿರುತ್ತದೆ ವಿನಾ ಜೀವಕ್ಕೆ ಮಾರಕವಾಗಿರುವುದಿಲ್ಲ. ಮಳೆ ಅಥವಾ ಹಿಮಪಾತದಿಂದ ಹೊಸ ನೀರು ಸೇರ್ಪಡೆಯಾದಾಗ ಮತ್ತೆ ಸುಸ್ಥಿತಿಗೆ ಬರುತ್ತದೆ. ಒಟ್ಟಾರೆಯಾಗಿ ಇಡೀ ಪ್ರಕೃತಿ ತನ್ನ ಸಮತೋಲವನ್ನು ಕಾಯ್ದುಕೊಂಡಿರುತ್ತದೆ.
ಮನುಷ್ಯನ ವಿಕಾಸವಾದ ನಂತರ, ಅವನ ಬೇಕು-ಬೇಡಗಳ ಪಟ್ಟಿ ಬೆಳೆಯುತ್ತ ಹೋದಂತೆಲ್ಲ ಪ್ರಕೃತಿಯ ನಿಯಮಗಳನ್ನು ಆತ ಧಿಕ್ಕರಿಸುವ ಹಂತ ಬಂದಾಗ ವಿವೇಕವಾಣಿ ಅವನನ್ನು ಆಗಾಗ ಎಚ್ಚರಿಸಬೇಕಾದ ಅನಿವಾರ್ಯತೆ ಬಂತು. ಕುರ್ಆನ್ ಆ ಕೆಲಸವನ್ನು ಸಮರ್ಥವಾಗಿ ಮಾಡಿದೆ. ಇಸ್ಲಾಮಿನ ಧಾರ್ಮಿಕ ನಿಯಮಗಳ ಪ್ರಕಾರ, ಪ್ರಕೃತಿಯ ಮೂಲ ಘಟಕಗಳು- ಅಂದರೆ ನೀರು, ಗಾಳಿ, ಬೆಂಕಿ, ಅರಣ್ಯ ಮತ್ತು ಬೆಳಕು- ಕೇವಲ ಮಾನವನಿಗಷ್ಟೇ ಅಲ್ಲ, ಪ್ರಪಂಚದ ಎಲ್ಲ ಜೀವಿಗಳಿಗೂ ಸೇರಿದೆ. ಅವುಗಳ ಸಂರಕ್ಷಣೆ ಮಾಡುವುದು ಮತ್ತು ಅದರ ದುರುಪಯೋಗವಾಗದಂತೆ ಕಣ್ಗಾವಲು ಇಡಬೇಕಾದುದು ಮನುಷ್ಯನ ಕರ್ತವ್ಯವಾಗಿದೆ. ನಿಸರ್ಗದ ಸಂಪತ್ತನ್ನು ಬಳಸುತ್ತಲೇ ಅವನು ಅವುಗಳ ಸಂರಕ್ಷಣೆಯನ್ನೂ ಮಾಡುತ್ತಿರಬೇಕು ಎಂಬ ಕರಾರಿನ ಮೇಲೆಯೇ ಅಂಥ ಸಂಪನ್ಮೂಲಗಳನ್ನು ಬಳಸುವ ಹಕ್ಕು ಅವನಿಗೆ ಪ್ರಾಪ್ತವಾಗಿದೆ.
ಪ್ರತಿಯೊಬ್ಬ ವ್ಯಕ್ತಿಯೂ ಪ್ರಕೃತಿಯ ಮೇಲ್ವಿಚಾರಕನಾಗಿದ್ದು ಇತರ ಜೀವಿಗಳೊಂದಿಗೆ ಆತ ಸಹಬಾಳ್ವೆಯನ್ನು ನಡೆಸಬೇಕು. ಆತ ಒಬ್ಬ ಖಲೀಫಾ (ಸಂರಕ್ಷಕ) ಕೂಡ ಆಗಿರುವುದರಿಂದ ಅವನ ಪಾಲಿಗೆ ಬಂದ ಆಸ್ತಿಗೆ ಯಾವುದೇ ಧಕ್ಕೆ ಬಾರದಂತೆ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸಬೇಕು. ಇಲ್ಲಿ ‘ಆಸ್ತಿ’ ಎಂದರೆ ಕೇವಲ ಭೂಮಿ ಎಂದಲ್ಲ. ಭೂಮಿಯ ಮೇಲಿನ ಸಕಲ ಚರಾಚರ ವಸ್ತುಗಳು, ಅಂದರೆ ಪ್ರಕೃತಿಯ ಮೂಲ ಘಟಕಗಳು ದುರ್ದೆಸೆಗೀಡಾಗದ ಹಾಗೆ ನೋಡಿಕೊಳ್ಳಬೇಕು.ಸಾವಿರಾರು ವರ್ಷಗಳ ಹಿಂದೆ ಬದುಕು ತುಂಬ ಸರಳವಾಗಿದ್ದಾಗ, ಮನುಷ್ಯನ ಆಸೆಗಳು ಸೀಮಿತವಾಗಿದ್ದಾಗ, ಪ್ರಕೃತಿ ಮತ್ತು ಪರಿಸರವೂ ಶುದ್ಧವಾಗಿರುತ್ತಿತ್ತು. ಹೆಚ್ಚೆಂದರೆ ಆತ ನೀರಲ್ಲಿ ತನ್ನ ಕೊಳೆಯನ್ನು ತೊಳೆಯುತ್ತಿದ್ದ, ತನ್ನ ವಸ್ತ್ರಗಳನ್ನು ತೊಳೆಯುತ್ತಿದ್ದ. ನೀರು ಕೆಲಕಾಲದ ನಂತರ ತಂತಾನೇ ಶುದ್ಧವಾಗಿರುತ್ತಿತ್ತು. ಎಲ್ಲೋ ಕಾಡಿಗೆ ಬೆಂಕಿ ಹಚ್ಚಿದರೂ ಅದು ತುಸು ಸಮಯದ ನಂತರ ಆರಿ ಹೋಗುತ್ತಿತ್ತೇ ವಿನಾ ನಿರಂತರ ಉರಿಯುತ್ತಿರಲಿಲ್ಲ. ಗಾಳಿಯಂತೂ ಸದಾಕಾಲ ಚಲನಶೀಲವಾಗಿದ್ದು ಅದಂತೂ ಹಿಂದಿನ ಕಾಲದಲ್ಲಿ ಮಲಿನಗೊಳ್ಳುವ ಪ್ರಶ್ನೆಯೇ ಇರಲಿಲ್ಲ. ಎಲ್ಲೋ ಕಟ್ಟಿಗೆ ಉರಿಸಿದ ಹೊಗೆ, ಅಪರೂಪಕ್ಕೆ ಕಮಟು ವಾಸನೆ ಬಂದಿದ್ದರೂ ಅದು ಕ್ಷಣಿಕವಾಗಿಯೇ ಇರುತ್ತಿತ್ತು. ಕಟ್ಟಿಗೆ ಸೌದೆಗಾಗಿ ಎಲ್ಲೋ ಕೆಲವು ಗಿಡಮರಗಳನ್ನು ಕಡಿದರೂ ಅದು ಒಣಗಿ ಸೌದೆಯಾಗುವಷ್ಟರಲ್ಲೇ ಹೊಸ ಗಿಡಗಳು ಚಿಗುರುತ್ತಿದ್ದವು. ಹಾಗಾಗಿ ಅಂದಿನ ಕಾಲದಲ್ಲಿ ಇಸ್ಲಾಮಿಕ್ ಕಟ್ಟುಪಾಡುಗಳನ್ನು ಪಾಲಿಸುವುದು ಅಂಥ ಏನೂ ದುಸ್ತರ ಸಂಗತಿಯಾಗಿರಲಿಲ್ಲ.
ಆದರೆ ಈಗಿನ ಸ್ಥಿತಿಯೇ ಬೇರೆ. ಸತತ ಏರುತ್ತಿರುವ ಜನಸಂಖ್ಯೆಗೆ ತಕ್ಕಂತೆ ಅರಣ್ಯದ ವಿಸ್ತೀರ್ಣವಾಗಲೀ, ಕೃಷಿಭೂಮಿಯ ಕ್ಷೇತ್ರಫಲವಾಗಲೀ ನದಿಯ ಆಳ ಅಗಲವಾಗಲೀ ಹೆಚ್ಚುತ್ತಿಲ್ಲ. ಸೃಷ್ಟಿಯಲ್ಲಿ ಅನಾದಿ ಕಾಲದಿಂದ ಲಭ್ಯವಿರುವ ಸಂಪನ್ಮೂಲದಲ್ಲೇ ಎಲ್ಲರೂ ಪಾಲು ಪಡೆಯಬೇಕು. ಅದೂ ಅಲ್ಲದೆ ಆಧುನಿಕ, ಔದ್ಯಮಿಕ ನಾಗರಿಕತೆ ವಿಸ್ತರಿಸುತ್ತ ಹೋದಂತೆ ಹೊಸ ಹೊಸ ದ್ರವ್ಯಗಳನ್ನು ಸೃಷ್ಠಿಸಿ ಬಳಸಲು ತೊಡಗಿದ. ಹಿಂದಿನ ಕಾಲದಲ್ಲಿ ಕಲ್ಲಿದ್ದಲು, ಪೆಟ್ರೋಲಿನಂಥ ಪಳೆಯುಳಿಕೆ ಇಂಧನದ ಬಳಕೆ ಗೊತ್ತಿರಲಿಲ್ಲ. ಪ್ಲಾಸ್ಟಿಕ್ ಎಂಬ ವಸ್ತುವೇ ಇರಲಿಲ್ಲ. ಯುರೇನಿಯಂ, ಪ್ಲುಟೋನಿಯಂ ಮುಂತಾದ ವಿಕಿರಣಶೀಲ ಮೂಲವಸ್ತುಗಳ ಪರಿಚಯವೇ ಆಗಿರಲಿಲ್ಲ. ತನಗೆ ಆಹಾರವಲ್ಲದ ಜೀವಿಗಳನ್ನು, ತನ್ನ ಪಾಡಿಗೆ ತಾನಿರುವ ಜೀವಿಗಳನ್ನು ಹೊಸಕಿ ಹಾಕಲು ಮನುಷ್ಯನಿಗೆ ಕಾರಣವೇ ಇರಲಿಲ್ಲ.
ಈಗ ಎಷ್ಟೊಂದು ಬದಲಾವಣೆಯಾಗಿದೆ. ಕುರ್ಆನಿನಲ್ಲಿ ಪ್ರಸ್ತಾಪಿಸಲಾದ ಪ್ರಕೃತಿ ರಕ್ಷಣೆಯ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು ಈಗ ಅತಿ ದೊಡ್ಡ ಸವಾಲಿನ ಕೆಲಸವಾಗಿದೆ. ಉದಾಹರಣೆಗೆ ಮೋಟಾರು ವಾಹನ, ರೈಲು, ವಿಮಾನ, ಹಡಗುಗಳಲ್ಲಿ ಪ್ರಯಾಣ ಮಾಡಬೇಕೆಂದರೆ ಪೆಟ್ರೋಲಿಯಂ ಇಂಧನವನ್ನು ಬಳಸಲೇಬೇಕಾಗುತ್ತದೆ; ಅಂದರೆ ಪ್ರಕೃತಿದತ್ತವಾದ ಶುದ್ಧ ಗಾಳಿಯನ್ನು ಮಲಿನ ಮಾಡಲೇಬೇಕಾಗುತ್ತದೆ. ರೈಲು ಬಂಡಿಯ ನಿರ್ಮಾಣಕ್ಕೆ ಬೇಕಾದ ಕಬ್ಬಿಣದ ಅದಿರನ್ನು ಅಗೆಯುವಾಗ ಅಥವಾ ರೈಲು ಮಾರ್ಗದ ನಿರ್ಮಾಣ ಮಾಡುವಾಗ ಇಲ್ಲವೆ ವಿಮಾನ ನಿರ್ಮಾಣಕ್ಕೆಂದು ಅಲ್ಯೂಮಿನಿಯಂ ಲೋಹದ ಅದಿರುಗಳನ್ನು ಅಗೆಯಲು ಹೊರಟಾಗ ಅರಣ್ಯನಾಶ ಆಗಿಯೇ ಆಗುತ್ತದೆ. ಅದಿರಿನ ಸಂಸ್ಕರಣೆ ಮಾಡಿ ಪಳಪಳ ಹೊಳೆಯುವ ಲೋಹವನ್ನು ಉತ್ಪಾದಿಸಬೇಕೆಂದರೆ ಆಸಿಡ್ಗಳ ಬಳಕೆ ಅನಿವಾರ್ಯವಾಗುತ್ತದೆ. ಅದರಿಂದಾಗಿ ನೀರಿಗೆ ಕೊಳೆ ಸೇರಿಸಲೇಬೇಕಾಗುತ್ತದೆ. ನೀರಿನಲ್ಲಿ ತನ್ನ ಪಾಡಿಗೆ ತಾನು ಜೀವಿಸುತ್ತಿದ್ದ ನಾನಾ ಬಗೆಯ ಜಲಚರಗಳ ಹತ್ಯೆ ಆಗಿಯೇ ಆಗುತ್ತದೆ. ಇನ್ನು, ಮನೆ ಕಟ್ಟಬೇಕೆಂದರೆ- ಈಗಂತೂ ಮರಳು, ಸಿಮೆಂಟ್, ಕಬ್ಬಿಣ, ಗ್ರಾನೈಟ್, ಮಾರ್ಬಲ್ ಬೇಕೇ ಬೇಕಲ್ಲ. ಅವುಗಳನ್ನು ನಿಸರ್ಗದಿಂದ ಎತ್ತಿ ತರಬೇಕೆಂದರೆ ಪ್ರಕೃತಿಯ ಮೇಲೆ ದೌರ್ಜನ್ಯ ನಡೆದೇ ನಡೆಯುತ್ತದೆ.
ಪ್ರಕೃತಿಯ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದರೆ ಪ್ರಕೃತಿ ಆಗಾಗ ಪ್ರತಿಭಟಿಸುತ್ತದೆ. ನೀರಿಗೆ ಕೊಳೆ ಕಸ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸೇರಿಸಿದ್ದರಿಂದಲೇ ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ಮಹಾನಗರಗಳಲ್ಲಿ ಮಹಾಪೂರವೇ ಬಂದಿತ್ತು. ಚರಂಡಿ ಕಟ್ಟಿಕೊಂಡಿದ್ದರಿಂದ ರಸ್ತೆಗಳ ಮೇಲೆಲ್ಲ ಕೊಳೆನೀರು ಉಕ್ಕಿ ಬಂದು ಸಂಚಾರಕ್ಕೆ ಅಡ್ಡಿ ಮಾಡಿತು. ಹರಿಯುವ ನದಿಯನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಪ್ರವಾದಿ ಮಹಮ್ಮದ್(ಸ) ಅವರು ಆಗಿನ ಕಾಲದಲ್ಲೇ ಹೇಳಿದ್ದರು ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ನಮಗೆ ಬೆಂಗಳೂರಿನ ಅಹ್ಮದ್ ಖಾನ್, ಅವರ ಸಹೋದರ ರಸೂಲ್ ಖಾನ್ ಮತ್ತು ಮನ್ಸೂರ್ ಅಹ್ಮದ್ ಎಂಬರು ಮಾಡುವ ವಿಶಿಷ್ಟ ಸಮಾಜ ಸೇವೆಯ ನೆನಪಾಗಬೇಕು.
ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ನಾವು ಬಿಸಾಕುತ್ತೇವೆ. ಹಾಗೆ ಬಿಸಾಕಿದ ಪ್ಲಾಸ್ಟಿಕ್ ಚಿಂದಿಚಿಂದಿಯಾಗಿ ಮಣ್ಣಿಗೆ, ನೀರಿಗೆ, ಗಾಳಿಗೆ ಸೇರಿಕೊಳ್ಳುತ್ತದೆ. ಕ್ರಮೇಣ ತೀರ ಸೂಕ್ಷ್ಮಕಣಗಳಾಗಿ ಪ್ಲಾಸ್ಟಿಕ್ ನಮ್ಮ ದೇಹಕ್ಕೂ ಆಹಾರದೊಂದಿಗೆ, ಉಸಿರಿನೊಂದಿಗೆ ಸೇರಿ ಏನೆಲ್ಲ ಬಗೆಯ ಕಾಯಿಲೆಗಳನ್ನು ಉಂಟುಮಾಡುತ್ತದೆ. ತ್ಯಾಜ್ಯ ಆಹಾರವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ರಸ್ತೆಯಂಚಿಗೆ ಬಿಸಾಡುವ ಕೆಲಸವಂತೂ ಹಸಿದ ಪ್ರಾಣಿಪಕ್ಷಿ ಲೋಕಕ್ಕೆ ಎಷ್ಟೊಂದು ಅಪಾಯ ತರುತ್ತಿದೆ. ಹೀಗೆ ಕಂಡಲ್ಲಿ ಚೆಲ್ಲಾಡುವ ಇಷ್ಟೊಂದು ರಾಶಿರಾಶಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಹೇಗೆ ನಿಭಾಯಿಸಬೇಕು ಎಂದು ಎಲ್ಲರೂ ಚಿಂತಿಸುತ್ತಿದ್ದಾಗ ಅಹ್ಮದ್ ಖಾನ್ ಒಂದು ಉಪಾಯವನ್ನು ಕಂಡುಕೊಂಡರು. ರಸ್ತೆ ನಿರ್ಮಾಣದ ಗುತ್ತಿಗೆ ಪಡೆದಿದ್ದ ಅವರು ಡಾಂಬರನ್ನು ಕರಗಿಸುವಾಗ ಅದರೊಂದಿಗೆ ಚಿಂದಿ ಪ್ಲಾಸ್ಟಿಕ್ಕನ್ನೂ ಸೇರಿಸಿದರು. ಹಾಗೆ ಪ್ಲಾಸ್ಟಿಕ್ಕಿನ ಸಮೇತ ಕರಗಿದ ಡಾಂಬರನ್ನು ಜಲ್ಲಿಕಲ್ಲುಗಳ ಜೊತೆ ಮಿಶ್ರ ಮಾಡಿ ರಸ್ತೆಗೆ ಹಾಕಿದರು. ರಸ್ತೆಯ ಗುಣಮಟ್ಟ ಮತ್ತು ಬಾಳಿಕೆ ಮೊದಲಿಗಿಂತ ಉತ್ತಮ ಆಗುತ್ತದೆ ಎಂದು ತೋರಿಸಿದರು. ಅವರು ಕಂಡು ಹಿಡಿದ ಉಪಾಯಕ್ಕೆ ಬೆಂಗಳೂರಿನಲ್ಲಿ ಭಾರೀ ಶ್ಲಾಘನೆ ಬಂತು. ಅವರು ತಮ್ಮ ಸಹೋದರ ರಸೂಲ್ ಖಾನ್ ಜೊತೆ ಸೇರಿ ತ್ಯಾಜ್ಯ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸಿ ಅದರಿಂದ ರಸ್ತೆ ನಿರ್ಮಾಣದ ಹೊಸ ಹೊಸ ಯೋಜನೆಗಳನ್ನು ಕೈಗೊಂಡರು. ಬೆಂಗಳೂರಿನ ಲಾಲ್ಬಾಗ್ ರಸ್ತೆ, ಕನ್ನಿಂಗ್ಹ್ಯಾಮ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆಗಳೆಲ್ಲ ನಗರದ ತ್ಯಾಜ್ಯ ಪ್ಲಾಸ್ಟಿಕ್ಗಳನ್ನು ಜೀರ್ಣಿಸಿಕೊಂಡು ಗಟ್ಟಿಮುಟ್ಟಾಗಿ ರೂಪುಗೊಂಡಿವೆ. ಇಂದು ಅವರಿಬ್ಬರ ಜೋಡಿ ಸುಮಾರು ಹತ್ತು ಸಾವಿರ ಕಿಲೊಮೀಟರ್ ಪ್ಲಾಸ್ಟಿಕ್ ಮಿಶ್ರಿತ ಟಾರ್ ರಸ್ತೆಯನ್ನು ನಿರ್ಮಿಸಿದೆ. ಇಬ್ಬರೂ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಕಸ ನಿರ್ವಹಣೆಯಲ್ಲಿ ತೊಡಗಿಕೊಂಡ ಅನೇಕ ಮುಸ್ಲಿಮರು ತಮ್ಮ ಕೆಲಸವನ್ನು ಅಲ್ಲಾಹನ ಸೇವೆಯೆಂದೇ ಪರಿಗಣಿಸುತ್ತಾರೆ. ಇಂದು ಕರ್ನಾಟಕದ ಅನೇಕ ನಗರ ಪಟ್ಟಣಗಳಲ್ಲಿ ಕಸ ನಿರ್ವಹಣಾ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವವರಲ್ಲಿ ಬಹುಮಂದಿ ಮುಸ್ಲಿಮರೇ ಆಗಿದ್ದಾರೆ. ಬೆಂಗಳೂರಿನಲ್ಲಿ ಹತ್ತಾರು ವರ್ಷಗಳಿಂದಲೇ ಕಸ ಸಂಸ್ಕರಣೆ ಮತ್ತು ಮರುಬಳಕೆಯ ವಿಷಯದಲ್ಲಿ ಜಯನಗರದ ಉತ್ಸಾಹಿಗಳು ಎಲ್ಲರಿಗೆ ಮಾದರಿಯಾಗಿದ್ದಾರೆ. ಅಲ್ಲಿನ ಸುಮಾರು ಹತ್ತು ಸಾವಿರ ಮನೆಗಳಿಂದ ಹೊರಬೀಳುವ ಒಣ ತ್ಯಾಜ್ಯಗಳನ್ನು ವಿಂಗಡಿಸಿ ಅವುಗಳನ್ನು ಮರುಬಳಕೆಗೆ ಕಳುಹಿಸುವಲ್ಲಿ ಮನ್ಸೂರ್ ಅಹ್ಮದ್ ಮನೆಮಾತಾಗಿದ್ದಾರೆ. ಅವರ ಬಗ್ಗೆ ಅನೇಕ ವಿಡಿಯೊಗಳು ಯೂಟ್ಯೂಬ್ನಲ್ಲಿ ಪ್ರಸಾರಗೊಂಡಿವೆ. ಮಕ್ಕಳಿಗೆ ಕಸ ನಿರ್ವಹಣೆಯ ಪಾಠ ಹೇಳುವಾಗ ಇಲ್ಲಿನ ಅನೇಕ ಶಾಲೆಗಳಲ್ಲಿ ಮನ್ಸೂರ್ ಅಹ್ಮದ್ ಅವರ ವೀಡಿಯೊಗಳನ್ನು ತೋರಿಸಲಾಗುತ್ತಿದೆ.
ಯೂಟ್ಯೂಬ್ ವೀಡಿಯೊಗಳು ಆಧುನಿಕ ವಿಚಾರಗಳನ್ನು ಎಲ್ಲರ ಮನೆಮನಗಳನ್ನು ತಲುಪುವ ಬಹುಮುಖ್ಯ ಸಂವಹನ ಮಾಧ್ಯಮವಾಗಿದೆ. ಪರಿಸರ ನಿರ್ವಹಣೆಯ ವಿಷಯ ಬಂದಾಗ ಎಲ್ಲರಿಗೂ ಮೊದಲು ನೆನಪಾಗುವುದು ಅಮೀರ್ಖಾನ್ ಅವರ ‘ಸತ್ಯಮೇವ ಜಯತೆ’ ಸರಣಿ ಕಾರ್ಯಕ್ರಮಗಳು. ಅದು ಇಡೀ ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಅನೇಕ ದೇಶಗಳಲ್ಲಿ ಪ್ರಸಿದ್ಧಿ ಪಡೆದ ಸರಣಿ. ಅದರಲ್ಲಿ ನೀರಿಗೆ, ಆಹಾರಕ್ಕೆ ವಿಷ ಬೆರೆಸುವವರ ವ್ಯವಹಾರಗಳ ಬಗ್ಗೆ ಅವರು ಜನರನ್ನು ಎಚ್ಚರಿಸಿದ್ದಾರೆ; ತ್ಯಾಜ್ಯಗಳ ಮರುಬಳಕೆ ಮಾಡುವ ಯತ್ನಗಳ ಬಗ್ಗೆ ಜನರ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಕುರ್ಆನಿನಲ್ಲಿ ಹೇಳಲಾದ ಬಹಳಷ್ಟು ನೈತಿಕ ನಿಯಮಾವಳಿಗಳನ್ನು ಆ ಸರಣಿಯಲ್ಲಿ ಸಾದರಪಡಿಸಲಾಗಿದೆ. ಆದರೆ ಎಲ್ಲಕ್ಕಿಂತ ಪ್ರಸಿದ್ಧಿಗೆ ಬಂದಿದ್ದು ಅಮೀರ್ಖಾನ್ ನೇತೃತ್ವದ ‘ವಾಟರ್ ಕಪ್’ ಸ್ಪರ್ಧೆ. ಮಹಾರಾಷ್ಟ್ರದ ನೂರಾರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾದಾಗ ಈ ತಂಡದವರು ಹಳ್ಳಿ ಹಳ್ಳಿಗೆ ಹೋಗಿ, ಮಳೆ ನೀರು ಸಂಗ್ರಹಣೆಯ ಬಗ್ಗೆ ತರಬೇತಿ ಶಿಬಿರ ನಡೆಸಿ, ಅಕ್ಷರಶಃ ಕೋಟ್ಯಂತರ ಜನರು ಒಗ್ಗಟ್ಟಾಗಿ ಮಳೆಕೊಯ್ಲಿಗೆ ಶ್ರಮದಾನ ನಡೆಸುವಂತೆ ಪ್ರೇರಣೆ ನೀಡಿದ್ದಾರೆ. ಮಕ್ಕಾದಲ್ಲಿ ಝಮ್ಝಮ್ ಎಂಬ ಬುಗ್ಗೆಯಲ್ಲಿ ಸದಾಕಾಲ ನೀರು ಸಿಗುವ ಹಾಗೆಯೇ ಈ ವಾಟರ್ಕಪ್ ಸ್ಪರ್ಧೆಯಲ್ಲಿ ಪಾಲ್ಗೊಂಡ ಪ್ರತಿ ಹಳ್ಳಿಯಲ್ಲೂ ಈಗ ಅಂತರ್ಜಲದ ಬುಗ್ಗೆ ಸಮೃದ್ಧವಾಗಿದೆ.
ನೀರನ್ನು ಕೊಳೆ ಮಾಡಬಾರದು, ಪೋಲು ಮಾಡಬಾರದು ಎನ್ನುತ್ತಲೇ ಪ್ರಕೃತಿದತ್ತವಾದ ಮಳೆ ನೀರನ್ನು ದಕ್ಷತೆಯಿಂದ ಸಂಗ್ರಹಿಸಿ ಬಳಸಬೇಕು ಎನ್ನುತ್ತೇವೆ. ಅದಕ್ಕೆ ಉತ್ತಮವಾದ ಉದಾಹರಣೆ ಬೆಂಗಳೂರಿನ ಶಿವಾಜಿನಗರದ ಮಸೀದಿಯಲ್ಲಿ ಸಿಗುತ್ತದೆ. ಇಲ್ಲಿ ಮಸೀದಿಯ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿ ಅದೇ ನೀರು ನಿತ್ಯವೂ ನಮಾಜಿಗೆ ಬರುವವರ ಕೈಮುಖ ತೊಳೆಯಲು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಇಂಗ್ಲಿಷ್ನಲ್ಲಿ ಹೇಳುವ ‘ಗ್ರೀನ್ ದೀನ್’ ಪರಿಕಲ್ಪನೆ ಇಲ್ಲಿ ಸಾಕಾರಗೊಂಡಿದೆ. ಕರ್ನಾಟಕದ ಬರಪೀಡಿತ ಜಿಲ್ಲೆಗಳ ಜನರಿಗೆ ಕುಡಿಯುವ ನೀರನ್ನು ಒದಗಿಸಿ ಎಲ್ಲರಿಂದ ‘ನೀರ್ಸಾಬ್’ ಎನ್ನಿಸಿಕೊಂಡ ನಜೀರ್ ಸಾಬ್ ಹೆಸರನ್ನು ನಾವೆಂದೂ ಮರೆಯುವಂತಿಲ್ಲ. ಹಾಗೆಯೇ ಲಭ್ಯವಿರುವ ನೀರು ವ್ಯರ್ಥವಾಗದಂತೆ, ಕೊಳೆಯಾಗದಂತೆ, ಸದಾಕಾಲ ಬಳಕೆಗೆ ಸಿಗುವಂತೆ ಮಾಡುವಲ್ಲಿ ಈ ಮಸೀದಿಯ ಕೆಲಸ ಎಲ್ಲೆಡೆ ಮಾದರಿಯಾಗಬೇಕು.
ಭಾರತೀಯ ಸಮಾಜದಲ್ಲಿ ಇಸ್ಲಾಮಿನ ಧ್ಯೇಯಗಳನ್ನು ಮತ್ತೆ ಮತ್ತೆ ನೆನಪಿಸಬಲ್ಲ ಅನೇಕ ಪರಿಸರ ಪುನರುತ್ಥಾನದ ಕೆಲಸಗಳಲ್ಲಿ ಮುಸ್ಲಿಮರ ಸಹಭಾಗಿತ್ವ ಇದೆ. ಕುಂದಾಪುರದ ಬದ್ರಿಯಾ ಮಸೀದಿಯಿಂದ ಈ ಲೇಖನ ಆರಂಭವಾಗಿದೆ. ಅದೇ ಮಸೀದಿಯ ಗೋಡೆಯ ಮೇಲಿನ ಇನ್ನೊಂದು ಬರಹದೊಂದಿಗೆ ಲೇಖನವನ್ನು ಮುಗಿಸೋಣ:
‘ಮಾನವೀಯ ಅಲೆಯು ಸಹಬಾಳ್ವೆಯ ನೆಲೆಯು
ಸೌಹಾರ್ದದ ಕಂಪು ತರಲಿ ಜಗತ್ತಿಗೆಲ್ಲ ತಂಪು’
IslamKannada News Portal
