Home / ಲೇಖನಗಳು / ಇಸ್ಲಾಮಿನ ಶಿಕ್ಷಾ ಪದ್ಧತಿ

ಇಸ್ಲಾಮಿನ ಶಿಕ್ಷಾ ಪದ್ಧತಿ

ಈಗ ಇಸ್ಲಾಮಿನ ಬಗ್ಗೆ ಪ್ರಚಾರಗೊಂಡಿರುವ ಸಂಶಯಗಳ ಪೈಕಿ ಒಂದು ಅದರ ಶಿಕ್ಷಾ ಪದ್ಧತಿಯ ಕುರಿತಾಗಿದೆ. ಇಂದಿನ ಪ್ರಗತಿಪರ ಯುಗದಲ್ಲಿ ಇಸ್ಲಾಮಿನ ‘ಪಾಶವೀ ಶಿಕ್ಷಾ ಪದ್ಧತಿ’ಯನ್ನು ಜಾರಿಗೊಳಿಸುವುದು ಸಮಂಜಸವೇ? ಅದು ಕಾಲದ ಬೇಡಿಕೆಗಳಿಗೆ ಪೂರಕವಾಗಿದೆಯೇ? ಕೆಲವು ರೂಪಾಯಿಗಳ ಕಳ್ಳತನಕ್ಕೆ ಕೈ ಕಡಿಯುವ ಶಿಕ್ಷೆ, ಕಾಮೋನ್ಮಾದದ ಒಂದು ವಿಷ ಘಳಿಗೆಯಲ್ಲಿ ನಡೆದ ವ್ಯಭಿಚಾರಕ್ಕೆ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ, ಕೋಪೋದ್ರೇಕದಿಂದ ಮತಿಗೆಟ್ಟು ಮಾಡಿದ ಒಂದು ಕೊಲೆಗೆ ಮರಣ ದಂಡನೆ ಇತ್ಯಾದಿಗಳು ವೈಚಾರಿಕ ಮತ್ತು ಮಾನವೀಯ ಮಾನದಂಡಕ್ಕೆ ನಿಲುಕುವ ಶಿಕ್ಷಾ ಪದ್ಧತಿಯೇ? ಎಂಬುದು ಈ ಬಗ್ಗೆ ವ್ಯಾಪಕವಾಗಿ ಕೇಳಿ ಬರುವ ಆಕ್ಷೇಪಗಳಾಗಿವೆ.

ಸಮಗ್ರ ಜೀವನ ವ್ಯವಸ್ಥೆ
ಇಸ್ಲಾವಿೂ ಶಿಕ್ಷಾ ಪದ್ಧತಿಯ ಬಗ್ಗೆ ಅವಲೋಕಿಸುವಾಗ ಪ್ರಪ್ರಥಮವಾಗಿ ಒಂದು ವಿಷಯ ತಿಳಿದಿರಬೇಕಾಗಿದೆ. ಇಸ್ಲಾಮಿನ ಶಿಕ್ಷಾ ಪದ್ಧತಿಯನ್ನು ಜಾರಿಗೊಳಿಸಬೇಕಾದರೆ ಇಸ್ಲಾವಿೂ ಆಡಳಿತ ವ್ಯವಸ್ಥೆ ಜಾರಿಯಲ್ಲಿರಬೇಕಾದುದು ಅತ್ಯಗತ್ಯ. ಇಸ್ಲಾಮ್ ಬಯಸುವ ರೀತಿಯ ಸಾಮಾಜಿಕ ಮತ್ತು ಸಾಂಸ್ಕ್ರತಿಕ ವ್ಯವಸ್ಥೆಯೂ ಜಾರಿಯಲ್ಲಿರಬೇಕು. ಏಕೆಂದರೆ ಇಸ್ಲಾಮ್ ಒಂದು ಸಮಗ್ರ ಜೀವನ ವ್ಯವಸ್ಥೆ. ಅದರ ತತ್ವಗಳು ಮತ್ತು ಕಾನೂನುಗಳು ಅದರ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾಗಿವೆ. ಆ ಪೈಕಿ ಕೆಲವು ತತ್ವಗಳನ್ನೂ ಕಾನೂನುಗಳನ್ನೂ ಬಿಟ್ಟು ಇನ್ನು ಕೆಲವನ್ನು ಮಾತ್ರ ಜಾರಿಗೊಳಿಸುವುದು ಸಾಧ್ಯವಿಲ್ಲ.

ಉದಾಹರಣೆಗೆ ವ್ಯಭಿಚಾರ ಮತ್ತು ವ್ಯಭಿಚಾರದ ಮಿಥ್ಯ ಅಪವಾದ ಹೊರಿಸುವ ವಿಷಯವನ್ನೇ ತೆಗೆದುಕೊಳ್ಳೋಣ. ಈ ಅಪರಾಧಗಳಿಗೆ ನೀಡಬೇಕಾದ ಶಿಕ್ಷೆಯು ವಿವಾಹ, ವಿವಾಹ ವಿಚ್ಛೇದನ, ಪರ್ದಾ ಹಾಗೂ ಲೈಂಗಿಕ ಶಿಷ್ಟಾಚಾರಗಳ ಕುರಿತು ಇಸ್ಲಾಮಿನ ಶಿಕ್ಷಣಗಳೊಂದಿಗೆ ಅತ್ಯಂತ ಗಾಢ ಮತ್ತು ಅಭೇದ್ಯ ಸಂಬಂಧ ಹೊಂದಿದೆ. ಯಾವ ಸಮಾಜದಲ್ಲಿ ಮಹಿಳೆಯರು ಪೂರ್ಣ ಶೃಂಗಾರಗಳೊಂದಿಗೆ ಪರ್ದಾರಹಿತರಾಗಿ ಪೇಟೆಗಳಲ್ಲಿ ವಿಹರಿಸುವುದಿಲ್ಲವೋ ಯಾವ ಸಮಾಜದಲ್ಲಿ ನಗ್ನ ಮತ್ತು ಅರೆ ನಗ್ನ ಭಿತ್ತಿ ಪತ್ರಗಳು ಗೋಡೆಗಳಲ್ಲಿ ರಾರಾಜಿಸುವುದಿಲ್ಲವೋ ಯಾವ ಸಮಾಜದಲ್ಲಿ ವಿಷಯಾಸಕ್ತಿಯನ್ನು ಕೆರಳಿಸುತ್ತಿರುವಂತಹ ಪತ್ರಿಕೆಗಳು, ಸಾಹಿತ್ಯಗಳು, ಸಿನಿಮಾಗಳು, ರೇಡಿಯೋ ಮತ್ತು ಟಿ.ವಿ. ಕಾರ್ಯಕ್ರಮಗಳು ವ್ಯಾಪಕವಾಗಿಲ್ಲವೋ ಯಾವ ಸಮಾಜದಲ್ಲಿ ವಿವಾಹವು ಅತ್ಯಂತ ಸರಳವೂ ಸುಲಭವೂ ಆಗಿದೆಯೋ ಯಾವ ಸಮಾಜದಲ್ಲಿ ವಿವಾಹ ವಿಚ್ಛೇದನದ ಇಸ್ಲಾವಿೂ ಕಾನೂನುಗಳನ್ನು ಪೂರ್ಣವಾಗಿ ಜಾರಿಗೊಳಿಸಲಾಗಿದೆಯೋ ಅಂತಹ ಸಮಾಜದಲ್ಲಿ ಮಾತ್ರ ಇಸ್ಲಾಮಿನ ಈ ಶಿಕ್ಷಾ ಪದ್ಧತಿಯನ್ನು ಜಾರಿಗೊಳಿಸಬಹುದಾಗಿದೆ. ಅದು ಆ ಸಮಾಜದ ಸಹಜ ಬೇಡಿಕೆಯೂ ಆಗಿದೆ. ಇಸ್ಲಾಮ್ ಸ್ಥಾಪಿಸಿದ ಈ ಸಂತುಲಿತ ಸಾಮಾಜಿಕ ವ್ಯವಸ್ಥೆಯನ್ನು ಸಂರಕ್ಷಿಸುವ ಸಲುವಾಗಿ ಇಂತಹ ಕಠಿಣ ಶಿಕ್ಷೆಗಳನ್ನು ಜಾರಿಗೊಳಿಸಲೇಬೇಕು.

ಧರ್ಮಸಮ್ಮತ ವಿಧಾನ ಗಳಿಂದ ವ್ಯಕ್ತಿಗೆ ತನ್ನ ವಿಷಯಾಸಕ್ತಿಯನ್ನು ಪೂರ್ತಿಗೊಳಿಸುವ ಸುಲಭ ವ್ಯವಸ್ಥೆಯು ಜಾರಿಯಲ್ಲಿರುವಾಗ, ಲೈಂಗಿಕ ವಿಕಾರಗಳನ್ನು ಕೆರಳಿಸುವ ಅಸಾಮಾನ್ಯ ವಾತಾವರಣವು ಇಲ್ಲದಿರುವಾಗ ಹಾಗೂ ವ್ಯಭಿಚಾರವೆಸಗುವುದು ಅತ್ಯಂತ ಕಷ್ಟ ಸಾಧ್ಯವಾಗುವಂತಹ ವಾತಾವರಣವು ನಿರ್ಮಿಸಲ್ಪಟ್ಟಾಗ ಲೈಂಗಿಕ ಅಪರಾಧಗಳಿಗೆ ಉಗ್ರ ಶಿಕ್ಷೆಯನ್ನು ವಿಧಿಸುವುದು ಖಂಡಿತ ನ್ಯಾಯ-ನೀತಿಯ ಅನಿವಾರ್ಯ ಬೇಡಿಕೆಯಾಗಿ ಮಾರ್ಪಡುತ್ತದೆ. ಅಂತಹ ವಾತಾವರಣದಲ್ಲಿ ಅತ್ಯಂತ ನೀಚ ಮನೋವೃತ್ತಿಯ ಜನರು ಮಾತ್ರ ಈ ಅಪರಾಧಗಳನ್ನು ಎಸಗಬಲ್ಲರು. ಅಂತಹವರಿಗೆ ಅತ್ಯುಗ್ರ ಶಿಕ್ಷೆಯನ್ನು ವಿಧಿಸಿ ಸಮಾಜವನ್ನು ಅವರಕೇಡಿನಿಂದ ರಕ್ಷಿಸುವುದು ಅನಿವಾರ್ಯವಾಗಿದೆ.

ಅಸಾಮಾನ್ಯ ಅಪರಾಧಿಯಲ್ಲ
ಆದರೆ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರುವ ಕಡೆಗಳಲ್ಲಿ, ಸ್ತ್ರೀ-ಪುರುಷರು ಶಾಲೆ, ಕಾಲೇಜು, ಕ್ಲಬ್ ಮತ್ತು ಮನೋರಂಜನಾ ಕೇಂದ್ರಗಳಲ್ಲಿ ಸರ್ವಶೃಂಗಾರ ಭೂಷಿತರಾಗಿ ಪರಸ್ಪರ ಮುಕ್ತ ಭೇಟಿಯಾಗುವ ಅವಕಾಶವಿರುವ ಕಡೆಗಳಲ್ಲಿ, ವಿಷಯಾಸಕ್ತಿಯನ್ನು ಕೆರಳಿಸುವ ಎಲ್ಲ ಮಾಧ್ಯಮಗಳೂ ವ್ಯಾಪಕವಾಗಿರುವ ಕಡೆಗಳಲ್ಲಿ ವಿವಾಹವಿಲ್ಲದೆಯೇ ಕಾಮಾಸಕ್ತಿಯನ್ನು ತೀರಿಸುವ ಹೇರಳ ಅವಕಾಶ ಲಭ್ಯವಿರುವ ಕಡೆಗಳಲ್ಲಿ, ವಿವಾಹೇತರ ಲೈಂಗಿಕ ಸಂಬಂಧಗಳು ವ್ಯಾಪಕವಾಗಿರುವ ಕಡೆಗಳಲ್ಲಿ, ಪ್ರೀತಿ-ಪ್ರೇಮಗಳ ಹೆಸರಲ್ಲಿ ವಿವಾಹೇತರ ಲೈಂಗಿಕ ಸಂಬಂಧಗಳಿಗೆ ಮನ್ನಣೆ ಸಿಗುವ ಕಡೆಗಳಲ್ಲಿ ವ್ಯಭಿಚಾರ ಮತ್ತು ವ್ಯಭಿಚಾರದ ಆರೋಪಗಳಿಗೆ ಇಸ್ಲಾವಿೂ ಶಿಕ್ಷೆಯನ್ನು ವಿಧಿಸುವುದು ಖಂಡಿತ ಅಕ್ರಮವೆನಿಸುವುದು. ಏಕೆಂದರೆ ಅಂತಹ ಸಮಾಜದಲ್ಲಿ ಓರ್ವ ಸಾಮಾನ್ಯ ಉತ್ತಮ ಚಾರಿತ್ರ್ಯದ ಮನುಷ್ಯನೂ ವ್ಯಭಿಚಾರದಿಂದ ದೂರವಿರುವುದು ಕಷ್ಟದ ಕೆಲಸ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ಯಾರಾದರೂ ವ್ಯಭಿಚಾರವೆಸಗಿದರೆ ಅವನು ಚಾರಿತ್ರ್ಯದ ದೃಷ್ಟಿಯಿಂದ ಅಸಾಮಾನ್ಯ ಅಪರಾಧಿ ಎನಿಸಲಾರ. ಛಡಿಯೇಟು ಅಥವಾ ಕಲ್ಲೆಸೆದು ಕೊಲ್ಲುವ ಶಿಕ್ಷೆಯನ್ನು ವಾಸ್ತವದಲ್ಲಿ ಇಂತಹ ಪರಿಸ್ಥಿತಿಯಿರುವ ಸಮಾಜಕ್ಕೆ ಅಲ್ಲಾಹನು ನಿಶ್ಚಯಿಸಿಯೇ ಇಲ್ಲ.

ಅಕ್ರಮಿ ಸಮಾಜ
ಕದ್ದವನ ಕೈ ಕಡಿಯುವ ಶಿಕ್ಷೆಯನ್ನು ಇದೇ ರೀತಿ ಪರಿಗಣಿಸಬೇಕು. ಅದನ್ನು ಇಸ್ಲಾಮಿನ ಆರ್ಥಿಕ ತತ್ವಗಳು ಮತ್ತು ಅದರ ಕಾನೂನುಗಳನ್ನು ಒಳಗೊಂಡ ಪದ್ಧತಿಯು ಪೂರ್ಣವಾಗಿ ಜಾರಿಯಲ್ಲಿರುವ ಸಮಾಜಕ್ಕಾಗಿಯೇ ನಿರ್ಧರಿಸಲಾಗಿದೆ. ಕೈ ಕಡಿಯುವ ಶಿಕ್ಷೆ ಮತ್ತು ಇಸ್ಲಾಮಿನ ಆರ್ಥಿಕ ವ್ಯವಸ್ಥೆಗೆ ಅಭೇದ್ಯವಾದ ಸಂಬಂಧವಿದೆ. ಈ ವ್ಯವಸ್ಥೆ ಜಾರಿಯಲ್ಲಿರುವ ಕಡೆ ಕಳ್ಳತನಕ್ಕೆ ಕೈ ಕಡಿಯುವ ಶಿಕ್ಷೆಯೇ ನ್ಯಾಯಪೂರ್ಣವೂ ಸಹಜವೂ ಆಗಿದೆ. ಈ ವ್ಯವಸ್ಥೆ ಜಾರಿಯಲ್ಲಿಲ್ಲದ ಕಡೆಗಳಲ್ಲಿ ಕಳ್ಳತನಕ್ಕೆ ಕೈ ಕಡಿಯುವ ಶಿಕ್ಷೆ ವಿಧಿಸುವುದು ದ್ವಿಗುಣ ಅನ್ಯಾಯವಾಗಿದೆ. ಬಡ್ಡಿ ಧರ್ಮಸಮ್ಮತವಾಗಿರುವ, ಝಕಾತ್ ವ್ಯವಸ್ಥೆ ಜಾರಿಯಲ್ಲಿಲ್ಲದ, ನ್ಯಾಯವು ಹಣಕ್ಕಾಗಿ ಮಾರಲ್ಪಡುವ, ಕರಭಾರದಿಂದ ಪ್ರಜೆಗಳು ತತ್ತರಿಸುವ, ಜೀವನಾವಶ್ಯಕ ವಸ್ತುಗಳ ಬೆಲೆಯು ಅತ್ಯಂತ ದುಬಾರಿಯಾಗಿರುವ ಹಾಗೂ ಎಲ್ಲ ತೆರಿಗೆಗಳೂ ಕೆಲವು ವಿಶಿಷ್ಟ ವರ್ಗಗಳ ಭೋಗ ವಿಲಾಸದ ಜೀವನಕ್ಕಾಗಿ ವ್ಯಯವಾಗುತ್ತಿರುವ ಅಕ್ರಮಿ ಸಮಾಜಕ್ಕಾಗಿ ಈ ಶಿಕ್ಷೆಯನ್ನು ನಿಗದಿಪಡಿಸಲಾಗಿಲ್ಲ. ಇಂತಹ ಕಡೆಗಳಲ್ಲಿ ಕಳ್ಳತನಕ್ಕೆ ಕೈ ಕಡಿಯುವುದಂತಿರಲಿ ಜೈಲು ಶಿಕ್ಷೆ ಕೂಡಾ ಕೆಲವೊಮ್ಮೆ ಅನ್ಯಾಯವಾಗುತ್ತದೆ.

ಅನ್ಯಾಯದ ದಂಡ ಸಂಹಿತೆ?
ಸಾಮಾನ್ಯವಾಗಿ ಇಸ್ಲಾವಿೂ ಶಿಕ್ಷಾ ಪದ್ಧತಿಯನ್ನು ತಿಳಿಯುವಲ್ಲಿ ಜನರಿಗೆ ಒಂದು ಪೇಚು ಉಂಟಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಅವರ ಮುಂದಿರುವುದು ಇಂದು ನಾಗರಿಕ ರಾಷ್ಟ್ರಗಳೆಂದು ಪರಿಗಣಿಸಲ್ಪಡುವಂತಹ ಪಾಶ್ಚಾತ್ಯ ದೇಶಗಳಲ್ಲಿ ಪ್ರಚಲಿತವಿರುವ ತಪ್ಪು ಸಾಮಾಜಿಕ ವ್ಯವಸ್ಥೆ. ಅದನ್ನು ಮುಂದಿಟ್ಟುಕೊಂಡು ಅವರು ಕಳ್ಳತನ, ವ್ಯಭಿಚಾರ, ವ್ಯಭಿಚಾರದ ಸುಳ್ಳಾರೋಪ, ಮದ್ಯಪಾನ ಇತ್ಯಾದಿ ಸರ್ವಸಾಮಾನ್ಯ ಅಪರಾಧಗಳಿಗೆ ಕೈ ಕಡಿಯುವಿಕೆ, ಕಲ್ಲು ಹೊಡೆದು ಕೊಲ್ಲುವುದು, ಛಡಿಯೇಟು ಬಾರಿಸುವುದು ಇತ್ಯಾದಿ ಶಿಕ್ಷೆ ವಿಧಿಸಿದರೆ ಹೇಗೆ ಎಂಬುದನ್ನು ತುಲನೆ ಮಾಡಿ ನೋಡುತ್ತಾರೆ. ಇಂತಹ ತುಲನಾತ್ಮಕ ಅಧ್ಯಯನದಿಂದ ಇಸ್ಲಾಮಿನ ಶಿಕ್ಷಾ ಪದ್ಧತಿಯು ಅತ್ಯಂತ ಕಠಿಣ ಮತ್ತು ಭಯಾನಕವಾಗಿ ಕಾಣುವುದು ಸಹಜ. ಅಂತಹ ಸಮಾಜದಲ್ಲಿ ಕಳ್ಳತನ ಸಾಮಾನ್ಯ ವಿಷಯ. ವ್ಯಭಿಚಾರದಲ್ಲಿ ಯುವಕ ಯುವತಿಯರು ಮಾತ್ರವಲ್ಲ ಮಕ್ಕಳೂ ಮುದುಕರೂ ನಿರತರಾಗಿರುವುದು ಸಹಜ. ದಿನನಿತ್ಯ ಪ್ರಣಯ ಪ್ರಕರಣಗಳಲ್ಲಿ ನಿರತರಾಗುವ ಸ್ತ್ರೀ- ಪುರುಷರ, ಅನೈತಿಕ ಸಂಬಂಧದ ಜೋಡಿಗಳ ಸತ್ಯ, ಅರೆ ಸತ್ಯ ಮತ್ತು ಸುಳ್ಳು ವಾರ್ತೆಗಳೂ ಆ ಸಮಾಜದ ಸರ್ವಸಾಮಾನ್ಯ ಲಕ್ಷಣ. ಕೆಟ್ಟ ಸಂಗದಿಂದ ಅಂತಹ ಸಮಾಜದಲ್ಲಿ ಬಾಲಕ ಬಾಲಕಿಯರೂ ಕೆಟ್ಟ ಚಾಳಿಗೆ ಇಳಿಯುವುದು ಅಸಹಜವಲ್ಲ. ಹಾಗಿರುವಾಗ ಇಸ್ಲಾಮಿನ ದಂಡಸಂಹಿತೆಯನ್ನು ಜಾರಿಗೊಳಿಸಿದರೆ ಯಾರೂ ಶಿಕ್ಷೆಯಿಂದ ಪಾರಾಗಲಾರರು. ದಿನನಿತ್ಯ ಸಹಸ್ರಾರು ಕರಚ್ಛೇದನ ಮತ್ತು ನೂರಾರು ಶಿರಚ್ಛೇದನಗಳು ನಡೆಯಬಹುದು ಎಂಬ ಕಲ್ಪನೆಯಿಂದಲೇ ಅವರು ಭಯವಿಹ್ವಲರಾಗುತ್ತಾರೆ.

ಅವರ ಈ ಭೀತಿ ಸಹಜವೇ ಆಗಿದೆ. ಈ ಅಸಂಬದ್ಧ ಸಾಮಾಜಿಕ ವ್ಯವಸ್ಥೆಯಲ್ಲಿ ಕೇವಲ ಇಸ್ಲಾಮಿನ ದಂಡಸಂಹಿತೆಯನ್ನು ಜಾರಿಗೊಳಿಸುವುದು ಮಹಾ ಅನ್ಯಾಯವೇ ಸರಿ. ಇಸ್ಲಾಮಿನ ಸಂಪೂರ್ಣ ಜೀವನ ವ್ಯವಸ್ಥೆಯನ್ನು ಒಟ್ಟಾಗಿ ಜಾರಿಗೊಳಿಸಿದಾಗ ಮಾತ್ರ ಈ ಅನ್ಯಾಯದ ವ್ಯವಸ್ಥೆಯು ಕೊನೆಗೊಂಡೀತು. ಆಗ ಅತ್ಯಂತ ಅಸಾಮಾನ್ಯ ಅಪರಾಧಿ ಮನೋವೃತ್ತಿಯ ಜನರು ಮಾತ್ರ ಇಂತಹ ನೀಚ ಕೃತ್ಯಗಳನ್ನು ಎಸಗುವರು. ಅಂತಹ ಮನೋವೃತ್ತಿಯ ಜನರನ್ನು ಸರಿದಾರಿಗೆ ತರಲು ಇಸ್ಲಾಮ್ ನಿರ್ಣಯಿಸಿದ ಉಗ್ರ ಶಿಕ್ಷಾ ಕ್ರಮವೊಂದೇ ದಾರಿ.

ಇಸ್ಲಾಮ್ ಎಲ್ಲ ರಂಗಗಳಲ್ಲಿಯೂ ವೈಚಾರಿಕ ಮತ್ತು ಸಂತುಲಿತ ಮಾರ್ಗವನ್ನೇ ಅವಲಂಬಿಸುತ್ತದೆ. ಅದರಲ್ಲಿ ಅಪರಾಧದ ಎಲ್ಲ ಮೂಲಗಳನ್ನೂ ಮಾಧ್ಯಮಗಳನ್ನೂ ನಾಶಪಡಿಸಲಾಗುತ್ತದೆ. ವ್ಯಕ್ತಿಯು ಅಪರಾಧದಲ್ಲಿ ಸಿಲುಕುವ ಸನ್ನಿವೇಶವನ್ನೇ ಕೊನೆಗಾಣಿಸಲಾಗುತ್ತದೆ. ತಮ್ಮ ಪ್ರಕೃತಿ ಸಹಜ ಬೇಡಿಕೆಗಳ ಈಡೇರಿಕೆಗಾಗಿ ಯಾರೂ ವಾಮಮಾರ್ಗವನ್ನು ಅನುಸರಿಸಬೇಕಾದ ಪ್ರಮೇಯವನ್ನೇ ಉಳಿಸಲಾಗುವುದಿಲ್ಲ. ಇಂತಹ ವಾತಾವರಣ ನಿರ್ಮಾಣವಾದ ಬಳಿಕವೇ ಎಲ್ಲ ಮನುಷ್ಯರಿಗೂ ಎಚ್ಚರಿಕೆಯ ಪಾಠವಾಗಬಲ್ಲಂತಹ ಉಗ್ರ ಶಿಕ್ಷೆಯನ್ನು ನೀಡಲಾಗುತ್ತದೆ.

ಅಪರಾಧಿಯ ಬಗ್ಗೆ ಕನಿಕರ
ಒಂದೆಡೆ ಇಸ್ಲಾಮ್ ಜನರನ್ನು ಆದಷ್ಟು ಈ ಶಿಕ್ಷೆಗಳಿಂದ ರಕ್ಷಿಸಲು ಪ್ರಯತ್ನಿಸುತ್ತದೆ. ನ್ಯಾಯಾಧೀಶನು ಕ್ಷಮಿಸುವಲ್ಲಿ ತಪ್ಪು ಮಾಡುವುದು ಶಿಕ್ಷೆ ಕೊಡುವುದರಲ್ಲಿ ತಪ್ಪು ಮಾಡುವುದಕ್ಕಿಂತ ಉತ್ತಮ ಎಂದು ಪ್ರವಾದಿ(ಸ) ಹೇಳಿರುವರು. ಸಾಧ್ಯವಿದ್ದಷ್ಟು ಜನರನ್ನು ಶಿಕ್ಷೆಯಿಂದ ರಕ್ಷಿಸಲು ಪ್ರಯತ್ನಿಸಿ ಎಂದು ಪ್ರವಾದಿ(ಸ) ನ್ಯಾಯಾಧೀಶರುಗಳಿಗೆ ಆದೇಶಿಸಿರುವರು.

ಇನ್ನೊಂದೆಡೆ ಅಪರಾಧವು ದಿನದ ಬೆಳಕಿನಂತೆ ಸ್ಪಷ್ಟವಾಗಿ ಸಾಬೀತಾದರೆ ಅಪರಾಧಿಯ ಬಗ್ಗೆ ಕನಿಕರ ತೋರುವುದರಿಂದಲೂ ಇಸ್ಲಾಮ್ ತಡೆಯುತ್ತದೆ.
“ನೀವು ಅಲ್ಲಾಹನ ಹಾಗೂ ಅಂತಿಮ ದಿನದ ಮೇಲೆ ವಿಶ್ವಾಸವಿರಿಸುತ್ತೀರಾದರೆ ಅಲ್ಲಾಹನ ಧರ್ಮದ ವಿಷಯದಲ್ಲಿ (ಆತನ ದಂಡ ಸಂಹಿತೆಯನ್ನು ಜಾರಿಗೊಳಿಸುವಲ್ಲಿ) ನಿಮಗೆ ಅವರ ಮೇಲೆ ಕನಿಕರವಿರಬಾರದು.” (ಪವಿತ್ರ ಕುರ್‍ಆನ್, 24:2)

ಬನೀ ಮಕ್‍ಝೂಮ್ ಎಂಬ ಪ್ರಸಿದ್ಧ ಕುರೈಶ್ ಗೋತ್ರದ ಫಾತಿಮಾ ಎಂಬ ಮಹಿಳೆಗೆ ಪ್ರವಾದಿವರ್ಯರು(ಸ) ಕೈ ಕಡಿಯುವ ಶಿಕ್ಷೆ ವಿಧಿಸಿದ ಘಟನೆ ಇಲ್ಲಿ ಸ್ಮರಣಾರ್ಹ. ಆಕೆಯನ್ನು ಕ್ಷಮಿಸಿ ಬಿಡಬೇಕೆಂಬ ಶಿಫಾರಸನ್ನು ತಿರಸ್ಕರಿಸುತ್ತಾ ಅವರು ಈ ರೀತಿ ಹೇಳಿದರು: “ಸಾಕ್ಷಾತ್ ಮುಹಮ್ಮದ್‍ರ(ಸ) ಪುತ್ರಿ ಫಾತಿಮಾ ಈ ಅಪರಾಧವೆಸಗಿದ್ದರೆ ಅವಳಿಗೂ ತಪ್ಪದೆ ಇದೇ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು.”

ನೈಜ ಸ್ಫೂರ್ತಿ
ಈ ಎರಡು ವಿಷಯಗಳನ್ನು ತಿಳಿದುಕೊಂಡ ಬಳಿಕ ಇಸ್ಲಾಮಿನ ಶಿಕ್ಷಾ ಪದ್ಧತಿಯ ನೈಜ ಸ್ಫೂರ್ತಿಯನ್ನೂ ತಿಳಿದುಕೊಳ್ಳಬೇಕು. ಅದುವೇ ಎಲ್ಲ ಇಸ್ಲಾವಿೂ ಕಾನೂನುಗಳ ಜೀವಾಳವಾಗಿದೆ.

ಇಸ್ಲಾವಿೂ ಶಿಕ್ಷೆಗಳ ಮೂಲ ಕಲ್ಪನೆಯೇ ಸಹಾನುಭೂತಿಯಿಂದ ಕೂಡಿದೆ. ಅದು ಯಾರಿಗೂ ಕೋಪದಿಂದ ಶಿಕ್ಷೆ ಕೊಡುವುದಿಲ್ಲ. ವೈರತ್ವದ ಭಾವನೆ ಅದರ ಯಾವುದೇ ಕಾನೂನಿನಲ್ಲಿಲ್ಲ. ಇಲ್ಲಿ ಶಿಕ್ಷೆಯಿರುವುದು ವ್ಯಕ್ತಿಯ ಸಂಸ್ಕರಣೆ ಮತ್ತು ಪರಿಶುದ್ಧತೆ ಹಾಗೂ ಅಪರಾಧವೆಸಗುವುದರಿಂದ ಅವನ ಆತ್ಮಕ್ಕೆ ಆಗಿರುವ ಕಳಂಕವನ್ನು ತೊಳೆದು ಅವನು ಪರಲೋಕದ ಶಿಕ್ಷೆಯಿಂದ ಮುಕ್ತವಾಗುವಂತೆ ಮಾಡುವುದಕ್ಕಾಗಿದೆ. ತನ್ನ ನೈಜ ಅಧಿಪತಿ ಅಲ್ಲಾಹನಾಗಿರುವನು ಮತ್ತು ಅವನಿಂದ ಯಾವ ಅಪರಾಧವನ್ನೂ ಅಡಗಿಸಿಡಲಾಗದು, ನಿಜವಾದ ನ್ಯಾಯಾಲಯವು ಪರಲೋಕದ ನ್ಯಾಯಾಲಯವಾಗಿದೆ. ಅಲ್ಲಿ ತಾನು ಹಾಜರಾಗಲೇಬೇಕು. ಇಲ್ಲಿ ತಾನು ಸ್ವಯಂ ಸ್ಫೂರ್ತಿಯಿಂದ ತನ್ನ ಅಪರಾಧದ ಶಿಕ್ಷೆ ಪಡೆಯಲು ಮುಂದಾದರೆ ಆ ಶಿಕ್ಷೆಯು ತನ್ನನ್ನು ಶುದ್ಧ ಮಾಡೀತು ಮತ್ತು ನಿರ್ಣಾಯಕ ದಿನದ ನೈಜ ನ್ಯಾಯಾಲಯದಲ್ಲಿ ತಾನು ಯಾವ ಅಪರಾಧವನ್ನೂ ಮಾಡದವನಷ್ಟು ಪವಿತ್ರನಾಗಿ ಹಾಜರಾಗಬಲ್ಲೆನೆಂಬ ದೃಢ ವಿಶ್ವಾಸವನ್ನು ಅದು ಪ್ರತಿಯೊಬ್ಬ ಪೌರನಲ್ಲೂ ಮೂಡಿಸಲು ಪ್ರಯತ್ನಿಸುತ್ತದೆ.

ವ್ಯಕ್ತಿಗಳಲ್ಲಿ ಈ ತರದ ದೃಢ ವಿಶ್ವಾಸ ಮೂಡಿಬಂದಾಗ ಎಂತಹ ಸಂತುಲಿತ, ಸುಭಿಕ್ಷೆ ಮತ್ತು ಅಪರಾಧ ಮುಕ್ತ ಸಮಾಜವು ಅಸ್ತಿತ್ವಕ್ಕೆ ಬರುತ್ತದೆಂಬುದಕ್ಕೆ ಇತಿಹಾಸ ಸಾಕ್ಷ್ಯ ವಹಿಸುತ್ತದೆ. ಇಸ್ಲಾವಿೂ ಆಡಳಿತದ ಪ್ರಥಮ ನಾಲ್ಕು ಶತಮಾನಗಳಲ್ಲಿ ಕಳ್ಳತನಕ್ಕಾಗಿ ಕೈ ಕಡಿಯಲ್ಪಟ್ಟವರ ಸಂಖ್ಯೆ ಕೇವಲ ಆರು ಆಗಿತ್ತು ಎಂಬುದು ಒಂದು ಐತಿಹಾಸಿಕ ಸತ್ಯ.

ದ್ವಿತೀಯ ಖಲೀಫ ಹ. ಉಮರ್‍ ರವರ(ರ) ಕಾಲದಲ್ಲಿ ಒಮ್ಮೆ ಅರೇಬಿಯಾದಲ್ಲಿ ತೀವ್ರ ಬರಗಾಲ ಬಂದಿತ್ತು. ಕದ್ದವನ ಕೈ ಕಡಿಯುವ ಶಿಕ್ಷೆಯನ್ನು ಆಗ ಹ. ಉಮರ್(ರ) ಜಾರಿಗೊಳಿಸುತ್ತಿರಲಿಲ್ಲ. ಕಳ್ಳತನಕ್ಕೆ ಹಸಿವು ಪ್ರೇರಕವಾಗಿರಬಹುದೆಂಬ ಸಂದೇಹವೇ ಅದಕ್ಕೆ ಕಾರಣವಾಗಿತ್ತು.

ಹ. ಉಮರ್ ಬಿನ್ ಅಬ್ದುಲ್ ಅಝೀಝ್‍ರವರ(ರ) ಆಡಳಿತ ಕಾಲದಲ್ಲಿ ಇಸ್ಲಾಮಿನ ನ್ಯಾಯಬದ್ಧ ಆರ್ಥಿಕ ವ್ಯವಸ್ಥೆಯಿಂದಾಗಿ ಬಡತನವು ಸಮಾಜದಿಂದ ಸಂಪೂರ್ಣ ನಿರ್ಮೂಲನವಾಗಿತ್ತು. ನಿರುದ್ಯೋಗವೆಂಬ ಸಮಸ್ಯೆಯೇ ಅಲ್ಲಿರಲಿಲ್ಲ. ಯಾವುದೇ ಉದ್ಯೋಗ ಮಾಡುವ ಸಾಮರ್ಥ್ಯವಿಲ್ಲದವರಿಗೆ ಸರಕಾರಿ ಬೊಕ್ಕಸದಿಂದ ಅವರ ಜೀವನಾವಶ್ಯಕತೆಗೆ ಪರ್ಯಾಪ್ತವಾದ ನೆರವು ನೀಡಲಾಗುತ್ತಿತ್ತು.

ಆ ಸಮಗ್ರ ಜೀವನ ವ್ಯವಸ್ಥೆಯ ಕೆಲವು ಕಾನೂನುಗಳು ಮಾತ್ರ ಜಾರಿಯಲ್ಲಿರುವ ಸೌದಿ ಅರೇಬಿಯಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಜಗತ್ತಿನಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿವೆಯೆಂಬುದು ನಮ್ಮ ಕಣ್ಣ ಮುಂದಿರುವ ಉದಾಹರಣೆಯಾಗಿದೆ. ಇಸ್ಲಾಮ್ ತನ್ನ ಪರಿಪೂರ್ಣ ಮತ್ತು ಮೂಲ ರೂಪದಲ್ಲಿ ಸಂಪೂರ್ಣ ಜೀವನ ವ್ಯವಸ್ಥೆಯಾಗಿ ಮಾರ್ಪಟ್ಟಾಗ ಅದೆಷ್ಟು ಸುಂದರ ಸಮಾಜ ಅಸ್ತಿತ್ವಕ್ಕೆ ಬಂದೀತು ಎಂಬುದನ್ನು ಇದರಿಂದ ಪ್ರತಿಯೊಬ್ಬ ವಿಚಾರವಂತನೂ ಗ್ರಹಿಸಬಹುದು.

‘ತಪ್ಪು ಕಲ್ಪನೆಗಳು’ ಎಂಬ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …