Home / ಲೇಖನಗಳು / ನ್ಯಾಯ ಪರಿಪಾಲನೆ

ನ್ಯಾಯ ಪರಿಪಾಲನೆ

ಸಂಗ್ರಹ: ಎನ್.ಎಂ. ಪಡೀಲ್

ಅನ್ ಅಬ್ದುಲ್ಲಾಹಿಬ್ನು ಅಮ್ರ್ ಬಿನ್ ಆಸ್ ರದಿಯಲ್ಲಾಹು ಅನ್ಹುಮ ಕಾಲ; ಕಾಲ ರಸೂಲುಲ್ಲಾಹಿ(ಸ) ಇನ್ನಲ್ ಮುಕ್ಸಿತೀನ ಇಂದಲ್ಲಾಹಿ ಅಲಾ ಮನಾಬಿರ ಮಿನ್ನೂರ್ ಅಲ್ಲಝೀನ ಯಅದಿಲೂನ ಫೀ  ಹುಕ್ಮಿಹಿಂ ವಅಹ್‍ಲೀಹಿಮ್ ವಮಾ ವಲ್ಲೂ (ರವಾಹು ಮುಸ್ಲಿಮ್)

ನ್ಯಾಯಪಾಲಕರು ಅಲ್ಲಾಹನ ಪ್ರಕಾಶಧಾರೆಯಲ್ಲಿರುತ್ತಾರೆ. ಅವರು ಅಧಿಕಾರ ದೊರೆತಾಗ ತಮ್ಮ ಅವಧಿಯಲ್ಲಿ ತಮ್ಮ ಪ್ರಜೆಗಳನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಾರೆ.

ಫೆಬ್ರವರಿ 20ನ್ನು ಸಾಮಾಜಿಕ ನ್ಯಾಯ ದಿನವೆಂದು ಆಚರಿಸಲಾಯಿತು. 2007ರಲ್ಲಿ ವಿಶ್ವಸಂಸ್ಥೆಯು ಪ್ರತಿ ವರ್ಷ ಈ ದಿನವನ್ನು ಆಚರಿಸಲು ಕರೆ ನೀಡಿತು. ಸಮಾಜದಲ್ಲಿರುವ ಉಚ್ಛ ನೀಚತೆಯನ್ನು  ಹೋಗಲಾಡಿಸಿ, ಸಮಾನತೆಯನ್ನು ಮೂಡಿಸುವುದು ಇದರ ಉದ್ದೇಶ. ಇಂದು ಜಗತ್ತಿನಲ್ಲಿ ಶ್ರೀಮಂತ-ಬಡವ ನಡುವೆ ಅಂತರ ಹೆಚ್ಚುತ್ತಲೇ ಇದೆ. ಧರ್ಮ, ಜಾತಿ, ಮತ, ಮೇಲು-ಕೀಳು ಎಂಬ ಭೇದ- ಭಾವದಲ್ಲೇ ಬದುಕುತ್ತಿದ್ದೇವೆ. ಸಮಾನತೆಯು ಮರೀಚಿಕೆಯಾಗಿರುವುದರಿಂದ ಬಟ್ಟೆ, ಆಹಾರ, ಶಿಕ್ಷಣವಿಲ್ಲದೆ ಒಂದು ದೊಡ್ಡ ಜನ ವಿಭಾಗವೇ ಇದೆ. ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಿ ಸರ್ವರಿಗೂ ಸಮಾನತೆ ನೀಡುವ ಉದ್ದೇಶವನ್ನು ಈ ದಿನವು ಹೊಂದಿದೆ.

ಇಸ್ಲಾಮ್ ಧರ್ಮವೂ ಇದನ್ನೇ ಬಯಸುತ್ತದೆ. ಸಮಾಜದಲ್ಲಿ ನ್ಯಾಯ ಪಾಲಿಸಬೇಕು ಎಂಬುದು ಅದರ ಇಚ್ಛೆಯಾಗಿದೆ. ಅಲ್ಲಾಹನ ಅಸ್ಮಾಉಲ್ ಹುಸ್ನಾ (ಗುಣನಾಮ)ಗಳ 99 ನಾಮಗಳಲ್ಲಿ ಅಲ್ ಆದಿಲ್ ಅಂದರೆ ಅದ್ಲ್ ಎಂಬ ಹೆಸರೂ ಇದೆ. ಅಂದರೆ ಅಲ್ಲಾಹನು ನ್ಯಾಯವಂತನಾಗಿದ್ದಾನೆ. ಅಲ್ಲಾಹನು ಈ ಭೂಮಿಗೆ ಪ್ರವಾದಿಗಳನ್ನು ಮತ್ತು ಗ್ರಂಥಗಳನ್ನು ಕಳುಹಿಸಿರುವ ಉದ್ದೇಶ ನ್ಯಾಯವನ್ನು ಪಾಲಿಸಲು ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ.
“ನಾವು ನಮ್ಮ ಸಂದೇಶವಾಹಕರನ್ನು ಸುವ್ಯಕ್ತ ನಿದರ್ಶನಗಳು ಮತ್ತು ಸನ್ಮಾರ್ಗದರ್ಶನದೊಂದಿಗೆ ಕಳುಹಿಸಿದೆವು. ಜನರು ನ್ಯಾಯದಲ್ಲಿ ಸ್ಥಿರವಾಗಿ ನಿಲ್ಲಲೆಂದು ಅವರ ಜೊತೆ ಗ್ರಂಥ ಮತ್ತು ತಕ್ಕಡಿಯನ್ನು ಅವತೀರ್ಣಗೊಳಿಸಿದೆವು.” (ಸೂರಃ ಹದೀದ್: 25)

ನ್ಯಾಯವನ್ನು ಪಾಲಿಸಿರಿ. ಅಲ್ಲಾಹನು ನ್ಯಾಯ ಪರಿಪಾಲಕರನ್ನು ಪ್ರೀತಿಸುತ್ತಾನೆ. (ಹುಜರಾತ್: 9)

ಅಲ್ಲಾಹ್, ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಬಗ್ಗೆ ಸೌಜನ್ಯದ ಆಜ್ಞೆ ನೀಡುತ್ತಾನೆ. (ಅನ್ನಹ್ಲ್- 90)

ಮುಸ್ಲಿಮರೇ, ಅಮಾನತ್ತುಗಳನ್ನು ಅವುಗಳ ಹಕ್ಕುದಾರರಿಗೆ ಒಪ್ಪಿಸಿಕೊಡಿರೆಂದೂ, ಜನರೊಳಗೆ ತೀರ್ಪು ನೀಡುವಾಗ ನ್ಯಾಯದೊಂದಿಗೆ ತೀರ್ಪು ನೀಡಿರೆಂದೂ ಅಲ್ಲಾಹನು ನಿಮಗೆ ಆಜ್ಞೆ ವಿಧಿಸುತ್ತಾನೆ. (ಅನ್ನಿಸಾ- 58)

ಅನ್ಯಾಯ, ಅಕ್ರಮ, ಹಕ್ಕುಗಳ ನಿರಾಕರಣೆಯು ಮನುಷ್ಯರ ಮನದಲ್ಲಿ ಪ್ರತೀಕಾರ, ಹಿಂಸಾ ಮನೋಭಾವವನ್ನು ಬೆಳೆಸುತ್ತದೆ. ಇಂದು ವಿಶ್ವದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗೂ ನ್ಯಾಯ ನಿರಾಕರಣೆಯೇ ಕಾರಣವಾಗಿದೆ. ಭಯೋತ್ಪಾದನೆಯ ಹೆಸರಿನಲ್ಲಿ ನೂರಾರು ಮಂದಿ ಜೈಲಿನಲ್ಲಿ ಕೊಳೆಯುತ್ತಿರುವುದೂ ಇದೇ ಕಾರಣದಿಂದಾಗಿದೆ.

ಶಾಂತಿ-ಸಮಾಧಾನ ನೆಲೆನಿಲ್ಲಬೇಕಾದರೆ ನ್ಯಾಯ ಪಾಲನೆಯು ಅನಿವಾರ್ಯ. ನ್ಯಾಯ ಮರೀಚಿಕೆಯಾದರೆ ಅಸಮಾಧಾನ, ಅಕ್ರಮ, ಅರಾಜಕತೆ ವರ್ಧಿಸುತ್ತದೆ.
ಮಹಾತ್ಮಾ ಗಾಂಧೀಜಿಯವರು ದೇಶದಲ್ಲಿ ಖಲೀಫಾ ಉಮರ್(ರ)ರ ಆಡಳಿತ ಜಾರಿಗೆ ತರಬೇಕೆಂದು ಬಯಸಿದ್ದರು. ಏಕೆಂದರೆ ಇಸ್ಲಾಮ್‍ನ ನ್ಯಾಯ ವ್ಯವಸ್ಥೆಯು ಬಹಳ ಉತ್ತಮವಾಗಿ ಜಾರಿಯಲ್ಲಿತ್ತು.  ಇಸ್ಲಾಮ್‍ನ್ನು ಅರಿತುಕೊಂಡವರು ಅದರ ಕುರಿತು ಆಕರ್ಷಿತರಾಗುತ್ತಾರೆ.

ನ್ಯಾಯ ಸ್ಥಾಪನೆಯ ನಿಟ್ಟಿನಲ್ಲಿ ಹಲವಾರು ಘಟನೆಗಳು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ.

ಇಸ್ಲಾಮಿನ ಖಲೀಫರಾಗಿದ್ದ ಹಝ್ರತ್ ಅಲಿ(ರ) ಯುದ್ಧದ ಅಂಗಿ ಕಳವಾಯಿತು. ಅಲಿ(ರ)ರು ನ್ಯಾಯಾಧೀಶರಲ್ಲಿ ದೂರಿತ್ತರು. ನ್ಯಾಯಾಧೀಶರು ಅಲೀ(ರ)ರೊಡನೆ ಸಾಕ್ಷಿಯಾಗಿ ಯಾರಿದ್ದಾರೆ ಎಂದು  ಕೇಳಿದಾಗ ಅಲಿ(ರ)ರು ತಮ್ಮ ಮಗ ಮತ್ತು ಸೇವಕನನ್ನು ಹೇಳುತ್ತಾರೆ. ಆದರೆ ಅವರು ತಮ್ಮದೇ ವ್ಯಕ್ತಿಗಳು, ಆದ್ದರಿಂದ ಅವರ ಸಾಕ್ಷ್ಯ ಸ್ವೀಕಾರಾರ್ಹವಲ್ಲ ಎಂದು ಹೇಳಿ ನಿರಾಕರಿಸಿದರು. ಆರೋಪಿಯಾದ ಯಹೂದಿಗೆ ಬಹಳ ಆಶ್ಚರ್ಯವಾಯಿತು. ಖಲೀಫಾರ ವಿರುದ್ಧವೇ ನ್ಯಾಯಾಧೀಶರ ತೀರ್ಪು. ಆತ ತನ್ನ ತಪ್ಪನ್ನು ಒಪ್ಪಿಕೊಂಡು ಬಳಿಕ ಇಸ್ಲಾಮ್ ಸ್ವೀಕರಿಸಿದ ಎಂಬುದು ಚರಿತ್ರೆ.

ಪ್ರವಾದಿ(ಸ)ರ ಕಾಲದಲ್ಲಿ  ಮಕ್ಸೂಮ್ ಗೋತ್ರದ ಮಹಿಳೆ ಕಳ್ಳತನ ಮಾಡಿರುವ ಬಗ್ಗೆ ದೂರು ಬಂತು. ಉನ್ನತ ಮನೆತನದ ಆ ಮಹಿಳೆಯ ಪರವಾಗಿ ವಾದಿಸಲು ಉಸಾಮ ಬಿನ್ ಝೈದ್(ರ)ರನ್ನು ನೇಮಿಸಲಾಯಿತು. ಕೋಪಗೊಂಡ ಪ್ರವಾದಿವರ್ಯರು(ಸ) ಅಲ್ಲಾಹನ ಶಿಕ್ಷಾ ವಿಧಿಯ ಕುರಿತು ನನ್ನೊಡನೆ ಚರ್ಚೆ ನಡೆಸುತ್ತೀರಾ ಎಂದು ಕೇಳಿದರು. ಬಳಿಕ ಜನರೊಡನೆ ಹೇಳಿದರು, ನಮ್ಮ ಹಿಂದಿನ ಸಮುದಾಯ ನಾಶ  ಹೊಂದಲು ಇದೇ ಕಾರಣ. ಅವರು ಸಮಾಜದ ಉನ್ನತ ಸ್ಥಾನಮಾನದಲ್ಲಿರುವ ವ್ಯಕ್ತಿಗಳು ತಪ್ಪು ಮಾಡಿದರೆ ಅವರನ್ನು ಹಾಗೇ ಬಿಟ್ಟು ಬಿಡುತ್ತಿದ್ದರು. ಆದರೆ ಬಡ ವ್ಯಕ್ತಿಯಾಗಿದ್ದರೆ ಅವನನ್ನು ಶಿಕ್ಷಿಸಲಾಗುತ್ತಿತ್ತು. ಅಲ್ಲಾಹನಾಣೆ ಸತ್ಯ, ನನ್ನ ಮಗಳು ಫಾತಿಮಾ ಕದ್ದರೂ ನಾನು ಅವಳ ಕೈಯನ್ನು ಕಡಿಯದಿರಲಾರೆ ಎಂದು ಘೋಷಿಸಿದರು.

ಇಂಥ ನ್ಯಾಯ ಪರಿಪಾಲನೆ ಆದರೆ ಮಾತ್ರ ವಿಶ್ವದಲ್ಲಿ ಕಂಡು ಬರುವ ಗಲಭೆ, ಗೊಂದಲಗಳು ಕೊನೆಗೊಳ್ಳಲು ಸಾಧ್ಯ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …