✍️ ಏ.ಕೆ.ಕುಕ್ಕಿಲ
ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ, ಮಕ್ಕಾದಲ್ಲಿ ಬುಡಕಟ್ಟು ಆಧಾರಿತವಾಗಿ ವಿಂಗಡಿಸುತ್ತಿದ್ದರು.
ಪ್ರವಾದಿ ಮುಹಮ್ಮದ್ ಜನಿಸಿದ್ದು ಕುರೈಶ್ ಬುಡಕಟ್ಟಿನಲ್ಲಿ. ಆ ಕಾಲದಲ್ಲಿ ಅದು ಪ್ರಭಾವಿ ಮತ್ತು ಸರ್ವಮಾನ್ಯ ಬುಡಕಟ್ಟಾಗಿತ್ತು. ಆದರೆ ಪ್ರವಾದಿ ಮುಹಮ್ಮದರು ಈ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ನಿರ್ಧರಿಸಿದರು. ಮನುಷ್ಯರೆಲ್ಲ ಆದಮ್ ಮತ್ತು ಹವ್ವಾ ಎಂಬ ಒಂದೇ ತಂದೆ ತಾಯಿಯ ಮಕ್ಕಳು ಎಂದು ಘೋಷಿಸಿದರು. ಈ ಘೋಷಣೆಗೆ ತೀವ್ರ ವಿರೋಧ ವ್ಯಕ್ತವಾಯಿತು.
‘ತಾನು ಮತ್ತು ತನ್ನ ನೀಗ್ರೋ ಗುಲಾಮ ಬಿಲಾಲ್ ಸಮಾನರಾಗುವುದು ಹೇಗೆ..’ ಎಂಬ ಪ್ರಶ್ನೆ ಮಾಲೀಕ ಉಮಯ್ಯನದ್ದು ಮಾತ್ರ ಅಲ್ಲ ಅವನಂಥ ಶ್ರೀಮಂತರು ಮತ್ತು ಉನ್ನತ ಬುಡಕಟ್ಟಿನ ಅಸಂಖ್ಯ ಮಂದಿಯದ್ದಾಗಿತ್ತು. ಪ್ರವಾದಿ ಅಷ್ಟಕ್ಕೇ ನಿಲ್ಲಿಸಲಿಲ್ಲ. ನಮಾಝ್ ನಲ್ಲಿ ಭುಜಕ್ಕೆ ಭುಜ ತಾಗಿಸಿ ನಿಲ್ಲಬೇಕು ಎಂದು ಕರೆಕೊಟ್ಟರು. ಇದು ಮಕ್ಕಾದ ಜನಸಾಮಾನ್ಯರ ಮೇಲೆ ಪ್ರಭಾವ ಬೀರಿತಾದರೂ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಅವರಿಗೆ ಗಿಟ್ಟಿಸಲಿಲ್ಲ.
ಬಳಿಕ ಅವರು ಮದೀನಕ್ಕೆ ವಲಸೆ ಹೋಗಬೇಕಾಯಿತು. ಅಲ್ಲಿ ಅವರು ಈ ಬುಡಕಟ್ಟು ಮೇಲ್ಮೆಯನ್ನು ಒಡೆದು ಹಾಕುವ ಪ್ರಯೋಗಕ್ಕೆ ಕೈ ಹಾಕಿದರು. ವಿವಿಧ ಬುಡಕಟ್ಟುಗಳ ವಿಧವೆಯರನ್ನು ‘ಮದುವೆ’ಯಾದರು. ಅದರಂತೆ ಬನೂ ಕುರೈಝಾ ಬುಡಕಟ್ಟಿನಿಂದ ಸಫಿಯ, ಬನು ಮುಸ್ತಲಿಕ್ ಬುಡಕಟ್ಟಿನಿಂದ ಜುವೇರಿಯ, ಬನೂ ಮಕ್ ಜೂಮ್ ಬುಡಕಟ್ಟಿನಿಂದ ಮೈಮುನ, ಹಿಲಾಲ್ ಬುಡಕಟ್ಟಿನಿಂದ ಜೈನಬಾ, ಕುಜೈಮಾ ಬುಡಕಟ್ಟಿನಿಂದ ಜೈನಬ ಬಿಂತ್ ಜಹಶ್ ರನ್ನು ವಿವಾಹವಾದರು. ನಿಜವಾಗಿ ಇದು ವಿವಾಹದ ಹೆಸರಲ್ಲಿ ಸಾಮಾಜಿಕ ಜಾತಿ ವ್ಯವಸ್ಥೆಗೆ ಕೊಟ್ಟ ಏಟಾಗಿತ್ತು. ಈ ಪತ್ನಿಯರು ಮತ್ತು ಇವರ ಕುಟುಂಬವು ಒಟ್ಟಿಗೆ ಒಂದೇ ಬಟ್ಟಲಲ್ಲಿ ಊಟ ಮಾಡುವಂತಹ ವಾತಾವರಣವನ್ನು ಸೃಷ್ಟಿಸಿದರು. ಇದು ಅಭೂತಪೂರ್ವ ಬದಲಾವಣೆಗೆ ಕಾರಣವಾಯಿತು. ಬುಡಕಟ್ಟುಗಳ ನಡುವೆ ಸಾಮಾನ್ಯವಾಗಿದ್ದ ಘರ್ಷಣೆ, ತಾರತಮ್ಯವನ್ನು ಕೊನೆಗೊಳಿಸಿ ಪರಸ್ಪರ ವೈವಾಹಿಕ ಸಂಬಂಧ ಬೆಳೆಸುವಷ್ಟರ ಮಟ್ಟಿಗೆ ಇದು ಹೊಸ ಬದಲಾವಣೆಯನ್ನು ತಂದಿತು.
ನಿಮಗೆ ಗೊತ್ತಿರಲಿ, ಪ್ರವಾದಿಯ ಮದುವೆಗೆ ದೈಹಿಕ ಬಯಕೆಯೇ ಕಾರಣವಾಗಿರುತ್ತಿದ್ದರೆ ತನ್ನ 25ರ ಹರೆಯದಲ್ಲಿ 40ರ ಹರೆಯದ ಮತ್ತು ಮೂವರು ಮಕ್ಕಳ ತಾಯಿಯಾಗಿದ್ದ ವಿಧವೆ ಖದೀಜರನ್ನು ಮದುವೆಯಾಗುತ್ತಿರಲಿಲ್ಲ. ಅಲ್ಲದೆ ತನಗೆ 53 ವರ್ಷ ಆಗುವವರೆಗೆ ಅವರು ಇನ್ನೊಂದು ಮದುವೆಯೂ ಆಗಿರಲಿಲ್ಲ. ಖದೀಜ ನಿಧನರಾದ ಬಳಿಕ ಅವರು ಆಯಿಷ ಎಂಬ ಕನ್ಯೆಯನ್ನು ಹೊರತುಪಡಿಸಿ ಉಳಿದಂತೆ ವಿಧವೆಯರು ಮತ್ತು ವಿಚ್ಛೇದಿತೆಯರನ್ನೇ ಮದುವೆಯಾಗಿರುವುದು ಅವರ ಉದ್ದೇಶ ಏನು ಅನ್ನುವುದನ್ನು ತಿಳಿಸುತ್ತದೆ. ವಿಧವೆಯರ ವಿವಾಹಕ್ಕೆ ಪ್ರೇರಣೆ ನೀಡುವುದು ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವುದೇ ಅವರ ಮದುವೆಯ ಗುರಿಯಾಗಿತ್ತು.
ಈ ಜಗತ್ತಿಗೆ ಪ್ರವಾದಿ ಕೊಟ್ಟ ಅತಿ ದೊಡ್ಡ ಕೊಡುಗೆಯೇ ಸಮಾನತೆ.
IslamKannada News Portal
