Home / ಲೇಖನಗಳು / ಮುಸ್ಲಿಮೇತರರ ಮಸೀದಿ ಪ್ರವೇಶ

ಮುಸ್ಲಿಮೇತರರ ಮಸೀದಿ ಪ್ರವೇಶ

ಪ್ರಶ್ನೆ: ಜಮಾಅತೆ ಇಸ್ಲಾಮೀಯ ವತಿಯಿಂದ `ಮಸೀದಿ ಸಂದರ್ಶನ’ ಎಂಬ ಹೆಸರಿನಲ್ಲಿ ಮುಸ್ಲಿಮೇತರ ಬಾಂಧವರನ್ನು ಮಸೀದಿಗಳಿಗೆ ಕರೆದು ಕಾರ್ಯಕ್ರಮ ಮಾಡುವ ಪ್ರಕ್ರಿಯೆ ನಡೆಯುತ್ತಾ ಇರುವುದು ನನ್ನ ಗಮನಕ್ಕೆ ಬಂದಿದೆ. ಅಶುದ್ದಾವಸ್ಥೆಯಲ್ಲಿರುವವರನ್ನು ಮಸೀದಿಯೊಳಗೆ ಪ್ರವೇಶಗೊಳಿಸುವುದು ನ್ಯಾಯ ಸಮ್ಮತವೇ?

ಉತ್ತರ: “ಮಸೀದಿಗಳು ಭಯೋತ್ಪಾದನಾ ಕೇಂದ್ರಗಳಾಗಿವೆ. ಅಲ್ಲಿ ಆಯುಧಗಳನ್ನು ಶೇಖರಿಸಿಡಲಾಗುತ್ತದೆ. ಹಿಂದುಗಳ ವಿರುದ್ಧ ಅಲ್ಲಿ ದ್ವೇಷ ಹರಡುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಲ್ಲಿ ಮುಸಲ್ಮಾನರಲ್ಲದವರನ್ನು ಪ್ರವೇಶ ಮಾಡಗೊಡುವುದಿಲ್ಲ” ಎಂಬಿತ್ಯಾದಿ ವಿಷಯಗಳನ್ನು ದೇಶದ ಉದ್ದಗಲಗಳಲ್ಲಿ ಕೋಮುವಾದಿ ಶಕ್ತಿಗಳು ವ್ಯಾಪಕವಾಗಿ ಹರಡುತ್ತಿವೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಇವೆಲ್ಲವೂ ತಪ್ಪುಕಲ್ಪನೆಗಳಾಗಿವೆ.

ಜಮಾಅತೆ ಇಸ್ಲಾಮೀ ಈ ದೇಶದಲ್ಲಿ ಕಳೆದ 7 ದಶಕಗಳಿಂದಲೂ ಈ ತಪ್ಪುಕಲ್ಪನೆಗಳನ್ನು ದೂರೀಕರಿಸಲು ಪ್ರಯತ್ನಿಸುತ್ತಾ ಬಂದಿದೆ. ಅದಕ್ಕಾಗಿ ವಿವಿಧ ರೀತಿಯ ಚಟುವಟಿಕೆಗಳಲ್ಲಿ ವ್ಯಸ್ತವಾಗಿದೆ. ಭಾಷಣ-ಬರಹಗಳ ಮೂಲಕವೂ ಸಮಾಜ ಸೇವಾ ಕಾರ್ಯಗಳಲ್ಲಿ ಜಾತಿ ಮತಗಳ ಆಧಾರದಲ್ಲಿ ತಾರತಮ್ಯ ಮಾಡದೆಯೂ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸಂವಾದ, ವಿಚಾರ ವಿನಿಮಯಗಳ ಮೂಲಕವೂ ಅದನ್ನು ಕಾರ್ಯಗತಗೊಳಿಸುತ್ತಾ ಬಂದಿದೆ. ಇದೆಲ್ಲವನ್ನೂ ಜಮಾಅತ್ ದೇಶದ ಸಂವಿಧಾನಕ್ಕೆ ಬದ್ಧವಾಗಿ ನೈತಿಕ ಮೇರೆಯೊಳಗಿದ್ದುಕೊಂಡು ಶಾಂತಿಯುತವಾಗಿ ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ `ಮಸೀದಿ ಸಂದರ್ಶನ’ವೆಂಬ ಕಾರ್ಯಕ್ರಮದಡಿಯಲ್ಲಿ ಮುಸ್ಲಿಮೇತರ ಬಾಂಧವರನ್ನು ಮಸೀದಿಗೆ ಆಹ್ವಾನಿಸಿ ಮಸೀದಿಯಲ್ಲಿ ನಡೆಯುವ ಮುಸಲ್ಮಾನರ ಚಟುವಟಿಕೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಅವರಿಗೆ ಪರಿಚಯ ಮಾಡುತ್ತಾ ಬಂದಿದೆ.

ಮುಸಲ್ಮಾನರ ಸಂಸ್ಕ್ರತಿಯ ಕುರಿತು ಹಾಗೂ ಆರಾಧನಾ ಕ್ರಮಗಳ ಕುರಿತು ಅಜ್ಞರಾಗಿರುವುದು ಅತ್ಯಂತ ಶೋಚನೀಯ. ಅದರಿಂದ ಮುಸಲ್ಮಾನರಿಂದ ಅನ್ಯರು ಅಂತರವನ್ನೂ ಕಾಯ್ದುಕೊಂಡು ಬಂದಿದ್ದಾರೆ. ಕೋಮುವಾದಿಗಳು ಈ ಅಂತರವನ್ನು ಇನ್ನಷ್ಟು ಹೆಚ್ಚಿಸಿ ಉಭಯ ಸಮುದಾಯಗಳ ಮಧ್ಯೆ ಕಂದರವನ್ನು ಸೃಷ್ಟಿಸುತ್ತಿದ್ದಾರೆ. ಆದರೆ ಎಲ್ಲ ಹಿಂದುಗಳೂ ಕೋಮುವಾದಿಗಳು ಎಂದು ಭಾವಿಸಿದರೆ ತಪ್ಪಾದೀತು. ಹೆಚ್ಚಿನ ಜನರು ಮುಸಲ್ಮಾನರ ಬಗ್ಗೆ ಅರಿಯಲು ಉತ್ಸುಕರಾಗಿರುತ್ತಾರೆ. ಆದರೆ ಅವರನ್ನು ಹೇಗೆ ಸಂಪರ್ಕಿಸುವುದು ಎಂಬುದು ಅವರ ಸಮಸ್ಯೆಯಾಗಿದೆ. ಜಮಾಅತ್‍ನ ಮಸೀದಿ ಸಂದರ್ಶನ ಕಾರ್ಯಕ್ರಮವು ಇದಕ್ಕೊಂದು ಪರಿಹಾರವಾಗಿದೆ. ಈ ರೀತಿ ಮುಸಲ್ಮಾನರು ಸಹೋದರ ಸಮುದಾಯದವರನ್ನು ಆಹ್ವಾನಿಸಿದಾಗಲೆಲ್ಲ ಅವರು ಬಿಚ್ಚು ಮನಸ್ಸಿನಿಂದ ಆಗಮಿಸಿದ್ದಾರೆ.

ಮುಸ್ಲಿಮೇತರರನ್ನು ಮಸೀದಿಗಳಿಗೆ ಪ್ರವೇಶಗೊಳಿಸಬಾರದು ಎಂಬುದು ತಪ್ಪುಕಲ್ಪನೆಯಾಗಿದೆ. ಪ್ರವಾದಿ ಮುಹಮ್ಮದ್(ಸ) ಅವರ ಕಾಲದಲ್ಲೂ ಅನಂತರ ಕಾಲುಗಳಲ್ಲೂ ಮುಸ್ಲಿಮೇತರರನ್ನು ಮಸೀದಿಗೆ ಆಹ್ವಾನಿಸಿ ಅವರ ಮುಂದೆ ಇಸ್ಲಾಮಿನ ಸಂದೇಶವನ್ನಿಡಲಾಗಿತ್ತು. ಅದರಲ್ಲಿ ಸಂದೇಶವನ್ನು ಸ್ವೀಕರಿಸಿದವರೂ ಇದ್ದಾರೆ. ತಿರಸ್ಕರಿಸಿ ಮರಳಿ ಹೋದವರೂ ಇದ್ದಾರೆ.

ಪ್ರವಾದಿ(ಸ) ಕ್ರೈಸ್ತರ ನಿಯೋಗಕ್ಕೆ ಮಸ್ಜಿದುನ್ನಬವಿಯ ಒಂದು ಭಾಗದಲ್ಲಿ ಪ್ರಾರ್ಥಿಸಲು ಅವಕಾಶ ಮಾಡಿ ಕೊಡುತ್ತಾರೆ. ಒಮ್ಮೆ ಒಂದು ಸಂಘರ್ಷದಲ್ಲಿ ಸಹಾಬಿಗಳು ಸುಮಾಮಾ ಬಿನ್ ಉಸಾಲ್ ಎಂಬ ಶತ್ರು ಒಬ್ಬನನ್ನು ಸೆರೆ ಹಿಡಿದು ತಂದು ಮಸ್ಜಿದುನ್ನಬವಿಯ ಕಂಬಕ್ಕೆ ಕಟ್ಟಿ ಹಾಕಿದರು. ಪ್ರವಾದಿ(ಸ) ಬಂದು ನೀವು ಹೇಗಿದ್ದೀರಿ ಎಂದು ವಿಚಾರಿಸಿದರು. ಅವರು ಹೇಳಿದರು- ನೀವು ನನ್ನನ್ನು ಕೊಂದರೆ ಅದಕ್ಕೆ ಅರ್ಹನಾದವನನ್ನೇ ಕೊಂದಿರಿ. ಇನ್ನು ಬಿಟ್ಟು ಬಿಟ್ಟರೆ ನನ್ನನ್ನು ಕೃತಜ್ಞನಾಗಿ ಕಾಣುವಿರಿ ಎಂದು ಹೇಳಿದರು. ಮೂರು ದಿವಸವೂ ಪ್ರವಾದಿಯವರಿಗೆ ಅವರಿಂದ ಅದೇ ಉತ್ತರ ಸಿಕ್ಕಿತು. ಒಂದು ವೇಳೆ ಮುಸ್ಲಿಮೇತರರನ್ನು ಮಸೀದಿಗೆ ಪ್ರವೇಶಗೊಳಿಸಬಾರದು ಎಂದಿದ್ದರೆ, ಸಹಾಬಿಗಳು ಅವರನ್ನು ಮಸೀದಿಯ ಕಂಬಕ್ಕೆ ಕಟ್ಟಿ ಹಾಕುತ್ತಿರಲಿಲ್ಲ. ಪ್ರವಾದಿಯವರೂ ಅದು ಆಕ್ಷೇಪವೆತ್ತಲಿಲ್ಲ. ಮೂರನೇ ದಿವಸ ಪ್ರವಾದಿಯವರು(ಸ) ಅವರನ್ನು ಬಿಟ್ಟು ಬಿಟ್ಟರು. ಅವರು ಹತ್ತಿರದಲ್ಲೇ ಇರುವ ತೊರೆಯಲ್ಲಿ ಸ್ನಾನ ಮಾಡಿ ಬಂದು ಇಸ್ಲಾಮ್ ಸ್ವೀಕರಿಸಿದರು ಎಂಬುದು ಬೇರೆ ವಿಷಯ.

ಹ. ಉಮರ್ ಬಿನ್ ಖತ್ತಾಬ್‍ರ ಕಾಲದಲ್ಲಿ ಫೆಲೆಸ್ತೀನಿನ ನಿಯೋಗಕ್ಕೆ ಮಸ್ಜಿದ್‍ನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅವರೆಲ್ಲರೂ ಕ್ರೈಸ್ತರಾಗಿದ್ದರು.

ಮಸೀದಿ ಸಂದರ್ಶನವೆಂಬ ಜಮಾಅತೆ ಇಸ್ಲಾಮಿಯ ಈ ಕಾರ್ಯಕ್ರಮವು ನಿಜವಾಗಿ ಧಾರ್ಮಿಕ ಸೌಹಾರ್ದ, ಸಹಬಾಳ್ವೆ ಮತ್ತು ಕೋಮು ಸಾಮರಸ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಮಸೀದಿ ಸಂದರ್ಶಿಸಿದ ಮುಸ್ಲಿಮೇತರ ಸಹೋದರರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಮುಸ್ಲಿಮೇತರರನ್ನು ಅಶುದ್ಧಾವಸ್ಥೆಯಲ್ಲಿರುವವರು ಎಂದು ಹೇಳಿರುವುದು ಅವರ ಶಾರೀರಿಕ ಅಶುದ್ಧಾವಸ್ಥೆಯಲ್ಲ. ಅವರ ಮಾನಸಿಕ ಅಶುದ್ಧಾವಸ್ಥೆಯಾಗಿದೆ. ಏಕದೇವೋಪಾಸನೆಯು ಮಾನವ ಪ್ರಕೃತಿಯಾಗಿದೆ. ಅದರಲ್ಲಿ ಇನ್ನಿತರ ನಂಬಿಕೆಗಳನ್ನು ಸೇರಿಸಿದರೆ ಅದು ಕಲುಷಿತಗೊಂಡು ಮಲಿನವಾಗುತ್ತದೆ. ಆದರೆ ಅದನ್ನು ತೊರೆಯುವಂತೆ ಇಸ್ಲಾಮ್ ಕರೆ ನೀಡುತ್ತದೆಯೇ ಹೊರತು ಅದರಲ್ಲೇನೂ ಒತ್ತಾಯ ಮಾಡುವುದಿಲ್ಲ ಅವರಿಗೆ ಅವರ ವಿಶ್ವಾಸ-ನಂಬಿಕೆಯಂತೆ ಜೀವಿಸುವ ಹಕ್ಕನ್ನು ಇಸ್ಲಾಮ್ ನೀಡುತ್ತದೆ. ಒಟ್ಟಿನಲ್ಲಿ ಮುಸ್ಲಿಮೇತರರನ್ನು ಮಸೀದಿಯೊಳಗೆ ಪ್ರವೇಶಗೊಳಿಸುವುದು ನ್ಯಾಯ ಸಮ್ಮತ ಮಾತ್ರವಲ್ಲ ಸಮರ್ಥನೀಯವೂ ಆಗಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …