Home / ಲೇಖನಗಳು / ಜಝಾಕಲ್ಲಾಹು ಖೈರನ್ ಏನಿದರ ತಾತ್ಪರ್ಯ

ಜಝಾಕಲ್ಲಾಹು ಖೈರನ್ ಏನಿದರ ತಾತ್ಪರ್ಯ

ಜೀವನವು ಒಂದು ಪರೀಕ್ಷೆಯಾಗಿದೆ. ನಮ್ಮ ಸಮಯ, ಆರೋಗ್ಯ, ಯೌವ್ವನ, ನಮ್ಮ ಮಕ್ಕಳು, ನಮ್ಮ ಆಪ್ತರು, ನಮ್ಮ ಸಂಪತ್ತು, ಸುಖ, ಸಂತೋಷ, ನೋವು, ಪ್ರತಿಷ್ಟೆ, ಸ್ಥಾನಮಾನ ಹೀಗೆ…. ಇವೆಲ್ಲವುಗಳಿಂದ ನಾವು ಪರೀಕ್ಷಿಸಲ್ಪಡುತ್ತೇವೆ.

ಇವುಗಳು ಯಾವ ಸಮಯದಲ್ಲೂ ನಮ್ಮಿಂದ ಕಸಿಯಲ್ಪಡಬಹುದು. ಈ ಬದಲಾಗುತ್ತಿರುವ ಹವಾಮಾನ ಕೂಡಾ ಅದನ್ನೇ ಸೂಚಿಸುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ನಮಗೆ ಅಲ್ಲಾಹನು ನೀಡಿದ ಅನುಗ್ರಹಗಳ ಮೇಲೆ ಅವಲಂಬಿತರಾಗದೆ ಆ ಅನುಗ್ರಹಗಳನ್ನು ನೀಡಿದ ಅಲ್ಲಾಹನಿಗೆ ಅವಲಂಬಿತರಾಗಬೇಕು. ಕೆಲವೊಮ್ಮೆ ಈ ಕಳೆದು ಕೊಂಡ ವಸ್ತುಗಳೇ ನಮಗೆ ಪರೋಕ್ಷವಾಗಿ ಅನುಗ್ರಹವಾಗಿ ಬದಲಾಗುವುದನ್ನು ನಾವು ತಡವಾಗಿ ಅರ್ಥಮಾಡಿ ಕೊಳ್ಳುತ್ತೇವೆ.

ಆದರೆ…
ಕ್ಲಿಷ್ಟಕರವಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಯಾವ ನಿರೀಕ್ಷೆಯೂ ಇಲ್ಲದಂತಹ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಸಿಗುವ ಸಹಾಯ ಬಹಳ ಮುಖ್ಯ ಮತ್ತು ಮಹತ್ವದ್ದಾಗಿರುತ್ತದೆ. ಕೆಲವರು ಅವರ ಅಮೂಲ್ಯ ಸಮಯವನ್ನು ನಮಗಾಗಿ ನೀಡಿ ಹೃದಯಾಂತರಾಳದಿಂದ ತನ್ಮಯತೆಯಿಂದ ಕೂಡಿದ ಪ್ರಾರ್ಥನೆ ಮೂಲಕ ಅಥವಾ ಪ್ರೋತ್ಸಾಹ ಅಥವಾ ಭರವಸೆಯ ಮೂಲಕ ಸಹಕರಿಸುತ್ತಾರೆ. ಅಗತ್ಯ ಬಂದಾಗ ಆರ್ಥಿಕವಾಗಿಯೂ…

ಆದರೆ ಇಂತಹವರಿಗೆ ಪ್ರತಿಯಾಗಿ ನಮ್ಮಲ್ಲಿ ನೀಡಲು ಏನೂ ಇರುವುದಿಲ್ಲ. ಆದರೂ ಪ್ರತ್ಯುಪಕಾರ ಮನೋಭಾವ ನಮ್ಮಲ್ಲಿರಬೇಕು ಮತ್ತು ನಮ್ಮ ಪ್ರಾರ್ಥನೆಯಲ್ಲಿ ಅವರಿಗೂ ಒಂದು ಸ್ಥಾನ ಸಿಗಬೇಕು ಹಾಗೂ ಸಂದರ್ಭಾನುಸಾರವಾಗಿ ಅವರ ಮೇಲಿನ ನಮ್ಮ ಕರ್ತವ್ಯವನ್ನು ನಾವು ನಿಭಾಯಿಸಲು ಮುಂದಾಗಬೇಕು.

ಇಂತಹ ಪರಸ್ಪರರ ಪ್ರಾರ್ಥನೆ, ಹಾರೈಕೆ ಮತ್ತು ಶುಭಾಶಯಗಳು ಎಷ್ಟೊಂದು ಮಹತ್ವದ್ದು ಎಂದು ಹ. ಉಮರ್(ರ) ಒಂದು ಸಂದರ್ಭದಲ್ಲಿ ವ್ಯಕ್ತಪಡಿಸುತ್ತಾರೆ. ಜಝಾಕಲ್ಲಾಹ್ ಖೈರನ್ ಅರ್ಥಾತ್ ಅಲ್ಲಾಹನು ನಿಮಗೆ ಒಳಿತನ್ನು ಪ್ರತಿಫಲವಾಗಿ ನೀಡಲಿ ಎಂಬ ಪ್ರಾರ್ಥನೆಯಿಂದ ತನ್ನ ಸಹೋದರನಿಗೆ ಲಭಿಸುವ ಪ್ರತಿಫಲದ ಬಗ್ಗೆ ನೀವು ಅರಿತಿದ್ದರೆ ಅದಕ್ಕಾಗಿ ನೀವು ಧಾವಂತ ಪಡುತ್ತಿದ್ದೀರಿ ಎಂದರು. ಯಾವುದೇ ಖರ್ಚಿಲ್ಲದೇ ನೀಡುವಂತಹ ಈ ಪ್ರಾರ್ಥನೆ ಬಹಳ ಮಹತ್ವ ಪಡೆದಿರುತ್ತದೆ.
ಹೀಗೆ ಮಾಡಿದವರು ಅಲ್ಲಾಹನಿಗೆ ಕೃತಜ್ಞರಾಗಿರುತ್ತಾರೆ ಎಂಬ ಪ್ರವಾದಿ ವಚನವೂ ಇದೆ.

ಜನರೊಂದಿಗೆ ಪ್ರಾಮಾಣಿಕತೆಯಿಂದ ವರ್ತಿಸದವರು ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿ ಯಾವ ಪ್ರಯೋಜನವೂ ಇಲ್ಲವೆಂದು ಇನ್ನೊಂದು ಸಂದರ್ಭದಲ್ಲಿ ಪ್ರವಾದಿ (ಸ) ಹೇಳಿರುತ್ತಾರೆ.

ಆದುದರಿಂದ ಇಂತಹ‌ ಆತ್ಮೀಯ ಮತ್ತು ಪ್ರಾಮಾಣಿಕ ಸಂಬಂಧಗಳು ಜೀವನದಲ್ಲಿ ಅನಿರೀಕ್ಷಿತವಾಗಿ ಬಂದು ಅಪಾಯಗಳಿಗೆ ಸಿಲುಕಿದ ನೊಂದ ಮನಸ್ಸಿಗೆ ತಣ್ಣೀರಿನ ಸಿಂಚನ ವರ್ಷಿಸಿದಷ್ಟು ಖುಷಿ, ಮುಂದಿನ ಜೀವನಕ್ಕೆ ಚೈತನ್ಯ ನೀಡೀದಂತಹ ಅನುಭವವಾಗುತ್ತದೆ. ಮಾತ್ರವಲ್ಲ

ಪ್ರವಾದಿವರ್ಯರು(ಸ) ಹೀಗೆಂದಿರುವರು,
“ಕುಲ್ಲು ಮಗ್ರೂಫತಿನ್ ಸ್ವದಕತುನ್”. ಎಲ್ಲಾ ಒಳಿತುಗಳು ದಾನಧರ್ಮವಾಗಿವೆ.

ಆದುದರಿಂದ ಜೀವನದಲ್ಲಿ ಸೋತವರೊಂದಿಗೆ ನಿಲ್ಲಲು ನಮಗೆ ಮನಸ್ಸು ಮತ್ತು ಸಮಯವಿರಬೇಕು. ಕೆಲವೊಮ್ಮೆ ಸಂತೋಷದಿಂದ ನಮಗೇನು ಲಾಭವಾಗದಿದ್ದರೂ ನಮಗೆ ಉಂಟಾಗುವ ದುಃಖದಿಂದ ಅನೇಕ ಪಾಠಗಳು ಸಿಗಬಹುದು. ಅವು ನಮ್ಮನ್ನು ಪ್ರಬುದ್ದರನ್ನಾಗಿಸುತ್ತದೆ.

ಆದ್ದರಿಂದಲೇ ಹೇಳಲಾಗುತ್ತದೆ,
‘ಸಂತೋಷದಲ್ಲಿ ಭಾಗಿಯಾಗುವುದು ಸಂಬಂಧಿಕರು. ದುಖಃದಲ್ಲಿ ಭಾಗಿಯಾಗುವವರು ಫರಿಶ್ತೆ’ ಅರ್ಥಾತ್‌ ದೇವದೂತರಂತೆ.

ಈ ಪವಿತ್ರ ದಿನಗಳಲ್ಲಿ ಇಂತಹ ಸತ್ಕರ್ಮವೆಸಗಲು ಮುಂದಾಗೋಣ. ಅಲ್ಲಾಹನು ಅನುಗ್ರಹಿಸಲಿ…

ಆಮಿನ್.

✍️ ರೈಹಾನ.ವಿ.ಕೆ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …