ಅಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿದ್ದ ಗುರು ನಾನಕರ ಗಮನವನ್ನು ಬೇರೆಡೆಗೆ ಹರಿಸಲಿಕ್ಕಾಗಿ ಅವರ ತಂದೆ ಅವರನ್ನು ವ್ಯಾಪಾರದಲ್ಲಿ ತೊಡಗಲು ಹೇಳಿದರು. ಹತ್ತಿರದ ಪೇಟೆಯಿಂದ ವಸ್ತುಗಳನ್ನು ಖರೀದಿಸಿ ತರಲು ಬೇಕಾದ ಹಣವನ್ನು ನೀಡಿದರು. ಪೇಟೆಗೆ ಹೋಗುವ ದಾರಿಯಲ್ಲಿ ಗುರು ನಾನಕ್ ಕೆಲವು ಮಂದಿ ಬಡವರನ್ನು ಭೇಟಿಯಾದರು. ನಾವು ಊಟ ಮಾಡಿ ಬಹಳ ದಿನವಾದುವು ಎಂದು ಅವರು ಗುರು ನಾನಕ್ರಿಗೆ ಹೇಳಿದರು. ಆಗ ತನ್ನ ಬಳಿಯಿದ್ದ ಹಣವನ್ನೆಲ್ಲಾ ಅವರಿಗೆ ನೀಡಿ ಗುರು ನಾನಕ್ ಬರಿಗೈಯಲ್ಲಿ ಊರಿಗೆ ಮರಳಿದರು. ತಂದೆಯ ಕೋಪಕ್ಕೆ ಹೆದರಿ ಅವರು ಮನೆಗೆ ಹೋಗಲಿಲ್ಲ.
ಮಗನು ಬರಿಗೈಯಲ್ಲಿ ಮರಳಿದ್ದನ್ನು ಅರಿತು ತಂದೆ ಕುಪಿತನಾಗಿ ವಿಚಾರಿಸಿದಾಗ ಗುರು ನಾನಕ್ ಶಾಂತ ಚಿತ್ತರಾಗಿ ಹೀಗೆ ಹೇಳಿದರು- ವ್ಯಾಪಾರ ಮಾಡಿ ಲಾಭ ಗಳಿಸಬೇಕೆಂಬುದಲ್ಲವೇ ನಿಮ್ಮ ಇಂಗಿತ? ಹಸಿದವರಿಗೆ ಉಣಿಸುವುದಕ್ಕಿಂತ ಹೆಚ್ಚು ನನಗೂ ತಮಗೂ ಇಹದಲ್ಲೂ ಪರದಲ್ಲೂ ಲಾಭ ದಾಯಕವಾದ ವ್ಯಾಪಾರ ಬೇರೆ ಇದೆಯೇ?
“ಪ್ರವಾದಿವರ್ಯರ(ಸ) ದ್ವಿತೀಯ ಉತ್ತರಾಧಿಕಾರಿಯಾದ ಉಮರ್ ಫಾರೂಕ್ರವರ(ರ) ಆಡಳಿತ ಕಾಲದಲ್ಲಿ ದೇಶದಲ್ಲಿ ತೀವ್ರ ಬರಗಾಲ ಉಂಟಾಯಿತು. ಆಹಾರ ಪದಾರ್ಥಗಳಿಗೆ ತೀವ್ರ ಕ್ಷಾಮವಾಯಿತು. ಆಗ ಸಿರಿಯಾದಿಂದ ಧಾರಾಳ ಆಹಾರ ಧಾನ್ಯಗಳನ್ನು ಹೊತ್ತ ಒಂದು ವ್ಯಾಪಾರೀ ತಂಡ ಮದೀನಾಕ್ಕೆ ಬಂತು. ವ್ಯಾಪಾರಿಗಳೆಲ್ಲಾ ಅದಕ್ಕೆ ಮುಗಿಬಿದ್ದರು. ಎಲ್ಲರೂ ಸರಕಿಗೆ ಬೆಲೆ ಹೇಳಿದರು. ಮೂರ್ಮಡಿ ಲಾಭ ನೀಡಲು ಅವರು ಮುಂದಾದರು. ಆದರೂ ಸರಕಿನ ಒಡೆಯನಾದ ಉಸ್ಮಾನ್ ಬಿನ್ ಅಫ್ಫಾನ್(ರ) ಅದನ್ನು ಮಾರಲು ಸಿದ್ಧರಾಗಲಿಲ್ಲ. ಕೊನೆಗೆ ದೊಡ್ಡ ಮೊತ್ತದ ಲಾಭವನ್ನು ಸೂಚಿಸಲಾಯಿತು. ಆಗ ಅವರು ಹೀಗೆ ಹೇಳಿದರು, “ನನಗೆ ಅದರ ಅನೇಕ ಪಟ್ಟು ಹೆಚ್ಚು ಲಾಭ ಲಭಿಸಿಯಾಗಿದೆ.” ಇದನ್ನು ಕೇಳಿ ಅಲ್ಲಿದ್ದ ವ್ಯಾಪಾರಿಗಳೆಲ್ಲಾ ಮೂಕ ವಿಸ್ಮಿತರಾದರು. ಅವರು ಕೇಳಿದರು, “ಈ ಸರಕಿಗೆ ನಮಗಿಂತ ಅಧಿಕ ಬೆಲೆ ನೀಡಲು ಮುಂದಾದವರು ಯಾರು? “”ದೇವನು! ಅವನು ಹತ್ತು ಪಟ್ಟು ಲಾಭವನ್ನು ವಾಗ್ದಾನ ಮಾಡಿರುವನು. ಅದಕ್ಕಿಂತ ಹೆಚ್ಚು ಯಾರು ತಾನೇ ನೀಡಬಲ್ಲರು?” ಉಸ್ಮಾನ್ ಕೇಳಿದರು. ತರುವಾಯ ಅವರು ಆ ಆಹಾರ ಧಾನ್ಯಗಳನ್ನೆಲ್ಲ ಬಡವರಲ್ಲಿ ಹಂಚಿದರು.
ಧನ ವ್ಯಾಮೋಹ ಇಲ್ಲದವರು ಮತ್ತು ಧನ ಸಂಪಾದನೆಗೆ ಶ್ರಮಿಸದವರು ಬಹಳ ಅಪರೂಪ. ಮನುಷ್ಯನ ಧನ ದಾಹವನ್ನು ತಣಿಸಲು ಸಂಪತ್ತಿನ ದೊಡ್ಡ ರಾಶಿಗೂ ಸಾಧ್ಯವಿಲ್ಲ. ಹೆಚ್ಚಿನ ವೇಳೆ ಬಡವರಿಗಿಂತ ಶ್ರೀಮಂತರೇ ಧನ ದಾಹದಲ್ಲಿ ಮುಂದಿರುತ್ತಾರೆ. ಹೆಚ್ಚಿನವರು ಬದುಕಲಿಕ್ಕಾಗಿ ಸಂಪಾದಿಸುವವರಲ್ಲ, ಸಂಪಾದಿಸುವುದಕ್ಕಾಗಿ ಬದುಕುವವ ರಾಗಿರುತ್ತಾರೆ. ಜಿಪುಣತೆಯ ಹಿಡಿತದಿಂದ ತಪ್ಪಿಸಿಕೊಂಡವರು ಬಹಳ ವಿರಳ. ಹಣ ಕಳೆದು ಹೋಗುವ ಭೀತಿಯಿಂದ ಅವರು ಸದಾ ನರಳುತ್ತಿರುವರು. ಶ್ರೀಮಂತರು ಬಡವರಿಗಿಂತ ಹೆಚ್ಚು ಆಂತರಿಕ ಸಂಘರ್ಷವನ್ನು ಅನುಭವಿಸಲು ಕಾರಣ ಅದುವೆ. ಹೆಚ್ಚಿನ ಸಿರಿವಂತರು ಸಂಪತ್ತು ತಮ್ಮ ಸ್ವಂತ ಸಾಮರ್ಥ್ಯದ ಗಳಿಕೆ ಎಂದು ಪರಿಗಣಿಸುತ್ತಾರೆ. ಆದ್ದರಿಂದ ಅವರು ಅದರ ನೈಜ ದಾತಾರನನ್ನು ಮರೆಯುತ್ತಾರೆ. ಅವನ ಅಪ್ಪಣೆಯಂತೆ ಅದನ್ನು ವ್ಯಯಿಸಲು ಹಿಂಜರಿಯುತ್ತಾರೆ. ಹಸಿವು ದಾರಿದ್ರ್ಯಗಳಿಂದ ನಲುಗಿ ಹೋಗುತ್ತಿರುವ ಬಡವರ ಕುರಿತು ಅನುಕಂಪ ವಿಲ್ಲದವರು ವಿರಳ. ಆದರೆ ಧನ ದಾಹವು ಹೆಚ್ಚಿನವರಿಂದ ಈ ಅನುಕಂಪವನ್ನೂ ಕಸಿದು ಬಿಡುತ್ತದೆ. ಆದ್ದರಿಂದ ಅವರು ಗುಳಿಬಿದ್ದ ಕಣ್ಣುಗಳು ಮತ್ತು ಬೆನ್ನಿಗಂಟಿದ ಉದರಗಳನ್ನು ಕಂಡೂ ಕಾಣದಂತೆ ವರ್ತಿಸುತ್ತಾರೆ. ಹಸಿವಿನಿಂದ ನರಳುತ್ತಿರುವವರ ದೀನ ರೋದನವನ್ನು ಅವರು ಕೇಳಿಸಿಕೊಳ್ಳುವುದಿಲ್ಲ.ಆರೋಗ್ಯ, ಬುದ್ಧಿ ಶಕ್ತಿ, ಸೌಂದರ್ಯಗಳಂತೆ ಸಂಪತ್ತು ಕೂಡಾ ದೇವದತ್ತವಾಗಿದೆ. ಈ ಸತ್ಯವನ್ನರಿತು ದಾತಾರನನ್ನು ಸ್ಮರಿಸುವವರು ಭಾಗ್ಯವಂತರು. ತಮ್ಮ ಸೊತ್ತಿನಲ್ಲಿ ವಂಚಿತರ ಹಕ್ಕು ಇದೆಯೆಂದು ಅವರು ಭಾವಿಸುತ್ತಾರೆ. ಅವರು ಗುರುನಾನಕ್ ಮತ್ತು ಉಸ್ಮಾನ್ರಂತೆ ಉದಾರಿಗಳಾಗುತ್ತಾರೆ.
- ಜನಾಬ್ ಇಬ್ರಾಹೀಮ್ ಸಈದ್
ನೂರೆಂಟು ಚಿಂತನೆಗಳು ಕೃತಿಯಿಂದ
IslamKannada News Portal

