Home / ಲೇಖನಗಳು / ಇಸ್ಲಾಮೇತರ ಆಚಾರ-ಸಂಪ್ರದಾಯಗಳು

ಇಸ್ಲಾಮೇತರ ಆಚಾರ-ಸಂಪ್ರದಾಯಗಳು

ಏಕದೇವ ವಿಶ್ವಾಸದ ಬಗ್ಗೆ ಮುಸ್ಲಿಮರು ಇಷ್ಟು ದೃಢ ನಿಲುಮೆಯವರಾಗಿರುವಾಗ ಇಂದು ನಮ್ಮ ಪರಿಸರದಲ್ಲಿ ಮುಸ್ಲಿಮ್ ಜನಸಾಮಾನ್ಯರಲ್ಲಿ ಕಂಡು ಬರುವಂತಹ ಏಕದೇವ ವಿಶ್ವಾಸಕ್ಕೆ ಹೊಂದಿಕೊಳ್ಳದ ಅನೇಕ ಆಚಾರ-ಸಂಪ್ರದಾಯಗಳು ಜನರನ್ನು ಗೊಂದಲಕ್ಕೀಡು ಮಾಡುವುದು ಸಹಜ. ಆದ್ದರಿಂದ ಆ ಬಗ್ಗೆ ಒಂದೆರಡು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯವೆನಿಸುತ್ತದೆ.

‘ಕಬರ್ ಝಿಯಾರತ್’ ಅಥವಾ ‘ಸಮಾಧಿ ಸಂದರ್ಶನ’

‘ಕಬರ್ ಝಿಯಾರತ್’ ಅಥವಾ ‘ಸಮಾಧಿ ಸಂದರ್ಶನ’ ಒಳ್ಳೆಯದೆಂದು ಪ್ರವಾದಿ ಮುಹಮ್ಮದ್(ಸ) ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದಾರೆ. ತನ್ನ ಮರಣವನ್ನು ಸ್ಮರಿಸುವುದು, ಪರಲೋಕ ಜೀವನದ ಬಗ್ಗೆ ಪ್ರಜ್ಞಾವಂತನಾಗುವುದು ಮತ್ತು ತನ್ನ ಮೃತ ಬಂಧುಗಳ ಮೋಕ್ಷಕ್ಕಾಗಿ ಪ್ರಾರ್ಥಿಸುವುದು ಸಮಾಧಿ ಸಂದರ್ಶನದ ಉದ್ದೇಶ. ಇದು ಪ್ರವಾದಿ ಚರ್ಯೆಯಾಗಿದ್ದು ಪುಣ್ಯ ಕಾರ್ಯವಾಗಿದೆ. ಆದರೆ ಗೋರಿಗಳನ್ನು ಎತ್ತರಿಸಿ ಕಟ್ಟುವ, ಅವುಗಳನ್ನು ಅಲಂಕರಿಸುವ, ಅವುಗಳ ಮೇಲೆ ಬಟ್ಟೆ ಹೊದಿಸುವ, ದೀಪ ಬೆಳಗಿಸುವ ಹಾಗೂ ಅಗರ ಬತ್ತಿಗಳನ್ನು ಹೊತ್ತಿಸುವ ಸಂಪ್ರದಾಯಗಳು ಪ್ರವಾದಿ ಚರ್ಯೆಗೆ ವಿರುದ್ಧವಾಗಿವೆ. ಗೋರಿ ಸಂದರ್ಶನವನ್ನು ‘ಗೋರಿ ಪೂಜೆ’ಯಾಗಿ ಮಾರ್ಪಡಿಸಬಹುದಾದ ಇಂತಹ ಸಂಪ್ರದಾಯಗಳಿಗೆ ಇಸ್ಲಾಮಿನ ಮೂಲ ಗ್ರಂಥಗಳಾದ ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ ಯಾವ ಆಧಾರವೂ ಇಲ್ಲ. ಹಾಗೆಯೇ ಸಂತರ ಸಮಾಧಿಗಳಲ್ಲಿ ನಡೆಸಲ್ಪಡುವ ‘ಉರೂಸ್’ ಎಂಬ ಉತ್ಸವಗಳಿಗೆ ಇಸ್ಲಾಮ್ ಧರ್ಮದೊಂದಿಗೆ ಯಾವ ಸಂಬಂಧವೂ ಇಲ್ಲ. ಇದು ಇಸ್ಲಾಮಿನೊಳಗೆ ನುಸುಳಿ ಕೊಂಡಿರುವ ಅನ್ಯಧರ್ಮಿಯ ಸಂಪ್ರದಾಯಗಳಾಗಿವೆ. ಇನ್ನು ಸಮಾಧಿಸ್ಥರಾದ ಮಹಾತ್ಮರನ್ನು ಕರೆದು ಪ್ರಾರ್ಥಿಸುವುದಾಗಲೀ ಗೋರಿಗಳಿಗೆ ಸಾಷ್ಟಾಂಗವೆರಗುವುದಾಗಲೀ ಇಸ್ಲಾಮ್ ಧರ್ಮದ ಏಕದೇವ ವಿಶ್ವಾಸಕ್ಕೆ ತೀರಾ ವಿರುದ್ಧವಾಗಿದ್ದ ನಿಷಿದ್ಧ ಕಾರ್ಯವೆಂಬುದನ್ನು ಸ್ವಯಂ ಉರೂಸ್ ಸಂಪ್ರದಾಯದ ಬೆಂಬಲಿಗರೂ ಒಪ್ಪುತ್ತಾರೆ.

786 ಮತ್ತು ಬಾಲಚಂದ್ರ

ಕೆಲವರು ‘786’ ಎಂಬ ಸಂಖ್ಯೆಯನ್ನು ಅಥವಾ ಬಾಲಚಂದ್ರ ಮತ್ತು ನಕ್ಷತ್ರವನ್ನೊಳಗೊಂಡ ಆಕೃತಿಯನ್ನು ಅಲ್ಲಾಹನ ಸಂಕೇತ ಎಂದು ಭಾವಿಸುವುದಿದೆ. ಆದರೆ ಅಲ್ಲಾಹನಿಗೆ ಅಥವಾ ಇಸ್ಲಾಮ್ ಧರ್ಮಕ್ಕೆ ಅಂತಹ ಯಾವ ಸಂಕೇತವೂ ಇಲ್ಲ. ಪವಿತ್ರ ಕುರ್‍ಆನಿನ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಬರುವ “ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ” ಎಂಬರ್ಥದ ವಾಕ್ಯವನ್ನು ಸಂಕೇತಿಸಲು ಕೆಲವು ಮುಸ್ಲಿಮರು 786 ಎಂಬ ಸಂಖ್ಯೆಯನ್ನು ಬಳಸುತ್ತಾರೆ. ‘ಅಬ್‍ಜದ್’ ಎಂಬ ಅರಬೀ ಸಂಖ್ಯಾಶಾಸ್ತ್ರದ ಗಣನೆಯ ಪ್ರಕಾರ ಪ್ರಸ್ತುತ ವಾಕ್ಯದ ಮೊತ್ತವೇ 786 ಆಗುತ್ತದೆ. ಕೆಲವರು ಪವಿತ್ರ ಕುರ್‍ಆನಿನ ವಾಕ್ಯಕ್ಕೆ ಅಗೌರವ ಆಗದಿರಲಿ ಎಂಬ ಉದ್ದೇಶದಿಂದ ತಮ್ಮ ಪತ್ರಗಳಲ್ಲಿ ‘786’ ಸಂಖ್ಯೆಯನ್ನು ಬರೆಯುತ್ತಾರೆ. ಮುಸ್ಲಿಮರು ತಮ್ಮ ಎಲ್ಲಾ ಕೆಲಸಗಳನ್ನೂ ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದಲೇ ಆರಂಭಿಸಬೇಕು ಎಂಬ ಪ್ರವಾದಿ ಮುಹಮ್ಮದ್‍ರವರ(ಸ) ಆದೇಶವನ್ನು ಪಾಲಿಸುವುದೇ ಹೀಗೆ ಮಾಡುವುದರ ಉದ್ದೇಶ. ಆದರೆ ಈ ರೀತಿ ‘786’ ಎಂಬ ಸಂಖ್ಯೆಯನ್ನು ಬಳಸುವುದಕ್ಕೆ ಕುರ್‍ಆನ್-ಹದೀಸ್‍ಗಳಲ್ಲಿ ಯಾವುದೇ ಪುರಾವೆಯಿಲ್ಲ. ಅಂತೆಯೇ ಆ ಸಂಖ್ಯೆಗೆ ಯಾವುದೇ ಧಾರ್ಮಿಕ ಮಹತ್ವವೂ ಇಲ್ಲ.

ಇಸ್ಲಾವಿೂ ಪಂಚಾಂಗವು ಚಾಂದ್ರಮಾನ ಕಾಲಗಣನೆಯನ್ನು ಅವಲಂಬಿಸಿದೆ. ಹಿಜರಿ ಶಕೆಯೂ ಚಾಂದ್ರಮಾನ ವರ್ಷವನ್ನಾಧರಿಸಿದೆ. ಹಜ್ಜ್ ಯಾತ್ರೆ ಮತ್ತು ಉಪವಾಸ ವ್ರತದಂತಹ ಪ್ರಮುಖ ಆರಾಧನಾ ಕರ್ಮಗಳು ಮತ್ತು ಇಸ್ಲಾಮಿನ ಎರಡು ಪ್ರಮುಖ ಹಬ್ಬಗಳಾದ ‘ಈದುಲ್ ಫಿತ್ರ್’ (ರಮಝಾನ್ ಹಬ್ಬ) ಮತ್ತು ‘ಈದುಲ್ ಅಝ್‍ಹಾ’ (ಬಕ್ರೀದ್) ಆಚರಣೆಯೂ ಚಂದ್ರದರ್ಶನವನ್ನಾಧರಿಸಿದೆ. ಆದುದರಿಂದ ಟರ್ಕಿಯ ಖಿಲಾಫತ್‍ನ ಕಾಲದಲ್ಲಿ ಬಾಲಚಂದ್ರ ಮತ್ತು ನಕ್ಷತ್ರವನ್ನು ಅಲ್ಲಿಯ ರಾಷ್ಟ್ರ ಧ್ವಜದಲ್ಲಿ ಅಳವಡಿಸಲಾಯಿತು. ಅಂದಿನಿಂದ ಅನೇಕ ಮುಸ್ಲಿಮರು ಅದನ್ನು ಒಂದು ಉತ್ತಮ ಸಂಕೇತದ ರೂಪದಲ್ಲಿ ಬಳಸುತ್ತಾರೆ. ಆದರೆ ಅದಕ್ಕೂ ಯಾವುದೇ ಧಾರ್ಮಿಕ ಮಹತ್ವವಿಲ್ಲ.

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …