Home / ಲೇಖನಗಳು / ಒಂದೇ ಜಾತಿ ಒಂದೇ ವರ್ಗ

ಒಂದೇ ಜಾತಿ ಒಂದೇ ವರ್ಗ

ಮುಸ್ಲಿಮರಿಗೋರ್ವ ಅಲ್ಲಾಹ್, ಹಿಂದುಗಳಿಗೋರ್ವ ಈಶ್ವರ, ಕ್ರೈಸ್ತರಿಗೊಬ್ಬ ಪರಮಾತ್ಮ, ಯಹೂದಿಯರಿಗೊಬ್ಬ ದೇವ ಎಂಬ ಕಲ್ಪನೆಯು ಇಸ್ಲಾಮಿಗೆ ಅಪರಿಚಿತವಾಗಿದೆ. ಎಲ್ಲರ ದೇವನೂ ಒಬ್ಬನೇ: ಆತ ಏಕೈಕನು, ಅಖಿಲ ವಿಶ್ವದ ಸೃಷ್ಟಿಕರ್ತ, ಸಕಲ ಚರಾಚರಗಳ ಪ್ರಭು ಮತ್ತು ನಿಯಂತ್ರಕನೂ ಅವನೇ “ಹೇಳಿರಿ, ಅವನು ಅಲ್ಲಾಹನು, ಏಕೈಕನು, ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ, ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (ಪವಿತ್ರ ಕುರ್ ಆನ್ 112:1-4)

“ಅವನು ಪ್ರತಿಯೊಂದು ವಸ್ತುವನ್ನೂ ಸೃಷ್ಟಿಸಿದನು. ಅನಂತರ ಅದಕ್ಕೊಂದು ವಿಧಿನಿಯಮವನ್ನು ನಿಶ್ಚಯಿಸಿದನು. (ಪವಿತ್ರ ಕುರ್ ಆನ್, 25:2)

”ಅವನು (ಭೂಮಿಯನ್ನು ಅಸ್ತಿತ್ವಕ್ಕೆ ತಂದ ಬಳಿಕ) ಅದರ ಮೇಲೆ ಪರ್ವತಗಳನ್ನು ನಾಟಿದನು. ಅದರಲ್ಲಿ ಸಮೃದ್ಧಿಗಳನ್ನಿರಿಸಿದನು ಮತ್ತು ಅದರಲ್ಲಿ ಎಲ್ಲ ಅಪೇಕ್ಷಕರಿಗಾಗಿ ಅವರವರ ಅಗತ್ಯಾನುಸಾರ ಸರಿಯಾದ ಪ್ರಮಾಣದಲ್ಲಿ ಆಹಾರ ವಸ್ತುಗಳನ್ನು ಒದಗಿಸಿದನು.” (ಪವಿತ್ರ ಕುರ್ ಆನ್, 41:10)

”ಅವನು ಭೂಮಿಯನ್ನು ಸಕಲ ಸೃಷ್ಟಿಗಳಿಗಾಗಿ ಉಂಟು ಮಾಡಿದನು. (ಪವಿತ್ರ ಕುರ್ ಆನ್, 55:10)

“ಭೂಮಿಯಲ್ಲಿರುವುದನ್ನೆಲ್ಲ ನಿಮಗಾಗಿಯೇ ಸೃಷ್ಟಿಸಿದವನು ಆತನೇ. (ಪವಿತ್ರ ಕುರ್ ಆನ್, 2:29)

ದೇವನು ಕೇವಲ ಮುಸ್ಲಿಮರ ಸೃಷ್ಟಿಕರ್ತನಲ್ಲ, ಸಕಲ ಮಾನವರ ಕರ್ತನಾಗಿದ್ದಾನೆ. ಎಲ್ಲರಿಗೂ ಬಹಳ ನಿಕಟನಾಗಿದ್ದಾನೆ.

”ನಾವು ಮಾನವನನ್ನು ಸೃಷ್ಟಿಸಿದ್ದೇವೆ ಮತ್ತು ನಾವು ಅವನ ಮನಸ್ಸಿನಲ್ಲಿ ಉದ್ಭವಿಸುವ ದುರ್ಭಾವನೆಗಳನ್ನೂ ಬಲ್ಲೆವು, ನಾವು ಅವನ ಕಂಠನಾಡಿಗಿಂತಲೂ ಅವನಿಗೆ ಸಮೀಪವಿದ್ದೇವೆ.” (ಪವಿತ್ರ ಕುರ್ ಆನ್, 50:16)

ಮಾನವ ಏಕತೆ
ಜಗತ್ತಿನ ಸಕಲ ಮಾನವರೂ ಒಬ್ಬನೇ ದೇವನ ಸೃಷ್ಟಿಗಳಾಗಿದ್ದಾರೆ. ಆತನ ಗಾಳಿಯನ್ನ ಸೇವಿಸುವವರು ಮತ್ತು ಆತನ ನೀರನ್ನೇ ಕುಡಿಯುವವರಾಗಿದ್ದಾರೆ. ಭೂಮಿಯಲ್ಲಿ ಆತನು ಒದಗಿಸಿದ ಸೌಲಭ್ಯಗಳನ್ನು ಬಳಸಿ ಬಾಳುವವರಾಗಿದ್ದಾರೆ.

ಭೂಮಿಯಲ್ಲಿರುವ ಸಕಲ ಮಾನವರನ್ನು ಒಂದೇ ಆತ್ಮದಿಂದ ಸೃಷ್ಟಿಸಲಾಗಿದೆ. ಪವಿತ್ರ ಕುರ್ ಆನ್ ಹೀಗೆ ಹೇಳುತ್ತದೆ: ”ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು.” (ಪವಿತ್ರ ಕುರ್ ಆನ್, 4:1)

ಹಿಂದುಗಳು, ಮುಸ್ಲಿಮರು, ಕ್ರೈಸ್ತರು, ಭಾರತೀಯರು, ಚೀನೀಯರು, ಅರಬರು, ಐರೋಪ್ಯರೆಲ್ಲರ ಆದಿಪಿತ ಆದಮ್ ಆಗಿದ್ದು ಎಲ್ಲರೂ ಅವರ ಸಂತಾನ ಪರಂಪರೆಗೆ ಸೇರಿದ್ದಾರೆ.
”ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಓರ್ವ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯಪಡಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು.” (ಪವಿತ್ರ ಕುರ್ ಆನ್, 49:13)

ಆದ್ದರಿಂದ, ಜಗತ್ತಿನ ಮಾನವರೆಲ್ಲರ ಜಾತಿ ಒಂದೇ ಆಗಿದೆ. ಎಲ್ಲರೂ ಒಂದೇ ವರ್ಗದವರು, ಒಂದೇ ಕುಟುಂಬಕ್ಕೆ ಸೇರಿದವರು. ಪ್ರವಾದಿ(ಸ) ಹೇಳಿದ್ದಾರೆ: “ಸೃಷ್ಟಿಗಳೆಲ್ಲವೂ ದೇವನ ಆಶ್ರಿತವಾಗಿವೆ. ಆದ್ದರಿಂದ, ತನ್ನ ಆಶ್ರಿತರಿಗೆ ಅತ್ಯಧಿಕ ಉಪಕಾರಿಯಾಗುವವರೇ ಆತನಿಗೆ ಅತ್ಯಂತ ಪ್ರಿಯರು.” (ಬಝ್ಝಾರ್)

ಪ್ರವಾದಿಯವರು ಇನ್ನೊಂದು ಸಂದರ್ಭದಲ್ಲಿ ಹೀಗೆಂದಿದ್ದರು: “ನಿಶ್ಚಯವಾಗಿಯೂ ನಿಮ್ಮ ದೇವನು ಏಕನು. ನಿಮ್ಮೆಲ್ಲರ ತಂದೆ ಒಬ್ಬರೇ, ಎಲ್ಲರೂ ಆದಮರಿಂದ ಬಂದಿದ್ದಾರೆ. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು, ಆದ್ದರಿಂದ ಅರಬನಿಗೆ ಅರಬೇತರನಿಗಿಂತ, ‘ಬಿಳಿಯನಿಗೆ ಕರಿಯನಿಗಿಂತ ಯಾವುದೇ ಶ್ರೇಷ್ಠತೆಯಿಲ್ಲ. ದೇವಭಕ್ತಿಯ ಆಧಾರದಲ್ಲಿ ಹೊರತು ” (ಮುಸ್ಲಿಮ್, ಅಬೂ ದಾವೂದ್)

ಧರ್ಮಗಳ ಏಕತೆ
ಧರ್ಮವು, ಮಾನವ ಜನಾಂಗದ ದೇವ ನಿರ್ಣಿತ ಜೀವನ ಪದ್ಧತಿಯಾಗಿದೆ. ಎಲ್ಲ ಧರ್ಮಗಳ ಮೂಲ ಒಂದೇ. ದೇವದತ್ತ ಜೀವನ ಪದ್ಧತಿ ಲಭಿಸದ ಜನಾಂಗಗಳಿಲ್ಲವೆಂದು ಪವಿತ್ರ ಕುರ್ ಆನ್ ಒತ್ತಿ ಹೇಳಿದೆ. ‘ನಾವು ನಿಮ್ಮ (ಮಾನವರ) ಪೈಕಿ ಪ್ರತಿಯೊಬ್ಬನಿಗೆ ಒಂದು ಧರ್ಮಶಾಸ್ತ್ರ ಮತ್ತು ಕರ್ಮಮಾರ್ಗವನ್ನು ನಿಶ್ಚಯಿಸಿದೆವು.” (ಪವಿತ್ರ ಕುರ್ ಆನ್, 5:48)

ಎಲ್ಲ ಧರ್ಮಗಳ ಬುನಾದಿ ಒಂದೇ. ಭಿನ್ನತೆ ಅನಂತರ ಹುಟ್ಟಿಕೊಂಡಿತು. ಅದಕ್ಕೆ ಪುರೋಹಿತರ ಹಸ್ತಕ್ಷೇಪವೇ ಕಾರಣ. ವಿವಿಧ ಪ್ರವಾದಿಗಳ ಮೂಲಕ ಅವತೀರ್ಣಗೊಂಡ ಸಂದೇಶ ಒಂದೇ ಆಗಿತ್ತೆಂದು ಅಲ್ಲಾಹನು ಕುರ್ ಆನ್ ನಲ್ಲಿ ಸ್ಪಷ್ಟಪಡಿಸಿದ್ದಾನೆ:
”ಅವನು ನೂಹರಿಗೆ ಆಜ್ಞಾಪಿಸಿದ್ದ ಧರ್ಮ ವಿಧಾನವನ್ನೇ ನಿಮಗಾಗಿಯೂ ನಿಶ್ಚಯಿಸಿಕೊಟ್ಟಿದ್ದಾನೆ. ಮತ್ತು (ಮುಹಮ್ಮದರೇ) ಈಗ ನಾವು ಅದನ್ನೇ ದಿವ್ಯವಾಣಿಯ ಮೂಲಕ ನಿಮ್ಮ ಕಡೆಗೆ ಕಳುಹಿಸಿರುತ್ತೇವೆ. ಇದನ್ನೇ ನಾವು ಇಬ್ರಾಹೀಮ್, ಮೂಸಾ ಮತ್ತು ಈಸಾರಿಗೂ ಬೋಧಿಸಿದ್ದೆವು.” (ಪವಿತ್ರ ಕುರ್ ಆನ್, 42:13)

ಒಟ್ಟಿನಲ್ಲಿ ಧರ್ಮಗಳ ಅವತರಣ ಹಂತದಲ್ಲಿ ಅವೆಲ್ಲವುಗಳ ಮೂಲಭೂತ ಬೋಧನೆಗಳು ಒಂದೇ ಆಗಿದ್ದುವು. ಕೆಲವು ವಿವರಣೆ ಮತ್ತು ಆಚಾರ ಅನುಷ್ಠಾನಗಳಲ್ಲಿ ಮಾತ್ರ ಕಾಲ, ದೇಶಗಳಿಗೆ ತಕ್ಕಂಥ ಬದಲಾವಣೆಗಳಿದ್ದುವು. ಧರ್ಮಗಳಲ್ಲಿರುವ ಮೂಲಭೂತ ಭಿನ್ನತೆಗಳು ಮಾನವರ ಹಸ್ತಕ್ಷೇಪದಿಂದ ಉಂಟಾಗಿವೆ.

ದೇವ ಪ್ರವಾದಿಗಳು
ದೇವ ಪ್ರವಾದಿಗಳು ಮಾನವಕುಲಕ್ಕೆ ದೈವಿಕ ಜೀವನ ಪದ್ಧತಿಯನ್ನು ತಲಪಿಸಿದವರಾಗಿದ್ದಾರೆ. ಜಗತ್ತಿನ ಎಲ್ಲ ಜನಾಂಗ ಮತ್ತು ದೇಶಗಳಲ್ಲಿ ಇಂಥ ದೇವ ಪ್ರವಾದಿಗಳನ್ನು ನೇಮಿಸಲಾಗಿತ್ತೆಂದು ಪವಿತ್ರ ಕುರ್ ಆನ್ ಸ್ಪಷ್ಟಪಡಿಸಿದೆ.
‘ನಾವು ಪ್ರತಿಯೊಂದು ಸಮುದಾಯದಲ್ಲಿ ಓರ್ವ ಸಂದೇಶವಾಹಕನನ್ನು ಕಳುಹಿಸಿದೆವು.” (ಪವಿತ್ರ ಕುರ್ ಆನ್, 16:36)

ಪ್ರವಾದಿ ಮುಹಮ್ಮದ್ ರು(ಸ), ದೇವದತ್ತವಾದ ಜೀವನ ಮಾರ್ಗವನ್ನು ಅನುಸರಿಸುವವರಿಗೆ ಶುಭವಾರ್ತೆ ಮತ್ತು ಅದನ್ನು ನಿರಾಕರಿಸುವವರಿಗೆ ಎಚ್ಚರಿಕೆ ನೀಡುವ ಪ್ರವಾದಿ ಶೃಂಖಲೆಯ ಕೊನೆಯ ಕೊಂಡಿಯಾಗಿದ್ದಾರೆ. ಅಲ್ಲಾಹನು ತಿಳಿಸಿರುವನು: ”ನೀವು ಕೇವಲ ಓರ್ವ ಎಚ್ಚರಿಕೆ ಕೊಡುವವರಾಗಿರುತ್ತೀರಿ. ನಾವು ನಿಮ್ಮನ್ನು ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿ ಸತ್ಯಸಹಿತ ಕಳುಹಿಸಿರುತ್ತೇವೆ. ಎಚ್ಚರಿಕೆ ಕೊಡುವವರಾರೂ ಬಂದಿರದಂತಹ ಸಮುದಾಯವೊಂದೂ ಗತಿಸಿಲ್ಲ.’ (ಪವಿತ್ರ ಕುರ್ ಆನ್, 35:23-24)

ಆದ್ದರಿಂದ ಪ್ರವಾದಿಗಳೆಲ್ಲರೂ ಪರಸ್ಪರ ಸಹೋದರರು, ದೇವಸಂದೇಶವಾಹಕರೆಂಬ ನೆಲೆಯಲ್ಲಿ ಎಲ್ಲರೂ ಸಮಾನರು ಮತ್ತು ಸಮಾನ ಗೌರವಕ್ಕೆ ಅರ್ಹರು, ಜಗತ್ತಿನಲ್ಲಿ ನೇಮಕಗೊಂಡ ಎಲ್ಲ ಪ್ರವಾದಿಗಳ ಮೇಲೆಯೂ ವಿಶ್ವಾಸವಿರಿಸಬೇಕಾದುದು ಮುಸ್ಲಿಮರ ಹೊಣೆಯಾಗಿದೆ. ಅವರೆಲ್ಲರನ್ನೂ ಅಂಗೀಕರಿಸಿ ಗೌರವಿಸಬೇಕು. ಕುರ್ ಆನಿನಲ್ಲಿ ಅಲ್ಲಾಹನು ಆಜ್ಞಾಪಿಸಿರುತ್ತಾನೆ. “ಮುಸ್ಲಿಮರೇ ಹೇಳಿರಿ, ನಾವು ಅಲ್ಲಾಹನ ಮೇಲೆ ಹಾಗೂ ನಮ್ಮ ಕಡೆ ಅವತೀರ್ಣವಾಗಿರುವುದರ ಮೇಲೆ ಮತ್ತು ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಅ್ ಕೂಬ್ ಮತ್ತು ಯಾಅ್ ಕೂಬರ ಸಂತತಿಗಳಿಗೆ ಅವತೀರ್ಣವಾಗಿರುವುದರ ಮೇಲೆ ಹಾಗೂ ಮೂಸಾ, ಈಸಾ ಮತ್ತು ಇತರ ಎಲ್ಲ ಪ್ರವಾದಿಗಳಿಗೆ ಅವರ ಪ್ರಭುವಿನಿಂದ ದೊರೆತಿರುವುದರ ಮೇಲೆ ವಿಶ್ವಾಸವಿಟ್ಟಿದ್ದೇವೆ. ನಾವು ಅವರೊಳಗೆ ತಾರತಮ್ಯವಿರಿಸುವುದಿಲ್ಲ. ನಾವು ಕೇವಲ ಅಲ್ಲಾಹನ ಮುಸ್ಲಿಮರಾಗಿದ್ದೇವೆ.” (ಪವಿತ್ರ ಕುರ್ ಆನ್ 2:136)

ಏಕ ಸಮುದಾಯ
ಆರಂಭದಲ್ಲಿ ಮಾನವರಾಶಿಯು ಒಂದೇ ಸಮುದಾಯವಾಗಿತ್ತು. ಕಾಲಕ್ರಮೇಣ ಪರಸ್ಪರ ವಿಂಗಡನೆಗೊಂಡು ದೂರವಾದುವು. ಮಾನವರು ಸ್ವಯಂಕೃತ ನೀತಿ ಮತ್ತು ಜೀವನ ರೀತಿಗಳನ್ನು ಅವಲಂಬಿಸಿದ್ದೇ ಅದಕ್ಕೆ ಕಾರಣ.

ಪವಿತ್ರ ಕುರ್ ಆನ್ ಹೇಳಿದೆ: “ಆರಂಭದಲ್ಲಿ ಮಾನವರೆಲ್ಲರೂ ಒಂದೇ ಸಮುದಾಯವಾಗಿದ್ದರು. ಅನಂತರ ಅವರು ವಿವಿಧ ತತ್ವಾದರ್ಶಗಳನ್ನು ಉಂಟು ಮಾಡಿಕೊಂಡರು.” (ಪವಿತ್ರ ಕುರ್ ಆನ್, 10:19)

ಭಿನ್ನತೆಯನ್ನು ನಿವಾರಿಸಿ ಐಕ್ಯದ ಪುನರ್ ಸ್ಥಾಪನೆಗಾಗಿ ದೇವನು ತನ್ನ ಪ್ರವಾದಿಗಳನ್ನು ನೇಮಿಸಿದ್ದನು.

“ಆರಂಭದಲ್ಲಿ ಜನರೆಲ್ಲರೂ ಒಂದೇ ಸಂಪ್ರದಾಯದವರಾಗಿದ್ದರು. (ಈ ಸ್ಥಿತಿ ಬಹುಕಾಲ ಉಳಿಯಲಿಲ್ಲ. ಅವರೊಳಗೆ ಭಿನ್ನಾಭಿಪ್ರಾಯಗಳುಂಟಾದುವು ಆಗ ಅಲ್ಲಾಹನು ಸತ್ಯ ಮಾರ್ಗದ ಬಗ್ಗೆ ಸುವಾರ್ತೆ ನೀಡುವವರೂ ಮಿಥ್ಯ ಮಾರ್ಗದ ಬಗ್ಗೆ ಎಚ್ಚರಿಕೆ ಕೊಡುವವರೂ ಆದ ಪ್ರವಾದಿಗಳನ್ನು ರವಾನಿಸಿದನು ಮತ್ತು ಅವರೊಂದಿಗೆ, ಸತ್ಯದ ವಿಷಯದಲ್ಲಿ ಜನರಲ್ಲುಂಟಾಗಿದ್ದ ಭಿನ್ನಾಭಿಪ್ರಾಯಗಳ ಬಗ್ಗೆ ತೀರ್ಪು ನೀಡಲಿಕ್ಕಾಗಿ ಪರಮಸತ್ಯ ಗ್ರಂಥವನ್ನು ಇಳಿಸಿದನು.” (ಪವಿತ್ರ ಕುರ್ ಆನ್, 2:213)

ಆದರೆ ದೇವ ಪ್ರವಾದಿಗಳು ಬಂದಾಗ ಸಮಾಜವು ಅವರನ್ನು ನಿರಾಕರಿಸಿತು. ಹಠದಿಂದ ಪೂರ್ವಜರ ಆಚಾರಗಳನ್ನೇ ಅನುಸರಿಸಿತು. ಇದರಿಂದಾಗಿ ಭಿನ್ನತೆ ನಿವಾರಣೆಯಾಗದೆ ನಿರಂತರ ಮುಂದುವರಿಯಿತು. ಆದ್ದರಿಂದ ಮಾನವರೆಲ್ಲರೂ ಮೂಲಭೂತವಾಗಿ ಒಂದೇ ಸಮುದಾಯದ ಸದಸ್ಯರಾಗಿದ್ದಾರೆ. ಆ ಪ್ರಕಾರ ಬಾಳಬೇಕಾದವರಾಗಿದ್ದಾರೆ.

ಗೌರವಾರ್ಹತೆ
ಇಸ್ಲಾಮಿನ ದೃಷ್ಟಿಯಲ್ಲಿ, ಮಾನವನು ಜಗತ್ತಿನ ಅತಿ ಶ್ರೇಷ್ಠ ಸೃಷ್ಟಿ ಆತನ ಕುಟುಂಬ, ಜಾತಿ, ವರ್ಗ, ವರ್ಣ, ದೇಶ, ಭಾಷೆ, ಇತ್ಯಾದಿ ಏನಾಗಿದ್ದರೂ ಸರಿ, ಜನ್ಮತಃ ಆತನು ಗೌರವಾರ್ಹನು.
ಅಲ್ಲಾಹನು ಹೇಳಿದ್ದಾನೆ: ”ನಾವು ಆದಮರ ಸಂತತಿಗೆ ಶ್ರೇಷ್ಠತೆಯನ್ನು ಪ್ರದಾನ ಮಾಡಿದ್ದುದೂ ಅವರಿಗೆ ನೆಲ, ಜಲಗಳಲ್ಲಿ ಯಾನಗಳನ್ನು ದಯಪಾಲಿಸಿದ್ದುದೂ ಅವರಿಗೆ ಶುದ್ಧ ವಸ್ತುಗಳಿಂದ ಜೀವನಾಧಾರ ನೀಡಿದ್ದುದೂ ನಮ್ಮ ಅನೇಕ ಸೃಷ್ಟಿಗಳ ಮೇಲೆ ಉತ್ಕೃಷ್ಟತೆ ಕೊಡ ಮಾಡಿದುದೂ ನಮ್ಮ ಅನುಗ್ರಹವಾಗಿದೆ.” (ಪವಿತ್ರ ಕುರ್ ಆನ್, 17:70) ಆದ್ದರಿಂದ ಮೂಲಭೂತವಾಗಿ ಎಲ್ಲ ಮಾನವರೂ ವಿಶಿಷ್ಟ ಮತ್ತು ಶುದ್ಧ ಪ್ರಕೃತಿಯವರಾಗಿದ್ದಾರೆ.

ಪವಿತ್ರ ಕುರ್ ಆನ್ ಹೀಗೆಂದಿದೆ: ‘ನಾವು ಮಾನವನನ್ನು ಅತ್ಯುತ್ತಮ ಪ್ರಕೃತಿಯಲ್ಲಿ ಸೃಷ್ಟಿಸಿರುತ್ತೇವೆ.” (ಪವಿತ್ರ ಕುರ್ ಆನ್, 95:4)

ಪ್ರವಾದಿಯವರು ಹೇಳಿದ್ದಾರೆ: “ಎಲ್ಲ ಮಕ್ಕಳೂ ಶುದ್ಧ ಪ್ರಕೃತಿಯಲ್ಲಿ ಜನಿಸುತ್ತವೆ.”

ಆದ್ದರಿಂದ, ಒಬ್ಬನೇ ದೇವನ ಸೃಷ್ಟಿಗಳು ಮತ್ತು ಒಂದೇ ತಂದೆ ತಾಯಿಯ ಮಕ್ಕಳಾಗಿರುವ ಮಾನವರೆಲ್ಲರೂ ಮೂಲಭೂತವಾಗಿ ನಿಷ್ಕಳಂಕರೂ ಗೌರವಾರ್ಹರೂ ಆಗಿದ್ದಾರೆ. ತರುವಾಯ ತಮ್ಮ ದುಷ್ಕೃತ್ಯಗಳಿಂದಾಗಿ ಅವರು ಸ್ವಯಂ ಅಪರಾಧಿಗಳೂ ಹೀನರೂ ಆಗುತ್ತಾರೆ. ಅವುಗಳೇ ಅವರನ್ನು ಕೆಡಿಸಿ ಹಾಳು ಮಾಡುತ್ತವೆ.

ಅಲ್ಲಾಹನು ತಿಳಿಸಿದ್ದಾನೆ. ”ತರುವಾಯ ನಾವು ಅವನನ್ನು ಪಲ್ಲಟಗೊಳಿಸಿ, ನೀಚರಲ್ಲಿ ಅತ್ಯಂತ ನೀಚನಾಗಿ ಮಾಡಿದೆವು. ಆದರೆ, ವಿಶ್ವಾಸವಿರಿಸಿಕೊಂಡ ಮತ್ತು ಸತ್ಕರ್ಮವೆಸಗುತ್ತಿದ್ದವರ ಹೊರತು ಅವರಿಗೆ ಎಂದೂ ಮುಗಿಯದಂತಹ ಸತ್ಪಲವಿದೆ.” (ಪವಿತ್ರ ಕುರ್ ಆನ್, 95:5-6)

ಧಾರ್ಮಿಕ ವಿಶ್ವಾಸ ಭೇದವಿಲ್ಲದೆ ಮಾನವನನ್ನು ಗೌರವಿಸಬೇಕೆಂದು ಇಸ್ಲಾಮ್ ಆಜ್ಞಾಪಿಸಿದೆ. ಒಮ್ಮೆ ಒಂದು ಮೃತದೇಹವನ್ನು ಸಾಗಿಸುತ್ತಿರುವುದನ್ನು ನೋಡಿದ ಪ್ರವಾದಿವರ್ಯರು(ಸ) ಎದ್ದು ನಿಂತರು. ಆಗ ಅನುಯಾಯಿಗಳು ಅವರಿಗೆ ಅದೊಂದು ಯಹೂದಿಯ ಮೃತದೇಹವೆಂದು ತಿಳಿಸಿದರು. ತಕ್ಷಣ ಪ್ರವಾದಿಯವರು(ಸ) ಅವರೂ ಮಾನವರಲ್ಲವೇ? ಎಂದು ಕೇಳಿದರು.

ಹಾಗೆಯೇ ಧಾರ್ಮಿಕ ಭಿನ್ನತೆಯು ಪರಸ್ಪರ ಅಕ್ರಮಗಳಿಗೆ ಹೇತುವಾಗಬಾರದು. ಸತ್ಕಾರ್ಯಗಳಲ್ಲಿ ಮತ್ತು ಕೆಡುಕಿನ ಉಚ್ಚಾಟನೆಯಲ್ಲಿ ವಿಶ್ವಾಸ ಭೇದವಿಲ್ಲದೆ ಪರಸ್ಪರ ಸಹಾಯ ಸಹಕಾರ ನೀಡಬೇಕು.

ಅಲ್ಲಾಹನು ಹೀಗೆ ಆದೇಶಿಸಿದ್ದಾನೆ: ”ಪುಣ್ಯ ಹಾಗೂ ದೇವಭಯದ ಕಾರ್ಯಗಳಲ್ಲಿ ಎಲ್ಲರ ಜೊತೆ ಸಹಕರಿಸಿರಿ ಮತ್ತು ಪಾಪ ಹಾಗೂ ಅತಿರೇಕ ಕಾರ್ಯಗಳಲ್ಲಿ ಯಾರೊಂದಿಗೂ ಸಹಕರಿಸಬೇಡಿರಿ.” (ಪವಿತ್ರ ಕುರ್ ಆನ್, 5:2)

  • ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ..
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …