- @ ಎಸ್ಸೆಮ್ಕೆ ಅನುವಾದ: ಎ.ಎಂ.
ಅಲ್ಲಾಹನ ನಿರ್ದೇಶನದಂತೆ ಇರಾಕಿಗೆ ಪ್ರವಾದಿ ಇಬ್ರಾಹೀಮರೂ, ಅವರಲ್ಲಿ ವಿಶ್ವಾಸ ಇರಿಸಿದ್ದ ಪ್ರವಾದಿ ಲೂತರೂ ವಿದಾಯ ಹೇಳಿದರು. ಅಲ್ಲಿಂದ ನೇರವಾಗಿ ಕನಾನ್ ದೇಶಕ್ಕೆ ಹೊರಟು ಬಂದರು. ಕನಾನ್ ದೇಶವು ಈಗಿನ ಫೆಲಸ್ತೀನ್ ಮತ್ತು ಸಿರಿಯವನ್ನೊಳಗೊಂಡ ನಾಡು ಆಗಿತ್ತು. ಆದರೆ ಅವರು ನಾವು ಎಲ್ಲಿಗೆ ಹೋಗುವುದೆಂದು ಪೂರ್ವ ನಿರ್ಧಾರದಿಂದ ಪ್ರಯಾಣ ಬೆಳೆಸಿರಲಿಲ್ಲ. ಇರಾಕಿನಿಂದ ಹೊರಡುವಾಗ ಅವರು ತೀರ್ಮಾನವನ್ನು ಅಲ್ಲಾಹನಿಚ್ಛೆಗೆ ಮೀಸಲಿಟ್ಟಿದ್ದರು. ಅಲ್ಲಾಹನು ಬಯಸಿದೆಡೆ ಹೋಗಿ ಸಂದೇಶ ಪ್ರಚಾರ ಮಾಡುವುದು ಮಾತ್ರ ಅವರ ತೀರ್ಮಾನ ಆಗಿತ್ತು. ಪ್ರವಾದಿ ಇಬ್ರಾಹೀಂರ ಜೊತಗಿದ್ದ ಸಂಗಡಿಗ ಪ್ರವಾದಿ ಲೂತರು ಅವರ ಸಹೋದರನ ಪುತ್ರನಾಗಿದ್ದರು. ಜೊತೆಗೆ ಪ್ರವಾದಿ ಇಬ್ರಾಹೀಮರ ಪತ್ನಿ ಸಾರ ಕೂಡ ಇದ್ದರು. ಇರಾಕಿನಿಂದ ಹೊರಡುವಾಗ ಇವರಲ್ಲದೆ ಬೇರೆ ಯಾರೂ ಪ್ರವಾದಿ ಇಬ್ರಾಹೀಮರಿಗೆ ಇರಾಕ್ನಲ್ಲಿ ಅನುಯಾಯಿಗಳಾಗಿ ಸಿಕ್ಕಿರಲಿಲ್ಲ. ನಮಗೆ ಈ ಘಟನೆ ಎರಡು ವಿಷಯಗಳನ್ನು ಮನದಟ್ಟು ಮಾಡಿಕೊಡುತ್ತದೆ:
1) ಸಮಕಾಲೀನ ಸಮಾಜದ ಭೌತಿಕ ಸ್ಥಿತಿ ಗತಿಯು ಮನುಷ್ಯನನ್ನು ಅಂದಾಜಿಸುವಂತಹ ಮಾನದಂಡ ಅಲ್ಲ ಎಂಬುದೊಂದು. ಆ ಕಾಲದಲ್ಲಿ ಅಧಿಕಾರ, ಗೌರವ, ಜನರ ನಡುವೆ ಪ್ರಭಾವ, ಸ್ಥಾನಮಾನ, ಪ್ರತಾಪಗಳೆಲ್ಲವೂ ನಮ್ರೂದ್ ಮತ್ತು ಆತನ ಸಂಗಡಿಗರಿಗೆ ಇತ್ತು. ಪ್ರವಾದಿ ಇಬ್ರಾಹೀಮರಿಗಿರಲಿಲ್ಲ. ಇತಿಹಾಸದಲ್ಲಿ ನಮ್ರೂದ್ ಮತ್ತು ಸಂಗಡಿಗರು ಏನೂ ಅಲ್ಲದಂತಾದರು ಮತ್ತು ಅವರನ್ನು ಇಂದಿಗೂ ಅಭಿಶಪಿತರೆಂದು ಸ್ಮರಿಸಲಾಗುತ್ತದೆ. ಆದರೆ, ಬೆಂಬಲಿಸಲು ಯಾರು ಇಲ್ಲದ ಪ್ರವಾದಿ ಇಬ್ರಾಹೀಮರು ಎಲ್ಲ ಕಾಲದಲ್ಲಿ ಆದರಿಸಲ್ಪಡುವವರಾದರು. ಅಂಗೀಕರಿಸಲ್ಪಡುವವರಾದರು. ಇದರಿಂದ ಕಾಲದ ವಿಧಿಯ ಮುಂದೆ ಸಮಕಾಲೀನ ಸಮಾಜದ ನಿಲುವು ಏನೂ ಅಲ್ಲ. ಅದಕ್ಕೂ ಕಾಲದ ವಿಧಿಗೂ ಯಾವುದೇ ಸಂಬಂಧ ಇಲ್ಲ ಎಂಬುದು ಇದರಿಂದ ತಿಳಿಯಬಹುದಾಗಿದೆ.
2) ಹಝ್ರತ್ ಇಬ್ರಾಹೀಮರು ತಮ್ಮ ಮಾತುಗಳನ್ನು ಒತ್ತಿ ಹೇಳಿದರು ಮತ್ತು ತಮ್ಮ ಸಂಗಡ ಬರುವವರು ಯಾರೂ ಇಲ್ಲದೆ ಒಬ್ಬಂಟಿಯಾಗಿ ತಮ್ಮ ಆದರ್ಶವನ್ನು ಘೋಷಣೆ ಮಾಡಿದ್ದರು. ಆದರೂ ಅದು ಅವರ ಕುಟುಂಬ, ಪರಿಸರ ಪ್ರದೇಶ ಅಷ್ಟೇ ಅಲ್ಲ ನಾಡಿನಾದ್ಯಂತ ಸಂಚಲನೆಯನ್ನು ಉಂಟುಮಾಡಿತ್ತು. ಕಂಪನವನ್ನು ಸೃಷ್ಟಿಸಿತು. ನಮ್ರೂದನೆಂಬ ಅನಿಷೇಧ್ಯ ಸರ್ವಾಧಿಕಾರಿಯ ನಿದ್ರೆಗೆ ವಿಘ್ನವುಂಟು ಮಾಡಿತ್ತು. ಆವನೂ ಅಲ್ಲದೆ ಊರಿನ ಸರದಾರರಲ್ಲಿ ಈ ಆದರ್ಶ ಅಸ್ವಾಸ್ಥ್ಯವುಂಟು ಮಾಡಿತು. ಅದುವರೆಗೆ ಹಝ್ರತ್ ಇಬ್ರಾಹೀಮರು ನಿರಂತರ ಬೇಟೆಯಾಡಿದ ಪುರೋಹಿತರ ಸಹಿತ ತಮ್ಮ ಅಧಿಕಾರ ಸ್ಥಾನಮಾನ ಗಳು ಕಳೆದು ಹೋಗುವುವೋ ಎಂದು ಹೆದರಿದರು. ಪ್ರವಾದಿ ಇಬ್ರಾಹೀಮರು ಮುಂದಿಟ್ಟ ಆದರ್ಶ ಅಷ್ಟು ಪ್ರಖರವಾಗಿತ್ತು. ಅವರು ಮೊಳಗಿಸಿದ ಘೋಷಣೆ ಅಮೂಲಾಗ್ರವಾಗಿ ಸಮಾಜವನ್ನು ಪರಿವರ್ತಿಸಲು ಹೋಗುವುದಾಗಿತ್ತು. ಅಂದಿರುವ ವಿಶ್ವಾಸ, ಆಚಾರ, ಆರಾಧನಾ ಕ್ರಮಗಳಿಂದ ಹಿಡಿದು ಊರಿನ ಸಾಮಾಜಿಕ, ಆರ್ಥಿಕ, ಅಧಿಕಾರ ವ್ಯವಸ್ಥೆಯನ್ನು ಆ ಆದರ್ಶ ಬದಲಾಯಿಸುವುದಾಗಿತ್ತು. ಈ ಆದರ್ಶ ಅದೇ ಆದರ್ಶ. ಎಲ್ಲ ಪ್ರವಾದಿಗಳು ಇದನ್ನು ಬಿಗಿಯಾಗಿ ಹಿಡಿದು ಪ್ರಚಾರ ಮಾಡಿದ್ದಂತಹ ಆದರ್ಶ ಅದು.
ಹಾಜರ, ಇಸ್ಮಾಯೀಲ್:
ಪ್ರವಾದಿ ಇಬ್ರಾಹೀಮ್ರು ಮಧ್ಯಪ್ರಾಚ್ಯ ದೇಶದಲ್ಲಿ ಮಾಡಿದ ಸಂದೇಶ ಪ್ರಚಾರ ಯಾತ್ರೆಯ ಕುರಿತು ಪವಿತ್ರ ಕುರ್ಆನ್ನಲ್ಲಿ ವಿವರಗಳಿಲ್ಲ. ಆದರೂ ಕನಾನ್ ದೇಶಕ್ಕೆ ತಲುಪಿದ ಕುರಿತು ಹೀಗೆ ಉದ್ಧರಣೆಯಾಗಿರುವುದನ್ನು ಕಾಣಬಹುದಾಗಿದೆ
“ನಾವು ಅವರನ್ನೂ ಲೂತರನ್ನೂ ರಕ್ಷಿಸಿ ನಾವು ಲೋಕವಾಸಿಗಳಿಗೆ ಸಮೃದ್ಧಿಯನ್ನಿರಿಸಿರು
ವಂತಹ ಭೂಭಾಗಕ್ಕೆ ಕೊಂಡೊಯ್ದೆವು.” (21:71)
ಈ ಕುರಿತು ಬೈಬಲ್ ಹೀಗೆ ಹೇಳುತ್ತದೆ-
“ಯಹೋವ ಅಬ್ರಾಹಮರೊಡನೆ ಹೇಳಿದ್ದೇನೆಂದರೆ, ನೀನು ನಿನ್ನ ದೇಶವನ್ನೂ ತರ್ಕಿಸುವವರನ್ನೂ ಪಿತೃ ಭವನವನ್ನೂ ತೊರೆದು ಹೊರಟು ನಿನ್ನನ್ನು ಕಾಣಲು ಉದ್ದೇಶಿಸುವ ದೇಶಕ್ಕೆ ಹೋಗು. ನಾನು ನಿನ್ನ ದೊಡ್ಡದಾದೊಂದು ಜಾತಿಯಾಗಿ ಮಾಡುವೆನು. ನಿನ್ನನ್ನು ಅನುಗ್ರಹಿಸಿ ನಿನ್ನ ಹೆಸರನ್ನು ದೊಡ್ಡದಾಗಿಸುವೆನು. ನೀನು ಒಂದು ಅನುಗ್ರಹವಾಗಿರುವೆ. ನಿನ್ನನ್ನು ಅನುಗ್ರಹಿಸುವವರನ್ನು ನಾನು ಅನುಗ್ರಹಿಸುವೆನು. ನಿನ್ನನ್ನು ಶಪಿಸುವವರನ್ನು ನಾನೂ ಶಪಿಸುವೆನು. ಅಂದರೆ ಭೂಮಿಕ ಸಕಲವಂಶಗಳೂ ಅನುಗ್ರಹಿಸಲ್ಪಡುವುದು. ಯಹೋವನು ತನ್ನೊಡನೆ ಆದೇಶಿಸಿದಂತೆ ಅಬ್ರಾಹಾಮರು ಹೊರಟರು. ಲೂತರೂ ಅವರೊಡನೆ ಹೋದರು. ಅವರು ಕಾನಾನ್ ದೇಶಕ್ಕೆ ಹೋಗಲು ಹೊರಟರು. ಕಾನಾನ್ ದೇಶಕ್ಕೆ ತಲುಪಿದರು.” (ಉತ್ಪತ್ತಿ, 12:115)
ನಂತರ ಕಾನಾನ್ ದೇಶದಲ್ಲಿ ಅವರು ಎಷ್ಟು ಕಾಲ ತಂಗಿದ್ದರು ಮತ್ತು ಏನೆಲ್ಲ ಮಾಡಿದರೆಂದು ವಿವರಿಸುವ ಸ್ಪಷ್ಟವಾದ ಪ್ರಮಾಣಗಳಿಲ್ಲ. ಅಲ್ಲಿ ವಾಸವಿದ್ದಾಗ ಈಜಿಪ್ಟ್ ಸಂದರ್ಶಿಸಿದ್ದು ಮತ್ತು ಅಲ್ಲಿನ ಆಡಳಿತಗಾರ ಹಾಜರಾರನ್ನು ಪ್ರವಾದಿ ಇಬ್ರಾಹೀಮರಿಗೆ ಉಡುಗೊರೆ ನೀಡಿದ್ದು ಹದೀಸ್ ಗ್ರಂಥಗಳಲ್ಲಿ ವರದಿಯಾಗಿವೆ. ಆದರೆ ಇದಕ್ಕೆ ಸಂಬಂಧಪಟ್ಟು ಬಂದಿರುವ ಎಲ್ಲ ವಿವರಗಳು ಸ್ವೀಕಾರಾರ್ಹವೋ, ಪ್ರಮಾಣಬದ್ಧವೋ ಆಗಿಲ್ಲ. ಬೈಬಲಲ್ಲಿ ಅದಕ್ಕೆ ಸಂಬಂಧಿಸಿದ ವಿವರಣೆಗಳನ್ನು ಅವಲಂಬಿಸುವುದಾದರೆ ಅದರಲ್ಲಿರುವಂತೆ ಮತ್ತು ಕೆಲವು ವ್ಯತ್ಯಾಸಗಳೊಂದಿಗೆ ಅವು ಅನುವಾದಿಸಲ್ಪಟ್ಟಿವೆ ಎನ್ನಬಹುದು. ಪ್ರವಾದಿ ಇಬ್ರಾಹೀಮರ ಮಹಾನ್ ವ್ಯಕ್ತಿತ್ವಕ್ಕೆ ಸಂಬಂಧಿಸದ ಕಟ್ಟು ಕಥಗಳು ಅಲ್ಲಿವೆ. ಯಾರೋ ಕಥೆಗಳನ್ನು ಕಟ್ಟಿರುವ ಸಾಧ್ಯತೆಯೇ ಹೆಚ್ಚು. ಒಟ್ಟಿನಲ್ಲಿ ಮನದಟ್ಟಾಗುವುದೇನೆಂದರೆ ಪ್ರವಾದಿ ಇಬ್ರಾಹೀಮರು ಈಜಿಪ್ಟ್ ಸಂದರ್ಶಿಸಿದ್ದರು ಎಂಬುದು ಮತ್ತು ಅಲ್ಲಿಂದ ಅವರಿಗೆ ಹಾಜರರು ಸಿಕ್ಕಿದರು ಎಂಬುದಾಗಿದೆ ಮತ್ತು ಹಾಜರ ಗುಲಾಮ ಮಹಿಳೆಯಾಗಿದ್ದರೇ ಅಥವಾ ಅಲ್ಲವೇ ಎಂಬುದಂತೂ ಸ್ಪಷ್ಟವಾಗಿ ತೀರ್ಮಾನಿಸಲಾಗದ ವಿವಾದಯುತವಾದ ವಿಷಯವಾಗಿ ಉಳಿದುಕೊಂಡಿದೆ.
ಪ್ರವಾದಿ ಇಬ್ರಾಹೀಮರು ಕನಾನ ದೇಶದಲ್ಲಿದ್ದಾಗ ಇಸ್ಮಾಯೀಲ್ ಎಂಬ ಪುತ್ರನ ಜನನವಾಯಿತೆಂದು ಪವಿತ್ರ ಕುರ್ಆನ್ ಮತ್ತು ಬೈಬಲ್ ಹೇಳಿವೆ.
ಪ್ರವಾದಿ ಇಬ್ರಾಹೀಮರು ಪ್ರಾರ್ಥಿಸಿದರು.
“ಪ್ರಭೂ! ನನಗೆ ಸಜ್ಜನನಾದ (ಸಜ್ಜನರ ಸಾಲಿಗೆ ಸೇರುವ) ಒಬ್ಬ ಮಗನನ್ನು ದಯಪಾಲಿಸು. (ಈ ಪ್ರಾರ್ಥನೆಗೆ ಉತ್ತರವಾಗಿ) ನಾವು ಅವರಿಗೆ ಒಬ್ಬ ಸಹನಾಶೀಲ ಪುತ್ರನ ಸುವಾರ್ತೆ ನೀಡಿದೆವು.” (37: 100-101)
ಈ ಕುರಿತು ಬೈಬಲಿನಲ್ಲಿ ಹೀಗೆ ಇರುವುದನ್ನು ನಾವು ಕಾಣಬಹುದಾಗಿದೆ-
“ಅಬ್ರಾಹಾಮರು ಹೇಳಿದರು: ಕರ್ತಾರನಾದ ಯಹೋವನೇ, ನೀನು ನನಗೆ ಏನು ಕೊಡುವೆ? ನಾನು ಮಕ್ಕಳಿಲ್ಲದವನಾಗಿ ನಡೆದಾಡುತ್ತಿರುವೆನಷ್ಟೇ. ನಿನ್ನ ಉದರದಿಂದ ಹೊರಟವನೇ ನಿನ್ನ ಹಕ್ಕುದಾರ ನಾಗುವನು ಎಂದು ಅವನಿಗೆ ಯಹೋವ ಹೇಳಿದನು. ನಂತರ ಅವನು ಅವನನ್ನು ಹೊರ ತಂದನು. ನೀನು ಆಕಾಶಕ್ಕೆ ನೋಡು. ಎಣಿಸಲು ಸಾಧ್ಯವಿದ್ದರೆ ಎಣಿಸು ಎಂದು ಆದೇಶಿಸಿದನು. ನಿನ್ನ ಸಂತತಿ ಹೀಗಾಗುವುದು ಎಂದು ಅವನೊಡನೆ ಆದೇಶಿಸಿದನು.” (ಉತ್ಪತ್ತಿ, 15:35)
ಹೀಗೆ ಹಾಜರಾ ಗರ್ಭ ಧರಿಸಿದರು. ಇಸ್ಮಾಯೀಲ್ರಿಗೆ ಜನ್ಮ ನೀಡಿದರು.
“ಅಬ್ರಾಹಾಮನಿಗೆ ಹಾಗೋರ್ ಒಂದು ಪುತ್ರನನ್ನು ಹೆತ್ತರು. ಹಾಗೋರು ಜನ್ಮನೀಡಿದ ಪುತ್ರನಿಗೆ ಅಬ್ರಾಂ ಯಿಶ್ಮಾಯೇಲ್ ಎಂದು ಹೆಸರಿಟ್ಟರು. ಹಾಗೋ ಯಿಶ್ಮಾಯೇಲನನ್ನು ಪಡೆದಾಗ ಅಬ್ರಾಮನಿಗೆ ಎಂಬತ್ತಾರು ವರ್ಷ ವಯಸ್ಸಾಗಿತ್ತು.” (ಉತ್ಪತ್ತಿ, 16 15,16).
ಮಕ್ಕಾ ಕಣಿವೆಯಲ್ಲಿ:
ಪ್ರವಾದಿ ಇಬ್ರ್ರಾಹೀಮರಿಗೂ, ಪ್ರಿಯತಮೆ ಹಾಜರಾರಿಗೂ, ಪುತ್ರ ಇಸ್ಮಾಯೀಲರಿಗೂ ಮಹತ್ತರವಾದ ಕೆಲವು ನಿಯೋಗಗಳನ್ನು (ಹೊಣೆಗಾರಿಕೆ ಗಳನ್ನು) ನಿರ್ವಹಿಸುವುದಿತ್ತು. ಅವರ ಉತ್ತಮ ಹೆಸರು, ಮಹತ್ಕಾರ್ಯಗಳು, ತ್ಯಾಗ ಸ್ಮರಣೆಗಳು ಎಲ್ಲ ಕಡೆಯೂ ಲೋಕಾಂತ್ಯದವರೆಗೂ ಉಳಿಯುವ ಅತ್ಯುಜ್ವಲ ನಿಯೋಗಗಳು ಅವು ಆಗಿವೆ.
ಆದ್ದರಿಂದ ಅಲ್ಲಾಹನ ನಿರ್ದೇಶದಂತೆ ಕನಾನ್ ದೇಶದಿಂದ ಪ್ರವಾದಿ ಇಬ್ರಾಹೀಮರು ಹಾಜರಾ ಮತ್ತು ತಮ್ಮ ಪುತ್ರ ಇಸ್ಮಾಯೀಲರನ್ನು ಕರೆದು ಕೊಂಡು ಹೊರಟರು. ಮೂವತ್ತು ದಿವಸ ಪ್ರಯಾಣಿಸಿ ಮಕ್ಕಾ ಕಣಿವೆಗೆ ತಲುಪಿದರು. ಅಂದು ಅದು ನೀರಿಲ್ಲದ ಬರಡು ಪ್ರದೇಶವಾಗಿತ್ತು. ಆದ್ದರಿಂದ ಫಲ ಸಮೃದ್ಧತೆಯಿರಲಿಲ್ಲ. ಆದ್ದರಿಂದ ಅದು ಜನರು ನೆಲೆಸದ ನಿರ್ಜನ ಪ್ರದೇಶವೂ ಆಗಿತ್ತು. ಈ ವಿಷಯವ ನ್ನು ಪವಿತ್ರ ಕರ್ಆನ್ ಹೀಗೆ ವಿವರಿಸುತ್ತಿದೆ-
“ಓ ನನ್ನ ಪ್ರಭೂ, ನಾನು ನನ್ನ ಸಂತತಿಯ ಒಂದು ಭಾಗವನ್ನು ಒಂದು ಬಂಜರು ಕಣಿವೆಯಲ್ಲಿ ನಿನ್ನ ಸನ್ಮಾನ್ಯ ಗೃಹದ ಬಳಿ ತಂದು ನೆಲೆಗೊಳಿಸಿದ್ದೇನೆ. ಓ ನನ್ನ ಪ್ರಭೂ, ಇವರು ನಮಾಝನ್ನು ಸಂಸ್ಥಾಪಿಸಲೆಂದು ಹೀಗೆ ಮಾಡಿದ್ದೇನೆ. ಆದುದರಿಂದ ನೀನು ಜನಮನಗಳು ಇವರ ಕಡೆಗೆ ಒಲಿಯುವಂತೆ ಮಾಡು ಮತ್ತು ಇವರಿಗೆ ತಿನ್ನಲು ಫಲಗಳನ್ನು ನೀಡು. ಇವರು ಕೃತಜ್ಞರಾಗಲೂ ಬಹುದು.”
ಓ ನನ್ನ ಪ್ರಭೂ, ನಾವು ಅಡಗಿಸುವುದನ್ನೂ ಬಹಿರಂಗಪಡಿಸುವುದನ್ನೂ ನೀನು ಬಲ್ಲವನಾಗಿರುತ್ತಿ ಮತ್ತು ನಿಜಕ್ಕೂ ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನಿಂದ ಏನೊಂದೂ ಅಡಗಿರುವುದಿಲ್ಲ.” (14: 37-38)
“ಇಬ್ರಾಹೀಮರು ಪ್ರಾರ್ಥಿಸಿದ ಸಂದರ್ಭವನ್ನು ನೆನೆಯಿರಿ. “ಓ ನನ್ನ ಪ್ರಭೂ, ಈ ಪಟ್ಟಣ (ಅರ್ಥಾತ್ ಮಕ್ಕಾ)ವನ್ನು ಶಾಂತಿ ನಗರವನ್ನಾಗಿ ಮಾಡು ಮತ್ತು ನನ್ನನ್ನೂ ನನ್ನ ಸಂತತಿಯನ್ನೂ ವಿಗ್ರಹಾರಾಧ ನೆಯಿಂದ ರಕ್ಷಿಸು.”
“ಓ ನನ್ನ ಪ್ರಭೂ, ಈ ವಿಗ್ರಹಗಳು ಅನೇಕರನ್ನು ದಾರಿಗೆಡಿಸಿವೆ.(ಇವು ನನ್ನ ಸಂತತಿಯನ್ನೂ ಪಥಭ್ರಷ್ಟಗೊಳಿಸಬಿಡಲೂ ಬಹುದು. ಆದುದದರಿಂದ ಅವರ ಪೈಕಿ) ನನ್ನ ಪದ್ಧತಿಯಲ್ಲಿ ನಡೆಯುವವವನು ನನ್ನವನು ಮತ್ತು ಯಾರಾದರೂ ನನ್ನದಕ್ಕೆ ವಿರುದ್ಧವಾದ ರೀತಿಯಲ್ಲಿ ನಡೆದರೆ, ನಿಶ್ಚಯವಾಗಿಯೂ ನೀನು ಕ್ಷಮಾಶೀನೂ ಕರುಣಾನಿಧಿಯೂ ಆಗಿರುತ್ತಿ.” (14: 35-36)
“ಓ ನನ್ನ ಪ್ರಭೂ ನೀನು ನನ್ನನ್ನು ನಮಾಝ್ ಸಂಸ್ಥಾಪಿಸುವವನನ್ನಾಗಿ ಮಾಡು. ನನ್ನ ಸಂತತಿಯಿಂದಲೂ (ಈ ಕಾರ್ಯ ವೆಸಗುವವರನ್ನು ಎಬ್ಬಿಸು) ಓ ನನ್ನ ಪ್ರಭೂ, ನನ್ನ ಪ್ರಾರ್ಥನೆಯನ್ನು ಸ್ವೀಕರಿಸು.” (14: 40)
IslamKannada News Portal

