ರಮಝಾನ್ ತಿಂಗಳಿಗೆ ಹೆಣ್ಣು-ಗಂಡು ಎಂಬ ಬೇಧವಿಲ್ಲ. ಗಂಡು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಉಪವಾಸ ಇರುತ್ತಾನೋ ಮತ್ತು ಏನೆಲ್ಲ ಷರತ್ತುಗಳನ್ನು ಪಾಲಿಸುತ್ತಾನೋ ಅವೆಲ್ಲವೂ ಹೆಣ್ಣಿಗೂ ಅನ್ವಯವಾಗುತ್ತದೆ. ಆದರೆ ಗಂಡಿಗಿಲ್ಲದ ಒಂದೆರಡು ರಿಯಾಯಿತಿಗಳು ಹೆಣ್ಣಿಗಿವೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಝರಿತರಾಗುವ ಮುಟ್ಟಿನ ಅವಧಿಯಲ್ಲಿ ಆಕೆ ಉಪವಾಸ ಆಚರಿಸಬೇಕಿಲ್ಲ. ಗರ್ಭಿಣಿಯರಿಗೂ ಮತ್ತು ಎದೆಹಾಲು ಕೊಡುವ ತಾಯಂದಿರಿಗೂ ರಿಯಾಯಿತಿಗಳಿವೆ. ಹಾಗೆಯೇ, ಐದು ಹೊತ್ತಿನ ನಮಾಝ್ ಗಾಗಿ ಮಸೀದಿಗೆ ಹೋಗುವುದು ಗಂಡಿನ ಪಾಲಿಗೆ ಕಡ್ಡಾಯ. ಆದರೆ ಹೆಣ್ಣಿಗೆ ಇಲ್ಲೂ ರಿಯಾಯಿತಿಗಳಿವೆ. ಮಸೀದಿಗೆ ಹೋಗುವ ಅಥವಾ ಹೋಗದಿರುವ ಆಯ್ಕೆಯನ್ನು ಅಕೆಗೇ ಬಿಟ್ಟು ಬಿಡಲಾಗಿದೆ. ಗಂಡಿಗೆ ಹೋಲಿಸಿದರೆ ಇಲ್ಲೂ ಹೆಣ್ಣು ಗೆಲುವಾಗುತ್ತಾಳೆ. ಆಕೆಗಿರುವ ಈ ರಿಯಾಯಿತಿಗಳಾವುವೂ ಗಂಡಿಗಿಲ್ಲ. ಆದರೂ ರಮಝಾನ್ನಲ್ಲಿ ಹೆಣ್ಣು ಎಷ್ಟು ಸುಖಿ?
ಹೆಣ್ಣು ನೌಕರಿಯಲ್ಲಿ ಇರಲಿ, ಇಲ್ಲದೇ ಇರಲಿ ಸಾಮಾನ್ಯವಾಗಿ ಆಕೆಯೇ ಅಡುಗೆ ಕೋಣೆಯ ಖಾಯಂ ನಿವಾಸಿ. ಬೆಳಗ್ಗಿನಿಂದ ಸಂಜೆಯವರೆಗೆ ದುಡಿದು ಬರುವ ಗಂಡು, ಆ ಬಳಿಕ ಇಫ್ತಾರ್, ನಮಾಝ್ ಮತ್ತು ಕುರ್ಆನ್ ಪಾರಾಯಣದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ. ಹಾಗೆಯೇ ವಿಶ್ರಾಂತಿಗೂ ಸಮಯ ಕಂಡುಕೊಳ್ಳುತ್ತಾನೆ. ಆದರೆ, ಹೆಣ್ಣಿನ ದಿನಚರಿ ಇಷ್ಟು ಸಲೀಸಲ್ಲ.
ಉಪವಾಸದ ಸಮಯದಲ್ಲಿ ನಾಲಗೆಯು ರುಚಿಯನ್ನು ಬಯಸುತ್ತದೆ. ಸುಮಾರು 14ರಿಂದ 15 ಗಂಟೆಯವರೆಗೆ ಸತತವಾಗಿ ಉಪವಾಸವಿರುವುದರಿಂದ ದೇಹ ಹೆಚ್ಚೆಚ್ಚು ಪೌಷ್ಠಿಕ ಆಹಾರವನ್ನು ಬೇಡುತ್ತದೆ. ಇವೆರಡನ್ನು ಗಮನದಲ್ಲಿ ಇಟ್ಟುಕೊಂಡೇ ಹೆಣ್ಣು ಅಡುಗೆ ಮನೆಯಲ್ಲಿ ಸಕ್ರಿಯಳಾಗಿರಬೇಕಾಗುತ್ತದೆ. ರುಚಿಕಟ್ಟಾಗಿರಬೇಕು, ಆಹಾರದಲ್ಲಿ ವೈವಿಧ್ಯತೆಗಳಿರಬೇಕು, ಬಿಸಿಯಾಗಿರಬೇಕು ಮತ್ತು ಸಮಯಕ್ಕೆ ಸರಿಯಾಗಿ ತಯಾರಾಗಬೇಕು ಎಂಬ ನಾಲ್ಕಂಶದ ಒತ್ತಡದೊಂದಿಗೆ ಹೆಣ್ಣು ಅಡುಗೆ ಮನೆಯಲ್ಲಿ ಬೇಯಬೇಕಾಗುತ್ತದೆ. ಆದ್ದರಿಂದ, ಸಂಜೆಯ ವೇಳೆ ಅಡುಗೆ ಮನೆ ಸೇರುವ ಹೆಣ್ಣು, ಕಾಲಿಗೆ ಚಕ್ರ ಕಟ್ಟಿಕೊಂಡು ಸಕ್ರಿಯವಾಗುತ್ತಾಳೆ. ಸಾಮಾನ್ಯವಾಗಿ,
ಉಪವಾಸದ ಆಯಾಸ ಗೊತ್ತಾಗುವುದೇ ಮಧ್ಯಾಹ್ನದ ನಂತರ. ಸಂಜೆಯ ನಂತರವಂತೂ ಹೊಟ್ಟೆ, ದೇಹ, ಮನಸ್ಸು ಎಲ್ಲವೂ ಉಪವಾಸವಿರುವುದನ್ನು ಕ್ಷಣ ಕ್ಷಣಕ್ಕೂ ನೆನಪಿಸುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿ ಚಟುವಟಿಕೆಯಲ್ಲಿರುವ ಹೆಣ್ಣು ಮನೆಯ ಪುರುಷರಿಂದ ನೆರವು ಬಯಸುತ್ತಿರುತ್ತಾಳೆ. ಮಾಂಸ ಮತ್ತು ತರಕಾರಿಯನ್ನು ಕತ್ತರಿಸುವುದು, ಹಣ್ಣು-ಹಂಪಲುಗಳಿದ್ದರೆ ಅವನ್ನು ಇಫ್ತಾರ್ಗೆ ನೀಟಾಗಿ ಸಿದ್ಧಪಡಿಸುವುದು, ನೀರುಳ್ಳಿ-ಬೆಳ್ಳುಳ್ಳಿ ಸಹಿತ ಪದಾರ್ಥಕ್ಕೆ ಬೇಕಾದವುಗಳನ್ನು ಸಜ್ಜುಗೊಳಿಸುವುದು, ಮಕ್ಕಳನ್ನೆಲ್ಲಾ ಒಂದೆಡೆ ಕೂರಿಸಿ ನೀರು, ಖರ್ಜೂರವನ್ನು ತಂದಿಟ್ಟು ಇಫ್ತಾರ್ಗಾಗಿ ಕಾಯುವುದು.. ಇತ್ಯಾದಿಗಳನ್ನೆಲ್ಲ ಗಂಡು ಮಾಡುವುದರಿಂದ ಆಕೆಯ ಮೇಲಿನ ಒತ್ತಡ ಸಾಕಷ್ಟು ಕಡಿಮೆಯಾಗುತ್ತದೆ. ಹಾಗೆಯೇ, ಇಫ್ತಾರ್ನ ಬಳಿಕ ದೇಹ ವಿಶ್ರಾಂತಿಯನ್ನು ಬಯಸುತ್ತದೆ. ಅದೇ ಸಂದರ್ಭದಲ್ಲಿ ಸಿಂಕ್ ನಲ್ಲಿ ಪಾತ್ರೆಗಳೂ ಬಿದ್ದಿರುತ್ತವೆ. ಗಂಡು ಇಲ್ಲೂ ಹೆಣ್ಣಿಗೆ ನೆರವಾಗಬಹುದು.
ನಮಾಝ್, ಕುರ್ಆನ್ ಪಾರಾಯಣ, ಪ್ರಾರ್ಥನೆಗೆ ಪೂರಕ ವಾತಾವರಣ ಇತ್ಯಾದಿಗಳೆಲ್ಲ ಗಂಡಿನ ಅಗತ್ಯವಷ್ಟೇ ಅಲ್ಲ, ಹೆಣ್ಣಿನ ಅಗತ್ಯ ಕೂಡ. ಅದಕ್ಕಾಗಿ ಆಕೆ ಸಮಯವನ್ನು ಹೊಂದಿಸಿಕೊಳ್ಳಬೇಕಾಗಿದೆ. ಗಂಡಿನ ಸಹಕಾರವಿಲ್ಲದಿದ್ದರೆ ಇದು ಕಷ್ಟಸಾಧ್ಯ. ಹೆಣ್ಣನ್ನು ಅಡುಗೆ ಮನೆಯಲ್ಲಿ ಬೇಯಿಸಿ ಗಂಡು ಆರಾಧನೆಯಲ್ಲಿ ತೊಡಗುವುದು ಅನ್ಯಾಯ. ರಮಝಾನ್ ಹೆಣ್ಣು ಸ್ನೇಹಿಯಾಗಬೇಕು. ಹಾಗೆ ಆಗಬೇಕಾದರೆ ಅದಕ್ಕೆ ಗಂಡಿನ ಬೆಂಬಲ ಬೇಕು. ರಮಝಾನ್ ಎಂಬುದು ಸಂಪೂರ್ಣ ಬದುಕನ್ನು ನೇರ್ಪುಗೊಳಿಸಲು ಬಂದ ತರಬೇತಿ ಎಂಬ ಪ್ಯಾಕೇಜ್. ಈ ಪ್ಯಾಕೇಜ್ನಲ್ಲಿ ಆರಾಧನೆ, ಹಸಿವು, ಒಳಿತುಗಳು, ಮೌಲ್ಯ ನಿಷ್ಠೆ ಎಂಬುದಷ್ಟೇ ಇರುವುದಲ್ಲ, ಮಹಿಳೆಯರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವರಿಗೆ ಬೆಂಬಲ ಮತ್ತು ಸಹಕಾರ ನೀಡುವುದೂ ಕೂಡಾ ಸೇರಿದೆ. ಪ್ರವಾದಿ ಮುಹಮ್ಮದ್(ಸ) ಅದಕ್ಕೆ ಅತ್ಯುತ್ತಮ ಮಾದರಿಯಾಗಿದ್ದಾರೆ.
ಈ ಬಾರಿಯ ರಮಝಾನ್ ಹೆಣ್ಣು ಸ್ನೇಹಿಯಾಗಲಿ ಮತ್ತು ಅದಕ್ಕೆ ಪೂರಕ ವಾತಾವರಣವನ್ನು ಗಂಡು ನಿರ್ಮಿಸಿ ಕೊಡಲಿ.
IslamKannada News Portal
