Home / ಲೇಖನಗಳು / ದುಃಖ, ನೋವನ್ನು ಇಳಿಸಿಬಿಡಿ

ದುಃಖ, ನೋವನ್ನು ಇಳಿಸಿಬಿಡಿ

@ ಮುಹಮ್ಮದ್ ಯೂಸುಫ್ ಇಸ್ಲಾಹಿ

ಆತ್ಮವಿಶ್ವಾಸ ಕುಂದಿ ಹೋಗದೆ, ಸಂದಿಗ್ಧ ಘಟ್ಟಗಳನ್ನು ಅತ್ಯಂತ ಶಾಂತಿಯಿಂದ ಎದುರಿಸಿ, ದುಃಖ ಹಾಗೂ ಸಂಕಟಗಳಲ್ಲಿ ಮಿತಿಯ ಪರಿಧಿಯನ್ನು ಮೀರದಂತೆ ನಾವು  ಬದುಕಬೇಕು. ದುಃಖ, ದುರಂತ, ಪರೀಕ್ಷೆ, ಆಪತ್ತು ಇವುಗಳಿಂದೆಲ್ಲಾ ಮುಕ್ತನಾದ ಯಾರೂ ಈ ಲೋಕದಲ್ಲಿ ಇರಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸುವ  ವಿಷಯದಲ್ಲಿ ಸತ್ಯವಿಶ್ವಾಸಿ ಮತ್ತು ಅವಿಶ್ವಾಸಿಯ ನಡುವೆ ಬಹಳ ವ್ಯತ್ಯಾಸವಿದೆ. ದುಃಖ ನೋವು ಸಂಕಟಗಳಿಂದ ಪರಿಭ್ರಾಂತವಾಗಿ ನಿರಾಶೆಯ ಕಡಲಲ್ಲಿ ಮುಳುಗಿ ಕೆಲವೊಮ್ಮೆ ಆತ್ಮಹತ್ಯೆಯಲ್ಲಿ ಅಭಯ ಹುಡುಕುವವನೇ ಅವಿಶ್ವಾಸಿ. ಆದರೆ ದೊಡ್ಡ ದೊಡ್ಡ ದುರಂತಗಳು ಸಂಭವಿಸಿದರೂ, ಸಹನೆ, ಕ್ಷಮೆ, ಧೈರ್ಯವನ್ನು ಕೈಬಿಡದೆ ಬಂಡೆ ಕಲ್ಲಿನಂತೆ ಅಚಲವಾಗಿ ನಿಲ್ಲುವವನೇ ಸತ್ಯವಿಶ್ವಾಸಿ. ಸಂಭವಿಸುತ್ತಿರುವುದೆಲ್ಲಾ ದೇವನ ತೀರ್ಮಾನವೆಂದೂ, ದೈವಿಕವಾದ ಪ್ರತಿಯೊಂದು ವಿಧಿಯ ಹಿಂದೆಯೂ ಒಳಿತು ಮತ್ತು ಯುಕ್ತಿ ಇದೆಯೆಂದೇ ಆತ ಭಾವಿಸುತ್ತಾನೆ. ಅಲ್ಲಾಹನು ಯಾವುದೇ ಕಾರ್ಯವನ್ನು ಮಾಡುವುದಾದರೂ ಅದು ತನ್ನ ದಾಸನ ಒಳಿತಿಗಾಗಿಯೆಂದೂ, ಅವುಗಳಲ್ಲೆಲ್ಲಾ  ಒಳಿತಿದೆಯೆಂದೂ ಭಾವಿಸುವುದರಿಂದ ಮಾನಸಿಕ, ಆಧ್ಯಾತ್ಮಿಕ, ಶಾಂತಿಯೂ ನೆಮ್ಮದಿಯೂ ಲಭಿಸುತ್ತದೆ. ಇದು ದುಃಖವನ್ನು ಸಾಂತ್ವನವಾಗಿ ಬದಲಾಯಿಸುತ್ತದೆ. ಅಲ್ಲಾಹನು ಹೇಳುತ್ತಾನೆ: “ಭೂಮಿಯ ಮೇಲೆ ಅಥವಾ ನಿಮ್ಮ ಮೇಲೆ ಎರಗುವ ಯಾವ ಸಂಕಷ್ಟವೂ ನಾವು ಅದನ್ನು ಸೃಷ್ಟಿಸುವುದಕ್ಕೆ ಮುಂಚೆ ಒಂದು ಗ್ರಂಥದಲ್ಲಿ ಬರೆದಿಟ್ಟುಕೊಳ್ಳದೆ ಇಲ್ಲ. ಖಂಡಿತವಾಗಿಯೂ ಹೀಗೆ ಮಾಡುವುದು ಅಲ್ಲಾಹನಿಗೆ ಸುಲಭದ ಕಾರ್ಯ. ನಿಮಗುಂಟಾಗುವ ಯಾವುದೇ ನಷ್ಟಕ್ಕಾಗಿ ದುಃಖಿಸಬಾರದು.” (ಅಲ್ ಹದೀದ್: 22-23)

ದೊಡ್ಡ ದೊಡ್ಡ ದುರಂತಗಳನ್ನೂ ಅಲ್ಲಾಹನ ತೀರ್ಮಾನ ಎಂದು ಅರ್ಥಮಾಡಿಕೊಳ್ಳುವುದರಿಂದ ದುಃಖದಿಂದ ಮುಕ್ತನಾಗಿ ಸ್ವಸ್ಥತೆ ಉಂಟಾಗಲು ಸಾಧ್ಯವಾಗುವುದು. ಪ್ರವಾದಿ(ಸ)ರು ಹೇಳಿದರು: “ಸತ್ಯವಿಶ್ವಾಸಿಯ ವಿಷಯ ಆಶ್ಚರ್ಯಕರವಾಗಿದೆ. ಅವನ ಎಲ್ಲಾ ಕಾರ್ಯಗಳನ್ನು ಅವನು ಒಳಿತೆಂದು ಭಾವಿಸುತ್ತಾನೆ. ರೋಗದ ಮೂಲಕ ಅವನು ಪರೀಕ್ಷಿಸಲ್ಪಡುವಾಗ ಸಹನೆಯಿಂದ ಅವನು ಅದನ್ನು ಎದುರಿಸುತ್ತಾನೆ. ಆಗ ಅದು ಅವನಿಗೆ ಒಳಿತಾಗಿ ಮಾರ್ಪಡುತ್ತದೆ. ಸಂತೋಷ ಉಂಟಾದಾಗ ಆತ ಕೃತಜ್ಞತೆ ಅರ್ಪಿಸುವುದರ ಮೂಲಕ ಅದು ಒಳಿತಾಗಿ ಪರಿಣಮಿಸುತ್ತದೆ.” ಓರ್ವ ಮುಸ್ಲಿಮ್ ಏನಾದರೂ ದುಃಖದ ವಾರ್ತೆಗಳನ್ನು ಕೇಳುವಾಗಲೋ, ನಷ್ಟ ಉಂಟಾಗುವಾಗಲೋ ಕೂಡಲೇ `ಇನ್ನಲಿಲ್ಲಾಹಿ ವಇನ್ನಾ ಇಲೈಹಿ ರಾಜಿವೂನ್’ ಎಂದು ಉಚ್ಚರಿಸುತ್ತಾನೆ/ಳೆ. ನಮ್ಮ ಕೈಯಲ್ಲಿರುವುದೆಲ್ಲವೂ ಅಲ್ಲಾಹನು ನೀಡಿದ್ದೆಂದೂ, ಅದನ್ನು ಅವನೇ ಮರಳಿ ಪಡೆದಿದ್ದಾನೆಂದೂ ಆ ಮೂಲಕ ಹೇಳಲಾಗುತ್ತದೆ. ನಾವೂ ಅವನವರು: ಅವನೆಡೆಗೇ ಮರಳುವವರು. ನಾವು ಯಾವಾಗಲೂ ದೇವನ ವಿಧಿಯಲ್ಲಿ ಸಂಪ್ರೀತರಾಗುವವರು.  ಅವನು ಮಾಡುವ ಕಾರ್ಯಗಳಲ್ಲೆಲ್ಲಾ ಯುಕ್ತಿ, ಒಳಿತು, ನ್ಯಾಯವೇ ತುಂಬಿದೆ. ಅವನು ಮಾಡುವುದೆಲ್ಲವೂ ಒಳಿತಿಗಾಗಿ ಆಗಿರುತ್ತದೆ. ಅಲ್ಲಾಹನು ಹೇಳುತ್ತಾನೆ, “ನಾವು  ನಿಮ್ಮನ್ನು ಭಯಾ ಶಂಕೆ, ಹಸಿವು, ಧನಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೊಳಪಡಿಸಿ ಆವಶ್ಯವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ  ವಹಿಸಿದವರಿಗೆ ಸುವಾರ್ತೆ ನೀಡಿರಿ. ಅಂತಹವರ ಮೇಲೆ ವಿಪತ್ತೇನಾದರೂ ಎರಗಿದಾಗ ಅವರು “ನಿಶ್ಚಯವಾಗಿಯೂ ನಾವು ಅಲ್ಲಾಹನವರು ಮತ್ತು ಅಲ್ಲಾಹನೆಡೆಗೇ ನಮಗೆ ಮರಳಲಿಕ್ಕಿದೆ” ಎನ್ನುವರು. ಅವರ ಮೇಲೆ ಅವರ ಪ್ರಭುವಿನ ಕಡೆಯಿಂದ ಮಹಾ ಅನುಗ್ರಹಗಳಿರುವುವು. ಅವನ ಕರುಣೆಯು ಅವರನ್ನು ಆಚ್ಛಾದಿಸುವುದು.” (ಅಲ್‍ಬಕರ: 155-156)

ಸಂದಿಗ್ಧ ಘಟ್ಟಗಳಲ್ಲಿ ಇನ್ನಾಲಿಲ್ಲಾಹ್… ಎಂದು ಪ್ರಾರಂಭವಾಗುವ ಪ್ರಾರ್ಥನೆಯನ್ನು ಹೇಳುವವರ ಸಮಸ್ಯೆಗಳನ್ನು ಅಲ್ಲಾಹನು ದೂರೀಕರಿಸುತ್ತಾನೆ ಎಂದು ಪ್ರವಾದಿಯವರು(ಸ) ಹೇಳಿರುವರು. ಇದರಿಂದ ಅವರಿಗೆ ಉತ್ತಮ ಪರಿಣಾಮ ಉಂಟಾಗುವುದೆಂದೂ, ಅವರು ಇಷ್ಟಪಡುವುದನ್ನು ಅಲ್ಲಾಹನು ಅವರಿಗೆ ನೀಡುತ್ತಾನೆಂದೂ ಅವರು ಹೇಳಿದ್ದಾರೆ. ಒಮ್ಮೆ ದೀಪ ಆರಿ ಹೋದಾಗ ಪ್ರವಾದಿಯವರು(ಸ) ಇನ್ನಾಲಿಲ್ಲಾಹ್- ಹೇಳಿದರು. “ಪ್ರವಾದಿವರ್ಯರೇ, ಬೆಳಕು ನಂದಿ ಹೋಗುವುದು ಕೂಡಾ ಒಂದು ದುರಂತವೇ?” ಎಂದು ಓರ್ವರು ಕೇಳಿದರು. ಆಗ ಪ್ರವಾದಿಯವರು(ಸ) ಹೇಳಿದರು, “ಸತ್ಯವಿಶ್ವಾಸಿಗೆ ದುಃಖವುಂಟು ಮಾಡುವ ಯಾವುದೇ ಕಾರ್ಯವೂ  ಮುಸೀಬತ್ (ಆಪತ್ತು) ಆಗಿದೆ. ಮಾನಸಿಕ ಆಘಾತ, ರೋಗ, ದೈಹಿಕ ಉಪದ್ರವ, ಖಿನ್ನತೆ, ಹೆಚ್ಚೇಕೆ ಒಂದು ಮುಳ್ಳು ತಾಗಿದರೂ ಆತ ಅದಕ್ಕಾಗಿ ಸಹನೆ ವಹಿಸಿದರೆ  ಅಲ್ಲಾಹನು ಅವನ ತಪ್ಪುಗಳನ್ನ ಮನ್ನಿಸಿಕೊಡುವನು.” (ಬುಖಾರಿ ಮುಸ್ಲಿಮ್) “ಅಲ್ಲಾಹನು ತನ್ನ ಕೆಲವು ದಾಸರನ್ನು ಬಹಳವಾಗಿ ಇಷ್ಟಪಡಲು ತೀರ್ಮಾನಿಸಿದರೆ ಹಲವು  ರೀತಿಯ ಕಠಿಣ ಪರೀಕ್ಷೆಗಳಿಗೆ ಅವರನ್ನು ಗುರಿಪಡಿಸುತ್ತಾನೆ. ಆಗ ದೇವೇಚ್ಛೆಯಲ್ಲಿ ತೃಪ್ತಿಪಡುವವರಿಂದ ಅಲ್ಲಾಹನು ಸಂತೃಪ್ತಿ ಗೊಳ್ಳುತ್ತಾನೆ. ಅಲ್ಲದವರೊಂದಿಗೆ ಅಸಂತೃಪ್ತನಾಗುತ್ತಾನೆ.” (ತಿರ್ಮಿದಿ)

ಅಬೂ ಮೂಸಲ್ ಅಶ್ಹರಿ ಪ್ರವಾದಿ(ಸ)ರಿಂದ ಉದ್ಧರಿಸುತ್ತಾರೆ: ಯಾರಿಗಾದರೂ ಒಂದು ಮಗು ನಷ್ಟವಾದರೆ ಅಲ್ಲಾಹನು ಮಲಕ್‍ಗಳೊಂದಿಗೆ ಕೇಳುವನು, “ನೀವು ನನ್ನ ದಾಸನ ಮಗುವಿನ ಪ್ರಾಣವನ್ನು ತೆಗೆದಿರಾ?” ಅವರು: “ಹೌದು”. ಆಗ ಅಲ್ಲಾಹನು: “ಆಗ ನನ್ನ ದಾಸ ಏನು ಹೇಳಿದ?” “ನಿನ್ನ ಸ್ತುತಿ ಮತ್ತು ಇನ್ನಾಲಿಲ್ಲಾಹಿ ಹೇಳಿದ”  ಎಂದು ಮಲಕ್‍ಗಳು ಉತ್ತರಿಸುತ್ತಾರೆ. ಅಲ್ಲಾಹನು: “ಹಾಗಿದ್ದರೆ ಅವನಿಗಾಗಿ ಸ್ವರ್ಗದಲ್ಲಿ ಒಂದು ಮನೆಯನ್ನು ನಿರ್ಮಿಸಿ ಅದಕ್ಕೆ `ಬೈತುಲ್ ಹಮ್ದ್’ (ಸ್ತುತಿಯ ಭವನ)  ಎಂದು ನಾಮಕರಣ ಮಾಡಿರಿ.”

ದುರಂತಗಳು ಸಂಭವಿಸಿದಾಗ ದುಃಖ ಪ್ರಕಟವಾಗುವುದು ಸಹಜವಾಗಿದೆ. ಆಗ ನಾಲಗೆಯಿಂದ ಹೇಳಬಾರದೇನನ್ನೂ ಹೇಳದೆ, ಕ್ಷಮೆ, ಸಹನೆ, ಕೃತಜ್ಞತಾಭಾವ  ಕೈಬಿಡದಂತೆ ಜಾಗರೂಕತೆ ವಹಿಸಬೇಕು. ಪ್ರವಾದಿ ಪುತ್ರ ಇಬ್ರಾಹೀಮ್ ಅವರ ಕಣ್ಮುಂದೆಯೇ ಮರಣ ಹೊಂದಿದರು. ಆಗ ಕಣ್ಣೀರನ್ನು ಒರೆಸಿಕೊಂಡು ಪ್ರವಾದಿಯವರು(ಸ) ಹೇಳಿದರು: “ಇಬ್ರಾಹೀಮ್ ನಿನ್ನ ವಿಯೋಗದಿಂದ ನಾನು ಅತ್ಯಂತ ದುಃಖಿತನಾಗಿರುವೆ. ಆದರೆ ಅಲ್ಲಾಹನ ಅತೃಪ್ತಿ ಉಂಟು ಮಾಡುವಂತಹದ್ದನ್ನು ನಾವು  ಈಗ ಹೇಳಲೇಬಾರದು.” (ಮುಸ್ಲಿಮ್)


ಅತ್ಯಂತ ದುಃಖವುಂಟಾಗುವಾಗ ಶರೀಅತ್‍ಗೆ ವಿರುದ್ಧವಾದ ಯಾವುದೇ ಕಾರ್ಯವನ್ನೂ ಮಾಡಬಾರದು. “(ಕೃತಘ್ನತೆ ಹಾಗೂ ದೂರಿನ ಮಾರ್ಗವಾದ) ಅಟ್ಟಹಾಸ ಮಾಡುವುದು, ಎದೆಗೆ ಬಡಿದುಕೊಂಡು ಜೋರಾಗಿ ಕಿರುಚುವುದು ಇಂತಹವನು ನನ್ನ ಸಮುದಾಯಕ್ಕೆ ಸೇರಿದವನಲ್ಲ.” (ತಿರ್ಮಿದಿ)

ಜಅïಫರ್ ತ್ವಯ್ಯಾರ್(ರ)  ಹುತಾತ್ಮರಾದಾಗ ಕುಟುಂಬದ ಮಹಿಳೆಯರು ಬೊಬ್ಬಿಟ್ಟು ಅಳಲಾರಂಭಿಸಿದಾಗ ಪ್ರವಾದಿಯವರು(ಸ) ಹಾಗೆ ಮಾಡದಿರಲು ದೂತನನ್ನು ಕಳಿಸಿದರು. ಆದರೆ ಅವರು  ಸುಮ್ಮನಾಗಲಿಲ್ಲ. ಎರಡನೇ ಬಾರಿ ಹೇಳಿ ಕಳಿಸಿದರು. ಇನ್ನೂ ಅವರು ಸುಮ್ಮನಾಗದಿದ್ದರೆ ಅವರ ಬಾಯಿಗೆ ಮಣ್ಣು ಹಾಕಿಬಿಡಿ ಎಂದರು. (ಬುಖಾರಿ)

ರೋಗ ಪೀಡಿತನಾಗುವಾಗ ಪೂರ್ಣ ಸಹನೆ ಹಾಗೂ ಧೈರ್ಯ ತಂದುಕೊಂಡು ಪರಲೋಕ ಪ್ರತಿಫಲವನ್ನು ಅಪೇಕ್ಷಿಸಬೇಕು. ಆಗ ಸತ್ಯವಿಶ್ವಾಸಿಯ ಪಾಪಗಳು ತೊಳೆದು  ಹೋಗುತ್ತದೆ. ಅದು ಆತನನ್ನು ಪರಿಶುದ್ಧಗೊಳಿಸುತ್ತದೆ. ಪರಲೋಕದ ಪ್ರತಿಫಲಕ್ಕೆ ಅರ್ಹಗೊಳಿಸುತ್ತದೆ. ಪ್ರವಾದಿ(ಸ) ಹೇಳಿದರು: “ಮರದಿಂದ ಎಲೆಗಳು ಉದುರುವಂತೆ ರೋಗವು ವಿಶ್ವಾಸಿಯ ಪಾಪವನ್ನು ತೊಳೆಯುತ್ತದೆ.” (ಬುಖಾರಿ, ಮುಸ್ಲಿಮ್) ಶರೀರವು ನಡುಗುತ್ತಿರುವ ಓರ್ವ ಸ್ತ್ರೀಯನ್ನು ಒಮ್ಮೆ ಪ್ರವಾದಿಯವರು (ಸ) ಕಂಡರು. ಕಾರಣ ಕೇಳಿದಾಗ, ಆಕೆ ನನ್ನನ್ನು ಜ್ವರವು ಹಿಡಿದುಕೊಂಡಿದೆ ಎಂದು ದೂರಿದರು. ಪ್ರವಾದಿ(ಸ) ಹೇಳಿದರು: “ಜ್ವರದ ಕುರಿತು ಕೆಟ್ಟದಾಗಿ ಆಡಬಾರದು.  ಕಾರಣವೇನೆಂದರೆ ಬೆಂಕಿಯು ಕಬ್ಬಿಣದಿಂದ ಮಾಲಿನ್ಯವನ್ನು ಹೊರ ತೆಗೆಯುವಂತೆ ಮನುಷ್ಯರ ಪಾಪಗಳನ್ನು ಅದು ಶುದ್ಧೀಕರಿಸುತ್ತದೆ.” (ಮುಸ್ಲಿಮ್)

ಒಮ್ಮೆ ಕಅಬಾಕ್ಕೆ ಒರಗಿ ಕೂತು ಅಬ್ಬಾಸ್(ರ) ತನ್ನೊಂದಿಗೆ ಹೇಳಿದ ಒಂದು ಕಥೆಯನ್ನು ಅತಾವುಬ್ನು ರಬಾಹ್ ಉದ್ದರಿಸಿದ್ದಾರೆ. ಅಬ್ಬಾಸ್ ಹೇಳಿದರು: “ನಾನು ನಿನಗೊಂದು ಸ್ವರ್ಗ ಪ್ರವೇಶವು ದೃಢಪಟ್ಟ ಓರ್ವ ಮಹಿಳೆಯನ್ನು ತೋರಿಸಲೇ? `ನಿಶ್ಚಯವಾಗಿಯೂ’ ನಾನು ಹೇಳಿದೆ. ಆಗ ಅವರು ಹೇಳಿದರು: “ನೋಡು, ಆ ಮಹಿಳೆಯು ಒಮ್ಮೆ ಪ್ರವಾದಿಯವರ(ಸ) ಬಳಿಗೆ ಬಂದು ತನಗೆ ಅಪಸ್ಮಾರ ರೋಗವಿದೆಯೆಂದೂ ಆಗ ಪ್ರಜ್ಞಾಹೀನಳಾದಾಗ ನಗ್ನತೆ ಗೋಚರಿಸುತ್ತದೆಂದೂ ಅದಕ್ಕಾಗಿ ಅಲ್ಲಾಹನೊಂದಿಗೆ ಪ್ರಾರ್ಥಿಸಬೇಕೆಂದೂ ವಿನಂತಿಸಿದಳು. ಪ್ರವಾದಿ(ಸ)ರು ಉತ್ತರಿಸಿದರು: ಈ ಪ್ರಯಾಸವನ್ನು ಸಹನೆಯಿಂದ ಸಹಿಸುವುದಾದರೆ ಅಲ್ಲಾಹನು ನಿಮಗೆ ಸ್ವರ್ಗವನ್ನು ದಯಪಾಲಿಸುವನು. ರೋಗ ಗುಣವಾಗಲು ನಾನು ಪ್ರಾರ್ಥಿಸುವೆನು. ಆಗ ಸ್ತ್ರೀ ಹೇಳಿದರು: “ಆತ್ಮ ಧೈರ್ಯದೊಂದಿಗೆ ನಾನು ಈ ಪರೀಕ್ಷೆಯನ್ನು ನಿಭಾಯಿಸುತ್ತೇನೆ. ನನ್ನ ನಗ್ನತೆ ಗೋಚರಿಸದಿರಲು ತಾವು ಪ್ರಾರ್ಥಿಸಬೇಕು. ಹೀಗೆ ಪ್ರವಾದಿಯವರು(ಸ) ಅವಳಿಗಾಗಿ ಪ್ರಾರ್ಥಿಸಿದರು.

ಮರಣದ ಹೊಂದಿದರೆ ಮೂರು ದಿನಕ್ಕಿಂತ ಹೆಚ್ಚು ದುಃಖಾಚರಣೆ ಮಾಡಬಾರದು. ಆಪ್ತರ ವಿಯೋಗವು ಶೋಕಮಯವಾಗಿರುತ್ತದೆ. ಅದು ಸ್ವಾಭಾವಿಕವಾದರೂ ಹೆಚ್ಚೆಂದರೆ ಅದರ ದಿನಗಳು ಮೂರು ದಿನ ಮಾತ್ರ. ಪ್ರವಾದಿಯವರು(ಸ) ಹೇಳಿದರು: “ಒಬ್ಬರೂ ಮರಣದ ಕಾರಣಕ್ಕೆ ಮೂರು ದಿವಸಕ್ಕಿಂತ ಹೆಚ್ಚು ಶೋಕ ಆಚರಿಸುವುದು ವಿಶ್ವಾಸಿಗೆ ಭೂಷಣವಲ್ಲ. ಆದರೆ ಪತ್ನಿಯರು 4 ತಿಂಗಳು ಹತ್ತು ದಿನ ಇದ್ದತ್ ಆಚರಿಸಬೇಕು. ಆ ಕಾಲದಲ್ಲಿ ವರ್ಣಮಯ ಉಡುಪುಗಳನ್ನೂ, ಸುಗಂಧವನ್ನೂ ಉಪಯೋಗಿಸುವುದು, ವಿವಾಹಾಲೋಚನೆ ನಡೆಸಬಾರದು.” (ತಿರ್ಮಿದಿ)

ಝೈನಬ್ ಬಿನ್ತ್ ಜಹಶ್(ರ)ರ ಸಹೋದರ ತೀರಿಕೊಂಡ ನಾಲ್ಕನೇ ದಿನ ಸಂತಾಪ ಸೂಚಿಸಲು ಕೆಲವು ಮಹಿಳೆಯರು ಝೈನಬ್‍ರ ಬಳಿ ಬಂದರು. ಅತಿಥಿಗಳ ಮುಂದೆ  ಸುಗಂಧ ದ್ರವ್ಯ ಪೂಸಿಕೊಂಡು ಬಂದ ಝೈನಬ್(ರ)ರು ಅವರೊಂದಿಗೆ ಹೇಳಿದರು, “ನನಗೆ ಈಗ ಸುಗಂಧ ಹಚ್ಚುವ ಅಗತ್ಯವಿರಲಿಲ್ಲ. ಆದರೆ ಪತಿಯಲ್ಲದ ಯಾವುದೇ ಅತ್ಯಂತ ನಿಕಟ ಬಂಧುಗಳು ಮರಣ ಹೊಂದಿದರೂ ಮಹಿಳೆಯರು ಮೂರು ದಿನಕ್ಕಿಂತ ಹೆಚ್ಚು ದುಃಖವನ್ನು ಆಚರಿಸಬೇಕಾಗಿಲ್ಲವೆಂದು ಪ್ರವಾದಿಯವರು(ಸ) ಕಲಿಸಿಕೊಟ್ಟದ್ದನ್ನು ನಿಮಗೆ ತಿಳಿಸಲಿಕ್ಕಾಗಿ ಹಚ್ಚಿಕೊಂಡಿದ್ದೇನೆ.”

ದುಃಖ ಹಾಗೂ ನೋವಿನ ಸಂದರ್ಭದಲ್ಲಿ ಸಂಬಂಧಪಟ್ಟವರು ಧೈರ್ಯ ಕಳೆದುಕೊಳ್ಳದಿರಲು ನಾವು ಪರಸ್ಪರ ಸಾಂತ್ವನ ಪಡಿಸಬೇಕು. ಪ್ರವಾದಿಯವರು(ಸ) ಉಹುದ್ ಯುದ್ಧದಿಂದ ಮರಳಿ ಬರುವಾಗ ಕೆಲವು ಮಹಿಳೆಯರು ತಮ್ಮವರ ಕುರಿತು ಪ್ರಶ್ನಿಸಿದರು.

ಹಮ್ನ ಬಿನ್ತ್ ಜಹ್‍ಶ್(ರ)ರೊಡನೆ ಪ್ರವಾದಿವರ್ಯರು(ಸ) ತಮ್ಮ ಸಹೋದರ ಅಬ್ದುಲ್ಲಾರ ವಿಷಯದಲ್ಲಿ ಸಹನೆ ವಹಿಸಿಬೇಕೆಂದು ಉಪದೇಶಿಸಿದರು. ಪ್ರವಾದಿವರ್ಯರು (ಸ) ಅವರಿಗಾಗಿ ಇನ್ನಾಲಿಲ್ಲಾಹ್ ಹೇಳಿ, ಪಾಪ ಮುಕ್ತಿಗಾಗಿ ಪ್ರಾರ್ಥಿಸಿದರು. ತನ್ನ ಚಿಕ್ಕಪ್ಪ ಹಂಝಾ(ರ)ರ ವಿಷಯದಲ್ಲೂ ಬಹಳ ಸಂಯಮದಿಂದ ಇನ್ನಾಲಿಲ್ಲಾಹ್ ಹೇಳಿ, ಪಾಪ ಮುಕ್ತತೆಗಾಗಿ ಪ್ರಾರ್ಥಿಸಿದರು.

ರೋಗ ಪೀಡಿತನಾಗಿದ್ದ ಮಗನು ನಿಧನ ಹೊಂದಿದ ವಿಷಯವನ್ನು ಅಬೂ ತಲ್ಹಾ(ರ)ರೊಡನೆ ಪತ್ನಿಯು ಹೇಳುವುದಿಲ್ಲ. ಅವರಿಗೆ ಆಹಾರ ನೀಡಿ, ನಿದ್ರಿಸಿ ಮರುದಿನ ಪತಿಯೊಡನೆ ಕೇಳುತ್ತಾರೆ. ಬೇರೆಯವರು ಅಮಾನತ್ ಆಗಿ ನಮಗೆ ನೀಡಿದ ವಸ್ತುವನ್ನು ಮರಳಿ ಕೇಳಿದರೆ, ಅದನ್ನು ಕೊಡದೆ ಇದ್ದರೆ ಅದು ನ್ಯಾಯವೇ? ಆಗ ಅವರು  ಹೇಳಿದರು: “ಇಲ್ಲ, ಅಂತಹ ಯಾವುದೇ ಅವಕಾಶ ನಮಗಿಲ್ಲ.” ಆಗ ಪತಿಯೊಡನೆ ಉಮ್ಮು ತಲ್ಹಾ ಹೇಳುತ್ತಾರೆ, “ಅದೇ ರೀತಿ ತಮ್ಮ ಮಗನ ವಿಷಯದಲ್ಲೂ ತಾವು ಸಹನೆ ವಹಿಸಿ.” (ಮುಸ್ಲಿಮ್)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …