Home / ಲೇಖನಗಳು / ಹೆತ್ತವರೊಂದಿಗೆ ಸದ್ವರ್ತನೆ – ಕುರ್‍ಆನಿನ ಸಾಮಾಜಿಕ ಚಿಂತನೆಗಳು

ಹೆತ್ತವರೊಂದಿಗೆ ಸದ್ವರ್ತನೆ – ಕುರ್‍ಆನಿನ ಸಾಮಾಜಿಕ ಚಿಂತನೆಗಳು

@ ಅಶೀರುದ್ದೀನ್ ಆಲಿಯಾ ಮಂಜನಾಡಿ

“ನಿಮ್ಮ ಪ್ರಭು (ಹೀಗೆ) ವಿಧಿಸಿ ಬಿಟ್ಟಿದ್ದಾನೆ; ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನೂ  ಮಾಡಬಾರದು. ಮಾತಾಪಿತರೊಡನೆ ಸೌಜನ್ಯದಿಂದ ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ, ಅವರ ಬಗ್ಗೆ ಚಕಾರವೆತ್ತಬೇಡಿರಿ ಮತ್ತು ಅವರನ್ನು ಜರೆಯಬೇಡಿರಿ. ಅವರೊಂದಿಗೆ ಗೌರವಪೂರ್ವಕವಾಗಿ ಮಾತನಾಡಿರಿ. ನಯ ವಿನಯ ಮತ್ತು ಕರುಣೆಯೊಂದಿಗೆ ಅವರ ಮುಂದೆ ಬಾಗಿಕೊಂಡಿರಿ. “ಓ ನನ್ನ ಪ್ರಭೂ! ಇವರು ನನ್ನ ಚಿಕ್ಕಂದಿನಲ್ಲಿ ದಯೆ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ ಮೇಲೆ ಕೃಪೆ ತೋರು” ಎಂದು ಪ್ರಾರ್ಥಿಸಿರಿ.”  (ಅಲ್ ಇಸ್ರಾಅï 23-24)

ಮೇಲಿನ ಸೂಕ್ತವು ಮಾನವ ತನ್ನ ಹೆತ್ತವರೊಂದಿಗೆ ಯಾವ ರೀತಿ ವರ್ತಿಸಬೇಕು ಮತ್ತು ವ್ಯವಹರಿಸಬೇಕೆಂದು ನಮಗೆ ಮನದಟ್ಟು ಮಾಡುತ್ತದೆ. ಹೆತ್ತವರು ಒಬ್ಬ ವ್ಯಕ್ತಿಯ ಜನನದಿಂದ ಹಿಡಿದು ಅವನ ಒಂದು ದೊಡ್ಡ ಹಂತದ  ಪ್ರಗತಿಯ ವರೆಗೆ. ಕಾರುಣ್ಯದ ನೆರಳಾಗಿ ಸದಾ ಬೆನ್ನ ಹಿಂದೆ ನಿಂತಿರುತ್ತಾರೆ. ತನ್ನ ಎಲ್ಲಾ ಏಳು-ಬೀಳು,  ಸೋಲು-ಗೆಲುವುಗಳಲ್ಲಿ ಸದಾ ಹುರಿದುಂಬಿಸುತ್ತಲೂ ಪ್ರೋತ್ಸಾಹಿಸುತ್ತಲೂ ಸಲಹೆ ನೀಡುತ್ತಲೂ ಸಾಂತ್ವನ ಮಾಡುತ್ತಲೂ ಇರುತ್ತಾರೆ.

ಮಾತೃತ್ವದ ವಾತ್ಸಲ್ಯ ಕೇವಲ ಮಾನವ ಜೀವಿಗೆ ಮಾತ್ರವಿರುವುದಲ್ಲ. ಸಕಲ ಪ್ರಾಣಿ, ಪಕ್ಷಿ  ಜಂತು, ಕೀಟಗಳಲ್ಲಿಯೂ ಈ ವಾತ್ಸಲ್ಯ ಇದೆ. ಕೋಳಿಯು ತನ್ನ ರೆಕ್ಕೆಯನ್ನು ಗಿಡುಗನ ಕಣ್ಣಿನಿಂದಲೂ ನರಿಯ  ಬಾಯಿಯಿಂದಲೂ ರಕ್ಷಾ ಕವಚವಾಗಿಸುತ್ತದೆ. ಮುಂಜಾನೆ ಮರಿಗಳನ್ನು ಗೂಡಲ್ಲಿ ಬಿಟ್ಟು ತನ್ನ ಮಕ್ಕಳಿಗಾಗಿ  ಆಹಾರಕ್ಕಾಗಿ ಹಾರುವ ಹಕ್ಕಿಗಳು ಇತ್ಯಾದಿ ಉದಾಹರಣೆಗಳನ್ನು ಕೊಡಬಹುದು. ತಾಯಿ ಹಕ್ಕಿ ಬಿಟ್ಟು ಹೋದ ಮರಿಗಳನ್ನು ಕದ್ದು ತರುವುದು, ಹಾಲು ಕುಡಿಯುವ ಪ್ರಾಣಿಗಳನ್ನು ವಧಿಸುವುದನ್ನು ಪ್ರವಾದಿ(ಸ) ನಿಷೇಧಿಸಿದ್ದಾರೆ.  ಪುಣ್ಯ ಕೋಟಿಯೆಂಬ ಹಸುವಿನ ತ್ಯಾಗಮಯ ಜೀವನದ ಕಥೆಯನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಹಾಗೆಯೇ  ಹೆತ್ತ ತಂದೆ-ತಾಯಿಯನ್ನು ಜಗತ್ತಿನ ಎಲ್ಲಾ ಧರ್ಮ, ಜಾತಿ, ಗೋತ್ರಗಳು ಆತ್ಮೀಯವಾಗಿ ಗೌರವಿಸುತ್ತವೆ. ಹೆತ್ತವರನ್ನು ಗೌರವಿಸಬೇಕೆಂದು ಎಲ್ಲಾ ವೇದ ಗ್ರಂಥಗಳು ಕರೆ ನೀಡಿರುವಂತೆಯೇ ಕುರ್‍ಆನ್ ಹೆತ್ತವರೊಂದಿಗೆ ಸೌಜನ್ಯದಿಂದ  ವರ್ತಿಸಲು ಹೇಳಿದೆ.

ಪ್ರವಾದಿಯವರು(ಸ) ಹೀಗೆ ಹೇಳಿರುತ್ತಾರೆ:
“ತನ್ನ ತಂದೆ-ತಾಯಿಯವರನ್ನು ಅಥವಾ ಅವರ ಪೈಕಿ ಒಬ್ಬರನ್ನು ವೃದ್ಧಾಪ್ಯದ ಸ್ಥಿತಿಯಲ್ಲಿ ಕಂಡ ಬಳಿಕವೂ (ಅವರ  ಸೇವೆ ಮಾಡುವ ಮೂಲಕ) ಸ್ವರ್ಗ ಪ್ರವೇಶಿಸಲು ಅರ್ಹರಾಗದವ ರನ್ನು ನಾನು ಶಪಿಸಿದ್ದೇನೆ. `ಅವನು ಅಪಮಾನಿತನಾಗಲಿ’ ಎಂದು ಮೂರು ಬಾರಿ ಹೇಳಿದರು (ಮುಸ್ಲಿಮ್).

ಅದೇ ರೀತಿ ಹಿಂದೂ ಧರ್ಮ ಶಾಸ್ತ್ರದಲ್ಲಿ ತಂದೆ-ತಾಯಿ  ಮತ್ತು ಗುರುಗಳ ಸೇವೆ ಮಾಡುವುದೆಂದರೆ ಎಲ್ಲಕ್ಕಿಂತ ಉತ್ತಮ ತಪಶ್ಚಯ್ರ್ಯವೇ ಆಗಿದೆ.

`ಊರಿಗೆ ಅರಸನಾದರೂ ತಾಯಿಗೆ ಮಗ’ ಎಂಬ ನಾಣ್ಣುಡಿಯಂತೆ ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದಾದರೂ ತನ್ನ ಗುಡಿಸಲಿನೊಳಗೆ ತಾನೊಬ್ಬ ಮಗ ಎಂಬ ಅರಿವು ಇದ್ದರೆ ಮನುಷ್ಯ ಉತ್ತಮ ಮನುಷ್ಯನಾಗಿ ಬದುಕುತ್ತಾನೆ. ಹೆತ್ತವರ ಸೇವೆಯಿಂದಲೇ ಮನುಷ್ಯನು ಗತಕಾಲದ ಪಾಪ ಕಾರ್ಯಗಳಿಂದ ಮುಕ್ತನಾಗುತ್ತಾನೆ ಎಂದು ಪ್ರವಾದಿ(ಸ) ಹೇಳಿರುವರು. ಪಾಪ ಭಾರದಿಂದ ಹೊರಬರಲು ಪ್ರಾಯಶ್ಚಿತ್ತದ ಪ್ರಾಯೋಗಿಕ ವಿಧಾನವೇ ಹೆತ್ತವರ ಸೇವೆ. ಒಬ್ಬ ಮಗ ಹೆತ್ತವರ ಗರಡಿಯಲ್ಲಿ ಪಳಗುವುದಾದರೆ ಅವನ ಇಹ-ಪರ ದಿನಗಳು ವಿಜಯಗೊಳ್ಳುವುದು. ಹೆತ್ತವರೊಂದಿಗೆ ಸದ್ವರ್ತನೆ ತೋರುವುದು, ಅವರ ಮಾತನ್ನು ಕೇಳುವುದು ಒಬ್ಬ ಮಗನಿಗೆ ಅತ್ಯುತ್ತಮವಾದ ಕಾರ್ಯವಾಗಿದೆ.

ಬೈಬಲ್ ಹೇಳುತ್ತದೆ, “ನಿಮ್ಮ ತಂದೆ-ತಾಯಿಗಳ ಮಾತನ್ನು ಕೇಳಬೇಕು ಮತ್ತು ನಿಮ್ಮ ತಂದೆ-ತಾಯಿಗಳನ್ನು ಸನ್ಮಾನಿಸಬೇಕು”. (ಎಫೆಸ 6:4)

“ಹೆತ್ತವರು ಮಕ್ಕಳಿಗೆ ಕಲಿಸಬೇಕು. ಮಕ್ಕಳು ಹೆತ್ತವರ ಮಾತನ್ನು ಕೇಳಬೇಕು, ಇದು ದೇವರ ಆಜ್ಞೆ ಎಂದು ಬೈಬಲ್ ಹೇಳಿದೆ.

ಲುಕ್ಮಾನ್ ಎಂಬ ದಾರ್ಶನಿಕರು ತನ್ನ ಮಗನಿಗೆ ಬುದ್ಧಿ ಮಾತನ್ನು ಹೇಳುವಾಗ ಅವರು ಹೇಳಿದರು, “ಮಾತಾಪಿತರ ಹಕ್ಕನ್ನು ತಿಳಿದಿರೊ ಮತ್ತು ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು.” ಇನ್ನೊಂದು ಕಡೆ ಕುರ್‍ಆನ್ ಇಸ್ರಾಈಲ್ ಸಂತತಿಗಳನ್ನು ಸಂಬೋಧಿಸುತ್ತಾ “ನೀವು ಮಾತಾಪಿತರೊಂದಿಗೆ ಸದ್ವರ್ತನೆಯಿಂದ ವರ್ತಿಸಿರಿ” ಎನ್ನಲಾಗಿದೆ. ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ ಮತ್ತು ನಿಮ್ಮ ಮಕ್ಕಳನ್ನು ದಾರಿದ್ರ್ಯದ ಭಯದಿಂದ ವಧಿಸಬೇಡಿರಿ. (ಆನ್‍ಆಮ್: 151)

ಹೆತ್ತವರ ಲಾಲನೆ-ಪಾಲನೆಯಲ್ಲಿ ಬೆಳೆದ ಮಕ್ಕಳು ಅವರ ಮಾತನ್ನು ಧಿಕ್ಕರಿಸುವುದರಲ್ಲಿ ಹೆತ್ತವರು ದೊಡ್ಡ ನೋವನ್ನು ಅನುಭವಿಸುತ್ತಾರೆ. ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಕುಸಿದು ಹೋಗುತ್ತಾರೆ. ಮನೆಯೊಳಗಿನ ನಂದಾದೀಪ ಹಾರಿ ಹೋದಂತಾಗುತ್ತದೆ. ಮನೆ ಮತ್ತು ಮನಸ್ಸು ಬೆಳಗಬೇಕಾದರೆ ಮಾತಾಪಿತರ ಹಕ್ಕನ್ನು ಪೂರ್ತಿಗೊಳಿಸಿ ಅವರ ಆಜ್ಞಾನುಸಾರಿಗಳಾಗಿ ಬದುಕುವುದು ಆವಶ್ಯಕ. ಅದರ ಕುರಿತು  ಬೈಬಲ್ ಹೇಳುತ್ತದೆ, “ಒಂದು ಕುಟುಂಬದಲ್ಲಿ ಸೌಮ್ಯಭಾವವು ರಾರಾಜಿಸುತ್ತಿರುವಾಗ, ಹೆತ್ತವರು ಮತ್ತು ಮಕ್ಕಳ  ನಡುವಿನ ಆಪ್ತ ಬಂಧವು ಇನ್ನಷ್ಟು ಬಲಗೊಳ್ಳುತ್ತದೆ.” (ಎಫೆಸ 6:4)

`ಮನೆಗೆ ಮಾರಿ ಊರಿಗೆ ಉಪಕಾರಿ’ ಯಾದಂತಹವರು ಇದ್ದಾರೆ. ಅವರು ಹೇಗೆಂದರೆ ನೆರೆಕರೆಯ ಅಥವಾ  ಬಂಧುಗಳ ಹಾಗೂ ಇತರರ ಮಾತುಗಳನ್ನು ಆಜ್ಞೆಗಳನ್ನು ಚಾಚುತಪ್ಪದೆ ಯಥಾವತ್ತಾಗಿ ಪಾಲಿಸಿ ಉತ್ತಮರೆನಿಸಿಕೊಳ್ಳುತ್ತಾರೆ. ಅದೇ ರೀತಿ ಹೆತ್ತವರು ಹೇಳಿದ ಸಣ್ಣ ಕೆಲಸಕ್ಕೂ ಕ್ಷುಲ್ಲಕ ಬೆಲೆ ಮಾತ್ರ ನೀಡುತ್ತಾರೆ.  ಮನೆಯ ಹೊರಗೆ ಸೌಮ್ಯವಾಗಿ ಇರುವವರು ಮನೆಯ ಒಳಗೆ ಕ್ರೂರಿಗಳಾಗುತ್ತಾರೆ. ಇದಕ್ಕೆ ಬೈಬಲ್ ಹೇಳುತ್ತದೆ,  “ಪ್ರೀತಿಯು ಸಭೆಗಳಲ್ಲಿ ಮಾತ್ರವಲ್ಲ, ಕುಟುಂಬದಲ್ಲಿ ಅಂದರೆ ವಿವಾಹ ಸಂಗಾತಿಗಳ ನಡುವೆ ಮತ್ತು ಹೆತ್ತವರ ಮತ್ತು  ಮಕ್ಕಳ ನಡುವೆಯೂ ಸುವ್ಯಕ್ತವಾಗಬೇಕು. (ಯೋಹಾನ 13: 34-35)

ಮಾತಾಪಿತರು ವೃದ್ಧರಾದಂತೆ ಅವರ ಮೇಲೆ ನಮ್ಮ ಹೊಣೆಗಾರಿಕೆಗಳು ಹೆಚ್ಚುತ್ತಾ ಹೋಗುತ್ತದೆ. ವೃದ್ಧರಾದಾಗ ಅವರ ಬುದ್ಧಿಯು ಶೈಶವ ಸ್ಥಿತಿಗೆ ಬಂದು ತಲುಪುತ್ತದೆ. ಆಗ ಅವರ ನಡೆತೆಗಳು ಮಾತುಗಾರಿಕೆಗಳು  ಮಕ್ಕಳಂತಿರಬಹುದು. ಆ ಸಂದರ್ಭದಲ್ಲಿ ಅತೀ ಹೆಚ್ಚು ಸೌಜನ್ಯ ಮತ್ತು ಸದ್ವರ್ತನೆಯಿಂದ ವರ್ತಿಸಬೇಕೆಂದು ಪವಿತ್ರ ಕುರ್‍ಆನ್ ಹೇಳಿದೆ. ಅವರಿಗೆ ಛೆ! ಎಂಬ ಪದವನ್ನೂ ಪ್ರಯೋಗಿಸಬಾರದೆಂದು ಕುರ್‍ಆನ್ ಆಜ್ಞಾಪಿಸಿದೆ.

ವೃದ್ಧಾಶ್ರಕ್ಕೆ  ಹೆತ್ತವರನ್ನು ನೂಕುವ ಈಗಿನ ಕಾಲದಲ್ಲಿ ವೇದ ಗ್ರಂಥಗಳ ಸಂದೇಶಗಳೂ ಪ್ರಸಕ್ತವಾಗುತ್ತದೆ. ಅವರ ಆಗ್ರಹ ಅಭಿಲಾಷೆ ಮತ್ತು ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕು. ಪ್ರಾರ್ಥಿಸಬೇಕು. ಕುರ್‍ಆನ್ ಹೀಗೆ ಕಲಿಸಿಕೊಡುತ್ತದೆ, “ನನ್ನ ಚಿಕ್ಕಂದಿನಲ್ಲಿ ದಯೆ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ ಮೇಲೆ ಕೃಪೆ ತೋರು.” (17:24) “ಓ ನನ್ನ ಪ್ರಭೂ, ನನ್ನನ್ನೂ ನನ್ನ  ಮಾತಾಪಿತರನ್ನೂ ಸಕಲ ಸತ್ಯವಿಶ್ವಾಸಿಗಳನ್ನೂ ವಿಚಾರಣೆಯ ದಿನ ಕ್ಷಮಿಸು.” (14:14)

ಹೆತ್ತವರ ಸೇವೆ ದೇವನ ಆರಾಧನೆಯಾಗಿದೆ. ಧರ್ಮ ಯುದ್ಧದಲ್ಲಿ ಭಾಗವಹಿಸುವುದಕ್ಕಿಂತಲೂ ತೀರ್ಥಯಾತ್ರೆಗಿಂತಲೂ ಹೆತ್ತವರ ಸೇವೆ ಸಂದರ್ಭಾನುಸಾರ ಅತೀ ಪುಣ್ಯದಾಯಕವಾದ ಕಾರ್ಯವೆಂದು  ಪ್ರವಾದಿ(ಸ) ಹೇಳಿದ್ದಾರೆ. ಹೆತ್ತವರೊಂದಿಗೆ ಸದ್ವರ್ತನೆಯಿಂದ ಇರಬೇಕೆಂದು ಪ್ರವಾದಿ(ಸ) ಹೇಳಿರುವರು. “ಇನ್ನು ಹೆತ್ತವರು ಮರಣ ಹೊಂದಿದರೂ ಅವರ ಮೇಲಿರುವ ನಮ್ಮ ಹೊಣೆಗಾರಿಕೆಗಳು ಸಂದಾಯವಾಗುವುದಿಲ್ಲ. ಮರಣಾ ನಂತರ ಅವರಿಗಾಗಿ ಪ್ರಾರ್ಥಿಸಬೇಕು” ಎಂದು ಪ್ರವಾದಿ(ಸ) ಹೇಳಿದರು (ಅಬೂ ದಾವೂದ್).

ವೇದಗಳಲ್ಲಿ ಈ ರೀತಿ  ಹೇಳಲಾಗಿದೆ: “ಮಾತೃದೇವೋಭವ! ಪಿತೃದೇವೋಭವ!” ತಂದೆ-ತಾಯಿಯ ಸೇವೆ ದೇವರ ಸೇವೆಯೆಂಬ ವಿಶಾಲ  ಪರಿಕಲ್ಪನೆಯನ್ನು ನೀಡುತ್ತದೆ.

ಹೆತ್ತವರಲ್ಲಿ ನಾವು ತಾಯಿಗೆ ಸ್ವಲ್ಪ ಹೆಚ್ಚು ಪ್ರೀತಿ ತೋರಿಸುವುದು ಸಹಜ. ಅದು ತಂದೆ-ತಾಯಿಯರೊಡನೆ  ಭೇದ-ಭಾವ ತೋರಿಸುವುದು ಎಂದಲ್ಲ. ಒಮ್ಮೆ ಪ್ರವಾದಿ(ಸ)ರಲ್ಲಿ ಸಂಗಾತಿ ಕೇಳಿದರು, “ಬಂಧು ಬಳಗಗಳ ಪೈಕಿ ಅತೀ ಹೆಚ್ಚು ಸದ್ವರ್ತನೆಗೆ ಅರ್ಹರಾದ ವ್ಯಕ್ತಿ ಯಾರು? ಪ್ರವಾದಿ(ಸ) ಹೇಳಿದರು, ನಿನ್ನ ತಾಯಿ. ನಂತರ ಯಾರು?  ನಿನ್ನ ತಾಯಿ, ಮತ್ತೊಮ್ಮೆ ಕೇಳಿದ, ನಂತರ ಯಾರು? ಆಗಲೂ ಪ್ರವಾದಿ(ಸ) ಹೇಳಿದರು, ಅದೂ ನಿನ್ನ ತಾಯಿ.  ಕೊನೆಗೆ ಒಮ್ಮೆ ಕೇಳಿದರು, ಅದರ ನಂತರ ಯಾರಾಗಿರುವರು? ಪ್ರವಾದಿ(ಸ) ಹೇಳಿದರು! ಅದು ನಿನ್ನ ತಂದೆ”  (ಬುಖಾರಿ).

ಮಾತೆ ಒಂಭತ್ತು ತಿಂಗಳು ಕಾಲ ಕಷ್ಟ ಸಂಕಷ್ಟಗಳನ್ನು, ಸಹನೆ ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಪ್ರಸವಿಸುತ್ತಾಳೆ ಮತ್ತು ಮೂವತ್ತು ತಿಂಗಳು ಎದೆ ಹಾಲು ನೀಡುವುದರಲ್ಲಿ ತನ್ನ ಜೀವನವನ್ನು ಮುಡಿಪಾಗಿಡುತ್ತಾಳೆ. ಆದರೂ ತಾನು ಹಡೆದಿರುವ ಶಿಶು ಹೆಣ್ಣೋ-ಗಂಡೋ, ಕರಿಯನೋ, ಬಿಳಿಯನೋ, ಬುದ್ಧಿವಂತನೋ, ಬುದ್ಧೀಹೀನನೋ, ಆರೋಗ್ಯ ವಂತನೋ, ರೋಗಿಯೋ ಎಂದು ನೋಡದೆ `ಹೆತ್ತವಳಿಗೆ ಹೆಗ್ಗಣ ಮುದ್ದು’  ಎಂಬಂತೆ ಸಾಕಿ ಸಲಹುತ್ತಾಳೆ. ಆದ್ದರಿಂದ ಪ್ರವಾದಿ(ಸ) ಹೇಳಿರುವರು, “ಪುರುಷನ ಮೇಲೆ ಅತೀ ದೊಡ್ಡ ಹಕ್ಕು ಆತನ ತಾಯಿಯ ಮೇಲೆ ಆಗಿರುತ್ತದೆ” (ಹಾಕಿಂ).

ಸಾಮಾನ್ಯವಾಗಿ ಹೆಣ್ಣನ್ನು `ತಾಯಿ’ಯೆಂದು ಕರೆಯುವುದಿದೆ.  ಕಾರಣ ಏನೆಂದರೆ, ತಾಯಿಗೆ ಪ್ರಕೃತಿ ನೀಡಿದ ಗೌರವ ಅದು. ಸ್ತನ್ಯಪಾನ ಮಾಡಿದ ಸ್ತ್ರೀಯರೂ ತಾಯಿಗೆ  ಸಮಾನವಾಗಿದ್ದಾರೆ. ತಾಯಿ ತೀರಿ ಹೋಗಿದ್ದರೆ ಅವರ ಸಹೋದರಿಯ ಸೇವೆ ಕೈಗೊಳ್ಳಬೇಕೆಂದು ಪ್ರವಾದಿ(ಸ) ಕಲಿಸಿದ್ದಾರೆ.

ಒಮ್ಮೆ ಪ್ರವಾದಿ(ಸ)ರ ಕಾಲದಲ್ಲಿ ಒಬ್ಬ ಸಂಗಾತಿ ಮರಣ ವೇದನೆಯಲ್ಲಿ ಚಡಪಡಿಸುತ್ತಿದ್ದರು. ಆಗ ಅವರ ಬಾಯಿ ಯಿಂದ ಕಲಿಮ (ಸ್ವಸ್ತಿ ವಚನ) ಹೇಳಲಾಗುತ್ತಿರಲಿಲ್ಲ. ಪ್ರವಾದಿ(ಸ) ಆತಂಕಗೊಂಡರು ಮತ್ತು ಆತನ ತಾಯಿ ಜೀವಂತವಿರುವವರು ಮತ್ತು ಈ ಮಗ ಅವರನ್ನು ಕಡೆಗಣಿಸಿರುವನೆಂಬುದನ್ನು ಅವರು ಅರಿತುಕೊಂಡರು. ಆಗ ಪ್ರವಾದಿ ಆ ತಾಯಿಯೊಂದಿಗೆ ಮಗನನ್ನು ಕ್ಷಮಿಸಿ ಎಂದರು. ಆ ತಾಯಿ ನಿರಾಕರಿಸಿದಾಗ ಪ್ರವಾದಿ(ಸ) ಕಟ್ಟಿಗೆ ಒಟ್ಟು ಮಾಡಲು ಹೇಳಿ ಮಗನನ್ನು ಬೆಂಕಿಯಲ್ಲಿ ಸುಡುವಂತೆ ಹೇಳಿದರು.ಆಗ ಆ ತಾಯಿಯ ಹೃದಯ ಮಿಡಿಯಿತು. ತಾಯಿ ಕ್ಷಮಿಸಿದರು. ಸುಕ್ಷೇಮ ಮರಣ ಸಂಭವಿಸಿತು. ಇದು ತಾಯಿ ಪ್ರೇಮದ ಸಣ್ಣ ಉದಾಹರಣೆ ಅಷ್ಟೇ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …