Home / ಲೇಖನಗಳು / ರಿಸಾಲತ್ (ಪ್ರವಾದಿತ್ವ) ಮತ್ತು ಅದರ ಮಹತ್ವ

ರಿಸಾಲತ್ (ಪ್ರವಾದಿತ್ವ) ಮತ್ತು ಅದರ ಮಹತ್ವ

ರಿಸಾಲತ್ ಅಥವಾ ಸಂದೇಶವಾಹಕತ್ವವು ಮಾನವರಿಗೆ ಅತಿ ಮಹತ್ವದ ವಿಚಾರವಾಗಿದೆ. ಆದರೆ ಸಾಮಾನ್ಯವಾಗಿ ಅದಕ್ಕೆ ಮಾನವರಿಂದ ಸಿಗಬೇಕಾದ ಮಹತ್ವವು ದೊರಕಿಲ್ಲ.

ಮಾನವರಿಗೆ ದೊರಕಿದ ದೇವನ ಅನುಗ್ರಹ ಮತ್ತು ದಯೆ ಎಂದು ಪ್ರವಾದಿತ್ವವನ್ನು ಪವಿತ್ರ ಕುರ್‌ಆನ್ ವಿವರಿಸಿದೆ. (ಪವಿತ್ರ ಕುರ್‌ಆನ್, 6:158, 7:52, 11:17, 28: 16:89) ಭೂಮಿಯಲ್ಲಿ ಪ್ರಾಣಿಗಳಿಗೂ ಆಹಾರ ಮತ್ತು ವಾಸ್ತವ್ಯದ ಸೌಕರ್ಯಗಳು ಇವೆ. ಆದರೆ ದೇವನು ನೇರವಾಗಿ ಸಂಬೋಧಿಸಿರುವ ಜೀವಿ ಮಾನವನಾಗಿದ್ದಾನೆ. ದೇವಾನುಗ್ರಹಗಳನ್ನು ಗುರುತಿಸುವುದು ಮತ್ತು ಅದರ ಪ್ರಯೋಜನ ಪಡೆಯುವ ಸ್ವಾತಂತ್ರ್ಯವನ್ನು ದೇವನು ಮಾನವನಿಗೆ ನೀಡಿದ್ದಾನೆ.

ದೇವನು ಪ್ರವಾದಿಗಳೊಡನೆ ವಹ್ಯ್(ಪ್ರಕಾಶನ)ಯ ಮುಖಾಂತರ ಸಂಭಾಷಿಸಿರುವನು. ಅವರ ಮೇಲೆ ತನ್ನ ವಾಣಿಗಳನ್ನು ಅವತೀರ್ಣಗೊಳಿಸಿದ್ದಾನೆ. ಮಾನವರಿಗಾಗಿ ಮಾಡಲಾದ ಮಾರ್ಗದರ್ಶನದ ವ್ಯವಸ್ಥೆಯಿದು. ಇದಕ್ಕಾಗಿ ದೇವನನ್ನು ಎಷ್ಟೇ ಸ್ತುತಿಸಿದರೂ ಸಾಲದು.

ಎಡ್ಡಿಂಗ್ಟನ್ ರು(Eddington), ‘ವಹ್ಯ್ ನ ಪ್ರಭುತ್ವ, ಅಸ್ತಿತ್ವಗಳೆಂಬುದು ಪ್ರಶ್ನೆಯೇ ಅಲ್ಲ. ವಹ್ಯ್ ನ ಮೂಲಕ ಮಾನವನಿಗೆ ದೇವನು ಮಾರ್ಗದರ್ಶನ ನೀಡುತ್ತಾನೆಂದು ಸಂದೇಹಾತೀತವಾಗಿ ನಂಬುವುದು ಪ್ರಶ್ನೆಯಾಗಿದೆ” ಎಂದು ಹೇಳುವಷ್ಟು ಮಾನವ ವಹ್ಯ್ ನ ಪಾತ್ರ ಜೀವನಕ್ಕೆ ಮಹತ್ವದಾಯಕವಾಗಿದೆ. (Science and Unseen World P-44)

ಮಾನವ ಜೀವನ ಮೌಲ್ಯರಹಿತವಾದರೆ ನಿರರ್ಥಕವಾದಂತೆಯೇ ಮತ್ತು ಅಂತಹ ಜೀವನ ತುಚ್ಚವಾಗುವುದು. ಆದರೆ ಮಾನವನಲ್ಲಿರುವ ಜೀವನ ಮೌಲ್ಯವನ್ನು ಗುರುತಿಸುವುದು ಹೇಗೆ ಮತ್ತು ಯಾವುದು ಅದನ್ನು ವಿಶ್ವಾಸಾರ್ಹಗೊಳಿಸುತ್ತದೆ ಎಂಬ ಪ್ರಶ್ನೆ ಉದ್ಭವಿಸಬಹುದು. ಜೀವನ ಮೌಲ್ಯ(Values of Life)ವನ್ನು ಪ್ರಕಾಶನ ಅಥವಾ ವಹ್ಯ್ ನ ಮೂಲದಿಂದ ತಿಳಿಯಲು ಸಾಧ್ಯವಿದೆ ಮತ್ತು ಅದು ಜೀವನಕ್ಕೆ (ಮಾನವರಿಗೆ) ಮೌಲ್ಯವನ್ನು ತಂದು ಕೊಡುವುದು.

ಆದರೆ ದೈವಿಕ ಪ್ರಕಾಶನ(ವಹ್ಯ್) ಮಾನವರಲ್ಲೇ ವಿಶೇಷ ವ್ಯಕ್ತಿಗಳಿಗೆ ಅವತೀರ್ಣವಾಗುತ್ತದೆ. ಅವರನ್ನು ನಾವು ಪ್ರವಾದಿಗಳೆಂದು ಕರೆಯುತ್ತೇವೆ.

ಪ್ರವಾದಿಗಳ ಮೂಲಕ ಸಿಕ್ಕಿರುವ ಎಲ್ಲ ಜೀವನ ಮೌಲ್ಯಗಳು ಸತ್ಯವೆಂದು ಸಾಬೀತುಗೊಂಡಿದೆ ಎಂದು ಐನ್‌ಸ್ಟೈನ್‌ರು ಒಪ್ಪಿಕೊಂಡಿದ್ದಾರೆ. ಜೋಡ್ (Joad) ಎಂಬವರು ವಹ್ಯ್ ಸ್ವಯಂ ತನಗೆ ತಾನೇ ಪ್ರಮಾಣವಾಗಿದೆ (Philosophical Aspects of Modern Science.) ಎಂದು ಹೇಳಿದ್ದಾರೆ. ಬುದ್ದಿಗೆ ಮಸುಕೆನಿಸಿದರೂ ನೈಜ ಜ್ಞಾನವನ್ನು ಗೋಚರಿಸಿದ ಕೂಡಲೇ ಅಂತಃಪ್ರಜ್ಞೆಯು ತಕ್ಷಣ ಸ್ವೀಕರಿಸುವುದು ಮತ್ತು ಇದನ್ನು ಆತ್ಮದ ವಿಶೇಷತೆಯೆಂದು ಜೋಡ್ ಹೇಳುತ್ತಾರೆ.

ವಹ್ಯ್ ಯನ್ನು ವಿವರಿಸುತ್ತಾ ಓಸ್ಟೆಂಸ್ಕಿಯವರು(Ouspensky) ಹೀಗೆ ವಿವರಿಸಿದ್ದಾರೆ. “ಒಂದು ವೇಳೆ ವಹ್ಯ್ ಅವತೀರ್ಣವಾಗದಿದ್ದರೆ ಧರ್ಮದ ಅಸ್ತಿತ್ವ ಉಳಿಯುತ್ತಿರಲಿಲ್ಲ. ಧರ್ಮದಲ್ಲಿ ಸಾಮಾನ್ಯ ಮಾನವರ ಚಿಂತನೆಯ ಮಟ್ಟವನ್ನು ಮೀರಿದ ಒಂದಲ್ಲ ಒಂದು ತತ್ವಗಳಿರುತ್ತವೆ.”(New Modern of Universe P 34.)

ಬುದ್ದಿ ಮತ್ತು ಜಾಗೃತಿಗೆ ದಿವ್ಯವಾಣಿ(ವಹ್ಯ್)ಯಿಂದ ಹೊಳಪು ಸಿಗುವುದು. ದಿವ್ಯವಾಣಿ ಮಾನವ ಬುದ್ದಿಗೆ ಸಹಾಯಕವಾಗಿದೆ. ಅದು ಎಂದೂ ಬುದ್ದಿಯನ್ನು ಪಥಭ್ರಷ್ಟಗೊಳಿಸದು. ಈ ರೀತಿಯಾಗಿ ನಮ್ಮ ಮಾರ್ಗದರ್ಶನಕ್ಕೆ ಬುದ್ದಿ ಸಾಕಾಗುವುದಿಲ್ಲವೆಂದು ದಿವ್ಯವಾಣಿಯ ಅಸ್ತಿತ್ವವು ಖಚಿತಪಡಿಸುತ್ತದೆ. ಮಾನವನ ಸಕಲ ಅವಶ್ಯಕತೆಗಳೆಡೆಗೆ ಬುದ್ಧಿಯು ತಲುಪಲಾರದು.

ಲಾಕ್‌ರು(Locke) ಹೀಗೆ ಬರೆದಿದ್ದಾರೆ- ದಿವ್ಯವಾಣಿಗೆ ಸ್ಥಾನ ನೀಡಲು “ಬುದ್ದಿ ಮತ್ತು ಸೂಕ್ಷ್ಮ ಜಾಗೃತಿಯನ್ನು ತಮ್ಮಿಂದ ದೂರವಿಡುವವರೇ ದಿವ್ಯವಾಣಿ ಮತ್ತು ಬುದ್ದಿ ಎಂಬ ಎರಡು ದೀಪಗಳನ್ನು ನಂದಿಸಿರುವ ಅಪರಾಧಿಗಳಾಗಿದ್ದಾರೆ.(Essay Book IVth Quoted by Brightman.)

ಆದುದರಿಂದ ಹೆನ್ರಿ ಬರ್ಗ್ ಸನ್ ರು (Henri Bergson) ಅಂತರ್ ಪ್ರಜ್ಞೆಗೆ (Intuition) ಹೆಚ್ಚು ಮಹತ್ವ ನೀಡುತ್ತಾರೆ ಮತ್ತು ಎ.ಎಸ್. ಎಡ್ಡಿಂಗ್ಟನ್ ರ(A.S. Eddington) ಆಂತರಿಕ ವಿಶ್ವಾಸ (Inner Conviction)ಕುರಿತ ವಿಚಾರಗಳನ್ನು ನಾವು ಕಾಣುತ್ತೇವೆ.

ವಹ್ಯ್, ರಿಸಾಲತ್ (ದಿವ್ಯವಾಣಿ ಮತ್ತು ಸಂದೇಶವಾಹಕತ್ವ) ಮಾಧ್ಯಮದ ಮೂಲಕ ದೇವನು ಮಾನವರಿಗೆ ಸಂಪೂರ್ಣ ಮಾರ್ಗದರ್ಶನದ ವ್ಯವಸ್ಥೆಯನ್ನು ಮಾಡಿದ್ದಾನೆ. ಮಾನವರ ಜೀವನದ ಮೂಲ ಉದ್ದೇಶ ಮತ್ತು ವಿವರಗಳು ಅದರಿಂದ ಲಭಿಸುವುದು. ಮಾತ್ರವಲ್ಲ, ಭೌತಿಕ ಜೀವನದ ಸುತ್ತ ವ್ಯಾಪಕವಾಗಿರುವ ವಿಷಯಗಳಲ್ಲಿ ಮತ್ತು ಸಮಸ್ಯೆಗಳಲ್ಲಿ ಪ್ರವಾದಿತ್ವವು ಸಂಬಂಧ ಹೊಂದಿರುವುದು. ಪ್ರಪಂಚದಲ್ಲಿ ಆರ್ಥಿಕ, ಸಾಮಾಜಿಕ ಹೀಗೆ ಎಲ್ಲ ವಿಷಯಗಳಲ್ಲಿಯೂ ದಿವ್ಯವಾಣಿಯ ಮಾರ್ಗದರ್ಶನದಂತೆ ನ್ಯಾಯವನ್ನು ಸಂಸ್ಥಾಪಿಸಬಹುದಾಗಿದೆ ಮತ್ತು ಮಾನವರ ಮೇಲೆ ನಡೆಯುವ ಅತ್ಯಾಚಾರ, ಶೋಷಣೆಗಳಿಂದ ಬಿಡುಗಡೆಗೊಳಿಸಬಹುದಾಗಿದೆ.

ಪ್ರವಾದಿಯ ಉನ್ನತ ಸ್ಥಾನ
ಪ್ರವಾದಿಯ ಸ್ಥಾನವು (Prophet) ಅತ್ಯುನ್ನತವಾದುದು. ಆ ಸ್ಥಾನವು ಬುದ್ದಿಯ ಅತ್ಯುನ್ನತ ಮಟ್ಟದಲ್ಲಿರುವುದು. ಸಾಮಾನ್ಯ ಜನರು ಊಹಿಸಲಸಾಧ್ಯವಾಗಿರುವಷ್ಟು ಆ ಸ್ಥಾನವು ಶ್ರೇಷ್ಠವಾಗಿದೆ.

ಬುಕೆ(Buke) ಹೇಳುವಂತೆ ಆತ್ಮ ಪ್ರಜ್ಞೆ (Self Consciousness)ಯಿರುವ ಮನುಷ್ಯನು ಎಲ್ಲ ದೃಷ್ಟಿಯಿಂದಲೂ ಪ್ರಾಣಿಗಳಿಗಿಂತ ಶ್ರೇಷ್ಠ (ಉನ್ನತ)ನಾಗಿದ್ದಾನೆ. ಮನುಷ್ಯನ ಮಟ್ಟವನ್ನೇರಲು ಪ್ರಾಣಿಯಿಂದ ಎಂದೂ ಸಾಧ್ಯವಿಲ್ಲ. ಅದೇ ವೇಳೆ ಸ್ಥಿರ ರೂಪದ ವ್ಯಾಪಕ ಪ್ರಜ್ಞೆ (Cosmic Consciousness)ಯಿರುವ ವ್ಯಕ್ತಿಯು ಸಾಮಾನ್ಯ ಮಾನವರಿಗಿಂತ ಅತ್ಯಂತ ಉನ್ನತ ಸ್ಥಾನದಲ್ಲಿರುತ್ತಾನೆ. (Cosmic Consciousness P-67)

ಪ್ರಪಂಚದಲ್ಲಿ ಬುದ್ದಿಯ ಈ ಉನ್ನತ ಸ್ಥಾನ ಪಡೆದವರನ್ನು ಪ್ರವಾದಿಗಳು (ರಸೂಲ್) ಎಂದು ಕರೆಯುತ್ತೇವೆ. ಇವರಿಗೆ ಅತ್ಯುನ್ನತ ದರ್ಜೆಯ ದಿವ್ಯವಾಣಿ ಪ್ರಾಪ್ತವಾಗುವುದು. ಆದುದರಿಂದ ಇತರ ವಸ್ತುಗಳಿಗೆ ಅದರೊಡನೆ ಪೈಪೋಟಿ ನಡೆಸುವುದು ಸಾಧ್ಯವಲ್ಲ.

ದಿವ್ಯವಾಣಿ ದೇವನಿಂದ ಅವತೀರ್ಣಗೊಳ್ಳುತ್ತಿದೆಯೆಂದು ಪ್ರವಾದಿಗಳಿಗೆ ಅನುಭವವಾಗುವುದು. ದೇವನು ದಿವ್ಯವಾಣಿಯನ್ನು ಅವತೀರ್ಣಗೊಳಿಸುವ ಮೂಲಕ ಪ್ರವಾದಿಗಳಿಗೆ ಸತ್ಯವಿಶ್ವಾಸ-ನ್ಯಾಯಯುತ ಆದೇಶಗಳು, ಧಾರ್ಮಿಕ ವಿಧಿ ವಿಧಾನಗಳ ಜ್ಞಾನವನ್ನು ಕಲಿಸಿಕೊಡುತ್ತಾನೆ. ಯಾಕೆಂದರೆ ಪ್ರವಾದಿಗಳಿಗೆ ಮಾನವರ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಮಾರ್ಗದರ್ಶನ ನೀಡುವ ಹೊಣೆಯಿದೆ.

ಪ್ರವಾದಿಗಳಿಗೆ ಅವತೀರ್ಣವಾಗುವ ದಿವ್ಯವಾಣಿಯು ವಿಶಿಷ್ಟವಾದುದೆಂದು ಬರ್ಡ್‌ವೇ (Berdyav) ಹೇಳಿದ್ದಾರೆ. ಅವರ ವಿವರಣೆಯಿಂದ ದಿವ್ಯವಾಣಿಯ ಸಾಮರ್ಥ್ಯದಲ್ಲಿ ಅವರಿಗೆ ನಂಬಿಕೆಯಿತ್ತು ಎಂಬ ಪುರಾವೆಯಿದೆ. ಜೀವದೊಳಗೆ ಅಡಕವಾದ ರಹಸ್ಯಗಳನ್ನು ದಿವ್ಯವಾಣಿಯ ಮೂಲಕ ಪ್ರವಾದಿಗಳು ಬಹಳ ಸರಳವಾಗಿ ಅರ್ಥೈಸುವರೆಂಬ ಅಭಿಮತವನ್ನು ಅವರು ವ್ಯಕ್ತಪಡಿಸಿದ್ದಾರೆ. ಅಂಚೆಯಿಂದ ಬರುವ ಪತ್ರವನ್ನು ಓದಿ ನಾವು ಅದರ ವಿಚಾರವನ್ನು ತಿಳಿಯುವಂತೆ ಪ್ರವಾದಿಗಳಿಗೆ ದಿವ್ಯವಾಣಿಯ ಮೂಲಕ ಜೀವ ರಹಸ್ಯವನ್ನು ತಿಳಿಯಲು (Possibility) ಸಾಧ್ಯ ಎಂಬಂಶವನ್ನು ಬರ್ಡ್‌ವೇ ಒಪ್ಪಿದ್ದಾರೆ.

ಅವರು ಹೀಗೆ ಹೇಳಿರುವರು- “ಪ್ರವಾದಿತ್ವ ಅಥವಾ ಸಂದೇಶವಾಹಕತ್ವವು ದೈವಿಕ ವಾಣಿಯ (Revelation) ಆಧಾರಿತವಾಗಿದೆ. ಪ್ರಪಂಚ ಮತ್ತು ಮಾನವರ ವರ್ತಮಾನ, ಭವಿಷ್ಯಗಳ ಕುರಿತು ದೇವ ಧ್ವನಿಯನ್ನು ಪ್ರವಾದಿಗಳು ಆಲಿಸುತ್ತಾರೆ. ಅವರು ಏಕಾಂಗಿಯಾಗಿ ಪಾರು ಮಾಡಲು ಪ್ರಯತ್ನಿಸಿದ ಜನರೇ ಅವರ ಮೇಲೆ ಕಲ್ಲೆಸೆಯುತ್ತಾರೆ. ಇಷ್ಟೆಲ್ಲ ಕಿರುಕುಳ ನೀಡಿಯೂ ಈ ಜನರಿಂದ ಪ್ರವಾದಿಗಳು ದೂರವಾಗಲಾರರು.

ಪ್ರವಾದಿಗಳಿಗೆ ಅವತೀರ್ಣವಾಗುವ ದಿವ್ಯವಾಣಿಯು ಅವರ ಸಾಧನೆಯಲ್ಲ, ಕ್ರಮೇಣ ವಿಕಾಸ ಹೊಂದಿ ಸಿಗುವ ವಸ್ತುವೂ ಅಲ್ಲ. ಅದೊಂದು ಆಂತರಿಕ ವಿಚಾರವಾಗಿದೆ. ಪ್ರವಾದಿಯ ದಿವ್ಯವಾಣಿಗೂ ಭಾರತ ಮತ್ತು ಗ್ರೀಸ್ ದೇಶದ ಸಾಧು ಸಂತರ ಅಲೌಕಿಕ ದರ್ಶನಗಳಿಗೂ ಸಂಬಂಧವಿಲ್ಲ. ಅವೆರಡೂ ವಿಭಿನ್ನ ವಸ್ತುಗಳಾಗಿವೆ.” (The Devine and Human P. 136)

ಓಸ್ಪೆಂಸ್ಕಿಯವರು ಹೀಗೆ ಹೇಳಿದ್ದಾರೆ- ಇಂತಹ ಮಾರ್ಗದರ್ಶಕರು (ಪ್ರವಾದಿಗಳು) ಮಾನವತೆಯ ಪರಮ ಸ್ಥಾನದಲ್ಲಿ ಆಸೀನರಾಗಿರುತ್ತಾರೆ. ಅವರಲ್ಲಿ ಪರಿಪೂರ್ಣ ಆಧ್ಯಾತ್ಮಿಕ ಜ್ಞಾನವಿರುವುದು. ಇಂತಹವರು ಜೀವನದ ಹೊಸ ಸ್ತರಗಳಲ್ಲಿ ಪ್ರಕಟವಾಗುತ್ತಾರೆ. (Meaning and Purpose, by Kenneth Walker P. 96) ಪ್ರವಾದಿಗಳ ಪ್ರವಾದಿತ್ವವು ಇಂದ್ರಿಯ ವಿವೇಕಗಳಿಗೆ ಅತೀತವಾದ ಗುಣ-ಪ್ರಾವೀಣ್ಯತೆಯಾಗಿದೆ.

ಇಮಾಮ್ ಗಝಾಲಿ ಈ ರೀತಿ ಬರೆದಿದ್ದಾರೆ- “ಬುದ್ಧಿಗಿಂತ ಪ್ರವಾದಿತ್ವ ಒಂದು ದರ್ಜೆ ಉನ್ನತವಾಗಿದೆ. ಪ್ರವಾದಿತ್ವದ ಮೂಲಕ ಕಣ್ತೆರೆಸಲ್ಪಟ್ಟಿತೆಂದಾದರೆ ಬುದ್ಧಿಯಿಂದ ಯೋಚಿಸಲಾಗದ ವಿಶೇಷಾತಿವಿಶೇಷ ವಸ್ತುಗಳ ಜ್ಞಾನ ಲಭಿಸುವುದು.” (ಮಂಕಝುಮ್ ಮಿನಜ್ಜಲಾಲ್ ಪುಟ-31)

ಮುಜದ್ದಿದ್ ಅಲ್ಪ ಸಾನಿ ಮತ್ತು ಶೇಖ್ ಅಹ್ಮದ್ ಸರ್‌ಹಿಂದಿಯವರು(ರ) ದಿವ್ಯವಾಣಿಯನ್ನು ಈ ರೀತಿ ವಿಶ್ಲೇಷಿಸಿದ್ದಾರೆ. ಬುದ್ದಿ ಮತ್ತು ಜ್ಞಾನೇಂದ್ರಿಯಗಳ ಕಾರ್ಯ ವಿಧಾನವು ಬೇರೆ ಬೇರೆಯಾಗಿದೆ. ಜ್ಞಾನೇಂದ್ರಿಯಕ್ಕೆ ಗೋಚರಿಸದ ವಸ್ತುವನ್ನು ಬುದ್ಧಿ ಪತ್ತೆ ಹಚ್ಚುವುದು. ಬುದ್ದಿ ಮತ್ತು ನುಬುವ್ವತ್(ಪ್ರವಾದಿತ್ವ) ಕೂಡಾ ಭಿನ್ನ ಕಾರ್ಯ ವಿಧಾನವನ್ನು ಹೊಂದಿದೆ. ಬುದ್ದಿಗೆ ಹೊಳೆಯದ ವಸ್ತುಗಳ ಜ್ಞಾನ ನುಬುವ್ವತ್(ಪ್ರವಾದಿತ್ವ) ಮಾಧ್ಯಮದಿಂದ ದೊರೆಯುತ್ತವೆ. ಹೀಗಿರುವಾಗ ಜ್ಞಾನಕ್ಕಾಗಿ ಬುದ್ದಿಯೊಂದನ್ನು ಅವಲಂಬಿಸಲು ಹೇಗೆ ಸಾಧ್ಯ. ನಿಜಕ್ಕಾದರೆ ಬುದ್ದಿಯನ್ನು ಮೀರಿದ ಇತರ ಜ್ಞಾನ ವಿಧಾನಗಳನ್ನು ನಿರಾಕರಿಸುವವರು ಪ್ರವಾದಿತ್ವವನ್ನೇ ನಿರಾಕರಿಸುವ ತಪ್ಪು ಮಾಡುತ್ತಿದ್ದಾರೆ. ಆ ಮೂಲಕ ಅವರು ಸ್ಪಷ್ಟ ಮಾರ್ಗದರ್ಶನದಿಂದ ವಂಚಿತರಾಗಿದ್ದಾರೆ. ಮಾತ್ರವಲ್ಲ ಅವರು ಪ್ರವಾದಿತ್ವದ ವಿರೋಧಿಗಳೆಂದೂ ಸ್ಪಷ್ಟವಾಗುವುದು.

ಪ್ರವಾದಿಯ ಒಂದು ವಿಶೇಷ ಗುಣ
ಪ್ರವಾದಿಗಳಿಗೆ ಪ್ರವಾದಿತ್ವವು ಹೃದಯ ಪರಿಷ್ಕಾರಗೊಂಡ ಸ್ಥಿತಿಯಲ್ಲಿ ದೊರೆಯುವುದು. ಪ್ರವಾದಿಗಳಿಗೆ ಸುಸ್ಪಷ್ಟವಾದ ದಿವ್ಯವಾಣಿ ಲಭಿಸುವ ವೇಳೆ ದೇವನ ವತಿಯಿಂದ ಎಚ್ಚರ ಮತ್ತು ಆಂತರಿಕ ಪ್ರಕಾಶ ಪ್ರಾಪ್ತವಾಗಿರುವುದು. ಆದುದರಿಂದ ಅವರು ಬಹಳ ಸುಲಭವಾಗಿ ಸತ್ಯ ಮತ್ತು ಅಸತ್ಯದ ಅಂತರವನ್ನು ಗುರುತಿಸುತ್ತಾರೆ. ಈ ಸ್ಥಿತಿಯಲ್ಲಿ ದಿವ್ಯವಾಣಿ ಅವರು ಹೇಳುವಂತಹ ವಿಚಾರಗಳನ್ನೇ ಪುಷ್ಟಿಕರಿಸುತ್ತಾ ಅವತೀರ್ಣವಾಗುವುದು. ದಿವ್ಯವಾಣಿಯಿಂದ ಪ್ರವಾದಿಗಳ ಹೇಳಿಕೆಗಳಿಗೆ ಪುಷ್ಟಿ ಮತ್ತು ಸಾಕ್ಷಿ ದೊರೆಯುವುದೇ ಪ್ರವಾದಿತ್ವದ ವೈಶಿಷ್ಟ್ಯವಾಗಿದೆ. ಪವಿತ್ರ ಕು‌ರ್ ಆನ್ ಬೇರೆ ಬೇರೆ ಕಡೆಗಳಲ್ಲಿ ಇದನ್ನು ಪ್ರಸ್ತಾಪಿಸಿದೆ-

“ನೂಹರು ಹೀಗೆ ಹೇಳಿದರು- ಓ ನನ್ನ ಜನಾಂಗ ಬಾಂಧವರೇ, ನೀವೇ ಯೋಚಿಸಿರಿ. ನಾನು ನನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರ ಪ್ರಮಾಣದಲ್ಲಿ ಸ್ಥಿರವಾಗಿದ್ದೆ. ತರುವಾಯ ಅವನು ನನಗೆ ತನ್ನ ವಿಶೇಷ ಕೃಪೆಯನ್ನು ಪ್ರದಾನ ಮಾಡಿದನು. ಆದರೆ ಅದು ನಿಮಗೆ ಗೋಚರಿಸಲಿಲ್ಲ. ಹೀಗಿರುವಾಗ ನೀವು ಒಪ್ಪದಿದ್ದರೂ ನಾವು ಬಲಾತ್ಕರಿಸಿ ನಿಮ್ಮ ತಲೆಗೆ ಲೇಪಿಸಲು ನಮ್ಮಲ್ಲೇನು ಸಾಧನವಿದೆ?” (ಪವಿತ್ರ ಕು‌ರ್ ಆನ್, 11:28)

ಇದೇ ರೀತಿ ಪ್ರವಾದಿ ಸಾಲಿಹ್(ಅ) ಬಗೆಗೂ ಪವಿತ್ರ ಕು‌ರ್ ಆನ್ ಪ್ರಸ್ತಾಪಿಸಿದೆ. ”ಓ ನನ್ನ ಜನಾಂಗ ಬಾಂಧವರೇ, ನಾನು ನನ್ನ ಪ್ರಭುವಿನ ಕಡೆಯಿಂದ ಸುವ್ಯಕ್ತ ಪ್ರಮಾಣವನ್ನಿರಿಸಿಕೊಂಡಿದ್ದರೆ ಹಾಗೂ ಅವನು ತನ್ನ ಕೃಪೆಯನ್ನೂ ನನಗೆ ದಯಪಾಲಿಸಿದ್ದರೆ, ಆ ಬಳಿಕ ನಾನು ಅವನ ಆಜ್ಞೋಲ್ಲಂಘನೆ ಮಾಡಿದರೆ, ನನ್ನನ್ನು ಅಲ್ಲಾಹನ ಹಿಡಿತದಿಂದ ರಕ್ಷಿಸುವವರಾರು? ನೀವು ಇದರ ಬಗ್ಗೆ ವಿವೇಚಿಸಿದಿರಾ? ನೀವು ನನ್ನನ್ನು ಇನ್ನಷ್ಟು ನಷ್ಟಕ್ಕೆ ಗುರಿಪಡಿಸುವಿರೇ ವಿನಾ ಇನ್ನೇನು ಮಾಡಬಲ್ಲಿರಿ?” (ಪವಿತ್ರ ಕು‌ರ್ ಆನ್, 11:63)

ಅಲ್ಲಾಹನ ಅಂತಿಮ ಪ್ರವಾದಿ ಮುಹಮ್ಮದರು(ಸ) ಸಂದೇಶ ಪ್ರಚಾರ ಕಾರ್ಯ ಆರಂಭಿಸಿದಾಗ ಅವಿವೇಕಿಗಳು, ‘ಈ ವ್ಯಕ್ತಿ ಸ್ವತಃ ರಚಿಸಿ ದೇವನ ವಚನಗಳೆಂದು ಹೇಳುತ್ತಿದ್ದಾನೆ’ ಎಂದು ತೀವ್ರವಾಗಿ ವಿರೋಧಿಸಿದರು. ಆದರೆ ಪವಿತ್ರ ಕುರ್‌ಆನ್ ಇಂತಹವರಿಗೆ ಸವಾಲೊಡ್ಡಿತು. ಇದು ದೇವನ ವತಿಯಿಂದಲ್ಲವಾದರೆ ಇಂತಹ ವಚನಗಳನ್ನು ರಚಿಸಿ ತನ್ನಿರಿ ಎಂಬ ಪವಿತ್ರ ಕು‌ರ್ ಆನಿನ ಸವಾಲು ಇಂದಿಗೂ ಹಾಗೆಯೇ ಉಳಿದಿದೆ. ಯಾಕೆಂದರೆ ದೇವನ ವಚನಗಳನ್ನು ಸುಳ್ಳಾಗಿಸುವವರು ದೇವನೊಡನೆ ಸ್ಪರ್ಧೆಗಿಳಿಯುತ್ತಾರೆ. ಆದರೆ ದೇವನೊಡನೆ ಪೈಪೋಟಿ ನಡೆಸಲು ಮತ್ತು ದೇವವಚನದಂತಿರುವುದನ್ನು ರಚಿಸಲು ಯಾರಿಂದಲೂ ಸಾಧ್ಯವಿಲ್ಲ.

ಪ್ರವಾದಿಯನ್ನು(ಸ) ಅಂದು ವಿರೋಧಿಸುತ್ತಿದ್ದವರು ಪ್ರಾಪಂಚಿಕ ಸುಖ ಸೌಕರ್ಯಗಳ ಆರಾಧಕರಾಗಿದ್ದರು. ಸತ್ಯವನ್ನು ವಿರೋಧಿಸಿದರೆ ನರಕಾಗ್ನಿಯೇ ಪರಿಣಾಮವೆಂಬ ಕಲ್ಪನೆ ಅವರಲಿಲ್ಲ. ಇಂತಹ ಅಂಧಕಾರದಲ್ಲಿ ಜೀವಿಸುವುದೆಂದರೆ ಕತ್ತಲೆಯಲ್ಲಿ ತಡಕಾಡಿದಂತೆ ಎಂದು ಪ್ರವಾದಿಗಳು ಕರೆ ನೀಡಿದ್ದರು. ಪಥಭ್ರಷ್ಟತೆ ಮತ್ತು ಅಂಧಕಾರ ಯಾವತ್ತಿದ್ದರೂ ಸತ್ಯಮಾರ್ಗ ಮತ್ತು ಪ್ರಕಾಶಗಳಿಗೆ ಸಮಾನವಲ್ಲ.

ಪೂರ್ಣ ಪ್ರಕಾಶದಲ್ಲಿರುವವರಿಗೆ ಪ್ರವಾದಿಯ ಸ್ಥಾನವು ದೊರೆಯುತ್ತದೆ. ಅವರು ಸತ್ಯಪ್ರಿಯನೂ ಅಂಧಕಾರದಿಂದ ಸಂಪೂರ್ಣ ಮುಕ್ತನೂ ಆಗಿರಬೇಕು. ಪ್ರವಾದಿ ಮುಹಮ್ಮದರು(ಸ) ಇಂತಹ ವ್ಯಕ್ತಿಯಾಗಿದ್ದರು. ಪವಿತ್ರ ಕುರ್ ಆನ್ ಅವರನ್ನು ಹೀಗೆ ಉಲ್ಲೇಖಿಸಿದೆ.

”ತನ್ನ ಪ್ರಭುವಿನ ಕಡೆಯಿಂದ ಪ್ರತ್ಯಕ್ಷ ಪ್ರಮಾಣವನ್ನು ಪಡೆದ ವ್ಯಕ್ತಿಯು ಆ ಬಳಿಕ (ಆ ಪ್ರಮಾಣಕ್ಕೆ ಪೂರಕವಾಗಿ) ಪ್ರಭುವಿನ ಕಡೆಯಿಂದ ಒಂದು ಸಾಕ್ಷ್ಯವೂ ಬಂದಾಗ ಮತ್ತು ಅದಕ್ಕೆ ಮುಂಚೆ ಮಾರ್ಗದರ್ಶಿ ಹಾಗೂ ಕೃಪೆಯಾಗಿ ಬಂದಿದ್ದ ಮೂಸಾರ ಗ್ರಂಥವೂ ಇರುವಾಗ (ಅವನು ಲೋಕೋಪಾಸಕರಂತೆ ಇದನ್ನು ನಿರಾಕರಿಸಬಲ್ಲನೇ?) ಇಂತಹವರು ಖಂಡಿತ ಇದರಲ್ಲಿ ವಿಶ್ವಾಸ ಇರಿಸುವರು. ಯಾವುದಾದರೂ ಜನ ವಿಭಾಗವು ಇದನ್ನು ನಿರಾಕರಿಸಿದರೆ ಅದಕ್ಕೆ ವಾಗ್ದಾನವೀಯಲಾಗಿರುವ ಸ್ಥಾನವು ನರಕಾಗ್ನಿಯೇ, ಆದುದರಿಂದ ಓ ಸಂದೇಶವಾಹಕರೇ! ಇದರ ಬಗ್ಗೆ ನೀವು ಯಾವುದೇ ಸಂದೇಹಕ್ಕೊಳಗಾಗಬೇಡಿರಿ. ಇದು ನಿಮ್ಮ ಪ್ರಭುವಿನಿಂದ ಬಂದಿರುವ ಪರಮ ಸತ್ಯ. ಆದರೆ ಹೆಚ್ಚಿನವರು ವಿಶ್ವಾಸವಿರಿಸುವುದಿಲ್ಲ”. (ಪವಿತ್ರ ಕುರ್‌ಆನ್, 11-17)

‘ಆ ವ್ಯಕ್ತಿ’ ಎಂದು ಈ ವಚನವು ಪ್ರವಾದಿ ಮುಹಮ್ಮದರನ್ನು(ಸ) ಸಂಬೋಧಿಸಿದೆ. ಪ್ರವಾದಿತ್ವಕ್ಕಿಂತ ಮೊದಲೇ ಪ್ರವಾದಿತ್ವವನ್ನು ಸ್ವೀಕರಿಸಲು ಸೂಕ್ತವಾದ ಪ್ರಕಾಶ ಮತ್ತು ಅಂತ‌ರ್ ದೃಷ್ಟಿಯನ್ನು ಅವರಿಗೆ ನೀಡಲಾಗಿತ್ತು ಎಂದು ಇಲ್ಲಿ ವಿವರಿಸಲಾಗುತ್ತಿದೆ. ಅಂದರೆ ಪ್ರವಾದಿಯಾಗುವ ವ್ಯಕ್ತಿಯ ಆತ್ಮ ಮತ್ತು ಹೃದಯಗಳ ಪರಿಷ್ಕರಣೆ ನಡೆಯುವುದು. ಆನಂತರವೇ ಅವರು ದೇವವಾಣಿಯನ್ನು ಸ್ವೀಕರಿಸಲು ಯೋಗ್ಯರೆನಿಸುವರು. ಆನಂತರ ದಿವ್ಯವಾಣಿ ಒಮ್ಮೆ ಲಭಿಸತೊಡಗಿದರೆ ಕಿಂಚಿತ್ತೂ ಗೊಂದಲವಿಲ್ಲದೆ ಇದು ದೇವನ ವತಿಯಿಂದ ಅವತೀರ್ಣವಾಗುತ್ತಿದೆ ಎಂದು ಅವರು ಅರಿತುಕೊಳ್ಳುವರು. ಪ್ರವಾದಿವರ್ಯರ(ಸ) ಪ್ರವಾದಿತ್ವಕ್ಕಿಂತ ಪೂರ್ವ ಜೀವನದಲ್ಲಿ ಇದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅವರ ಆತ್ಮ ಪರಿಶುದ್ಧವಾಗಿತ್ತು. ಸಕಲ ಕೆಡುಕುಗಳಿಂದ ಅವರು ಪರಿಶುದ್ಧರಾಗಿದ್ದರು. ಮನಸ್ಸಿನ ಮತ್ತು ಆತ್ಮದ ನಿಷ್ಕಳಂಕತೆಯು ಪ್ರವಾದಿವರ್ಯರ(ಸ) ವಿಶೇಷ ಗುಣವಾಗಿತ್ತು. ವಿಚಾರಗಳಲ್ಲಿ ಕರ್ಮಗಳಲ್ಲಿ ಕೆಡುಕಿನೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಕಪಟ ದೇವತೆಗಳ ಸಮಕ್ಷಮ ಅವರೆಂದೂ ತಲೆಬಾಗಿದವರಲ್ಲ. ಮೂರ್ತಿ ಪೂಜೆಯಿಂದ ಮಾರು ದೂರವಿದ್ದರು. ಮದ್ಯ ಸೇವನೆ-ಅಶ್ಲೀಲ ಕರ್ಮಗಳಂತಹ ಕೆಡುಕುಗಳನ್ನು ಅವರಲ್ಲಿ ಯೋಚಿಸುವುದಕ್ಕೂ ಸಾಧ್ಯವಿರಲಿಲ್ಲ. ಅವರ ಗಮನ ಎಲ್ಲವೂ ಏಕದೇವನ ಕಡೆಗಿತ್ತು. ಈ ರೀತಿ ನುಬುವ್ವತ್ (ಪ್ರವಾದಿತ್ವ)ಗಿಂತ ಮುಂಚಿನ ಪ್ರವಾದಿವರ್ಯರ(ಸ) ಜೀವನವು ಪ್ರವಾದಿತ್ವ ಸ್ವೀಕರಿಸಲು ಸರ್ವ ರೀತಿಯಲ್ಲಿ ಸಜ್ಜಾಗಿತ್ತು ಎಂದು ಸ್ಪಷ್ಟವಾಗಿ ತಿಳಿಯುತ್ತದೆ.

ಪ್ರವಾದಿತ್ವ ಅವತೀರ್ಣಗೊಂಡ ಮೇಲೆ ಅವರಿಗೆ ಸದಾ ಪ್ರಿಯವಾಗಿದ್ದ ಸತ್ಯಕ್ಕೇ ಅವರು ಸ್ವಯಂ ಸಾಕ್ಷಿಯಾದರು. ಇನ್ನು ಪ್ರವಾದಿವರ್ಯರಿಗೆ(ಸ) ನುಬುವ್ವತ್ ಪ್ರಾಪ್ತವಾಯಿತೆಂದರೆ ಅದು ಪ್ರಕಾಶಕ್ಕೆ ಪ್ರಕಾಶ ಸೇರಿತೆಂದೇ ಅರ್ಥ. ಈ ಮೂಲಕ ಮಾಧುರ್ಯ ಮಾಧುರ್ಯವನ್ನೇ ಗೌರವಿಸಿತು ಎನ್ನಬಹುದು. ಸೌಂದರ್ಯವು ಸೌಂದರ್ಯವನ್ನು ಸ್ವಾಗತಿಸಿತು. ಪಾವಿತ್ರ್ಯವನ್ನು ಪಾವಿತ್ರ್ಯವು ಸಮರ್ಥಿಸಿತು ಎಂದು ಪ್ರವಾದಿವರ್ಯರಿಗೆ(ಸ) ಪ್ರವಾದಿತ್ವ ಲಬ್ಧಿಯನ್ನು ವಿಶ್ಲೇಷಿಸಬಹುದಾಗಿದೆ. ಇನ್ನೊಂದು ಮಾತಿನಲ್ಲಿ, ದೇವನು ಪ್ರವಾದಿತ್ವದ ಸತ್ಯಕ್ಕೆ ಸ್ವಯಂ ಪ್ರವಾದಿಯನ್ನೇ ಸಾಕ್ಷಿಯಾಗಿಸಿರುವನು ಎಂದೂ ಹೇಳಬಹುದು. ಪ್ರವಾದಿತ್ವದ ನಂತರ ಪ್ರವಾದಿವರ್ಯರಿಗೆ(ಸ) ಸತ್ಯದ ವಿಸ್ತಾರವಾದ ಜ್ಞಾನ, ಅದರಂತೆ ವ್ಯವಹರಿಸಲು ಸೂಕ್ತವಾದ ಶಿಕ್ಷಣವನ್ನು ದಿವ್ಯವಾಣಿಯ ಮೂಲಕ ನೀಡಲಾಯಿತು ಎಂದೂ ವಿಶ್ಲೇಷಿಸಬಹುದು.

ಮೇಲಿನ ಪವಿತ್ರ ಕು‌ರ್ ಆನ್ ವಚನಗಳಲ್ಲಿ ಪ್ರತ್ಯಕ್ಷ(ಸ್ಪಷ್ಟ) ಪ್ರಮಾಣವೆಂದು ಸೂಚಿಸಲಾಗಿದೆಯಷ್ಟೇ. ಇದು ಅರಬಿ ಮೂಲದ ‘ಬಯ್ಯಿನ’ ಎಂಬ ಪದದ ಅನುವಾದವಾಗಿದೆ. ಪ್ರತ್ಯಕ್ಷ ಪ್ರಮಾಣ ಮತ್ತು ಆನಂತರ ಸಾಕ್ಷ್ಯವು ಬರುವುದೆಂದು ಪವಿತ್ರ ಕುರ್‌ಆನ್ ಸೂಚಿಸಿದೆ. ಪ್ರವಾದಿತಕ್ಕೆ ಮೊದಲು ಅವರು ಅದನ್ನು ಸ್ವೀಕರಿಸಲು ಯೋಗ್ಯವಾದ ಸತ್ಯಸಂಧರೇ ಆಗಿರುವರು. ಅಂದರೆ ಅವರಿಗೆ ವಹ್ಯ್ ಲಭಿಸುವ ಮೊದಲೇ ಅವರು ಸತ್ಯದ ಪ್ರಕಾಶದಲ್ಲಿರುತ್ತಾರೆ. ಅವರ ಬುದ್ದಿ-ವಿವೇಕ, ಅಭಿರುಚಿ ಮತ್ತು ಚಾರಿತ್ರ್ಯವು ಅತ್ಯುತ್ತಮವೂ ಪವಿತ್ರವೂ ಆದ ಸ್ಥಿತಿಯಲ್ಲಿರುವುದು ಎಂದು ಪವಿತ್ರ ಕುರ್‌ಆನ್ ವಚನಗಳಿಂದ ತಿಳಿದು ಬರುತ್ತದೆ ಮತ್ತು ಪ್ರವಾದಿಗೆ ಅವತೀರ್ಣಗೊಳ್ಳುವ ದಿವ್ಯವಾಣಿಯು ರಹ್ಮತ್(ದಯೆ) ರಿಝ್ಕ್ ಹಸನ್ (ಉತ್ತಮ ಜೀವನಾಧಾರ) ಮತ್ತು ಪ್ರಕಾಶವಾಗಿದೆ ಎಂದು ಈ ವಚನಗಳಿಂದ ವ್ಯಕ್ತವಾಗಿದೆ. ಇಂತಹ ಅನೇಕ ಉದಾಹರಣೆಗಳು ಪವಿತ್ರ ಕು‌ರ್ ಆನಿನಲ್ಲಿದೆ ಮತ್ತು ಪೂರ್ವ ದೈವಿಕ ಗ್ರಂಥಗಳಾದ ತೌರಾತ್-ಇಂಜೀಲ್‌ಗಳಲ್ಲಿಯೂ ಇವೆ.

ಅಲ್ಲಾಮಾ ಹಮೀದುದ್ದೀನ್ ಫರಾಹಿಯವರು(ರ) ಈ ರೀತಿ ಬರೆಯುತ್ತಾರೆ-“ದೇವನು ಪ್ರವಾದಿಗೆ ಸರ್ವ ಪ್ರಥಮವಾಗಿ ತೌಹೀದ್, ನಮಾಝ್, ಸಮರ್ಪಣೆಯ ಶಿಕ್ಷಣ ನೀಡುತ್ತಾನೆ. ಅದರಿಂದ ಪ್ರವಾದಿಗಳ ಹೃದಯವು ಶಾಂತವಾಗುತ್ತದೆ. ಆನಂತರ ಪ್ರವಾದಿಗಳ ಪ್ರಕೃತಿಗೆ ಆವಶ್ಯಕವಾಗಿರುವುದು ದಿವ್ಯವಾಣಿ ಮೂಲಕ ದೊರೆಯುತ್ತದೆ.” (ನೋಡಿರಿ, ಪವಿತ್ರ ಕು‌ರ್ ಆನ್, 20:12-16)

ಏಕದೇವತ್ವ ಮತ್ತು ನಮಾಝ್ ನ ಶಿಕ್ಷಣದ ಬಳಿಕ ಇಹ್ ಸಾನ್, ಅರ್ಥಾತ್ ಒಳಿತಿನ ಶಿಕ್ಷಣವನ್ನು ಪ್ರವಾದಿಗಳಿಗೆ ನೀಡಲಾಗುವುದು. ನಮಾಝ್ ಮತ್ತು ಝಕಾತ್ ಗಳು ಸಕಲ ಒಳಿತಿನ ಮೂಲಗಳಾಗಿವೆ. ಪ್ರವಾದಿಗಳು ಜನರನ್ನು ಅವುಗಳೆಡೆಗೆ ಆಮಂತ್ರಿಸುವರು. ಅವುಗಳ ಆಧಾರದಲ್ಲಿ ಸ್ವರ್ಗದ ಸೂಚನೆಯನ್ನು ನೀಡುವರು ಮತ್ತು ಪರಲೋಕದಲ್ಲಿ ಎದುರಿಸಬೇಕಾದ ಭಯಾನಕ ಸ್ಥಿತಿಯನ್ನು ವಿವರಿಸುವರು. ಅಂದರೆ ಸಕಲ ಕೆಡುಕುಗಳು ಮತ್ತು ವಿನಾಶಕ್ಕೆ ನಮಾಝ್ ಮತ್ತು ಝಕಾತ್ ಉಲ್ಲಂಘನೆ ಕಾರಣವೆಂದು ಜನರಿಗೆ ಪ್ರವಾದಿಗಳು ತಿಳಿಸುವರು.

ಪ್ರವಾದಿಗಳ ಶಿಕ್ಷಣದಿಂದ ಆತ್ಮವು ಅವರ ಶಿಕ್ಷಣ ಮೂಲವಾಗಿದೆ ಎಂದು ತಿಳಿಯುತ್ತದೆ. ಪ್ರವಾದಿಗಳು ಆತ್ಮವನ್ನು ಸಂಬೋಧಿಸಿ ಸತ್ಯದೆಡೆಗೆ ಕರೆ ನೀಡುತ್ತಾರೆ. ಅದಕ್ಕೆ ಸೂಕ್ತವಾದ ನಿಯಮ ಶಿಷ್ಟಾಚಾರಗಳನ್ನು ಅನುಸರಿಸಲು ಜನರಿಗೆ ಹೇಳುತ್ತಾರೆ. ಈ ಕುರಿತು ಫಿನ್ಸಿಪಾಲ್ ಕ್ರೆಡಿಟ್‌ರು ಈ ರೀತಿ ಉಲ್ಲೇಖಿಸಿದ್ದಾರೆ.

“ಪರಮ ಸತ್ಯಕ್ಕೆ ಜೀವ(ಆತ್ಮವು) ಅಪರಿಚಿತವಾಗಿಲ್ಲ. ಒಂದು ವೇಳೆ ನಮಗೆ ಅದೆಲ್ಲಿಯೋ ದೂರದಲ್ಲಿದೆ ಎಂದೆನಿಸಿದರೂ ನಮ್ಮ ನಡುವೆಯೇ ಅದು ಇರುವುದು. ಪರಮ ಸತ್ಯಕ್ಕೆ ತಲೆ ಬಾಗುವುದರಿಂದ ನಮಗೆ ಯಾವ ಹಾನಿಯೂ ಸಂಭವಿಸದು. ನಾವು ಯಾವುದೋ ಬಾಹ್ಯ ದಮನಕಾರಿ ಕಾನೂನನ್ನು ಅಥವಾ ಬಾಹ್ಯ ಸತ್ಯವನ್ನೂ ಸ್ವೀಕರಿಸಿದಂತಾಗುವುದಿಲ್ಲ. ಆ ಮೂಲಕ ನಾವು ನಮ್ಮದೇ ಪ್ರಕೃತಿಯ ಕಾನೂನನ್ನು, ಅನುಸರಿಸಿದಂತಾಗುವುದು. ಅಂದರೆ ನಮ್ಮ ಹೃದಯದ ಆಳದಲ್ಲಿ ಒಬ್ಬ ಆಡಳಿತಗಾರನಿದ್ದಾನೆ. ಅವನ ಆದೇಶಗಳನ್ನೇ ಪಾಲಿಸುತ್ತೇವೆ ಅಷ್ಟೇ.”

ನಮ್ಮ ಮತ್ತು ದೇವನ ನಡುವೆ ಸಂಬಂಧವಿರುವುದರಿಂದ ದೇವಾದೇಶಗಳನ್ನು ಪಾಲಿಸುವುದು ತಪ್ಪಲ್ಲ, ಆ ಮೂಲಕ ನಮ್ಮದೇ ಪ್ರಕೃತಿಯನ್ನು ನಾವು ಗೌರವಿಸುತ್ತೇವೆ. ಭೂಮಿಯಲ್ಲಿರುವ ಪ್ರಾಣಿಗಳು ಕೂಡಾ ಪ್ರಕೃತಿಯ ಆದೇಶಗಳನ್ನು ಪಾಲಿಸಬೇಕಾಗಿದೆ. ಹೌದು, ಪ್ರಕೃತಿಯ ಆದೇಶಗಳನ್ನು ಅನುಸರಿಸಿಯೇ ಭೂಮಿಯಲ್ಲಿ ಅವು ಬದುಕುತ್ತವೆ.

ಜಗತ್ತು ಪ್ರಕೃತಿಯನ್ನು ಅನುಸರಿಸುತ್ತಿದೆ ಮತ್ತು ಈ ಅನುಸರಣೆಯಿಂದ ಜಗತ್ತಿನಲ್ಲಿ ಸಕಲ ಸೌಂದರ್ಯಗಳು ಗೋಚರಿಸುತ್ತಿವೆ. ಪ್ರಕೃತಿಯ ಅನುಸರಣೆಯಂತೆ ಜಗತ್ತಿನಲ್ಲಿ (ಅಥವಾ ಪ್ರಕೃತಿಯ ದೈವಿಕ ನಿಯಮವನ್ನು ಪಾಲಿಸುವುದರಿಂದ) ಪ್ರತಿಯೊಂದು ಚಲನೆಗಳಾಗುವುದನ್ನು ಕಾಣಬಹುದು.

ನಮಗೆ ಪ್ರವಾದಿಗಳ ಮೂಲಕ ಪ್ರಾಕೃತಿಕ ಮತ್ತು ನೈಸರ್ಗಿಕ ಆದೇಶಗಳ ಬಗ್ಗೆ ತಿಳಿಯುವುದು. ಅಂದರೆ ಪ್ರವಾದಿಯಿಂದ ನಾವು ವಾಸ್ತವಿಕ ಪ್ರಕೃತಿಯನ್ನು ಅರಿತುಕೊಳ್ಳುತ್ತೇವೆ. ನಮ್ಮ ನೈಜ ಬಯಕೆ ಅಭಿಲಾಷೆಗಳನ್ನು ನಮಗೆ ಅವರಿಂದ ನಮಗೆ ತಿಳಿಯುವುದು. ಅಂದರೆ ಪ್ರವಾದಿಯು ಪ್ರಕೃತಿಯ ಧ್ವನಿಯಾಗಿದ್ದಾರೆ. ಅವರು ತಂದಿರುವ ಧರ್ಮ ಪ್ರಕೃತಿ ಧರ್ಮವಾಗಿದೆ. ಪ್ರಾಕೃತಿಕ ಆದೇಶವನ್ನು ಮಾರೂಫ್(ಒಳಿತಿನಾದೇಶ) ಎನ್ನಲಾಗಿದೆ. ಪ್ರವಾದಿ ತೋರಿಸಿಕೊಟ್ಟಿರುವ ದಾರಿಯನ್ನು ಸಿರಾತೆ ಮುಸ್ತಕೀಮ್(ನೇರ, ಸಹಜ ಮಾರ್ಗ) ಎನ್ನಲಾಗಿದೆ.

ಪ್ರವಾದಿಗಳು ತಡೆಯುವ ಕಾರ್ಯವನ್ನು ಮುಂಕರ್ (ಕೆಡುಕು Unfamiliar) ಅವರ ಉಪದೇಶಗಳನ್ನು ತದ್‌ಕೀರ್ (ಅನುಸ್ಮರಣೆ) ಎನ್ನುತ್ತೇವೆ. ಪ್ರವಾದಿಗಳ ಕಾರ್ಯವು ಪ್ರಕೃತಿ ವಿರೋಧಿಯಲ್ಲ. ಮಾನವರಲ್ಲಿ ಮೂಲದಲ್ಲೇ ಇರುವ ವಿಚಾರವನ್ನು ಸ್ಪಷ್ಟಪಡಿಸುವುದು ಅವರ ಕಾರ್ಯವಾಗಿದೆ. ಅದು ಅವರು ಮಾನವರಿಗೆ ಮಾಡುವ ಉಪಕಾರವಾಗಿದೆ. ಆದುದರಿಂದ ಪ್ರವಾದಿಗಳನ್ನು ವಿರೋಧಿಸುವವರಿಂದ ತಮ್ಮ ಕೃತ್ಯಗಳನ್ನು ಲೋಕಾಂತ್ಯದಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಅಂದು ಸತ್ಯವನ್ನು ನಾವರಿಯೆವು ಎನ್ನಲಾರರು. ನಾವು ಕೃತಜ್ಞರು, ಸತ್ಯವನ್ನು ನಿರಾಕರಿಸಿದವರು ಎಂದು ತಮ್ಮ ವಿರುದ್ಧವೇ ಅಂದು ಸಾಕ್ಷಿ ನುಡಿಯುವರು. ಆ ರೀತಿ ಅವರು ತಮ್ಮ ಬಂಡಾಯವನ್ನು ಸ್ವಯಂ ಒಪ್ಪಿಕೊಳ್ಳುವರು. (ಪವಿತ್ರ ಕುರ್ ಆನ್, 6:130)

ಈ ರೀತಿ ಪ್ರವಾದಿಗಳಿಂದ ಬಂದ ಧರ್ಮ ನೈಜ ಧರ್ಮವಾಗಿದೆ ಎಂದು ತಿಳಿದು ಬರುವುದು. ಆದುದರಿಂದ ಆ ಧರ್ಮದಂತೆ ನಮ್ಮ ನೈಜ ಬಯಕೆ- ಕಾಮನೆ-ಅಭಿಲಾಷೆಗಳೆಲ್ಲವೂ ಇರಬೇಕಾಗಿದೆ. ಇದನ್ನು ನಿರಾಕರಿಸುವುದು ಬಂಡಾಯವಾಗಿದೆ.

ಪ್ರವಾದಿಗಳು ಇಂತಹ ಜನಾಂಗಗಳ ಸುಧಾರಣೆಗಾಗಿ ಆಗಮಿಸುತ್ತಾರೆ. ಪ್ರವಾದಿಗಳ ಆಗಮನದೊಂದಿಗೆ ಆ ಜನಾಂಗಗಳ ಪರೀಕ್ಷೆ ಮತ್ತು ನಿರ್ಧಾರ ದಿನಗಳು ಎದುರಾಗುವುದು. ಪವಿತ್ರ ಕುರ್‌ಆನ್ ಮತ್ತು ಅದಕ್ಕಿಂತ ಮುಂಚಿನ ದೈವಿಕ ಗ್ರಂಥಗಳಲ್ಲಿ ಈ ಕುರಿತು ಉಲ್ಲೇಖಗಳಿವೆ. ಅವುಗಳಲ್ಲಿ ಸತ್ಯಾಸತ್ಯ ಸಂಘರ್ಷದ ಮಾಹಿತಿಯಿದ್ದು ಅಂತಿಮವಾಗಿ ಸತ್ಯವೇ ಜಯ ಪಡೆದಿದೆ ಎಂದು ತಿಳಿಯುವುದು. ಸತ್ಯದ ಹಿಂಬಾಲಕರು ಕಡಿಮೆ ಸಂಖ್ಯೆಯಲ್ಲಿದ್ದರೂ ಅಪಾರ ಸಂಖ್ಯೆಯಲ್ಲಿ ವಿರೋಧಿಗಳಿದ್ದರೂ ಕೊನೆಯದಾಗಿ ಸತ್ಯವೇ ಗೆದ್ದು ಪ್ರವರ್ಧಮಾನಕ್ಕೆ ಬಂದಿತ್ತು. ಯಾಕೆಂದರೆ ಸತ್ಯವಿರೋಧಿಗಳ ವಿದ್ರೋಹವು ಮಿತಿ ಮೀರಿದಾಗ ದೈವಿಕ ಪ್ರಕೋಪದಿಂದ ವಿರೋಧಿಗಳ ನಾಶ ಸಂಭವಿಸಿದೆ. ಇಂತಹ ವಿನಾಶಕ್ಕಿಂತ ಮೊದಲು ಅವರಿಗೆ ತಮ್ಮ ಬಂಡಾಯವನ್ನು ತೊರೆದು ಸತ್ಯವನ್ನು ಬೆಂಬಲಿಸುವ ಕಾಲಾವಕಾಶವನ್ನು ನೀಡಲಾಗುತ್ತಿತ್ತು. ಆದರೆ ವಿರೋಧಿಗಳು ತಮ್ಮ ನೀತಿಗೆ ಅಂಟಿಕೊಂಡು ಹೆಚ್ಚೆಚ್ಚು ವಿದ್ರೋಹದಲ್ಲಿ ಮುಳುಗಿದಾಗ ಅವರಿಗೆ ಭೂಮುಖದಲ್ಲಿ ಜೀವಿಸುವ ಅವಕಾಶವು ಕೊನೆಗೊಳ್ಳುವುದು. ಅವರ ನಾಶ ಸಂಭವಿಸುವುದು. ಸತ್ಯದ ಹಿಂಬಾಲಕರು ಕಡಿಮೆ ಸಂಖ್ಯೆಯಲ್ಲಿದ್ದರೂ ಇವರ ವಿರುದ್ಧ ಜಯಗಳಿಸುವರು. ಯಾಕೆಂದರೆ ಅದು ದೇವೇಚ್ಛೆಯಾಗಿದೆ.

ಪ್ರವಾದಿತ್ವವನ್ನು ಪ್ರವಾದಿಗಳು ಸಂದೇಹಾತೀತವಾಗಿ ಗುರುತಿಸುತ್ತಾರೆ ಎಂಬ ವಿಚಾರವನ್ನು ಈ ಮೊದಲು ಚರ್ಚಿಸಲಾಗಿತ್ತು. ತಾವು ಆಲಿಸಿದ್ದು, ವೀಕ್ಷಿಸಿದ್ದು ಎಲ್ಲವೂ ಸತ್ಯವಾಗಿದೆ ಎಂದು ಅವರಿಗೆ ಖಚಿತವಾಗುವುದು. ಈ ರೀತಿ ಪ್ರವಾದಿಗಳಿಗೆ ದೇವನು ತೋರಿಸಿಕೊಡುವ ಸತ್ಯಸಂಗತಿಗಳು. ದೃಶ್ಯ ಅಥವಾ ಅದೃಶ್ಯ ರೂಪದಲ್ಲಿರಬಹುದು ಅಥವಾ ನೇರವಾಗಿ ಹೃದಯದೊಳಕ್ಕೆ ಸಿಗುವ ಜ್ಞಾನಗಳಾಗಿರಬಹುದು. ವಾಣಿಗಳಾಗಿರಬಹುದು ಅಥವಾ ದಿವ್ಯವಾಣಿ (Revolution)ಯೇ ಅವತೀರ್ಣವಾಗಿರಬಹುದು. ಇವೆಲ್ಲವೂ ದೇವನಿಂದ ಬಂದಿದೆ ಎಂದು ಅವರು (ಪ್ರವಾದಿಗಳು) ನಿಸ್ಸಂದೇಹವಾಗಿ ತಿಳಿಯುತ್ತಾರೆ. ಇದರಲ್ಲಿ ಶೈತಾನನ ದುಷ್ಟ ಪ್ರಭಾವಗಳಿಲ್ಲ ಎಂದು ಅವರಿಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಯಾಕೆಂದರೆ ಪ್ರವಾದಿಗೆ ತಾನೋರ್ವ ಪ್ರವಾದಿಯೆಂಬ ವಿಚಾರ ಖಚಿತವಾಗಿ ತಿಳಿದಿರುತ್ತದೆ.

ಪ್ರವಾದಿಗಳಿಗೆ ದೇವನ ಸತ್ಯ ದರ್ಶನವಾಗಿ ಅವರು ತಾನು ಪ್ರವಾದಿಯೆಂಬ ಅಚಲ ವಿಶ್ವಾಸವನ್ನು ಹೊಂದುವರು. ಮೀನಿಗೆ ಈಜಾಡುವ ಭರವಸೆಯಿರುವಂತೆ, ಹಕ್ಕಿಗಳಿಗೆ ಹಾರಾಡುವ ವಿಶ್ವಾಸ ಇರುವಂತೆ ಪ್ರವಾದಿಗೂ ತಾನು ಪ್ರವಾದಿ ಎಂಬ ದೃಢ ವಿಶ್ವಾಸ-ಭರವಸೆಗಳು ಮೂಡುತ್ತವೆ. ಅಂದರೆ ತಾನು ಪ್ರವಾದಿಯೇ ಅಥವಾ ಪ್ರವಾದಿಯೆಂಬುದು ತನ್ನ ಭ್ರಮೆಯಾಗಿದೆಯೇ ಎಂಬ ಚಂಚಲತೆ ಎಂದೂ ಪ್ರವಾದಿಗಳಿಗೆ ಆಗಲಾರವು. ಯಾಕೆಂದರೆ ಅವರು ದೇವನ ಪೂರ್ಣ ಪ್ರಕಾಶದಲ್ಲಿರುತ್ತಾರೆ ಮತ್ತು ಆ ಪ್ರಕಾಶದೆಡೆಗೆ ಜನರನ್ನು ಕರೆಯುತ್ತಾರೆ.

ಆನಂತರ ಪ್ರವಾದಿಗಳಿಗೆ ನೀಡಲಾದ ಸ್ಥಾನಕ್ಕೆ ಅರ್ಹವಾಗಿ ಆಕಾಶ ಭೂಮಿಗಳನ್ನು ಆವರಿಸಿರುವ ದೇವ ಸಾಮ್ರಾಜ್ಯವನ್ನು ತೋರಿಸಲಾಗುವುದು. ಅವರ ಮುಂದಿನಿಂದ ಭೌತಿಕ ಆವರಣಗಳು ಸರಿದು ಸತ್ಯದರ್ಶನವಾಗುವುದು. ಜನರು ಈ ಸತ್ಯದಲ್ಲಿ ಪರೋಕ್ಷ ವಿಶ್ವಾಸವಿರಿಸಬೇಕೆಂದು ಪ್ರವಾದಿಗಳು ಕರೆ ನೀಡುತ್ತಾರೆ.

ಪ್ರವಾದಿಯ ಪದವು ಯಾವುದೇ ದಾರ್ಶನಿಕ ಪದವಲ್ಲ, ಅದಕ್ಕೆ ಸಂಪೂರ್ಣ ಭಿನ್ನವಾಗಿದೆ. ಅವರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಜ್ಞಾನ ದೊರೆಯುವುದು. ಈ ಆಧಾರದಲ್ಲಿ ಅವರ ಸ್ಥಾನ ನಿರ್ಣಯಗೊಳ್ಳುವುದು. ಆದರೆ ದಾರ್ಶನಿಕನ ಮಾತುಗಳಿಗೆ ಊಹೆ ಮತ್ತು ಬುದ್ದಿಯು ಆಧಾರವಾಗಿರುತ್ತದೆ. ಅವನು ಕಲ್ಪಿಸಿ ಹೇಳುವ ವಿಚಾರ ಎಷ್ಟು ಉನ್ನತ ಮತ್ತು ಸೂಕ್ಷ್ಮದರ್ಶಿತ್ವದ್ದಾದರೂ ಪ್ರವಾದಿತ್ವಕ್ಕೆ ಸರಿಸಾಟಿಯಾಗಲಾರದು. ಅದು ಪ್ರವಾದಿಯ ಜ್ಞಾನ, ವ್ಯಕ್ತಿ ಅನುಭವ ಮತ್ತು ಅವಲೋಕನಗಳ ಮುಂದೆ ತಲೆ ಎತ್ತಿ ನಿಲ್ಲಲಾರದು.

ದಾರ್ಶನಿಕನ ದರ್ಶನ ಶಾಸ್ತ್ರದ ಅಧ್ಯಯನ ನಡೆಸಿದರೆ ನಮ್ಮ ಸಂದೇಹಗಳಿಗೆ ಪರಿಹಾರ ದೊರೆಯುವುದಿಲ್ಲ. ಆದರೆ ನಮಗೆ ಶಾಂತಿ, ಅಲೌಕಿಕ ತೃಪ್ತಿ ಪ್ರವಾದಿಯ ಮೇಲೆ ವಿಶ್ವಾಸ ವಿರಿಸಿದಾಗ ದೊರೆಯುತ್ತದೆ. ದಾರ್ಶನಿಕನೊಬ್ಬನು ಎಂದೂ ತಾನು ಸತ್ಯದ ಪ್ರತ್ಯಕ್ಷದರ್ಶಿ ಎಂದು ವಾದಿಸಲು ಸಾಧ್ಯವಿಲ್ಲ. ಕೇವಲ ಸಂಭಾವನೀಯತೆಗಳನ್ನಷ್ಟೇ ಮಾತನಾಡಲು ಅವನಿಗೆ ಸಾಧ್ಯವಿದೆ. ಈ ಹಂತವನ್ನು ಕೇವಲ ಪ್ರವಾದಿಗಳು ಮಾತ್ರ ಮೀರಿ ಮುಂದುವರಿಯುವರು. ಪ್ರವಾದಿಯ ಕರೆ ಮಾನವನ ಆತ್ಮದ ಧ್ವನಿಯಾಗಿ ಅದನ್ನು ಆಲಿಸಬೇಕೆಂದು ಪ್ರವಾದಿಗಳು ಪರಿಶ್ರಮಿಸುತ್ತಾರೆ.

ಪ್ರವಾದಿಗಳು ಮಾನವರ ಮೇಲೆ ಯಾವುದೋ ಅಪರಿಚಿತ ಮಾತುಗಳನ್ನು ಹೇರಲು ಪ್ರಯತ್ನಿಸುವುದಿಲ್ಲ. ಅವರು ತಮ್ಮ ಮಾತುಗಳ ಮೂಲಕ ಮಾನವರ ಮರೆವು, ಪ್ರಜ್ಞಾ ಶೂನ್ಯತೆ ಮತ್ತು ನಿರ್ಲಕ್ಷ್ಯಗಳನ್ನು ದೂರಗೊಳಿಸುತ್ತಾರೆ. ನಮ್ಮ ದೃಷ್ಟಿ ಮತ್ತು ಆಲಿಸುವ ಶಕ್ತಿಗೆ ಮೊನಚು ನೀಡುತ್ತಾರೆ. ಮಾನವರು ಹಾಗೂ ಸತ್ಯದ ನಡುವೆ ಆವರಿಸಿದ್ದ ತೆರೆಯನ್ನು ಸರಿಸಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಅದು ಸರಿಯದಿದ್ದರೆ ಮಾನವರು ಕೊನೇ ಪಕ್ಷ ಒಂದಲ್ಲ ಒಂದು ರೀತಿಯಲ್ಲಿ ಪರೋಕ್ಷ ಜಗತ್ತಿನ (Unseen World) ಹೊಳಪನ್ನು ಒಂದು ಹಂತದ ವರೆಗಾದರೂ ಅನುಭವಿಸುವಂತಾಗಬೇಕೆಂದು ಅವರು ಬಯಸುತ್ತಾರೆ.

ಸತ್ಯದ ವಿರೋಧಿಗಳಿಂದ ಮಾನವನ ನೈಜ ಪ್ರಕೃತಿಯನ್ನು ಪೂರ್ಣವಾಗಿ ಆಳಿಸಿ ಹಾಕಲು ಎಂದಿಗೂ ಸಾಧ್ಯವಿಲ್ಲ, ತಮ್ಮ ಮಿಥ್ಯವಾದಗಳ ಮುಖೇನ ಮಾನವರನ್ನು ಅವರ ನೈಜ ಪ್ರಕೃತಿಯಿಂದ ದೂರ ಸರಿಸಲು ಪ್ರಯತ್ನವನ್ನಷ್ಟೇ ಅವರು ನಡೆಸಬಹುದು. ಮೇಲ್ನೋಟಕ್ಕೆ ಈ ಕಾರ್ಯದಲ್ಲಿ ಅವರು ಯಶಸ್ವಿಯಾಗಿದ್ದಾರೆಂದು ಅನಿಸುವುದಾದರೂ ಆಗಲೂ ಮಾನವನ ನೈಜ ಪ್ರಕೃತಿ ಪ್ರಕಟವಾಗಲು ಒತ್ತಡ ಹೇರುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಪ್ರವಾದಿಗಳ ಕರೆಯಿಂದ ಸತ್ಯವನ್ನು ಗುರುತಿಸಬಹುದು. ಪ್ರವಾದಿಗಳ ಪ್ರಯತ್ನ ಈ ದಿಸೆಯಲ್ಲಿ ಸಾಗುತ್ತವೆ.

ಎಲ್ಲ ಅಡ್ಡಿ ಆತಂಕಗಳನ್ನು ಮೀರಿ ಮಾನವರಿಗೆ ಸತ್ಯದರ್ಶನವಾಗಬೇಕು ಎಂಬ ಆಶಾವಾದವು ಪ್ರವಾದಿಗಳಿಗಿರುತ್ತದೆ. ಕೆಸರಿನಲ್ಲಿ ಬಿದ್ದು ವಜ್ರವು ಹೊಳಪನ್ನು ಕಳೆದುಕೊಂಡರೆ ಅಕ್ಕಸಾಲಿಗನು ತಿದ್ದಿ ತೀಡಿ ಪರಿಶುದ್ದಗೊಳಿಸುವಂತೆ, ಪ್ರವಾದಿಗಳು ಮಾನವರನ್ನು ಪರಿಶುದ್ಧಗೊಳಿಸಲು ಪ್ರಯತ್ನಿಸುತ್ತಾರೆ. ಪ್ರವಾದಿಯು ಜನರಿಗೆ ಸರ್ವಥಾ ಉಪಯುಕ್ತವಾದ ಸಂದೇಶವನ್ನು (Message) ನೀಡುತ್ತಾರೆ. ಅದು ದೈವಿಕ ಸಂದೇಶವಾಗಿದ್ದು ಈ ಸಂದೇಶಕ್ಕೆ ನಿದ್ರಿಸುವ ಆತ್ಮವನ್ನು ಎಚ್ಚರಗೊಳಿಸುವ ಸಾಮರ್ಥ್ಯವಿದೆ. ಈ ರೀತಿ ಓರ್ವ ನೆನಪಿಸುವವನ ಪಾತ್ರವನ್ನು ಪ್ರವಾದಿಗಳು ನಿಭಾಯಿಸುತ್ತಾರೆ ಎನ್ನಬಹುದು. ಅಂದರೆ ಮಾನವರ ಆತ್ಮವು ಮರೆತ ವಿಷಯಗಳನ್ನು ಅವರು ನೆನಪಿಸುತ್ತಾರೆ.

ಈ ಕುರಿತು ಪವಿತ್ರ ಕುರ್‌ಆನ್ ಹೀಗೆ ವಿವರಿಸಿದೆ- “…ಅಲ್ಲಾಹನು ನಿಮ್ಮ ಕಡೆಗೆ ಒಂದು ಉಪದೇಶವನ್ನು ಅವತೀರ್ಣಗೊಳಿಸಿರುತ್ತಾನೆ. ಸತ್ಯವಿಶ್ವಾಸಿಗಳನ್ನೂ ಸತ್ಕರ್ಮವೆಸಗುವವರನ್ನೂ ಅಂಧಕಾರಗಳಿಂದ ಹೊರತೆಗೆದು ಪ್ರಕಾಶದೆಡೆಗೆ ಒಯ್ಯಲಿಕ್ಕಾಗಿ. ನಿಮಗೆ ಅಲ್ಲಾಹನ ಸುಸ್ಪಷ್ಟ ಮಾರ್ಗದರ್ಶವನ್ನು ನೀಡುತ್ತಿರುವ ಒಬ್ಬ ಸಂದೇಶ ವಾಹಕ.” (ಪವಿತ್ರ ಕುರ್ ಆನ್, 65:10-11)

ಮಾನವರು ಏಕದೇವತ್ವ ಮತ್ತು ಕರ್ಮಫಲಗಳಲ್ಲಿ ವಿಶ್ವಾಸವಿರಿಸಬೇಕೆಂಬುದು ಪ್ರವಾದಿಗಳ ಪ್ರಥಮ ಶಿಕ್ಷಣವಾಗಿದೆ. ಜನರು ಏಕದೇವನಲ್ಲಿ ವಿಶ್ವಾಸವಿರಿಸಿ ಆ ದೇವನ ಆದೇಶಗಳಂತೆ ಜೀವಿಸಬೇಕೆಂದು ಅವರು ಕರೆ ನೀಡುತ್ತಾರೆ. ಆ ದೇವನೇ ಸೃಷ್ಟಿಕರ್ತ, ಪಾಲಕ ಪ್ರಭು ಮತ್ತು ರಕ್ಷಕನಾಗಿದ್ದಾನೆ. ಮಾನವರ ಸರ್ವನಾಶ ದೇವೇಚ್ಛೆಯಲ್ಲ ಮಾನವರ ಪರಿಪೂರ್ಣತೆಗಾಗಿಯೇ ಅವನು ಪ್ರವಾದಿತ್ವದ ವ್ಯವಸ್ಥೆಯನ್ನು ಮಾಡಿದ್ದಾನೆ. ಮಾನವನನ್ನು ಸ್ವರ್ಗಲೋಕಕ್ಕೆ ತಲುಪಿಸುವುದು ದೇವೇಚ್ಛೆಯಾಗಿದೆ. ಅದು ಅಂಧಕಾರವೇ ಇಲ್ಲದ, ಪ್ರಕಾಶಗಳಿರುವ ದುಃಖವೇ ಇಲ್ಲದ, ಕೇವಲ ಸಂತೋಷವಿರುವ, ಯಾವ ಕಷ್ಟವೂ ಇಲ್ಲದ, ಅಮರತ್ವದ ಜೀವನವಿರುವ ಪರಿಪೂರ್ಣ ಸ್ಥಾನವಾಗಿದೆ. ಆದರೆ ಇದನ್ನು ನೇರವಾಗಿ ತಲುಪುವಷ್ಟು ನಮ್ಮ ಆತ್ಮ ಪ್ರಬಲವಲ್ಲ, ಆದುದರಿಂದ ನಮ್ಮ ಆತ್ಮ ಪ್ರಬಲವಾಗಬೇಕು. ಅದಕ್ಕಾಗಿ ಮಾರ್ಗದರ್ಶನ ಅವಶ್ಯಕವಾಗಿದೆ. ಆ ಮಾರ್ಗದರ್ಶನ ಸಿಕ್ಕರೆ ಮಾನವರು ಪ್ರಬಲರಾಗುವರು, ಸಕಲ ಸಂದೇಹಗಳಿಂದ ಮುಕ್ತರಾಗುವರು.

ಏಕದೇವತ್ವ ಮತ್ತು ಕರ್ಮಫಲಗಳೆರಡೂ ಪರಸ್ಪರ ಸಂಬಂಧವಿರುವ ವಿಚಾರಗಳಾಗಿವೆ. ಒಬ್ಬನು ಬರೇ ಬೋಧನೆಯಿಂದ (Enlightment) ಏಕದೇವತ್ವವಾದಿಯಾಗುವುದಿಲ್ಲ, ಅದಕ್ಕೆ ಜೀವನದಲ್ಲಿ ಏಕದೇವನ ಆದೇಶಗಳಂತೆ ಜೀವಿಸುವುದು ಅನಿವಾರ್ಯವಾಗಿದೆ.

ದೇವಾದೇಶಗಳ ಉಲ್ಲಂಘನೆ ಕೃತಘ್ನತೆಯಾಗಿದೆ. ಈ ಅಪರಾಧಕ್ಕಾಗಿ ಯಾತನೆಯನ್ನ ನುಭವಿಸಬೇಕು ಅಥವಾ ದೈವಿಕ ಶಿಕ್ಷೆಗೊಳಗಾಗಬೇಕೆಂದು ಇತಿಹಾಸವು ತಿಳಿಸುತ್ತಿದೆ. ಜಗತ್ತು ಯಾವುದೋ ಪರಮಸತ್ತೆಯಿರುವ ಅಧಿಕಾರದ ಅಧೀನವಾಗಿದೆ ಎಂದು ಈ ಮೂಲಕ ನಾವು ಅರಿಯಬಹುದು. ಭೌತಿಕ ಜೀವನದಲ್ಲಿಯೇ ಅದರ ಪ್ರಕೋಪ, ಯಾತನೆಗಳು ಗೋಚರಿಸಲು ಸಾಧ್ಯವಿದೆ. ಯಾವುದಾದರೂ ಜನಾಂಗಗಳು ಕೆಡುಕಿನಲ್ಲಿ ಮಿತಿ ಮೀರಿದಾಗ ಮತ್ತು ಅವುಗಳ ದೌರ್ಜನ್ಯ ಪರಾಕಾಷ್ಠೆಗೆ ತಲುಪಿದಾಗ ಆ ಜನಾಂಗವನ್ನು ಒಂದೋ ನಿಂದ್ಯವನ್ನಾಗಿ ಮಾಡಲಾಗುವುದು ಅಥವಾ ಅದನ್ನು ಸಂಪೂರ್ಣ ನಾಶಗೊಳಿಸಲಾಗುವುದು.

ಯಾಕೆಂದರೆ ದೇವನು ಈ ಜನಾಂಗಕ್ಕೆ ಪ್ರತಿಷ್ಠೆ ನೀಡಿರುವುದು ಕ್ಷೋಭೆ ಹರಡಲೆಂದು ಆಗಿರಲಿಲ್ಲ. ತಮ್ಮನ್ನು ಜಗತ್ತಿನಲ್ಲಿ ರಚನಾತ್ಮಕ ಅಥವಾ ನಿರ್ಮಾಣಾತ್ಮಕವಾಗಿ ತೊಡಗಿಸಿಕೊಳ್ಳಲಿ ಎಂದು ನೀಡಿದ್ದನು. ಜನಾಂಗಗಳು ಅಕ್ರಮಕ್ಕಿಳಿದಾಗ ಅದನ್ನು ಶಿಕ್ಷಿಸಲಾಗುತ್ತದೆ. ಯಾಕೆಂದರೆ ದೇವನು ಜಗತ್ತಿನಲ್ಲಿ ಅನ್ಯಾಯ ದೌರ್ಜನ್ಯಗಳನ್ನು ಸಹಿಸುವುದಿಲ್ಲ.

ನ್ಯಾಯ ಸಂಸ್ಥಾಪಿಸಿ ಮಾನವರ ಹಿತಕ್ಕಾಗಿ ದುಡಿಯುವ ಜನಾಂಗದ ಮೇಲೆ ದೇವ ಕೃಪೆಯಿರುತ್ತದೆ. ಪರಲೋಕದ ಪ್ರತಿಫಲ ಅಥವಾ ಕರ್ಮಫಲಗಳನ್ನು ನಿರ್ಣಯಿಸುವ ದಿನ ದೌರ್ಜನ್ಯಕೋರರಿಗೆ ಆವಶ್ಯಕವಾಗಿ ಶಿಕ್ಷೆ ದೊರೆಯುವುದು, ದೇವನ ಆಜ್ಞೆಯನ್ನು ಪಾಲಿಸಿದ ನಿಷ್ಠಾವಂತ ದಾಸರನ್ನು ಅಂದು ಅನುಗ್ರಹಿಸಲಾಗುವುದು. ಅವರವರ ಕರ್ಮಫಲಕ್ಕೆ ತಕ್ಕಂತೆ ಅಂದು ನಿರ್ಧಾರವಾಗುವುದು. ಪರಲೋಕದಲ್ಲಿ ಮಾನವರು ಯಾವುದನ್ನೂ ಅನುಚಿತವಾಗಿ ಎದುರಿಸಲಾರರು. ಅಲ್ಲಿ ಅವರವರ ಕರ್ಮಕ್ಕೆ ತಕ್ಕ ಪ್ರತಿಫಲ ದೊರೆಯುವುದು.

ವರ್ತಮಾನ ಲೋಕವನ್ನು ನಾವು ‘ಇಂದು’ (Today) ಎಂದು ಕರೆದರೆ, ಪರಲೋಕವನ್ನು ನಾವು ‘ನಾಳೆ’ (Tomorrow) ಎಂದು ಕರೆಯುವೆವು. ಯಾವುದೇ ವ್ಯಕ್ತಿ ಅಥವಾ ಜನಾಂಗದ ಇಂದು ಉತ್ತಮವಾಗಿದ್ದರೆ ನಾಳೆ ಕೂಡಾ ಸುಂದರವಾಗಿರುವುದು.

ಆದುದರಿಂದ ಬರಲಿರುವ ನಾಳೆಗಳು (ಪರಲೋಕದ ದಿನಗಳು) ಯಾರಿಗೆ ಸಂತಾಪಕರವಾಗಿರುತ್ತದೆ ಮತ್ತು ಯಾರಿಗೆ ಸಂತೋಷಕರವಾದುದೆಂದು ನಮ್ಮ ಇಂದಿನ (ವರ್ತಮಾನದ) ಆಧಾರದಲ್ಲಿ ನಿರ್ಧಾರವಾಗಲಿದೆ ಎಂದು ಹೇಳಬಹುದು.

ಪ್ರವಾದಿಗಳು ನೇರವಾಗಿ ಆಗಮಿಸಿರುವ ಮತ್ತು ಪ್ರವಾದಿಗಳನ್ನು ಪ್ರತ್ಯಕ್ಷವಾಗಿ ನೋಡದ ಜನಾಂಗಗಳೆರಡೂ ಸಮಾನವಲ್ಲ. ಅವೆರಡು ಬೇರೆ ಬೇರೆಯಾಗಿದೆ. ಪ್ರವಾದಿಯ ಕಾಲದ ಜನಾಂಗಗಳು ಅವರಿಂದ ನೇರ ಸಂದೇಶವನ್ನು ಆಲಿಸಿರುತ್ತವೆ. ಅಂದರೆ ಈ ಜನಾಂಗಕ್ಕೆ ಪ್ರವಾದಿಗಳ ಚಾರಿತ್ರ್ಯ ಮತ್ತು ಸಂದೇಶ ನೇರವಾಗಿ ತಲುಪುತ್ತದೆ. ಈ ಜನಾಂಗವು ಪ್ರವಾದಿಗಳ ಜೀವನ ಮತ್ತು ಸತ್ಯಸಂಧತೆಯ ಪ್ರತ್ಯಕ್ಷದರ್ಶಿಯಾಗಿದೆ. ಈ ಜನಾಂಗದ ಮೇಲೆ ದೇವನ ಹೊಣೆ (ಹುಜ್ಜತ್) ಪೂರ್ಣಗೊಳ್ಳುವುದು. ಈ ಜನಾಂಗಗಳು ಒಂದು ವೇಳೆ ಪ್ರವಾದಿಯ ಮೇಲೆ ವಿಶ್ವಾಸವಿರಿಸದಿದ್ದರೆ ಅಥವಾ ವಿಶ್ವಾಸವಿರಿಸಲು ವಿಳಂಬಿಸಿದ್ದರೆ ಅದಕ್ಕಾಗಿ ಪರಲೋಕ(ನಾಳೆ)ದಲ್ಲಿ ನೆಪಗಳಿಗೆ ಅವಕಾಶವಿರುವುದಿಲ್ಲ. ಅದು ಶಿಕ್ಷೆಗೆ ಗುರಿಯಾಗಬೇಕಾಗುವುದು. ಪ್ರವಾದಿಗಳ ಸಂದೇಶವನ್ನು ನಿರಾಕರಿಸಿ, ಪ್ರವಾದಿಗಳನ್ನು ಸುಳ್ಳಾಗಿಸಿದರೆ ಮತ್ತು ಪ್ರವಾದಿಗಳಿಗೆ ಪ್ರಾಣ ಬೆದರಿಕೆಯೊಡ್ಡಿದರೆ ಅಂತಹ ಜನಾಂಗ ವಿನಾಶಕ್ಕೊಳಗಾಗುವುದು. ಪ್ರವಾದಿಗಳನ್ನು ಪ್ರತ್ಯಕ್ಷವಾಗಿ ಕಂಡ ಈ ಜನಾಂಗಗಳ ಸುಧಾರಣೆಗೆ ಹೆಚ್ಚು ಅವಕಾಶವಿರುವುದಿಲ್ಲ. ಯಾಕೆಂದರೆ ಅವರು ಪ್ರವಾದಿಗಳನ್ನು ಸತಾಯಿಸಿ ದವರು ಪ್ರವಾದಿಗಳ ಅನುಯಾಯಿಗಳಿಗೆ ಎಲ್ಲ ರೀತಿ ತೊಂದರೆಯೊಡ್ಡಿದವರು.

ಈ ಬಗ್ಗೆ ಪವಿತ್ರ ಕುರ್‌ಆನ್ ಈ ರೀತಿ ವಿವರಿಸಿದೆ. “ಇವರಿಗಿಂತ ಮುಂಚೆ ಗತಿಸಿದವರ ಪರಿಣಾಮವೇನಾಯಿತೆಂಬುದು ಇವರಿಗೆ ಕಾಣಿಸುವಂತಾಗಲು ಇವರು ಭೂಮಿಯಲ್ಲೆಂದೂ ಸಂಚರಿಸಿಲ್ಲವೇ? ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು ಮತ್ತು ಇವರಿಗಿಂತ ಭದ್ರ ಸ್ಮಾರಕಗಳನ್ನು ಭೂಮಿಯಲ್ಲಿ ಬಿಟ್ಟು ಹೋಗಿರುವರು. ಆದರೆ ಅಲ್ಲಾಹನು ಅವರನ್ನು ಅವರ ಪಾಪಗಳಿಗಾಗಿ ಹಿಡಿದು ಬಿಟ್ಟನು. ಅವರನ್ನು ಅಲ್ಲಾಹನಿಂದ ರಕ್ಷಿಸುವವನಾರೂ ಇರಲಿಲ್ಲ. ಅವರ ಗತಿ ಹೀಗಾದುದೇಕೆಂದರೆ ಅವರ ಬಳಿಗೆ ಅವರ ಸಂದೇಶವಾಹಕರು ಸುಸ್ಪಷ್ಟ ನಿದರ್ಶನಗಳನ್ನು ತಂದಿದ್ದರು. ಅವರು ನಿರಾಕರಿಸಿಬಿಟ್ಟರು. ಕೊನೆಗೆ ಅಲ್ಲಾಹನು ಅವರನ್ನು ಹಿಡಿದು ಬಿಟ್ಟನು. ನಿಶ್ಚಯವಾಗಿಯೂ ಅವನು ಪ್ರಬಲನೂ ಕಠಿಣವಾಗಿ ಶಿಕ್ಷಿಸುವವನೂ ಆಗಿರುತ್ತಾನೆ. (ಪವಿತ್ರ ಕುರ್‌ಆನ್, 40:21-22)

ಇವೆಲ್ಲವೂ ಭೌತಿಕ ಜಗತ್ತಿನಲ್ಲಿ ಕಾಣಿಸುವ ಪರಿಣಾಮವಾಗಿದೆ. ಆದರೆ ಪರಲೋಕದಲ್ಲಿ ಅವರ ಸ್ಥಿತಿ ಇನ್ನಷ್ಟು ಕಠಿಣವಾಗಿರುವುದೆಂದು ಪವಿತ್ರ ಕುರ್‌ಆನ್ ಈ ರೀತಿ ವಿವರಿಸಿದೆ.
“ಎಲ್ಲ ಜನರೂ ಬಹಿರಂಗಗೊಳ್ಳುವ ಆ ದಿನ ಅವರ ಯಾವ ವಿಷಯವೂ ಅಲ್ಲಾಹನಿಂದ ಅಡಗಿರಲಾರದು. ಇಂದು ಪ್ರಭುತ್ವ ಯಾರದು? (ಎಂದು ಆ ದಿನ ಕೂಗಿ ಕೇಳಲಾಗುವುದು) ಏಕೈಕನೂ ಅಜೇಯನೂ ಆದ ಅಲ್ಲಾಹನದು. (ಎಂದು ಇಡೀ ವಿಶ್ವವು ಕೂಗಿ ಹೇಳುವುದು) (ಆಗ) ಇಂದು ಪ್ರತಿಯೊಬ್ಬ ಜೀವಿಗೆ ಅವನು ಸಂಪಾದಿಸಿದುದರ ಪ್ರತಿಫಲ ನೀಡಲಾಗುವುದು. ಇಂದು ಯಾರ ಮೇಲೂ ಅನ್ಯಾಯ ಆಗದು. (ಎಂದು ಹೇಳಲಾಗುವುದು) ನಿಶ್ಚಯವಾಗಿಯೂ ಅಲ್ಲಾಹನು ಲೆಕ್ಕ ಪರಿಶೋಧನೆಯಲ್ಲಿ ಅತಿ ಶೀಘ್ರನಾಗಿರುತ್ತಾನೆ. (ಪವಿತ್ರ ಕುರ್‌ಆನ್, 40:16-17)

ಪವಿತ್ರ ಕುರ್‌ಆನಿನ ಮೇಲಿನ ವಚನವು ಪ್ರವಾದಿಯ ಮೇಲೆ ವಿಶ್ವಾಸವಿರಿಸಿ ಅವರ ಮಾರ್ಗದರ್ಶನವನ್ನು ಸ್ವೀಕರಿಸಿದವರನ್ನು ಅದೃಷ್ಟಶಾಲಿಗಳೆಂದು ವಿವರಿಸಿದೆ. ಅವರು ಪ್ರಜ್ಞಾ ಶೂನ್ಯರಾಗದೆ ಅಶ್ರದ್ದೆ ತೋರದೆ ತಮ್ಮದೇ ಹೃದಯದ ಧ್ವನಿ ಮತ್ತು ಹೃದಯ ಬಡಿತವನ್ನು ಪ್ರವಾದಿಗಳ ಸಂದೇಶದಲ್ಲಿ ಆಲಿಸಿದರು. ಪ್ರವಾದಿಗಳ ಸಂದೇಶದ ನೈಜತೆಯನ್ನು ಮನಗಂಡು ಪ್ರವಾದಿಯನ್ನು ತಮ್ಮ ಅಸ್ತಿತ್ವ, ಪ್ರಾಣಗಳಿಗಿಂತ ಮಿಗಿಲಾಗಿ ಪ್ರೀತಿಸಿದರು. ಪ್ರವಾದಿ ಮತ್ತು ಅವರ ನಡುವೆ ನಿಕಟ ಮತ್ತು ಸುಮಧುರ ಸಂಬಂಧಗಳಿದ್ದವು.

ಅಲ್ಲಾಮಾ ಹಮೀದುದ್ದೀನ್ ಫರಾಹಿ(ರ) ಹೀಗೆ ಬರೆದಿದ್ದಾರೆ- “ಪ್ರವಾದಿಯು ಆ ವಿಶ್ವಾಸಿಗಳ ಸಂವೇದನಾಶೀಲ ಹೃದಯವಾಗಿರುತ್ತಾರೆ. ಅಂದರೆ ಅವರು ಪ್ರವಾದಿಯನ್ನು ಗುರುತಿಸಿ ಅವರ ಮಾರ್ಗದರ್ಶನವನ್ನು ಸ್ವೀಕರಿಸಿದರು. ಆದುದರಿಂದ ಪ್ರವಾದಿಯ ಕಿವಿಯಿಂದ ಆಲಿಸುವ, ಕಣ್ಣಿಂದ ನೋಡುವ ಮತ್ತು ಅವರ ಹೃದಯ ಮಾಧ್ಯಮದಿಂದ ಅರಿಯುವ, ಅನುಭವಿಸುವ ಸೌಭಾಗ್ಯ ದೊರಕಿತು. ಆದರೆ ಈ ಅದೃಷ್ಟವಂತರು ಮತ್ತು ಪ್ರವಾದಿಗಳ ನಡುವೆಯಿದ್ದ ಆಳವಾದ ಸಂಬಂಧ ಸಾಮಾನ್ಯ ಜನಾಂಗಗಳಿಗೆ ಅಪರಿಚಿತವಾಗಿದೆ. ಆದುದರಿಂದ ಅದಕ್ಕೆ ಪ್ರವಾದಿ ಮತ್ತು ಪ್ರವಾದಿಯ ಆದೇಶಗಳನ್ನು ನಿರಾಕರಿಸುವ ಮೂಲಕ ತಾವೇ ಅಪ್ರಾಮಾಣಿಕರಾಗಿದ್ದೇವೆ ಎಂಬ ಅರಿವಿಲ್ಲ.”

ಆದರೆ ದೇವನು ಮಾನವನ ಮಾರ್ಗದರ್ಶನಕ್ಕಾಗಿ ಸಕಲ ಮಾಧ್ಯಮಗಳನ್ನು ಒದಗಿಸಿದ್ದಾನೆ. ಮಾನವರ ಅಂತರಾತ್ಮ, ಬುದ್ದಿ, ವಿವೇಕ ಹಾಗೂ ಜಗತ್ತುಗಳಲ್ಲಿ ದೇವನ ಸಂಕೇತಗಳನ್ನು ಕಾಣಬಹುದಾಗಿದೆ. ಪ್ರವಾದಿಗಳನ್ನು ಪ್ರತ್ಯಕ್ಷ ನೋಡದಿದ್ದರೂ ಅವರಿಂದ ನೇರ ಮಾರ್ಗದರ್ಶನ ದೊರಕದಿದ್ದರೂ ಈ ಸೂಕ್ಷ್ಮ ಸಂಕೇತಗಳು ಹಾಗೂ ಚಿಹ್ನೆಗಳ ಮೂಲಕ ಸತ್ಯವನ್ನು ಅರಿಯ ಬಹುದಾಗಿದೆ.

ಇದು ಮಾನವರ ಮೇಲೆ ದೇವಾನುಗ್ರಹವಾಗಿದೆ. ದೇವನಿಂದ ಪ್ರವಾದಿಗಳು ನಿಯೋಜಿಸಲ್ಪಟ್ಟರು. ಮಾನವರಿಗೆ ಏಕದೇವತ್ವ ಮತ್ತು ಅದರ ಬೇಡಿಕೆಗಳು ದೇವನಿಗೆ

ಕೃತಜ್ಞತೆ ಅರ್ಪಿಸುವ ಮಾರ್ಗವನ್ನು ಅವರು ತಿಳಿಸಿಕೊಟ್ಟರು. ದೇವ ನಿರಾಕರಣೆ ಅಥವಾ ಕೃತಜ್ಞತೆಗಳೆಂದರೇನು? ದೇವನ ಅಂಗೀಕಾರ ಅಥವಾ ಕೃತಜ್ಞತೆಯು ಹೇಗೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುವ ಗ್ರಂಥಗಳನ್ನು ದೇವನು ನೀಡಿರುವನು.

ದೇವನಿಗೆ ಮಾನವರು ಕೃತಜ್ಞರಾದರೆ ಒಳ್ಳೆಯ ಪರಿಣಾಮವಿದ್ದರೆ, ಕೃತಘ್ನರಾದರೆ ಕೆಟ್ಟ ಪರಿಣಾಮಗಳಿವೆ.

ಪ್ರವಾದಿಗಳ ಶಿಕ್ಷಣಗಳು ಜಗತ್ತಿನ ಮೇಲೆ ಆಳವಾದ ಪರಿಣಾಮವನ್ನು ಬೀರಿವೆ. ಪ್ರಪಂಚದಲ್ಲಿ ದೇವನ ಮತ್ತು ಪರಲೋಕ ನಂಬಿಕೆ ಕಂಡು ಬರುವಲ್ಲೆಲ್ಲ ಒಳಿತು, ಕೆಡುಕುಗಳ ಪರಾಮರ್ಶೆಯನ್ನು ಕಾಣುತ್ತೇವೆ. ದಯೆ, ಕರುಣೆಗಳು ವ್ಯಕ್ತವಾಗುತ್ತಿವೆ. ಇವೆಲ್ಲವೂ ಪ್ರವಾದಿಗಳ ಶಿಕ್ಷಣದ ಪ್ರಭಾವವಾಗಿದೆ. ಪ್ರಪಂಚದ ಬೇರೆ ಬೇರೆ ಜನಾಂಗಗಳಲ್ಲಿ ಪ್ರವಾದಿ ಶಿಕ್ಷಣಗಳ ಪ್ರಭಾವ ಕಂಡು ಬರುತ್ತದೆ. ಆದರೆ ಈ ವಾಸ್ತವಿಕತೆಯನ್ನು ಅವರ ನಂಬಿಕೆಯ ಮೂಲ ಉಗಮವನ್ನು ಅವರು ಗುರುತಿಸಲು ಸಮರ್ಥರಾಗಿಲ್ಲ.

ಪ್ರವಾದಿಗಳ ಆಗಮನದ ಆವಶ್ಯಕತೆ
ಮೇಲಿನ ವಿವರಣೆಗಳಿಂದ ನಾವು ಪ್ರವಾದಿಯು ಜಗತ್ತಿಗೆ ಮಾನವರ ಜೀವನದ ಉದ್ದೇಶವನ್ನು ತಿಳಿಸಲು ಆಗಮಿಸುತ್ತಾರೆಂದು ತಿಳಿದೆವು. ಮಾನವರನ್ನು ಯಾವ ಯೋಜನೆಯಂತೆ ದೇವನು ಸೃಷ್ಟಿಸಿದ್ದಾನೆ. ಮಾನವ ಜೀವನದ ಗುರಿಯೇನು? ಸತ್ತ ಮೇಲೆ ಜೀವನವಿದೆಯೇ, ಇಲ್ಲವೇ? ಈ ಅದೃಶ್ಯ(Unseen) ವಿಚಾರಗಳ ರಹಸ್ಯವನ್ನು ಬಹಿರಂಗಗೊಳಿಸುವುದಕ್ಕಾಗಿ ಪ್ರವಾದಿಗಳು ನಿಯೋಜಿಸಲ್ಪಟ್ಟಿದ್ದಾರೆ.

ಮಾನವರಿಗೆ ಪ್ರವಾದಿಗಳ ಮಾರ್ಗದರ್ಶನದ ಹೊರತು ಪರೋಕ್ಷವನ್ನು ಅರಿಯಲು ಬೇರೆ ಯಾವುದೇ ವಿಶ್ವಸನೀಯ ಸಾಧನವಿಲ್ಲ, ಮಾನವರ ಬದುಕಿನ ಪರೋಕ್ಷ ಭಾಗವೇ ಅಮೂಲ್ಯವಾಗಿದೆ. ಆದುದರಿಂದ ನಾವು ಪರೋಕ್ಷದ ಜ್ಞಾನವನ್ನು ಪಡೆಯುವುದು ಆವಶ್ಯಕವಾಗಿದೆ. ಇದು ನಮ್ಮ ಇಂದಿನ ಆವಶ್ಯಕತೆಯಾಗಿದೆ. ಪರೋಕ್ಷದ ಜ್ಞಾನದ ಹೊರತು ನಮ್ಮ ಜೀವನ ಮೌಲ್ಯವನ್ನು ನಿರ್ಧರಿಸುವುದು ಅಸಂಭವವಾಗಿದೆ. ಜೀವನ ಮೌಲ್ಯವನ್ನು ಅರಿಯದಿರುವುದು ನಮ್ಮ ಜೀವನದೊಂದಿಗೆ ತೋರಿಸುವ ನಿರ್ಲಕ್ಷ್ಯವಾಗುತ್ತದೆ. ನ್ಯಾಯದ ಬೇಡಿಕೆಯಂತೆ ಮುಂದೆ ಇದು ದೊಡ್ಡ ಅಪರಾಧವಾಗಿದೆ. ದೇವನ ಶಿಕ್ಷಣದಿಂದ ಮಾತ್ರ ನಾವು ಪರೋಕ್ಷ ಜ್ಞಾನವನ್ನು ಗಳಿಸಿಕೊಳ್ಳಬಹುದು. ಆ ಶಿಕ್ಷಣವನ್ನು ನಮಗೆ ಪ್ರವಾದಿಗಳು ಕಲಿಸುತ್ತಾರೆ. ಮಾನವನು ಏನೇ ಹೇಳಿದರೂ ಅದೊಂದು ಊಹೆ-ಅಂದಾಜು ಮಾತ್ರವಾಗುವುದು. ಊಹೆಗಳಾಗಲಿ, ಅಂದಾಜುಗಳಾಗಲಿ ಸತ್ಯಕ್ಕೆ ಸಮಾನವಲ್ಲ.

ನಮ್ಮ ಜೀವನದ ನೈಜ ರೂಪುರೇಷಗಳಿಗಾಗಿ ಜೀವನದ ಪರೋಕ್ಷ ಭಾಗಗಳ ಅರಿವು ಆವಶ್ಯಕವಾಗಿವೆ. ಆದುದರಿಂದ ಮಾನವನು ಅದರ ಪರಿಪೂರ್ಣ ಜ್ಞಾನ ಹೊಂದುವುದು ಅವನ ಮೂಲಭೂತ ಆವಶ್ಯಕತೆಯಾಗಿದೆ. ಅದಕ್ಕಾಗಿ ದೇವನಿಂದ ಪ್ರವಾದಿಗಳ ಸರಣಿ ಜಾರಿಗೊಂಡಿತು.

“ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಈಗ ನೀವು ಇರುವ ಸ್ಥಿತಿಯಲ್ಲಿ ಎಷ್ಟು ಮಾತ್ರಕ್ಕೂ ಇರಗೊಡಲಾರನು. ಅವನು ಶುದ್ಧರನ್ನು ಅಶುದ್ದರಿಂದ ಬೇರ್ಪಡಿಸಿಯೇ ತೀರುವನು. ಆದರೆ ನಿಮಗೆ ಅಗೋಚರವನ್ನು ತಿಳಿಯಪಡಿಸುವುದು ಅಲ್ಲಾಹನ ಪದ್ಧತಿಯಲ್ಲ. (ಪರೋಕ್ಷ ಜ್ಞಾನ ನೀಡುವುದಕ್ಕಾಗಿ) ಅಲ್ಲಾಹನು ತನ್ನ ಸಂದೇಶವಾಹಕರಲ್ಲಿ ಇಷ್ಟ ಬಂದವರನ್ನು ಆಯ್ದು ಕೊಳ್ಳುತ್ತಾನೆ. ಆದುದರಿಂದ (ಪರೋಕ್ಷ ವಿಷಯಗಳ ಕುರಿತು) ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸಿರಿ…” (ಪವಿತ್ರ ಕು‌ರ್ ಆನ್, 3:179)

“ಅವನೇ ಅಲ್ಲಾಹ್, ಅವನ ಹೊರತು ಬೇರಾವ ಆರಾಧ್ಯನೂ ಇಲ್ಲ. ಅವನು ಸಾಮ್ರಾಟನು, ಪರಮ ಪಾವನನು, ಸಾದ್ಯಂತ ಮಂಗಲಮಯನು, ಶಾಂತಿದಾತನು, ಸಂರಕ್ಷಕನು, ಪ್ರಬಲನು, ತನ್ನ ಆಜ್ಞೆಯನ್ನು ಶಕ್ತಿಯಿಂದ ಅನುಷ್ಠಾನಿಸಿ ಬಿಡುವವನು, ಸದಾ ಸರ್ವೋನ್ನತನಾಗಿಯೇ ಇರುವವನು, ಜನರು ಮಾಡುತ್ತಿರುವ ಸಹಭಾಗಿತ್ವದಿಂದ ಅಲ್ಲಾಹನು ಪರಿಶುದ್ಧನು.” ( ಪವಿತ್ರ ಕು‌ರ್ ಆನ್, 59:23)

ಈ ಪವಿತ್ರ ವಚನಗಳು ದೇವನನ್ನು ಸಾಮ್ರಾಟ ಎಂದು ಕರೆದಿದೆ. ಸಾಮ್ರಾಟ ತನ್ನ ಪ್ರತಿಯೊಬ್ಬ ಪ್ರಜೆಗಳೊಂದಿಗೆ ನೇರ ಸಂಪರ್ಕವಿರಿಸುವುದಿಲ್ಲ. ವಿಶೇಷ ದೂತರ ಮೂಲಕ ಸಂಪರ್ಕ ಇರಿಸುತ್ತಾನೆ. ಇದು ಸಾಮ್ರಾಟನ ಘನತೆಗೆ ಶೋಭಿಸುವ ನೀತಿಯಾಗಿದೆ. ಸಾಮ್ರಾಟನು ಪ್ರಜೆಗಳಿಗೆ ತನ್ನ ಆದೇಶಗಳು ತಲುಪಬೇಕು. ಅವರು ಅದನ್ನು ಪಾಲಿಸುತ್ತಾ ಸುಖವಾಗಿರಬೇಕೆಂದು ಬಯಸುತ್ತಾನೆ. ದೇವನಾದರೋ? ಪ್ರಪಂಚದ ಸೃಷ್ಟಿಕರ್ತ ಮತ್ತು ಸಾಮ್ರಾಟನಾಗಿರುವನು. ಈ ಸಾಮ್ರಾಟನನ್ನು ಸ್ವಾಭಿಮಾನಿ, ಪ್ರಭು, ಸುಖ ಶಾಂತಿದಾತನೆಂದು ಪವಿತ್ರ ಕುರ್‌ಆನ್ ವಿವರಿಸಿದೆ. ತನ್ನ ಆದೇಶಗಳನ್ನು ಅವನು ತನ್ನ ಪ್ರತಿನಿಧಿ ಅಥವಾ ದೂತರ ಮೂಲಕ ತಲುಪಿಸುವ ಏರ್ಪಾಟು ಮಾಡಿದ್ದಾನೆ. ಈ ರೀತಿ ಪ್ರವಾದಿಗಳ ಮೂಲಕ ಜನರ ಕಲ್ಯಾಣದ ಯೋಜನೆಗಳನ್ನು ಜನರ ಮುಂದಿರಿಸಿ ಅವರಿಗೆ ಮನವರಿಕೆ ಮಾಡಿಸುವುದು ಈ ಸಾಮ್ರಾಟನ ಉದ್ದೇಶವಾಗಿದೆ. ಸಾಮ್ರಾಟ ಅಥವಾ ದೇವನ ವತಿಯಿಂದ ಇದು ಸಹಜ ಮತ್ತು ಸ್ವಾಭಾವಿಕವಾಗಿ ಸಂಭವಿಸುವುದು. ಪ್ರಜೆಗಳ ಕಾಳಜಿ, ಸುಖ ಸೌಕರ್ಯ ಉನ್ನತಿಯನ್ನು ಅಪೇಕ್ಷಿಸದವನು ವಿವೇಕಿಯಾದ ಆಡಳಿತಗಾರನಲ್ಲವಷ್ಟೇ?

ಪ್ರವಾದಿಗಳು ಮತ್ತು ಸಂದೇಶವಾಹಕರು ಜಗತ್ತಿನ ನೈಜ ಸಾಮ್ರಾಟನಾದ ದೇವನ ಆದೇಶಗಳನ್ನು ಜನರೆಡೆಗೆ ತಲುಪಿಸುತ್ತಾರೆ. ಈ ಆದೇಶಗಳನ್ನು ಜನರು ಅನುಸರಿಸಿದರೆ ದೇವನು ಸಂತೃಪ್ತನಾಗುವನು. ಇಲ್ಲದಿದ್ದರೆ ದೇವನ ಕ್ರೋಧಕ್ಕೀಡಾಗಬೇಕಾಗುವುದೆಂದು ಪ್ರವಾದಿಗಳು ಎಚ್ಚರಿಸುತ್ತಾರೆ.

ಪ್ರವಾದಿಗಳು ಮತ್ತು ಸಂದೇಶವಾಹಕರಿಂದ ದೈವಿಕ ಆದೇಶಗಳು ಮಾತ್ರವಲ್ಲ ಜೀವನದ ಮೂಲಭೂತ ಆವಶ್ಯಕತೆಯಾಗಿರುವ ಪರೋಕ್ಷ ಜ್ಞಾನವನ್ನೂ ಪಡೆಯಬೇಕಾಗಿದೆ. ವಾಸ್ತವದಲ್ಲಿ ಅವರು ನೀಡುವ ಸಂದೇಶವು ಮಾನವರ ಪ್ರಕೃತಿಗೆ ಅಪರಿಚಿತವಲ್ಲ, ಮೂಲತಃ ಅದು ಮಾನವನ ಆಂತರ್ಯದಲ್ಲಿರುವ ವಿಷಯವಾಗಿದೆ. ಅವರು ಮಾನವನ ಆಳದಲ್ಲಿ ಸುಪ್ತ ವಾಗಿರುವ ನೈಜ ನಿಯಮಗಳನ್ನೇ ನೆನಪಿಸಿಕೊಡುತ್ತಾರೆ. ಮಾನವರ ಸ್ವಭಾವದಲ್ಲಿ ಸಮರ್ಪಣೆ, ಆರಾಧನಾ ಭಾವ ಮುಂತಾದ ಮೂಲ ಗುಣಗಳನ್ನು ನಾವು ಕಾಣುತ್ತೇವಲ್ಲವೇ? ಪ್ರವಾದಿಗಳು ನಮ್ಮಲ್ಲಿರುವ ಈ ಅಭಿರುಚಿಗಳನ್ನು ಅಳಿಸಿ ಹಾಕುವ ಕುಚೇಷ್ಟೆಗಿಳಿಯಬೇಡಿರಿ ಎಂದು ಎಚ್ಚರಿಸುತ್ತಾರೆ. ಮಾನವರು ನಿರ್ಲಕ್ಷ್ಯ ಅಜ್ಞಾನಗಳಿಂದ ಎಚ್ಚರಾಗದಿದ್ದರೆ ತಮ್ಮ ಕಲ್ಯಾಣದ ಸಾಧ್ಯತೆಗಳನ್ನೇ ಮುಚ್ಚಿದಂತಾಗುವುದು ಎಂದು ಪ್ರವಾದಿಗಳು ಎಚ್ಚರಿಸುತ್ತಾರೆ.

ಭೌತಿಕ ಲೋಕದ ಸೌಕರ್ಯಗಳು ಮಾನವ ಭೌತಿಕ ಆವಶ್ಯಕತೆಗಳನ್ನಷ್ಟೇ ಪೂರೈಸು ವುದು. ಅವನ ನಿರೀಕ್ಷೆಯಲ್ಲಿರುವ ಆದರೆ ಮಾನವರನ್ನು ನಿರೀಕ್ಷಿಸುತ್ತಿರುವ ಶಾಶ್ವತ ಜೀವನ(ಪರಲೋಕ)ಕ್ಕೆ ಇದ್ಯಾವುದೂ ಪ್ರಯೋಜನವಿಲ್ಲ ಎಂಬ ವಸ್ತುಸ್ಥಿತಿಯನ್ನು ಪ್ರವಾದಿ ಗಳು ಜನರಿಗೆ ನೆನಪಿಸಿಕೊಡುತ್ತಾರೆ. ದೇವನು ತನ್ನ ಹೊಣೆಯನ್ನು(ಹುಜ್ಜತ್ತನ್ನು ಪ್ರವಾದಿ ಗಳನ್ನು ಕಳುಹಿಸುವ ಮೂಲಕ ಪೂರ್ಣಗೊಳಿಸುತ್ತಾನೆ. ಆದ್ದರಿಂದ ದೇವನ ಮುಂದೆ ನಾವು ಸತ್ಯದಿಂದ ಅಪರಿಚಿತವಾಗಿದ್ದೆವು. ಯಾರಾದರೂ ಮಾರ್ಗದರ್ಶನ ನೀಡುತ್ತಿದ್ದರೆ ಕೃತಜ್ಞತೆಯ ದಾರಿಯನ್ನು ಅನುಸರಿಸುತ್ತಿದ್ದೆವು ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪ್ರವಾದಿಗಳು ಆಗಮಿಸಿ ಸಂದೇಶವನ್ನು ತಲುಪಿಸಿದ ನಂತರ ಜನರು ಯಾವುದೇ ನೆಪಗಳನ್ನು ಹೇಳಿ, ರಕ್ಷಣೆ ಪಡೆಯುವುದು ಸಾಧ್ಯವಿಲ್ಲವೆಂದು ಪವಿತ್ರ ಕುರ್‌ಆನ್ ಎಚ್ಚರಿಸುತ್ತದೆ.

“ಓ ‘ಯಕ್ಷ’ ಮತ್ತು ಮಾನವ ವರ್ಗವೇ, ನಿಮಗೆ ನನ್ನ ನಿದರ್ಶನಗಳನ್ನು ಕೇಳಿಸುತ್ತಾ ಇಂದಿನ ಪರಿಣಾಮದ ಬಗ್ಗೆ ಎಚ್ಚರಿಸಲಿಕ್ಕಾಗಿ ನಿಮ್ಮ ಬಳಿಗೆ ನಿಮ್ಮೊಳಗಿಂದಲೇ ಸಂದೇಶ ವಾಹಕರು ಬಂದಿರಲಿಲ್ಲವೇ? (ಎಂದೂ ಆ ಸಂದರ್ಭದಲ್ಲಿ ಅಲ್ಲಾಹನು ಅವರೊಡನೆ ಕೇಳುವನು) ಅವರು, ‘ನಿಜ. ನಮ್ಮ ವಿರುದ್ಧ ನಾವೇ ಸಾಕ್ಷಿ ಹೇಳುತ್ತೇವೆ’ ಎನ್ನುವರು. ಇಂದು ಲೌಕಿಕ ಜೀವನವು ಇವರನ್ನು ವಂಚನೆಗೊಳಪಡಿಸಿರುತ್ತದೆ. ಆದರೆ ಆಗ ಅವರು ನಾವು ಸತ್ಯನಿಷೇಧಿಗಳಾಗಿದ್ದವೆಂದು ತಮ್ಮ ವಿರುದ್ಧ ತಾವೇ ಸಾಕ್ಷಿ ಹೇಳುವರು.” (ಪವಿತ್ರ ಕುರ್‌ಆನ್, 6:130)

ಇನ್ನೊಂದೆಡೆ ಪವಿತ್ರ ಕು‌‌ಆನ್ ಈ ರೀತಿ ವಿವರಿಸಿದೆ- ”ಅವನು ಈ ಸಂದೇಶವಾಹಕರೆಲ್ಲರನ್ನು ನಿಯೋಗಿಸಿದ ಬಳಿಕ ಜನರ ಬಳಿ ಅಲ್ಲಾಹನಿಗೆದುರು ವಾದವುಳಿಯದಂತಾಗಲು ಅವರನ್ನು ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರನ್ನಾಗಿ ಮಾಡಿ ಕಳುಹಿಸಿದ್ದನು. ಅಲ್ಲಾಹನು ಪ್ರತಾಪಶಾಲಿಯೂ ಯುಕ್ತಿ ಪೂರ್ಣನೂ ಆಗಿರುತ್ತಾನೆ.” (ಪವಿತ್ರ ಕುರ್‌ಆನ್, 4:165) 

ದ ಮೆಸೇಜ್ ಎಂಬ ಕೃತಿಯಿಂದ

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …