- @ ಜಮಾಲ್ ಅಬ್ದುನ್ನಾಸಿರ್
ಸ್ಪಷ್ಟವಾದ ಪರಿಹಾರ ಕಂಡುಕೊಳ್ಳಲಾಗದೆ ಅನೇಕ ಮಂದಿ ಬೆಲೆ ಏರಿಕೆ ಮತ್ತು ದುಂದು ವೆಚ್ಚದ ಉರುಳಿಗೆ ಸಿಲುಕಿರುತ್ತಾರೆ. ಇಸ್ಲಾಮಿನ ಧಾರ್ಮಿಕ ಮೌಲ್ಯಗಳನ್ನು ಭದ್ರವಾಗಿ ಹಿಡಿದುಕೊಳ್ಳುವುದೇ ಅದಕ್ಕಿರುವ ಪರಿಹಾರವಾಗಿದೆ. ಇಂತಹ ಪಿಶಾಚಿಗಳ ಕುತಂತ್ರದಿಂದ ಪಾರಾಗಲು ಇಸ್ಲಾಮ್ ಉತ್ತಮವಾದ ಮಾರ್ಗೋಪಾಯಗಳನ್ನು ನಮ್ಮ ಮುಂದಿರಿಸಿದೆ. ಯಾವುದೇ ರೀತಿಯ ದುಂದು ವೆಚ್ಚವಿಲ್ಲದೆ, ಅನ್ಯಾಯ ರಹಿತವಾದ ಜೀವನ ಸವೆಸಿ ಐಹಿಕ ಮತ್ತು ಪಾರತ್ರಿಕವಾದ ಅಗತ್ಯಗಳ ಮಧ್ಯೆ ಮುಸ್ಲಿಮ್ ಸಮುದಾಯ ಮಧ್ಯಮ ನಿಲುವನ್ನು ಸ್ವೀಕರಿಸುವುದನ್ನು ಕಾಣಬಹುದು.
ಅಲ್ಲಾಹನು ಹೇಳುತ್ತಾನೆ, “ಅಲ್ಲಾಹನು ನಿನಗೆ ನೀಡಿರುವ ಸಂಪತ್ತಿನಿಂದ ನೀನು ಪರಲೋಕ ಗೃಹ ನಿರ್ಮಾಣ ಮಾಡುವ ಕುರಿತು ಚಿಂತಿಸು ಮತ್ತು ಇಹಲೋಕದಿಂದಲೂ ನಿನ್ನ ಪಾಲನ್ನು ಮರೆಯಬೇಡ. ಅಲ್ಲಾಹನು ನಿನಗೆ ಉಪಕಾರ ಮಾಡಿದಂತೆಯೇ ನೀನೂ ಪರೋಪಕಾರ ಮಾಡು ಮತ್ತು ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡಲು ಪ್ರಯತ್ನಿಸಬೇಡ. ಅಲ್ಲಾಹನು ಕ್ಷೋಭೆಯನ್ನುಂಟು ಮಾಡುವವರನ್ನು ಮೆಚ್ಚುವುದಿಲ್ಲ.” (ಅಲ್ ಕಸಸ್: 77)
ಮಹಾವಿದ್ವಾಂಸರಾದ ಇಬ್ನ್ ಕಸೀರ್ ರವರು ಈ ಸೂಕ್ತವನ್ನು ವಿವರಿಸುತ್ತಾ ಬರೆಯುತ್ತಾರೆ- “ಅಥವಾ ಅಲ್ಲಾಹನು ನಿಮಗೆ ಅನುಗ್ರಹವಾಗಿ ನೀಡಿದ ಸಂಪತ್ತಿನಿಂದ ಮಾತ್ರ ವ್ಯಯಿಸಿರಿ. ಆರಾಧನಾ ಕರ್ಮಗಳು ಅಲ್ಲಾಹನೊಂದಿಗೆ ನಿಕಟ ಸಂಬಂಧ ಬೆಳೆಸುತ್ತದೆ. ಅದು ಅಲ್ಲಾಹನ ಅನಂತಾನಂತ ಅನುಗ್ರಹಗಳಿಗೆ ಪಾತ್ರವನ್ನಾಗಿಸುತ್ತದೆ. ಅನ್ನಹಾರಗಳಲಲ್ಲಿ, ವೈವಾಹಿಕ ಬದುಕಿನಲ್ಲಿ ನಿಮಗೆ ಅಲ್ಲಾಹನು ನೀಡಿದುದನ್ನು ಮರೆಯದಿರು. ಅಲ್ಲಾಹನಿಗೆ ನಿಮ್ಮ ಮೇಲೂ ನಿಮಗೆ ಅಲ್ಲಾಹನ ಮೇಲೆಯೂ ಕೆಲವು ಬಾಧ್ಯತೆಗಳಿವೆ.
ಬೆಲೆ ಏರಿಕೆ
ವರಮಾನದ ಕೊರತೆಯಿಂದ ಬೆಲೆ ಏರಿಕೆ ಉದ್ಭವಿಸಿ ಜನರಿಗೆ ತೊಂದರೆಯುಂಟಾಗುತ್ತಿದೆ. ಅದರಿಂದ ಉಂಟಾಗುವ ಕೊರತೆಯು ಹಲವರನ್ನು ಕಂಗಾಲಾಗಿಸಿದೆ. ಅದು ಕೆಲವರ ವಿಶ್ವಾಸವನ್ನೇ ನಾಶ ಪಡಿಸಿದೆ.
ಅನಸ್(ರ) ಹೇಳುತ್ತಾರೆ: ಪ್ರವಾದಿವರ್ಯರ(ಸ) ಕಾಲದಲ್ಲಿ ಒಮ್ಮೆ ಭಾರೀ ಬೆಲೆ ಏರಿಕೆ ಉದ್ಭವಿಸಿತ್ತು. ಆಗ ಜನರು ಹೇಳಿದರು- ಪ್ರವಾದಿವರ್ಯರೇ, “ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಉದ್ಭವಿಸಿದೆ. ತಾವು ಅಗತ್ಯ ವಸ್ತುಗಳಿಗೆಲ್ಲಾ ಬೆಲೆ ನಿಗದಿಪಡಿಸಿ ಕೊಡಿರಿ” ಎಂದು ಹೇಳಿದರು. ಆಗ ಪ್ರವಾದಿವರ್ಯರು(ಸ) ಅವರ ಬಳಿ ಹೇಳಿದರು, “ಆಹಾರವನ್ನು ನೀಡುವವನೂ ಅದನ್ನು ತಡೆದಿರಿಸುವವನೂ ಅಲ್ಲಾಹನಾಗಿದ್ದಾನೆ.”
ಅಲ್ಲಾಹನು ಹೇಳುತ್ತಾನೆ, “ನಾಡಿನವರು ವಿಶ್ವಾಸವಿರಿಸುತ್ತಿದ್ದರೆ ಮತ್ತು ದೇವಭಯವಿರಿಸುತ್ತಿದ್ದರೆ, ನಾವು ಅವರಿಗೆ ಆಕಾಶ ಮತ್ತು ಭೂಮಿಯಿಂದ ಸಮೃದ್ಧಿಯ ದ್ವಾರಗಳನ್ನು ತೆರೆದು ಕೊಡುತ್ತಿದ್ದೆವು. ಆದರೆ ಅವರು ಸುಳ್ಳಾಗಿಸಿದರು. ಆದುದರಿಂದ ಅವರು ಶೇಖರಿಸುತ್ತಿದ್ದ ಕೆಟ್ಟ ಗಳಿಕೆಗಾಗಿ ಅವರನ್ನು ನಾವು ಹಿಡಿದುಬಿಟ್ಟೆವು.” (ಅಲ್ ಅಅïರಾಫ್: 96)
ಪ್ರಸಿದ್ಧ ವಿದ್ವಾಂಸರಾದ ಇಬ್ನು ಖುದಾಮ ರವರು ತನ್ನ ಗ್ರಂಥ ಮುಗ್ನಿಯಲ್ಲಿ ಈ ರೀತಿ ಬರೆದಿರುತ್ತಾರೆ- ಕೆಲವು ಸಹಾಬಿಗಳು ಹೇಳಿದರು. ಬೆಲೆ ಏರಿಕೆಗೆ ದಾಸ್ತಾನುಗಳು ಕಾರಣವಾಗುತ್ತದೆ. ವ್ಯಾಪಾರಕ್ಕೆ ಬರುವವರು ಕೆಲವು ಊರುಗಳಲ್ಲಿ ತಾವು ಬಯಸುವ ಬೆಲೆಗೆ ತಮ್ಮ ಸರಕುಗಳನ್ನು ಮಾರಲು ನೋಡುತ್ತಾರೆ. ತಮ್ಮಲ್ಲಿ ಹೆಚ್ಚು ಸರಕು ಇರುವವರು ಅದನ್ನು ಮಾರಾಟ ಮಾಡದೆ ದಾಸ್ತಾನು ಮಾಡುತ್ತಾರೆ. ಸರಕುಗಳಿಗೆ ಜನರು ಪರದಾಡುತ್ತಿರುವಾಗ ಅವರು ತಮ್ಮ ಸರಕುಗಳಿಗೆ ಹಠಾತ್ತನೆ ಬೆಲೆ ಏರಿಸುತ್ತಾರೆ. ಹೀಗೇ ಬೆಲೆ ಏರಿಕೆ ಉಂಟಾಗುತ್ತದೆ. ವ್ಯಾಪಾರಿಗಳು ತಮ್ಮಲ್ಲಿರುವ ವಸ್ತುಗಳನ್ನು ಮಾರದೆ ಸಂಗ್ರಹಿಸಿಟ್ಟಾಗ ಅದು ಅಗತ್ಯವುಳ್ಳ ಗ್ರಾಹಕರಿಗೆ ಸಿಗುವುದಿಲ್ಲ.
ದುಂದು ವೆಚ್ಚದ ಮಾನದಂಡಗಳು
ದುಂದು ವೆಚ್ಚದ ವಿಚಾರದಲ್ಲಿ ಇಸ್ಲಾಮ್ ಹಲವು ಮಾನದಂಡಗಳನ್ನು ಇರಿಸಿದೆ. ಇಸ್ಲಾಮೀ ಸಮಾಜದಲ್ಲಿ ಹೆಚ್ಚಿನ ಜನರು ಹಸಿವು ಮುಂತಾದ ಸಂದಿಗ್ಧ ಪರಿಸ್ಥಿತಿಗೆ ಸಿಲುಕದಂತೆ ಮಾಡಲು ಅದು ಸಹಾಯಕವಾಗುತ್ತದೆ.
1. ಅಲ್ಲಾಹನು ಮನುಷ್ಯರಿಗೆ ನೀಡಿದ ಅನುಗ್ರಹ ಅದು ಕೇವಲ ಒಂದು ವಿಭಾಗಕ್ಕೆ ಇರುವಂತಹದ್ದಲ್ಲ ಬದಲಾಗಿ ಆ ಸಂಪತ್ತಿನಲ್ಲಿ ಎಲ್ಲರೂ ಹಕ್ಕುದಾರರಾಗಿರುತ್ತಾರೆ. ಸಂಪತ್ತು ಅಲ್ಲಾಹನದ್ದಾಗಿದೆ. ಮನುಷ್ಯ ನು ಅದರ ಮಧ್ಯವರ್ತಿ ಪ್ರತಿನಿಧಿಯಾಗಿದ್ದಾನೆ. ಆದ್ದರಿಂದ ಯಾವುದೇ ಮುಸ್ಲಿಮನೂ ತಮ್ಮ ಸಂಪತ್ತಿನಿಂದ ದುಂದುವೆಚ್ಚ ಮಾಡುವಂತಿಲ್ಲ.
2. ಬಳಕೆಯಲ್ಲಿಯೂ ಅದನ್ನು ಆರಾಧನೆ ಎಂಬಂತೆ ಪರಿಗಣಿಸಿ ಅದಕ್ಕಿರುವ ದೇವನ ಆದೇಶವನ್ನು ಪಾಲಿಸಬೇಕಾಗಿದೆ. ಅಲ್ಲಾಹನು ನಿರ್ಣಯಿಸಿದ ಪರಿಧಿಯೊಳಗೇ ಸಂಪತ್ತನ್ನು ವ್ಯಯಿಸಬೇಕು.
ಅಲ್ಲಾಹನು ಹೇಳುತ್ತಾನೆ, “ಓ ಆದಮರ ಸಂತತಿಯವರೇ, ಉಪಾಸನೆಯ ಎಲ್ಲ ಸಂದರ್ಭಗಳಲ್ಲೂ ನಿಮ್ಮ `ಅಲಂಕಾರ’ಗಳಿಂದ ಭೂಷಿತರಾಗಿರಿ. ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ವಿೂರಬೇಡಿರಿ. ಅಲ್ಲಾಹನು ಮಿತಿ ವಿೂರುವವರನ್ನು ಮೆಚ್ಚುವುದಿಲ್ಲ.” (ಅಲ್ ಅಅïರಾಫ್: 31)
3. ಶರೀಅತ್ ನಿರ್ಣಯಿಸಿದ ರೀತಿಯಲ್ಲಿಯೇ ಬಳಸುವುದು ಉತ್ತಮ. ಅದರಿಂದ ತನಗೂ ಅಥವಾ ಇನ್ನಿತರರಿಗೂ ಕೇಡುಂಟಾಗದು. ಜೀವನದ ಸುಖ ಸಂತೋಷದಿಂದ ಮತ್ತು ಒಳಿತಿನಿಂದ ಅಲ್ಲಾಹನು ಅನುಮತಿಸಿದ ಕಾರ್ಯಗಳನ್ನು ನಿಷಿದ್ಧಗೊಳಿಸುವವರನ್ನು ಕುರ್ಆನ್ ತೀವ್ರವಾಗಿ ವಿಮರ್ಶಿಸಿದೆ.
“ಓ ಪೈಗಂಬರರೇ, ಅವರೊಡನೆ ಕೇಳಿರಿ, ಅಲ್ಲಾಹನು ತನ್ನ ದಾಸರಿಗಾಗಿ, ಹೊರತೆಗೆದಿರುವ ವಸ್ತ್ರ ಭೂಷಣಗಳನ್ನೂ ಶುದ್ಧ ಆಹಾರ ಸಾಮಗ್ರಿಗಳನ್ನೂ ನಿಷಿದ್ಧಗೊಳಿಸಿದವನಾರು? ಹೇಳಿರಿ? ಇವೆಲ್ಲ ವಸ್ತುಗಳೂ ಇಹಜೀವನದಲ್ಲೂ ಸತ್ಯವಿಶ್ವಾಸಿಗಳಿಗಾಗಿರುತ್ತವೆ ಮತ್ತು ಪುನರುತ್ಥಾನ ದಿನದಲ್ಲಂತು ಇವು ಕೇವಲ ಅವರಿಗಾಗಿಯೇ ವಿೂಸಲಾಗಿರುವುವು. ಇದೇ ರೀತಿಯಲ್ಲಿ ನಾವು ನಮ್ಮ ಸೂಕ್ತಗಳನ್ನು ಜ್ಞಾನವುಳ್ಳವರಿಗೆ ಸುಸ್ಪಷ್ಟವಾಗಿ ವಿವರಿಸುತ್ತೇವೆ.” (ಅಲ್ ಅಅïರಾಫ್: 32)
4. ಸಂಪತ್ತನ್ನು ವ್ಯಯಿಸುವಾಗ ಮತ್ತು ವ್ಯವಹಾರ ನಡೆಸುವಾಗಲೂ ಮಿತವಾದ ರೀತಿ ಬಳಸಬೇಕೆಂದು ಇಸ್ಲಾಮ್ ಆದೇಶಿಸುತ್ತದೆ. ಅದೇ ರೀತಿ ದುಂದು ವೆಚ್ಚವನ್ನು ಅದು ತಡೆಯುತ್ತದೆ. ಸಂತೃಪ್ತಿ ಮತ್ತು ಆಂತರಿಕವಾದ ಪ್ರಚೋದನೆಯಿಂದ ಮಾತ್ರ ಇದು ಸಾಧ್ಯ.
5. ಬಳಕೆಯ ಬಗ್ಗೆ ಇಸ್ಲಾಮ್ ಹಲವಾರು ದಾರಿ ತೋರಿಸಿದೆ. ಅದರಲ್ಲಿ ಮೊದಲನೆಯದು ತನ್ನ ಅಗತ್ಯಕ್ಕೆ ತಕ್ಕಷ್ಟು ಮಿತವಾಗಿ ಬಳಸಿರಿ ಎಂಬುದಾಗಿದೆ. ಬಳಿಕ ಎರಡನೆಯದ್ದಾಗಿ ತಮ್ಮ ಅಪ್ತರು ಮತ್ತು ಕುಟುಂಬದ ಅಗತ್ಯದಲ್ಲಿಯೂ ಮಿತ್ರತ್ವವನ್ನು ಪಾಲಿಸಿರಿ ಎಂಬುದಾಗಿದೆ.
ಪ್ರವಾದಿ(ಸ) ಹೇಳುತ್ತಾರೆ, “ನಿಮ್ಮ ದೇಹದೊಂದಿಗೆ ಮೊದಲು ಪ್ರಾರಂಭಿಸಿ. ಅದಕ್ಕೆ ಅಗತ್ಯವಾದುದನ್ನು ನೀಡಿರಿ. ಉಳಿದದ್ದನ್ನು ಕುಟುಂಬದವರಿಗೆ ನೀಡಿರಿ. ಬಳಿಕ ಉಳಿದದ್ದನ್ನು ತಮ್ಮ ಆಪ್ತರಿಗೆ ನೀಡಿರಿ. ಇನ್ನೂ ಉಳಿದಿದೆ ಎಂದಾದರೆ ನಿನ್ನೆಡಬಲಗಳಲ್ಲಿರುವ ಬಡವರಿಗೆ ಹಂಚಿರಿ.”
6. ಬಳಕೆದಾರನಾದ ಓರ್ವ ಮುಸ್ಲಿಮನು ಮೊದಲನೆಯದಾಗಿ ತನ್ನ ಅಗತ್ಯಗಳನ್ನು ಪರಿಗಣಿಸಬೇಕು. ಜೀವಂತವಾಗಿರಲು ಅಗತ್ಯವಾದ ಅನ್ನ-ಪಾನೀಯಗಳು ಅಗತ್ಯ ವಸ್ತುಗಳ ಸಾಲಲ್ಲಿ ಬರುತ್ತವೆ. ಎರಡನೆಯದ್ದು ಜನರಿಗೆ ತೊಂದರೆ ಉಂಟು ಮಾಡುವುದರಿಂದ ತಡೆಯುವುದಾಗಿದೆ. ಮೂರನೇಯದ್ದು ಆಡಂಬರವಿಲ್ಲದ ದುಂದು ವೆಚ್ಚವಿಲ್ಲದ ಜೀವನವನ್ನು ಆಸ್ವಾದಿಸಲು ಇರುವಂತಹದ್ದು.
7. ತನಗೂ ತನ್ನ ಕುಟುಂಬಕ್ಕೂ ಸಂಪತ್ತು ವ್ಯಯಿಸುವುದಕ್ಕೆ ಒಂದು ನಿರ್ದಿಷ್ಟವಾದ ಪರಿಧಿಯಿರಬೇಕು. ಎಲ್ಲರಿಗೂ ಅವನಿಗೆ ಸಾಧ್ಯವಿರುವಷ್ಟನ್ನು ಮಾತ್ರ ಅಲ್ಲಾಹನು ಕಲ್ಪಿಸುತ್ತಾನೆ.
“ಸ್ಥಿತಿವಂತನು ತನ್ನ ಸ್ಥಿತಿಗನುಸಾರ ಜೀವನಾಂಶ ನೀಡಬೇಕು. ಕಡಿಮೆ ಜೀವನಾಧಾರ ನೀಡಲ್ಪಟ್ಟಿರುವವನು, ಅಲ್ಲಾಹನು ಆತನಿಗೆ ನೀಡಿರುವುದರಿಂದಲೇ ಖರ್ಚು ಮಾಡಲಿ. ಅಲ್ಲಾಹನು ಯಾರಿಗೆ ಎಷ್ಟು ಕೊಟ್ಟಿರುತ್ತಾನೋ ಅದಕ್ಕಿಂತ ಹೆಚ್ಚಿನ ತ್ರಾಸ ಅವನಿಗೆ ಕೊಡುವುದಿಲ್ಲ. ಅಲ್ಲಾಹನು ಬಡತನದ ಬಳಿಕ ಸಂಪನ್ನತೆಯನ್ನು ನೀಡಲೂಬಹುದು.” (ಅತ್ತಲಾಕ್: 7)
8. ಅತ್ಯಗತ್ಯ ವಿಚಾರವಾದರೂ ಸರಿ ನಿಷಿದ್ಧಗೊಳಿಸಿದ ಹಾದಿಯಲ್ಲಿ ಬಳಸಬಾರದು.
ಪ್ರವಾದಿವರ್ಯರ(ಸ) ಸರಳತೆ
ದುಂದುವೆಚ್ಚ ಆಡಂಬರದ ವಿರುದ್ಧವಾದ ಹಲವಾರು ಪ್ರವಾದಿ ವಚನಗಳನ್ನು ಕಾಣಬಹುದು.
ಅಬೂ ಹುರೈರಾ(ರ) ಹೇಳುತ್ತಾರೆ; ಪ್ರವಾದಿವರ್ಯರು(ಸ) ಇಹಲೋಕ ತ್ಯಜಿಸುವವರೆಗೆ ಒಂದು ಹಿಡಿ ಆಹಾರದ ಮುಖಾಂತರ ಪ್ರವಾದಿ ವರ್ಯರ(ಸ) ಕುಟುಂಬವು ಮೂರು ದಿವಸ ಹಸಿವು ಇಂಗಿಸಿ ಜೀವಿಸಿತ್ತು. ಆಯಿಶಾ(ರ) ಹೇಳುತ್ತಾರೆ; ಮದೀನಕ್ಕೆ ಬಂದ ಬಳಿಕ ಪ್ರವಾದಿ ವರ್ಯರು(ಸ) ಇಹಲೋಕ ತ್ಯಜಿಸುವ ತನಕ ನಿರಂತರ ಮೂರು ದಿವಸ ಗೋಧಿಯ ಆಹಾರ ಸೇವಿಸಿ ಪ್ರವಾದಿವರ್ಯರ(ಸ) ಕುಟುಂಬವು ಹಸಿವು ಇಂಗಿಸಿತ್ತು.
ಪ್ರವಾದಿ(ಸ) ಹೇಳುತ್ತಾರೆ, ಮಕ್ಕಾ ಮರುಭೂಮಿಯನ್ನು ಸಂಪೂರ್ಣವಾಗಿ ತಮಗೆ ಸ್ವರ್ಣವಾಗಿ ಕೊಡಲೇ ಎಂದು ಅಲ್ಲಾಹನು ಕೇಳಿದಾಗ, ಆಗ ನಾನು ಹೇಳಿದೆ, “ಬೇಡ ಪ್ರಭುವೇ ಒಂದು ದಿನ ಹೊಟ್ಟೆ ತುಂಬಿಸಿ ಆಹಾರ ಸೇವಿಸಿ ಮರುದಿನ ಹಸಿವಿನಿಂದ ಇರುವಂತಹ ಸ್ಥಿತಿಯಿದ್ದರೆ ನನಗೆ ಸಾಕು. ನಾನು ಹಸಿದಿರುವಾಗ ನಿನ್ನನ್ನು ಸ್ಮರಿಸುತ್ತಿರುವೆ, ನಿನ್ನಲ್ಲಿ ವಿನಯತೆಯಿಂದ ಇರುವೆ, ಹೊಟ್ಟೆ ತುಂಬಿದಾಗ ನಿನ್ನನ್ನು ಕೃತಜ್ಞತೆಯಿಂದ ಸ್ಮರಿಸುತ್ತಿರುವೆ.”
ಈ ಮೇಲೆ ತಿಳಿಸಿದ ಪ್ರವಾದಿ ವಚನಗಳು ದಾರಿದ್ರ್ಯತೆಯನ್ನು ಸೂಚಿಸುವಂತಹದ್ದಲ್ಲ ಬದಲಾಗಿ ಪ್ರವಾದಿ ಮತ್ತವರ ಅನುಯಾಯಿಗಳ ಜೀವನ ರೀತಿಯನ್ನು ಸ್ಪಷ್ಟಪಡಿಸುತ್ತದೆ. ಮೇಲೆ ಹೇಳಿದುದರ ಉದ್ದೇಶ ಈ ಕಾಲದಲ್ಲಿಯೂ ಹಾಗೆಯೇ ಜೀವಿಸಬೇಕೆಂದಲ್ಲ. ಬದಲಾಗಿ ಮೇಲೆ ಸೂಚಿಸಿದಂತೆ ಮಿತವ್ಯ ಪಾಲಿಸಿ ಅಲ್ಲಾಹನ ಅನುಗ್ರಹಗಳನ್ನು ಸದಾ ಸ್ಮರಿಸಿ ಕೃತಜ್ಞರಾಗಿರಿ ಎಂದಾಗಿದೆ.
ಪರಸ್ಪರ ಸಹಕಾರ ಮತ್ತು ಸಮಸ್ಯೆಗಳ ಪರಿಹಾರ
ಪ್ರವಾದಿ(ಸ) ಹೇಳುತ್ತಾರೆ, “ನೀವು ಸತ್ಕರ್ಮಗಳಲ್ಲಿ ನಿರತರಾಗಿರಿ.” ಐಹಿಕ ಜೀವನದಿಂದ ಪಾರತ್ರಿಕ ಜಗತ್ತಿನೆಡೆಗೆ ಹೋಗುವಾಗ ಸತ್ಕರ್ಮಗಳಲ್ಲಿ ಸಕ್ರಿಯರಾಗಿರಿ ಎಂಬುದು ಪ್ರವಾದಿವರ್ಯರ(ಸ) ಸಂದೇಶವಾಗಿದೆ. ತಾನು ಬಯಸಿದ್ದನ್ನು ತನ್ನ ಸಹೋದರನಿಗೆ ಸಿಗಬೇಕೆಂದು ಬಯಸುವ ತನಕ.
ಅವನು ಪರಿಪೂರ್ಣ ಸತ್ಯವಿಶ್ವಾಸಿಯಾಗಲಾರ ತನಗೆ ಅಗತ್ಯವಿದ್ದರೂ ಸಹ ಇನ್ನೊಬ್ಬರಿಗೆ ನೀಡುವ ಒಂದು ಗುಂಪಿನ ಕುರಿತು ಕುರ್ಆನ್ ವಿವರಿಸಿದೆ.
“(ಮತ್ತು ಆ ಸೊತ್ತು) ಈ ಮುಹಾಜಿರರ ಆಗಮನಕ್ಕೆ ಮುಂಚೆಯೇ ಸತ್ಯವಿಶ್ವಾಸ ಸ್ವೀಕಾರ ಮಾಡಿ ಮದೀನಾದಲ್ಲಿ ವಾಸವಾಗಿದ್ದವರಿಗೆ (ಸಹ ಇದೆ). ಇವರು ಹಿಜ್ರತ್ ಮಾಡಿ ತಮ್ಮ ಬಳಿಗೆ ಬಂದವರನ್ನು ಪ್ರೀತಿಸುತ್ತಾರೆ. ಅವರಿಗೆ ನೀಡಲ್ಪಟ್ಟುದರ ಕುರಿತು ಇವರು ಯಾವುದೇ ಆಶೆಯನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಸ್ವತಃ ತಮಗೆ ಅಗತ್ಯವಿದ್ದರೂ ಇತರರಿಗೆ ತಮ್ಮ ಮೇಲೆ ಪ್ರಾಶಸ್ತ್ಯ ನೀಡುತ್ತಾರೆ. ವಾಸ್ತವದಲ್ಲಿ ಯಾರು ತಮ್ಮ ಮನಸ್ಸಿನ ಸಂಕುಚಿತತೆಯಿಂದ ರಕ್ಷಿಸಲ್ಪಟ್ಟರೋ ಅವರೇ ವಿಜಯಿಗಳು.” (ಅಲ್ ಹಶ್ರ್: 9)
“ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಖರ್ಚಿನ ಉಪಮೆ, ಒಂದು ಕಾಳನ್ನು ಬಿತ್ತಿ ಅದರಿಂದ ಏಳು ತೆನೆಗಳು ಹೊರಟು, ಪ್ರತಿಯೊಂದು ತೆನೆಯಲ್ಲಿ ನೂರು ಕಾಳುಗಳಿರುವಂತಿದೆ. ಇದೇ ರೀತಿಯಲ್ಲಿ ಅಲ್ಲಾಹನು ತಾನುದ್ದೇಶಿಸಿ ದವನ ಕರ್ಮಗಳಿಗೆ ವೃದ್ಧಿಯನ್ನು ದಯಪಾಲಿಸುತ್ತಾನೆ. ಅವನು ಅತ್ಯಂತ ಉದಾರಿಯೂ ಸರ್ವಜ್ಞನೂ ಆಗಿರುತ್ತಾನೆ.” (ಅಲ್ಬಕರ: 261)
ಪ್ರವಾದಿವರ್ಯರ(ಸ) ಹೇಳುತ್ತಾರೆ, “ಓರ್ವನಿಗಿರುವ ಆಹಾರ ಈರ್ವರಿಗೆ ಸಾಕು. ಈರ್ವರಿಗಿರುವ ಆಹಾರ ನಾಲ್ವರಿಗೆ ಸಾಕು.”
“ನೆರೆ ಮನೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಂಡು ತೇಗುವವನು ನಮ್ಮವನಲ್ಲ”
ಈ ಜಗತ್ತಿನಲ್ಲಿ ಕಷ್ಟದಲ್ಲಿರುವವರ ತೊಂದರೆಯನ್ನು ನೀಗಿಸಿದರೆ ಅಂತ್ಯದಿನದಂದು ಅವನ ಸಂಕಷ್ಟಗಳನ್ನು ಅಲ್ಲಾಹನು ನೀಗಿಸುವನು.
“ಓರ್ವ ಸತ್ಯವಿಶ್ವಾಸಿಯು ಇನ್ನೋರ್ವ ಸತ್ಯವಿಶ್ವಾಸಿಗೆ ಕಟ್ಟಡದಂತೆ, ಅದರಲ್ಲೊಂದು ಇನ್ನೊಂದನ್ನು ಭದ್ರಗೊಳಿಸುವುದು.”
ಹೀಗೇ ಪ್ರವಾದಿವರ್ಯರ(ಸ) ಕಾರ್ಯ ಚಟುವಟಿಕೆಗಳು ಸರಳತೆಯನ್ನು ಪ್ರತಿಪಾದಿಸುತ್ತದೆ. ಆದ್ದರಿಂದ ಸತ್ಕರ್ಮಗಳಲ್ಲಿ ನಿರತರಾಗಿರಿ. ಒಳಿತಿನ ದಾರಿಯನ್ನು ಇತರರಿಗೆ ತೆರೆದುಕೊಡಿರಿ. ಒಳಿತಿನ ಹಾದಿಯಲ್ಲಿ ಸಾಧ್ಯವಿರುವುದನ್ನೆಲ್ಲಾ ಬಳಸಿಕೊಳ್ಳಿರಿ.
IslamKannada News Portal




